ಗ್ಯಾಸ್ ಇಲ್ವಾ?....ಇಂಡಕ್ಷನ್ ಪ್ಲೇಟ್ ತಗೊಂಡ್‌ಬಿಡಿ

ದೇಶದಲ್ಲಿ ತಿಂಗಳಿಗೆ 1,000-2,000 ಯೂನಿಟ್‌ಗಳಷ್ಟೇ ಮಾರಾಟ ಇದ್ದ ಇಂಡಕ್ಷನ್ ಪ್ಲೇಟ್‌ಗಳು ಈಗ ಏಕಾಏಕಿ, ದಿನಕ್ಕೆ ಎರಡು ಲಕ್ಷಕ್ಕೂ ಮಿಕ್ಕಿ ಯೂನಿಟ್‌ಗಳಷ್ಟು ಪ್ರಮಾಣದಲ್ಲಿ ಮಾರಾಟ ಆಗತೊಡಗಿವೆಯಂತೆ. ಬೇಸಿಕ್
ಮಾಡೆಲ್‌ಗೆ ಅಂದಾಜು 1,800-2,000 ರೂ.ಗಳ ಬೆಲೆ ಇದ್ದದ್ದು, ಈಗ ಕಾಳಸಂತೆಯಲ್ಲಿ ಹಲವು ಪಟ್ಟು ಹೆಚ್ಚು ಬೆಲೆಯಲ್ಲಿ ಮಾರಾಟ ಆಗುತ್ತಿದೆ.
ಆಪತ್ತಿನ ಕಾಲದಲ್ಲಿ ಒಂದು ಸರಕಾರ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದು, ಆ ಸರಕಾರದಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವ ನಾಯಕತ್ವದ ಅಥವಾ ಆ ನಾಯಕತ್ವಕ್ಕೆ ಸಲಹೆ ನೀಡುವ ಥಿಂಕ್ ಟ್ಯಾಂಕ್‌ನ ಬುದ್ಧಿ ಸಾಮರ್ಥ್ಯ, ದೂರದೃಷ್ಟಿ, ಸನ್ನಿವೇಶದ ಸಮಗ್ರ ಗೃಹಿಕೆ... ಇತ್ಯಾದಿ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಈ ಪ್ರಕ್ರಿಯೆಯಲ್ಲಿ ‘‘ಗ್ಯಾಲರಿಯಲ್ಲಿ ಕುಳಿತವರ ಬೇಡಿಕೆಗಳನ್ನು ಮನ್ನಿಸಿ ಸಿಕ್ಸರ್ ಹೊಡೆಯುವ’’ ಆಟಕ್ಕೆ ಜಾಗವೇ ಇಲ್ಲ; ಇರಬಾರದು. ಈ ಗ್ಯಾಲರಿ ಖುಷಿಪಡಿಸುವ ಆಟ ಪುನರಾವರ್ತಿಸತೊಡಗಿದರೆ, ಆಗಿರುವ ಲೋಪಗಳಿಂದ ಕಲ್ಲಿಯುವುದಕ್ಕೇನೂ ಉಳಿದಿಲ್ಲ ಎಂಬ ಮನೋಸ್ಥಿತಿ ಬಂದೊದಗಿದರೆ, ಅದು ಆತಂಕದ ಸ್ಥಿತಿ. ಆಗ, ಅಲ್ಲಿ ಗ್ಯಾಲರಿಯಲ್ಲಿ ಕುಳಿತಿರುವವರು ಯಾರು? ಎಂದು ಗುರುತಿಸಿಕೊಳ್ಳುವುದು ಅಗತ್ಯ.
