ಪರ ಇರುವವರಿಗೆ ಪಿಪಿಪಿ; ವಿರೋಧಕ್ಕೆ ಪೆಪ್ಪೆಪ್ಪೆ!

ದೇಶದ ಒಕ್ಕೂಟ ಸರಕಾರವು ಕರ್ನಾಟಕದಂತಹ ಸಂಪನ್ಮೂಲ ಸಹಿತ ರಾಜ್ಯಗಳಿಂದ ತೆರಿಗೆಯಾಗಿ ಶೇಖರಿಸುವ ಪ್ರತೀ ಒಂದು ರೂಪಾಯಿಗೆ, ಅಲ್ಲಿಂದ ವಾಪಸ್ ಕೊಡುತ್ತಿರುವ ಮೊತ್ತ ಕೇವಲ 14-15 ಪೈಸೆಗಳು. ಉಳಿದ 85 ಪೈಸೆಗಳನ್ನು ಕೇಂದ್ರ ಸರಕಾರ ತನ್ನ ಮನಸ್ಸಿಗೆ ಬಂದಂತೆ ಖರ್ಚು ಮಾಡುತ್ತಿದೆ ಎಂಬ ದೂರು ಕಳೆದ ಎರಡು ವರ್ಷಗಳಿಂದ ಮತ್ತೆ ಮತ್ತೆ ಕೇಳಿಬರುತ್ತಿದ್ದು, ಅದರಲ್ಲಿರುವ ವಾಸ್ತವಾಂಶಗಳ ಕಾರಣಕ್ಕೆ ಆ ಕೂಗು ಧ್ವನಿ ಪಡೆಯುತ್ತಿದೆ. ಈಗ ಪ್ರಕಟಗೊಂಡಿರುವ ಪಿಪಿಪಿ ಪೈಪ್‌ಲೈನ್ ಕೂಡ ಆ ದೂರನ್ನು ಮತ್ತಷ್ಟು ಖಚಿತಪಡಿಸಲಿದೆ.
ತಾವು ಇಂತಿಂತಹ ಸರಕಾರಿ ಆಸ್ತಿಗಳನ್ನೆಲ್ಲ ಮುಂದಿನ ಮೂರು ವರ್ಷಗಳಲ್ಲಿ (FY 2026-2028) ಜಂಟಿ ಅಭಿವೃದ್ಧಿಗೆಂದು ಪರಭಾರೆ ಮಾಡಲಿದ್ದೇವೆ, ಹಾಗಾಗಿ ಸಿದ್ಧರಾಗಿರಿ ಎಂಬ ಸೂಚನೆಯನ್ನು ಹೂಡಿಕೆದಾರರಿಗೆ ನೀಡುವುದಕ್ಕಾಗಿ, ಭಾರತ ಸರಕಾರದ ಹಣಕಾಸು ಇಲಾಖೆಯು ಈ ವಾರದ ಆದಿಯಲ್ಲಿ (ಜನವರಿ 06) ಪಬ್ಲಿಕ್ ಪ್ರೈವೇಟ್ ಪಾರ್ಟ್‌ನರ್‌ಷಿಪ್ ಯೋಜನೆಗಳ ಪೈಪ್‌ಲೈನನ್ನು ಪ್ರಕಟಿಸಿದೆ. ಮುಂದಿನ ಮೂರು ವರ್ಷಗಳಲ್ಲಿ 17ಲಕ್ಷ ಕೋಟಿ ರೂ.ಗಳಿಗೂ ಮಿಕ್ಕಿ ಮೌಲ್ಯದ ಸರಕಾರಿ ಯೋಜನೆಗಳು ಖಾಸಗಿ ಸಹಭಾಗಿತ್ವದಲ್ಲಿ ಜಾರಿಗೊಳ್ಳಲಿವೆ.
