ಚುಚ್ಚಿದ ಸೂಜಿಯು ಬಲೂನಿನ ಗಾಳಿಯನ್ನು ಹೊರತೆಗೆಯಿತೆ?

ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು ದೇಶ ತನ್ನ ಸುಧಾರಣೆಗಳಿಗೆ ವೇಗ ನೀಡದಿದ್ದರೆ, ಈ FTAಗಳ ಲಾಭ ಪಡೆಯಲು ಸಾಧ್ಯ ಆಗುತ್ತಿಲ್ಲ ಎಂದಿರುವುದು ಮೇಲುನೋಟಕ್ಕೆ ಸರಕಾರದ ಬಲೂನಿಗೆ ಅವರು ವಾಸ್ತವದ ಸೂಜಿಯಿಂದ ಚುಚ್ಚಿದ್ದಾರೆ ಅನ್ನಿಸಬಹುದು. ಆದರೆ, ಆಳವಾಗಿ ಗಮನಿಸಿದರೆ ಈ ಬೆಳವಣಿಗೆಯು ತಳಪಾಯ ಇನ್ನೂ ಸಿದ್ಧವಿಲ್ಲದಿದ್ದರೂ ಬೃಹತ್ ಸೌಧ ನಿರ್ಮಿಸಲು ತುರ್ತು ತೋರಿಸುವ ಅಪಾಯಕಾರಿ ಆಟದಂತೆ ಕಾಣಿಸುತ್ತಿದೆ. ಈ ವಿಚಾರಗಳಲ್ಲಿ ಸಂತುಲನ-ಎಚ್ಚರಿಕೆ ಇಲ್ಲದಿದ್ದರೆ, ಭಾರತದ ಆರ್ಥಿಕತೆ ಮತ್ತಷ್ಟು ಹಳ್ಳ ಹಿಡಿಯುವ ಹಾದಿಗೆ ಹೊರಳಿದರೆ ಅಚ್ಚರಿ ಇಲ್ಲ.
ಭಾರತ ಸರಕಾರ ತನ್ನನ್ನು ದೇಶದೊಳಗೆ ಮಾರ್ಕೆಟಿಂಗ್ ಮಾಡಿಕೊಳ್ಳುವುದಕ್ಕೆ ಬಳಸುತ್ತಿರುವ ಹೊಸಹೊಸ ಪರಿಕರಗಳ ಪಟ್ಟಿಗೆ ಇತ್ತೀಚೆಗಿನ ಸೇರ್ಪಡೆ ಎಂದರೆ - ಮುಕ್ತ ಮಾರುಕಟ್ಟೆ ಒಪ್ಪಂದಗಳು (FTA). ನಮ್ಮ ಮಾರುಕಟ್ಟೆಯ ಗಾತ್ರ, ನಮ್ಮ ಆರ್ಥಿಕ ಸಾಮರ್ಥ್ಯ ಮತ್ತು 140 ಕೋಟಿ ಜನರ ಸಾಮರ್ಥ್ಯದಲ್ಲಿ ನಂಬಿಕೆಗಳನ್ನು ಜಗತ್ತು ಗುರುತಿಸಿದೆ ಎಂದು ಸರಕಾರ ತನ್ನ ಪ್ರಚಾರಪಟುಗಳ ಮೂಲಕ ಮತ್ತೆ ಮತ್ತೆ ಹೇಳಿಸುತ್ತಿದೆ. 2021ರಿಂದ ಈಚೆಗೆ ಭಾರತವು 38 ದೇಶಗಳ ಜೊತೆ, ಒಟ್ಟು 9 ಮುಕ್ತ ಮಾರುಕಟ್ಟೆ ಒಪ್ಪಂದಗಳನ್ನು ಮಾಡಿಕೊಂಡಿದೆ.
