ಇಂಚಿಂಚಾಗಿ ಪಶ್ಚಿಮ ಘಟ್ಟ ‘ವಿಕಾಸ’ ಮಾಡಲಿರುವ ಯೋಜನೆಗಳು

ಕಾಡುಪ್ರಾಣಿಗಳ ನಗರ ಪ್ರವಾಸ, ಕೇರಳ-ಕರ್ನಾಟಕದ ಹಲವೆಡೆ ವ್ಯಾಪಕ ಭೂಕುಸಿತ, ಅಕಾಲಿಕ ಮಳೆ, ನೆರೆ, ಬರ ಇವೆಲ್ಲವೂ ಕೂಡ ಪಶ್ಚಿಮ ಘಟ್ಟಗಳ ಮೇಲೆ ನಾವು ನಡೆಸಿದ ಹಸ್ತಕ್ಷೇಪಗಳ ಫಲ ಎಂದು ಪ್ರಸನ್ನ ಕಾಲದಲ್ಲಿ ಕಥೆ ಹೇಳುತ್ತಾ, ಅಂತಹದೇ ಮನೆಹಾಳು ಯೋಜನೆಗಳನ್ನು ಮಾತ್ರ ಎಡೆಗೊಡದೆ ಸಮರೋಪಾದಿಯಲ್ಲಿ ಜಾರಿಗೊಳಿಸುತ್ತಾ ಸಾಗುವ ಈ ‘ವಿಕಾಸ’ ಕೊನೆಯದಾಗಿ ನಮ್ಮನ್ನು ಎಲ್ಲಿಗೆ ತಲುಪಿಸಬಹುದು?
‘‘ಪರಿಸರದವರ ರಂಪಾಟ ಇದ್ದದ್ದೇ. ಒಂದೈನೂರು ಮರ ಕತ್ತರಿಸಿದರೆ ಅವರ ಗಂಟೇನು ಹೋಗುತ್ತದೆ? ಇದೆಲ್ಲ ಫಾರಿನ್ ಫಂಡಿನ ಎನ್‌ಜಿಒಗಳ ಹುನ್ನಾರ. ಇದಕ್ಕೆಲ್ಲ ಕ್ಯಾರೇ ಅನ್ನಬಾರದು.’’ ಇಂತಹ ಮಾತುಗಳು ಇಂದು ‘ವಿಕಸಿತ ಭಾರತ’ದ ಹಾದಿಯಲ್ಲಿ ತೀರಾ ಸಾಮಾನ್ಯ. ಆರು ಸಮಿತಿ ವರದಿಗಳ ಬಳಿಕ ಏಳು ಡ್ರಾಫ್ಟ್ ನೋಟಿಫಿಕೇಷನ್‌ಗಳು ಬಂದರೂ, ಇನ್ನೂ ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶ ಎಂದು ನೋಟಿಫೈ ಆಗುವುದು ಖಚಿತವಿಲ್ಲ. ಪಶ್ಚಿಮ ಘಟ್ಟದ ತಪ್ಪಲಿನ ನಿವಾಸಿಗಳು, ಕೈಗಾರಿಕೆಗಳು, ಗಣಿಗಾರಿಕೆಯವರು ಎಲ್ಲರೂ ಅವರವರ ವ್ಯಾಪ್ತಿಯೊಳಗೆ ಈ ಡ್ರಾಫ್ಟ್ ನೋಟಿಫಿಕೇಷನ್‌ಗಳನ್ನು ಪ್ರತೀ ಬಾರಿಯೂ ಬಹಳ ಶಾಸ್ತ್ರೋಕ್ತವಾಗಿಯೇ ವಿರೋಧಿಸುತ್ತಾ ಬಂದಿದ್ದಾರೆ; ರಾಜಕಾರಣಿಗಳು ಜನಾಭಿಪ್ರಾಯದ ಹೆಸರಿನಲ್ಲಿ ಅವನ್ನು ನನೆಗುದಿಗೆ ಹಾಕುವುದಕ್ಕೆ ಸಬೂಬು ಹುಡುಕುತ್ತಾ ಬಂದಿದ್ದಾರೆ. ಹಾಗಾಗಿ, ಪಶ್ಚಿಮ ಘಟ್ಟಗಳು ಸಂಪೂರ್ಣ ‘ವಿಕಾಸ’ ಆಗದೇ, ಇಂತಹದೊಂದು ನೋಟಿಫಿಕೇಷನ್ ಖಂಡಿತಾ ಅಂತಿಮಗೊಳ್ಳುವುದು ಸಾಧ್ಯವಿಲ್ಲ.
