Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ಟೆಕ್ಕೀ ‘ಭಯೋತ್ಪಾದನೆಯ’ AI ಮುಖ

ಟೆಕ್ಕೀ ‘ಭಯೋತ್ಪಾದನೆಯ’ AI ಮುಖ

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು20 Sept 2025 12:08 PM IST
share
ಟೆಕ್ಕೀ ‘ಭಯೋತ್ಪಾದನೆಯ’ AI ಮುಖ

AI ಕ್ರಾಂತಿಯಲ್ಲಿ ಪಾಲ್ಗೊಳ್ಳದಿದ್ದರೆ ಜಗತ್ತಿನ ಬೆಳವಣಿಗೆಗಳಿಂದ ಹೊರಗುಳಿದುಬಿಡಲಿದ್ದೀರಿ ಎಂದು ‘ಟೆಕ್ ಭಯೋತ್ಪಾದಕರು ಹುಟ್ಟುಹಾಕಿರುವ ಒತ್ತಡದ’ ಆತಂಕಕ್ಕೆ ಒಳಗಾಗಿ, ಈ ದಿಕ್ಕಿಲ್ಲದ AI ಹುಚ್ಚು ಓಟಕ್ಕೆ ಧುಮುಕಿರುವ ಭಾರತ, ಈ ಓಟವು ದೇಶದ ಮೇಲೆ ಹೊರಿಸಬಹುದಾದ ಸಮಸ್ಯೆಗಳ ಕಡೆ ಗಮನ ಕೊಟ್ಟಂತಿಲ್ಲ. AI ಕ್ರಾಂತಿಗೆಂದು ಮಾಡುವ ಹೂಡಿಕೆಗಳೆಲ್ಲ ಎಷ್ಟು ಭದ್ರ ಮತ್ತು ಅಕಸ್ಮಾತ್ ಮುಳುಗಿದರೆ ಪರ್ಯಾಯ ಏನು ಎಂಬ ಚಿಂತನೆ ಕಿಂಚಿತ್ತೂ ಇದ್ದಂತಿಲ್ಲ.

ಐಟಿ ಉದ್ಯಮ ಗಿಜಿಗುಡಲು ಆರಂಭಿಸಿದ ಮೇಲೆ, ಆ ರಂಗದ ವ್ಯವಹಾರಗಳು ಮೂಗು ಒತ್ತಿ ಬಾಯಿ ಕಳೆಯಿಸುವ ಭಯೋತ್ಪಾದಕ ಮಾದರಿಯನ್ನು ಅನುಸರಿಸುತ್ತಿರುವುದು ಅಧ್ಯಯನ ಯೋಗ್ಯ. ಬೇರೆಲ್ಲ ರಂಗಗಳಲ್ಲಿ ಇರುವಂತೆ ಒಂದು ಉತ್ಪಾದನೆಯನ್ನು ಸಿದ್ಧಪಡಿಸಿ, ಅದರ ಉಪಯೋಗವನ್ನು ಮಾರುಕಟ್ಟೆಗೆ ಪರಿಚಯಿಸುವ ಸಹಜ ಹಾದಿ ಬಿಟ್ಟು, ತಾವು ಸಂಕಲ್ಪಿಸಿರುವ ಕೆಲಸದಿಂದಲೇ ಏನೋ ಮಹತ್ವದ್ದು ಘಟಿಸಲಿದೆ ಎಂಬ ‘ಅವ್ಯಕ್ತ ಆತಂಕ’ ಹುಟ್ಟಿಸುವುದು; ತಾವೇನೋ ಸಾಧಿಸಲಿದ್ದೇವೆ, ನೀವು ಬಂದು ಜೊತೆಗೂಡದಿದ್ದರೆ ಹೊರಗುಳಿಯಲಿದ್ದೀರಿ ಎಂದು ಭಯ ಹುಟ್ಟಿಸಿ ಕಾಸು ದೋಚುವುದು ಮತ್ತು ಒಮ್ಮೆ ಲಾಭ ಸಿಕ್ಕಬಳಿಕ, ಏನೂ ಆಗೇ ಇಲ್ಲ ಎಂಬ ಅಮಾಯಕತೆ ನಟಿಸುತ್ತಾ, ಹೊಸದೇನು ಸುಲಿಗೆ ಅವಕಾಶ ಸಿಗಬಹುದೆಂದು ಅರಸುವುದು-ಟೆಕ್ ವ್ಯವಹಾರ ನೀತಿಯಲ್ಲಿ ಒಂದು ಪ್ಯಾಟರ್ನ್ ಆಗಿಬಿಟ್ಟಿದೆ.

