ಪರೀಕ್ಷೆ ‘ನೀಟ್’ ಆದರೆ ಸಾಕೇ?

ಸಮರ್ಥ ವೈದ್ಯರನ್ನು ತಯಾರು ಮಾಡುವ ಬಗ್ಗೆ ಯೋಚಿಸುವ ಬದಲು, ಇರುವ ನೀಟ್ ಪರೀಕ್ಷೆಗೇ ತೇಪೆ ಹೊಡೆದು, ಸೇನೆ ಕರೆಸಿ ಪರೀಕ್ಷೆ ನಡೆಸುವ ಆತುರಗಾರಿಕೆ ದೇಶದ ವೈದ್ಯಕೀಯ ಶಿಕ್ಷಣ ಗುಣಮಟ್ಟಕ್ಕೆ ಯಾವುದೇ ರೀತಿಯ ಅನುಕೂಲ ಮಾಡಿಕೊಡದು. ಇಂತಹ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವವರಾದರೂ ಕನಿಷ್ಠಪಕ್ಷ ಒಟ್ಟು ವ್ಯವಸ್ಥೆಯನ್ನು ಪರಿಗಣನೆಗೆ ತೆಗೆದುಕೊಂಡು ತಮ್ಮ ತೀರ್ಮಾನಗಳನ್ನು ಕೈಗೊಳ್ಳಬೇಕೇ ಹೊರತು, ರಾಜಕೀಯಸ್ಥರ ಜೊತೆ ತಾವೂ ತೇಪೆ ಕೆಲಸಕ್ಕೆ ಇಳಿಯುವುದಲ್ಲ.
ಒಂದು ಸಮಾಜವಾಗಿ ನಮ್ಮ ಆದ್ಯತೆಗಳೇ ಕೆಲವೊಮ್ಮೆ ಆತಂಕ ಹುಟ್ಟಿಸಿಬಿಡುತ್ತವೆ. ನೀಟ್ ಪರೀಕ್ಷೆಗಳನ್ನು ನಡೆಸುವಲ್ಲಿ ಅಚಾತುರ್ಯಗಳಿಗಾಗಿ ಶಿಕ್ಷಣ ಸಚಿವರ ತಲೆದಂಡ ಕೇಳಿ, ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಡ್ರಾಮಗಳೆಲ್ಲ ನಡೆಯುತ್ತಿರುವಾಗ, ಯಾರು ತಮ್ಮ ಮೇಲಿನ ಈ ಅತ್ಯಾಚಾರಕ್ಕಾಗಿ ಸಿಟ್ಟಿಗೇಳಬೇಕಿತ್ತೋ, ಅವರು ನಾಳೆ (ಜೂನ್ 21) ಮರುಪರೀಕ್ಷೆ ಬರೆಯುವ ಗಡಿಬಿಡಿಯಲ್ಲಿದ್ದಾರೆ. ಅವರ ಹೆತ್ತವರು, ಮಕ್ಕಳ ಭವಿಷ್ಯದ ಹೊರೆಹೊತ್ತು ಒತ್ತಡದಲ್ಲಿದ್ದಾರೆ. ಯಾರು ಪ್ರತಿಭಟನೆಯ ಕೇಂದ್ರ ಆಗಬೇಕಿತ್ತೋ ಅವರನ್ನು ಬಿಟ್ಟು, ಯಾರ್ಯಾರೋ ಸಂಬಂಧಪಡದವರು ನೀಟ್ ವಿರುದ್ಧ ಪ್ರತಿಭಟನೆ ನಡೆಸಿದಾಗ, ಅದೆಲ್ಲ ‘ರಾಜಕೀಯ’ ಎಂದು ತಳ್ಳಿಹಾಕಲು ಸುಲಭ ದಾರಿ ತೆರೆದುಕೊಟ್ಟಂತೆ. ಈಗ ಅದೇ ಆಗಿದೆ.