ಇಂತಹ ತಲಾ ಐನೂರು ಮರಗಳ ಆಹುತಿ ಪಡೆಯುವ ಒಂದೊಂದೇ ಯೋಜನೆಗಳು ಅತ್ತ ಗುಜರಾತ್, ಮಹಾರಾಷ್ಟ್ರದಿಂದ ಗೋವಾ, ಕರ್ನಾಟಕ ಹಾದು ಕೇರಳ, ತಮಿಳುನಾಡು ತನಕ ಪ್ರತೀ ರಾಜ್ಯದಲ್ಲಿ ಯಾವ ಪ್ರಮಾಣದಲ್ಲಿ ನಡೆಯುತ್ತಿರಬಹುದು? ಕನಿಷ್ಠ ಪಕ್ಷ 15-20ರಷ್ಟು ಇಂತಹ ಯೋಜನೆಗಳು ಮೇಲೆ ಪಟ್ಟಿ ಮಾಡಿದ ಪ್ರತೀ ರಾಜ್ಯಗಳ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ನಡೆಯುತ್ತಿವೆ. ಇವೆಲ್ಲ ಯೋಜನೆಗಳು ಒಟ್ಟಾಗಿ ಪಶ್ಚಿಮ ಘಟ್ಟಗಳಿಗೆ ಮಾಡುತ್ತಿರುವ ಒಟ್ಟು ಹಾನಿ ಎಷ್ಟು? ಎಂಬುದರ ಲೆಕ್ಕಾಚಾರ ತೋರಿಸಲು ಯಾರೂ ಮುಂದಾಗುವುದಿಲ್ಲ. ಒಂದು ಸಣ್ಣ ಅಂದಾಜು ಹೇಳಬೇಕೆಂದರೆ, 2011ರಲ್ಲಿ ಮಾಧವ ಗಾಡ್ಗೀಳ್ ಸಮಿತಿ 1,29,037 ಚದರ ಕಿ.ಮೀ. ಭೂಭಾಗವನ್ನು ಪಶ್ಚಿಮಘಟ್ಟಗಳೆಂದು ಗುರುತಿಸಿದ್ದರೆ, ಕಸ್ತೂರಿ ರಂಗನ್ ವರದಿ (2013) 60,000 ಚ.ಕಿ.ಮೀ. ಭಾಗವನ್ನು ಪಶ್ಚಿಮ ಘಟ್ಟಗಳ ಸೂಕ್ಷ್ಮ ಭಾಗ ಎಂದು ಗುರುತಿಸಿತ್ತು. ಈಗ ಕಸ್ತೂರಿ ರಂಗನ್ ವರದಿ ಆಧರಿಸಿ, ಏಳನೇ ಬಾರಿಗೆ ಕರಡು ಪ್ರಕಟಣೆ ಬರುವ ಹೊತ್ತಿಗೆ ಪಶ್ಚಿಮಘಟ್ಟಗಳ ವ್ಯಾಪ್ತಿ ಕಾಗದಗಳ ಮೇಲೆ 56,825 ಚ.ಕಿ.ಮೀ.ಗೆ ಇಳಿದಿದೆ. ವಾಸ್ತವದಲ್ಲಿ ಅದು ಈ ಗಾತ್ರಕ್ಕಿಂತಲೂ ತೀರಾ ಕಡಿಮೆ ಇರುವುದರಿಂದಲೇ ಆ ಜಾಗಗಳ ಮಾಲಕರೆಲ್ಲ (ಜನರು ಮಾತ್ರವಲ್ಲ; ಹುಲಿ, ಆನೆ, ಚಿರತೆ, ಮಂಗ ಇತ್ಯಾದಿಗಳೂ ಕೂಡ!) ಅವರವರ ಮೂಗಿನ ನೇರಕ್ಕೆ ರೊಚ್ಚಿಗೆದ್ದಿದ್ದಾರೆ! (ಆಸಕ್ತರಿಗೆ ಇನ್ನಷ್ಟು ವಿವರಗಳು 2024 ಅಕ್ಟೋಬರ್ 19ರ ಪಿಟ್ಕಾಯಣದಲ್ಲಿವೆ).
