ಡಿಯರ್ ಮೀಡಿಯಾ ‘ಸದ್ದಿನ’ ನಡುವೆ ಕಳೆದು ಹೋಗಿರುವ ‘ಸುದ್ದಿಯ’ ರಕ್ಷಣೆ ಹೇಗೆ?

ಸುಳ್ಳು ಮಾಹಿತಿ ಮತ್ತು ಫೇಕ್ ಸುದ್ದಿಗಳ ನಿಯಂತ್ರಣ 21ನೇ ಶತಮಾನಕ್ಕೆ ಬಲುದೊಡ್ಡ ಸವಾಲು. ಸುಳ್ಳು ಸುದ್ದಿಗಳು ಸಾರ್ವಜನಿಕ ಮಾಹಿತಿಯ ಗುಣಮಟ್ಟ ಮತ್ತು ವ್ಯವಸ್ಥೆಯ ಮೇಲಿನ ನಂಬಿಕೆಗಳನ್ನು ಹಾಳುಗೆಡಹುವುದಲ್ಲದೇ ಸಾರ್ವಜನಿಕ ನಿರ್ಧಾರಗಳನ್ನು ತಿರುಚಿ, ಸಮಾಜವನ್ನು ಇನ್ನಷ್ಟು ಒಡೆಯಬಲ್ಲವು. ಒಳ್ಳೆಯ ನೀತಿಗಳಿಗೆ ಜನಬೆಂಬಲ ಪಡೆಯುವಲ್ಲಿ ಇವು ಅಡ್ಡಗಾಲು ಹಾಕುತ್ತವೆ.
ಸುದ್ದಿಮನೆಗಳ ಕಾರ್ಪೊರೇಟೀಕರಣ ಮತ್ತು ಅದರ ಫಲಿತಾಂಶವಾಗಿ ಈಗ ಕಾಣಿಸಿಕೊಳ್ಳುತ್ತಿರುವ ಆಯ್ದ ಸುದ್ದಿಗಳ ‘ತುತ್ತೂರೀಕರಣ’ಗಳು ಕನ್ನಡಕ್ಕಾಗಲೀ, ಭಾರತೀಯ ಪತ್ರಿಕೋದ್ಯಮಕ್ಕಾಗಲೀ ಹೊಸ ಸಂಗತಿಯೇನಲ್ಲ. ಆದರೆ ಇದು ಈಗ ಒಂದು ಜಾಗತಿಕ ವಿದ್ಯಮಾನವಾಗಿದ್ದು, ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಜಾಗತಿಕವಾಗಿ ಪ್ರಯತ್ನಗಳು ನಡೆಯುತ್ತಿವೆ ಎಂಬುದನ್ನು ಗಮನಿಸಬೇಕಿದೆ.
ನಾಳೆ (ಸೆಪ್ಟಂಬರ್ 28) ಜಾಗತಿಕ ಸುದ್ದಿ ದಿನ (World News Day). ಜಗತ್ತಿನಾದ್ಯಂತ ಪತ್ರಿಕೋದ್ಯಮದ ಗುಣಮಟ್ಟವನ್ನು, ಮಾಧ್ಯಮ ಸಾಕ್ಷರತೆಯನ್ನು ಹಾಗೂ ಸಮಾಜದಲ್ಲಿ ವಾಸ್ತವಾಂಶ ಆಧರಿತ ಪತ್ರಿಕೋದ್ಯಮಕ್ಕಿರುವ ಮಹತ್ವದ ಪಾತ್ರವನ್ನು ಗುರುತಿಸಲು ಈ ಜಾಗತಿಕ ಸುದ್ದಿ ದಿನವನ್ನು ಆಚರಿಸಲಾಗುತ್ತಿದೆ. ಜಾಗತಿಕ ಸುದ್ದಿ ಪ್ರಕಾಶಕರ ಸಂಘಟನೆ (WAN-IFRA -The World Association for News Publishers) ಪ್ರತೀ ವರ್ಷ ಈ ಆಯೋಜನೆಯನ್ನು ಹಮ್ಮಿಕೊಳ್ಳುತ್ತದೆ. 120 ದೇಶಗಳ, 18,000ಕ್ಕೂ ಮಿಕ್ಕಿ ಮಾಧ್ಯಮಗಳು, 3,000ಕ್ಕೂ ಮಿಕ್ಕಿ ಪ್ರಕಾಶನ ಸಂಸ್ಥೆಗಳ 40ಕ್ಕೂ ಮಿಕ್ಕಿ ಪ್ರಕಾಶಕರ ಸಂಘಟನೆಗಳು ಸದಸ್ಯತ್ವ ಹೊಂದಿರುವ ಈ ಸಂಸ್ಥೆ 1948ರಿಂದಲೂ ಕಾರ್ಯಾಚರಿಸುತ್ತಿದೆ.
