‘ನಿಯಮಗಿರಿ’ ಮತ್ತು ಬದಲಾದ ‘ನಿಯಮ’ಗಿರಿ

ನಿಯಮಗಿರಿ ಎಂಬುದು ಒಡಿಶಾದ ನೈಋತ್ಯ ಭಾಗದಲ್ಲಿ ಅತ್ಯಂತ ಹಿಂದುಳಿದ ಕಾಲಾಹಾಂಡಿ ಮತ್ತು ರಾಯಗಢ ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಬೆಟ್ಟವಾಗಿದ್ದು, ಅದರ ತಪ್ಪಲಿನಲ್ಲಿ ಡೋಂಗ್ರಿಯಾ ಕೊಂಡ ಬುಡಕಟ್ಟು ಜನಾಂಗದ (ಅವರು ನಿರ್ದಿಷ್ಟವಾಗಿ ಅಳಿವಿನಂಚಿನಲ್ಲಿರುವ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ - PVTG ಸೇರಿದವರು.) ಸುಮಾರು 7,000 ಮಂದಿ ವಾಸವಾಗಿದ್ದಾರೆ. ಆ ಬೆಟ್ಟ ಅವರ ದೊರೆ ನಿಯಮರಾಜನಿಗೆ ಸೇರಿದ್ದು ಮತ್ತು ಆ ಬೆಟ್ಟವನ್ನು ನೆಲಸಮ ಮಾಡಿದರೆ ಅದು ವಿನಾಶಕವಾಗಿ ಪರಿಣಮಿಸಲಿದೆ ಎಂಬ ಧಾರ್ಮಿಕ ನಂಬಿಕೆ ಅವರದು.
ಕಾರ್ಪೊರೇಟ್ ಶನಿ ಒಮ್ಮೆ ಹೆಗಲೇರಿದರೆ, ಅದು ಮತ್ತೆ ಸುಲಭದಲ್ಲಿ ತೊಲಗುವುದಿಲ್ಲ. ದೇಶದಲ್ಲೇ ಅತ್ಯಂತ ಶ್ರೀಮಂತ ಭೂಗರ್ಭ ಸಂಪತ್ತನ್ನು ಹೊಂದಿರುವ ಒಡಿಶಾ ರಾಜ್ಯದ ಜನತೆಗೆ ಅಂತಹದೊಂದು ಅನುಭವ ಆಗತೊಡಗಿದೆ. 2005-06ರ ಆಸುಪಾಸಿನಲ್ಲಿ ಹೆಗಲೇರಿದ್ದ ಈ ಶನಿ ಮತ್ತೆ ಈಗ ಒಡಿಶಾದ ಜನತೆಯ ಹೆಗಲೇರುವ ಸನ್ನಾಹದಲ್ಲಿ ಇರುವಂತಿದೆ.
ಹೊಸ ಬೆಳವಣಿಗೆ ಏನೆಂದರೆ, ವೇದಾಂತ ಉದ್ಯಮ ಗುಂಪಿನ ಮುಖ್ಯಸ್ಥ ಅನಿಲ್ ಅಗರವಾಲ್ ಅವರು ಕಳೆದ ಶನಿವಾರ (ಸೆ. 26) ಭುವನೇಶ್ವರದಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಝಿ ಅವರನ್ನು ಭೇಟಿಮಾಡಿ, ನಿಯಮಗಿರಿ ಬಾಕ್ಸೈಟ್ ನಿಕ್ಷೇಪದ ಗಣಿಗಾರಿಕೆಗೆ ಅವಕಾಶವನ್ನು ಮರುಕಲ್ಪಿಸಬೇಕೆಂದು ಮನವಿ ಮಾಡಿದ್ದಾರಲ್ಲದೆ, ಹಾಗೆ ಮಾಡಿದಲ್ಲಿ ತಮ್ಮ ವೇದಾಂತ ಬಳಗವು ಒಂದು ಲಕ್ಷ ಕೋಟಿ ರೂ.ಗಳ ಹೂಡಿಕೆಯನ್ನು ಒಡಿಶಾದಲ್ಲಿ ಮಾಡಲಿದೆ ಎಂಬ ನಿರಾಕರಿಸಲಾಗದ ಭರವಸೆಯನ್ನು ನೀಡಿದ್ದಾರೆ. ಒಡಿಶಾ ಮುಖ್ಯಮಂತ್ರಿಯವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದಂತಿದೆ.
