ಸಮಗ್ರ ದೃಷ್ಟಿಕೋನ ಇಲ್ಲದ ನೀತಿಗಳ ಹನಿ ಹನಿ ಸೇರಿ, ಜಲ ಕ್ಷಾಮದತ್ತ ದೇಶ?!

ಸರಕಾರ ಹೊಸ ಯೋಜನೆಗಳಿಗೆ ಕೈ ಹಾಕುವ ವೇಳೆ ಒಂದು ಸಮಗ್ರ ಚಿತ್ರಣ ಇಲ್ಲದೆ, ಕೇವಲ ಉತ್ಸಾಹ ಮತ್ತು ಕಾರ್ಪೊರೇಟ್ ಚಿತಾವಣೆಗಳನ್ನು ನಂಬಿಕೊಂಡು ಮುಂದುವರಿದರೆ, ಅದು ಅತ್ಯಂತ ಮೂರ್ಖತನದ ಕೆಲಸ ಆಗಲಿದೆ. ನೀರಿಗೆ ಏನು ವ್ಯವಸ್ಥೆ ಎಂಬುದನ್ನು ಖಚಿತಪಡಿಸಿಕೊಳ್ಳದೆ ಯಾವುದೇ ಯೋಜನೆಗಳನ್ನು ಅಂತಿಮಗೊಳಿಸಬಾರದು ಮತ್ತು ಒಂದು ಸಮಗ್ರ ಚಿತ್ರಣವನ್ನು ಎದುರಿಟ್ಟುಕೊಂಡು ತೀರ್ಮಾನಗಳನ್ನು ತೆಗೆದುಕೊಳ್ಳಲು ಶಾಸನಾತ್ಮಕ ವ್ಯವಸ್ಥೆಗಳನ್ನು ರೂಪಿಸಲು ಇದು ಸಕಾಲ.
ಸೆಮಿಕಂಡಕ್ಟರ್ ಉದ್ಯಮದ ಕುರಿತು ಭಾರತದ ಉತ್ಸಾಹವೇನೋ ಸರಿ; ಆದರೆ ಈ ನವೋದ್ಯಮದ ನೀತಿಗಳನ್ನು ವಿನ್ಯಾಸ ಮಾಡುವಾಗಲೇ ಅದರ ಸಂಪೂರ್ಣ ಜೀವನಚಕ್ರವನ್ನು ಪರಿಗಣಿಸಬೇಕು, ಸುಸ್ಥಿರವಾದ ಅಭಿವೃದ್ಧಿಗೆ ಪೂರಕ ಆಗಬಲ್ಲ ನೀರಿನ ಬಳಕೆ-ಮರುಬಳಕೆ, ರಾಸಾಯನಿಕಗಳ ನಿರ್ವಹಣೆಯಂತಹ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು, ಸೆಮಿಕಂಡಕ್ಟರ್ ಕಾರ್ಖಾನೆಗಳು ಸ್ಥಾಪನೆಗೊಂಡು ಉತ್ಪಾದನೆ ಆರಂಭಿಸಿದ ಬಳಿಕ ವಿಳಂಬವಾಗಿ ಈ ವಿಚಾರಗಳನ್ನೆಲ್ಲ ಗಮನಹರಿಸಹೊರಟರೆ, ಅದು ದುಬಾರಿಯಾಗಿ ಪರಿಣಮಿಸಬಹುದು ಎಂದು ಪರಿಣತರ ತಂಡವೊಂದು ಮೊನ್ನೆ ಶನಿವಾರ (ಸೆ.19) ಸೆಮಿಕಾನ್ ಇಂಡಿಯಾ, 2026 ಸಮಾವೇಶದ ಪ್ಯಾನಲ್ ಚರ್ಚೆಯೊಂದರಲ್ಲಿ ಅಭಿಪ್ರಾಯಪಟ್ಟಿದೆ. ದೇಶದ ಪ್ರಧಾನಿ ಈ ಸಮಾವೇಶವನ್ನು ಉದ್ಘಾಟಿಸಿದ್ದರು.