ಪಶ್ಚಿಮ ಏಶ್ಯ ಯುದ್ಧ ಸನ್ನಿವೇಶದ ಅಡ್ಡ ಪರಿಣಾಮಗಳನ್ನು ತಗ್ಗಿಸಿಕೊಳ್ಳುವುದಕ್ಕೋಸ್ಕರ ಭಾರತ ಸರಕಾರವು ದೇಶದ ಅಡುಗೆಮನೆಗಳಲ್ಲಿ ವಿದ್ಯುತ್ ಚಾಲಿತ ಅಡುಗೆಗೆ (ಇಂಡಕ್ಷನ್ ಪ್ಲೇಟ್) ಪ್ರೋತ್ಸಾಹ ನೀಡಲು ತೀರ್ಮಾನಿಸಿದೆ ಮತ್ತು ಅದಕ್ಕಾಗಿ, ಬಡವರು ಮತ್ತು ದುರ್ಬಲರಿಗೆ ಶೂನ್ಯ ಬಡ್ಡಿ ದರದಲ್ಲಿ ಮಾಸಿಕ ಕಂತಿನ ಮೇಲೆ ಇಂಡಕ್ಷನ್ ಪ್ಲೇಟ್‌ಗಳನ್ನು ಒದಗಿಸುವ ಯೋಚನೆ ಆರಂಭಗೊಂಡಿದೆಯಂತೆ; ಅದಕ್ಕಾಗಿ ಸರಕಾರ ಈಗಾಗಲೇ ವಿಶ್ವ ಬ್ಯಾಂಕ್, ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ಗಳ ಜೊತೆ ಮಾತುಕತೆಗಳನ್ನು ಆರಂಭಿಸಿದೆಯಂತೆ. ಬಲ್ಲ ಮೂಲಗಳನ್ನು ಉಲ್ಲೇಖಿಸಿ, ‘ದಿ ಮಿಂಟ್’ ಪತ್ರಿಕೆ ಈ ಬಗ್ಗೆ ವರದಿ (ಎಪ್ರಿಲ್ 07) ಮಾಡಿತ್ತು.
ದೇಶದಲ್ಲಿ ತಿಂಗಳಿಗೆ 1,000-2,000 ಯೂನಿಟ್‌ಗಳಷ್ಟೇ ಮಾರಾಟ ಇದ್ದ ಇಂಡಕ್ಷನ್ ಪ್ಲೇಟ್‌ಗಳು ಈಗ ಏಕಾಏಕಿ, ದಿನಕ್ಕೆ ಎರಡು ಲಕ್ಷಕ್ಕೂ ಮಿಕ್ಕಿ ಯೂನಿಟ್‌ಗಳಷ್ಟು ಪ್ರಮಾಣದಲ್ಲಿ ಮಾರಾಟ ಆಗತೊಡಗಿವೆಯಂತೆ. ಬೇಸಿಕ್ ಮಾಡೆಲ್‌ಗೆ ಅಂದಾಜು 1,800-2,000ರೂ.ಗಳ ಬೆಲೆ ಇದ್ದದ್ದು, ಈಗ ಕಾಳಸಂತೆಯಲ್ಲಿ ಹಲವು ಪಟ್ಟು ಹೆಚ್ಚು ಬೆಲೆಯಲ್ಲಿ ಮಾರಾಟ ಆಗುತ್ತಿದೆ. ಗಮನಾರ್ಹ ಸಂಗತಿ ಎಂದರೆ, ಈ ಇಂಡಕ್ಷನ್ ಪ್ಲೇಟ್‌ಗಳು ಬಹುತೇಕ ಚೀನಾದಲ್ಲೇ ತಯಾರಾಗಿ ಬರುವಂತಹವು ಅಥವಾ ಬಹುತೇಕ ಶೇ. 60ರಷ್ಟು ಬಿಡಿಭಾಗಗಳು ಚೀನಾದಿಂದ ಆಮದಾಗಿ, ಇಲ್ಲಿ ಅಸೆಂಬ್ಲಿ ಮಾಡಿಸಿಕೊಂಡು, ಸ್ಥಳೀಯ ಬ್ರ್ಯಾಂಡ್ ಸೀಲು ಒತ್ತಿಸಿಕೊಂಡು ಮಾರಾಟವಾಗುವಂತಹವು.