ದೇಶದಾದ್ಯಂತ ಗಣಿಗಾರಿಕೆಯ ಹೊಸ ಸುನಾಮಿ ಏಳುತ್ತಿರುವಾಗ ಇದರಲ್ಲೇನು ವಿಶೇಷ ಇದೆ? ಎಂಬ ಪ್ರಶ್ನೆ ಎದ್ದಿರಬಹುದು. ಹಾಗಾಗಿ, ಸ್ವಲ್ಪ ಹಳೆಯ ಚರಿತ್ರೆಯೊಂದಿಗೆ ಈ ಬೆಳವಣಿಗೆಯನ್ನು ಸಮಗ್ರವಾಗಿ ಗ್ರಹಿಸಲು ಪ್ರಯತ್ನಿಸೋಣ.
ಇದೆಲ್ಲ ಆರಂಭ ಆದದ್ದು 1997ರಲ್ಲಿ. ಅನಿವಾಸಿ ಭಾರತೀಯ ಅನಿಲ್ ಅಗರವಾಲ್ ಅವರಿಗೆ ಸೇರಿದ ಸ್ಟೆರ್ಲೈಟ್ ಇಂಡಸ್ಟ್ರೀಸ್ ಎಂಬ ಸಂಸ್ಥೆಯು ಒಡಿಶಾ ಸರಕಾರದ ಅಂಗಸಂಸ್ಥೆ ಆದ ಒಡಿಶಾ ಮೈನಿಂಗ್ ಕಾರ್ಪೊರೇಷನ್ (ಒಎಂಸಿ) ಜೊತೆ ಬಾಕ್ಸೈಟ್ ಗಣಿಗಾರಿಕೆ-ರಿಫೈನರಿ ಸ್ಥಾಪನೆಯ ತಾತ್ವಿಕ ಒಪ್ಪಂದಕ್ಕೆ ಬರುವುದರೊಂದಿಗೆ. ಮುಂದೆ 2003ರಲ್ಲಿ ಈ ಸಂಬಂಧ, ಒಡಿಶಾ ಸರಕಾರದೊಂದಿಗೆ ಒoU ಆಗಿ, ರಿಫೈನರಿ ನಿರ್ಮಾಣದ ಕೆಲಸ ಆರಂಭ ಆಗುವ ಹೊತ್ತಿಗೆ (2004), ಈ ಗಣಿಗಾರಿಕೆ ವಿರುದ್ಧ ಸ್ಥಳೀಯರು ಧ್ವನಿ ಎತ್ತತೊಡಗಿದ್ದರು.
ನಿಯಮಗಿರಿ ಎಂಬುದು ಒಡಿಶಾದ ನೈಋತ್ಯ ಭಾಗದಲ್ಲಿ ಅತ್ಯಂತ ಹಿಂದುಳಿದ ಕಾಲಾಹಾಂಡಿ ಮತ್ತು ರಾಯಗಢ ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಬೆಟ್ಟವಾಗಿದ್ದು, ಅದರ ತಪ್ಪಲಿನಲ್ಲಿ ಡೋಂಗ್ರಿಯಾ ಕೊಂಡ ಬುಡಕಟ್ಟು ಜನಾಂಗದ (ಅವರು ನಿರ್ದಿಷ್ಟವಾಗಿ ಅಳಿವಿನಂಚಿನಲ್ಲಿರುವ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ - PVTG ಸೇರಿದವರು.) ಸುಮಾರು 7,000 ಮಂದಿ ವಾಸವಾಗಿದ್ದಾರೆ. ಆ ಬೆಟ್ಟ ಅವರ ದೊರೆ ನಿಯಮರಾಜನಿಗೆ ಸೇರಿದ್ದು ಮತ್ತು ಆ ಬೆಟ್ಟವನ್ನು ನೆಲಸಮ ಮಾಡಿದರೆ ಅದು ವಿನಾಶಕವಾಗಿ ಪರಿಣಮಿಸಲಿದೆ ಎಂಬ ಧಾರ್ಮಿಕ ನಂಬಿಕೆ ಅವರದು. ಆ ಬುಡಕಟ್ಟು ಸಮಾಜ, ಅಲ್ಲಿನ ಪರಿಸರದ ಜೊತೆ ಸಾಮರಸ್ಯದೊಂದಿಗೆ ತಲೆತಲಾಂತರದಿಂದ ಬದುಕಿಕೊಂಡು ಬಂದಿದೆ. ನಿಯಮಗಿರಿ ಅವರಿಗೆ ಧಾರ್ಮಿಕವಾಗಿ ಮಹತ್ವದ ಜಾಗ. ಅವರು ಈ ಬೆಟ್ಟದ ಅಗೆತಕ್ಕೆ ವಿರೋಧ ಸೂಚಿಸಿದಾಗ, ಅಲ್ಲಿನ ಪರಿಸರಪ್ರಿಯರೂ ಅವರೊಂದಿಗೆ ಧ್ವನಿ ಕೂಡಿಸಿದರು.