ಸಾರ್ವಜನಿಕ ಹಿತಾಸಕ್ತಿ ರಕ್ಷಣೆಯಲ್ಲಿ ಮಾಧ್ಯಮಗಳ ಘೋರ ವೈಫಲ್ಯದ ಕಾರಣಕ್ಕೆ ಜಾಗತಿಕ ಆರ್ಥಿಕತೆಯಲ್ಲಿ ಮತ್ತು ಸಾಮಾಜಿಕ ವ್ಯವಸ್ಥೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ದುಷ್ಪರಿಣಾಮಗಳು ಮತ್ತು ಅದರ ಪರಿಣಾಮಗಳನ್ನು ವಿಶ್ಲೇಷಿಸಲು WAN-IFRA ತಜ್ಞರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತ್ತು. ಆರ್ಥಿಕ ಮತ್ತು ರಾಜಕೀಯ ಭ್ರಷ್ಟಾಚಾರ ಎಲ್ಲೆಡೆ ತಾಂಡವ ಆಡುತ್ತಿರುವಾಗ ಸಾರ್ವಜನಿಕ ಹಿತಾಸಕ್ತಿ ರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು ಎಂಬ ಚಿಂತನೆಯ ಹಿನ್ನೆಲೆಯಲ್ಲಿ ಈ ಸಮಿತಿ ರಚನೆ ಆಗಿತ್ತು.
ಪ್ರೊ|ಡಾರನ್ ಅಸಿಮೋಗ್ಲು (2024ರ ಇಕನಾಮಿಕ್ಸ್ ನೊಬೆಲ್ ವಿಜೇತರು); ಪ್ರೊ| ಜೋಸೆಫ್ ಸ್ಟಿಗ್ಲಿಝ್ (2001ರ ಇಕನಾಮಿಕ್ಸ್ ನೊಬೆಲ್ ವಿಜೇತರು); ಪ್ರೊ| ಫಿಲಿಪ್ ಅಘಿಯಾನ್, ಪ್ರೊ| ಸರ್ ಟಿಮ್ ಬೆಸ್ಲೆ (ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್); ಡಾ| ಫ್ರಾನ್ಸೆಸ್ಕಾ ಬ್ರಿಯಾ, ಪ್ರೊ| ಮಾರಿಯಾನಾ ಮಝುಕಾಟೊ (ಲಂಡನ್ ಯೂನಿವರ್ಸಿಟಿ ಕಾಲೇಜ್); ಪ್ರೊ| ಡೇಮ್ ಡಿಯಾನ್ ಕೊಯ್ಲ್ (ಕೇಂಬ್ರಿಜ್ ವಿವಿ); ಡಾ| ಒಬಿಯಾಗೆಲಿ ಎಝೆಕ್‌ವೆಸಿಲೀ (ಆಫ್ರಿಕನ್ ಸ್ಕೂಲ್ ಆಫ್ ಪೊಲಿಟಿಕ್ಸ್, ಪಾಲಿಸಿ, ಗವರ್ನೆನ್ಸ್); ಪ್ರೊ| ಅತೀಫ್ ಮಿಯಾ (ಪ್ರಿನ್ಸ್‌ಟನ್ ವಿವಿ); ಪ್ರೊ| ಆಂಡ್ರಿಯಾ ಪ್ರೆಟ್ (ಕೊಲಂಬಿಯಾ ವಿವಿ); ಡಾ| ವೆರಾ ಸೂಂಗ್ವೆ (ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಟ್) ಅವರನ್ನೊಳಗೊಂಡ ಪರಿಣತರ ತಂಡ ಈ ಮಹತ್ವದ ಅಧ್ಯಯನವನ್ನು ನಡೆಸಿದೆ. ಅಧ್ಯಯನದ ಬಳಿಕ ತಂಡ ನೀಡಿರುವ ಹೇಳಿಕೆಯ ಸಾರಾಂಶ ರೂಪ ಇಲ್ಲಿದೆ.