ಭಾರತ ಸರಕಾರವು ದೇಶದ ಒಳಗೆ ಇಂಧನ ಕ್ಷಮತೆಗೆ ಸಂಬಂಧಿಸಿ, ದಿಕ್ಕುದಿಸೆ ಇಲ್ಲದಂತೆ ಕಾರ್ಯಾಚರಿಸುತ್ತಿದೆ ಎಂಬುದಕ್ಕೆ ಈ ಬೆಳವಣಿಗೆ ಜೀವಂತ ಉದಾಹರಣೆ. 2023 ನವೆಂಬರ್ 2ರಂದು ವಿದ್ಯುತ್ ಮತ್ತು ನವೀಕರಿಸಬಲ್ಲ ಇಂಧನ ಇಲಾಖೆಯ ಸಚಿವರಾಗಿದ್ದ ಆರ್.ಕೆ. ಸಿಂಗ್ ಅವರು, ತಮ್ಮ ಇಲಾಖೆ ಹಾಗೂ ಸರಕಾರಿ ಸ್ವಾಮ್ಯದ ಎನರ್ಜಿ ಎಫೀಷಿಯನ್ಸಿ ಸರ್ವೀಸಸ್ ಲಿಮಿಟೆಡ್ (EESL) ವತಿಯಿಂದ ದೇಶದ ಬಡ ಕುಟುಂಬಗಳಿಗೆ 20 ಲಕ್ಷ ಇಂಡಕ್ಷನ್ ಪ್ಲೇಟ್‌ಗಳನ್ನು ವಿತರಿಸುವ ಉದ್ದೇಶವುಳ್ಳ ದಿ ನ್ಯಾಷನಲ್ ಎಫೀಷಿಯಂಟ್ ಕುಕಿಂಗ್ ಪ್ರಾಜೆಕ್ಟ್ (NECP)ಗೆ ಚಾಲನೆ ನೀಡಿದ್ದರು. (ಆಧಾರ: PIB Release ID: 1974191). ಸಾರ್ವಜನಿಕರಿಂದ ಬೇಡಿಕೆ ಇಲ್ಲದೆ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಆದರೆ ಈಗ, ಏಕಾಏಕಿ ಬೇಡಿಕೆ ಏರಿರುವ ಹಿನ್ನೆಲೆಯಲ್ಲಿ, ಸರಕಾರವು ಈ ಯೋಜನೆಗೆ ಮರುಜೀವ ನೀಡುವ ಚಿಂತನೆ ಆರಂಭಿಸಿರುವಂತಿದೆ. ಭಾರತ ತನ್ನ ಮನೆವಾರ್ತೆಯ ಇಂಧನಕ್ಕೆ ಸಂಬಂಧಿಸಿದಂತೆ ವಾರ್ಷಿಕ ಎಲ್‌ಪಿಜಿ ಬೇಡಿಕೆಯ ಶೇ. 65ರಷ್ಟಕ್ಕೆ ಆಮದನ್ನು ಅವಲಂಬಿಸಿದೆ. ಆ ಆಮದಿನ ಶೇ. 90 ಭಾಗ ಈಗ ಕದನ ಕೋಲಾಹಲ ನಡೆಯುತ್ತಿರುವ ಪಶ್ಚಿಮ ಏಶ್ಯದಿಂದಲೇ ಬರಬೇಕಿದೆ. ಯುದ್ಧದ ವಾತಾವರಣ ಮುಂದುವರಿದರೆ, ಭಾರತಕ್ಕೆ ಪರ್ಯಾಯ ಅಡುಗೆ ಇಂಧನ ಮೂಲಗಳನ್ನು ಗುರುತಿಸಿಟ್ಟುಕೊಳ್ಳುವುದು ಅನಿವಾರ್ಯ ಆಗಲಿದೆ. ಅದಕ್ಕಾಗಿಯೇ ಏಕಾಏಕಿ LNG ಬಳಕೆಗೆ ಒತ್ತಾಯ, ಸೀಮೆ ಎಣ್ಣೆಗೆ ಮರುಜೀವ, ಕಟ್ಟಿಗೆ ಬಳಕೆಗೂ ಅವಕಾಶ, ಇಂಡಕ್ಷನ್ ಪ್ಲೇಟ್‌ಗಳತ್ತ ದೃಷ್ಟಿ... ಮೊದಲಾದ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆದಿವೆ.
