Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ಡಿಜಿಯಾತ್ರಾ: ತಳಪಾಯ ಇಲ್ಲದೆ ಕಟ್ಟಡ...

ಡಿಜಿಯಾತ್ರಾ: ತಳಪಾಯ ಇಲ್ಲದೆ ಕಟ್ಟಡ ಕಟ್ಟುವ ತರಾತುರಿ

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು5 July 2025 10:40 AM IST
share
ಡಿಜಿಯಾತ್ರಾ: ತಳಪಾಯ ಇಲ್ಲದೆ ಕಟ್ಟಡ ಕಟ್ಟುವ ತರಾತುರಿ
ಒಂದು ಖಾಸಗಿ ಹಿತಾಸಕ್ತಿಗಳಿರುವ ಅರೆ ಸರಕಾರಿ ಜೆವಿ ಕಂಪೆನಿಯ ಕೈಗೆ ಪ್ರಯಾಣಿಕರ ಡೇಟಾಗಳನ್ನು ಒದಗಿಸುವುದು ಬಹಳ ಆತಂಕಕಾರಿ. 2023ರ ಮಾರ್ಚ್‌ನಲ್ಲಿ ಅಂದಿನ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರಯಾಣಿಕರೊಬ್ಬರ ಆತಂಕಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಟ್ವೀಟ್ ಮಾಡಿ, ಪ್ರಯಾಣಿಕರ ವೈಯಕ್ತಿಕ ಮಾಹಿತಿಯನ್ನು ಸರಕಾರದ ದಾಸ್ತಾನಿನಲ್ಲಾಗಲೀ, ಡಿಜಿಯಾತ್ರಾದವರಾಗಲೀ ಇರಿಸಿಕೊಳ್ಳುವುದಿಲ್ಲ. ಡೇಟಾ ಪ್ರಯಾಣಿಕರ ಮೊಬೈಲ್ ಫೋನಿನಲ್ಲೇ ಭದ್ರವಾಗಿರುತ್ತದೆ ಎಂದು ಖಚಿತಪಡಿಸಿದ್ದರು. ಆದರೆ ವಾಸ್ತವ ಹೀಗಿದೆಯೆ?

ವೈಯಕ್ತಿಕ ಡೇಟಾಗಳ ಖಾಸಗಿತನವನ್ನು ರಕ್ಷಿಸುವುದಕ್ಕೆ DPDP ಕಾಯ್ದೆ-2023ರ ಅಡಿಯಲ್ಲಿ ನಿಯಮಗಳು ಇನ್ನಷ್ಟೇ ಅಂತಿಮಗೊಂಡು ಪ್ರಕಟವಾಗಬೇಕಿದೆ. ಆದರೆ, ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಹಿಡಿತ ಹೊಂದಿರುವ ಸ್ಟೇಕ್‌ಹೋಲ್ಡರ್‌ಗಳೆಲ್ಲರೂ, ಆ ನಿಯಮಗಳು ಅನುಷ್ಠಾನಕ್ಕೆ ಬರುವ ಮೊದಲೇ ತಳಪಾಯವಿಲ್ಲದ ಬಹುಮಹಡಿ ಕಟ್ಟಡಗಳನ್ನು ಕಟ್ಟಿ ಮುಗಿಸಲು ಆತುರ ತೋರುತ್ತಿರುವುದು ಯಾಕೆ?