ಸನ್ನಿವೇಶದ ಹಿನ್ನೆಲೆ
ಮಾರುಕಟ್ಟೆ ಶಕ್ತಿಗಳಿಗೆ ಸುದ್ದಿಮನೆಯ ಮೇಲೆ ಒಮ್ಮೆ ನಿಯಂತ್ರಣ ಸಿಕ್ಕ ಬಳಿಕ, ಅವು ಸಾರ್ವಜನಿಕ ಒಳಿತಿಗೆ ಅಗತ್ಯವಿರುವ ಸುದ್ದಿಗಳನ್ನು ನೀಡಲಾರವು. ಮಾಧ್ಯಮ ಕಾರ್ಪೊರೇಟೀಕರಣಗೊಂಡ ಬಳಿಕವೂ ಜಾಹೀರಾತು ಆದಾಯದ ಮೂಲಕ ಬದುಕುತ್ತಿದ್ದ ಮುಕ್ತ-ಸ್ವತಂತ್ರ ಮಾಧ್ಯಮಗಳ ಸ್ಥಿತಿ ಈಗ ಡಿಜಿಟಲ್ ಮಾಧ್ಯಮಗಳು ಮುಂಚೂಣಿಗೆ ಬರತೊಡಗಿದ ಬಳಿಕ ಸಂಪೂರ್ಣ ವಿನಾಶದತ್ತ ಸಾಗುತ್ತಿದೆ. ಬೃಹತ್ ಟೆಕ್ ಕಾರ್ಪೊರೇಟ್‌ಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೇಲೆ ತಾವು ಹೊಂದಿರುವ ನಿಯಂತ್ರಣದ ಕಾರಣಕ್ಕೆ, ತಮ್ಮ ಲಾಭ-ಹಿತಾಸಕ್ತಿಗಳಿಗೆ ಪೂರಕವಾಗಿ ವರ್ತಿಸುತ್ತವೆ ಮತ್ತು ಅಂತಹ ಚಟುವಟಿಕೆಗಳನ್ನೇ ಇನ್ಸೆಂಟಿವೈಸ್ ಮಾಡುತ್ತಿವೆಯೇ ಹೊರತು, ಸಾರ್ವಜನಿಕ ಹಿತಾಸಕ್ತಿಗಳನ್ನು ಪರಿಗಣಿಸುತ್ತಿಲ್ಲ. ಅದು ಸಾಲದೆಂಬಂತೆ ಸರಕಾರಗಳು, ಅದರಲ್ಲೂ ಅಥಾರಿಟೇರಿಯನ್ ಸರಕಾರಗಳು ಕಳೆದೊಂದು ದಶಕದಿಂದೀಚೆಗೆ ಮಾಧ್ಯಮಗಳ ಮೇಲೆ ಕಾನೂನಿನ ಮೂಲಕವೇ ಸವಾರಿ ಮಾಡುತ್ತಿವೆ, ಮಾಧ್ಯಮಗಳ ದಮನದ ಸುದ್ದಿಗಳು ದಿನೇದಿನೇ ಹೆಚ್ಚುತ್ತಿದ್ದು, ಪತ್ರಿಕಾ ಸ್ವಾತಂತ್ರ್ಯದ ಜಾಗತಿಕ ಇಂಡೆಕ್ಸ್ ಪ್ರತೀ ವರ್ಷ ಕೆಳಗೆ ಸರಿಯುತ್ತಿದೆ.
