‘ಆನಿ’ ಸವಾರಿಗೆ ಹೊರಟಿರುವ ವೈದ್ಯಕೀಯ ಶಿಕ್ಷಣ

ವೈದ್ಯಕೀಯ ಕಾಲೇಜುಗಳ ನಾಮೀ, ಬೇನಾಮೀ ಮಾಲಕರಾಗಿರುವ ರಾಜಕಾರಣಿಗಳು ಮತ್ತು ವೈದ್ಯಕೀಯ ತರಗತಿಗಳಿಗೆ ಪಾಠ ಮಾಡಿದ ಅನುಭವ ಇರದ ಭಾರತದ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಒಟ್ಟು ಸೇರಿ, ದೇಶದ ವೈದ್ಯಕೀಯ ಶಿಕ್ಷಣ ಗುಣಮಟ್ಟದ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಿದ್ದಾರೆ.
ಜನಹಿತವೇ ಸರ್ವೋಪರಿ ಆಗಬೇಕಿದ್ದ ಸಂಸದೀಯ ಪ್ರಜಾಸತ್ತೆಯಲ್ಲಿ ಒಂದು ಸರಕಾರಕ್ಕೆ ‘ಸ್ವಹಿತಾಸಕ್ತಿ’ಗಳಿರುವುದು ಅನೈತಿಕ ಎಂಬ ಅರಿವು ಹುಲ್ಲು ಮೇಯಲು ಹೊರಟಾಗ ಏನಾಗಬೇಕೋ ಅದೆಲ್ಲ ಆಗಿದೆ. ವೈದ್ಯಕೀಯ ಕಾಲೇಜುಗಳ ನಾಮೀ, ಬೇನಾಮೀ ಮಾಲಕರಾಗಿರುವ ರಾಜಕಾರಣಿಗಳು ಮತ್ತು ವೈದ್ಯಕೀಯ ತರಗತಿಗಳಿಗೆ ಪಾಠ ಮಾಡಿದ ಅನುಭವ ಇರದ ಭಾರತದ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಒಟ್ಟು ಸೇರಿ, ದೇಶದ ವೈದ್ಯಕೀಯ ಶಿಕ್ಷಣ ಗುಣಮಟ್ಟದ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಿದ್ದಾರೆ. ಶಿಕ್ಷಣ, ಅದರಲ್ಲೂ ವೈದ್ಯಕೀಯ ಶಿಕ್ಷಣದಂತಹ ಸೇವಾ ವೃತ್ತಿಗಳು ವಾಣಿಜ್ಯ ಹಿತಾಸಕ್ತಿಗಳಿಂದ ದೂರ ಇರಬೇಕೆಂಬ ಮತ್ತು ಶಿಕ್ಷಣದ ಮಟ್ಟಿಗೆ ಎಲ್ಲರಿಗೂ ಸಮಾನ ಅವಕಾಶಗಳಿರಬೇಕೆಂಬ ಆದರ್ಶ ಪರಿಕಲ್ಪನೆಯನ್ನು ಹಂತಹಂತವಾಗಿ ನಾಶ ಮಾಡಲಾಗಿದೆ.
ಇದೇ ಜನವರಿ 7ರಂದು ವಿಜಯವಾಡದಲ್ಲಿ ಪತ್ರಿಕಾಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡಿದ NMC ಅಧ್ಯಕ್ಷ ಡಾ. ಅಭಿಜಿತ್ ಚಂದ್ರಕಾಂತ್ ಸೇಠ್ ಅವರು, ಲಾಭೋದ್ದೇಶ ಇರುವ ಕಂಪೆನಿಗಳಿಗೂ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ಅವಕಾಶ ತೆರೆಯಲಾಗಿದೆ. ಈ ಬಗ್ಗೆ NMC ಆಡಳಿತ ಮಂಡಳಿ ಇತ್ತೀಚೆಗೆ ನಿರ್ಣಯ ಸ್ವೀಕರಿಸಿದೆ ಎಂದು ಹೇಳಿದ್ದರು.
NMCಯ ಈ ನಿರ್ಣಯದ ಫಲವಾಗಿ, ಇನ್ನು ಯಾವುದೇ ಖಾಸಗಿ ಕಂಪೆನಿಯು ವೈದ್ಯಕೀಯ ಕಾಲೇಜು ತೆರೆದು, ಅದರ ಮೂಲಕ ವ್ಯವಹಾರ ನಡೆಸಿ, ಮುನಾಫೆ ಮಾಡಿಕೊಳ್ಳಬಹುದು. ಇಲ್ಲಿಯ ತನಕ ಸೆಕ್ಷನ್ 8ರ ಅಡಿ ಬರುವ, ಲಾಭೋದ್ದೇಶ ರಹಿತ ಕಂಪೆನಿಗಳಿಗೆ ಮಾತ್ರ ಈ ಅವಕಾಶ ಇತ್ತು. ದುಡ್ಡು ಗೋರುವುದನ್ನೇ ಆದ್ಯತೆಯಾಗಿರಿಸಿಕೊಂಡ ಮೆಡಿಕಲ್ ಕಾಲೇಜುಗಳ ಒಡೆಯರಿಗೆ ಈಗ ತಮ್ಮ ಲೂಟಿಯನ್ನು ಮುಂದುವರಿಸಲು ಹೆಬ್ಬಾಗಿಲನ್ನೇ ತೆರೆದಿಟ್ಟಂತಾಗಿದೆ.
ಇಂಚಿಂಚಾಗಿ ಖಾಸಗಿ ತೆಕ್ಕೆಗೆ
ವೈದ್ಯಕೀಯ ಶಿಕ್ಷಣ ಬಹಳ ಬೇಡಿಕೆಯ ಕ್ಷೇತ್ರವಾಗಿ ಬದಲಾದಲ್ಲಿಂದ ಇಲ್ಲಿಯ ತನಕವೂ ಅಪಾರ ಖರ್ಚು ನಿರೀಕ್ಷಿಸುವ ಕ್ಷೇತ್ರವಾಗಿಯೇ ಉಳಿದಿದೆ. ವೈದ್ಯಕೀಯ ಶಿಕ್ಷಣದ ಕುರಿತು ನೀತ್ಯಾತ್ಮಕ ತೀರ್ಮಾನಗಳನ್ನು ತೆಗೆದುಕೊಳ್ಳುವವರು, ಭಾರತ ಸರಕಾರದಲ್ಲಿ ಮತ್ತು ಬಹುತೇಕ ರಾಜ್ಯಗಳಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ವೈದ್ಯಕೀಯ ಕಾಲೇಜುಗಳ ಮಾಲಕವರ್ಗಕ್ಕೆ ಸೇರಿದವರೇ ಆಗಿರುವುದರಿಂದ, ಅವರ ಲಾಬಿಯ ತೀರ್ಮಾನಗಳೇ ಸರಕಾರಗಳ ತೀರ್ಮಾನ ಆಗುತ್ತಾ ಬಂದಿರುವುದು ಸುಳ್ಳಲ್ಲ.
ವಿಕೇಂದ್ರೀಕೃತವಾಗಿದ್ದ ವೈದ್ಯಶಿಕ್ಷಣ ಪ್ರವೇಶ ಪ್ರಕ್ರಿಯೆ 2013ರಲ್ಲಿ NEET ಮೂಲಕ ಏಕತ್ರಗೊಂಡು, 2017ರಲ್ಲಿ ಕಡ್ಡಾಯ ಆದ ಬಳಿಕವಂತೂ, ದೇಶದಲ್ಲಿರುವ ವೈದ್ಯಕೀಯ ಸೀಟುಗಳ ಪ್ರಮಾಣಕ್ಕೂ, ಬೇಡಿಕೆಗೂ ನಡುವೆ ಅಜಗಜಾಂತರ ಇರುವುದರಿಂದ ಸೃಷ್ಟಿ ಆಗಿರುವ ಬಾಟಲ್‌ನೆಕ್‌ನ ಲಾಭ ಪಡೆಯುವುದು ವೈದ್ಯಕೀಯ ಶಿಕ್ಷಣ ವ್ಯಾಪಾರಸ್ಥರ ಮೂಲ ಉದ್ದೇಶ. ಸರಕಾರಗಳೂ ಇದಕ್ಕೆ ಪೂರಕವಾಗಿಯೇ ವರ್ತಿಸುತ್ತಾ ಬಂದಿವೆ.