ಕೋವಿಡ್ ಕಾಲದ ನೆನಪುಗಳು
ಕೋವಿಡ್ ಜಗನ್ಮಾರಿಯ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯೊಂದು ಸದ್ದು ಮಾಡಿತ್ತು. ಮೇ 12, 2020ರಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು ದೇಶವು ಹೇಗೆ ಆಪತ್ತನ್ನು ಅವಕಾಶವಾಗಿ ಬದಲಿಸಿಕೊಂಡಿತು (ಆಪದಾ ಕೋ ಅವಸರ್ ಮೇ ಬದಲಾ) ಎಂದು ವಿವರಿಸಿದ್ದರು. ಕೋವಿಡ್ ಬರುವ ಮುನ್ನ ದೇಶದಲ್ಲಿ ಒಂದೇ ಒಂದು PPE ಕಿಟ್ ಅಥವಾ ಎನ್95 ಮಾಸ್ಕ್ ತಯಾರಾಗುತ್ತಿರಲಿಲ್ಲ, ಆದರೆ ಈಗ ಪ್ರತಿದಿನ ಎರಡು ಲಕ್ಷದಷ್ಟು ತಯಾರಾಗುತ್ತಿವೆ ಎಂದು ಭಾರತದ ಆತ್ಮನಿರ್ಭರತೆಯ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಧಾನಿ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಈಗ ಹಿಂದಿರುಗಿ ನೋಡಿದರೆ, ಅಂದಿನ ಆ ಬೀಸುವ ಕತ್ತಿ ತಪ್ಪಿಸಿಕೊಳ್ಳುವ ತೀರ್ಮಾನಗಳು ಆ ಬಳಿಕ ಎತ್ತ ತಲುಪಿದವು ಎಂಬುದನ್ನು ಯಾರೂ ಬಾಯಿ ಬಿಟ್ಟು ಮಾತನಾಡುತ್ತಿಲ್ಲ.
ಅಂತಹ ಕೆಲವು ಐಟಂಗಳನ್ನು ಒಂದೊಂದಾಗಿ ಗಮನಿಸಿದರೆ, ಹೆಚ್ಚಿನಂಶ ಈಗ ಈ ಚೀನಾ ಮಾಲು ಇಂಡಕ್ಷನ್ ಪ್ಲೇಟುಗಳು, ಅಂತಿಮವಾಗಿ ನಮ್ಮ ಉದ್ಯಮಗಳನ್ನು ಈ ಬೀಸುವ ಕತ್ತಿ ತಪ್ಪಿಸಿಕೊಳ್ಳುವ ತಂತ್ರದ ಹಾದಿಯಲ್ಲಿ ಎಲ್ಲಿಗೆ ತಲುಪಿಸಲಿವೆ ಎಂಬ ಚಿತ್ರಣ ಸಿಕ್ಕೀತು.
ಎಥನಾಲ್
ಕೋವಿಡ್ ಕಾಲದಲ್ಲಿ ಸ್ಯಾನಿಟೈಸರ್ ಆಗಿ ಪರಿಚಿತವಾಗಿದ್ದ ಎಥನಾಲ್ 2019ಕ್ಕಿಂತ ಮೊದಲು ಭಾರತದಲ್ಲಿ ಉತ್ಪಾದನೆ ಆಗುತ್ತಿದ್ದುದು, ವರ್ಷಕ್ಕೆ ಕೇವಲ 10 ಲಕ್ಷ ಲೀಟರ್. ಕೋವಿಡ್ ಕಾಲದಲ್ಲಿ ಅದು ದಿನಕ್ಕೆ 30 ಲಕ್ಷ ಲೀಟರ್‌ಗಳಿಗೆ ಏರಿತು. ಇದ್ದಬದ್ದ ಸಕ್ಕರೆ ಕಾರ್ಖಾನೆಗಳೆಲ್ಲ ಎಥನಾಲ್ ಉತ್ಪಾದನೆಗೆ ತೊಡಗಿಕೊಂಡವು. ಕಡೆಗೆ ಸ್ಯಾನಿಟೈಸರ್ ಬೇಡಿಕೆ ಕಡಿಮೆ ಆದಾಗ, ಉತ್ಪಾದನೆ ಹೆಚ್ಚಾಗಿರುವ ಎಥನಾಲ್ ಸಂಗ್ರಹವನ್ನು ಖರ್ಚು ಮಾಡಲು, ಅದನ್ನು ಪೆಟ್ರೋಲ್ ಜೊತೆ ಮಿಶ್ರಣ ಮಾಡುವ ಯೋಜನೆ ಚುರುಕು ಪಡೆಯಿತು. ಇದು ಇನ್ನೊಂದು ವಿಕೋಪಕ್ಕೆ ಹೋಗಿ, ಫುಡ್ ಕಾರ್ಪೊರೇಷನ್ (FCI) ಬಳಿ ಇರುವ ಅಕ್ಕಿ ದಾಸ್ತಾನನ್ನೂ ಈ ಎಥನಾಲ್ ಉತ್ಪಾದನೆಗೆ ಬಳಸಲಾರಂಭಿಸಲಾಯಿತು. (ರಾಜ್ಯಸಭೆಯ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2848, ದಿನಾಂಕ 18-08-2025). ಅತಿಯಾಗಿ ನೀರು ಬಳಸಿ ಬೆಳೆಯುವ ಅಕ್ಕಿ, ಈಗ ಮನುಷ್ಯರ ಆಹಾರ ಆಗುವ ಬದಲಿಗೆ, ವಾಹನಗಳ ಪೆಟ್ರೋಲಿಗೆ ಮಿಶ್ರಣ ಆಗಿ ಬದಲಾಗಿದೆ. ಹೀಗೆ, ಒಂದು ಸಮಸ್ಯೆ ಪರಿಹರಿಸಲು ಹೊರಟ ಸರಕಾರ, ನೂರು ಸಮಸ್ಯೆಗಳನ್ನೀಗ ತಲೆಯ ಮೇಲೆ ಎಳೆದುಕೊಂಡಿದೆ.
ಎನ್95 ಮಾಸ್ಕ್
ಭಾರತದಲ್ಲಿ 2020 ಮಾರ್ಚ್ ಹೊತ್ತಿಗೆ ಉತ್ಪಾದನೆ ಆಗುತ್ತಿದ್ದುದು, ಇಲ್ಲಿನ ಬೇಡಿಕೆ ಪೂರೈಸಲು ಅಗತ್ಯವಿರುವಷ್ಟೇ, ಅಂದರೆ ತಿಂಗಳಿಗೆ ಅಂದಾಜು 20 ಲಕ್ಷ ಮಾಸ್ಕ್‌ಗಳು. ಕೋವಿಡ್ ಕಾಲದಲ್ಲಿ ದೇಶದಾದ್ಯಂತ 241 ಹೊಸ, ಆತ್ಮನಿರ್ಭರ ಮಾಸ್ಕ್ ಕಾರ್ಖಾನೆಗಳು 2021 ಮೇ ಹೊತ್ತಿಗೆ ತಿಂಗಳಿಗೆ ಮೂರು ಕೋಟಿ ಎನ್95 ಮಾಸ್ಕ್ ಉತ್ಪಾದನೆ ಮಾಡತೊಡಗಿದ್ದವು. ಈಗ ಕೋವಿಡ್ ಇಲ್ಲ. ಆರೋಗ್ಯ ವ್ಯವಸ್ಥೆಯ ಹೊರಗೆ ಮಾಸ್ಕ್ ಬಳಸುವವರಿಲ್ಲ. ರಫ್ತು ಮಾಡೋಣವೆಂದರೆ ಯಾರಿಗೂ ಬೇಡ. ಹಾಗಾಗಿ ಮಾಸ್ಕ್ ಕಾರ್ಖಾನೆ ಎಂದು ಹಣ ಹೂಡಿದವರ ಸ್ಥಿತಿ ಉಗುಳುವಂತಿಲ್ಲ-ನುಂಗುವಂತಿಲ್ಲ ಆಗಿದೆ. 2022ರ ಹೊತ್ತಿಗಾಗಲೇ ಅರ್ಧಕ್ಕರ್ಧ ಮಾಸ್ಕ್ ಕೈಗಾರಿಕೆಗಳು ನಷ್ಟದಲ್ಲಿ ಬಾಗಿಲು ಹಾಕಿಕೊಂಡಿವೆ.
PPE ಕಿಟ್
2020 ಜನವರಿ ಹೊತ್ತಿಗೆ ಭಾರತದಲ್ಲಿ, ಆಮದು ಮಾಡಿಕೊಂಡಿದ್ದ 2.75 ಲಕ್ಷ PPE ಕಿಟ್‌ಗಳು ಮಾತ್ರ ಲಭ್ಯವಿದ್ದವು. ಇಲ್ಲಿ ಉತ್ಪಾದನೆ ಇರಲಿಲ್ಲ. 2020 ಜುಲೈ ಹೊತ್ತಿಗೆ ಭಾರತದಲ್ಲಿ 109 PPE ಕಿಟ್ ತಯಾರಕ ಕಂಪೆನಿಗಳು ದಿನಕ್ಕೆ 4.5 ಲಕ್ಷ PPE ಕಿಟ್ ಉತ್ಪಾದಿಸತೊಡಗಿದ್ದವು. ಕೋವಿಡ್ ಮುಗಿದ ಬಳಿಕ, PPE ಕಿಟ್ ದೊಡ್ಡ ಪ್ರಮಾಣದ ಉತ್ಪಾದಕರು ಬೆರಳೆಣಿಕೆಯಲ್ಲಿ ಉಳಿದುಕೊಂಡಿದ್ದಾರೆ. ಬಹುತೇಕ ಎಲ್ಲ ಸಣ್ಣ ಕಾರ್ಖಾನೆಗಳು ನಷ್ಟ ಅನುಭವಿಸಿ ಬಾಗಿಲು ಮುಚ್ಚಿಕೊಂಡಿವೆ.
ತಮಾಷೆ ಎಂದರೆ, ಇವು ಮತ್ತು ಇಂತಹ ಹಲವು ಕೋವಿಡ್ ಕಾಲದ ಆಣಬೆ ಉತ್ಪಾದನೆಗಳಲ್ಲಿ ಭರಪೂರ ಲಾಭ ಮಾಡಿಕೊಂಡಿರುವುದು, ಇವಕ್ಕೆಲ್ಲ ಕಚ್ಚಾವಸ್ತುಗಳನ್ನು ಸರಬರಾಜು ಮಾಡುತ್ತಿರುವ ಚೀನಾ!
ಇಂತಹ ಸಾಲುಸಾಲು ಕೋವಿಡ್ ಕಾಲದ ಉದಾಹರಣೆಗಳನ್ನು ನೀಡುತ್ತಾ ಹೋಗಬಹುದು. ಇವೆಲ್ಲ ಕೋವಿಡ್ ಆತಂಕದ ಹೊತ್ತಿನಲ್ಲಿ ಅಗತ್ಯವಿದ್ದ ಸಂಗತಿಗಳಲ್ಲವೆ? ಇವು ಇಲ್ಲದಿದ್ದರೆ ದೇಶ ಇನ್ನಷ್ಟು ಕಂಗೆಡಬೇಕಿತ್ತಲ್ಲವೆ? ಎಂಬ ಪ್ರಶ್ನೆಗಳು ಏಳಬೇಕಾದುದು ಸಹಜ. ಆದರೆ ಒಂದು ಸರಕಾರ ತನ್ನ ಮಟ್ಟದಲ್ಲಿ ಯೋಚಿಸುವಾಗ-ಯೋಜಿಸುವಾಗ, ನಾವು ಸಾಮಾನ್ಯ ಮನುಷ್ಯರಂತೆ ನಮ್ಮ ಅಳವಿನ ವ್ಯಾಪ್ತಿಯೊಳಗೆ ಕಾರ್ಯಾಚರಿಸುವುದಿಲ್ಲ. ಪರಿಸ್ಥಿತಿಯ ಸಮಗ್ರ ಚಿತ್ರಣವನ್ನು ಗಣನೆಗೆ ತೆಗೆದುಕೊಂಡು, ಅದಕ್ಕನುಗುಣವಾಗಿ ವರ್ತಿಸುವುದು ಮತ್ತು ಆ ತೀರ್ಮಾನಗಳಲ್ಲಿ ಏನಾದರೂ ಲೋಪಗಳಿದ್ದರೆ, ಅವಕ್ಕೂ ಪರಿಹಾರದ ಹಾದಿ ತೆರೆದಿರಿಸುವುದು - ಒಂದು ಸರಕಾರದಿಂದ ಅದರ ಪ್ರಜೆಗಳು