ವಿಮಾನ ಪ್ರಯಾಣಿಕರ ಪ್ರಯಾಣವನ್ನು ಸುಗಮಗೊಳಿಸಿಕೊಳ್ಳಲು ಹುಟ್ಟಿಕೊಂಡಿರುವ ‘ಡಿಜಿಯಾತ್ರಾ’ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ಸುರೇಶ್ ಖಡಕ್‌ಭಾವಿ ಅವರು ಕಳೆದ ವಾರ ಪತ್ರಿಕೆಯೊಂದಕ್ಕೆ (ಬ್ಯುಸಿನೆಸ್ ಸ್ಟ್ಯಾಂಡರ್ಡ್) ನೀಡಿದ ಸಂದರ್ಶನದಲ್ಲಿ, ಈಗ ಶೇ. 30-35 ಪ್ರಯಾಣಿಕರು ಡಿಜಿಯಾತ್ರಾ ಬಳಸುತ್ತಿದ್ದಾರೆ. ಈ ಪ್ರಮಾಣವನ್ನು 2028ರ ಹೊತ್ತಿಗೆ ಶೇ. 80ಕ್ಕೆ ಏರಿಸುವುದಲ್ಲದೇ ಅಂತರ್‌ರಾಷ್ತ್ರೀಯ ಪ್ರಯಾಣಿಕರ ಬಳಕೆಗೂ ಸಿದ್ಧಗೊಳಿಸಲಾಗುವುದು. ಈಗ 24 ವಿಮಾನ ನಿಲ್ದಾಣಗಳಲ್ಲಿರುವ ಈ ವ್ಯವಸ್ಥೆ ಬರುವ ವರ್ಷದ ಮಾರ್ಚ್ ಹೊತ್ತಿಗೆ 41 ವಿಮಾನ ನಿಲ್ದಾಣಗಳಿಗೆ ವಿಸ್ತರಿಸಲಿದೆ. ಜನ ಹೆಚ್ಚಿನಂಶ ಭಾಷೆಯ ಕಾರಣಕ್ಕೆ ಇದರ ಬಳಕೆಗೆ ಹಿಂಜರಿಯುತ್ತಿದ್ದಾರೆ. ಹಾಗಾಗಿ, ಇದೇ ಜುಲೈ ತಿಂಗಳಿನಲ್ಲೇ ಹಿಂದಿ, ಕನ್ನಡ, ಬಂಗಾಳಿ, ತಮಿಳು, ಮರಾಠಿ ಭಾಷೆಗಳಲ್ಲೂ ಡಿಜಿಯಾತ್ರಾ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣಗಳಲ್ಲಿ ಮಾತ್ರವಲ್ಲದೆ ಹೊಟೇಲುಗಳಲ್ಲಿ ಚೆಕ್-ಇನ್ ಆಗುವುದಕ್ಕೂ ಡಿಜಿಯಾತ್ರಾ ಬಳಸುವ ಸಾಧ್ಯತೆಗಳನ್ನು ಕಂಪೆನಿ ಅನ್ವೇಷಿಸುತ್ತಿದೆ ಎಂದು ಹೇಳಿದ್ದರು.

ಡಿಜಿಯಾತ್ರಾ ಫೌಂಡೇಷನ್ ಒಂದು ಲಾಭೋದ್ದೇಶವಿಲ್ಲದ ಜಾಯಿಂಟ್ ವೆಂಚರ್ (ಜೆವಿ) ಖಾಸಗಿ ಕಂಪೆನಿ. ಭಾರತ ಸರಕಾರದ ನಾಗರಿಕ ವಿಮಾನಯಾನ ಖಾತೆಯ ಅಡಿಯಲ್ಲಿ 2019ರ ಫೆಬ್ರವರಿ 20ರಂದು ಸ್ಥಾಪನೆಗೊಂಡಿರುವ ಈ ಕಂಪೆನಿಯಲ್ಲಿ ಶೇ. 26 ಶೇರನ್ನು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಹೊಂದಿದ್ದರೆ, ಉಳಿದ ಶೇ. 74 ಶೇರನ್ನು BIAL, DIAL, GHIAL, MIAL ಮತ್ತು CIAL ಎಂಬ ಐದು ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳು ಹೊಂದಿವೆ. ಡಿಜಿಯಾತ್ರಾ ಫೌಂಡೇಷನ್ 2022ರ ಡಿಸೆಂಬರ್ 1ರಂದು ದಿಲ್ಲಿ, ವಾರಣಾಸಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳ ಮೂಲಕ ತನ್ನ ಕಾರ್ಯಾಚರಣೆ ಆರಂಭಿಸಿತ್ತು. ಮುಖಗುರುತು ತಂತ್ರಜ್ಞಾನ (ಎಫ್‌ಆರ್‌ಟಿ) ಆಧರಿಸಿ, ವಿಮಾನ ನಿಲ್ದಾಣಗಳಲ್ಲಿ ಸ್ಪರ್ಶ ರಹಿತ, ಕಾಗದ ರಹಿತ, ಅಡೆತಡೆ ರಹಿತ ಪ್ರವೇಶ ತಪಾಸಣೆಯ ಸೌಕರ್ಯವನ್ನು ಪ್ರಯಾಣಿಕರ ಮೊಬೈಲ್ ಫೋನ್‌ನಲ್ಲಿರುವ ವಾಲೆಟ್ ಆಧರಿತ ಗುರುತು ನಿರ್ವಹಣೆಯ ಮೂಲಕ ಒದಗಿಸುವುದು ಈ ಯೋಜನೆಯ ಉದ್ದೇಶ. PIB Release ID: 1842408).