ಗೋವಾ-ತಾಮ್ನಾರ್ ವಿದ್ಯುತ್ ಪ್ರಸರಣ ಯೋಜನೆ
ನಾನೀಗ ಹೇಳಹೊರಟಿರುವುದು ಛತ್ತೀಸ್‌ಗಡದಿಂದ ಗೋವಾ ರಾಜ್ಯಕ್ಕೆ ವಿದ್ಯುತ್ ಸರಬರಾಜು ಮಾಡುವ ಯೋಜನೆಯಲ್ಲಿ ಆಗಿರುವ ಹೊಸ ಬೆಳವಣಿಗೆಗಳ ಬಗ್ಗೆ. ಈ ವಿದ್ಯುತ್ ಲೈನು ಕರ್ನಾಟಕವನ್ನು ಹಾದು ಹೋಗುತ್ತಿರುವುದರಿಂದ, ಈ ಬೆಳವಣಿಗೆ ನಮಗೂ ಪ್ರಸ್ತುತ. ಇತ್ತೀಚೆಗಿನ ಬೆಳವಣಿಗೆ ಏನೆಂದರೆ, ದೀರ್ಘ ಕಾಲದಿಂದ ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ(NBWL) ಜುಲೈ ಮೊದಲ ವಾರದಲ್ಲಿ ಒಪ್ಪಿಗೆ ನೀಡಿದೆ.
ಗೋವಾ ಸದ್ಯಕ್ಕೆ ವೆಸ್ಟರ್ನ್ ಗ್ರಿಡ್ ಮೂಲಕ 690 MW ವಿದ್ಯುತ್, ಸದರ್ನ್ ಗ್ರಿಡ್ ಮೂಲಕ 100 MW ವಿದ್ಯುತ್ ಪಡೆಯುತ್ತಿದ್ದು, ಗ್ರಿಡ್‌ಗಳ ಲಭ್ಯ ವರ್ಗಾವಣೆ ಸಾಮರ್ಥ್ಯ (ATC) ಸೀಮಿತವಾಗಿರುವುದರಿಂದ, ರಾಜ್ಯದಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿಗಳು, ವಿದ್ಯುತ್ ಸರಬರಾಜು ಅಕಸ್ಮಾತ್ ಸ್ಥಗಿತಗೊಳ್ಳುವುದೇ ಮತ್ತಿತರ ತುರ್ತು ಸಂದರ್ಭಗಳಲ್ಲಿ ಲೋಡ್ ಷೆಡಿಂಗ್ ಮಾಡಬೇಕಾಗುತ್ತದೆ. ಹಾಗಾಗಿ, ತಾಮ್ನಾರ್ ಯೋಜನೆ ರಾಜ್ಯದ ಏರುತ್ತಿರುವ ವಿದ್ಯುತ್ ಬೇಡಿಕೆಗಳ ದೃಷ್ಟಿಯಿಂದ ಬಹಳ ಮುಖ್ಯವಾದ ಯೋಜನೆ ಎಂದು ಗೋವಾ ಹೇಳುತ್ತಿದೆ (ಗೋವಾ ವಿಧಾನಸಭೆಯ ಚುಕ್ಕೆ ಸಹಿತ ಪ್ರಶ್ನೆ 003ಅ ದಿನಾಂಕ 22-07-2024).
ಛತ್ತೀಸ್‌ಗಡ ದೇಶದ ಪ್ರಮುಖ ವಿದ್ಯುತ್ ಉತ್ಪಾದಕ ರಾಜ್ಯಗಳಲ್ಲಿ ಒಂದು. ಅಲ್ಲಿನ ರಾಜಗಢ (ತಾಮ್ನಾರ್) ಪೂಲ್‌ನಲ್ಲಿ ಸಂಗ್ರಹಗೊಂಡ ವಿದ್ಯುತ್ತನ್ನು, ಅಲ್ಲಿಂದ ಕರ್ನಾಟಕದ ಬೆಳಗಾವಿ, ಧಾರವಾಡ, ಅಣಶಿ-ದಾಂಡೇಲಿ ಮೂಲಕ ಗೋವಾದ ಧಾರ್ಬಂದೋರಾ/ಮೊಲ್ಲೆಂ ಹಾದು ಸೆಲ್ಡೆಮ್‌ಗೆ 440kv D/C ವಿದ್ಯುತ್ ಸರಬರಾಜು ಲೈನ್ ಸ್ಥಾಪಿಸುವ ಯೋಜನೆ ಇದು. 2015ರಲ್ಲಿ ಆರಂಭಗೊಂಡ ಈ ಯೋಜನೆ ಇಲ್ಲಿಯ ತನಕವೂ ಕರ್ನಾಟಕದ ಆಕ್ಷೇಪದ ಕಾರಣಕ್ಕೆ ನನೆಗುದಿಗೆ ಬಿದ್ದಿತ್ತು. ಈ ಯೋಜನೆ ಪೂರ್ಣಗೊಳಿಸುವ ಹೊಣೆಯನ್ನು ಗೋವಾ ತಾಮ್ನಾರ್ ಟ್ರಾನ್ಸ್‌ಮಿಷನ್ ಪ್ರಾಜೆಕ್ಟ್ ಲಿ. (GTTPL) ಎಂಬ ಸ್ಪೆಷಲ್ ಪರ್ಪಸ್ ವೆಹಿಕಲ್‌ಗೆ ಒಪ್ಪಿಸಲಾಗಿತ್ತು.