ಈ ಪ್ಯಾನಲ್ ಚರ್ಚೆಯ ಮಾಡರೇಟರ್ ಆಗಿದ್ದ ಪ್ರೊ. ಇಂದುಮತಿ ನಂಬಿ (IIT ಮದ್ರಾಸಿನ ಸಿವಿಲ್ ಇಂಜಿನಿಯರಿಂಗ್ ಪ್ರೊಫೆಸರ್) ಅವರು, ಈ ಉದ್ಯಮಕ್ಕೆ ಬೇಕಾದ ನೀರಿನ ಬಳಕೆ, ವಿದ್ಯುತ್, ರಾಸಾಯನಿಕಗಳು, ಬೇರೆ ಸೊತ್ತುಗಳ ಬಗ್ಗೆ ಸಮಗ್ರ ಪರಿಗಣನೆ ಬೇಕು ಎಂದಿದ್ದರು. ಅದೇ ಪ್ಯಾನಲ್‌ನ ಭಾಗ ಆಗಿದ್ದ ಮತ್ತೊಬ್ಬ ಪರಿಣತ ಪ್ರತೀಕ್ ಭಟ್ ಎಂಬವರು, ನಾವೀಗ ಸೆಮಿಕಂಡಕ್ಟರ್ ಉತ್ಪಾದನೆ ಕ್ಷಿಪ್ರವಾಗಿ ಆರಂಭಿಸುವ ಗಡಿಬಿಡಿಯಲ್ಲಿದ್ದೇವೆ. ಆರಂಭದ ಹಂತದಲ್ಲೇ ಸಮಗ್ರ ಚಿಂತನೆ ಇಲ್ಲದಿದ್ದರೆ, ಭಾರತದಲ್ಲಿ ಸೆಮಿಕಂಡಕ್ಟರ್ ಉದ್ಯಮದ ವಿಸ್ತರಣೆಗೆ ನೀರಿನ ಕೊರತೆ ಬಲುದೊಡ್ಡ ಅಡಚಣೆ ಆಗಬಹುದು ಎಂದು ಎಚ್ಚರಿಸಿದ್ದರು.
ನಮ್ಮ ಆಧುನಿಕ ಬದುಕಿನ ವೇಗ, ತಂತ್ರಜ್ಞಾನಗಳಿಗೆ ಬೆನ್ನುಹುರಿ ಎಂದರೆ ಸೆಮಿಕಂಡಕ್ಟರ್ ಚಿಪ್‌ಗಳು. ನಮ್ಮ ಸ್ಮಾರ್ಟ್‌ಫೋನ್, ಕಂಪ್ಯೂಟರ್, ವಾಹನಗಳ ಇಂಟೆಲಿಜೆನ್ಸ್ ಸಿಸ್ಟಮ್ ಅಥವಾ ಯಾವುದೇ ಡಿಜಿಟಲ್ ಸಿಸ್ಟಮ್ ಇರಬಹುದು - ಅವುಗಳ ಬಹುಮುಖ್ಯ ಭಾಗ ಸೆಮಿಕಂಡಕ್ಟರ್ ಚಿಪ್‌ಗಳು. ಈ ಚಿಪ್‌ಗಳನ್ನು ಕಾರ್ಖಾನೆಗಳಲ್ಲಿ ತಯಾರಿಸುವಾಗ, ಅದಕ್ಕೆ ಬಳಕೆ ಆಗುವ ಸಿಲಿಕಾನ್ ತೆಳುಹಾಳೆಗಳನ್ನು ಸಂಪೂರ್ಣವಾಗಿ ಶುಚಿಗೊಳಿಸಲು, ಅರ್ಥಾತ್ ಅದರ ನ್ಯಾನೋಮೀಟರ್ ಗಾತ್ರದ ಮೈಕ್ರೊಸ್ಕೋಪಿಕ್ ಕಲುಷಿತ ಅಂಶಗಳನ್ನೂ ತೆಗೆದುಹಾಕಲು ದೊಡ್ಡ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಅದಕ್ಕೆ ಬಳಸುವ ನೀರು ಕೂಡ ವಿಶೇಷ ಗುಣದ್ದು. ಅದನ್ನು ‘ಅಲ್ಟ್ರಾ ಪ್ಯೂರ್ ವಾಟರ್’ (UPW)ಎಂದು ಕರೆಯಲಾಗುತ್ತದೆ. ನೀರಿನಲ್ಲಿರುವ ಖನಿಜಾಂಶ, ಸಾವಯವ ಸಂಯುಕ್ತಗಳು, ಟ್ರೇಸ್ ಅಯಾನ್‌ಗಳ ಸಮೇತ ತೆಗೆದು UPW ಸಿದ್ಧಗೊಳ್ಳುತ್ತದೆ. ನಮ್ಮ ದಿನಬಳಕೆಯ ಸುಮಾರು 1,400-1,600 ಗ್ಯಾಲನ್ ನೀರು ಸಂಸ್ಕರಿಸಿದರೆ 1,000 ಗ್ಯಾಲನ್ ‘ಅಲ್ಟ್ರಾಪ್ಯೂರ್ ವಾಟರ್’ ಸಿದ್ಧಗೊಳ್ಳುತ್ತದಂತೆ. ಮೈಕ್ರೊಚಿಪ್ ತಯಾರಿಸುವ ಒಂದು ಸಾಮಾನ್ಯ ಗಾತ್ರದ ಕಾರ್ಖಾನೆಗೆ, ಒಂದು ದಿನಕ್ಕೆ ಅಂದಾಜು ಒಂದು ಕೋಟಿ ಗ್ಯಾಲನ್ (3.8 ಕೋಟಿ ಲೀಟರ್) ಪ್ರಮಾಣದಲ್ಲಿ ಇಂತಹ ಶುದ್ಧ ನೀರು ಬೇಕಾಗುತ್ತದೆ. ಜೊತೆಗೆ, ತಣಿಸುವಿಕೆ ಮತ್ತಿತರ ಸಾಮಾನ್ಯ ಕಾರ್ಖಾನೆ ಬಳಕೆಯ ನೀರು ಪ್ರತ್ಯೇಕ.
ಭಾರತ ಸರಕಾರ ಈಗಾಗಲೇ ಗುಜರಾತ್, ಆಂಧ್ರ, ಒಡಿಶಾ, ಉತ್ತರ ಪ್ರದೇಶ, ಪಂಜಾಬ್ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಕರ್ನಾಟಕ ಸಹಿತ ಹಲವು ರಾಜ್ಯಗಳು ಅದಕ್ಕಾಗಿ ಸರದಿಯಲ್ಲಿವೆ. ದೇಶದ ಸೆಮಿಕಾನ್ 1.0 ಕಾರ್ಯಕ್ರಮವು 2021ರಲ್ಲಿ ಆರಂಭಗೊಂಡಿದ್ದು, ಅದಕ್ಕಾಗಿ ಸರಕಾರ 76 ಸಾವಿರ ಕೋಟಿ ರೂ.ಗಳ ಅನುದಾನ ಮೀಸಲಿರಿಸಿ, 12 ಯೋಜನೆಗಳಿಗೆ ಅನುಮೋದನೆ ನೀಡಿತ್ತು. ಈ ವರ್ಷ ಜುಲೈ ತಿಂಗಳಿನಲ್ಲಿ 1,27,500 ಕೋಟಿ ರೂ.ಗಳ ವೆಚ್ಚದ ಸೆಮಿಕಾನ್ 2.0ಗೆ ಸರಕಾರ ಅನುಮೋದನೆ ನೀಡಿದೆ. ಸೆಮಿಕಂಡಕ್ಟರ್ ಎಕೊಸಿಸ್ಟಮ್ ಸಮಗ್ರವಾಗಿ ರೂಪಿಸುವುದು ಸರಕಾರದ ಉದ್ದೇಶವಂತೆ. (PIB Release ID: 2284796)
ಜಾಗತಿಕ ಸೆಮಿಕಂಡಕ್ಟರ್ ರೇಸಿನಲ್ಲಿ ಭಾರತ ಸೇರಿಕೊಂಡಿರುವುದೇನೋ ಸರಿ. ಆದರೆ ನಮ್ಮ ಗ್ರೌಂಡ್ ರಿಯಾಲಿಟಿಗಳು ಹೇಗಿವೆ? 