Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ಜಿನೋಮ್ ಇಂಡಿಯಾ ತಳಪಾಯ ಇಲ್ಲದ ಮತ್ತೊಂದು...

ಜಿನೋಮ್ ಇಂಡಿಯಾ ತಳಪಾಯ ಇಲ್ಲದ ಮತ್ತೊಂದು ಮಹಾಸೌಧ

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು31 Oct 2026 11:45 AM IST
share
ಜಿನೋಮ್ ಇಂಡಿಯಾ ತಳಪಾಯ ಇಲ್ಲದ ಮತ್ತೊಂದು ಮಹಾಸೌಧ

ಡಿಜಿಟಲ್ ಮಾರುಕಟ್ಟೆಯಲ್ಲಿ ಡೇಟಾ ಎಷ್ಟು ಅಮೂಲ್ಯ ಎಂಬ ವಾಸ್ತವ ಅರ್ಥ ಮಾಡಿಕೊಳ್ಳದಿದ್ದರೆ, ತಂತ್ರಜ್ಞಾನದ ಕೈಗೆ ನಮ್ಮ ಜುಟ್ಟು ಕೊಟ್ಟಂತೆ. ಜಿನೋಮ್ ಇಂಡಿಯಾ ಯೋಜನೆ ಆರಂಭಿಸುವ ಮುನ್ನ ಸರಕಾರವು, ಜೀನು ಡೇಟಾಗಳ ನಿಯಂತ್ರಣ-ಬಳಕೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಸ್ಪಷ್ಟ ಕಾನೂನು ಚೌಕಟ್ಟುಗಳನ್ನು ರೂಪಿಸುವುದು ಅಗತ್ಯ ಇದೆ.

ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯು 8,000 ಕೋಟಿ ರೂ.ಗಳ ವಚ್ಚದ ಬೃಹತ್ ಜಿನೋಮ್ ಸಂಶೋಧನಾ ಕಾರ್ಯಕ್ರಮವನ್ನು ಆರಂಭಿಸುವ, ಆ ಮೂಲಕ ಸಾರ್ವಜನಿಕ ಆರೋಗ್ಯ ನಿರ್ವಹಣೆಯನ್ನು ಇನ್ನಷ್ಟು ಬಲಪಡಿಸುವ ಯೋಜನೆಯೊಂದನ್ನು ರೂಪಿಸಿದ್ದು, ಆ ಯೋಜನೆ ಶೀಘ್ರವೇ ಅನುಮೋದನೆಗಾಗಿ ಪ್ರಧಾನಿಯವರ ಸಂಪುಟ ಸಭೆಯ ಮುಂದೆ ಬರಲಿದೆ; ಹಣಕಾಸು ಇಲಾಖೆಯ ವೆಚ್ಚಗಳ ಸಮಿತಿಯು ಈ ಯೋಜನೆಯ ವಿವರಗಳನ್ನು ಈಗಾಗಲೇ ಪರಿಶೀಲಿಸಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಪ್ರತಿಯೊಂದು ಜೀವಿಯ ಜೈವಿಕ ಚಟುವಟಿಕೆಗಳ ರೂಪಣೆ ಮತ್ತು ನಿಯಂತ್ರಣಗಳ ಜೈವಿಕ ಸೂಚನೆಗಳು ಪೀಳಿಗೆಯಿಂದ ಪೀಳಿಗೆಗೆ ಹರಿದುಬರುವುದು ವಂಶವಾಹಿಗಳ (ಜೀನುಗಳ) ಮೂಲಕ. ಮನುಷ್ಯ ದೇಹದಲ್ಲಿರುವ ಈ ಎಲ್ಲ ಜೀನುಗಳ ಸಮಗ್ರ ವಿಶ್ಲೇಷಣೆ (ಜಿನೋಮ್ ಸೀಕ್ವೆನ್ಸಿಂಗ್) ಮತ್ತು ಅವನ್ನು ಸಾರ್ವಜನಿಕ ಆರೋಗ್ಯ ಸಂಬಂಧಿ ಚಟುವಟಿಕೆಗಳಲ್ಲಿ ಬಳಕೆ ಮಾಡಿಕೊಳ್ಳುವುದು ಇಂದು ಹೊಸ ವಿಜ್ಞಾನ ವಲಯವಾಗಿ ವೇಗದಿಂದ ಬೆಳೆಯುತ್ತಿದೆ. ಜಾಗತಿಕವಾಗಿ ಈ ಚಟುವಟಿಕೆಗಳೆಲ್ಲ ಭರದಿಂದ ನಡೆಯುತ್ತಿದ್ದು, ಭಾರತ ಈ ಹಳಿ ಏರಿದ್ದು 2020ರಲ್ಲಿ. ಜಿನೋಮ್ ಇಂಡಿಯಾ ಪ್ರಾಜೆಕ್ಟ್ (GIP) ಈಗ ದೇಶದಾದ್ಯಂತ ಸುಮಾರು 20 ಸಂಶೋಧನಾ ಸಂಸ್ಥೆಗಳ ಜೊತೆ ಸೇರಿ, ದೇಶದ ಸುಮಾರು 83 ವೈವಿಧ್ಯಮಯ ಜನಸಮುದಾಯಗಳ 20 ಸಾವಿರ ಜೀನು ಮಾದರಿಗಳನ್ನು ಸಂಗ್ರಹಿಸಿದ್ದು, ಅದರಲ್ಲಿ 10 ಸಾವಿರ ಜೀನು ಮಾದರಿಗಳ ಸಮಗ್ರ ವಿಶ್ಲೇಷಣೆ (whole Genome Sequencing) ಈಗಾಗಲೇ ಪೂರ್ಣಗೊಂಡಿದೆ. ಈ ಬೃಹತ್ ಡೇಟಾಗಳನ್ನೆಲ್ಲ ಈಗ, ಹರ್ಯಾಣದ ಫರೀದಾಬಾದ್‌ನಲ್ಲಿ, ಅದಕ್ಕೆಂದೇ ಮೀಸಲಾದ ಇಂಡಿಯಾ ಬಯಲಾಜಿಕಲ್ ಡೇಟಾ ಸೆಂಟರ್ (IBDC)ನಲ್ಲಿ ದಾಸ್ತಾನು ಇರಿಸಲಾಗಿದೆ. ಈ ಕುರಿತು 2025ರ ಜನವರಿ 25ರಂದು ಸ್ವತಃ ಪ್ರಧಾನಿ ಹಾಗೂ ರಾಷ್ಟ್ರಪತಿ ಪ್ರಕಟಿಸಿದಾರೆ. ಕೈಗೆಟಕುವ ದರಗಳಲ್ಲಿ ರೋಗ ಪತ್ತೆ ಮತ್ತು ಭಾರತೀಯ ಜನಸಮುದಾಯಗಳಿಗೆಂದೇ ನಿಖರ ಔಷಧಗಳ ಸಿದ್ಧಪಡಿಸುವಿಕೆ ಇತ್ಯಾದಿಗಳಲ್ಲಿ ಜೀನ್ ಡೇಟಾಗಳನ್ನು ಬಳಸುವ ಮೂಲಕ ಸಾರ್ವಜನಿಕ ಆರೋಗ್ಯಕ್ಕೆ ಕೊಡುಗೆ ನೀಡುವುದು ಈ ಯೋಜನೆಯ ಉದ್ದೇಶ ಎಂದು ಹೇಳಲಾಗಿದೆ.

