ಸರಕಾರಿ ‘ಬ್ರೆಡ್ಡು’; ಇಂಟರ್ನೆಟ್ ‘ಜಾಮು’

ದೇಶದಲ್ಲಿ ಪ್ರಭುತ್ವ ಪ್ರಾಯೋಜಿತ ಇಂಟರ್ನೆಟ್ ಬಂದ್ ಈಗೀಗ ಯಾವ ಪ್ರಮಾಣದಲ್ಲಿದೆ ಎಂದರೆ, 2016ರಿಂದ ಈಚೆಗೆ ಜಗತ್ತಿನಲ್ಲಿ ಒಟ್ಟು 2012 ದಾಖಲಿತ ಇಂಟರ್ನೆಟ್ ಬಂದ್ ಘಟನೆಗಳಲ್ಲಿ ಭಾರತದ ಸಿಂಹಪಾಲು ಬರೋಬ್ಬರಿ 920! ಜಮ್ಮು-ಕಾಶ್ಮೀರ, ಮಣಿಪುರ, ರಾಜಸ್ಥಾನ, ಹರ್ಯಾಣ ಅತಿಹೆಚ್ಚು ಇಂಟರ್ನೆಟ್ ಬಂದ್ ಪೀಡಿತ ರಾಜ್ಯಗಳು.
ಈವರ್ಷ ಜೂನ್ 6ರಿಂದ ಜುಲೈ 25ರ ತನಕ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಆಂದೋಲನದ ವೇಳೆ, ಜುಲೈ 20ರಿಂದ (ಚಲೋ ಸಂಸದ್ ಆರಂಭಿಸಿದ ದಿನದಿಂದ) ಜುಲೈ 26ರ ನಡುವೆ ಭಾರತ ಸರಕಾರದ ಗೃಹ ಇಲಾಖೆಯು ಏಳು ಬಾರಿ ಆ ಆಂದೋಲನ ನಡೆದಿದ್ದ ಮಧ್ಯ ದಿಲ್ಲಿಯ ಒಂದೂವರೆ ಕಿಲೋಮೀಟರ್ ವ್ಯಾಪ್ತಿಯಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಸ್ಥಗಿತಗೊಳಿಸುವಂತೆ ಮೊಬೈಲ್ ಇಂಟರ್ನೆಟ್ ಸೇವಾದಾತರಿಗೆಲ್ಲ ಆದೇಶ ನೀಡಿತ್ತು. ಈ ರೀತಿಯ ಆದೇಶಗಳನ್ನು ಅಥವಾ ಸ್ಥಾಗಿತ್ಯ ವಿಸ್ತರಣೆಯ ಸೂಚನೆಗಳನ್ನು ಒಟ್ಟು ಏಳು ಬಾರಿ ನೀಡಲಾಗಿತ್ತು. ಇಂತಹ ಕೊನೆಯ ಆದೇಶ ಹೊರಬಿದ್ದದ್ದು ಶನಿವಾರ (25 ಜುಲೈ) ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಮೊಬೈಲ್ ಫೋನು - ಇಂಟರ್ನೆಟ್ ಸಂಪರ್ಕಗಳೇ ಸಂವಹನದ ಸರ್ವಸ್ವ ಆಗಿರುವಾಗ, ಈ ರೀತಿಯ ಆದೇಶಗಳು ಆಂದೋಲನದ ಬೆನ್ನೆಲುಬು ಮುರಿಯಲಿದೆ ಎಂಬುದು ಸರಕಾರದ ನಿರೀಕ್ಷೆ ಆಗಿತ್ತು. ಆದರೆ, ಜಿರಳೆಗಳು ಸರಕಾರಕ್ಕಿಂತ ಹೆಚ್ಚಿನ ಬುದ್ಧಿವಂತಿಕೆ ತೋರಿ, ಮೊಬೈಲ್ ಇಂಟರ್ನೆಟ್ ಸರ್ವರ್ ಸಂಪರ್ಕದ ಅಗತ್ಯ ಇಲ್ಲದೆ, ವಿಕೇಂದ್ರೀಕೃತ ಮೆಷ್ ನೆಟ್‌ವರ್ಕಿಂಗ್ ಮೂಲಕ, GitHub ಮೂಲಕ, ಬ್ಲೂಟೂಥ್ ಮೂಲಕ ಸಂಪರ್ಕ ಸಾಧ್ಯವಾಗಿಸಿಕೊಂಡರು. ಅನಾಮಿಕವಾಗಿ ಆನಿಯನ್ ರೂಟಿಂಗ್ ಮೂಲಕ ಇಂಟರ್ನೆಟ್ ಸಂಪರ್ಕ ಸಾಧಿಸಬಲ್ಲ ಬ್ರಿಯಾರ್ (Briar), ಗುಪ್ತಲಿಪೀಕರಣ ಸಾಧ್ಯವಿರುವ ಬಿಟ್‌ಚಾಟ್ (Bitchat) ಮೆಸ್ಸಿ (Messy) ಮತ್ತಿತರ ಸಂವಹನ ತಂತ್ರಜ್ಞಾನಗಳನ್ನು ಬಳಸಿಕೊಂಡು ಆಂದೋಲನವನ್ನು ಅದರ ಈವತ್ತಿನ ಹಂತಕ್ಕೆ ತಲುಪಿಸಿದರು.
ಗೃಹ ಸಚಿವಾಲಯವು ತನ್ನ ಇಂಟರ್ನೆಟ್ ಸ್ಥಗಿತಗೊಳಿಸುವ ಆದೇಶಗಳಲ್ಲಿ, ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕ ತುರ್ತುಸ್ಥಿತಿಯನ್ನು ನಿವಾರಿಸಿಕೊಳ್ಳಲು, ಯಾವುದೇ ಅಪರಾಧಗಳು ಸಂಭವಿಸದಂತೆ ಮುನ್ನೆಚ್ಚರಿಕೆ ರೂಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ (ಅಂತಹ ಒಂದು ಆದೇಶ: ಓo: 22016/12/2019-CIS-IV/2 dated 23 July 202623 GOo¦ 2026). ಟೆಲಿಕಾಂ ಕಾಯ್ದೆ 2023ರ ಅಡಿಯಲ್ಲಿ, ಟೆಲಿಕಾಂ (ಸೇವೆಗಳ ತಾತ್ಕಾಲಿಕ ನಿಲುಗಡೆ) ನಿಯಮಗಳು 2024ರ ಅನ್ವಯ ಈ ಕ್ರಮಗಳನ್ನು ಕೈಗೊಂಡಿರುವುದಾಗಿ ಸದ್ರಿ ಆದೇಶ ಹೇಳುತ್ತದೆ.
ದಿಲ್ಲಿಯಲ್ಲಿ ಈ ರೀತಿ ಮೊಬೈಲ್ ಸೇವೆಗಳನ್ನು ಅಮಾನತಿನಲ್ಲಿಟ್ಟ ಘಟನೆ ಮೊದಲ ಬಾರಿಗೆ ನಡೆದದ್ದು, 2019ರ ಡಿಸೆಂಬರ್ 19ರಂದು, ಸಿಎಎ ಆಂದೋಲನದ ಸಂದರ್ಭದಲ್ಲಿ. ಆ ಬಳಿಕ 2021ರ ಜನವರಿ 26ರಂದು ದಿಲ್ಲಿಯಲ್ಲಿ ರೈತ ಆಂದೋಲನದ ಅವಧಿಯಲ್ಲಿ. ದೇಶದಲ್ಲಿ ಈ ಪ್ರಭುತ್ವ ಪ್ರಾಯೋಜಿತ ಇಂಟರ್ನೆಟ್ ಬಂದ್ ಈಗೀಗ ಯಾವ ಪ್ರಮಾಣದಲ್ಲಿದೆ ಎಂದರೆ, 2016ರಿಂದ ಈಚೆಗೆ ಜಗತ್ತಿನಲ್ಲಿ ಒಟ್ಟು 2012 ದಾಖಲಿತ ಇಂಟರ್ನೆಟ್ ಬಂದ್ ಘಟನೆಗಳಲ್ಲಿ ಭಾರತದ ಸಿಂಹಪಾಲು ಬರೋಬ್ಬರಿ 920! ಜಮ್ಮು-ಕಾಶ್ಮೀರ, ಮಣಿಪುರ, ರಾಜಸ್ಥಾನ, ಹರ್ಯಾಣ ಅತಿಹೆಚ್ಚು ಇಂಟರ್ನೆಟ್ ಬಂದ್ ಪೀಡಿತ ರಾಜ್ಯಗಳು.