1990ರ ದಶಕದ Y2K ಗುಳ್ಳೆಯನ್ನು ನೆನಪಿಸಿಕೊಳ್ಳಿ. 2000ಕ್ಕೆ ಏನೋ ಘಟಿಸಲಿದೆ, ಅದನ್ನು ನಿವಾರಿಸದಿದ್ದರೆ ಸರ್ವನಾಶ ಖಚಿತ ಎಂದು ಜಗತ್ತಿನಾದ್ಯಂತ ಸರಕಾರಗಳಿಗೆ ಭಯ ಹುಟ್ಟಿಸಿ, ಕಾಸು ದೋಚಿದ್ದೇ ಬಂತು. ಐಟಿ ಉದ್ಯಮದ ‘ಗೇಟ್ಸ್’ಗಳು ತೆರೆದುಕೊಳ್ಳಲು ಇದು ಹಾದಿ ಆಯಿತು. ಮುಂದೆ, ಇದರದೇ ಹೊಸ ಅವತಾರ ‘ಡಾಟ್ ಕಾಂ ಬಬಲ್’ ಅಮೆರಿಕದ ಸ್ಟಾಕ್ ಮಾರುಕಟ್ಟೆಯಲ್ಲಿ ಗದ್ದಲ ಎಬ್ಬಿಸಿ, ಸಾರ್ವಜನಿಕರ ದುಡ್ಡು ಮಟಾಮಾಯ ಮಾಡಿ, ಹಿರಿದುಕೊಂಡಿತು (2001).

ಆ ಬಳಿಕ 2010ರ ಹೊತ್ತಿಗೆ ಸೋಷಿಯಲ್ ಮೀಡಿಯಾದ ‘ಫಿಲ್ಟರ್’ ಬಬಲ್ ಶುರುವಾಯಿತು. ಸೋಷಿಯಲ್ ಮೀಡಿಯಾದಲ್ಲಿ ನೀವು ವ್ಯಕ್ತಪಡಿಸಿದ ಅಭಿಪ್ರಾಯಗಳು ವೈರಲ್ ಆಗಿವೆ, ಜಗಜ್ಜಾಹೀರಾಗಿವೆ ಎಂದು ಜನರನ್ನು ನಂಬಿಸುತ್ತಾ, ವಾಸ್ತವದಲ್ಲಿ ಎಕೊ ಚೇಂಬರ್‌ಗಳಲ್ಲಿ ಅವರನ್ನು ಕಟ್ಟಿಹಾಕಿ ಕಾಲ ಕಳೆಯುವ ಸೋಷಿಯಲ್ ಮೀಡಿಯಾ ಕಂಪೆನಿಗಳು, ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನೀವು ಪಾಲ್ಗೊಳ್ಳದಿದ್ದರೆ ನಿಮಗೆ ಅಸ್ತಿತ್ವವೇ ಇಲ್ಲ ಎಂದು ನಂಬಿಸತೊಡಗಿದವು. ಈ ಮೆಟಾ-ಆಟಕ್ಕೆ ಹಣ ತೊಡಗಿಸಿದವರು 2022ರ ಹೊತ್ತಿಗೆ, ಒಂದು ಹಂತಕ್ಕೆ ಬರ್ಬಾದ್ ಆದರು.

ಹೀಗೆ, ಹೊರಗುಳಿಯದಿರುವುದು ಅನಿವಾರ್ಯ ಎಂಬ ಒತ್ತಡವನ್ನು ಜನಸಾಮಾನ್ಯರಲ್ಲಿ ಹುಟ್ಟಿಸಿ, ಅದನ್ನು ಹೂಡಿಕೆದಾರರ ಲೂಟಿಗೆ ಬಳಸಿಕೊಂಡು, ಪಾಲ್ಗೊಳ್ಳದಿದ್ದರೆ ಹೊರಗುಳಿಯುತ್ತೀರಿ ಎಂಬ ಭಯವನ್ನು ಎಲ್ಲ ಸ್ಟೇಕ್ ಹೋಲ್ಡರ್‌ಗಳಿಗೂ ಹತ್ತಿಸಿ ಲಾಭಗಳಿಸುವ ಒಂದು ಸಿದ್ಧ ಪ್ಯಾಟರ್ನ್ ಜಾಗತಿಕ ಐಟಿ ಕ್ಷೇತ್ರದಲ್ಲಿ ಕಾಣಿಸುತ್ತಿದೆ.