‘‘ಸಂಭಾವ್ಯ ಪಿಪಿಪಿ ಯೋಜನೆಗಳಿಗೆ ಹೂಡಿಕೆದಾರರಿಗೆ ಮತ್ತು ಡೆವಲಪರ್‌ಗಳಿಗೆ ತಮ್ಮ ಯೋಜನೆಗಳನ್ನು ರೂಪಿಸಿಕೊಳ್ಳುವಲ್ಲಿ ಮತ್ತು ಹೂಡಿಕೆಗೆ ಮಾಹಿತಿಯುತ ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ಅನುಕೂಲ ಆಗುವಂತೆ ಈ ಪೈಪ್‌ಲೈನ್ ಪ್ರಕಟಣೆಯು ಒಂದು ಮುನ್ನೋಟವನ್ನು ಒದಗಿಸುತ್ತದೆ’’ ಎಂದು ಹಣಕಾಸು ಸಚಿವಾಲಯ ಹೇಳಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಕಳೆದ ಬಜೆಟ್‌ನಲ್ಲಿ (FY26) ಮಾಡಲಾಗಿದ್ದ ಪ್ರಕಟಣೆಗೆ ಅನುಸಾರವಾಗಿ, ಕೇಂದ್ರ-ರಾಜ್ಯ ಸರಕಾರಗಳ ಪಿಪಿಪಿ ಬದ್ಧತೆಗಳನ್ನು ಸುಸೂತ್ರಗೊಳಿಸುವ ಮತ್ತು ಹೂಡಿಕೆಗಳಿಗೆ ವೇಗ ನೀಡುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದ್ದು, ಇದರ ಅಡಿಯಲ್ಲಿ ಭಾರತ ಸರಕಾರದ 13.15 ಲಕ್ಷ ಕೋಟಿ ರೂ.ಗಳ 232 ಯೋಜನೆಗಳು ಮತ್ತು ರಾಜ್ಯ ಸರಕಾರಗಳ 3.85 ಲಕ್ಷ ಕೋಟಿ ರೂ.ಗಳ 620 ಯೋಜನೆಗಳು 2028ರ ಒಳಗೆ ಕಾರ್ಯರೂಪಕ್ಕೆ ಬರಲಿವೆಯಂತೆ.
ಬರುತ್ತಿರುವ ಪಿಪಿಪಿ ಯೋಜನೆಗಳಲ್ಲಿ ಸಿಂಹಪಾಲು (8.77 ಲಕ್ಷ ಕೋಟಿ ರೂ.) ಹೆದ್ದಾರಿಗಳ ನಿರ್ಮಾಣಕ್ಕೆ. ಆ ಬಳಿಕದ್ದು ವಿದ್ಯುತ್ ಕ್ಷೇತ್ರ (3.45 ಲಕ್ಷ ಕೋಟಿ ರೂ.). ರಾಜ್ಯವಾರು ನೋಡಿದರೆ, ಕೇಂದ್ರ ಸರಕಾರದ ಊರುಗೋಲು ರಾಜ್ಯ ಆಗಿರುವ ಆಂಧ್ರಕ್ಕೆ ಸಿಂಹಪಾಲು (1.16 ಲಕ್ಷ ಕೋಟಿ ರೂ.). ನಂತರದ ಸ್ಥಾನಗಳು ತಮಿಳುನಾಡು (87,640 ಕೋಟಿ ರೂ.) ಮತ್ತು ಮಧ್ಯಪ್ರದೇಶಕ್ಕೆ (65,496 ಕೋಟಿ ರೂ.)
ಕರ್ನಾಟಕಕ್ಕೆ ಏನು?