ಈ ವಿಷಯದ ಕುರಿತು ಆರಂಭದಿಂದಲೂ ಹೋರಾಟ ನಡೆಸುತಿರುವ ಇಂಟರ್ನೆಟ್ ಫ್ರೀಡಂ ಫೌಂಡೇಷನ್,Anuradha Bhasin v. Union of India (2020) ಪ್ರಕರಣದಲ್ಲಿ ಸುಪ್ರೀಂಕೋರ್ಟು ಕಡ್ಡಾಯಪಡಿಸಿರುವಂತೆ, ಸರಕಾರ ಇಂತಹ ತೀರ್ಮಾನಗಳನ್ನು ತೆಗೆದುಕೊಂಡಾಗ ಅಸ್ಪಷ್ಟ ಕಾರಣಗಳನ್ನು ಕೊಡುವಂತಿಲ್ಲ, ಲಿಖಿತವಾಗಿ ಸರಕಾರ ನೀಡಿದ ಇಂತಹ ಆದೇಶಗಳನ್ನು ಪರಿಶೀಲನಾ ಸಮಿತಿ ಪರಿಶೀಲಿಸಿ, ಅವೆಲ್ಲ ಸಮರ್ಪಕವಾಗಿ ದಾಖಲಾಗಬೇಕು ಎಂದು ಅಭಿಪ್ರಾಯಪಟ್ಟಿದೆ. ಜುಲೈ 17, 20, 22 ಮತ್ತು 23ರಂದು ಗೃಹ ಇಲಾಖೆ ಕೈಗೊಂಡ ಈ ಇಂಟರ್ನೆಟ್ ಬ್ಯಾನ್ ತೀರ್ಮಾನದ ವಿರುದ್ಧ ಸಾಫ್ಟ್‌ವೇರ್ ಫ್ರೀಡಂ ಲಾ ಸೆಂಟರ್, ದಿಲ್ಲಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ದಾಖಲಿಸಿತ್ತು. ಆದರೆ, ಧರಣಿ ಮುಗಿದು, ಇಂಟರ್ನೆಟ್ ಬ್ಯಾನ್ ಹಿಂದೆಗೆದುಕೊಂಡದ್ದರಿಂದ, ಆ ಅರ್ಜಿಯನ್ನು ಅರ್ಜಿದಾರರು ಹಿಂದೆಗೆದುಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಡಿಯರ್ ಮೀಡಿಯಾದ ಪ್ರೊಪಗಾಂಡಾ ಸತ್ರ
ಕಾಕ್ರೋಚ್ ಆಂದೋಲನದ ಗದ್ದಲದಲ್ಲಿ ಗಮನಿಸಬೇಕಾದ ಅಂಶವೊಂದಿದೆ. ದಿಲ್ಲಿಯ ಸುದ್ದಿ ಹೊರಬರದಂತೆ ತಡೆ ಹಿಡಿದಿದ್ದ ಇಂಟರ್‌ನೆಟ್ ಬ್ಯಾನ್ ಸನ್ನಿವೇಶವನ್ನು ಪ್ರಭುತ್ವದ ಪರ ಇರುವ ಡಿಯರ್ ಮೀಡಿಯಾ ಗಢಣ ಸಂಪೂರ್ಣವಾಗಿ ಕಾಕ್ರೋಚ್ ಆಂದೋಲನ ವಿರೋಧಿ ‘ನೆರೇಟಿವ್’ ಬಿತ್ತುವುದಕ್ಕೆ ಬಳಸಿಕೊಂಡಿತು. ಆಂದೋಲನದಲ್ಲಿ ಪಾಲ್ಗೊಂಡವರ ಕುರಿತು, ಅಲ್ಲಿ ನಡೆದ ‘ಅತಿ’ಗಳ ಕುರಿತು, ಸಾರ್ವಜನಿಕರ ವಿವೇಚನಾ ಶಕ್ತಿಗೇ ಸವಾಲಾಗಬಲ್ಲ ಮಟ್ಟಿಗೆ ಸುಳ್ಳು, ಫೇಕ್ ಸುದ್ದಿ, ಕಲ್ಪಿತ ಸುದ್ದಿಗಳನ್ನು ಮತ್ತೆ ಮತ್ತೆ ಉಗುಳಿ, ಆಂದೋಲನವನ್ನು ಒಂದು ‘ರೋಗವಾಗಿಸಲು’ ಪ್ರಯತ್ನಿಸಲಾಯಿತು. ಸರಕಾರಕ್ಕೆ ಇವೆಲ್ಲ ಅಪಾಯಕಾರಿ ಬೆಳವಣಿಗೆ ಅನ್ನಿಸಲೇ ಇಲ್ಲ. ಅಲ್ಲಿನ ಸನ್ನಿವೇಶ ಹದತಪ್ಪುವಲ್ಲಿ ಈ ಡಿಯರ್ ಮೀಡಿಯಾಗಳ ಕೊಡುಗೆಯೂ ಬಹಳಷ್ಟಿದೆ ಎಂಬುದು, ಈಗ ಹಿಂದಿರುಗಿ ನೋಡಿದಾಗ ಸ್ಪಷ್ಟವಾಗಿ ಕಾಣಿಸುತ್ತದೆ.
ಈಗ ಜಂತರ್-ಮಂತರ್ ಗದ್ದಲ ಒಂದು ಹಂತಕ್ಕೆ ಮುಗಿದ ಬಳಿಕವೂ, ಅಲ್ಲಿದ್ದ ಆಂದೋಲನಕಾರಿಗಳಲ್ಲಿ ಸಾವಿರಾರು ಮಂದಿ ಕ್ರಿಮಿನಲ್ ಹಿನ್ನೆಲೆಯವರಿದ್ದರು, ಅವರನ್ನೆಲ್ಲ ಸರಕಾರದ ಭದ್ರತಾ ವ್ಯವಸ್ಥೆ ಗುರುತಿಸಿದ್ದು, ಆಂದೋಲನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದರಿಂದ ಧಕ್ಕೆ ಆಗಲಿದೆ ಎಂಬ ನೆರೇಟಿವ್ ಅನ್ನೂ ಮಾಧ್ಯಮಗಳು ಹರಿಬಿಟ್ಟು ಬೆದರಿಸಲಾರಂಭಿಸಿವೆ. ಈ ಹಿನ್ನೆಲೆಯಲ್ಲಿ ಮುಖ ಗುರುತಿಸುವ ತಂತ್ರಜ್ಞಾನ (FRT) ಬಗ್ಗೆ ಕೆಲವು ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳುವುದು ಪ್ರಸ್ತುತ ಅನ್ನಿಸುತ್ತದೆ. ಆಂದೋಲನದ ಜಾಗದಲ್ಲಿ ಮುಖಗುರುತು ತಂತ್ರಜ್ಞಾನ ಬಳಕೆ ಆಗಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಗಳೇ ಖಚಿತಪಡಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಮುಖ ಗುರುತಿಸುವ ತಂತ್ರಜ್ಞಾನ ಬಳಕೆ
