Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. NAMASTE… ಎಂದರೆ ಸಾಕೆ?...

NAMASTE… ಎಂದರೆ ಸಾಕೆ? ‘ಸದಾವತ್ಸಲರಾಗುವುದು’ ಬೇಡವೆ?

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು28 Aug 2026 10:30 AM IST
share
NAMASTE… ಎಂದರೆ ಸಾಕೆ? ‘ಸದಾವತ್ಸಲರಾಗುವುದು’ ಬೇಡವೆ?

ಒಂದು ಸರಕಾರವು ಒಂದು ಕಾನೂನನ್ನು ಜಾರಿಗೆ ತಂದ ಬಳಿಕ, ನ್ಯಾಯಾಂಗ ಆ ಕಾನೂನಿನ ಜಾರಿಗೆ ಮತ್ತು ಆ ಮೂಲಕ ಸಂವಿಧಾನದ ಆಶಯಗಳ ಪಾಲನೆಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದ ಬಳಿಕ, ವರ್ಷಗಳು ಕಳೆದರೂ ಆ ಕಾನೂನಿನ ಪರಿಣಾಮ ತೋರಿಬರದಿದ್ದರೆ, ಅದು ಒಂದೋ ಸರಕಾರದ ನೀತಿಯ ವೈಫಲ್ಯ ಇಲ್ಲವೇ ಸರಕಾರದ ಇಚ್ಛಾಶಕ್ತಿಯ ಕೊರತೆ. ಪ್ರಜಾತಾಂತ್ರಿಕ ವ್ಯವಸ್ಥೆಯೊಂದರಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದದ್ದು ಸರಕಾರವೇ. ಆದರೆ ಹಾದಿತಪ್ಪಿಸುವ ಅಂಕಿ-ಅಂಶಗಳೊಂದಿಗೆ ಸರಕಾರವೇ ಕಳ್ಳಾಟ ಆಡುತ್ತಿದೆ, ಬೇಜವಾಬ್ದಾರಿ ತೋರಿಸುತ್ತಿದೆ ಎಂದರೆ ಏನರ್ಥ?!

ಒಂದು ಕಾನೂನು ಜಾರಿಗೆ ತಂದ ಬಳಿಕ, ಅದು ಅನುಷ್ಠಾನ ಯೋಗ್ಯವೇ? ಅದರ ಪರಿಣಾಮಗಳು ಕಾಣಸಿಗುತ್ತಿವೆಯೇ?... ಎಂಬಿತ್ಯಾದಿಗಳನ್ನೆಲ್ಲ ಗಮನಿಸಬೇಕಾದವರು ಯಾರು? ಸ್ವತಃ ನ್ಯಾಯಾಂಗ ಈ ನಿಟ್ಟಿನಲ್ಲಿ ಸ್ಪಷ್ಟ ನಿರ್ದೇಶನಗಳನ್ನು ನೀಡಿದ ಬಳಿಕವೂ, ಒಂದು ಸರಕಾರವು ಕೇವಲ ಬಾಯುಪಚಾರದ ಶಾಸನಗಳನ್ನು ರಚಿಸಿ, ಅಲ್ಲಿಗೆ ತನ್ನ ಜವಾಬ್ದಾರಿ ಮುಗಿಯಿತೆಂದು ಕುಳಿತರೆ ಏನಾಗಬೇಕೋ ಅದು ಆಗುತ್ತಿದೆ.