ಸುದ್ದಿಗಳು ನಂಬಿಗಸ್ಥವಾಗಿದ್ದರೆ ಅವು ಸಾಮಾಜಿಕ, ಆರ್ಥಿಕ ಕಲ್ಯಾಣಕ್ಕೆ ಬೆನ್ನೆಲುಬಾಗಿ ನಿಲ್ಲಬಲ್ಲವು. ಆದರೆ, ಎಐ ಯುಗದಲ್ಲಿ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಸಮಾಜದಲ್ಲಿ ಮತ್ತಷ್ಟು ಒಡಕು ಮೂಡಿಸುತ್ತಿವೆ. ಅವು ಹೊರಹೊಮ್ಮಿಸುವ ಸುಳ್ಳು-ಪೊಳ್ಳುಗಳ ಭರಾಟೆಯಲ್ಲಿ ಸಾರ್ವಜನಿಕವಾಗಿ ಮುಖ್ಯ ಆಗಬೇಕಾದ ಸಂಗತಿಗಳು ಯಾವುವು ಎಂಬುದನ್ನು ಗುರುತಿಸಿಕೊಳ್ಳುವುದೂ ಕಷ್ಟ ಆಗತೊಡಗಿದೆ. ಉತ್ತಮ ಗುಣಮಟ್ಟದ, ಸ್ವತಂತ್ರ ರಾಜಕೀಯ ಸುದ್ದಿಗಳು ಒಂದು ದೇಶದ ರಾಜಕೀಯ ಭವಿಷ್ಯವನ್ನೂ ಸುಧಾರಿಸಬಲ್ಲವು. ಆದರೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಇಂದು ಸೃಷ್ಟಿಸುವ ಫಿಲ್ಟರ್ ಬಬಲ್‌ಗಳ ಕಾರಣದಿಂದಾಗಿ (ತಮಗೆ ಸಿಕ್ಕಿದ್ದೆಲ್ಲ ಸತ್ಯವೆಂದು ನಂಬುವ ಗುಂಪುಗಳು- ಉದಾ: ವಾಟ್ಸ್‌ಆ್ಯಪ್ ಯೂನಿವರ್ಸಿಟಿ) ಕೆಳ-ಮಧ್ಯಮ ವರ್ಗದ ಆದಾಯದ ಹಲವು ದೇಶಗಳಲ್ಲಿ ಸಾಮಾಜಿಕ ಒಡಕು ಗಂಭೀರ ಸ್ವರೂಪಕ್ಕೆ ತಲುಪಿದೆ.
ಮಾಧ್ಯಮವು ಮುಕ್ತವೂ-ಸ್ವತಂತ್ರವೂ ಆಗಿದ್ದಾಗ ಮಾತ್ರ ಅದು ಉತ್ಪಾದನಾ ರಂಗದಲ್ಲೂ, ಆರ್ಥಿಕ ರಂಗದಲ್ಲೂ ಸ್ಥಿರತೆ, ಅಭಿವೃದ್ಧಿಗಳಿಗೆ ಕಾರಣ ಆಗಬಲ್ಲುದು. ಜನರ ಬಳಿ ನಂಬಬಲ್ಲ ಸ್ವತಂತ್ರ ಸುದ್ದಿ-ಮಾಹಿತಿ ಇದ್ದರೆ, ಅವರು ಕಾರ್ಯಾಂಗ-ಶಾಸಕಾಂಗಗಳನ್ನು ಹೆಚ್ಚು ಉತ್ತರದಾಯಿ ಮಾಡಬಲ್ಲರು. ಮಾಧ್ಯಮ ಸ್ವಾತಂತ್ರ್ಯ ಮತ್ತು ಭ್ರಷ್ಟಾಚಾರ ನಿಯಂತ್ರಣಗಳ ನಡುವೆ ಬಲವಾದ ಸಂಬಂಧ ಇದೆ. ಸಾರ್ವಜನಿಕ ಹಿತಾಸಕ್ತಿ ಇರುವ ಮಾಧ್ಯಮ ಈ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸಬಲ್ಲುದು.