ಈಗ AI ಸರದಿ

ಕಂಪ್ಯೂಟರ್ ಒಂದಾನೊಂದು ಕಾಲದಲ್ಲಿ ಮನುಷ್ಯರನ್ನು ಆಳಲಿದೆ ಎಂಬ ಹಳೇ ಕಥೆಯ ಇತ್ತೀಚೆಗಿನ ಆವೃತ್ತಿಯೇ ಕೃತಕ ಬುದ್ಧಿಮತ್ತೆ (AI). ತಣ್ಣಗೆ ತನ್ನಷ್ಟಕ್ಕೆ ತಾನು ಸಾವಯುವವಾಗಿ ಬೆಳೆಯುತ್ತಿದ್ದ ಈ ತಂತ್ರಜ್ಞಾನ ಏಕಾಏಕಿ ಭಗ್ಗೆಂದು ಹೊತ್ತಿ ಉರಿಯತೊಡಗಿದ್ದು, ಕೋವಿಡ್ ಬಳಿಕದ ಸನ್ನಿವೇಶಕ್ಕೆ ತಕ್ಕಂತೆ 2022ರಲ್ಲಿ ChatGPTಯ ಉಗಮ ಆದಾಗ. ಇನ್ನೇನು ನಾಳೆ ಬೆಳಗಾದರೆ AI ಕ್ರಾಂತಿ ಸಂಭವಿಸಲಿದೆ ಎಂಬ ಮಟ್ಟಿಗೆ ‘ಹವಾ’ ಸೃಷ್ಟಿಸಲಾಯಿತು; ಹೂಡಿಕೆದಾರರ ಗಮನ ಸೆಳೆಯಲಾಯಿತು. ಒಬ್ಬರ ಯಶಸ್ಸು ಕಂಡದ್ದೇ ತಡ, ಜಗತ್ತಿನ ಎಲ್ಲ ಪ್ರಮುಖ ಟೆಕ್ ಕಂಪೆನಿಗಳೂ ತಮ್ಮ AI ವಿಂಗ್

ಆರಂಭಿಸಿದವು,BOTಗಳಂತಹ ಈಗಾಗಲೇ ಚಾಲ್ತಿಯಲ್ಲಿರುವ ತಂತ್ರಜ್ಞಾನವನ್ನೂ ಕೂಡ ಹೊಸ ಸಂಶೋಧನೆ ಎಂದು ಬಿಂಬಿಸಿ, AI ಚಮತ್ಕಾರ ತೋರಿಸಲಾಯಿತು.

ನಿಜಕ್ಕೆಂದರೆ, ಈಗಾಗಲೇ ರೊಬೊಟಿಕ್ಸ್, ಕಂಪ್ಯೂಟರ್ ವಿಷನ್, ಡೇಟಾ ಅನಾಲಿಟಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಸಾಕಷ್ಟು AI ಸಾಧನೆ ಆಗಿದ್ದರೂ, ಅವೆಲ್ಲ ಜನಸಾಮಾನ್ಯರನ್ನು ಸೆಳೆದಿಲ್ಲ. ಸಾಮಾನ್ಯ ಜನ ಆಕರ್ಷಿತರಾಗಿರುವುದು, ಈಗ ಕೇಳಿದ್ದಕ್ಕೆಲ್ಲ ಉತ್ತರ ಕೊಡುವ, ಹೇಳಿದ ಚಿತ್ರಗಳನ್ನು ಥಟ್ಟೆಂದು

ಮಾಡಿಕೊಡುವ NLP ಆಧರಿತ ಜನರೇಟಿವ್ AI ಗಳಿಂದ (ಉದಾ: ChatGPT, DaVinci). ಈ ಬಹುಜನರ ಅಪೇಕ್ಷೆಯನ್ನೇ AI ಕ್ರಾಂತಿ ಎಂದು ಬಿಂಬಿಸಿ, ಸ್ಕೇಲ್ ಸಾಧಿಸಲು ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಈ ಪ್ಯಾಟರ್ನ್ ನೋಡುವಾಗ ಇದು ಹಳೆಯ ಚಾಳಿಯಂತೆಯೇ ಇನ್ನೊಂದು ‘ಗುಳ್ಳೆ’ ಒಡೆಯುವುದಕ್ಕೆ ಸಿದ್ಧತೆ ಎಂದು ತೋರುತ್ತಿದೆ.