ಇದೇ ಜುಲೈ 27ರಂದು ಸುಪ್ರೀಂಕೋರ್ಟ್ ಭಾರತ ಸರಕಾರಕ್ಕೆ ಚಾಟಿ ಬೀಸಿ, 2023ರಲ್ಲೇ ತಾನು ಮ್ಯಾನುವಲ್ ಸ್ಕಾವೆಂಜಿಂಗ್ ನಿವಾರಿಸುವ ನಿಟ್ಟಿನಲ್ಲಿ ನೀಡಿರುವ ತೀರ್ಪನ್ನು ಇಲ್ಲಿಯ ತನಕವೂ ಪರಿಣಾಮಕಾರಿಯಾಗಿ ಜಾರಿಗೆ ತರದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಸಂಬಂಧಿತ ಐದು ರಾಜ್ಯಗಳ (ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ, ಗುಜರಾತ್, ಉತ್ತರಪ್ರದೇಶ) ಮುಖ್ಯ ಕಾರ್ಯದರ್ಶಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತು; ತನ್ನ ಆದೇಶಗಳನ್ನು ಇನ್ನೂ ಜಾರಿ ಮಾಡದಿದ್ದಲ್ಲಿ ಸುವೋಮೋಟೋ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿತು. ಡಾ. ಬಲರಾಂ ಅವರ ಈ ಕುರಿತ PIL ವಿಚಾರಣೆಯ ವೇಳೆ, ನ್ಯಾ. ಅರವಿಂದಕುಮಾರ್, ನ್ಯಾ. ವಿಪುಲ್ ಎಂ. ಪಾಂಚೋಲಿ ಅವರ ನ್ಯಾಯಪೀಠ ಹೀಗೆ ತೀರ್ಮಾನ ಮಾಡಿದೆ.

ಆಗಸ್ಟ್ 4ರಂದು ದಿಲ್ಲಿಯ ಜಂತರ್ ಮಂತರ್‌ನಲ್ಲಿ, ಹತ್ತಕ್ಕೂ ಹೆಚ್ಚು ರಾಜ್ಯಗಳ ನೈರ್ಮಲ್ಯ ಕಾರ್ಮಿಕರು ಒಟ್ಟಾಗಿ ಸೇರಿ, ಸಫಾಯಿ ಕರ್ಮಚಾರಿ ಆಂದೋಲನ್ (SKA) ಬ್ಯಾನರಿನಡಿ ‘‘ನಮ್ಮ ಕೊಲೆಗಳನ್ನು ನಿಲ್ಲಿಸಿ,’’ ‘‘ನಮ್ಮ ಸಾವುಗಳನ್ನು ಅಡಗಿಸಿಡಬೇಡಿ’’ ಎಂದು ಭಾರತ ಸರಕಾರವನ್ನು ಒತ್ತಾಯಿಸಿದ್ದರು.

ಭಾರತ ಸರಕಾರವು ಈಗ ನಡೆದಿರುವ ಸಂಸತ್ ಅಧಿವೇಶನದಲ್ಲಿ, ಮಾನವ ಶ್ರಮದಿಂದ ಒಳಚರಂಡಿ ಮತ್ತು ಸೆಪ್ಟಿಕ್ ಟಾಂಕಿಗಳನ್ನು ಶುಚಿಗೊಳಿಸುತ್ತಿರುವಾಗ (ಮ್ಯಾನುವಲ್ ಸ್ಕಾವೆಂಜಿಂಗ್) ತೀರಿಕೊಂಡಿರುವ ವ್ಯಕ್ತಿಗಳ ಸಂಖ್ಯೆಯ ಬಗ್ಗೆ ಅಸಮರ್ಪಕ ಮಾಹಿತಿ ನೀಡಿರುವುದು, ಮ್ಯಾನುವಲ್ ಸ್ಕಾವೆಂಜರ್‌ಗಳ ಆಕ್ರೋಶಕ್ಕೆ ಕಾರಣವಾಗಿದೆ. ಜುಲೈ 21ರಂದು ಭಾರತ ಸರಕಾರದ ಸಾಮಾಜಿಕ ನ್ಯಾಯ ಇಲಾಖೆಯ ರಾಜ್ಯ ಸಚಿವ ರಾಮದಾಸ್ ಆಠವಳೆ ಅವರು, ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿ, 2021 ಜನವರಿಯಿಂದ 2026 ಜೂನ್ ನಡುವೆ, ಭಾರತದ 18 ರಾಜ್ಯಗಳಲ್ಲಿ, 332 ಮಂದಿ ಒಳಚರಂಡಿ ಮತ್ತು ಸೆಪ್ಟಿಕ್ ಟಾಂಕಿಗಳನ್ನು ಶುಚಿಗೊಳಿಸುತ್ತಿರುವಾಗ ಸಾವಿಗೀಡಾಗಿದ್ದಾರೆ, ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 193 ಎಫ್‌ಐಆರ್‌ಗಳು ದಾಖಲಾಗಿವೆ ಎಂದಿದ್ದರು. (PIB Release ID 2287317) ಸರಕಾರದ ಈ ನಿಲುವಿಗೆ SKA ಗಂಭೀರವಾದ ಆಕ್ಷೇಪ ವ್ಯಕ್ತಪಡಿಸಿದೆಯಲ್ಲದೆ, ಇಂತಹ ಹೆಚ್ಚಿನ ಸಾವುಗಳನ್ನು ಸರಕಾರ ಕೆಲಸದ ಸ್ಥಳದಲ್ಲಿನ ಅವಘಡಗಳೆಂದು ದಾಖಲಿಸಿಕೊಳ್ಳುವ ಮೂಲಕ ಸಂಸತ್ತಿನ ಹಾದಿ ತಪ್ಪಿಸುತ್ತಿದೆ ಎಂದು ಕಿಡಿಕಾರಿದೆ. ದೇಶದಲ್ಲಿ, 2021 ಜನವರಿಯಿಂದ 2026 ಜೂನ್ ನಡುವೆ ವಾಸ್ತವದಲ್ಲಿ, 593 ಅಂತಹ ಸಾವುಗಳು ಸಂಭವಿಸಿವೆ. ಅವುಗಳ ಪೈಕಿ, 2021ರಲ್ಲಿ - 47; 2022ರಲ್ಲಿ - 93; 2023ರಲ್ಲಿ - 102; 2024ರಲ್ಲಿ-117; 2025ರಲ್ಲಿ - 121; ಮತ್ತು 2026ರ ಜುಲೈ ಒಳಗೇ 113 ಸಾವುಗಳು ಒಳಚರಂಡಿ ಮತ್ತು ಸೆಪ್ಟಿಕ್ ಟಾಂಕಿಗಳನ್ನು ಶುಚಿಗೊಳಿಸುತ್ತಿರುವಾಗ ಸಂಭವಿಸಿವೆ ಎಂದು ತಾನು ಸಂಗ್ರಹಿಸಿರುವ ಮಾಹಿತಿಗಳನ್ನಾಧರಿಸಿ ವಿವರಿಸಿರುವ SKA, ಸುಳ್ಳು ಲೆಕ್ಕಾಚಾರಗಳಿಗಾಗಿ ಮತ್ತು ಇಂತಹ ಸಾವುಗಳನ್ನು ತಪ್ಪಿಸುವಲ್ಲಿ ವಿಫಲವಾಗಿರುವುದಕ್ಕಾಗಿ ಸರಕಾರವು ದೇಶದ ಕ್ಷಮೆ ಕೋರಬೇಕು, ಈ ಹೆಚ್ಚುವರಿ 261 ಸಾವುಗಳು ಹೇಗೆ ಸರಕಾರಿ ಲೆಕ್ಕಾಚಾರದಿಂದ ತಪ್ಪಿಹೋಗಿವೆ ಎಂಬ ಬಗ್ಗೆ ಸಂಸತ್ತಿನ ಸ್ಥಾಯೀಸಮಿತಿ ವಿಚಾರಣೆ ನಡೆಸಬೇಕು, ಇಂತಹ ಸಾವುಗಳು ಸಂಭವಿಸದಂತೆ ಸಮಯಬದ್ಧವಾದ ಒಂದು ರಾಷ್ಟ್ರೀಯ ಯೋಜನೆ ರೂಪಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು, ಆಗಸ್ಟ್ 4ರ ಜಂತರ್ ಮಂತರ್ ಹೋರಾಟ ನಡೆದಿತ್ತು.

ಭಾರತ ಸರಕಾರವು ಈ ವಿಚಾರಕ್ಕೆ ಸಂಬಂಧಿಸಿ ಮೊದಲ ಕಾನೂನು ಜಾರಿಗೆ ತಂದದ್ದು 1993ರಲ್ಲಿ. ಅದನ್ನು 2013ರಲ್ಲಿ ಮರುರೂಪಿಸಿ, Prohibition of Employment as Manual Scavengers and their Rehabilitation Act, 2013 ಜಾರಿಗೆ ತರಲಾಗಿದ್ದು, ಅದು ಆ ವರ್ಷ, ಡಿಸೆಂಬರ್ 6ರಿಂದ ಕಾನೂನಾಗಿ ಜಾರಿಯಲ್ಲಿದೆ. 2011ರ ಖಾನೇಶುಮಾರಿ ವೇಳೆ, ದೇಶದಲ್ಲಿ 26 ಲಕ್ಷ ಒಣ ಪಾಯಖಾನೆಗಳು ಇರುವುದನ್ನು ದಾಖಲಿಸಲಾಗಿದ್ದರೆ, ಸಾಮಾಜಿಕ-ಆರ್ಥಿಕ-ಜಾತಿ ಗಣತಿಯು ದೇಶದಲ್ಲಿ 1.80 ಲಕ್ಷ ಪರಿವಾರಗಳು ಮ್ಯಾನುವಲ್ ಸ್ಕಾವೆಂಜಿಂಗ್ ವೃತ್ತಿಯನ್ನು ಆಧರಿಸಿ ಬದುಕುತ್ತಿವೆ ಎಂದು ಹೇಳಿತ್ತು.