ಸುಳ್ಳು ಮಾಹಿತಿ ಮತ್ತು ಫೇಕ್ ಸುದ್ದಿಗಳ ನಿಯಂತ್ರಣ 21ನೇ ಶತಮಾನಕ್ಕೆ ಬಲುದೊಡ್ಡ ಸವಾಲು. ಸುಳ್ಳು ಸುದ್ದಿಗಳು ಸಾರ್ವಜನಿಕ ಮಾಹಿತಿಯ ಗುಣಮಟ್ಟ ಮತ್ತು ವ್ಯವಸ್ಥೆಯ ಮೇಲಿನ ನಂಬಿಕೆಗಳನ್ನು ಹಾಳುಗೆಡಹುವುದಲ್ಲದೇ ಸಾರ್ವಜನಿಕ ನಿರ್ಧಾರಗಳನ್ನು ತಿರುಚಿ, ಸಮಾಜವನ್ನು ಇನ್ನಷ್ಟು ಒಡೆಯಬಲ್ಲವು. ಒಳ್ಳೆಯ ನೀತಿಗಳಿಗೆ ಜನಬೆಂಬಲ ಪಡೆಯುವಲ್ಲಿ ಇವು ಅಡ್ಡಗಾಲು ಹಾಕುತ್ತವೆ.
ಸಾರ್ವಜನಿಕ ವಲಯದಲ್ಲಿ ಲಭ್ಯವಾಗುವ ಮಾಹಿತಿ ಗುಣಮಟ್ಟವನ್ನು ಹೆಚ್ಚಿಸಿದರೆ, ಎಐ ಹಾಗೂ ಬಿಗ್-ಟೆಕ್ ಕಾರ್ಪೊರೇಟ್‌ಗಳ ನಿಯಂತ್ರಣ ಹೆಚ್ಚು ಪರಿಣಾಮಕಾರಿ ಆಗುತ್ತದೆ. ಮಾರುಕಟ್ಟೆಯ ಮೇಲೆ ಏಕಸ್ವಾಮ್ಯ ಹೊಂದಲು ಅವಕ್ಕೆ ಬಿಟ್ಟರೆ, ಅವು ಮಾರುಕಟ್ಟೆಯನ್ನು ದುರ್ಬಳಕೆ ಮಾಡಿಕೊಂಡು, ಸಮಾಜದ ಮುಖ್ಯವಾಹಿನಿಯಿಂದ ದುರ್ಬಲರನ್ನು ಹೊರಗುಳಿಸಲಿವೆ; ಇದು ಸಾಮಾಜಿಕ ಅಸಮತೋಲನದ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಲಿದೆ. ವಿಶೇಷವಾಗಿ ಗ್ರಾಮೀಣರು, ಮಹಿಳೆಯರು, ವಯಸ್ಕರು, ದೈಹಿಕ ವೈಕಲ್ಯಗಳಿರುವವರು, ಜನಾಂಗೀಯ ಅಲ್ಪಸಂಖ್ಯಾತರು, ಬಡವರು ಡೆಮಾಕ್ರಾಟಿಕ್ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳುವ ಅವಕಾಶಗಳಿಂದ ಹೆಚ್ಚು ಹೆಚ್ಚು ವಂಚಿತರಾಗಲಿದ್ದಾರೆ.