ನೀಟ್ ಪರೀಕ್ಷೆಯನ್ನೇ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಭಾರತ ಸರಕಾರ, ಈಗ ಮರುಪರೀಕ್ಷೆ ನಿರ್ವಹಣೆಯ ಹೆಸರಿನಲ್ಲಿ ಅತಿ ಎನ್ನಿಸುವ ಹಲವು ಕ್ರಮಗಳನ್ನು ಕೈಗೊಂಡಿದೆ. ಸ್ವತಃ ಪ್ರಧಾನಮಂತ್ರಿ ಕಾರ್ಯಾಲಯ ಮರುಪರೀಕ್ಷೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ. ಪ್ರಶ್ನೆಪತ್ರಿಕೆಗಳನ್ನು ಗುಪ್ತವಾಗಿರಿಸಿ ಗಮ್ಯಸ್ಥಾನ ತಲುಪಿಸಲು ಸೇನಾ ವಿಮಾನಗಳನ್ನು ಬಳಸಲಾಗುತ್ತಿದೆಯಂತೆ; ಇಷ್ಟು ಮಾತ್ರವಲ್ಲದೆ ಈಗ ಹೊಸದಾಗಿ, ಟೆಲಿಗ್ರಾಂ ಖಾಸಗಿ ಸಂದೇಶ ಪ್ಲಾಟ್‌ಫಾರ್ಮ್ ಅನ್ನೇ ಪರೀಕ್ಷೆ ಮುಗಿಯುವ ತನಕ ನಿಷೇಧ ಮಾಡಲಾಗಿದೆ ಮತ್ತು ಜೂನ್ 30ರ ತನಕ ಅದರಲ್ಲಿ ಸಂದೇಶ, ಎಡಿಟಿಂಗ್ ಸೌಲಭ್ಯವನ್ನು ರದ್ದುಪಡಿಸಲು ಆ ಕಂಪೆನಿಗೆ ನಿರ್ದೇಶನ ನೀಡಲಾಗಿದೆ. ಪರೀಕ್ಷೆ ನಿರ್ವಹಣೆಯಲ್ಲಿ ಸಮನ್ವಯಕ್ಕಾಗಿ, ಗೃಹಸಚಿವಾಲಯದ ಅಧೀನದಲ್ಲಿರುವ ಸೈಬರ್ ಅಪರಾಧ ಸಮನ್ವಯ ಕೇಂದ್ರ (14 ಸಿ)ವನ್ನೇ ತೈನಾತು ಮಾಡಲಾಗಿದೆ. ಜೊತೆಗೆ ರಾಜ್ಯಗಳ ಪೊಲೀಸ್ ಪಡೆಗಳೂ ಈ ವಿಚಾರದಲ್ಲಿ ಕಟ್ಟೆಚ್ಚರದಿಂದಿರಲು ಸೂಚಿಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ)ಯ ಪತ್ರಿಕಾ ಪ್ರಕಟಣೆ (ಜೂನ್ 16) ಹೇಳುತ್ತಿದೆ.
ಇದೆಲ್ಲ ಒಂದು ವೃತ್ತಿ ಶಿಕ್ಷಣಕ್ಕೆ ಅರ್ಹತೆ ತಪಾಸಣಾ ಪರೀಕ್ಷೆಯ ಬದಲು ಯಾವುದೋ ಮಹತ್ವದ, ತುರ್ತುಸ್ಥಿತಿಯ ಸಮರ ಸನ್ನದ್ಧತೆಯಂತೆ ಕಾಣಿಸತೊಡಗಿದೆ. ಯಾಕೆ ಹೀಗಾಯಿತು? ಈ ಹಾದಿಯಲ್ಲಿ ಹೊರಟರೆ ಸಮಸ್ಯೆಯ ಮೂಲೋತ್ಪಾಟನೆ ಆಗುತ್ತದೆಯೇ?
