AI ಬಬಲ್ ಒಳಗೆ LLM ಎಂಬ ಕವಲಿನ ಭಸ್ಮಾಸುರ ಅವತಾರ

ಕ್ಷಿಪ್ರ ಬೆಳವಣಿಗೆಗಳು ಮತ್ತು ಅವಕ್ಕೆ ಸಿಕ್ಕ ಪ್ರಚಾರದ ಫಲವಾಗಿ, ಇಂದು AI ಕುರಿತು ಜಗತ್ತಿನಾದ್ಯಂತ ಆತಂಕ ಶುರುವಾಗಿದೆ. ಆ ಆತಂಕದ ಮುಸುಕಿನ ಮರೆಯಲ್ಲಿ AI ಕಂಪೆನಿಗಳಿಗೆ ತಮ್ಮ ಹೂಡಿಕೆದಾರರ ಒತ್ತಡವನ್ನು ಬದಿಗೆ ಸರಿಸುವ ಸದವಕಾಶವೊಂದು ದೊರೆತಂತಿದೆ. ಜೊತೆಗೆ, ತಮ್ಮ ಸ್ಥಾನದ ಏಕಸ್ವಾಮ್ಯವನ್ನು ಭದ್ರಪಡಿಸಿಕೊಂಡ ಬಳಿಕ, ಬೇರೆ ಸಣ್ಣ ಕಂಪೆನಿಗಳಿಗೆ ಹೆಚ್ಚಿನ ಅವಕಾಶ ಸಿಗದಂತೆ ಮಾಡುವ, ಓಪನ್ ಸೋರ್ಸ್ ಬೆಳವಣಿಗೆಗಳನ್ನು ಹತ್ತಿಕ್ಕುವ ಹುನ್ನಾರದ ಭಾಗ ಇದು ಎಂದೂ ವ್ಯಾಖ್ಯಾನಿಸಲಾಗುತ್ತಿದೆ.
ಕೃತಕ ಬುದ್ಧಿಮತ್ತೆ (AI)ಯ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ (LLM) ಚಹರೆಯು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ರೀತಿ ಮತ್ತು ಅದೀಗ ತಲುಪಿರುವ ಹಂತವನ್ನು ಗಮನಿಸಿದರೆ, ಎಲ್ಲೋ ಏನೋ ಸರಿ ಇಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸತೊಡಗಿದೆ. ಸಿದ್ಧಗೊಂಡ ಪುಟ್ಟ ಮಾದರಿ AI ಗಳನ್ನು ದೊಡ್ಡ ಗಾತ್ರದ ಸ್ವಾಯತ್ತ, ಕಾರ್ಯಶೀಲ ಯೋಜನೆಗಳಾಗಿ ರೂಪಿಸಲು ದೊಡ್ಡ ಪ್ರಮಾಣದಲ್ಲಿ ಹೂಡಿಕೆದಾರರನ್ನು ಆಕರ್ಷಿಸಬೇಕಿತ್ತು. ಅದರಲ್ಲಿ AI ಕಂಪೆನಿಗಳು ಯಶಸ್ವಿ ಆಗಿವೆ. ಅವು ಎಬ್ಬಿಸಿರುವ ಈ ‘ಹವಾ’, ಕಾರ್ಯಶೀಲತೆಯ ಪ್ರಶ್ನೆ ಬಂದಾಗ ಊಹಿಸಿದಂತೆ ಸಾಗುತ್ತಿಲ್ಲ ಎಂಬ ವಾಸ್ತವವು ಬಿಗ್‌ಟೆಕ್ ಕಂಪೆನಿಗಳಿಗೆ ಈಗ ಅರಿವಾದಂತಿದೆ. ಅದಕ್ಕಾಗಿ ಕಾಗಕ್ಕ-ಗುಬ್ಬಕ್ಕ ಕಥೆಗಳೆಲ್ಲ ಆರಂಭಗೊಂಡಿವೆ ಮತ್ತು ಈ ವರ್ಷದುದ್ದಕ್ಕೂ ನಡೆದಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಕೃತಕ ಬುದ್ಧಿಮತ್ತೆಯ ‘ಗಾಳಿಗುಳ್ಳೆ’ ಊಹಿಸಿದಂತೆಯೇ ಒಡೆಯ ಲಾರಂಭಿಸಿರಬಹುದು ಅನ್ನಿಸತೊಡಗಿದೆ.