ಮಂಗಳವಾರ (ಮೇ 12) ಭಾರತೀಯ ಕೈಗಾರಿಕೆಗಳ ಮಹಾಒಕ್ಕೂಟವು (CII) ದಿಲ್ಲಿಯಲ್ಲಿ ಆಯೋಜಿಸಿದ್ದ ವಾರ್ಷಿಕ ಬ್ಯುಸಿನೆಸ್ ಸಮಿಟ್ 2026ರಲ್ಲಿ ಮಾತನಾಡಿದ ಭಾರತದ ಮುಖ್ಯ ಆರ್ಥಿಕ ಸಲಹೆಗಾರ (CEA) ವಿ. ಅನಂತ ನಾಗೇಶ್ವರನ್ ಅವರು ಮೊತ್ತಮೊದಲ ಬಾರಿಗೆ, ಸರಕಾರ ಸತತವಾಗಿ ಉಬ್ಬಿಸುತ್ತಿರುವ ಈ FTA ಬಲೂನಿಗೆ ವಾಸ್ತವದ ಸೂಜಿ ಚುಚ್ಚಿದ್ದಾರೆ. ಆದರೆ ಇದನ್ನು ನಮ್ಮ ಸರಕಾರಿ ಪ್ರಚಾರಪಟು ಮಾಧ್ಯಮಗಳು ಒಂದೋ ಗಮನಿಸಿಲ್ಲ, ಅಥವಾ ಗಮನಿಸಿಯೂ ನಿರ್ಲಕ್ಷಿಸಿವೆ. CEA ಅವರು ಹೇಳಿರುವುದು ಬಹಳ ಮಹತ್ವದ ಸಂಗತಿ.
ಮುಕ್ತ ಮಾರುಕಟ್ಟೆ ಒಪ್ಪಂದಗಳಿಗೆ ಸಹಿ ಮಾಡಿಕೊಂಡ ತಕ್ಷಣ ಅವೇನೂ ಲಾಭ ತರಲಾರವು. ಅವುಗಳನ್ನು ತಳಮಟ್ಟದಲ್ಲಿ ಸೂಕ್ತ ಶಾಸನಾತ್ಮಕ ಮಾರ್ಪಾಡುಗಳೊಂದಿಗೆ ಅನುಷ್ಠಾನಕ್ಕೆ ತಂದಾಗ ಮಾತ್ರ ಅದರ ಲಾಭ ಸಿಗಬಲ್ಲುದು ಎಂದು ನಾಗೇಶ್ವರನ್ ಹೇಳಿದ್ದಾರೆ. ಅವರು ಅಷ್ಟಕ್ಕೇ ಸುಮ್ಮನಾಗಿಲ್ಲ. ಈ FTAಗಳು ನೀಡಿರುವ ಭರವಸೆಗಳಿಗೂ ಮತ್ತು ತಳಮಟ್ಟದಲ್ಲಿರುವ ಸರಕಾರಿ ನಿಯಂತ್ರಕ ಚೌಕಟ್ಟುಗಳು ಒದಗಿಸುತ್ತಿರುವ ಅವಕಾಶಗಳಿಗೂ ಗಮನಾರ್ಹ ಅಂತರ ಇದೆ ಎಂದು ಅವರು ಎಚ್ಚರಿಸಿದ್ದಾರೆ. ಕಳೆದ ಐದಾರು ವರ್ಷಗಳಲ್ಲಿ ದೇಶ ಮಾಡಿಕೊಂಡಿರುವ ಒಂಭತ್ತು FTAಗಳು ಸರಕಾರದ ಸಕಾರಾತ್ಮಕ ನಿಲುವುಗಳ ಫಲ ಎಂಬುದರಲ್ಲಿ ಸಂಶಯ ಇಲ್ಲ. ಆದರೆ, ಮುಂದುವರಿದ ರಾಷ್ಟ್ರಗಳು ತಮ್ಮ ಕಡೆಯಿಂದ ಪ್ರತಿರೋಧ ಒಡ್ಡದೆ, ಭಾರತವನ್ನು ಸರಾಗವಾಗಿ ಮುಂದೆ ಸಾಗಲು ಅನುವು ಮಾಡಿಕೊಡಲಾರವು. ಭಾರತದ ಮುನ್ನಡೆಗೆ ದೀರ್ಘಕಾಲಿಕ ಸ್ಟ್ರಕ್ಚರಲ್ ಸುಧಾರಣೆಗಳು, ತಂತ್ರಜ್ಞಾನಕ್ಕೆ ಸಂಬಂಧಿಸಿ ಸ್ವಾವಲಂಬನೆ, ಸಮರ್ಥ ಸರಬರಾಜು ಸರಪಣಿಗಳು ಅಗತ್ಯವಿವೆ. ಇಂತಹ ಬದಲಾವಣೆಗಳನ್ನು ಇನ್ನಷ್ಟು ಮುಂದೂಡಲಾಗದು. ಹಣಕಾಸಿನ ಬಲವರ್ಧನೆ, ಮೂಲಸೌಕರ್ಯಗಳಲ್ಲಿ ಹೂಡಿಕೆ ಮತ್ತು ಹಾಲಿ ಆಗಿರುವ ಸುಧಾರಣೆಗಳ ಸಮರ್ಥ ನಿರ್ವಹಣೆಯ ಮೇಲೆ ಸುಸ್ಥಿರವಾದ ಅಭಿವೃದ್ಧಿ ಅವಲಂಬಿತವಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತವು 2021ರಲ್ಲಿ ಮಾರಿಷಸ್ ಜೊತೆ CECPA ಒಪ್ಪಂದ ಮಾಡಿಕೊಳ್ಳುವುದರೊಂದಿಗೆ ಈ ವ್ಯಾಪಾರ ಒಪ್ಪಂದಗಳ ಸರಣಿ ಆರಂಭಗೊಂಡಿತು. 2022ರ ಮೇ ತಿಂಗಳಿನಲ್ಲಿ ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ಜೊತೆ CEPA ಒಪ್ಪಂದ ಆಗಿದ್ದು, 2025ರಲ್ಲಿ 100 ಬಿಲಿಯ ಡಾಲರ್‌ಗೂ ಮಿಕ್ಕಿ ವಹಿವಾಟು ಆಗಿದೆಯಂತೆ; 2022ರ ಡಿಸೆಂಬರ್‌ನಲ್ಲಿ ಭಾರತ-ಆಸ್ಟ್ರೇಲಿಯ ನಡುವೆ ECTA ಒಪ್ಪಂದ ಆಗಿದೆ; 2024 ಮಾರ್ಚ್- 2025 ಅಕ್ಟೋಬರ್ ನಡುವೆ, ಭಾರತ-ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್‌ಗಳು ಭಾರತಕ್ಕೆ 100 ಬಿಲಿಯ ಡಾಲರ್ ವಿದೇಶೀ ನೇರ ಹೂಡಿಕೆಯ ಬದ್ಧತೆ ಸಹಿತವಾದ TEPA ಒಪ್ಪಂದಕ್ಕೆ ಸಹಿ ಹಾಕಿವೆ; 2025ರ ಜುಲೈನಲ್ಲಿ ಇಂಗ್ಲೆಂಡ್ ಮತ್ತು ಭಾರತದ ನಡುವೆ CETA ಒಪ್ಪಂದ ಆಗಿದೆ; 2025ರ ಡಿಸೆಂಬರ್‌ನಲ್ಲಿ, ಭಾರತ-ಒಮಾನ್ ನಡುವೆ CEPA ಒಪ್ಪಂದ ಆಗಿದೆ; 2026ರ ಜನವರಿಯಲ್ಲಿ ಯುರೋಪಿಯನ್ ಯೂನಿಯನ್‌ನ 27 ಸದಸ್ಯ ದೇಶಗಳ ಜೊತೆ ಎಲ್ಲ ಒಪ್ಪಂದಗಳ ತಾಯಿ ಎಂದೇ ಈಗ ಹೆಸರಾಗಿರುವ FTA ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ; 2026ರ ಫೆಬ್ರವರಿಯಲ್ಲಿ ಭಾರತ ಅಮೆರಿಕ ನಡುವೆ ಮಧ್ಯಂತರ ವಾಣಿಜ್ಯ ಚೌಕಟ್ಟು ಸಿದ್ಧಗೊಂಡಿದ್ದು, ವಾಣಿಜ್ಯ ಒಪ್ಪಂದಕ್ಕೆ ಮಾತುಕತೆಗಳು ನಡೆದಿವೆ; ಎಪ್ರಿಲ್ 2026ರಲ್ಲಿ ಭಾರತ-ನ್ಯೂಝಿಲ್ಯಾಂಡ್‌ಗಳ ನಡುವೆ FTA ಒಪ್ಪಂದಕ್ಕೆ ಸಹಿ ಆಗಿದೆ. ಇವಿಷ್ಟು ಭಾರತ ಈಗಾಗಲೇ ಸಹಿ ಹಾಕಿರುವ ಅಥವಾ ಅಂತಿಮ ಹಂತದಲ್ಲಿರುವ ಮುಕ್ತ ವ್ಯಾಪಾರ ಒಪ್ಪಂದಗಳು.