ಆರಂಭಗೊಂಡಲ್ಲಿಂದೀಚೆಗೆ ಸುಮಾರು 1.40 ಕೋಟಿ ಜನರು ಈ ಅಪ್ಲಿಕೇಷನ್‌ಅನ್ನು ಡೌನ್‌ಲೋಡ್ ಮಾಡಿಕೊಂಡು ಬಳಸುತ್ತಿದ್ದು, ಅಂದಾಜು 6 ಕೋಟಿ ಪ್ರಯಾಣಗಳು ಡಿಜಿಯಾತ್ರಾ ಮೂಲಕ ನಡೆದಿವೆ. ಡಿಜಿಯಾತ್ರಾ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡವರು ಆಧಾರ್ ಅಥೆಂಟಿಕೇಷನ್ ಪ್ರಕ್ರಿಯೆ ಮುಗಿಸಿ, ಮುಖದ ಚಹರೆ ಹೊಂದಾಣಿಕೆ ಮಾಡಿಸಿದ ಬಳಿಕ, ಅವರ ಗುರುತು ಪ್ರಮಾಣವನ್ನು (Verified Credentials- VC) ಡಿಜಿಯಾತ್ರಾ ಅಪ್ಲಿಕೇಷನ್ ಇರಿಸಿಕೊಂಡಿರುತ್ತದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಬೋರ್ಡಿಂಗ್ ಪಾಸನ್ನು ಅದಕ್ಕೆ ಲಿಂಕ್ ಮಾಡಿದರೆ, ಭದ್ರತಾ ಗೇಟ್ ಬಳಿ ಮುಖ ಚಹರೆ ಗುರುತನ್ನು ಯಂತ್ರಮುಖೇನ ಹೋಲಿಸಿ ನೋಡಿ, ಪ್ರಯಾಣಿಕರನ್ನು ಒಳಬಿಡಲಾಗುತ್ತದೆ. ಇದೆಲ್ಲ ಸಂಪೂರ್ಣ ಯಂತ್ರಚಾಲಿತವಾಗಿ ಆಗಿ ನಡೆಯುವುದರಿಂದ ಮಾನವ ಹಸ್ತಕ್ಷೇಪ ಇಲ್ಲ ಎಂಬುದು ಈ ಸವಲತ್ತಿನ ಹೆಚ್ಚುಗಾರಿಕೆ.

ಡಿಜಿಯಾತ್ರಾ ಬಗ್ಗೆ ಆಕ್ಷೇಪಗಳೇನು?