ಈ ಯೋಜನೆಯ ಕುರಿತು ಕರ್ನಾಟಕದ ಬಲವಾದ ಆಕ್ಷೇಪಕ್ಕೆ ಸಕಾರಣ ಇದೆ. ಅದೇನೆಂದರೆ, ಯೋಜನೆಯು ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾಗಳಲ್ಲಿ ಪಶ್ಚಿಮ ಘಟ್ಟದ ಮೂಲಕವೇ ಹಾದು ಬರಬೇಕಿತ್ತು. ಕರ್ನಾಟಕದಲ್ಲಿ ಅದು ಹಾದು ಹೋಗುವ 75 ಕಿ.ಮೀ. ಉದ್ದದ ಹಾದಿಯಲ್ಲಿ 38 ಕಿ.ಮೀ. ಉದ್ದ ಕಾಡು ಪ್ರದೇಶವಾಗಿದ್ದರೆ, 6.6 ಕಿ.ಮೀ. ಉದ್ದದ ಭಾಗ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರಿದ್ದು! ಈ ಯೋಜನೆ ಮೂಲರೂಪದಲ್ಲಿ ಜಾರಿಗೊಂಡಿದ್ದರೆ, ಹಳಿಯಾಳ, ದಾಂಡೇಲಿ ಅರಣ್ಯವಲಯಗಳಲ್ಲಿ ಒಟ್ಟು ಸುಮಾರು 46,000 ಮರಗಳ ಮಾರಣ ಹೋಮ ನಡೆಯಬೇಕಾಗಿತ್ತು. ಕರ್ನಾಟಕದ ಆಕ್ಷೇಪದ ಹಿನ್ನೆಲೆಯಲ್ಲಿ ಪ್ರಸರಣ ಹಾದಿಯನ್ನು ಹಾಲಿ ಇರುವ ಗಣೇಶಗುಡಿ (220kv) ಸಬ್‌ಸ್ಟೇಷನ್‌ನಿಂದ ಗೋವಾದ ಪೋಂಡಾ ಸಬ್‌ಸ್ಟೇಷನ್‌ಗೆ ತಲುಪಿಸುವ ಪರ್ಯಾಯ ಸಿದ್ಧವಾಯಿತು, ಅದಕ್ಕೂ ರಾಜ್ಯದ ಆಕ್ಷೇಪ ಇತ್ತು ಏಕೆಂದರೆ, ಆ ಯೋಜನೆಗೆ ಕೂಡ 25,000ಕ್ಕೂ ಮಿಕ್ಕಿ ಮರಗಳ ಮಾರಣ ಹೋಮ ಆಗಬೇಕಿತ್ತು.
ಈ ಹಿನ್ನೆಲೆಯಲ್ಲಿ ಗೋವಾ ಸುಪ್ರೀಂಕೋರ್ಟ್‌ನ ಮೊರೆ ಹೋಯಿತು ಮತ್ತು ನ್ಯಾಯಾಲಯವು ಪರಿಸರ, ವನ್ಯಜೀವಿ ಹಿತಾಸಕ್ತಿಗಳನ್ನು ಪರಿಗಣನೆಗೆ ತೆಗೆದುಕೊಂಡು, ಧಾರವಾಡದ ನರೇಂದ್ರ ಮತ್ತು ಗೋವಾದ ಸಂಗೋಡ್ ನಡುವೆ, ಹೊಸದಾಗಿ ಯೋಜನೆ ರೂಪಿಸಬೇಕೆಂದು ಸೂಚಿಸಿತ್ತು (2022). ಅದರಂತೆ ಮರುರೂಪಿಸಿರುವ ಯೋಜನೆಗೆ ಈಗ NBWL ಒಪ್ಪಿಗೆ ನೀಡಿರುವುದು.