ಜಾಗತಿಕವಾಗಿ, ಈ ಜೀನು ಡೇಟಾ ಸಂಗ್ರಹದ ಸ್ವರೂಪ ಹೇಗಿದೆ ಎಂದರೆ, ಅಮೆರಿಕದ All of Us ಕಾರ್ಯಕ್ರಮದಡಿ, ದೇಶದ ಜನಸಂಖ್ಯೆಯ ಶೇ. 0.3 ಅಂದರೆ ಹತ್ತು ಲಕ್ಷ ಮಾದರಿಗಳು, ಇಂಗ್ಲೆಂಡಿನಲ್ಲಿ ದೇಶದ ಜನ ವೈವಿಧ್ಯಗಳ ಶೇ. 0.15 ಅಂದರೆ, ಒಂದು ಲಕ್ಷ ಮಾದರಿಗಳು ಸಂಗ್ರಹ ಮಾಡುವ ಯೋಜನೆಗಳು ಚಾಲ್ತಿಯಲ್ಲಿವೆ. ಇದಕ್ಕೆ ಹೋಲಿಸಿದರೆ, ಭಾರತದಲ್ಲಿ ದಾಖಲೆಗಳಲ್ಲಿ ಕಾಣಸಿಗುವ 4,600 ಜನಸಮುದಾಯಗಳ ಪೈಕಿ ಕೇವಲ ಶೇ. 2 ಅಂದರೆ, 83 ಜನ ಸಮುದಾಯಗಳ ಜಿನೋಮ್ ಮಾದರಿ ಸಂಗ್ರಹ ಆಗಿದೆ. ಅಂದರೆ ಸದ್ಯಕ್ಕೆ, ದೇಶದ ಒಟ್ಟು ಜನಸಂಖ್ಯೆಯ ಶೇ. 0.007 ಜೀನುಮಾದರಿಗಳು ಮಾತ್ರ ಸಂಗ್ರಹ ಆಗಿವೆ.

ಭಾರತಕ್ಕೆ ಜಗತ್ತಿನ ಜೈವಿಕ ತಂತ್ರಜ್ಞಾನ-ಸಾರ್ವಜನಿಕ ಆರೋಗ್ಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ದೊಡ್ಡ ಪ್ರಮಾಣದ ಜೀನು ಡೇಟಾ ಸಂಗ್ರಹದ ತುರ್ತು ಇರುವುದೇನೋ ಸರಿ. ಆದರೆ ಅದಕ್ಕೆ ಅಗತ್ಯವಿರುವ ಎಕೊಸಿಸ್ಟಮ್ ಇನ್ನೂ ಸಿದ್ಧವಾಗಿಲ್ಲ. ಡೇಟಾ ಸಂರಕ್ಷಣೆಯ ತಳಪಾಯವಾಗಲಿ, ಕಾನೂನು-ತತ್ವಗಳ ಸಾಂವಿಧಾನಿಕ ಚೌಕಟ್ಟಾಗಲಿ ಇಲ್ಲದೆ ಸಿದ್ಧಗೊಳ್ಳುವ ಈ ರೀತಿಯ ಅತಿಸೂಕ್ಷ್ಮ ಡೇಟಾ ದಾಸ್ತಾನು ವ್ಯವಸ್ಥೆಗಳು ದೇಶದ ಜನಸಮುದಾಯಗಳ ಅಸ್ತಿತ್ವಕ್ಕೇ ಅಪಾಯಕಾರಿ ಆಗಬಲ್ಲವು. ಅದು ಹೇಗೆಂಬುದನ್ನು ಸ್ವಲ್ಪ ವಿವರಗಾಗಿ ಗಮನಿಸೋಣ.