2028ರ ತನಕ ಕರ್ನಾಟಕಕ್ಕೆ ತೆಗೆದಿರಿಸಿರುವ ಒಟ್ಟು ಪಿಪಿಪಿ ಯೋಜನೆಗಳು ಕೇವಲ ಎಂಟು ಮತ್ತು ಅವಕ್ಕೆ ಒಟ್ಟು ಹೂಡಿಕೆಯ ಪ್ರಮಾಣ ಕೇವಲ 12,374.36 ಕೋಟಿ ರೂ.ಗಳು. ದೇಶದ ಒಕ್ಕೂಟ ಸರಕಾರವು ಕರ್ನಾಟಕದಂತಹ ಸಂಪನ್ಮೂಲ ಸಹಿತ ರಾಜ್ಯಗಳಿಂದ ತೆರಿಗೆಯಾಗಿ ಶೇಖರಿಸುವ ಪ್ರತೀ ಒಂದು ರೂಪಾಯಿಗೆ, ಅಲ್ಲಿಂದ ವಾಪಸ್ ಕೊಡುತ್ತಿರುವ ಮೊತ್ತ ಕೇವಲ 14-15 ಪೈಸೆಗಳು. ಉಳಿದ 85 ಪೈಸೆಗಳನ್ನು ಕೇಂದ್ರ ಸರಕಾರ ತನ್ನ ಮನಸ್ಸಿಗೆ ಬಂದಂತೆ ಖರ್ಚು ಮಾಡುತ್ತಿದೆ ಎಂಬ ದೂರು ಕಳೆದ ಎರಡು ವರ್ಷಗಳಿಂದ ಮತ್ತೆ ಮತ್ತೆ ಕೇಳಿಬರುತ್ತಿದ್ದು, ಅದರಲ್ಲಿರುವ ವಾಸ್ತವಾಂಶಗಳ ಕಾರಣಕ್ಕೆ ಆ ಕೂಗು ಧ್ವನಿ ಪಡೆಯುತ್ತಿದೆ. ಈಗ ಪ್ರಕಟಗೊಂಡಿರುವ ಪಿಪಿಪಿ ಪೈಪ್‌ಲೈನ್ ಕೂಡ ಆ ದೂರನ್ನು ಮತ್ತಷ್ಟು ಖಚಿತಪಡಿಸಲಿದೆ. ಏಕೆಂದರೆ, ಕರ್ನಾಟಕಕ್ಕೆ ಮಂಜೂರಾಗಿರುವ 8 ಯೋಜನೆಗಳು ಒಂದೋ ಆಳುವ ಪಕ್ಷದ ಪ್ರಭಾವಿಗಳಿರುವ ಕ್ಷೇತ್ರಗಳದು, ಇಲ್ಲವೇ ಆಳುವ ಪಕ್ಷದ ಮಿತ್ರರಾಗಿರುವ ಕಾರ್ಪೊರೇಟ್ ಆನಿಗಳಿಗೆ, ಊರುಗೋಲು ರಾಜಕೀಯ ಸಹವರ್ತಿಗಳಿಗೆ ಅನುಕೂಲ ಮಾಡಿಕೊಡುವಂತಹವು. ಅವನ್ನು ಪಿಪಿಪಿ ಮೂಲಕ ಮಾಡಿಸುವುದು ಎಂದರೆ, ಆನಿಗಳಿಗೆ ವಿಶೇಷವಾಗಿ, ಆ ಕ್ಷೇತ್ರಗಳಲ್ಲಿ ಮುಕ್ತಹಸ್ತ ನೀಡಿದಂತೆ!
ಕರ್ನಾಟಕಕ್ಕೆ ಉದ್ದೇಶಿತವಾಗಿರುವ ಎಂಟು ಯೋಜನೆಗಳ ಪಟ್ಟಿ ಕೆಳಗಿದೆ ನೋಡಿ:
1. ಕಾರ್ಕಳದಲ್ಲಿ ಟೆಕ್ಸ್‌ಟೈಲ್ ಪಾರ್ಕ್ (2,797 ಕೋಟಿ ರೂ.)
2. ಮಂಡ್ಯದಲ್ಲಿ ವೃಂದಾವನ ಗಾರ್ಡನ್ ಅನ್ನು ಅಮ್ಯೂಸ್‌ಮೆಂಟ್ ಪಾರ್ಕ್ ಆಗಿ ಅಭಿವೃದ್ಧಿ (2,663.74 ಕೋಟಿ ರೂ.)
3. ಗದಗದಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕ (8.73 ಕೋಟಿ ರೂ.)