ಇತ್ತ ಸ್ಟೆರ್ಲೈಟ್ ಸಂಸ್ಥೆ, ಈ ನಿಯಮಗಿರಿಯಲ್ಲಿರುವ ಬಾಕ್ಸೈಟ್ ನಂಬಿ, ಅಲ್ಲೇ ಬೆಟ್ಟದ ತಪ್ಪಲಿನಲ್ಲಿರುವ ಲಾಂಜಿಗಢದಲ್ಲಿ ವಾರ್ಷಿಕ 50 ಲಕ್ಷ ಟನ್ ಸಂಸ್ಕರಣೆ ಸಾಮರ್ಥ್ಯದ (5PAMT) ಬಾಕ್ಸೈಟ್ ರಿಫೈನರಿಯನ್ನು ಸ್ಥಾಪಿಸಿತು. ಈ ರಿಫೈನರಿಯು ಭಾರತದ ಅತಿದೊಡ್ಡ ರಿಫೈನರಿ ಮಾತ್ರವಲ್ಲದೇ ಚೀನಾದಿಂದ ಹೊರಗೆ ಜಗತ್ತಿನ ಎರಡನೇ ಅತಿದೊಡ್ಡ ರಿಫೈನರಿ ಕೂಡ. ನಿಯಮಗಿರಿ ಬೆಟ್ಟಗಳಲ್ಲಿ ಅಂದಾಜು 8-9 ಕೋಟಿ ಟನ್ ಬಾಕ್ಸೈಟ್ ನಿಕ್ಷೇಪ ಇದೆ ಎಂದು ಅಂದಾಜಿಸಲಾಗಿದೆ. ಅದನ್ನು ಅಲ್ಯುಮಿನಾ ಮತ್ತು ಅಲ್ಯುಮೀನಿಯಂ ಉತ್ಪಾದನೆಗೆ ಬಳಸಲಾಗುತ್ತದೆ.
ಈ ಗಣಿಗಾರಿಕೆಯ ವಿರುದ್ಧ ಧ್ವನಿ ತಾರಕಕ್ಕೇರತೊಡಗಿದಾಗ, ಅಂದಿನ ಕೇಂದ್ರ ಸರಕಾರ ಅಲ್ಲಿಗೆ ಪರಿಶೀಲನಾ ಸಮಿತಿಯನ್ನು ಕಳುಹಿಸಿತು. ಸಮಿತಿಯ ವರದಿಗಳ ಆಧಾರದಲ್ಲಿ ಸ್ಟೆರ್ಲೈಟ್ ಸಂಸ್ಥೆಗೆ ನೀಡಿದ್ದ ಗಣಿಗಾರಿಕೆ ಅನುಮತಿ ರದ್ದಾಯಿತು. ಆ ಸಂಸ್ಥೆ ಹೈಕೋರ್ಟು ಮತ್ತು ಆ ಬಳಿಕ ಸುಪ್ರೀಂಕೋರ್ಟು ಮೆಟ್ಟಿಲೇರಿತು. ಸುಪ್ರೀಂಕೋರ್ಟು 2013ರಲ್ಲಿ (Orissa Mining Corporation vs. Ministry of Environment & Forests) ತೀರ್ಪು ನೀಡಿ, ಅಲ್ಲಿನ ಗಣಿಗಾರಿಕೆಯು ಅರಣ್ಯ ಹಕ್ಕುಗಳ ಕಾಯ್ದೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುತ್ತದೆಯೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಅಲ್ಲಿನ ಪಂಚಾಯತ್ ಮಟ್ಟದ ಗ್ರಾಮಸಭೆಗಳಿಗೆ ನೀಡಿತು. ಅಲ್ಲಿ ನಡೆದ ಎಲ್ಲ 12ಕ್ಕೆ 12 ಗ್ರಾಮಸಭೆಗಳೂ ಕೂಡ ಒಕ್ಕೊರಲಿನಿಂದ ಗಣಿಗಾರಿಕೆಯ ವಿರುದ್ಧ ನಿರ್ಣಯ ಸ್ವೀಕರಿಸಿದ ಹಿನ್ನೆಲೆಯಲ್ಲಿ, ನಿಯಮಗಿರಿ ಗಣಿಗಾರಿಕೆ ಯೋಜನೆ (2013) ಸ್ಥಗಿತಗೊಂಡಿತ್ತು.