UNESCO ಮಾನವ ಜಿನೋಮ್ ಮತ್ತು ಮಾನವ ಹಕ್ಕುಗಳ ಜಾಗತಿಕ ಘೋಷಣೆ (1997) ಅನ್ವಯ, ಮಾನವ ಜಿನೋಮ್‌ಗಳು ಮಾನವ ಜೀವ ಪರಂಪರೆಯ ಭಾಗ ಆಗಿದ್ದು, ಅದರಿಂದ ಆರ್ಥಿಕ ಲಾಭ ಪಡೆಯುವಂತಿಲ್ಲ ಮತ್ತು ಅವುಗಳನ್ನು ಬಳಸಿ ಸಂಶೋಧನೆಗಳಿಗೆ ಪೂರ್ವಾನುಮತಿ ಕಡ್ಡಾಯ. ಹಾಗೆಯೇ UNESCO ಮಾನವ ಜೆನೆಟಿಕ್ ಡೇಟಾ ಕುರಿತ ಅಂತರ್‌ರಾಷ್ಟ್ರೀಯ ಘೋಷಣೆ (2003) ಅನ್ವಯ ಅಂಚಿನಲ್ಲಿರುವ ಜನಸಮುದಾಯಗಳ ಜೀನುಡೇಟಾಗಳನ್ನು ಬಳಸುವಾಗ, ಆ ಸಮುದಾಯಗಳ ಭವಿಷ್ಯದ ಸುರಕ್ಷತೆ, ಗೌಪ್ಯತೆ-ಭದ್ರತೆಗಳು ಕಡ್ಡಾಯ. ಭಾರತದಲ್ಲಿ ಇಂದು ಡೇಟಾ ಕಾನೂನು ಇದೆಯಾದರೂ, ಅದು ಪೂರ್ಣಪ್ರಮಾಣದಲ್ಲಿ ಜಾರಿಗೆ ಇನ್ನೂ ಬಂದಿಲ್ಲ, ಅಮೆರಿಕದಂತೆ ಜೀನು ಮಾಹಿತಿ ಆಧರಿತ ತಾರತಮ್ಯ ನಿಷೇಧ ಕಾಯ್ದೆಯೂ ಇಲ್ಲಿ ಇಲ್ಲ. ಇಲ್ಲಿರುವ ಜೀವ ವೈವಿಧ್ಯ ಕಾಯ್ದೆ- 2002 ಸಮುದಾಯಗಳ ಜೀವವೈವಿಧ್ಯಗಳ ಬಗ್ಗೆ ಹೇಳುತ್ತದಾದರೂ, ಅಲ್ಲಿ ವ್ಯಕ್ತಿಗಳ ಡೇಟಾ ಗೌಪ್ಯತೆಯ ಬಗ್ಗೆ ಹೇಳಲಾಗಿಲ್ಲ. ಎಲ್ಲ ಬಿಡಿ. ಕ್ರಿಮಿನಲ್ ಕಾನೂನುಗಳ ಅನ್ವಯ ಡಿಎನ್‌ಎ ಮಾದರಿ ಸಂಗ್ರಹಿಸಿ, ಪ್ರಕರಣ ಮುಗಿದ ಬಳಿಕ ಆ ಮಾದರಿಯನ್ನು ನಾಶ ಮಾಡವ ಬಗ್ಗೆಯೂ ನಮ್ಮಲ್ಲಿ ಸ್ಪಷ್ಟ ನಿಯಮಗಳಿಲ್ಲ.

ಇದೆಲ್ಲ ಯಾಕೆ ಸಮಸ್ಯೆ ಆಗಬೇಕು? ತಂತ್ರಜ್ಞಾನದಲ್ಲಿ ನಾವು ವಿಶ್ವಗುರು ಆಗುವುದು ಬೇಡವೇ ಎಂದು ಕೇಳುವಿರಾ? ಇದೊಂದು ಕಥೆ ಕೇಳಿ ಮುಂದುವರಿಯಿರಿ.

1990-94ರ ನಡುವೆ ಅಮೆರಿಕದ ಅರಿರೆನಾ ಸ್ಟೇಟ್ ವಿವಿಯಲ್ಲಿ ಹಾವಾಸುಪಾಯ್ ಬುಡಕಟ್ಟಿನ ಜನರಲ್ಲಿ ಮಧುಮೇಹ ಕಾಯಿಲೆಯ ಸ್ವರೂಪವನ್ನು ಅರಿಯಲು 400 ಮಂದಿಯ ಜೀನುಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಆದರೆ, 2003ರ ಹೊತ್ತಿಗೆ ಈ ಜೀನು ಮಾದರಿಗಳನ್ನು, ಅವನ್ನು ಪಡೆಯಲಾದ ನಿರ್ದಿಷ್ಟ ಉದ್ದೇಶಕ್ಕಲ್ಲದೇ ಬೇರೆ ಉದ್ದೇಶಕ್ಕೆ ಬಳಕೆ ಮಾಡಿದ್ದು ಬೆಳಕಿಗೆ ಬಂದಿತು. ಆ ಬುಡಕಟ್ಟಿನವರ ವಲಸೆಯ ಕರಿತ ಅಧ್ಯಯನದಲ್ಲಿ ಅದೇ ಜೀನು ಮಾದರಿಗಳು ಅನಧಿಕೃತವಾಗಿ ಬಳಕೆ ಆಗಿದ್ದವು. ಆ ಬುಡಕಟ್ಟಿನ ಮೂಲಗಳ ಬಗ್ಗೆ ಚಾಲ್ತಿ ಮೌಖಿಕ ಚರಿತ್ರೆಗೆ ಭಿನ್ನವಾಗಿ, ಅವರು ಬೇರೆಯೇ ಮೂಲದವರಾಗಿರಬಹುದೆಂಬ ಸಂಗತಿ ಆ ಅಧ್ಯಯನದಲ್ಲಿ ಕಂಡುಬಂದಾಗ, ಅಲ್ಲಿ ಆ ಸಮುದಾಯ ವಾಸವಿದ್ದ ಭೂಮಿಯ ಹಕ್ಕಿಗೇ ಕಾನೂನಿನ ಸಂಚಕಾರ ಬರುವ ಅಪಾಯ ಎದುರಾಗಿತ್ತು. ಈ ಬಗ್ಗೆ 2004ರಲ್ಲಿ ಸಮುದಾಯದ ಪ್ರತಿನಿಧಿಗಳು ನ್ಯಾಯಾಲಯದ ಮೊರೆ ಹೊಕ್ಕಬೇಕಾಯಿತು. ಆರು ವರ್ಷಗಳ ಹೋರಾಟದ ಬಳಿಕ, 2010ರಲ್ಲಿ ತೀರ್ಪು ಬುಡಕಟ್ಟು ಸಮುದಾಯದ ಪರವಾಗಿ ಬಂದಿತು. (ವಿವರಗಳಿಗೆ: https://journalofethics.ama-assn.org/article/genetic-research-among-havasupai-cautionary-tale/2011-02?ref=botany.one)