ಒಂದು ಸರಕಾರಕ್ಕೆ ತನ್ನ ಪ್ರಜೆಗಳ ಖಾಸಗಿ ವಿವರಗಳು ಎಷ್ಟರ ಮಟ್ಟಿಗೆ ಅಗತ್ಯ ಎಂಬುದು ಇಂದು ಡೇಟಾಯುಗದಲ್ಲಿ ಬಹಳ ಮುಖ್ಯವಾದ ಪ್ರಶ್ನೆ. ಪ್ರಜೆಗಳ ವೈಯಕ್ತಿಕ ಡೇಟಾಗಳನ್ನು ಸಂಗ್ರಹಿಸಿದವರು ಪ್ರಜೆಗಳ ಖಾಸಗಿ ಬದುಕಿನ ಮೇಲೆ ಪೂರ್ಣ ಪ್ರಭಾವ ಬೀರಬಹುದಾದಷ್ಟರ ಮಟ್ಟಿಗೆ ಇಂದು ಡೇಟಾ ವಿಶ್ಲೇಷಣೆ ತಂತ್ರಜ್ಞಾನ ಮುಂದುವರಿದಿದೆ. ಈ ಕಾರಣಕ್ಕಾಗಿಯೇ ಸುಪ್ರೀಂ ಕೋರ್ಟಿನ ಒತ್ತಾಸೆಯ ಮೇರೆಗೆ, ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ‘ಡಿಜಿಟಲ್ ಇಂಡಿಯಾವು’ ಬೇರೆ ದೇಶಗಳಿಗೆ ಹೋಲಿಸಿದರೆ ಬಹಳ ವಿಳಂಬವಾಗಿ ವೈಯಕ್ತಿಕ ಡೇಟಾ ಬಳಕೆ ನಿಯಂತ್ರಣಕ್ಕೆ DPDP Act-2023ನ್ನು ಜಾರಿಗೆ ತಂದಿದೆ. ಕಾಯ್ದೆ ಬಂದು ಇಷ್ಟು ದಿನಗಳಾದರೂ, ಇನ್ನೂ ಈ ಕಾಯ್ದೆಯ ನಿಯಮಗಳು ಜಾರಿಗೆ ಬಂದಿಲ್ಲ. ಅವು ಇನ್ನೂ ಅಭಿಪ್ರಾಯ ಸಂಗ್ರಹ-ವಿಶ್ಲೇಷಣೆಯ ಹಂತದಲ್ಲಿವೆ. ನಿಯಮಗಳ ಅನುಷ್ಠಾನವೂ ಹಂತಹಂತವಾಗಿ ನಡೆಯಲಿದೆಯಂತೆ. ಮೇಲಾಗಿ, ದೇಶದ ಅತಿದೊಡ್ಡ ಡೇಟಾ ದಾಸ್ತಾನುಗಾರ (ಡೇಟಾ ಫಿಡ್ಯೂಷರಿ) ಆಗಿರುವ ಸರಕಾರ ಸ್ವತಃ ತನ್ನನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರಿಸಿಕೊಂಡಿದೆ!

ವಾಸ್ತವ ಹೀಗಿರುವಾಗ, ಒಂದು ಖಾಸಗಿ ಹಿತಾಸಕ್ತಿಗಳಿರುವ ಅರೆ ಸರಕಾರಿ ಜೆವಿ ಕಂಪೆನಿಯ ಕೈಗೆ ಪ್ರಯಾಣಿಕರ ಡೇಟಾಗಳನ್ನು ಒದಗಿಸುವುದು ಬಹಳ ಆತಂಕಕಾರಿ. 2023ರ ಮಾರ್ಚ್‌ನಲ್ಲಿ ಅಂದಿನ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರಯಾಣಿಕರೊಬ್ಬರ ಆತಂಕಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಟ್ವೀಟ್ ಮಾಡಿ, ಪ್ರಯಾಣಿಕರ ವೈಯಕ್ತಿಕ ಮಾಹಿತಿಯನ್ನು ಸರಕಾರದ ದಾಸ್ತಾನಿನಲ್ಲಾಗಲೀ, ಡಿಜಿಯಾತ್ರಾದವರಾಗಲೀ ಇರಿಸಿಕೊಳ್ಳುವುದಿಲ್ಲ. ಡೇಟಾ ಪ್ರಯಾಣಿಕರ ಮೊಬೈಲ್ ಫೋನಿನಲ್ಲೇ ಭದ್ರವಾಗಿರುತ್ತದೆ ಎಂದು ಖಚಿತಪಡಿಸಿದ್ದರು. ಆದರೆ ವಾಸ್ತವ ಹೀಗಿದೆಯೆ?