ಭಾರತ ಸರಕಾರದ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು, ಡಿಸೆಂಬರ್ ಕೊನೆಯಲ್ಲಿ ಮಧ್ಯಪ್ರದೇಶದಲ್ಲಿ ಮಾತನಾಡುತ್ತಾ, 2014ರಲ್ಲಿ 51,000 ಇದ್ದ MBBS ಸೀಟುಗಳು ಈಗ 1.28 ಲಕ್ಷಕ್ಕೆ ತಲುಪಿವೆ. 2029ರ ಒಳಗೆ ದೇಶಕ್ಕೆ ಇನ್ನೂ ಹೆಚ್ಚುವರಿ 75,000 MBBS ಸೀಟುಗಳನ್ನು ಒದಗಿಸಲಾಗುವುದು ಎಂದು ಪ್ರಕಟಿಸಿದ್ದರು. (PIB Release ID: 2207838).
ಸರಕಾರಗಳು ವೈದ್ಯಕೀಯ ಕಾಲೇಜುಗಳನ್ನು, ಸ್ನಾತಕ-ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸುತ್ತಾ ಹೋಗುತ್ತಿವೆಯೇ ಹೊರತು, ದೇಶದಲ್ಲಿ ಹೊರಬರುತ್ತಿರುವ ವೈದ್ಯರ ಗುಣಮಟ್ಟದ ಬಗ್ಗೆ ಗಮನ ಹರಿಸಿವೆಯೇ? ಎಂಬ ಪ್ರಶ್ನೆಗೆ ಯಾರ ಬಳಿಯೂ ಸ್ಪಷ್ಟ ಉತ್ತರ ಇದ್ದಂತಿಲ್ಲ. ಉದಾರೀಕರಣದ ಬಳಿಕ ಹೇಗೆ ವೈದ್ಯಕೀಯ ಶಿಕ್ಷಣವನ್ನು ಇಂಚಿಂಚಾಗಿ ಖಾಸಗಿ ತೆಕ್ಕೆಗೆ ದೂಡಲಾಗಿದೆ ಎಂಬುದನ್ನು ಗಮನಿಸಿದರೆ, ಇಂದು ವೈದ್ಯಕೀಯ ಶಿಕ್ಷಣ ಗಗನಕುಸುಮ ಆಗಿರುವುದರ ಹಿಂದಿನ ಕಾರಣ ತಾನಾಗಿಯೇ ಅರ್ಥ ಆಗತೊಡಗುತ್ತದೆ. ಆರೋಗ್ಯ ವ್ಯವಸ್ಥೆಯ ವ್ಯಾಪಾರೀಕರಣದ ಪ್ರಭಾವವನ್ನು ದೇಶ ಈಗಾಗಲೇ ಅನುಭವಿಸುತ್ತಿದೆ.
2009ರ ತನಕ ವೈದ್ಯಕೀಯ ಶಿಕ್ಷಣ ಲಾಭದಾಯಕ ವ್ಯವಹಾರ ಆಗಿರಲು ಅವಕಾಶ ಇರಲಿಲ್ಲ. ಖಾಸಗಿಯವರು ಕಾಲೇಜು ಆರಂಭಿಸಬೇಕಿದ್ದರೆ, ಚಾರಿಟೇಬಲ್ ಟ್ರಸ್ಟ್, ಸೊಸೈಟಿ ಇತ್ಯಾದಿ ಮುಸುಕುಗಳನ್ನು ಧರಿಸಬೇಕಿತ್ತು. ಕ್ಯಾಪಿಟೇಷನ್ ಶುಲ್ಕ, ದುಬಾರಿ ಫೀಸುಗಳ ಮೂಲಕ ಅವರು ನಡೆಸುತ್ತಿದ್ದ ಲೂಟಿಗಳ ಬಗ್ಗೆ ಆಗಾಗ ಚರ್ಚೆ ಆಗುತ್ತಿತ್ತು. 2003ರಲ್ಲಿ ಸುಪ್ರೀಂ ಕೋರ್ಟು ಈ ದುಬಾರಿ ಫೀಸುಗಳನ್ನು ನಿಯಂತ್ರಿಸಲು ಪ್ರತೀ ರಾಜ್ಯದಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸ್ವತಂತ್ರ ಶುಲ್ಕ ನಿರ್ಧಾರ ಸಮಿತಿ ಸ್ಥಾಪಿಸಲು ನಿರ್ದೇಶಿಸಿತ್ತು. 2018ರಲ್ಲಿ ಸುಪ್ರೀಂ ಕೋರ್ಟಿನ ಮತ್ತೊಂದು ಪೀಠ ಈ ಹಳೆಯ ತೀರ್ಪನ್ನು ಎತ್ತಿಹಿಡಿದಿತ್ತು.