ಅಲ್ಲಿಂದೀಚೆಗೆ ರಿಯಲ್ ಎಸ್ಟೇಟ್ ಉದ್ಯಮ ಚಿಗುರಿರುವ ಕಾರಣದಿಂದ ಸಾಮಾಜಿಕ ಸನ್ನಿವೇಶ ಸಂಪೂರ್ಣವಾಗಿ ಬದಲಾಗಿದ್ದು, ಖಾನೇಶುಮಾರಿ ಕೂಡ ನಡೆದಿಲ್ಲದಿರುವುದರಿಂದ, ವಾಸ್ತವ ಸ್ಥಿತಿ ಏನಿದೆ ಎಂಬುದನ್ನು ಹೇಳುವುದಕ್ಕೆ ಗತಿ ಇಲ್ಲದಾಗಿದೆ. ಆದರೆ ಸರಕಾರವು ತಾನು ನಡೆಸಿದ 2013 ಮತ್ತು 2018ರ ಮ್ಯಾನುವಲ್ ಸ್ಕಾವೆಂಜರ್ ಸಮೀಕ್ಷೆಯಲ್ಲಿ ಒಬ್ಬೇಒಬ್ಬರು ಮ್ಯಾನುವಲ್ ಸ್ಕಾವೆಂಜರ್ ವೃತ್ತಿನಿರತರು ಪತ್ತೆ ಆಗಿಲ್ಲ. ಆದರೆ, ಆ ವೃತ್ತಿ ಮಾಡುತ್ತಿದ್ದ 58,098 ವ್ಯಕ್ತಿಗಳು ಪತ್ತೆ ಆಗಿದ್ದಾರೆ, ಅವರ ಪೈಕಿ 27,928 ಮಂದಿಗೆ ಪರ್ಯಾಯ ಜೀವನೋಪಾಯ ರೂಪಿಸಲು SRMS ಯೋಜನೆಯಡಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸತ್ತಿನಲ್ಲಿ ಹೇಳಿದೆ. ಜೊತೆಗೆ, ರಾಷ್ಟ್ರೀಯ ನೈರ್ಮಲ್ಯ ಕಾರ್ಮಿಕರ ಆಯೋಗದ (NCSK) ವರದಿಯನ್ನಾಧರಿಸಿ, ದೇಶದಲ್ಲಿ 1993ರಿಂದ 2026 ಫೆಬ್ರವರಿ ನಡುವೆ 1,353 ಮಂದಿ ನೈರ್ಮಲ್ಯ ಕಾರ್ಮಿಕರು ಒಳಚರಂಡಿ ಹಾಗೂ ಸೆಪ್ಟಿಕ್ ಟಾಂಕಿಗಳ ಶುಚಿಗೊಳಿಸುವಿಕೆಯ ವೇಳೆ ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಿದೆ (ರಾಜ್ಯಸಭೆಯ ಚುಕ್ಕೆರಹಿತ ಪ್ರಶ್ನೆಸಂಖ್ಯೆ 3807, ದಿನಾಂಕ 25-03-2026).