ಸ್ವತಃ ಸರಕಾರ ಬಿಡುಗಡೆ ಮಾಡಿರುವ Digi Yatra Biometric Boarding System DY-BBS ಮಾರ್ಗದರ್ಶಿಯಲ್ಲಿ, ಡಿಜಿಯಾತ್ರಾ ಬಯೊ ಮೆಟ್ರಿಕ್ ಸಿಸ್ಟಮ್ ಪ್ರಯಾಣದ ದಿನಾಂಕದಿಂದ 30ದಿನಗಳ ವರೆಗೆ, audit/ forensic analysis by BCAS or any authorized Govt. of India agencies ಉದ್ದೇಶಕ್ಕಾಗಿ ತಾನು ಸಂಗ್ರಹಿಸಿದ ಡೇಟಾಗಳನ್ನು ಇರಿಸಿಕೊಳ್ಳಬಹುದು ಎಂದು ಹೇಳುತ್ತದೆಯಾದರೆ, ಡಿಜಿಯಾತ್ರಾ ತನ್ನ ಅಪ್ಲಿಕೇಷನ್ ವಿವರಗಳಲ್ಲಿ ತಾವು Self-Sovereign Identity (SSI) ತತ್ವ ಬಳಕೆ ಮಾಡುವುದರಿಂದ, ವೈಯಕ್ತಿಕ ಮಾಹಿತಿಯನ್ನು ಎಲ್ಲೂ ಸಂಗ್ರಹಿಸಲಾಗುವುದಿಲ್ಲ ಎಂದು ಹೇಳಿಕೊಂಡಿದೆ. ಸಂಗ್ರಹಿಸಲಾಗುವ ವ್ಯಕ್ತಿಯ ಗುರುತು ಪ್ರಮಾಣ (ವಿಸಿ), ಮುಖದ ಚಹರೆ ವಿವರಗಳನ್ನು ಡಿಜಿಯಾತ್ರಾ ಅಪ್ಲಿಕೇಷನ್ ಸಂಬಂಧಿತ ವಿಮಾನ ನಿಲ್ದಾಣದ ಜೊತೆ (ಅದು ಖಾಸಗಿ ನಿರ್ವಹಣೆಯದು), ತಾಂತ್ರಿಕ ಸಪೋರ್ಟ್, ಕಸ್ಟಮರ್ ಸಪೋರ್ಟ್ ಒದಗಿಸುವ ಮೂರನೇ ಪಾರ್ಟಿಗಳ ಜೊತೆ ಹಂಚಿಕೊಳ್ಳುವುದಾಗಿ ಹೇಳುತ್ತದೆ. ಈ ಮೂರನೇ ಪಾರ್ಟಿಗಳ ಗೌಪ್ಯತೆ ವ್ಯವಸ್ಥೆ ಎಷ್ಟು ಭದ್ರ ಎಂಬುದು ಅಸ್ಪಷ್ಟ. ಇಲ್ಲೆಲ್ಲ ನೀತ್ಯಾತ್ಮಕ ಸಡಿಲು, ಅಪಾರದರ್ಶಕತೆ, ಗೊಂದಲ ಇರುವಂತಿದೆ.

ಡಿಜಿಯಾತ್ರಾ ‘ಕಡ್ಡಾಯ ಅಲ್ಲ’ ಎಂಬ ಅಧಿಕೃತ ಹೇಳಿಕೆಯ ಹೊರತಾಗಿಯೂ ಅದನ್ನು ಬಳಸಲು ಪರೋಕ್ಷ ಒತ್ತಡಗಳನ್ನು (ಕೋವಿಡ್ ಲಸಿಕೆಯ ಸಂದರ್ಭವನ್ನು ನೆನಪಿಸಿಕೊಳ್ಳಿ!) ಆಙ ಸೌಲಭ್ಯ ಇರುವ ವಿಮಾನ ನಿಲ್ದಾಣಗಳ ಮೂಲಕ ಪ್ರಯಾಣಿಸಿರುವವರೆಲ್ಲ ಅನುಭವಿಸಿರುತ್ತಾರೆ.