ನಿರೀಕ್ಷಿಸುವ ಕನಿಷ್ಠ ಜವಾಬ್ದಾರಿ. ಸರಕಾರ ಇಂತಹ ವಿಚಾರಗಳಲ್ಲಿ ಕರ್ತವ್ಯಲೋಪ ತೋರಿಸಿದಾಗ ಅಥವಾ ಇಂತಹ ಸನ್ನಿವೇಶಗಳಲ್ಲೂ ಖಾಸಗಿ ಲಾಭಬಡುಕತನಕ್ಕೆ ಅವಕಾಶ ತೆರೆದುಕೊಟ್ಟು, ಏನೂ ಆಗೇ ಇಲ್ಲ ಎಂಬಂತೆ ವರ್ತಿಸಿದಾಗ, ಅದು ಬೇಜವಾಬ್ದಾರಿ ಅನ್ನಿಸಿಕೊಳ್ಳುತ್ತದೆ. ಇಂತಹ ಪರಿಸ್ಥಿತಿಗಳ ಬಗ್ಗೆ ಸರಕಾರದ ಮುಖಕ್ಕೆ ಕನ್ನಡಿ ಹಿಡಿಯಬೇಕಾಗಿದ್ದ ಮಾಧ್ಯಮಗಳೂ ಈಗ ನಿಷ್ಕ್ರಿಯ. ಇಂತಹ ಸಂಗತಿಗಳನ್ನೆಲ್ಲ ಸಾರ್ವಜನಿಕರ ಗಮನ ಸೆಳೆಯದಂತೆ ಮುಚ್ಚಿಹಾಕಿರುವ ಕಾರಣದಿಂದಾಗಿ, ಯಾರೂ ಈ ಘಟನೆಗಳಿಂದ ಪಾಠ ಕಲಿಯುತ್ತಿಲ್ಲ. ಹಾಗಾಗಿಯೇ ಈಗ ಅಮೆರಿಕ-ಇಸ್ರೇಲ್-ಇರಾನ್ ಕದನದ ಹೊತ್ತಿನಲ್ಲಿ ಇಂಡಕ್ಷನ್ ಪ್ಲೇಟ್ ಉತ್ಪಾದನೆಯ ಸಾಧ್ಯತೆಗಳು ಭುಗಿಲೇಳತೊಡಗಿವೆ.
ದೇಶದಲ್ಲಿ ನೆಟ್ ಝೀರೊ ಸಾಧಿಸಲು ನವೀಕರಿಸಬಲ್ಲ ಇಂಧನ ಮೂಲಗಳು ಬೇಕು ಎನ್ನುತ್ತಲೇ, ಉಷ್ಣವಿದ್ಯುತ್ ಸ್ಥಾವರಗಳನ್ನು ಹೆಚ್ಚಿಸುತ್ತಿರುವುದು, ಯಾರದ್ದೋ ಡೇಟಾ ದಾಸ್ತಾನಿಗೆಂದು ಇಲ್ಲಿ ಇನ್ನೂ ಇಲ್ಲದ ವಿದ್ಯುತ್ತನ್ನು ನಂಬಿ ಡೇಟಾ ಸೆಂಟರುಗಳಿಗೆ ಅಬ್ಬರತಾಳ ಹಾಕುತ್ತಿರುವುದು, ಪರಮಾಣು ವಿದ್ಯುತ್ ಹೆಸರಿನಲ್ಲಿ ಮುಂಗೈಗೆ ಬೆಲ್ಲ ಹಚ್ಚಿ, ಅಪರೂಪದ ಖನಿಜಗಳ ಗಣಿಗಾರಿಕೆಗೆ ಹಾದಿ ತೆರೆಯುತ್ತಿರುವುದು, ಇದೆಲ್ಲದಕ್ಕೆ ತುರಾಯಿಯ ರೂಪದಲ್ಲಿ ವಿದ್ಯುತ್ ವಲಯದ ಖಾಸಗೀಕರಣ.... ಈ ಎಲ್ಲ ಗೊಂದಲದ ಸಿಗ್ನಲ್‌ಗಳು ತೋರಿಸುತ್ತಿರುವುದು ಗ್ಯಾಲರಿಯತ್ತಲೇ - ಗ್ಯಾಲರಿಯಲ್ಲಿ ಕುಳಿತಿರುವವರು ಅಂತಿಮವಾಗಿ ಮ್ಯಾಚು ಗೆಲ್ಲಲಿರುವ ಲಾಭಬಡುಕ ಕಾರ್ಪೊರೇಟ್‌ಗಳು.