ಭಾರತದಂತಹ ವಿಪುಲ ಜನಾಂಗೀಯ ವೈವಿಧ್ಯಗಳಿರುವ ದೇಶಗಳಲ್ಲಿ, ಇಂತಹ ಕಾನೂನಿನ ಚೌಕಟ್ಟು ರಹಿತ ಜೀನು ಸಂಗ್ರಹ-ವಿಶ್ಲೇಷಣೆಗಳು, ದಾಸ್ತಾನುಗಳು, ಅಕಸ್ಮಾತ್ ತಪ್ಪು ಕೈಗಳಿಗೆ ಸಿಕ್ಕರೆ, ಗಂಭೀರ ಸಮಸ್ಯೆಗಳನ್ನು ತಂದೊಡ್ಡಬಹುದು. ಜೀನು ಡೇಟಾಗಳ ಸೂಕ್ಷ್ಮ ಮತ್ತು ಶಾಶ್ವತ ಸ್ವರೂಪ ಹೇಗಿರುತ್ತದೆ ಎಂದರೆ, ಒಬ್ಬ ವ್ಯಕ್ತಿಯ ಜೀನು ಡೇಟಾ, ಆ ವ್ಯಕ್ತಿಯ ಸಂಪೂರ್ಣ ಸಮುದಾಯದ ಮೇಲೆಯೇ (ಅವರ ಒಪ್ಪಿಗೆಯೇ ಇಲ್ಲದೆ) ಪರಿಣಾಮ ಬೀರಬಹುದು. ಇದು ಅಪಾಯಕಾರಿ ಸನ್ನಿವೇಶ. ಹಾಗಾಗಿ, ಜೀನು ಸಂಬಂಧಿ ಮಾದರಿಗಳ ಸಂಗ್ರಹದ ವೇಳೆ, ವ್ಯಕ್ತಿಯ ಮಾತ್ರವಲ್ಲದೆ ಆ ವ್ಯಕ್ತಿಯ ಕುಟುಂಬದ, ಸಮುದಾಯದ ಖಾಸಗಿತನವನ್ನೂ ರಕ್ಷಿಸಲು ಅಗತ್ಯ ಕಾನೂನು ಚೌಕಟ್ಟುಗಳಿರಬೇಕಾಗುತ್ತದೆ. ಭಾರತದಲ್ಲಿ ಅದು ಸದ್ಯಕ್ಕೆ ಇಲ್ಲ.