ಜುಲೈ 23ರಂದು ‘ಈಕ್ಷಣ (ವೀಕ್ಷಣ)’ ವ್ಯಾನುಗಳು ಆಂದೋಲನದ ಕೇಂದ್ರಭಾಗದಲ್ಲಿ ನಿಂತಿದ್ದವು ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ವ್ಯಾನಿನಲ್ಲಿ ಎಐ ಆಧರಿತ ಕ್ಯಾಮರಾಗಳು, ಸುಸಜ್ಜಿತ ತಂತ್ರಜ್ಞಾನಗಳು ಲಭ್ಯವಿದ್ದವಂತೆ. ಆ ತಂತ್ರಜ್ಞಾನಗಳ ಮೂಲಕ ಲೈವ್ ಆಗಿ ಮುಖ ಗುರುತಿಸುವುದು ಸಾಧ್ಯ ಇದೆ ಎಂದು ಅದನ್ನು ನಿರ್ಮಿಸಿರುವ ಸಂಸ್ಥೆ ಹೇಳಿಕೊಂಡಿದೆ. ದಿಲ್ಲಿ ಪೊಲೀಸರು ಅಲ್ಲಿ ಏನೇನು ಡೇಟಾ ಸಂಗ್ರಹಿಸಿದ್ದಾರೆ ಎಂಬುದು ಸ್ಪಷ್ಟವಿಲ್ಲ. ಆದರೆ, ಈ ವಿಚಾರದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಐಷೆ ಘೋಷ್ ಅವರು ದಿಲ್ಲಿ ಹೈಕೋರ್ಟಿನಲ್ಲಿ ಭಾರತ ಸರಕಾರದ ವಿರುದ್ಧ ಅರ್ಜಿ ಸಲ್ಲಿಸಿದ್ದು, ಆಂದೋಲನ ನಿರತರಾಗಿರುವವರ ಮೇಲೆ ಈ ರೀತಿಯ ಕಣ್ಗಾವಲು ಕಾನೂನು ಬಾಹಿರ ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ಅರ್ಜಿಯ ವಿಚಾರಣೆಯ ವೇಳೆ ಸಾಲಿಸಿಟರ್ ಜನರಲ್ ಅವರು, ಇದೊಂದು ಕಾನೂನು-ವ್ಯವಸ್ಥೆ ಕಾಪಾಡುವ ಯಾವತ್ತೂ ರೂಢಿಯ ಕ್ರಮವೇ ಹೊರತು ಅದರಲ್ಲಿ ‘‘ಕಣ್ಗಾವಲು ಮತ್ತು ಖಾಸಗಿತನದಲ್ಲಿ ಹಣಕಿಕ್ಕುವಿಕೆ ನಡೆದಿಲ್ಲ’’ ಎಂದು ದಿಲ್ಲಿ ಹೈಕೋರ್ಟಿಗೆ ಸ್ಪಷ್ಟಪಡಿಸಿದ್ದಾರೆ. ದಿಲ್ಲಿ ನ್ಯಾಯಾಲಯವು, ಈ ವಿಚಾರದಲ್ಲಿ ಪ್ರತಿಭಟನಾಕಾರರ ಖಾಸಗಿ ಡೇಟಾಗಳು ಸಾರ್ವಜನಿಕ ವಲಯಕ್ಕೆ ಬಿಡುಗಡೆ ಆಗುವಂತಿಲ್ಲ, ಸಿಸಿಟಿವಿ, ಡ್ರೋನ್, ಬಾಡಿ ಕ್ಯಾಮ್ ಇತ್ಯಾದಿಗಳ ಮೂಲಕ ಸಂಗ್ರಹಿತ ಡೇಟಾಗಳನ್ನು ಸಂರಕ್ಷಿಸಿಟ್ಟುಕೊಳ್ಳಬೇಕು ಎಂದು ಸರಕಾರಕ್ಕೆ ತಾಕೀತು ಮಾಡಿದೆ.