ಕಳೆದ ವಾರ ಫೆಡರೇಷನ್ ಆಫ್ ಯುರೋಪಿಯನ್ ಬ್ಯುಸಿನೆಸ್ ಇನ್ ಇಂಡಿಯಾ ಏರ್ಪಡಿಸಿದ್ದ ಸಭೆಯೊಂದರಲ್ಲಿ ಮಾತನಾಡಿದ, ಭಾರತದಲ್ಲಿ ಯುರೋಪಿಯನ್ ಯೂನಿಯನ್ ರಾಯಭಾರಿ ಆಗಿರುವ ಹರ್ವೆ ಡೆಲ್ಫಿನ್ ಅವರು, ‘ಮದರ್ ಆಫ್ ಆಲ್ ಡೀಲ್ಸ್’ ಎಂದು ಪ್ರಚಾರ ಗಿಟ್ಟಿಸಿಕೊಂಡಿರುವ ಭಾರತ-ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದದ ಅನುಷ್ಠಾನದಲ್ಲಿ ಇರುವ ಸರಕಾರಿ ಕೆಂಪುಪಟ್ಟಿಯ ಅಡಚಣೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿ, ಅವುಗಳನ್ನು ಸರಿಪಡಿಸದಿದ್ದರೆ, ಈ ಒಪ್ಪಂದ ಯಾರಿಗೂ ಲಾಭ ತರಲಾರದು ಎಂದಿದ್ದರು. ಜಟಿಲ ಆಡಳಿತಾತ್ಮಕ ಅಡ್ಡಿಗಳು, ಜಿಡುಕಿನ ಕಸ್ಟಮ್ಸ್ ಪ್ರಕ್ರಿಯೆಗಳಂತಹವು ಸುಗಮ ವ್ಯಾಪಾರಕ್ಕೆ ಅಡ್ಡಿ ಆಗಬಲ್ಲವು; FTA ಒಪ್ಪಂದದಲ್ಲಿ ಸೇವೆಗೆ ಹೊರತಾದ ಕ್ಷೇತ್ರಗಳಲ್ಲಿ ಹೂಡಿಕೆ ಉದಾರೀಕರಣದ ಬಗ್ಗೆ ಹೇಳಲಾಗಿಲ್ಲ; ಹೂಡಿಕೆದಾರರಿಗೆ ಕಾನೂನುಬದ್ಧ ಭದ್ರತೆ ಇಲ್ಲ; ಒಪ್ಪಂದದಲ್ಲಿ ಜಿಯೊಗ್ರಾಫಿಕಲ್ ಇಂಡಿಕೇಷನ್ಸ್ (ಜಿಐ) ಟ್ಯಾಗಿಂಗ್‌ನಂತಹ ನಿರ್ದಿಷ್ಟ ಕ್ಷೇತ್ರಗಳ ಬಗ್ಗೆ ಮೌನ ಇದೆ ಎಂದು ತನ್ನ ಆತಂಕಗಳನ್ನು ಡೆಲ್ಫಿನ್ ಪಟ್ಟಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಈಗ ಭಾರತದ CEA ವಿ. ನಾಗೇಶ್ವರನ್ ಅವರು ನೀಡಿರುವ ಎಚ್ಚರಿಕೆ ಮಹತ್ವದ್ದೆನ್ನಿಸುತ್ತದೆ. ಜಗತ್ತಿನ ಉದ್ದಗಲಕ್ಕೆ ಭಾರತ ವ್ಯಾಪಾರದ ಹೆಜ್ಜೆಗಳನ್ನು ಇರಿಸುವುದು ನಮ್ಮ ಆರ್ಥಿಕ ಆಕಾಂಕ್ಷೆಗಳ ದ್ಯೋತಕ ಮತ್ತು ಒಂದು ಮಾರುಕಟ್ಟೆ ಅಥವಾ ಒಂದು ಕಾರಿಡಾರ್ ಮೇಲೆ ಅವಲಂಬನೆ ತಗ್ಗಿಸಿಕೊಳ್ಳುವತ್ತ ಮಹತ್ವದ ಹೆಜ್ಜೆ. ಆದರೆ, ಈ ಒಪ್ಪಂದಗಳಿಗೆ ಸಹಿ ಹಾಕಲು ತೋರಿಸಿದ ಗಡಿಬಿಡಿಯನ್ನೇ ಅವುಗಳ ಅನುಷ್ಠಾನದಲ್ಲೂ ತೋರಿಸದಿದ್ದರೆ ಪ್ರಯೋಜನ ಇಲ್ಲ ಎಂದು ಅವರು ಸರಕಾರದ ಪ್ರಚಾರದ ಬಲೂನಿಗೆ ಸೂಜಿ ಚುಚ್ಚಿದ್ದಾರೆ.