140 ಕೋಟಿ ಭಾರತೀಯರ ಪೈಕಿ ಸುಮಾರು 60 ಕೋಟಿ ಮಂದಿ ಈಗಾಗಲೇ ಒಂದಲ್ಲ ಒಂದು ರೀತಿಯ ನೀರಿನ ಅಭಾವ ಅನುಭವಿಸುತ್ತಿದ್ದಾರೆ. ದೇಶದ ಸುಮಾರು 21 ನಗರಗಳಲ್ಲಿ ಅತಿಯಾದ ಬಳಕೆ - ಅಸಮರ್ಪಕ ರೀಚಾರ್ಜ್ ಕಾರಣಗಳಿಂದಾಗಿ ಅಂತರ್ಜಲ ಪೂರ್ಣ ಆರಿ ಹೋಗುವ ಆತಂಕವಿದೆ. ಈ ವಾಸ್ತವದ ನಡುವೆ ಭಾರತ ಸರಕಾರವು ಒಂದು ಸಮಗ್ರ ಚಿತ್ರಣವನ್ನು ಇಟ್ಟುಕೊಳ್ಳದೇ, ಸಿಕ್ಕಾಪಟ್ಟೆ ನೀರು ಬೇಡುವ ಹಲವು ದೋಣಿಗಳಿಗೆ ಏಕಕಾಲಕ್ಕೆ ಕಾಲಿಟ್ಟಂತಿದೆ. ನಮ್ಮ ದಿನಬಳಕೆಯ ನೀರು ಮಾತ್ರವಲ್ಲದೆ, ಕೃಷಿ ಬಳಕೆ, ಸಾಂಪ್ರದಾಯಿಕ ಕೈಗಾರಿಕಾ ಬಳಕೆಯ ನೀರಿಗೇ ದೇಶದ ಹಲವೆಡೆ ತತ್ವಾರ ಇದೆ. ಅದರ ನಡುವೆ, ನೀರು ಅತಿಯಾಗಿ ಬೇಕಾಗುವ ಡೇಟಾ ಸೆಂಟರುಗಳನ್ನು 2030ರ ಹೊತ್ತಿಗೆ 12 ಗಿಗಾವ್ಯಾಟ್ ಸಾಮರ್ಥ್ಯಕ್ಕೆ ಏರಿಸಲು ನಿರ್ಧರಿಸಲಾಗಿದೆ. ಪ್ರತೀ ಒಂದು ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್‌ಗೆ ಪ್ರತಿದಿನ 2 ಕೋಟಿ ಲೀಟರ್ ನೀರು ಅಗತ್ಯ ಇದೆ. ಈಗಾಗಲೇ ನೀರಿನ ಕೊರತೆ ಎದುರಿಸುತ್ತಿರುವ ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲೇ ಡೇಟಾಸೆಂಟರ್‌ಗಳು ಇಡಕಿರಿಯಲಿವೆ. ನವೀಕರಿಸಬಲ್ಲ ಶಕ್ತಿಮೂಲ ಎಂದು ಸರಕಾರ ಪ್ರೋತ್ಸಾಹಿಸುತ್ತಿರುವ ಕಾನ್ಸಂಟ್ರೇಟೆಡ್ ಸೋಲಾರ್ ಪವರ್ ಫಾರ್ಮ್ ಗಳಲ್ಲಿ ಪ್ರತೀ ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 22-30 ಲಕ್ಷ ಲೀಟರ್ ನೀರು ಅಗತ್ಯವಿದೆ. ಇನ್ನು ವಾಹನಗಳ ಇಂಧನಕ್ಕಾಗಿ ಎಥೆನಾಲ್ ಉತ್ಪಾದನೆಗೆಂದು ಪ್ರೋತ್ಸಾಹ ಗಳಿಸಿಕೊಳ್ಳುತ್ತಿರುವ ಭತ್ತ, ಜೋಳ, ಕಬ್ಬಿನಂತಹ (water intensive) ಬೆಳೆಗಳಿಗೆ ಅನೂಹ್ಯ ಪ್ರಮಾಣದಲ್ಲಿ ನೀರು ಅಗತ್ಯ ಇದೆ. ನ್ಯೂಕ್ಲಿಯರ್ ವಿದ್ಯುತ್ ಪ್ರತೀ ಮೆಗಾವ್ಯಾಟ್‌ಗೆ ಅಂದಾಜು 1,500-2,700 ಲೀಟರ್ ನೀರು ಬಯಸುತ್ತದೆ.