National Eligibility cum Entrance Test (Undergraduate) ಅರ್ಥಾತ್ NEET-UG ಎಂಬುದು ಇಂದು ನಿಜಕ್ಕೂ ವೈದ್ಯಕೀಯ ಶಿಕ್ಷಣಕ್ಕೆ ಅರ್ಹತೆ ಗುರುತಿಸುವ ಪರೀಕ್ಷೆ ಆಗಿ ಉಳಿದಿದೆಯೆ? ಎಂಬ ಪ್ರಶ್ನೆ ಕೇಳಿಕೊಂಡರೆ, ‘‘ಇಲ್ಲ’’ ಎಂಬ ಖಚಿತ ಉತ್ತರ ಅದಾಗಿ ಸಿಗುತ್ತದೆ. ವೈದ್ಯಕೀಯ ವೃತ್ತಿಗೆ ಅಗತ್ಯ ಇರುವ ಬದ್ಧತೆ, ಸೇವಾಕಾಂಕ್ಷೆ, ನೈತಿಕತೆ, ಸೂಕ್ಷ್ಮ ಕೆಲಸಗಳಿಗೆ ಕೈ ಕೌಶಲ, ಸಹನೆ, ದೇಹದ ಧಾರಣ ಸಾಮರ್ಥ್ಯ, ಕಣ್ಣು- ಕೈಗಳ ನಡುವೆ ಸಮನ್ವಯ, ಅನ್ವೇಷಣಾ ಮನೋಭಾವ, ಸೃಜನಶೀಲತೆ, ಬೌದ್ಧಿಕ ಸಾಮರ್ಥ್ಯ - ಇಂತಹ ಅತ್ಯಗತ್ಯ ಅಂಶಗಳಲ್ಲಿ ಈ ನೀಟ್ ಪರೀಕ್ಷೆ ವೈದ್ಯ ವೃತ್ತಿಗೆ ಅಗತ್ಯವಿರುವ ಯಾವ ಅರ್ಹತೆಯನ್ನು ಗುರುತಿಸಬಲ್ಲುದು ಎಂಬುದನ್ನು ಹೇಳಿ ನೋಡೋಣ?! ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರದ (ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ) ಪ್ರಶ್ನೆಗಳಿರುತ್ತವೆ, 720 ಮಾರ್ಕುಗಳಿಗೆ 195 ನಿಮಿಷಗಳಲ್ಲಿ 180 ಪ್ರಶ್ನೆಗಳಿಗೆ ಉತ್ತರಿಸಬೇಕಿರುತ್ತದೆ. ಇದು ಹೆಚ್ಚೆಂದರೆ, ಯೋಚನೆಯ ವೇಗ ಮತ್ತು ನೆನಪಿನ ಶಕ್ತಿ, ಬಾಯಿಪಾಠದ ಸಾಮರ್ಥ್ಯಗಳ ಅನಾವರಣ; ಅದೂ ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷ ‘ಕೋಟಾ ಫ್ಯಾಕ್ಟರಿ’ಗಳಲ್ಲಿ ಲಕ್ಷಾಂತರ ರೂಪಾಯಿ, ಶ್ರಮ, ಸಮಯ ತೆತ್ತು, ಅಕ್ಷರಶಃ ಜೀವತೇದು ರೂಢಿಸಿಕೊಂಡಂತಹವು. ವೈದ್ಯವೃತ್ತಿಗೆ ಚಿಕ್ಕಾಸೂ ಪ್ರಯೋಜನಕ್ಕೆ ಬರದಂತಹವು.