ಈ ಒಪ್ಪಂದಗಳ ಮೂಲಕ ರೈತರ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವುದು ಸಾಧ್ಯ ಆಗಲಿದೆ, MSMEಗಳು, ಐಟಿ ಮತ್ತು ಯೋಗ ಶಿಕ್ಷಕರಂತಹ ಸೇವೆಗಳು, ಆಯುಷ್‌ನಂತಹ ಆರೋಗ್ಯ ವ್ಯವಸ್ಥೆ- ಸಾವಯುವ ಉತ್ಪನ್ನಗಳು, ಡಿಜಿಟಲ್ ಸೇವೆಗಳಿಗೆ ಹೊಸ ಅವಕಾಶಗಳು ದೊರಕಲಿವೆ ಮತ್ತು ಪಾರದರ್ಶಕವಾದ, ಸಂತುಲಿತವಾದ ಈ ಒಪ್ಪಂದಗಳನ್ನು ಆತ್ಮನಿರ್ಭರ ಭಾರತದ ಹಿತಾಸಕ್ತಿಗಳನ್ನು ಗಮನದಲ್ಲಿ ಇರಿಸಿಕೊಂಡು ಮಾಡಲಾಗಿದೆ. ಒಪ್ಪಂದದಲ್ಲಿ ದೇಶದ ರೈತರು, ಡೈರಿ ಫಾರ್ಮಿಂಗ್, ಕೃಷಿ, ಸಣ್ಣ ಉದ್ಯಮಗಳೆಲ್ಲದರ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕೆ ಸರಕಾರ ಹಿಂಜರಿದಿಲ್ಲ ಎಂದು ಸರಕಾರದ ಪ್ರಕಟಣೆಗಳು ಹೇಳುತ್ತಿವೆ. (PIB Release ID: 2236134).
ಆದರೆ, ದೇಶದ ಒಳಗಿನ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳದೆ, ಉತ್ಪನ್ನಗಳ ಗುಣಮಟ್ಟವನ್ನು ಸುಧಾರಿಸದೆ, ಸುಸ್ಥಿರ ಅಭಿವೃದ್ಧಿಯ ಜಾಗತಿಕ ವ್ಯಾಖ್ಯಾನಗಳನ್ನು ದೇಶದಲ್ಲಿ ಸಮರ್ಪಕವಾಗಿ ಅಳವಡಿಸಿಕೊಳ್ಳದೆ, ಡೇಟಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿ ವ್ಯವಸ್ಥೆಗಳಿಲ್ಲದೆ ಈ ರೀತಿಯ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಮುಂದಾದಾಗ, ಇವೆಲ್ಲ ವನ್-ವೇ ಟ್ರಾಫಿಕ್ ಆಗುವ ಸಾಧ್ಯತೆಗಳೇ ಹೆಚ್ಚು. ವಿದೇಶಗಳಿಂದ ನಮ್ಮಲ್ಲಿಗೆ ಸರಕುಗಳು-ಸೇವೆಗಳು ಬಂದು ರಾಶಿ ಬೀಳಲಿವೆಯಾದರೆ, ನಮ್ಮ ಉತ್ಪನ್ನಗಳಿಗೆ ಆ ದೇಶಗಳಲ್ಲಿ ಮಾರಾಟಕ್ಕೆ ಅಗತ್ಯವಿರುವ ಗುಣಮಟ್ಟ, ಖರೀದಿಗೆ ಅವರು ವಿಧಿಸುವ ಕಠಿಣ ಷರತ್ತುಗಳನ್ನೆಲ್ಲ ಪಾಲಿಸುವಲ್ಲಿ ಸಮಸ್ಯೆಗಳು ಎದುರಾಗಲಿವೆ. ಹೆಚ್ಚೆಂದರೆ ಕೆಲವು ಬೃಹತ್ ಆನಿ ಕಂಪೆನಿಗಳು ಇಲ್ಲಿಂದ ಕಚ್ಚಾವಸ್ತುಗಳನ್ನು ರಫ್ತು ಮಾಡುವುದು ಸಾಧ್ಯವಾಗಲಿದೆಯೇ ಹೊರತು, ಈಗಿರುವ ಮಟ್ಟಕ್ಕಿಂತ ಹೆಚ್ಚಿನ ಸರಕು-ಉತ್ಪಾದನೆಗಳ ರಫ್ತು ಸಾಧ್ಯ ಆಗದು. ಇದರಿಂದ ನಮ್ಮ ವಹಿವಾಟು ಕೊರತೆ (ಟ್ರೇಡ್ ಡೆಫಿಸಿಟ್) ಇನ್ನಷ್ಟು ಹೆಚ್ಚಬಹುದು, ನಮ್ಮ ಸಣ್ಣ ಉತ್ಪಾದನಾ ಸಂಸ್ಥೆಗಳು ಬಲಾಢ್ಯ ವಿದೇಶಿ ಕಂಪೆನಿಗಳ ಎದುರು ಅಸಮಾನ ಸ್ಪರ್ಧೆಗೆ ಇಳಿಯುವುದು ಅನಿವಾರ್ಯ ಆಗಬಹುದು, ನಮ್ಮ ಉತ್ಪನ್ನಗಳ ರಫ್ತಿಗೆ ಅವರು ತಾರಿಫ್ ಹೊರತಾದ ಬೇರೆ ಮಾರ್ಗಗಳಲ್ಲಿ (ಪರಿಸರ ಮಾಲಿನ್ಯದ ನಿಯಮಗಳು ಇತ್ಯಾದಿ) ಅಡಚಣೆ ಉಂಟುಮಾಡಬಹುದು, ದೇಶ ಸ್ವತಂತ್ರವಾಗಿ ತನ್ನ ಕೈಗಾರಿಕಾ ನೀತಿಯನ್ನು ನಿರ್ಧರಿಸುವುದೂ ಕಷ್ಟ ಆಗುವ ಸನ್ನಿವೇಶ ಎದುರಾಗಬಹುದು ಎಂಬೆಲ್ಲ ಆತಂಕಗಳು ಅಲ್ಲಲ್ಲಿ ಕಾಣಿಸುತ್ತಿವೆ.
ಈಗ ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು ದೇಶ ತನ್ನ ಸುಧಾರಣೆಗಳಿಗೆ ವೇಗ ನೀಡದಿದ್ದರೆ, ಈ FTAಗಳ ಲಾಭ ಪಡೆಯಲು ಸಾಧ್ಯ ಆಗುತ್ತಿಲ್ಲ ಎಂದಿರುವುದು ಮೇಲುನೋಟಕ್ಕೆ ಸರಕಾರದ ಬಲೂನಿಗೆ ಅವರು ವಾಸ್ತವದ ಸೂಜಿಯಿಂದ ಚುಚ್ಚಿದ್ದಾರೆ ಅನ್ನಿಸಬಹುದು. ಆದರೆ, ಆಳವಾಗಿ ಗಮನಿಸಿದರೆ ಈ ಬೆಳವಣಿಗೆಯು ತಳಪಾಯ ಇನ್ನೂ ಸಿದ್ಧವಿಲ್ಲದಿದ್ದರೂ ಬೃಹತ್ ಸೌಧ ನಿರ್ಮಿಸಲು ತುರ್ತು ತೋರಿಸುವ ಅಪಾಯಕಾರಿ ಆಟದಂತೆ ಕಾಣಿಸುತ್ತಿದೆ. ಈ ವಿಚಾರಗಳಲ್ಲಿ ಸಂತುಲನ-ಎಚ್ಚರಿಕೆ ಇಲ್ಲದಿದ್ದರೆ, ಭಾರತದ ಆರ್ಥಿಕತೆ ಮತ್ತಷ್ಟು ಹಳ್ಳ ಹಿಡಿಯುವ ಹಾದಿಗೆ ಹೊರಳಿದರೆ ಅಚ್ಚರಿ ಇಲ್ಲ.