ಅಂತರ್‌ರಾಷ್ಟ್ರೀಯವಾಗಿ ಈಗ ಬಳಕೆ ಇರುವ CARE (ಕಲೆಕ್ಟಿವ್ ಬೆನೆಫಿಟ್, ಅಥಾರಿಟಿ ಟು ಕಂಟ್ರೋಲ್, ರೆಸ್ಪಾನ್ಸಿಬಿಲಿಟಿ ಮತ್ತು ಎಥಿಕ್ಸ್) ತತ್ವಗಳು ಭಾರತದಲ್ಲಿ ಕಾನೂನುಬದ್ಧ ಚೌಕಟ್ಟಾಗಿ ರೂಪುಗೊಳ್ಳುವ ಮೊದಲೇ ಜಿನೋಮ್ ಇಂಡಿಯಾ ಯೋಜನೆಯ ಡೇಟಾಗಳನ್ನು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಬಳಸತೊಡಗುವ ಕುರಿತು ಸಿದ್ಧತೆಗಳಾಗುತ್ತಿವೆ. ಇದು ತೀರಾ ಬೇಜವಾಬ್ದಾರಿಯ ತೀರ್ಮಾನ. ಅಮೆರಿಕ, ಯುರೋಪಿನಂತಹ ದೇಶಗಳೆಲ್ಲ ಒಪ್ಪಿತ ನೈತಿಕ ತಳಪಾಯಗಳ ಮೇಲೆ ಕಾನೂನು ಚೌಕಟ್ಟುಗಳನ್ನು ರೂಪಿಸಿಯೇ ಜೀನು ಡೇಟಾ ಸಂಗ್ರಹ-ವಿಶ್ಲೇಷಣೆಗೆ ಹೊರಟಿವೆ.

ಭಾರತ ಸರಕಾರವು ಕೋವಿಡ್ ಕಾಲದಲ್ಲಿ ‘ಆರೋಗ್ಯ ಸೇತು’ ಎಂದು ಆರಂಭಿಸಿದ ಸೋಂಕಿತರ ಪತ್ತೆ ಪ್ಲಾಟ್‌ಫಾರಂ, ಈಗ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಪ್ಲಾಟ್‌ಫಾರ್ಮ್ ಆಗಿ ರೂಪುಗೊಂಡಿದ್ದು, ಅಲ್ಲೀಗ 98.67 ಕೋಟಿ ಭಾರತೀಯರು ನೋಂದಣಿ ಮಾಡಿಕೊಂಡಿದ್ದಾರೆ ಮತ್ತು ಅವರ 125.77 ಕೋಟಿಗೂ ಮಿಕ್ಕಿ ಆರೋಗ್ಯ ದಾಖಲೆಗಳು ಅಲ್ಲಿ ಲಭ್ಯವಿವೆ. ಸದ್ಯಕ್ಕೆ ಶಾಸನವಾಗಿರುವ DPDP ಕಾಯ್ದೆ ಮುಂದಿನ ವರ್ಷ ಇನ್ನಷ್ಟೇ ಪೂರ್ಣಪ್ರಮಾಣದಲ್ಲಿ ಜಾರಿಗೆ ಬರಬೇಕಿದೆ. ಜಾರಿಗೆ ಬಂದರೂ, ಸರಕಾರಗಳು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿವೆ. ನಾಳೆ ಯಾರಿಗಾದರೂ ABHA ಪ್ಲಾಟ್‌ಫಾರ್ಮ್‌ನಲ್ಲಿರುವ ಡೇಟಾವನ್ನು ದಾಸ್ತಾನಿರುವ ಜಿನೋಮ್ ಡೇಟಾ ಜೊತೆ ಹೊಂದಿಸಿ ನೋಡುವುದು ಸಾಧ್ಯವಾದರೆ, ಅದು ಡೇಟಾ ಸೋರಿಕೆ ಆದ ಜನಸಮುದಾಯಗಳಲ್ಲಿ ಶಾಶ್ವತವಾದ ಹಾನಿಗಳಿಗೆ ಕಾರಣ ಆಗಬಹುದು. ಭಾರತ ಸರಕಾರವು ಡಿಎನ್‌ಎ ತಂತ್ರಜ್ಞಾನ (ಬಳಕೆ ಮತ್ತು ಅನ್ವಯನ) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿತಾದರೂ, ಖಾಸಗಿತನಕ್ಕೆ ಸಂಬಂಧಿಸಿ ಪ್ರತಿಪಕ್ಷಗಳ ಆಕ್ಷೇಪದ ಕಾರಣಕ್ಕೆ ಅದು ಜಾರಿಗೆ ತರುವುದು ಸಾಧ್ಯ ಆಗಿರಲಿಲ್ಲ. ಹಾಗಾಗಿ, ಅದನ್ನು 2023 ಜುಲೈನಲ್ಲಿ ಸರಕಾರ ಹಿಂದೆಗೆದುಕೊಂಡಿದೆ. ಹಾಗಾಗಿ, ಇಂದು ಕ್ರಿಮಿನಲ್ ಪ್ರಕರಣಗಳಲ್ಲಿ (ಆಪಾದಿತರದು ಇತ್ಯಾದಿ), ಸಿವಿಲ್ ಪ್ರಕರಣಗಳಲ್ಲಿ (ಪಿತೃತ್ವ ಸಾಬೀತು ಇತ್ಯಾದಿ) ಸಂಗ್ರಹಿಸಿದ ಡಿಎನ್‌ಎ ಮಾದರಿಗಳು ಯಾವ ರೀತಿಯಲ್ಲಿ ಬಳಕೆ ಆಗುತ್ತಿವೆ, ಆ ಸಂಗ್ರಹದಿಂದ ವ್ಯಕ್ತಿಯ ಮೂಲಭೂತ ಹಕ್ಕುಗಳಲ್ಲಿ ಒಂದಾಗಿರುವ ಖಾಸಗಿತನದ ಹಕ್ಕಿಗೆ ಹಾನಿ ಆಗಿದೆಯೆ? ವ್ಯಕ್ತಿ ನ್ಯಾಯಾಲಯದಿಂದ ನಿರ್ದೋಷಿ ಎಂದು ಬಿಡುಗಡೆ ಆದರೆ, ಆ ಬಳಿಕ ಆ ಡಿಎನ್‌ಎ ಮಾದರಿಗಳನ್ನು ಏನು ಮಾಡಲಾಗುತ್ತದೆ ಎಂಬುದಕ್ಕೆ ಇಂದು ಯಾವುದೇ ಸ್ಪಷ್ಟ ಕಾನೂನಿನ ಚೌಕಟ್ಟಿಲ್ಲ.