ಖಾಸಗಿತನವು ಸಾಂವಿಧಾನಿಕ ಹಕ್ಕು ಎಂದು ಪ್ರತಿಪಾದಿಸಿದ ಸುಪ್ರೀಂ ಕೋರ್ಟ್ (ಪುಟ್ಟಸ್ವಾಮಿ ವರ್ಸಸ್ ಭಾರತ ಸರಕಾರ) ಖಾಸಗಿತನದಲ್ಲಿ ಸರಕಾರದ ಹಸ್ತಕ್ಷೇಪಕ್ಕೆ - Legality, Necessity, Proportionality and Procedural safeguards- ಇವು ತ್ರೆಷ್‌ಹೋಲ್ಡ್‌ಗಳು ಎಂದು ಅಭಿಪ್ರಾಯಪಟ್ಟಿತ್ತು. ಆದರೆ ಇಲ್ಲಿ ಖಾಸಗಿತನದ-ಪಾರದರ್ಶಕತೆಯ ಕಾನೂನಿನ ವ್ಯಾಪ್ತಿಯಿಂದ ಹೊರಗಿರುವ, ಕೇವಲ ಅನುಕೂಲಕರ ಎಂಬ ಹೊರಪದರದ ಕಾರಣಕ್ಕೆ ಆಚರಣೆಗೆ ಬಂದಿರುವ, ಉಲ್ಲಂಘನೆಗಳಾದರೆ ಉತ್ತರದಾಯಿತ್ವ, ದಂಡನೆಗಳ ಹೊರೆ ಇಲ್ಲದ ಈ ‘ವ್ಯವಸ್ಥೆ’ ಸುಪ್ರೀಂಕೋರ್ಟ್ ಹೇಳಿದ ಎಲ್ಲ ತ್ರೆಷ್‌ಹೋಲ್ಡ್‌ಗಳನ್ನೂ ಮೀರಿ ನಿಂತಿರುವಂತಿದೆ.

‘ಇಂಡಿಯಾ ಸ್ಟ್ಯಾಕ್’ ಎಂಬ ಹೆಸರಿನಲ್ಲಿ ಹಂತಹಂತವಾಗಿ, ಪದರು ಪದರುಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್’, ಆಧಾರ್ ಎಂಬ ತಾಯಿ ಬೇರಿನ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಯ ಆರೋಗ್ಯ, ಚಲನವಲನ, ಮುಖಚಹರೆ, ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ-ಖಾಸಗಿ ಬದುಕುಗಳ ಕುರಿತ ಮಾಹಿತಿಗಳನ್ನೆಲ್ಲ ಸಂಗ್ರಹಿಸಿ, ಅದಕ್ಕೆ ಸೂಕ್ತ ನಿಯಂತ್ರಣ ಇಲ್ಲದೆ ಇರಿಸಿಕೊಳ್ಳುವುದು (ಗಮನಿಸಿ: ಸರಕಾರಗಳು ಮತ್ತು ಸರಕಾರವು ಕಾಲಕಾಲಕ್ಕೆ ಸೂಚಿಸಿದ ಸಂಸ್ಥೆಗಳು DPDP ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ!), ಅವುಗಳನ್ನು ನಿರ್ವಹಿಸುವುದು ಮತ್ತು ಪ್ರಜೆಗಳ ಮೇಲೆ ಪ್ರತೀಕ್ಷಣ ‘ಹದ್ದಿನ ಕಣ್ಣು’ ಇರಿಸಿರುವುದು ಆರೋಗ್ಯಕರ ಅಲ್ಲ; ಸಾಂವಿಧಾನಿಕವೂ ಅಲ್ಲ. ಇದೆಲ್ಲ ಎಲ್ಲರೂ ಭಯ ಪಡುತ್ತಿರುವ ‘ಸರ್ವೈಲೆನ್ಸ್ ರಾಜ್’ನ ಒಂದು ಭಾಗ ಆಗದಿರಲಿ. ‘ಡಿಜಿಯಾತ್ರಾ’ ವ್ಯವಸ್ಥೆ ಸಾರ್ವತ್ರಿಕಗೊಳ್ಳುವ ಮೊದಲು ಅದು ಪ್ರಜೆಗಳ ಖಾಸಗಿತನಕ್ಕೆ ಉತ್ತರದಾಯಿ ಆಗಬೇಕು.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X