ನೀಟ್ ಬಾಟಲ್‌ನೆಕ್ ಆಗಿರುವುದಕ್ಕೆ ಮೂಲ ಕಾರಣ, ದೇಶದಲ್ಲಿರುವ ಅಂದಾಜು 1.18 ಲಕ್ಷ ಮೆಡಿಕಲ್ ಸೀಟುಗಳಿಗೆ ಪ್ರತೀ ವರ್ಷ ಅಂದಾಜು 22.78 ಲಕ್ಷ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿರುವುದು. ಅಂದರೆ 1:22 ಅನುಪಾತ. ಈ ಸ್ಪರ್ಧೆಯಲ್ಲಿ ಅರ್ಹತೆಯ ಮಾರ್ಕ್ ಪಡೆದ ಬಳಿಕವೂ ಸೀಟು ಸಿಗುವುದಕ್ಕೆ ಹಾದಿ ಇನ್ನಷ್ಟು ಜಟಿಲ. ಇದು ಸರಿಯಾಗಿ ಅರ್ಥ ಆಗಬೇಕೆಂದರೆ, ಕರ್ನಾಟಕದ ಸನ್ನಿವೇಶ ಗಮನಿಸಿ. ದೇಶದ ಅತ್ಯುತ್ತಮ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಇರುವುದು ಕರ್ನಾಟಕದಲ್ಲಿಯಂತೆ. ಕರ್ನಾಟಕದಲ್ಲಿರುವ ಅಂದಾಜು 13,900 ವೈದ್ಯ ಸೀಟುಗಳಲ್ಲಿ, ಮೀಸಲಾತಿ ಸೂತ್ರಗಳನ್ವಯವೇ ಸೀಟು ಹಂಚಿಕೆ ಆಗುವುದು ಹೌದಾದರೂ, ಸೀಟುಗಳ ವರ್ಗೀಕರಣದಲ್ಲಿ ನಿಜವಾದ ಆಟವಿದೆ. ಈ ಸೀಟುಗಳ ಪೈಕಿ ಅಂದಾಜು 3,500 ಸರಕಾರಿ ಸೀಟುಗಳು; 700 ಅಖಿಲ ಭಾರತ ವ್ಯಾಪ್ತಿಯ ಸೀಟುಗಳು, 7,000ದಷ್ಟು ಖಾಸಗಿ ಸೀಟುಗಳು ಮತ್ತು 2,700ರಷ್ಟು ಡೀಮ್ಡ್ ವಿವಿ ಸೀಟುಗಳು. ಅಂದರೆ, 3,500 ಸರಕಾರಿ ಸೀಟುಗಳ ಎದುರು ಅಂದಾಜು 10,000 ಖಾಸಗಿ ಸೀಟುಗಳು. ಇಲ್ಲಿ ಮೀಸಲಾತಿ ಇದ್ದೂ ಇಲ್ಲದಂತೆ! ಕರ್ನಾಟಕದಿಂದ ನೀಟ್ ಪರೀಕ್ಷೆ ಬರೆಯುವ ಅಂದಾಜು 1.5 ಲಕ್ಷ ವಿದ್ಯಾರ್ಥಿಗಳಿಗೆ ಸರಕಾರಿ ಸೀಟುಗಳು ಲಭ್ಯ ಇರುವುದು ಕೇವಲ 3,500. ಉಳಿದ ಖಾಸಗಿ-ಪಾವತಿ- ಡೀಮ್ಡ್ ಸೀಟುಗಳ ಬೆಲೆ ವಾರ್ಷಿಕ 10 ಲಕ್ಷ ರೂ.ಗಳಿಂದ 40 ಲಕ್ಷ ರೂ.ಗಳ ತನಕ ಇದೆ! ಸರಕಾರಿ ಸೀಟು ಬಿಟ್ಟು ಉಳಿದವರು ಎಂಬಿಬಿಎಸ್ ಪೂರೈಸಲು 50 ಲಕ್ಷ ರೂ.ಗಳಿಂದ 1.8 ಕೋಟಿ ರೂ.ಗಳ ತನಕ ದುಡ್ಡು ಸುರಿಯಬೇಕು. ಈ ಆರ್ಥಿಕ, ಸಾಮಾಜಿಕ ಒತ್ತಡದ ಕಾರಣಕ್ಕೆ ವೈದ್ಯಕೀಯ ಶಿಕ್ಷಣ ಬಾಟಲ್‌ನೆಕ್ ಆಗುತ್ತಿದ್ದು, ‘ಹೇಗಾದರೂ’ ಗೆಲ್ಲುವ ಹಾದಿಗಳ ಅನ್ವೇಷಣೆ ನಡೆಯುತ್ತಿದೆ.