ಈ ಪರಿಷ್ಕೃತ ಯೋಜನೆಯಡಿ, ಧಾರವಾಡದ ನರೇಂದ್ರ ಗ್ರಾಮದ ಬಳಿಯಿಂದ 400kv D/C ಕ್ವಾಡ್ ಲೈನ್ ಪ್ರಸರಣ ತಂತಿಗಳು ಮಾಪುಸಾದ ಸೆಲ್ಡೆಮ್‌ಗೆ ತಲುಪಲಿವೆ. ಈ ಹಾದಿಯಲ್ಲಿ 50 ಮೀ. ಎತ್ತರದ ವಿದ್ಯುತ್ ಕಂಬಗಳು ಇರಲಿದ್ದು, 400 ಮೀ.ಗೆ ದೂರಕ್ಕೆ ಒಂದು ಕಂಬ ಇರುವುದರಿಂದ ಹಾಗೂ ಕಂಬಕ್ಕೆ ಬೇಕಾಗುವ ಜಾಗ ಕಡಿಮೆ ಇರುವುದರಿಂದ ಇದು ಪರಿಸರ ಸ್ನೇಹಿ ಎಂದು GTTPL ತನ್ನ ಪರಿಷ್ಕೃತ ಡಿಪಿಆರ್‌ನಲ್ಲಿ ಹೇಳಿಕೊಂಡಿದೆ. ಯೋಜನೆಯಲ್ಲೀಗ ಕರ್ನಾಟಕದಲ್ಲಿ 40.775 ಹೆಕ್ಟೇರ್ ಭೂಮಿ ಬಳಕೆ ಆಗಲಿದ್ದು, ಅದರಲ್ಲಿ 32.026 ಹೆಕ್ಟೇರ್ ಅರಣ್ಯ ಭೂಮಿ ಹಾಗೂ 8.749 ಹೆಕ್ಟೇರ್ ಅರಣ್ಯೇತರ ಭೂಮಿ. ಜೊತೆಗೆ ಕಡಿಯಬೇಕಾಗಿರುವ ಮರಗಳ ಪ್ರಮಾಣವನ್ನು 3,248ಕ್ಕೆ ಇಳಿಸಲಾಗಿದೆಯಂತೆ. ಮಾತ್ರವಲ್ಲದೆ, ಪರಿಸರ ಹಾನಿ ತಡೆಗಟ್ಟಲು 6.5 ಕೋಟಿ ರೂ.ಗಳ ಯೋಜನೆಯನ್ನೂ ಸಿದ್ಧಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವನ್ಯಜೀವಿ ಮಂಡಳಿ (SBWL) ಯೋಜನೆಗೆ ಒಪ್ಪಿಗೆ ನೀಡಿತ್ತು. ಈಗ ರಾಷ್ಟ್ರೀಯ ಮಂಡಳಿಯ ಕಡೆಯಿಂದಲೂ ಯೋಜನೆಗೆ ಒಪ್ಪಿಗೆ ಸಿಕ್ಕಂತಾಗಿದೆ.
ಭಾರತ ಸರಕಾರವು ಅಂತರ್ ರಾಜ್ಯ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ 2031-32ಕ್ಕೆ ಮುನ್ನ 1,91,474 ಸರ್ಕ್ಯೂಟ್ ಕಿಲೋಮೀಟರ್ ಪ್ರಸರಣ ಲೈನುಗಳನ್ನು ಹಾಗೂ 1,274 ಗಿಗಾವೋಲ್ಟ್ ಆಂಪೇರ್ (GVA) ಟ್ರಾನ್ಸ್ ಫಾರ್ಮರ್ ಸಾಮರ್ಥ್ಯವನ್ನು ಹೊಂದುವ ಯೋಜನೆ ರೂಪಿಸಿದ್ದು, ಅದರ ಭಾಗವಾಗಿ ಈ ಯೋಜನೆ ವೇಗ ಪಡೆದಿದೆ.
ಹೊರನೋಟಕ್ಕೆ ಎಲ್ಲವೂ ಸರಿ ಇದೆಯಲ್ಲ ಅನ್ನಿಸುತ್ತದೆ. ಆದರೆ ಒಂದು ಹೆಜ್ಜೆ ಹಿಂದೆ ನಿಂತು ನೋಡಿದರೆ, ಇಂತಹ ಎಷ್ಟೆಲ್ಲ ಯೋಜನೆಗಳು ಕರ್ನಾಟಕದಲ್ಲೀಗ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಿವಿಧ ಹಂತಗಳಲ್ಲಿ ನಡೆಯುತ್ತಿವೆ ಎಂಬುದು ಕಾಣಿಸತೊಡಗುತ್ತದೆ.