ಈ ರೀತಿಯ ಅನಿಯಂತ್ರಿತ ಜಿನೋಮ್ ಡೇಟಾ ಸಂಗ್ರಹವು ಕೆಲವು ಜನ ಸಮುದಾಯಗಳನ್ನು ಆರೋಗ್ಯ, ಸಾಲ, ವಿಮೆಯಂತಹ ಅಗತ್ಯ ಸವಲತ್ತುಗಳಿಂದ, ಖಾಸಗಿತನದಂತಹ ಸಾಂವಿಧಾನಿಕ ಹಕ್ಕುಗಳಿಂದ ಶಾಶ್ವತವಾಗಿ ವಂಚಿತ ಆಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ ಡೇಟಾಗಳನ್ನು ನಮ್ಮಿಂದ ದೋಚಿಕೊಂಡು ಹೋದದ್ದೂ ಗೊತ್ತಾಗದಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಈವತ್ತಿನ ಉದಾರೀಕೃತ ಡಿಜಿಟಲ್ ಮಾರುಕಟ್ಟೆಯಲ್ಲಿ ಡೇಟಾ ಎಷ್ಟು ಅಮೂಲ್ಯ ಎಂಬ ವಾಸ್ತವ ಅರ್ಥ ಮಾಡಿಕೊಳ್ಳದಿದ್ದರೆ, ತಂತ್ರಜ್ಞಾನದ ಕೈಗೆ ನಮ್ಮ ಜುಟ್ಟು ಕೊಟ್ಟಂತೆ. ಜಿನೋಮ್ ಇಂಡಿಯಾ ಯೋಜನೆ ಆರಂಭಿಸುವ ಮುನ್ನ ಸರಕಾರವು, ಜೀನು ಡೇಟಾಗಳ ನಿಯಂತ್ರಣ-ಬಳಕೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಸ್ಪಷ್ಟ ಕಾನೂನು ಚೌಕಟ್ಟುಗಳನ್ನು ರೂಪಿಸುವುದು ಅಗತ್ಯ ಇದೆ.

(ಅಂಕಣಕಾರರು ಹಿರಿಯ ಪತ್ರಕರ್ತರು ಮತ್ತು ಚಿಂತಕರು)

Tags

Genome IndiaIndiaFoundation
share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X