ಈ AI ತಂತ್ರಜ್ಞಾನ ತನ್ನೊಂದಿಗೆ ಡೇಟಾ ಸೆಂಟರ್, ಕ್ಲೌಡ್ ಕಂಪ್ಯೂಟಿಂಗ್‌ನಂತಹ ತಂತ್ರಜ್ಞಾನಗಳನ್ನೂ ಕರೆತರಲಿದೆ. ಇವಕ್ಕೆಲ್ಲ ಅಪಾರ ಹೂಡಿಕೆಯ ಜೊತೆ ಇವನ್ನು ಸ್ಥಾಪಿಸಲು ಜಾಗ (ರಿಯಲ್ ಎಸ್ಟೇಟ್), ಇವು ತಿನ್ನಲಿರುವ ಅನೂಹ್ಯ ಗಾತ್ರದ ವಿದ್ಯುತ್ತಿಗಾಗಿ ಅಗಾಧ ಪ್ರಮಾಣದ ವಿದ್ಯುತ್ ಉತ್ಪಾದನೆ, ಇವು ಹೊಸದಾಗಿ ಹೊರಚೆಲ್ಲಲಿರುವ ಮಾಲಿನ್ಯ ನಿರ್ವಹಣೆಯಂತಹ ಹೊಸ ಸವಾಲುಗಳೆಲ್ಲ ಏಕಾಏಕಿ ಎದ್ದುನಿಂತಿವೆ.

ಈ ಎಲ್ಲ ಚಟುವಟಿಕೆಗಳ ಗಾತ್ರಕ್ಕೆ ಒಂದು ಪುಟ್ಟ ಅಂದಾಜು ಬೇಕೆಂದರೆ, ಇಂದು ಜಗತ್ತಿನ ಪ್ರಮುಖ AI ಮಾದರಿಗಳ ತಯಾರಕರಾದ Open AI (ChatGPTಯ ಮಾಲಕ ಕಂಪೆನಿ) ಮತ್ತು Anthropic ಇವೆರಡರ ಒಟ್ಟು ಮಾರುಕಟ್ಟೆ ಮೌಲ್ಯ ಅಂದಾಜು 44ಲಕ್ಷ ಕೋಟಿ ರೂ.ಗಳು. ಸದ್ಯದ ಅಂದಾಜಿನಂತೆ ಜಗತ್ತು, 2028ರ ಹೊತ್ತಿಗೆ ಕೇವಲ AI ರಂಗದ ಡೇಟಾ ಸೆಂಟರ್‌ಗಳಿಗೆ 265ಲಕ್ಷ ಕೋಟಿ ರೂ.ಗಳನ್ನು ವ್ಯಯಿಸಲಿದೆ! ಉತ್ಪಾದನೆ ಏನು, ಗುರಿ ಏನು ಎಂಬುದು ಇನ್ನೂ ಸ್ಪಷ್ಟವಿಲ್ಲದ, ಕೇವಲ ಹಪಾಹಪಿ ಆಧರಿಸಿದ ಈ ಎಲ್ಲ ಬೆಳವಣಿಗೆಗಳಿಗೆ ಒತ್ತಡಕ್ಕೆ ಬಿದ್ದು ಮಾಡುವ ಹೂಡಿಕೆಗಳೆಲ್ಲ ಹಿಂದೆ ಬರುವ ಹಾದಿ ಯಾವುದು ಎಂಬುದು ಸದ್ಯಕ್ಕೆ ಯಾರಿಗೂ ಸ್ಪಷ್ಟವಿಲ್ಲ. ಇಂದು ಅಪಾರ ಹಣ ಹೂಡಿಕೆ ಬಯಸುವ ಸರ್ವರ್‌ಗಳು, ಚಿಪ್‌ಗಳು ಒಂದೆರಡು ವರ್ಷಗಳಲ್ಲೇ ಹೊಸ ತಂತ್ರಜ್ಞಾನ ಬಂದಾಗ ನಿರುಪಯುಕ್ತಗೊಳ್ಳುವುದು ಸಹಜ. ಅಪ್ಪಿ ತಪ್ಪಿ ಯಾರೋ ಒಂದಿಬ್ಬರು ಈ ಗುಳ್ಳೆಯ ಪವಾಡದಿಂದ ಯಶಸ್ವಿಯಾದರೂ, ಈ ರೇಸಿನಲ್ಲಿ ತಾವು ಕೂಡ ಹಿಂದುಳಿಯಬಾರದು ಎಂಬ ಕಾರಣಕ್ಕೆ ಹೂಡಿಕೆ ಮಾಡುವ ಇತರರ ಸ್ಥಿತಿ ಅತಂತ್ರವಾಗಲಿರುವುದು ಖಚಿತ. ಈ ಗಾಣ ಸುತ್ತುವ ಓಟದಲ್ಲಿ ಒಂದಂತೂ ಸ್ಪಷ್ಟ: ಸ್ವಲ್ಪ ಹೆಚ್ಚುಕಡಿಮೆ ಆದರೂ, ಬೂಮ್ ಎಷ್ಟು ಎತ್ತರದ್ದೋ, ಕುಸಿತವೂ ಅಷ್ಟೇ ಆಳದ್ದಾಗಿರಲಿದೆ!