4. ಕಾರವಾರ, ಹಳೆಮಂಗಳೂರು, ಮಲ್ಪೆ ಬಂದರುಗಳ ನಿರ್ವಹಣೆಗೆ, ಖಔಒಖಿ ನೆಲೆಯಲ್ಲಿ (ಅಂದರೆ ರಿಪೇರಿ, ಕಾರ್ಯಾಚರಣೆ, ನಿರ್ವಹಣೆ, ವರ್ಗಾವಣೆ - ಶರತ್ತಿನ ಮೇರೆಗೆ) ನಿರ್ವಾಹಕರ ನೇಮಕ: (40.12 ಕೋಟಿ ರೂ.)
5. ಉತ್ತರಕನ್ನಡದ ಮಂಕಿ ಬಂದರು ಅಭಿವೃದ್ಧಿ (3,433 ಕೋಟಿ ರೂ.)
6. ಮೈಸೂರು-ಹಾಸನ- ಶ್ರೀರಂಗಪಟ್ಟಣ-ಬೇಲೂರು-ಹಳೆಬೀಡು ಪ್ರವಾಸೋದ್ಯಮ ಸರ್ಕ್ಯೂಟ್ ಅಭಿವೃದ್ಧಿ (231.77 ಕೋಟಿ ರೂ.)
7. ಬೆಂಗಳೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಮೀಟರ್ ವ್ಯವಸ್ಥೆ (200 ಕೋಟಿ ರೂ.)
8. ಅರ್ಕಾವತಿ ನದಿ ಪುನರುತ್ಥಾನ, ತಿಪ್ಪಗೊಂಡನಹಳ್ಳಿ ತನಕ (3,000 ಕೋಟಿ ರೂ.)
ಈ ಎಂಟೂ ಯೋಜನೆಗಳನ್ನು ಸ್ವಲ್ಪ ಆಳವಾಗಿ ಗಮನಿಸಿದರೆ, ಇವುಗಳ ಉದ್ದೇಶ ಏನೆಂಬುದು ಅರ್ಥ ಆಗುತ್ತದೆ.
ಒಕ್ಕೂಟ ವ್ಯವಸ್ಥೆಯ ಆರ್ಥಿಕ ಸಮತೋಲನ ಮರುಪರಿಶೀಲನೆ ಅಗತ್ಯವಿದೆ.
ಈ ಎಲ್ಲ ಬೆಳವಣಿಗೆಗಳು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ-ರಾಜ್ಯಗಳ ನಡುವಿನ ಕೊಡುಕೊಳ್ಳುವಿಕೆ ಸಂಬಂಧ ಗಳನ್ನು ಮರುಪರಿಶೀಲಿಸಬೇಕಾಗಿರುವ ಅಗತ್ಯವನ್ನು ಒತ್ತಿ ಹೇಳುತ್ತಿವೆ. ಸದ್ಯ ಇರುವ ಸ್ಥಿತಿಯಲ್ಲೇ ಮುಂದುವರಿದರೆ ಇನ್ನು 10-15 ವರ್ಷಗಳಲ್ಲಿ ರಾಜ್ಯಗಳು ಭಿಕ್ಷಾಪಾತ್ರೆ ಹಿಡಿದು ಕೇಂದ್ರ ಸರಕಾರದ ಎದುರು ಅಥವಾ ರಾಜ್ಯದ ಸಂಪನ್ಮೂಲಗಳ ಕಡಿವಾಣವನ್ನು ತಮ್ಮ ಮುಷ್ಟಿಯಲ್ಲಿ ಇರಿಸಿಕೊಂಡಿರುವ ಕಾರ್ಪೊರೇಟ್ ಆನಿಗಳ ಎದುರು ಸೆರಗೊಡ್ಡಿ ನಿಲ್ಲುವುದು ಅನಿವಾರ್ಯ ಆಗಲಿದೆ.