2010ರ ಫೆಬ್ರವರಿಯಲ್ಲಿ, ಅಂದಿನ ಯುಪಿಎ ಸರಕಾರ, ಕಂಪೆನಿ ಕಾಯ್ದೆಗಳ ಅಡಿಯಲ್ಲಿ ಸೆಕ್ಷನ್ 8ರ ಅಡಿ ಬರುವ ಕಂಪೆನಿಗಳಿಗೆ ವೈದ್ಯಕೀಯ ಕಾಲೇಜು ತೆರೆಯಲು ಅವಕಾಶ ಕಲ್ಪಿಸಿತಾದರೂ, ಲಾಭೋದ್ದೇಶ ಇರುವಂತಿಲ್ಲ ಎಂದು ವಿಧಿಸಿತ್ತು. ಅದರ ಬೆನ್ನಲ್ಲೇ NEET ವ್ಯವಸ್ಥೆ ಬಂದು, ದುಬಾರಿ ಕ್ಯಾಪಿಟೇಷನ್ ಶುಲ್ಕದ ದೂರುಗಳನ್ನು ನಿವಾರಿಸುವ ಪ್ರಯತ್ನ ನಡೆಯಿತು.
2016ರಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಾಗ, ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು, ಲಾಭ ಇಲ್ಲ ಎಂದಾದರೆ, ಖಾಸಗಿಯವರು ಮುಂದೆ ಬರುವುದಿಲ್ಲ. ಅವರಿಗೂ ಅವಕಾಶ ನೀಡಿದರೆ ಅವರು ಅಕ್ರಮ ಲಾಭದ ಬದಲು ಸಕ್ರಮ ಲಾಭ ಗಳಿಸಿ, ಸರಕಾರಕ್ಕೆ ತೆರಿಗೆ ಕಟ್ಟುತ್ತಾರೆ ಎಂಬ ಕಾರಣಕ್ಕೆ, ಲಾಭೋದ್ದೇಶ ಇಲ್ಲದ ಸೆಕ್ಷನ್ 8 ಕಂಪೆನಿಗಳು ನಡೆಸುವ ವೈದ್ಯಕೀಯ ಕಾಲೇಜುಗಳಿಗೆ ಲಾಭ ಸಹಿತ ಖಾಸಗಿ ಕಾಲೇಜುಗಳಾಗುವ ಅವಕಾಶ ತೆರೆದರು. 2017ರ ಜನವರಿ 17ರಂದು ಈ ಬಗ್ಗೆ ಪ್ರಕಟಣೆ ಹೊರಬಿತ್ತು.
2019ರಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ನಿಯಮ 1999ಕ್ಕೆ ತಿದ್ದುಪಡಿಗಳನ್ನು ತಂದು, ಸರಕಾರಿ ವೈದ್ಯಕೀಯ ಆಸ್ಪತ್ರೆಗಳ ಜೊತೆ MoU ಮಾಡಿಕೊಂಡು, ಕನ್ಸಾರ್ಟಿಯಂ ವ್ಯವಸ್ಥೆಯ ಮೂಲಕ ಪಬ್ಲಿಕ್-ಪ್ರೈವೇಟ್-ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಅವಕಾಶವನ್ನು ಖಾಸಗಿಯವರಿಗೆ ನೀಡಲಾಯಿತು.