ದಿಲ್ಲಿ ಸರಕಾರವು ‘ಈಕ್ಷಣ’ ವ್ಯಾನಿನ ಮೂಲಕ ರಸ್ತೆಯಲ್ಲಿ ಹೋಗಿ ಬರುವವರೆಲ್ಲರ ಮುಖಚಹರೆ ಗುರುತಿಸಿದ್ದರೆ, ಅದು ಸ್ಪಷ್ಟವಾಗಿ ಸಂವಿಧಾನಬಾಹಿರ ಕೃತ್ಯ. Malak Singh vs State Of Punjab & Haryana ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ‘‘ಯಾವುದೇ ಕಣ್ಗಾವಲು ದೇಶದ ಪ್ರತಿಯೊಬ್ಬ ಪ್ರಜೆಗೆ ಖಚಿತಪಡಿಸಲಾಗಿರುವ ಮೂಲಭೂತ ಸ್ವಾತಂತ್ರ್ಯಗಳನ್ನು ನಿರಾಕರಿಸುವುದಕ್ಕೆ, ವ್ಯಕ್ತಿಯ ಸ್ವಾತಂತ್ರ್ಯವನ್ನು ಕಾರ್ಯರೂಪಕ್ಕೆ ತರಲು ಅಡ್ಡಿ ಮಾಡುವುದಕ್ಕೆ ಅಥವಾ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರಬಲ್ಲಂತೆ ಕಣ್ಗಾವಲಿನ ಮೂಲಕ ಹಸ್ತಕ್ಷೇಪ ನಡೆಸುವುದಕ್ಕೆ ಅವಕಾಶ ಇಲ್ಲ ಎಂದು ಖಚಿತ ಮಾತುಗಳಲ್ಲಿ ಹೇಳಿದೆ. ಹಿಂದಿನ ಹಲವು ಪ್ರಕರಣಗಳಲ್ಲೂ ಪ್ರಜೆಗಳ ಖಾಸಗಿತನದ ಹಕ್ಕು, ಶಾಂತಿಯುತವಾಗಿ ಆಂದೋಲನ ನಡೆಸುವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳೆಲ್ಲ ಸಂವಿಧಾನ ಸಿದ್ಧವಾದವು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಹಾಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೂ ಅದನ್ನು ಖಚಿತಪಡಿಸಿದ್ದಾರೆ. ಡಿಪಿಡಿಪಿ ಕಾಯ್ದೆಗೆ ಮೂಲವಾಗಿರುವ Justice K.S. Puttaswamy v.s Union of India (2017) ಪ್ರಕರಣದಲ್ಲಿ, ಖಾಸಗಿತನಕ್ಕೆ ಪ್ರಭುತ್ವ ಹಸ್ತಕ್ಷೇಪ ನಡೆಸುವುದು ಅನಿವಾರ್ಯ ಆದ ಸಂದರ್ಭದಲ್ಲಿ, ಅದರ ಕಾನೂನುಬದ್ಧತೆ, ನ್ಯಾಯಯುತ ಉದ್ದೇಶ ಮತ್ತು ಯಾವುದಕ್ಕೆ ಎಷ್ಟು ಎಂಬ ಅನುಪಾತೀಯತೆ ಅಗತ್ಯ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವೇ ಸ್ಪಷ್ಟವಾಗಿ ಹೇಳಿದೆ.