ಒಡಿಶಾದ ಅಂದಿನ ಬಿಜೆಪಿ-ಬಿಜೆಡಿ ಸಮ್ಮಿಶ್ರ ಸರಕಾರದ ನೀತ್ಯಾತ್ಮಕ ಗೊಂದಲಗಳ ಕಾರಣಕ್ಕಾಗಿ ಸ್ಟೆರ್ಲೈಟ್ ಸಂಸ್ಥೆ ಸಾಕಷ್ಟು ಬೆಲೆ ತೆರಬೇಕಾಗಿ ಬಂತು. ನಿಯಮಗಿರಿಯನ್ನು ನಂಬಿ ಲಾಂಜಿಗಢದಲ್ಲಿ ರಿಫೈನರಿ ತೆರೆದ ಅವರು, ಅಲ್ಲಿಗೆ ಕಚ್ಚಾವಸ್ತುವನ್ನು ಈಗ ದೂರದಿಂದ ಸಾಗಣೆ ಮಾಡಿ ತರುವ ಹೆಚ್ಚುವರಿ ಹೊರೆ ಹೊರಬೇಕಾಯಿತು. ನಿಯಮಗಳನ್ನು ಪಾಲಿಸದೆ, ಸ್ಥಳೀಯಾಡಳಿತ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನೀಡಿದ್ದ ಗಣಿಗಾರಿಕೆ ಅನುಮತಿಯನ್ನು ಒಂಭತ್ತು ವರ್ಷಗಳ ಬಳಿಕ ಹಿಂದೆಗೆದುಕೊಳ್ಳಲಾಗಿತ್ತು. ಈ ನಡುವೆ, ಸ್ಟರ್ಲೈಟ್ ಇಂಡಸ್ಟ್ರೀಸ್ 2015ರ ಎಪ್ರಿಲ್‌ನಲ್ಲಿ ವೇದಾಂತ ಲಿಮಿಟೆಡ್ ಎಂಬ ಹೊಸ ಹೆಸರಿನೊಂದಿಗೆ ಕಾರ್ಯಾಚರಣೆ ಆರಂಭಿಸಿದೆ. ಅವರಿಗೆ ಈಗಾಗಲೇ ರಾಯಗಢ ಜಿಲ್ಲೆಯ ಸಿಜಿಮಾಲಿ ಮತ್ತು ಕಾಲಾಹಾಂಡಿಯ ಕಾರ್ಲಾಪಾತ್ ಗಣಿಗಳ ಬಾಕ್ಸೈಟ್ ಗಣಿಗಾರಿಕೆ ಗುತ್ತಿಗೆ ಸಿಕ್ಕಿದೆ.
ವೇದಾಂತ ಮುಖ್ಯಸ್ಥರು ಮೊನ್ನೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಬಳಿಕ, ನಿಯಮಗಿರಿಯನ್ನು ತಕ್ಷಣ ಗಣಿಗಾರಿಕೆಗೆ ತೆರೆಯುವ ಬಗ್ಗೆ ಮತ್ತು ಅಲ್ಲಿನ ಬುಡಕಟ್ಟು ನಿವಾಸಿಗಳಿಗೆ ಉದ್ಯೋಗಾವಕಾಶ ಒದಗಿಸುವ ಮೂಲಕ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಅವರನ್ನು ಒಳಗೊಳ್ಳುವ ಬಗ್ಗೆ ಚರ್ಚಿಸಲಾಯಿತು ಎಂದಿದ್ದಾರೆ. ಸರಕಾರ ಎಲ್ಲ ಅಗತ್ಯ ಅನುಮತಿಗಳನ್ನು ಒದಗಿಸುವ ಭರವಸೆ ನೀಡಿದೆ ಎಂದು ಅನಿಲ್ ಅಗರವಾಲ್ ಹೇಳಿಕೊಂಡಿದ್ದಾರೆ.