ಮಾನವ ಶ್ರಮದಿಂದ ಒಳಚರಂಡಿ ಮತ್ತು ಸೆಪ್ಟಿಕ್ ಟಾಂಕಿಗಳನ್ನು ಶುಚಿಗೊಳಿಸುವುದು ನಿಷಿದ್ಧವಾಗಿರುವ ಹಿನ್ನೆಲೆಯಲ್ಲಿ ಭಾರತ ಸರಕಾರವು 2023ರಲ್ಲಿ, ನ್ಯಾಷನಲ್ ಆಕ್ಷನ್ ಫಾರ್ ಮೆಕನೈಸ್ಡ್ ಸ್ಯಾನಿಟೇಷನ್ ಎಕೊಸಿಸ್ಟಮ್ (NAMASTE) ಯೋಜನೆಯನ್ನು ಆರಂಭಿಸಿದ್ದು, ಅದನ್ನು ದೇಶದ 4,800ಕ್ಕೂ ಮಿಕ್ಕಿ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಜಾರಿಗೆ ತರಲಾಗಿದೆ. ಅದಕ್ಕೆ 349.73 ಕೋಟಿ ರೂ. ಗಳನ್ನು ಮೀಸಲಿರಿಸಿರುವುದಾಗಿ ಸರಕಾರ ಹೇಳಿಕೊಂಡಿದೆ. ಈ ಯೋಜನೆಯಡಿ ಸರಕಾರ ಈಗಾಗಲೇ 90,942 ಮಂದಿ ಒಳಚರಂಡಿ ಮತ್ತು ಸೆಪ್ಟಿಕ್ ಟಾಂಕಿಗಳನ್ನು ಶುಚಿಗೊಳಿಸುವ ಕೆಲಸಗಾರರನ್ನು ಗುರುತಿಸಿದ್ದು, ಅವರ ಪೈಕಿ 89,248 ಮಂದಿಯನ್ನು ವ್ಯಾಲಿಡೇಟ್ ಮಾಡಲಾಗಿದೆ. 87,037 ಮಂದಿಗೆ ಸುರಕ್ಷತೆಗಾಗಿ ಪಿಪಿಇ ಕಿಟ್ ನೀಡಲಾಗಿದೆ ಎಂದೆಲ್ಲ ವಿವರಗಳನ್ನು ನೀಡಿದೆ. (PIB Release ID: 2255017) ಇದಾಗಿ ಮೂರು ವರ್ಷಗಳ ಬಳಿಕ ಈವತ್ತಿಗೂ, ಸೆಪ್ಟಿಕ್ ಟಾಂಕಿ ಮತ್ತು ಒಳಚರಂಡಿಗಳ ದುರಸ್ತಿ, ಶುಚಿಗೊಳಿಸುವಿಕೆಗೆ ಮಾನವ ಶ್ರಮ ಅಗತ್ಯವಿದೆ. ಮಾನವ ಶ್ರಮ ತಪ್ಪಿಸಲು ಅಗತ್ಯವಿರುವ ಸಕ್ಷನ್ ಮತ್ತು ಜೆಟ್ಟಿಂಗ್ ಯಂತ್ರಗಳ ಸರಬರಾಜಿನ ಬಗ್ಗೆ ಸರಕಾರ ಹೆಚ್ಚಿನ ತಲೆ ಕೆಡಿಸಿಕೊಂಡಂತಿಲ್ಲ. ಹಾಗಾಗಿ, ಈ ವೈಫಲ್ಯವನ್ನು ಸರಕಾರ ಒಪ್ಪಿಕೊಂಡು, ಇಡೀ NAMASTE ಯೋಜನೆಯನ್ನು ಮರುರೂಪಿಸಬೇಕು ಎಂದು SKA ಒತ್ತಾಯಿಸುತ್ತಿದೆ.