ಇದಕ್ಕೆ ಇನ್ನೂ ಒಂದೆರಡು ಕೋನಗಳಿವೆ. ಈಗ ಲಭ್ಯವಿರುವ ಈಖಖಿಯಲ್ಲಿ ಮುಖ ಗುರುತುಗಳು ಶೇ. 80 ಮ್ಯಾಚಿಂಗ್ ಇದ್ದರೆ ಹೋಲಿಕೆಯನ್ನು ತಂತ್ರಜ್ಞಾನ ಖಚಿತಪಡಿಸುತ್ತದಂತೆ. ಮಾಸ್ಕ್, ತಂಪುಕನ್ನಡಕ, ತಲೆಗೆ ಟೊಪ್ಪಿ ಇತ್ಯಾದಿ ಧರಿಸಿರುವ ವ್ಯಕ್ತಿಗಳ ಸಮೂಹದ ನಡುವೆ ಪೊಲೀಸ್ ವ್ಯವಸ್ಥೆಯು ತನ್ನ ಡೇಟಾಬೇಸ್‌ನಲ್ಲಿ ದಾಖಲಿಸಲಾಗಿರುವ ಸಾವಿರಾರು ಮಂದಿ ಕ್ರಿಮಿನಲ್‌ಗಳಿಗೆ ಸರಿಹೊಂದುವಂತಹ ವ್ಯಕ್ತಿಗಳನ್ನು ಆಂದೋಲನದಲ್ಲಿ ಗುರುತಿಸಿದೆ ಎಂಬುದು ಈ ಹಿನ್ನೆಲೆಯಲ್ಲಿ ಬಹಳ ಕೌತುಕದ ಸಂಗತಿ. ಇದನ್ನು ಸರಕಾರ ಲಾಜಿಕಲ್ ಅಂತ್ಯಕ್ಕೆ ತಲುಪಿಸದಿದ್ದರೆ, ಇದು ಕೊನೆಯ ತನಕವೂ ಒಂದು ನೆರೇಟಿವ್ ಹತ್ಯಾರಾಗಿ ಉಳಿಯಲಿದೆ. ಇದಲ್ಲದೆ, ರಸ್ತೆಯಲ್ಲಿ ಹೋಗುವ ಪ್ರತಿಯೊಬ್ಬ ವ್ಯಕ್ತಿಯ ವಿವರಗಳು ಆಧಾರ್ ಡೇಟಾಬೇಸ್‌ನಿಂದ ಸರಕಾರಕ್ಕೆ ಸಿಕ್ಕಿವೆ. ಅದನ್ನು ಆ ವಿದ್ಯಾರ್ಥಿಗಳ ಕಾಲೇಜಿಗೆ, ಪಾಲಕರಿಗೆ, ಉದ್ಯೋಗದಾತರಿಗೆ ಕಳುಹಿಸಲಾಗುತ್ತದೆ, ಮುಂದೆ ಪಾಸ್‌ಪೋರ್ಟಿಗೆ ತೊಂದರೆ ಆಗಲಿದೆ ಎಂಬ ವಾಟ್ಸ್ ಆ್ಯಪ್ ಯೂನಿವರ್ಸಿಟಿ ವಿರಚಿತ ಕಥನವನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಯಾವುದೇ ವ್ಯಕ್ತಿಯ ಅನುಮತಿ ಇಲ್ಲದೆ (ಒಟಿಪಿ ಮೂಲಕ) ಸರಕಾರಿ ವ್ಯವಸ್ಥೆಗೂ ಆಧಾರ್ ಡೇಟಾಬೇಸ್ ಪ್ರವೇಶಿಸುವುದು ಸಾಧ್ಯ ಇಲ್ಲ ಎಂಬುದು ಆಧಾರ್ ಕಾಯ್ದೆ, ಆಧಾರ್ ವ್ಯವಸ್ಥೆಯ ರಚಯಿತರು ಹಾಗೂ ಸರಕಾರ ನೀಡಿರುವ ಭರವಸೆ. ಅದನ್ನು ದಾಟಿ, ಪ್ರತಿಯೊಬ್ಬ ಪ್ರಜೆಯ ಡೆಮೊಗ್ರಾಫಿಕ್, ಬಯೊಮೆಟ್ರಿಕ್ ಡೇಟಾ ಸರಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯ ಇದೆ ಎಂದಾದರೆ, ಸರಕಾರ ಸ್ವತಃ ತನ್ನ ಕಾನೂನು ತಾನೇ ಉಲ್ಲಂಘಿಸಿದ ಗಂಭೀರ ಆಪಾದನೆಗೆ ತುತ್ತಾಗಬೇಕಾಗುತ್ತದೆ. ಅಂಥ ಮೂರ್ಖತನವನ್ನವರು ಬಹಿರಂಗವಾಗಿಯಂತೂ ಮಾಡಲಾರರು.