ಕಳಸಾ ಬಂಡೂರಿ ನದಿ ತಿರುವು ಯೋಜನೆ, ತಾಳಗುಪ್ಪ-ಹೊನ್ನಾವರ/ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ, ಕೊಡಚಾದ್ರಿ ಬೆಟ್ಟಗಳಿಗೆ ರೋಪ್ ವೇ, ಕಾವೇರಿ ಜಲಾನಯನ ಪ್ರದೇಶಗಳಲ್ಲಿ ರಸ್ತೆ ವಿಸ್ತರಣೆ ಯೋಜನೆಗಳು, ಶರಾವತಿ ವನ್ಯ ಜೀವಿ ಅಭಯಾರಣ್ಯದ ಮೂಲಕ ಹಾದು ಹೋಗಲುದ್ದೇಶಿಸಿರುವ ರಸ್ತೆಗಳು, ಕುದುರೆಮುಖ, ಸೋಮೇಶ್ವರ, ಚಿಕ್ಕಮಗಳೂರು, ಶಿರಾಡಿ ಘಾಟಿ ಇತ್ಯಾದಿ ರಸ್ತೆ ವಿಸ್ತರಣೆ ಯೋಜನೆಗಳು, ಎತ್ತಿನಹೊಳೆ ನದಿ ತಿರುವು ಯೋಜನೆ.... ಹೀಗೆ ಎಲ್ಲ ಯೋಜನೆಗಳಲ್ಲಿ ಒಟ್ಟು ಅಂದಾಜು 20 ಲಕ್ಷಕ್ಕೂ ಮಿಕ್ಕಿ ಮರಗಳ ಮಹಾಮಾರಣಹೋಮಕ್ಕೆ ವ್ಯವಸ್ಥೆ ಆಗಿದೆ (ಇವುಗಳ ಪೈಕಿ ಕೆಲವು ನ್ಯಾಯಾಲಯಗಳ ಹಸ್ತಕ್ಷೇಪದಿಂದ ಸದ್ಯಕ್ಕೆ ನನೆಗುದಿಗೆ ಬಿದ್ದಿವೆ) ಎಂದು ಪರಿಣತರು ಅಭಿಪ್ರಾಯಪಡುತ್ತಾರೆ. ಕರ್ನಾಟಕವೊಂದರಲ್ಲೇ ಸನ್ನಿವೇಶ ಹೀಗಿದ್ದರೆ, ಇನ್ನು ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಗುಜರಾತ್‌ಗಳಲ್ಲಿ ಕಥೆ ಏನು? ಕೊನೆಗೂ ಪಶ್ಚಿಮ ಘಟ್ಟಗಳು ಉಳಿಯಲಿರುವುದು ಕೇವಲ ಪಠ್ಯ ಪುಸ್ತಕಗಳಲ್ಲಿ ಮಾತ್ರವೇ? ಎಂಬ ಪ್ರಶ್ನೆ ಮೂಡಲು ಇದು ಸಕಾಲ.
ಕಾಡುಪ್ರಾಣಿಗಳ ನಗರ ಪ್ರವಾಸ, ಕೇರಳ-ಕರ್ನಾಟಕದ ಹಲವೆಡೆ ವ್ಯಾಪಕ ಭೂಕುಸಿತ, ಅಕಾಲಿಕ ಮಳೆ, ನೆರೆ, ಬರ ಇವೆಲ್ಲವೂ ಕೂಡ ಪಶ್ಚಿಮ ಘಟ್ಟಗಳ ಮೇಲೆ ನಾವು ನಡೆಸಿದ ಹಸ್ತಕ್ಷೇಪಗಳ ಫಲ ಎಂದು ಪ್ರಸನ್ನ ಕಾಲದಲ್ಲಿ ಕಥೆ ಹೇಳುತ್ತಾ, ಅಂತಹದೇ ಮನೆಹಾಳು ಯೋಜನೆಗಳನ್ನು ಮಾತ್ರ ಎಡೆಗೊಡದೆ ಸಮರೋಪಾದಿಯಲ್ಲಿ ಜಾರಿಗೊಳಿಸುತ್ತಾ ಸಾಗುವ ಈ ‘ವಿಕಾಸ’ ಕೊನೆಯದಾಗಿ ನಮ್ಮನ್ನು ಎಲ್ಲಿಗೆ ತಲುಪಿಸಬಹುದು?