ಭಾರತವೂ ಧುಮುಕಿದೆ

ಇದೇ ಸೋಮವಾರದಂದು (ಸೆಪ್ಟಂಬರ್ 15) ಭಾರತದ ಹಣಕಾಸು ಸಚಿವರು ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಒಟ್ಟಾಗಿ, ಭಾರತದ ನೀತಿ ಆಯೋಗವು ಸಿದ್ಧಪಡಿಸಿರುವ ‘ವಿಕಸಿತ ಭಾರತಕ್ಕೆ AI ರೋಡ್‌ಮ್ಯಾಪ್’ ಅನ್ನು ಬಿಡುಗಡೆಗೊಳಿಸಿದ್ದಾರೆ. (PIB Release ID: 2166867) ಭಾರತ ಈಗಾಗಲೇ ತನ್ನ 2024ರ ಬಜೆಟ್‌ನಲ್ಲಿ India AI Missionಗೆ ಮುಂದಿನ 5 ವರ್ಷಗಳಿಗೆಂದು 10,300ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಭಾರತ ಸರಕಾರವು ಸ್ಥಾಪಿಸಲಿರುವ 18,693 GPU ಸಾಮರ್ಥ್ಯದ ಕಂಪ್ಯೂಟಿಂಗ್ ಮೂಲಸೌಕರ್ಯ ಸೌಲಭ್ಯವು ಚೀನಾದ DeepSeek ಮಾದರಿಗಿಂತ 9 ಪಾಲು ದೊಡ್ಡದು ಮತ್ತು ChatGPT ಕಾರ್ಯಾಚರಿಸುತ್ತಿರುವ ಮಾದರಿಯ ಮೂರರಲ್ಲಿ ಎರಡುಪಾಲಿನಷ್ಟು ಗಾತ್ರದ್ದಾಗಲಿದೆ ಎಂದು ಸರಕಾರ ಹೇಳಿಕೊಂಡಿದೆ. (PIB Release ID: 2108810)