ಆದರೆ, ಈ ಬೆಳವಣಿಗೆಗೆ ನಿಯಮಗಿರಿಯ ಬುಡಕಟ್ಟು ಸಮುದಾಯಗಳವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘‘ಅದು ಕೇವಲ ಗುಡ್ಡ ಅಲ್ಲ. ನಮ್ಮ ಜೀವನದ ಮೂಲ ಮತ್ತು ಪವಿತ್ರ ಜಾಗ. ನಾವು ಶೀಘ್ರವೇ ಸಭೆ ಕರೆದು, ನಮ್ಮ ವಿರೋಧ ವ್ಯಕ್ತಪಡಿಸಲಿದ್ದೇವೆ’’ ಎಂದು ನಿಯಮಗಿರಿ ಸುರಕ್ಷಾ ಮಂಚ್‌ನ ಹಿರಿಯ ಸದಸ್ಯ ಕೃಷ್ಣಾ ಸಿಕಾಕಾ ಹೇಳಿದ್ದಾರೆ. ನಿಯಮಗಿರಿಯಲ್ಲಿ ಜನರನ್ನು ಒಡೆದು, ಗಣಿಗಾರಿಕೆಗೆ ಪರ ಇರುವವರ ವೇದಿಕೆಗಳನ್ನು ರೂಪಿಸಲಾಗುತ್ತಿದೆ ಮತ್ತು ಸುರಕ್ಷಾ ಮಂಚ್ ನಾಯಕರನ್ನು ಬಂಧಿಸಲಾಗುತ್ತಿದೆ. ಆದರೆ ನಾವು, ಯಾವುದೇ ಬೆಲೆ ತೆತ್ತು ನಮ್ಮ ಬೆಟ್ಟವನ್ನು ರಕ್ಷಿಸಿಕೊಳ್ಳುತ್ತೇವೆಂದು ಅಲ್ಲಿನ ಜನ ಹೇಳುತ್ತಿದ್ದಾರೆ.
ಭಾರತ ಸರಕಾರವು ಗಣಿಗಾರಿಕೆ ವಿಚಾರದಲ್ಲಿ, ರಾಷ್ಟ್ರೀಯ ಕ್ರಿಟಿಕಲ್ ಮಿನರಲ್ ಮಿಷನ್ (NCMM)ಸ್ಥಾಪಿಸಿದ್ದು, ಗಣಿ ಕಾಯ್ದೆಗೆ (MMDR Act) ಸಮಗ್ರ ಬದಲಾವಣೆಗಳನ್ನು ಮಾಡುವ ಮೂಲಕ ತನ್ನ ಹಾದಿಗಳನ್ನು ಸುಗಮಗೊಳಿಸಿಕೊಂಡಿದೆ. ಹಾಗಾಗಿ, ಒಡಿಶಾದಲ್ಲಿ ಆಟದ ‘ನಿಯಮಗಳು’ ಬದಲಾಗಿರುವ ಹಿನ್ನೆಲೆಯಲ್ಲಿ ಈ ಬಾರಿ, ನಿಯಮಗಿರಿಯ ಜನಸಮುದಾಯಗಳು ಟ್ರಿಪಲ್ ಇಂಜಿನ್ (ಕೇಂದ್ರ, ರಾಜ್ಯ, ಕಾರ್ಪೊರೇಟ್) ಒತ್ತಡವನ್ನು ಎದುರಿಸಬೇಕಾಗಿರುವುದು ಅನಿವಾರ್ಯ. ಇದು ಎಲ್ಲಿಗೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಧಾರ್ಮಿಕ ನಂಬಿಕೆಗಳ ಪ್ರಶ್ನೆ ಬಂದಾಗ ಸಾಮಾನ್ಯವಾಗಿ ಹಾಲಿ ಪ್ರಭುತ್ವವು ಅದರ ಪರ ನಿಂತಿರುವ ಹಲವು ಉದಾಹರಣೆಗಳಿವೆ. ಈಗ ಅಂತಹದೇ ಧಾರ್ಮಿಕ ನಂಬಿಕೆಗಳ ಪ್ರಶ್ನೆಯನ್ನು ಮುಂದಿಟ್ಟುಕೊಂಡು, ದುರ್ಬಲ ಆದಿವಾಸಿ ಬುಡಕಟ್ಟು ಸಮುದಾಯವೊಂದು ಪವಿತ್ರ ನಿಯಮಗಿರಿ ಬೆಟ್ಟವನ್ನು ಉಳಿಸಿಕೊಳ್ಳಲು ಹೋರಾಟ ಆರಂಭಿಸುತ್ತಿದೆ. ಭಾರತ ಸರಕಾರ ಈಗ ಈ ಹೋರಾಟವನ್ನು ಹತ್ತಿಕ್ಕುವ ಮೂಲಕ ತನ್ನ ‘ಆನಿ’ಗಳಿಗೆ ಆ ಪವಿತ್ರ ಬೆಟ್ಟವನ್ನು ಬಗೆದು ಖನಿಜ ಹೊರತೆಗೆಯಲು ಅವಕಾಶ ತೆರೆಯಲಿದೆಯೇ ಅಥವಾ ಬುಡಕಟ್ಟು ಸಮುದಾಯವೊಂದರ ಧಾರ್ಮಿಕ ನಂಬಿಕೆಗಳಿಗೆ ಬೆಂಬಲವಾಗಿ ನಿಲ್ಲಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ, ನಿಯಮಗಿರಿ ಬಗೆತ ಶುರುವಾಗುವ ಸಾಧ್ಯತೆಗಳೇ ಹೆಚ್ಚು ಅನ್ನಿಸುತ್ತದೆ.
ಇದಕ್ಕೆ ಒಂದು ಸ್ಥಳೀಯ ಉದಾಹರಣೆಯನ್ನು ಬೇಕಿದ್ದರೆ ಕೊಡಬಹುದು. ಆರೇಳು ವರ್ಷಗಳ ಹಿಂದೆ ಮಲ್ಪೆಗೆ ‘ಮರೀನಾ’ ಮಂಜೂರಾಗಿತ್ತು. ವಿಲಾಸಿ ಹಡಗುಗಳು ಬಂದಿಳಿಯುವ ತಾಣವಾಗಿ ಮಲ್ಪೆಯನ್ನು ಅಭಿವೃದ್ಧಿ ಮಾಡುವ ಉದ್ದೇಶ ಸರಕಾರಗಳಿಗಿತ್ತು. ಆದರೆ, ಅದರಿಂದ ಸ್ಥಳೀಯ ನಿವಾಸಿಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗಲಿದೆ ಎಂಬ ತಮ್ಮದೇ ಪಕ್ಷದ ಸಮರ್ಥಕರ ವಿರೋಧಕ್ಕೆ ಮಣಿದ ಸರಕಾರವು, ಈ ಮರೀನಾವನ್ನು ಮಲ್ಪೆಯಿಂದ ಶಿರೂರಿಗೆ ವರ್ಗಾಯಿಸಿತ್ತು. ಆದರೆ ಇತ್ತೀಚೆಗೆ ಸರಕಾರಿ ವಲಯಗಳಲ್ಲಿ ‘ಕ್ರೂಸ್ ಶಿಪ್’ ಬಂದಿಳಿಯಲು ಮಲ್ಪೆ ಬಂದರನ್ನು ಅಭಿವೃದ್ಧಿಪಡಿಸುವ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ, ಆ ಯೋಜನೆಯನ್ನು ವಿರೋಧಿಸಿದವರು ಈಗ ಆ ಬಗ್ಗೆ ಸ್ವರ ಎತ್ತುತ್ತಿರುವುದು ಕೇಳಿಸುತ್ತಿಲ್ಲ. ಮರೀನಾ ಎಂದರೆ ಅಪಥ್ಯವಾದದ್ದು, ಕ್ರೂಸ್ ಶಿಪ್ ಎಂದಾಗ ಹೇಗೆ ಪಥ್ಯವಾಗಲಿದೆ? ಎಂಬ ಪ್ರಶ್ನೆ ಎದ್ದರೆ ತಪ್ಪಲ್ಲ. ಒಡಿಶಾದಲ್ಲಿ ಇರುವ ಇಂತಹದೇ ಧಾರ್ಮಿಕ ನಂಬಿಕೆಯ ಪ್ರಶ್ನೆಗೆ ಇಂತಹದೇ ಉತ್ತರ ಕಂಡುಕೊಳ್ಳುವ ಮೂಲಕ ‘ನಿಯಮರಾಜನ ನಿಯಮಗಿರಿ’ ಇತಿಹಾಸಕ್ಕೆ ಸಂದುಹೋದರೆ ಅಚ್ಚರಿ ಇಲ್ಲ.
(ಅಂಕಣಕಾರರು ಹಿರಿಯ ಪತ್ರಕರ್ತರು ಮತ್ತು ಚಿಂತಕರು)