ಈ ಡಿಮಾಂಡ್-ಸಪ್ಲೈ ಅಸಮತೋಲನದ ಬಾಟಲ್‌ನೆಕ್ ನಿವಾರಿಸಲು ಸರಕಾರಗಳು ಇನ್ನಷ್ಟು ವೈದ್ಯಕೀಯ ಕಾಲೇಜುಗಳನ್ನು ಖಾಸಗಿ ರಂಗದಲ್ಲಿ (ಪಿಪಿಪಿ ಮಾದರಿ) ತೆರೆಯುತ್ತಿವೆ. ಅಂದರೆ ಪಾವತಿ ಸೀಟುಗಳ ಪ್ರಮಾಣದಲ್ಲಿ ಅನೂಹ್ಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಈ ಕಾರಣದಿಂದಾಗಿ, ನೀಟ್ ಪರೀಕ್ಷೆ ಎಂದರೆ, ಅದು ‘ದುಡ್ಡಿನ ಸಾಮರ್ಥ್ಯ’ ಇರುವವರನ್ನೇ ಸೋಸಿ ಆರಿಸಿಕೊಳ್ಳುವ ಜಾಲರಿ ಆಗಿಬಿಟ್ಟಿದೆ. ಇದನ್ನು ನಮ್ಮ ನೀತಿ ನಿರೂಪಕರು ಹೀಗೆಯೇ ಬೆಳೆಯಗೊಡುತ್ತಿದ್ದಾರೆ ಏಕೆಂದರೆ, ರಾಜ್ಯದ, ದೇಶದ, ಬಹುತೇಕ ಖಾಸಗಿ ವೈದ್ಯಕೀಯ ಕಾಲೇಜುಗಳ ಮಾಲಕತ್ವ ರಾಜಕಾರಣಿಗಳ ನೇರ/ಪರೋಕ್ಷ ಮಾಲಕತ್ವದಲ್ಲಿದೆ. ಇಂತಹದೊಂದು ನೀತ್ಯಾತ್ಮಕ ಲೋಪ, ಯಾರಿಗೂ ಇಲ್ಲಿಯ ತನಕ ಹಿತಾಸಕ್ತಿ ಸಂಘರ್ಷ ಅನ್ನಿಸಿಯೇ ಇಲ್ಲ. ಇದೇ ರಾಜಕೀಯ ಪ್ರಭಾವಿಗಳ ಕಾರಣದಿಂದಾಗಿ ಮೂಲ ಸೌಕರ್ಯ ಇಲ್ಲದೆ, ಬೋಧಕ ಸಿಬ್ಬಂದಿಯಿಲ್ಲದೆ, ಸಮರ್ಪಕ ಆಸ್ಪತ್ರೆ-ಸಾಕಷ್ಟು ರೋಗಿ ಹರಿವು ಇಲ್ಲದೆ ಹೊಸ ಹೊಸ ವೈದ್ಯಕೀಯ ಕಾಲೇಜುಗಳನ್ನು ನಾಡಿನಾದ್ಯಂತ ತೆರೆಯಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಎಂದರೆ ಕಾಸು ಗೋರುವ ದಂಧೆ ಆಗಿಬಿಟ್ಟಿದೆ. ಅಲ್ಲಿಂದ ಹೊರಬರುವ ವೈದ್ಯರ ಗುಣಮಟ್ಟದ ಬಗ್ಗೆ ಯಾರಿಗೂ ಕಾಳಜಿ ಉಳಿದಿಲ್ಲ.