ಈ ವಾದವನ್ನು ಸಮರ್ಥಿಸುವುದಕ್ಕೆ 2023-24ರ PRS ವಿಶ್ಲೇಷಣೆ ಆಧರಿತ ಕೆಲವು ಅಂಕಿಅಂಶಗಳು ಇಲ್ಲಿವೆ:
1. ದೇಶದ ಎಲ್ಲ ರಾಜ್ಯಗಳು ಇಂದು ತಮ್ಮ ಒಟ್ಟು ಆದಾಯದ ಶೇ. 62 ಭಾಗವನ್ನು ಕೇವಲ ಸಾಲಕ್ಕೆ ಬಡ್ಡಿ ಮರುಪಾವತಿ, ಸಂಬಳಗಳು, ಪಿಂಚಿಣಿ ಮತ್ತು ಸಬ್ಸಿಡಿಗಳಿಗೆ ವೆಚ್ಚ ಮಾಡುತ್ತಿವೆ. ಇನ್ನೊಂದೆಡೆ ಆದಾಯದಲ್ಲಿ ಕೊರತೆ ಕಾಣಿಸಿಕೊಳ್ಳುತ್ತಿದೆ. 2015-16ರಿಂದ 2023-24ರ ನಡುವೆ, ದೇಶದ ಎಲ್ಲ ರಾಜ್ಯಗಳೂ ಬಜೆಟ್ ಅಂದಾಜಿಗಿಂತ ಸರಾಸರಿ ಶೇ. 10 ಕಡಿಮೆ ಆದಾಯ ಸಂಗ್ರಹಿಸಿದ್ದರೆ, ಕರ್ನಾಟಕ ಮಾತ್ರ ಬಜೆಟ್‌ನಲ್ಲಿ ಸೂಚಿಸಿದ ಗುರಿಗಳನ್ನು ಯಶಸ್ವಿಯಾಗಿ ತಲುಪಿದೆ. ತನ್ನ ಅವೈಜ್ಞಾನಿಕ ವ್ಯವಹಾರಗಳ ಫಲವಾಗಿ ಕೇಂದ್ರ ಸರಕಾರವು ರಾಜ್ಯಗಳನ್ನು ಅನಿವಾರ್ಯ ಸಾಲದ ಸುಳಿಗೆ ಸಿಲುಕಿಸಿ, ಸಂಗ್ರಹವಾದ ತೆರಿಗೆ ಸಂಪನ್ಮೂಲಗಳ ಮೇಲೆ ತನ್ನ ಹಿಡಿತ ಇರಿಸಿಕೊಂಡು, ಅವನ್ನು ತನ್ನ ಮೂಗಿನ ನೇರಕ್ಕೆ ವ್ಯಯಿಸುವುದು ಆರೋಗ್ಯವಂತ ಒಕ್ಕೂಟ ವ್ಯವಸ್ಥೆಯ ಲಕ್ಷಣ ಅಲ್ಲ.
2. ದೇಶದ 24 ರಾಜ್ಯಗಳು ತಮ್ಮ ಆದಾಯದ ಸರಾಸರಿ ಶೇ. 9ನ್ನು ಸಬ್ಸಿಡಿಗಳಿಗಾಗಿ ನೀಡುತ್ತಿವೆ, ಅದರಲ್ಲಿ ಸಂಪನ್ಮೂಲ ಹೆಚ್ಚಿರುವ ರಾಜ್ಯಗಳು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚೇ ಪ್ರಮಾಣದ ಸಬ್ಸಿಡಿ ನೀಡುತ್ತಿವೆ. ಕರ್ನಾಟಕ (ಶೇ. 14), ತಮಿಳುನಾಡು (ಶೇ. 14), ಪಂಜಾಬ್ (ಶೇ. 21)ನಂತಹ ರಾಜ್ಯಗಳು ತಮ್ಮ ಆದಾಯದಲ್ಲಿ ದೊಡ್ಡ ಪಾಲನ್ನು ಸಬ್ಸಿಡಿಗೆಂದೇ ವ್ಯಯಿಸಿದರೆ (2023-24 Actuals), ರಾಜ್ಯದ ಅಭಿವೃದ್ಧಿಗೆ ಸ್ವಂತ ಸಂಪನ್ಮೂಲಗಳ ಕೊರತೆ ಬರುವುದು ಸಹಜ.