ಏಕಕಾಲಕ್ಕೆ ಆರಂಭಗೊಂಡಿರುವ ನೀರಿನ ಈ ಎಲ್ಲ ಹೊಸ ಆವಶ್ಯಕತೆಗಳನ್ನು ಪೂರೈಸುವುದಕ್ಕೆ ಭಾರತ ಸರಕಾರದ ಬಳಿ ಸ್ಪಷ್ಟ ಚಿತ್ರಣಗಳೇನೂ ಇದ್ದಂತಿಲ್ಲ. ಸಮಸ್ಯೆ ಅದಾಗಿ ಎದುರಾಗುವ ತನಕ ಎಲ್ಲವನ್ನೂ ಸರಕಾರ ಪೀಸ್‌ಮೀಲ್ ರೂಪದಲ್ಲೇ ನೋಡಬಯಸಿದಂತೆ ಕಾಣಿಸುತ್ತಿದೆ. ಜಗತ್ತೆಲ್ಲ ಈ ಎಐ ರೇಸಿನ ಹೆಸರಿನಲ್ಲಿ ನೀರಿನ ಅತಿಬಳಕೆಯ ಬಗ್ಗೆ ಆತಂಕ ಹೊಂದಿದೆ. ಒಂದು ಅಂದಾಜಿನ ಪ್ರಕಾರ ಜಾಗತಿಕ ಎಐ ಮೂಲಸೌಕರ್ಯಗಳಿಗೆ, 2028ರ ಹೊತ್ತಿಗೆ ಪ್ರತೀ ವರ್ಷ ಒಂದು ಲಕ್ಷ ಕೋಟಿ ಗ್ಯಾಲನ್ ನೀರು ಅಗತ್ಯ ಬೀಳಬಹುದಂತೆ. ಭಾರತ ಸರಕಾರ ಈ ಬಗ್ಗೆ ಹೆಚ್ಚೇನೂ ಚಿಂತೆ ಹೊಂದಿರುವಂತಿಲ್ಲ. ಇಂತಹ ಯೋಜನೆಗಳನ್ನು ಆರಂಭಿಸುವಾಗ, ಅದು ಕಾರ್ಯಾಚರಿಸುವ ಸ್ಥಳ, ನೀರಿನ ಮರುಬಳಕೆಗೆ ವ್ಯವಸ್ಥೆ, ಇಂತಹ ಔದ್ಯಮಿಕ ಬಳಕೆಯ ವೇಳೆ ನೀರಿನ ಶೂನ್ಯ ವೇಸ್ಟೇಜ್ ಖಚಿತಪಡಿಸಿಕೊಳ್ಳುವುದು, ದೀರ್ಘಕಾಲಿಕ ಯೋಚನೆಗಳು... ಯಾವುವೂ ಇದ್ದಂತೆ ಕಾಣಿಸುತ್ತಿಲ್ಲ. ಕನಿಷ್ಠ ಪಕ್ಷ ನ್ಯಾಷನಲ್ ವಾಟರ್ ಪಾಲಿಸಿ, ಜಲಜೀವನ್ ಮಿಷನ್, ಸೆಮಿಕಾನ್ ಪಾಲಿಸಿ, ಎಥನಾಲ್ ಪಾಲಿಸಿ, ನ್ಯೂಕ್ಲಿಯರ್ ವಿದ್ಯುತ್ ಪಾಲಿಸಿಗಳ ನಡುವೆ ಸಮನ್ವಯ - ಸಮಗ್ರ ದೃಷ್ಟಿಯ ಅಪ್ರೋಚ್‌ಗಳಿವೆಯೇ ಎಂದು ಹುಡುಕಿದರೆ, ಅವೆಲ್ಲವೂ ಪ್ರತ್ಯೇಕ ದ್ವೀಪಗಳಾಗಿ ಕುಳಿತಿವೆ. ಇದೊಂದು ಗಂಭೀರ ಸನ್ನಿವೇಶ ಎಂಬುದನ್ನು ಭಾರತ ಸರಕಾರ ಅರ್ಥ ಮಾಡಿಕೊಳ್ಳಬೇಕಿದೆ. ಜೊತೆಗೆ ರಾಜ್ಯ ಸರಕಾರಗಳೂ ತಮ್ಮ ಜನರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಮುನ್ನಡೆಯಬೇಕಿದೆ. ಸೆಮಿಕಂಡಕ್ಟರ್ ಉದ್ಯಮದ ಮುಂಚೂಣಿಯಲ್ಲಿರುವ ದೇಶಗಳಲ್ಲಿ ಒಂದಾದ ತೈವಾನ್‌ಗೆ 2021ರಲ್ಲಿ ಬರದ ಸ್ಥಿತಿ ಇದ್ದಾಗ, ಅಲ್ಲಿಂದ ಕಾರ್ಯಾಚರಿಸುತ್ತಿದ್ದ ಅಮೆರಿಕದ ದೊಡ್ಡ ಚಿಪ್ ಕಂಪೆನಿ ಖಿSಒಅಯು ತಮ್ಮ ಘಟಕಗಳಿಗೆ ಲಾರಿಗಳಲ್ಲಿ ನೀರು ಸಾಗಣೆ ಮಾಡಿ ಒದಗಿಸಬೇಕಾದ ಸನ್ನಿವೇಶ ಎದುರಾಗಿತ್ತು!
90ರ ದಶಕದಲ್ಲಿ ವರ್ಲ್ಡ್ ಬ್ಯಾಂಕಿನ ಉಪಾಧ್ಯಕ್ಷ ಇಸ್ಮಾಯೀಲ್ ಸೆರಾಗೆಲ್ದಿನ್ ಅವರೊಂದು ಭವಿಷ್ಯ ನುಡಿದಿದ್ದರು. ‘‘ಈ ಶತಮಾನದ ಯುದ್ಧಗಳು ತೈಲಕ್ಕಾಗಿ ನಡೆದಿದ್ದರೆ, ಮುಂದಿನ ಶತಮಾನದ ಯುದ್ಧಗಳು ನೀರಿಗಾಗಿ ನಡೆಯಲಿವೆ.’’ ಈ ಮಾತುಗಳು ಸತ್ಯವಾಗುವ ದಿನಗಳು ಹತ್ತಿರವಿರುವಂತೆ ಕಾಣಿಸತೊಡಗಿವೆ.
ಜಗತ್ತಿನ ಕೇವಲ ಶೇ. 4 ಶುದ್ಧ ನೀರಿನ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ಭಾರತವು ಜಗತ್ತಿನ ಶೇ. 18 ಜನಸಂಖ್ಯೆಯನ್ನು ಹೊಂದಿದೆ. ಭಾರತ ಸರಕಾರವು ಜಲ ಸಂರಕ್ಷಣೆ (ಮಾಲಿನ್ಯ ಪ್ರತಿಬಂಧ ಮತ್ತು ನಿಯಂತ್ರಣ) ಕಾಯ್ದೆ 1974ನ್ನು ಜಾರಿಗೆ ತಂದು, ನದಿನೀರು ಮಲಿನಗೊಳಿಸುವುದನ್ನು ತಡೆಯುವ, ಕೈಗಾರಿಕೆಗಳು ನೀರನ್ನು ಮರುಬಳಸುವುದನ್ನು ಪ್ರೋತ್ಸಾಹಿಸುವ ಕ್ರಮಗಳನ್ನು ಕೈಗೊಂಡಿದೆ. 1987ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಜಲನೀತಿಯನ್ನು ರೂಪಿಸಿ, ನೀರಾವರಿ ಹಾಗೂ ಕುಡಿಯುವ ನೀರಿನ ಬಳಕೆಗೆ ಚೌಕಟ್ಟುಗಳನ್ನು ರೂಪಿಸಲಾಗಿದೆ. ಮುಂದೆ 2002ರ ಜಲನೀತಿಯು ನೀರನ್ನು ವಾಣಿಜ್ಯ ಸರಕು ಎಂದು ಗುರುತಿಸಿದರೆ, 2012ರ ಜಲನೀತಿಯು ನೀರನ್ನು ಹಂಚಿಕೊಂಡು ಬಳಸಬೇಕಾದ ಸಂಪನ್ಮೂಲ ಆಗಿರುವುದರಿಂದ ಅದನ್ನು ಸಮಗ್ರವಾಗಿ ನಿರ್ವಹಿಸಬೇಕೆಂದು ಹೇಳಿತು. ಹಾಲಿ ಸರಕಾರವು ನಗರ ನೀರು ಸರಬರಾಜಿಗೆ ಅಮೃತ್ (2015), ಗ್ರಾಮೀಣ ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಜಲಜೀವನ್ ಮಿಷನ್ (2019) ಹಾಗೂ ಅಂತರ್ಜಲ ಮಟ್ಟ ಸುಧಾರಣೆಗೆ ಅಟಲ್ ಭೂಜಲ ಯೋಜನೆ (2019)ಗಳನ್ನು ಜಾರಿಗೆ ತಂದಿದೆ. ನೀರಿನ ಮಿತವ್ಯಯದ ಬಗ್ಗೆ ಒಂದು ಹಂತದ ಎಚ್ಚರ ಮೂಡಿದೆಯಾದರೂ, ರಾಜ್ಯಗಳು ಮತ್ತು ಒಕ್ಕೂಟ ಸರಕಾರದ ಮಧ್ಯೆ ಹೊಂದಾಣಿಕೆ ಇಲ್ಲದಿರುವ ಜಲನೀತಿಗಳ ಕಾರಣದಿಂದಾಗಿ (13 ರಾಜ್ಯಗಳು ತಮ್ಮದೇ ಪ್ರತ್ಯೇಕ ಜಲ ನೀತಿ ಹೊಂದಿವೆಯಂತೆ!) ಗೊಂದಲಗಳು ಸಾಕಷ್ಟಿವೆ. ರಾಜ್ಯಗಳ ನಡುವೆ ನದಿನೀರಿನ ಬಳಕೆಯಲ್ಲಿ ವಿವಾದ ಸೇರಿದಂತೆ ನೀರಿನ ಕೊರತೆ ಮೂಡಿಸುತ್ತಿರುವ ರಾಜಕೀಯ, ಸಾಮಾಜಿಕ ಒತ್ತಡಗಳು ಜನರ ದೈನಂದಿನ ಬದುಕಿನ ಮೇಲೂ ಪ್ರಭಾವ ಬೀರತೊಡಗಿವೆ.
ವಾಸ್ತವ ಹೀಗಿರುವಾಗ, ಸರಕಾರ ಹೊಸ ಯೋಜನೆಗಳಿಗೆ ಕೈ ಹಾಕುವ ವೇಳೆ ಒಂದು ಸಮಗ್ರ ಚಿತ್ರಣ ಇಲ್ಲದೆ, ಕೇವಲ ಉತ್ಸಾಹ ಮತ್ತು ಕಾರ್ಪೊರೇಟ್ ಚಿತಾವಣೆಗಳನ್ನು ನಂಬಿಕೊಂಡು ಮುಂದುವರಿದರೆ, ಅದು ಅತ್ಯಂತ ಮೂರ್ಖತನದ ಕೆಲಸ ಆಗಲಿದೆ. ನೀರಿಗೆ ಏನು ವ್ಯವಸ್ಥೆ ಎಂಬುದನ್ನು ಖಚಿತಪಡಿಸಿಕೊಳ್ಳದೆ ಯಾವುದೇ ಯೋಜನೆಗಳನ್ನು ಅಂತಿಮಗೊಳಿಸಬಾರದು ಮತ್ತು ಒಂದು ಸಮಗ್ರ ಚಿತ್ರಣವನ್ನು ಎದುರಿಟ್ಟುಕೊಂಡು ತೀರ್ಮಾನಗಳನ್ನು ತೆಗೆದುಕೊಳ್ಳಲು ಶಾಸನಾತ್ಮಕ ವ್ಯವಸ್ಥೆಗಳನ್ನು ರೂಪಿಸಲು ಇದು ಸಕಾಲ.
(ಅಂಕಣಕಾರರು ಹಿರಿಯ ಪತ್ರಕರ್ತರು ಮತ್ತು ಚಿಂತಕರು)