ಯಾವುದೇ ವೈಜ್ಞಾನಿಕ ಸಂಶೋಧನೆ ನಡೆಸುವಾಗ ಅದರ ವಿಪರೀತ ಪರಿಣಾಮಗಳ ಬಗ್ಗೆ ಏನಿಲ್ಲದಿದ್ದರೂ ಒಂದು ‘ಸ್ಥೂಲ ಊಹೆ’ ಇರಲೇಬೇಕು. ಅದೇನೂ ಇಲ್ಲದೆ - ಒತ್ತಿ ಕೇಳಿದರೆ ಒಂದು ಸ್ಪಷ್ಟ ಯೋಜನೆಯೇ ಇಲ್ಲದೆ - ಸಾಕಷ್ಟು ದೂರ ಬಂದಿರುವ ಈ ಏಜೆಂಟಿಕ್ AI ಯೋಜನೆಗಳ ಮಾಲಕ ಕಂಪೆನಿಗಳು ಈಗ ತಮ್ಮ ಅಸಲೀ ಆಟ ಆರಂಭಿಸಿವೆ. ಅವು ತಮ್ಮ ಹೂಡಿಕೆದಾರರ ಕುರಿತು ಉತ್ತರದಾಯಿತ್ವ ಇಲ್ಲದಂತೆ, ಸಣ್ಣ ಪ್ರತಿಸ್ಪರ್ಧಿಗಳಿಗೆ ಅವಕಾಶ ಸಿಗದಂತೆ ವರ್ತಿಸತೊಡಗಿವೆ. ಅದರ ಕರಿನೆರಳು ಮಾರುಕಟ್ಟೆಯಲ್ಲೂ ಕಾಣಿಸಲಾರಂಭಿಸಿದೆ.
ಏನೇನು ಹೊಸ ಬೆಳವಣಿಗೆಗಳಾಗಿವೆ ಎಂಬುದನ್ನು ಒಮ್ಮೆ ಗಮನಿಸೋಣ. ವಾರದ ಹಿಂದೆ (ಸೆ.9)Anthropic ಕಂಪೆನಿಯ ಸಂಶೋಧಕ ಜೇಕಬ್ ಕಾಕ್ಸನ್ ತನ್ನ ಹುದ್ದೆಗೆ ರಾಜೀನಾಮೆ ನೀಡಿ, ತಮ್ಮ ಸಂಸ್ಥೆ ಮತ್ತು ತಮ್ಮ ವ್ಯವಹಾರದ ಎದುರಾಳಿ OpenAIಗಳು ಸಿದ್ಧಪಡಿಸುತ್ತಿರುವ AIತಂತ್ರಜ್ಞಾನವು ‘‘ಇನ್ನೊಂದು ದಶಕದ ಒಳಗೆ ಮನುಷ್ಯ ಜೀವಗಳ ಸಮೂಲ ನಾಶಕ್ಕೆ ಕಾರಣ ಆಗಲಿವೆ’’ ಎಂದಿದ್ದರು. ಅವರ ಬೆನ್ನಿಗೇ ಮತ್ತೆ ಹಲವರು ಈ ವಿಚಾರಕ್ಕೆ ತಮ್ಮ ಒಪ್ಪಿಗೆಯ ಮುದ್ರೆ ಒತ್ತುವುದರೊಂದಿಗೆ, ಜಗತ್ತು ‘ಹೀಗೂ ಉಂಟೆ?’ ಎಂದು ದಿಗ್ಭ್ರಮೆಗೊಂಡಿದೆ.