3. 15ನೇ ಹಣಕಾಸು ಆಯೋಗವು ಜಿಎಸ್‌ಟಿಯ ಮೂಲಕ ಜಿಡಿಪಿಯ ಶೇ. 7ರಷ್ಟು ತೆರಿಗೆ ಆದಾಯ ನಿರೀಕ್ಷಿಸಿದ್ದರೆ, ಅದು 2015-16ರಲ್ಲಿ ಜಿಡಿಪಿಯ ಶೇ. 6.5 ಇದ್ದುದು, ಈಗ 2023-24ರಲ್ಲಿ ಶೇ. 5.5ಕ್ಕೆ ಇಳಿದಿದೆ. ಆದರೆ ತುತ್ತೂರಿ ಮಾಧ್ಯಮಗಳು ಮಾತ್ರ ಸರಾಸರಿ ಪ್ರಮಾಣದಲ್ಲಿನ ಇಳಿಕೆಯನ್ನು ಮುಚ್ಚಿಟ್ಟು, ಮೊತ್ತದ ಹೆಚ್ಚಳವನ್ನು ಮಾತ್ರ ಪ್ರಚಾರದ ಸರಕಾಗಿ ಬಿತ್ತರಿಸುತ್ತಿವೆ.
4. 11ರಿಂದ 14ನೇ ಹಣಕಾಸು ಆಯೋಗ ಅವಧಿಯಲ್ಲಿ ರಾಜ್ಯಗಳಿಗೆ ವರ್ಗಾವಣೆ ಆಗಬೇಕಾದ ಷರತ್ತುರಹಿತ ಅನುದಾನಗಳ ಪ್ರಮಾಣವು ಶೇ. 44ರಿಂದ ಶೇ. 68ಕ್ಕೆ ಏರಿದ್ದರೆ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಅದು ಶೇ. 64ಕ್ಕೆ ಇಳಿದಿದೆ.
5. 2024-25ನೇ ಸಾಲಿನ ವೇಳೆಗೆ ರಾಜ್ಯಗಳ ಸಾಲದ ಪ್ರಮಾಣವು ಜಿಡಿಪಿಯ ಸರಾಸರಿ ಶೇ. 27.5 ತಲುಪಿದೆ. ಆರ್ಥಿಕ ಜವಾಬ್ದಾರಿ ಮತ್ತು ಬಜೆಟ್ ನಿಭಾವಣೆ (FRMB)ಯ ಶಿಸ್ತಿನ ನಿಯಮಗಳ ಪ್ರಕಾರ, ಈ ಸಾಲದ ಪ್ರಮಾಣವು ಜಿಡಿಪಿಯ ಶೇ. 20ಕ್ಕಿಂತ ಕೆಳಗಿರಬೇಕು. ಗುಜರಾತ್, ಮಹಾರಾಷ್ಟ್ರ ಮತ್ತು ಒಡಿಶಾ ಬಿಟ್ಟರೆ ಬೇರಾವ ರಾಜ್ಯಗಳಿಗೂ ಇದನ್ನು ಸಾಧಿಸಲಾಗಿಲ್ಲ.
ಈ ಎಲ್ಲ ಮ್ಯಾಕ್ರೊ ಅಂಕಿಅಂಶಗಳು ಒಟ್ಟಾಗಿ ಹೇಳುತ್ತಿರುವುದು-ಕೇಂದ್ರ ರಾಜ್ಯಗಳ ನಡುವಿನ ಆರ್ಥಿಕ ಅಸಮತೋಲನ ಮತ್ತು ಸಂಪತ್ತಿನ ಹಂಚಿಕೆಯಲ್ಲಿ ಕೃತಕವಾಗಿ ಸೃಷ್ಟಿ ಮಾಡಲಾಗುತ್ತಿರುವ ಅಸಮತೋಲನದ ಕುರಿತು. ಈ ಕುರಿತು ರಾಜ್ಯಗಳು ಎಚ್ಚರಗೊಳ್ಳಲು ಇದು ಸಕಾಲ.