ಪರಿಹಾರ ಸಲಹೆಗಳು
ಈಗ ಹದಗೆಟ್ಟಿರುವ ಸನ್ನಿವೇಶವನ್ನು ಸುಧಾರಿಸುವಲ್ಲಿ ಡೆಮಾಕ್ರಾಟಿಕ್ ಸರಕಾರಗಳ ಜವಾಬ್ದಾರಿ ದೊಡ್ಡದು. ನಂಬಿಗಸ್ಥ ಮಾಹಿತಿ ನೀಡಬಲ್ಲ ವ್ಯವಸ್ಥೆಗಳನ್ನು ಸೃಜಿಸಲು ಮುಕ್ತ ಮತ್ತು ಸ್ವತಂತ್ರ ಪತ್ರಿಕೋದ್ಯಮದಲ್ಲಿ ಹೂಡಿಕೆಗಳಿಗೆ ಸರಕಾರಗಳು, ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಮುಂದಾಗಬೇಕು. ಸಾರ್ವಜನಿಕ ಹಿತಾಸಕ್ತಿ ಕಾಪಿಡುವ ಮಾಧ್ಯಮಗಳಿಗೆ ಸಾರ್ವಜನಿಕ ರಂಗದಿಂದ ಹೂಡಿಕೆ, ಬೆಂಬಲ ಸಿಗಬೇಕು ಮಾತ್ರವಲ್ಲದೆ, ಅಂತಹ ಚಟುವಟಿಕೆಗಳನ್ನು ಇನ್ಸೆಂಟಿವೈಸ್ ಮಾಡಲು, ಸಬ್ಸಿಡಿಗಳನ್ನು ಒದಗಿಸಲು ವಿಧಾನಗಳು ರೂಪುಗೊಳ್ಳಬೇಕು.
ಸುದ್ದಿಮನೆಗಳು, ಸೃಜನಶೀಲ ಪ್ರಾಥಮಿಕ ಕಂಟೆಂಟ್ ಪ್ರೊವೈಡರ್‌ಗಳ ಮೇಲೆ ಸೋಷಿಯಲ್ ಮೀಡಿಯಾ ಮತ್ತು ಎಐ ಸವಾರಿ ನಿಲ್ಲಬೇಕು. ಅವರ ಹಿತಾಸಕ್ತಿ ರಕ್ಷಣೆಗಾಗಿ ಕಾಪಿರೈಟ್ ಕಾನೂನುಗಳು ಡಿಜಿಟಲ್ ಯುಗಕ್ಕೆ ಸರಿಯೆನ್ನಿಸುವಂತೆ ಮರುರೂಪುಗೊಳ್ಳಬೇಕು. ಎಐ, ಟೆಕ್ ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸಬಲ್ಲ ಏಕಸ್ವಾಮ್ಯ ನಿಯಂತ್ರಣ ಕಾನೂನು, ಕೈಗಾರಿಕಾ ನೀತಿ ಇತ್ಯಾದಿಗಳು ಜಾರಿಗೆ ಬರಬೇಕು ಮತ್ತು ಹಾಲಿ ಇರುವ ಕಾನೂನುಗಳನ್ನು ಸರಕಾರ ಮತ್ತು ಸಿವಿಲ್ ಸೊಸೈಟಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತಾಗಬೇಕು.
ಬಿಗ್ ಟೆಕ್ ಕಂಪೆನಿಗಳು ನೂರಾರು ವ್ಯವಹಾರಗಳ ಜೊತೆ ಈ ಸುದ್ದಿ-ಮಾಹಿತಿ ವ್ಯವಹಾರಕ್ಕೂ ಕೈ ಹಾಕಿರುವುದರಿಂದ, ಅವರಿಗೆ ಹೆಚ್ಚುವರಿ ಡಿಜಿಟಲ್ ತೆರಿಗೆ ವಿಧಿಸಿ, ಆ ಸಂಪನ್ಮೂಲ ಸ್ವತಂತ್ರ ಮಾಧ್ಯಮಗಳಿಗೆ ಸಿಗುವಂತಾಗಬೇಕು. ಮಾಹಿತಿ-ಸುದ್ದಿಗಳ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಶಕ್ತಿಗಳನ್ನು ಎದುರಿಸಲು ಹೊಸ ಹೊಸ ಹಾದಿಗಳನ್ನು ಕಂಡುಕೊಳ್ಳುವುದು ಅಗತ್ಯವಿದೆ.