ನೀತಿ ಆಯೋಗವು ತನ್ನ ರೋಡ್‌ಮ್ಯಾಪ್‌ನಲ್ಲಿ, ಭಾರತವು ಕೈಗಾರಿಕೆಗಳಲ್ಲಿ ಉತ್ಪಾದಕತೆ ಮತ್ತು ಕಾರ್ಯಕ್ಷಮತೆ ಹೆಚ್ಚಳಕ್ಕಾಗಿ, ಸಂಶೋಧನೆ-ಅಭಿವೃದ್ಧಿ ಕ್ಷೇತ್ರದಲ್ಲಿ ಹೊಸತನ ಸಾಧಿಸಲು ಮತ್ತು ತಂತ್ರಜ್ಞಾನ ಸೇವೆಗಳಲ್ಲಿ ಭಾರತದ ಮುಂಚೂಣಿಯ ಸ್ಥಾನವನ್ನು ಭದ್ರಪಡಿಸಿಕೊಳ್ಳಲು AI ಬಳಸಬೇಕೆಂದು ಅಭಿಪ್ರಾಯಪಟ್ಟಿದೆ. ಮಾತ್ರವಲ್ಲದೆ, ಇದರಿಂದ ಭಾರತ ಜಗತ್ತಿನ ಡೇಟಾ ರಾಜಧಾನಿ ಅನ್ನಿಸಿಕೊಳ್ಳಲು, ಕೌಶಲಗಳನ್ನು ಸುಧಾರಿಸಲು, ಉತ್ಪಾದನೆ-ಹಣಕಾಸು ಸೇವೆ-ಔಷಧಿ, ಆಟೊಮೋಟಿವ್ ರಂಗಗಳಲ್ಲಿ ಬೆಳವಣಿಗೆ ಸಾಧಿಸಲು, ಕೌಶಲ ವೃದ್ಧಿಯ ಮೂಲಕ ಉದ್ಯೋಗ ಸೃಷ್ಟಿಸಲು ಅವಕಾಶವಾಗಲಿದೆ ಎಂಬ ಆಶಾದಾಯಕ ಚಿತ್ರಣವನ್ನು ಮುಂದಿಟ್ಟಿದೆ.

‘‘ಹಾಲೀ ಶೇ. 5.7 ಬೆಳವಣಿಗೆಯ ದರ ಹೊಂದಿರುವ ಭಾರತವು ವಿಕಸಿತ ಭಾರತ ಆಗುವ ಗುರಿ ಸಾಧಿಸಲು, ಶೇ. 8 ಬೆಳವಣಿಗೆಯ ದರ ಸಾಧಿಸಬೇಕಿದೆ. ಅದಕ್ಕೆ ಉತ್ಪಾದಕತೆ ಹೆಚ್ಚಿಸಿಕೊಳ್ಳುವುದು ಮತ್ತು ನಾವೀನ್ಯತೆ ಸಾಧಿಸುವುದು ಒಂದೇ ಹಾದಿ. ಆ ಹಾದಿಯಲ್ಲಿ ಸಾಗಲು AI ಅಳವಡಿಸಿಕೊಳ್ಳುವುದು ನಿರ್ಣಾಯಕ ಪರಿಹಾರ’’ ಎಂದು ನೀತಿ ಆಯೋಗದ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಈ ನೀತಿಪತ್ರದಲ್ಲಿ ಹೇಳಿಕೊಂಡಿದ್ದಾರೆ.