ಇಂದು ಹೊರಬರುತ್ತಿರುವ ವೈದ್ಯಕೀಯ ಪದವೀಧರರ ಗುಣಮಟ್ಟದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಚರ್ಚೆ ಆಗುವ ಬದಲು, ನೀಟ್ ಸುಧಾರಣೆ; ಆಸ್ಪತ್ರೆಗಳಲ್ಲಿ ರೋಗಿ-ವೈದ್ಯ ಸಂಘರ್ಷ; ಆರೋಗ್ಯ ವ್ಯವಸ್ಥೆಯ ವಾಣಿಜ್ಯೀಕರಣ ಹಾಗೂ ಬಿಲ್ಲುಗಾರಿಕೆಯ ಮೇಲಿನ ಕೋಪಗಳಲ್ಲಿ ವ್ಯಕ್ತ ಆಗುತ್ತಿದೆ. ಈ ಚರ್ಚೆ ನಿಜಕ್ಕೂ ಆಗಬೇಕಿರುವುದು ನೀಟ್ ಪರೀಕ್ಷೆ ಪೂರ್ವ ಹಂತದಲ್ಲಿ. ಒಬ್ಬ ವಿದ್ಯಾರ್ಥಿ 10ನೇ ತರಗತಿ ಪೂರೈಸಿದ ಬಳಿಕ, ಆತನಲ್ಲಿ/ಆಕೆಯಲ್ಲಿ ವೈದ್ಯಕೀಯ ವೃತ್ತಿಗೆ ಅಗತ್ಯವಿರುವ ಕೌಶಲಗಳನ್ನು ಕಲಿಯುವ ಸಾಮರ್ಥ್ಯ ಇದೆಯೇ, ಅಗತ್ಯ ದೈಹಿಕ ಪ್ರವೃತ್ತಿ ಇದೆಯೇ ಎಂಬುದನ್ನು ಗುರುತಿಸುವ ‘ವೈದ್ಯಕೀಯ ಶಿಕ್ಷಣ ಪೂರ್ವ ಅರ್ಹತೆ ಆಧರಿತ ವರ್ಗೀಕರಣ ಕೋರ್ಸ್ (Pre-Medical)’ ಒಂದು ಅಗತ್ಯವಿದೆ. ಯಾರು ವೈದ್ಯಕೀಯ ವೃತ್ತಿಗೆ ದೈಹಿಕವಾಗಿ, ಬೌದ್ಧಿಕವಾಗಿ, ಮಾನಸಿಕವಾಗಿ ಅರ್ಹರು ಎಂಬುದನ್ನು ಅಲ್ಲೇ ನಿರ್ಧರಿಸಿದರೆ, ಅಲ್ಲಿಂದ ನೇರವಾಗಿ ಎಂಬಿಬಿಎಸ್‌ನ ಪ್ರಿ-ಕ್ಲಿನಿಕಲ್ ಶಿಕ್ಷಣಕ್ಕೆ ಆ ವಿದ್ಯಾರ್ಥಿ ತೆರೆದುಕೊಳ್ಳುವುದು ಸಾಧ್ಯ ಆಗುತ್ತದೆ. ಅಲ್ಲಿಗೆ ಅರ್ಹರಲ್ಲ ಎನ್ನಿಸಿದ ವಿದ್ಯಾರ್ಥಿಗಳು ಬೇರೆ ಅಲೈಡ್ ವೈದ್ಯಕೀಯ ಶಿಕ್ಷಣ ಕ್ಷೇತ್ರಗಳಿಗೆ ಹಂಚಿಹೋಗಬಹುದು. ಅದನ್ನು ಬಿಟ್ಟು 12ನೇ ತರಗತಿಯಲ್ಲಿ ವೃತ್ತಿ ಶಿಕ್ಷಣಕ್ಕೆ ಬದಲಾಗುವ ಹಂತದಲ್ಲೇ ಈ ‘ಎಂಬಿಬಿಎಸ್ ಒತ್ತಡ’ ಸೃಷ್ಟಿಸುವುದು ವೈದ್ಯಕೀಯ ವೃತ್ತಿಯ ದೃಷ್ಟಿಯಿಂದ ಜಾಣತನ ಅಲ್ಲ. ಈಗಾಗಲೇ ಕೆಲವೆಡೆ ‘ಫಿಸಿಷಿಯನ್ಸ್ ಅಸೋಸಿಯೇಟ್’ನಂತಹ ಪದವಿಗಳನ್ನು ಕೆಲವು ವಿವಿಗಳು ಆಫರ್ ಮಾಡುತ್ತಿವೆ. ಅದೇ ಹಾದಿಯಲ್ಲಿ ಅದರ ಪ್ರಿಯೂನಿವರ್ಸಿಟಿ ಹಂತವನ್ನೂ ಸಿದ್ಧಪಡಿಸಬಹುದು ಮತ್ತು ವೈದ್ಯಕೀಯ ಶಿಕ್ಷಣವನ್ನು ಆ ಸ್ಟ್ರೀಮಿನವರಿಗೆ ಸೀಮಿತಗೊಳಿಸಬಹುದು. ವೈದ್ಯಕೀಯ ಶಿಕ್ಷಣ ಇಂದು ಆರ್ಥಿಕವಾಗಿಯೂ ಆಕರ್ಷಕ ಆಗಿ ಉಳಿದಿಲ್ಲ. ಇಂದು ವೈದ್ಯಕೀಯ ರಂಗದಲ್ಲಿ ಕಾಸು ಗೋರುತ್ತಿರುವವರು ಕಾರ್ಪೊರೇಟ್ ಆಸ್ಪತ್ರೆ ಧಣಿಗಳೇ ಹೊರತು ವೈದ್ಯರಲ್ಲ. ನಿಜ ಹೇಳಬೇಕೆಂದರೆ ಒಂದೂವರೆ ಕೋಟಿ ರೂ. ಶುಲ್ಕ ತೆತ್ತು ವೈದ್ಯ ಪದವಿ, ಆ ಬಳಿಕ ಮೂರು ಕೋಟಿ ರೂ. ಕೊಟ್ಟು ವೈದ್ಯಕೀಯ ಸ್ನಾತಕ ಪದವಿ ಪಡೆಯಲು ಹತ್ತು ವರ್ಷ ಶ್ರಮಿಸುವ ಬದಲು, ಆ ನಾಲ್ಕೂವರೆ ಕೋಟಿ ರೂ.ಗಳನ್ನು ವಿದ್ಯಾರ್ಥಿಯ ಹೆಸರಿನಲ್ಲಿ ಬ್ಯಾಂಕ್ ಠೇವಣಿ ಇಟ್ಟರೂ, ಆ ವಿದ್ಯಾರ್ಥಿ ಜೀವನ ಪೂರ್ತಿ ಕುಳಿತುಣ್ಣಬಹುದು!
ಸಮರ್ಥ ವೈದ್ಯರನ್ನು ತಯಾರು ಮಾಡುವ ಬಗ್ಗೆ ಯೋಚಿಸುವ ಬದಲು, ಇರುವ ನೀಟ್ ಪರೀಕ್ಷೆಗೇ ತೇಪೆ ಹೊಡೆದು, ಸೇನೆ ಕರೆಸಿ ಪರೀಕ್ಷೆ ನಡೆಸುವ ಆತುರಗಾರಿಕೆ ದೇಶದ ವೈದ್ಯಕೀಯ ಶಿಕ್ಷಣ ಗುಣಮಟ್ಟಕ್ಕೆ ಯಾವುದೇ ರೀತಿಯ ಅನುಕೂಲ ಮಾಡಿಕೊಡದು. ಇಂತಹ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವವರಾದರೂ ಕನಿಷ್ಠಪಕ್ಷ ಒಟ್ಟು ವ್ಯವಸ್ಥೆಯನ್ನು ಪರಿಗಣನೆಗೆ ತೆಗೆದುಕೊಂಡು ತಮ್ಮ ತೀರ್ಮಾನಗಳನ್ನು ಕೈಗೊಳ್ಳಬೇಕೇ ಹೊರತು, ರಾಜಕೀಯಸ್ಥರ ಜೊತೆ ತಾವೂ ತೇಪೆ ಕೆಲಸಕ್ಕೆ ಇಳಿಯುವುದಲ್ಲ.