SKA ಆಂದೋಲನದ ರೂವಾರಿ ಆಗಿರುವ ಬೆಜವಾಡ ವಿಲ್ಸನ್ ಅವರು ಮ್ಯಾನುವಲ್ ಸ್ಕಾವೆಂಜರ್‌ಗಳ ಸಾವಿನ ಕುರಿತು ತಪ್ಪು ಮಾಹಿತಿ ಒದಗಿಸಿರುವ ಸರಕಾರದ ಕ್ರಮ ಅಮಾನವೀಯ ಮತ್ತು ಕ್ರೌರ್ಯದ್ದು ಎಂದು ಹೇಳಿದ್ದಾರೆ. ಮ್ಯಾನುವಲ್ ಸ್ಕಾವೆಂಜರ್‌ಗಳನ್ನು ಗುರುತಿಸಲು ಸರಕಾರ ಅನುಸರಿಸುತ್ತಿರುವ ಮಾನದಂಡಗಳು ಸಮರ್ಪಕವಾಗಿಲ್ಲ. ನಿಜಕ್ಕೆಂದರೆ, ಸೆಪ್ಟಿಕ್ ಟಾಂಕಿ, ರೈಲು ಹಳಿ, ಒಣ ಪಾಯಖಾನೆ, ತೆರೆದ ಸ್ಥಳಗಳ ಮಲವಿಸರ್ಜನೆಗಳನ್ನು ಶುಚಿಗೊಳಿಸುವವರೆಲ್ಲರೂ ಮ್ಯಾನುವಲ್ ಸ್ಕಾವೆಂಜರ್ಸ್ ವ್ಯಾಪ್ತಿಯಲ್ಲಿ ಬರಬೇಕು ಎಂದು ವಿಲ್ಸನ್ ಹೇಳಿದ್ದಾರೆ. SKA ಆಂದೋಲನದ ಇನ್ನೊಬ್ಬ ರೂವಾರಿ ದೀಪ್ತಿ ಸುಕುಮಾರ್ ಅವರು, ಈ ರೀತಿಯ ಸಾವುಗಳು ಇಂದಿಗೂ ಮುಂದುವರಿಯುತ್ತಿರುವುದಕ್ಕೆ ಕೇವಲ ಸರಕಾರದ ನಿರ್ಲಕ್ಷ್ಯ ಮಾತ್ರ ಕಾರಣವಲ್ಲ. ಇದು ಜಾತಿ ಆಧರಿತ ತಾರತಮ್ಯ ಕೂಡ ಹೌದು. ಇಂತಹ ಪ್ರಕರಣಗಳಲ್ಲಿ ಜೀವ ತೆರುತ್ತಿರುವವರು ಕೇವಲ ದಲಿತರು. ಇಂತಹ ಪ್ರತಿಯೊಂದು ಸಾವು ಕೂಡ ಸಂವಿಧಾನದಲ್ಲಿ ಹೇಳಲಾಗಿರುವ, ಕಾನೂನಿನೆದುರು ಸಮಾನತೆ (14ನೇ ವಿಧಿ), ಅಸ್ಪಶ್ಯತೆ (17ನೇ ವಿಧಿ) ಹಾಗೂ ಬದುಕುವ ಹಕ್ಕು (21ನೇ ವಿಧಿ)ಗಳ ನಿರಾಕರಣೆ ಅನ್ನಿಸಿಕೊಳ್ಳುತ್ತದೆ ಎಂದಿದ್ದಾರೆ.

ಒಂದು ಸರಕಾರವು ಒಂದು ಕಾನೂನನ್ನು ಜಾರಿಗೆ ತಂದ ಬಳಿಕ, ನ್ಯಾಯಾಂಗ ಆ ಕಾನೂನಿನ ಜಾರಿಗೆ ಮತ್ತು ಆ ಮೂಲಕ ಸಂವಿಧಾನದ ಆಶಯಗಳ ಪಾಲನೆಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದ ಬಳಿಕ, ವರ್ಷಗಳು ಕಳೆದರೂ ಆ ಕಾನೂನಿನ ಪರಿಣಾಮ ತೋರಿಬರದಿದ್ದರೆ, ಅದು ಒಂದೋ ಸರಕಾರದ ನೀತಿಯ ವೈಫಲ್ಯ ಇಲ್ಲವೇ ಸರಕಾರದ ಇಚ್ಛಾಶಕ್ತಿಯ ಕೊರತೆ. ಪ್ರಜಾತಾಂತ್ರಿಕ ವ್ಯವಸ್ಥೆಯೊಂದರಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದದ್ದು ಸರಕಾರವೇ. ಆದರೆ ಹಾದಿತಪ್ಪಿಸುವ ಅಂಕಿ-ಅಂಶಗಳೊಂದಿಗೆ ಸರಕಾರವೇ ಕಳ್ಳಾಟ ಆಡುತ್ತಿದೆ, ಬೇಜವಾಬ್ದಾರಿ ತೋರಿಸುತ್ತಿದೆ ಎಂದರೆ ಏನರ್ಥ?!

Tags

socialEconomiccaste
share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X