AI ಕ್ರಾಂತಿಯಲ್ಲಿ ಪಾಲ್ಗೊಳ್ಳದಿದ್ದರೆ ಜಗತ್ತಿನ ಬೆಳವಣಿಗೆಗಳಿಂದ ಹೊರಗುಳಿದುಬಿಡಲಿದ್ದೀರಿ ಎಂದು ‘ಟೆಕ್ ಭಯೋತ್ಪಾದಕರು ಹುಟ್ಟುಹಾಕಿರುವ ಒತ್ತಡದ’ ಆತಂಕಕ್ಕೆ ಒಳಗಾಗಿ, ಈ ದಿಕ್ಕಿಲ್ಲದ AI ಹುಚ್ಚು ಓಟಕ್ಕೆ ಧುಮುಕಿರುವ ಭಾರತ, ಈ ಓಟವು ದೇಶದ ಮೇಲೆ ಹೊರಿಸಬಹುದಾದ ಸಮಸ್ಯೆಗಳ ಕಡೆ ಗಮನ ಕೊಟ್ಟಂತಿಲ್ಲ. AI ಕ್ರಾಂತಿಗೆಂದು ಮಾಡುವ ಹೂಡಿಕೆಗಳೆಲ್ಲ ಎಷ್ಟು ಭದ್ರ ಮತ್ತು ಅಕಸ್ಮಾತ್ ಮುಳುಗಿದರೆ ಪರ್ಯಾಯ ಏನು ಎಂಬ ಚಿಂತನೆ ಕಿಂಚಿತ್ತೂ ಇದ್ದಂತಿಲ್ಲ. ಈಗಾಗಲೇ ಡೇಟಾ ಸೆಂಟರ್‌ಗಳಂತಹ ಬಕಾಸುರ ವ್ಯವಸ್ಥೆಗಳಿಗೆ 20 ವರ್ಷಗಳ ತೆರಿಗೆ ರಜೆ ಪ್ರಕಟಿಸಿರುವ ಸರಕಾರ, ಅವರಿಗೆಂದು ವಿದ್ಯುತ್ ಕ್ಷೇತ್ರದಲ್ಲಿ ಅಪಾಯಕಾರಿ ಹೆಜ್ಜೆಗಳನ್ನು ಇಡುತ್ತಿದೆ. ತನ್ನ ಜನಗಳ ಬದುಕು ಸುಗಮ ಆಗುವುದಕ್ಕೆ ಅಗತ್ಯವಿರುವ ಮೂಲಸೌಕರ್ಯಗಳು, ಜೀವನಾವಶ್ಯಕತೆಗಳು, ಉದ್ಯೋಗ ಸೃಷ್ಟಿಯಂತಹ ಕ್ಷೇತ್ರಗಳಿಗೆ ಆದ್ಯತೆ ನೀಡುವ, ಆ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಳ್ಳಲು ಭ್ರಷ್ಟಾಚಾರ ರಹಿತ ಅವಕಾಶ ಕಲ್ಪಿಸುವ ಬದಲು, ಉದ್ಯೋಗ ನಷ್ಟಕ್ಕೆ, ಅನಗತ್ಯ ಪರಿಸರ ಹಾನಿಗೆ ಕಾರಣ ಆಗಬಲ್ಲ ಮತ್ತು ಯಾರೋ ಒಂದಿಬ್ಬರು ಕಾರ್ಪೊರೇಟ್ ‘ಆನಿ’ಗಳಿಗೆ ಮಾತ್ರ ಲಾಭ ತರಬಲ್ಲ AI ನಂತಹ ಕ್ಷೇತ್ರಗಳಲ್ಲಿ ಸರಕಾರ ಅತ್ಯುತ್ಸಾಹದಿಂದ ತೊಡಗಿಕೊಳ್ಳುತ್ತಿರುವುದು ಅಸಹಜ ನಡೆ.

ಒಂದು ವೇಳೆ ಭಾರತ ಈ AI ಮಾರುಕಟ್ಟೆ ಧಾವಂತಕ್ಕೆ ಕಿವಿಗೊಡದೇ, ಸಹಜವಾಗಿ AI ಆಧರಿತ ಸಂಶೋಧನೆಗಳಲ್ಲಿ ತೊಡಗಿಕೊಂಡು, ತನ್ನ ಜನರ ಕಲ್ಯಾಣಕ್ಕಾಗಿ ಶ್ರಮಿಸಿದರೆ ಏನಾಗಬಹುದು? ಏನು ಮುಳುಗಿ ಅಲ್ಲೋಲ ಕಲ್ಲೋಲ ಆಗಬಹುದು?... ನಿಜಕ್ಕೆಂದರೆ ಏನೂ ಆಗುವುದಿಲ್ಲ. ಅಬ್ಬಬ್ಬಾ ಎಂದರೆ, ಕ್ಲರಿಕಲ್ ದರ್ಜೆಯ ಹಲವರು ಅಕಾಲಿಕವಾಗಿ ಕೆಲಸ ಕಳೆದುಕೊಳ್ಳುವುದು ತಪ್ಪುತ್ತದೆ, ಪರಿಸರ ಇನ್ನಷ್ಟು ಸಹನೀಯವಾಗಿರುತ್ತದೆ, ಶ್ರೀಮಂತರು-ಬಡವರ ನಡುವಿನ ಅಂತರ ಹೆಚ್ಚಾಗುವುದು ಸ್ವಲ್ಪ ತಗ್ಗಬಹುದು... ಹೇಗೂ ಬೇರೆ ದೇಶ ಉತ್ಪಾದಿಸಿದ AI ಸರಕು ದುಡ್ಡು ಕೊಟ್ಟರೆ ನಮಗೂ ಸಿಗಲಿದೆ. ಹಾಗಾದರೆ ಈಗ ಇರುವ ಧಾವಂತ ಯಾರದು? ಯಾಕೆ?

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X