ಈಗ 2025ರ ಕೊನೆಯ ಹೊತ್ತಿಗೆ ನಡೆದಿರುವ ಬೆಳವಣಿಗೆಗಳ ಫಲ ಎಂದರೆ, ಎಲ್ಲ ಖಾಸಗಿ ಸ್ವರೂಪದ ಲಾಭೋದ್ದೇಶದ ಕಂಪೆನಿಗಳೂ ನೇರವಾಗಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಮಾರುಕಟ್ಟೆಯ ಆಟ
2016-17ರ ಹೊತ್ತಿಗೆ 4 ಲಕ್ಷ ಕೋಟಿ ರೂ.ಗಳದ್ದಾಗಿದ್ದ ಖಾಸಗಿ ಆರೋಗ್ಯ ಸೇವೆಗಳ ಮಾರುಕಟ್ಟೆಯು ಈಗ 11.03 ಲಕ್ಷ ಕೋಟಿ ರೂ.ಗಳದ್ದಾಗಿ ಬೆಳೆದಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ಕೋಚಿಂಗ್ ನೀಡುವ ಉದ್ಯಮ ವಾರ್ಷಿಕ 60,000 ಕೋಟಿ ಗಾತ್ರದ್ದಾಗಿದ್ದು, 2028ರ ಹೊತ್ತಿಗೆ 1.34 ಲಕ್ಷ ಕೋಟಿ ರೂ.ಗಳಿಗೆ ತಲುಪಲಿದೆಯಂತೆ. ಹೀಗೆ ಅಪಾರ ದುಡ್ಡು ಹರಿದಾಡುತ್ತಿರುವ ಈ ಕ್ಷೇತ್ರ ಖಾಸಗಿಯವರನ್ನು ಆಕರ್ಷಿಸುತ್ತಿರುವುದು ಸಹಜ.
ಬೇಡಿಕೆಯ ಹಿಂದೆ ಬಿದ್ದು ಕಾಸು ಗೋರುತ್ತಿರುವ ವೈದ್ಯಕೀಯ ಶಿಕ್ಷಣ ವ್ಯಾಪಾರಸ್ಥರು, ಖಾಸಗೀಕರಣ ಪ್ರಕ್ರಿಯೆಯ ಬಳಿಕ ವೈದ್ಯಕೀಯ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ನೀಡುತ್ತಿರುವ ಕೊಡುಗೆ ನಿರಾಶಾದಾಯಕ. ಇಂತಹದೊಂದು ಸ್ಥಿತಿಗೆ ಸರಕಾರದ ಕೊಡುಗೆಯೂ ಕಡಿಮೆ ಏನಿಲ್ಲ. ಹೊಸ ಶಿಕ್ಷಣ ನೀತಿಯ ಹೆಸರಿನಲ್ಲಿ ಪಠ್ಯವಿಧಾನ-ಪರೀಕ್ಷಾವಿಧಾನ-ಅಂಕ ನೀಡಿಕೆ ವಿಧಾನಗಳಲ್ಲಿ ಪದೇಪದೇ ಬದಲಾವಣೆಗಳನ್ನು ಮಾಡುತ್ತಾ, ಸಂಪೂರ್ಣ ವ್ಯವಸ್ಥೆಯನ್ನು ಗೊಂದಲದಲ್ಲಿ ಕೆಡವಲಾಗಿದೆ. ಹೊಸದಾಗಿ ಆರಂಭಗೊಳ್ಳುತ್ತಿರುವ ಹೆಚ್ಚಿನ ಕಾಲೇಜುಗಳಲ್ಲಿ ಮೂಲಸೌಕರ್ಯವಾಗಲೀ, ಪರಿಣತ ವೈದ್ಯಕೀಯ ಶಿಕ್ಷಕರಾಗಲೀ ಇಲ್ಲ; ಈ ಇಲ್ಲಗಳ ಬಗ್ಗೆ ಪರಿಣಾಮಕಾರಿ ನಿಗಾ ವ್ಯವಸ್ಥೆಯೂ ಇಲ್ಲ. ಈ ನಿಗಾ ವ್ಯವಸ್ಥೆಗಳನ್ನು ಖಾಸಗಿ ಶಕ್ತಿಗಳ ಪರವಾಗಿ ಹದಗೆಡಿಸುತ್ತಿರುವುದಕ್ಕೆ ಒಳ್ಳೆಯ ಉದಾಹರಣೆ, ವೈದ್ಯಕೀಯ ಶಿಕ್ಷಕರ ಹಾಜರಾತಿ ನಿಗಾ ವ್ಯವಸ್ಥೆ. ಹಿಂದೆ MCI ಕಾಲದಲ್ಲಿ (ಹಳೆಯ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ವ್ಯವಸ್ಥೆ) ಹಠಾತ್ ತಪಾಸಣೆ ನಡೆಸಿ, ಸೂಚಿಸಿದಷ್ಟು ಪ್ರಮಾಣದಲ್ಲಿ ಸಿಬ್ಬಂದಿ ಹಾಜರು ಇಲ್ಲದಿದ್ದಲ್ಲಿ, ಸೀಟು ಕಡಿತ, ರೆಕಾಗ್ನಿಷನ್ ರದ್ದತಿ ಇತ್ಯಾದಿ ಕ್ರಮಗಳೆಲ್ಲ ಇದ್ದವು. ಈಗ NMC ವ್ಯವಸ್ಥೆ ಬಂದ ಬಳಿಕ ಬಯೊಮೆಟ್ರಿಕ್ ಹಾಜರಾತಿಯನ್ನೇ ನೆಚ್ಚಿಕೊಳ್ಳಲಾಗಿದೆ. ಬಯೊಮೆಟ್ರಿಕ್ ಹಾಜರಾತಿಯಲ್ಲಿ ಅಕ್ರಮಗಳು ಸುಲಭ. ಖಾಸಗಿಯವರಿಗೆ ಸಿಬ್ಬಂದಿ ನೇಮಕ, ಸಂಬಳ, ಸವಲತ್ತು ಒದಗಿಸುವ ಬದಲು ಅಕಸ್ಮಾತ್ ಸಿಕ್ಕಿಬಿದ್ದರೂ ದಂಡ ತೆರುವುದು ಹೆಚ್ಚು ಲಾಭದಾಯಕ. ಇಂತಹ ನಿಯಮಗಳಿಂದಾಗಿ ಸೊರಗುತ್ತಿರುವುದು ಶಿಕ್ಷಣ ವ್ಯವಸ್ಥೆ. ಸರಕಾರಿ ಕಾಲೇಜುಗಳಂತೂ ಸಿಬ್ಬಂದಿ, ಸವಲತ್ತು ಇಲ್ಲದೆ ಖಾಸಗಿ ಕಾಲೇಜುಗಳಿಗೆ ರೆಫರಲ್ ವ್ಯವಸ್ಥೆಯನ್ನು ಅವಲಂಬಿಸಿವೆ. ಹೀಗೆ ಸೂಕ್ತ ತರಬೇತಿ, ಕೌಶಲ ಇಲ್ಲದೇ ಹೊರಬಂದ ವೈದ್ಯರಿಂದ ಯಾವ ಮಟ್ಟದ ವೃತ್ತಿಪರತೆ ಮತ್ತು ಗುಣಮಟ್ಟಗಳನ್ನು ನಿರೀಕ್ಷಿಸಬಹುದೆಂಬ ಖಬರೂ ಯಾರಿಗೂ ಇದ್ದಂತಿಲ್ಲ.
ವಾಸ್ತವ ಹೀಗಿರುವಾಗಲೂ ಮನಬಂದಂತೆ ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ‘ದಾಖಲೆ’ ಸಾಧಿಸಲು ಹೊರಡುವುದು ಅಪಾಯಕಾರಿ. ಇದು ಹೀಗೇ ಮುಂದುವರಿದರೆ, ಇಂತಹ ವ್ಯವಸ್ಥೆಯಿಂದ ಹೊರಬಂದ ವಿದ್ಯಾರ್ಥಿಗಳು, ತಮ್ಮ ವೃತ್ತಿ ಕೌಶಲ ಪಡೆದುಕೊಳ್ಳಲು ಮತ್ತೆ ಹೊಸ ದಾರಿಗಳನ್ನು ಹುಡುಕಿಕೊಳ್ಳಬೇಕಾದ ಸನ್ನಿವೇಶ ಎದುರಾಗಬಹುದೆಂದು ವೈದ್ಯಕೀಯ ಶಿಕ್ಷಣ ಕ್ಷೇತ್ರದ ಪರಿಣತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲ ಎಲ್ಲಿಗೆ ತಲುಪಲಿದೆ ಎಂಬುದನ್ನು ‘ಆನಿ ಸವಾರಿ’ಗೆ ಮನಸ್ಸು ಮಾಡಿರುವ ಓಒಅಯಂತಹ ನಿಯಂತ್ರಣ ಸಂಸ್ಥೆಗಳು ಮತ್ತು ಸರಕಾರಗಳ ಆಯಕಟ್ಟಿನ ಜಾಗಗಳಲ್ಲಿರುವವರು ಹೇಳಬೇಕು.