ತನ್ನ ಸಿಬ್ಬಂದಿಯ ಈ ಆತಂಕಕಾರಿ ಹೇಳಿಕೆಗೆ ಪ್ರತಿಕ್ರಿಯಿಸಿರುವ Anthropic ಮುಖ್ಯಸ್ಥ ಧಾರಿಯೊ ಆಮೋಡೆ ಅವರು, ‘‘ಜೇಕಬ್ ಅವರ ಹೇಳಿಕೆಗೆ ನನ್ನ ಭಿನ್ನಮತಕ್ಕಿಂತ ಸಹಮತ ಹೆಚ್ಚಿದೆ’’ ಎಂದಿದ್ದಾರಲ್ಲದೇ ಕಳೆದ ಶನಿವಾರ We must pace the frontier (https://darioamodei.com/post/we-must-pace-the-frontier) ಎಂಬ ಬರೆಹವನ್ನು ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿ, ‘AI ಕುರಿತ ಅಭಿವೃದ್ಧಿ ಕೆಲಸಗಳು ತನ್ನ ವೇಗ ತಗ್ಗಿಸಿಕೊಳ್ಳಬೇಕು. ಕಂಪೆನಿಗಳು ತಮ್ಮAI ಮಾದರಿಗಳನ್ನು ಪಳಗಿಸಿ ಸುರಕ್ಷಿತಗೊಳಿಸಲು ಸಾಕಷ್ಟು ಸಮಯ ತೆಗೆದುಕೊಳ್ಳಬೇಕು ಮತ್ತು ಹೊರಗಿನ ಪರಿಣತರು ಈ ಸುರಕ್ಷತೆಯನ್ನು ಪರಿಶೀಲಿಸಿ ಖಚಿತಪಡಿಸುವಂತಾಗಬೇಕು’’ ಎಂದಿದ್ದಾರೆ. OpenAI ಕಂಪೆನಿಯ ಮುಖ್ಯಸ್ಥ ಸ್ಯಾಮ್ ಆಲ್ಟ್‌ಮನ್, xAI ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್ ಇಬ್ಬರೂ, ಧಾರಿಯೊ ಅವರ ಈ ಹೇಳಿಕೆಗೆ ಸಹಮತಿ ಸೂಚಿಸಿದ್ದಾರೆ.
ಮೂರು ವರ್ಷ ಹಿಂದೆ,AI ಗೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಗಳು ಚುರುಕುಗೊಳ್ಳುತ್ತಿದ್ದಾಗ, ಇದೇ ಧಾರಿಯೊ ಮತ್ತು ಆಲ್ಟ್‌ಮನ್, ಕೃತಕ ಬುದ್ಧಿಮತ್ತೆಯ ಸಾಧ್ಯತೆಗಳ ಬಗ್ಗೆ ಭರಪೂರ ಭರವಸೆಯ ಮಾತು ಗಳನ್ನಾಡಿದ್ದರು ಹಾಗೂ ವೈದ್ಯಕೀಯ ಸಂಶೋಧನೆ, ಪರಿಸರ ಸಮತೋಲನ, ಆರ್ಥಿಕ ಅಭಿವೃದ್ಧಿ, ಉತ್ಪಾದಕತೆ, ಸಂಕೀರ್ಣ ವೈಜ್ಞಾನಿಕ ಸಮಸ್ಯೆಗಳ ಪರಿಹಾರದಲ್ಲಿ AI ಮಹತ್ವದ ಪಾತ್ರ ವಹಿಸಲಿದೆ ಎಂದು ವಾದಿಸಿದ್ದರು.
AI ಜಗತ್ತಿಗೆ ಹೊಸದೇನೂ ಅಲ್ಲ. ಹತ್ತಾರು ವಲಯಗಳಲ್ಲಿ AI ಸಂಬಂಧಿ ತಂತ್ರಜ್ಞಾನಗಳು ದಶಕಗಳ ಹಿಂದಿನಿಂದಲೇ ಬಳಕೆಯಲ್ಲಿವೆ (ಉದಾ: ರೋಬೊಟಿಕ್ ಶಸ್ತ್ರಕ್ರಿಯೆ). ಆದರೆ, 2022ರಲ್ಲಿ OpenAI ಸಂಸ್ಥೆ ChatGPTಯನ್ನು ಮೊದಲ ಬಾರಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ, ಅದು ‘ಮ್ಯಾಜಿಕಲ್’ ಎಂದು ಜನಸಾಮಾನ್ಯರಿಗೆ ಮೊದಲ ಬಾರಿಗೆ ಅನ್ನಿಸಿತ್ತು. ಆ ಬೆರಗಿನ ಆರ್ಥಿಕ ಲಾಭ ಪಡೆಯಲು ಹೊರಟ ಜಗತ್ತಿನಾದ್ಯಂತದ ಂI ಕಂಪೆನಿಗಳು, ತಮ್ಮಲ್ಲಿ ಹೂಡಿಕೆಗಾಗಿ ಹೂಡಿಕೆದಾರರನ್ನು ಆಕರ್ಷಿಸಲು ಬಗೆಬಗೆಯ ರಂಗಿನಾಟಗಳಲ್ಲಿ ತೊಡಗಿಕೊಂಡಿದ್ದರು. ಈ ರಂಗಿನಾಟಗಳ ಫಲವಾಗಿ ಇಂದು AI ಮೇಲೆ 241ಲಕ್ಷ ಕೋಟಿ ರೂ.ಗಳ ಅಗಾಧ ಹೂಡಿಕೆ ಬಂದಿದೆ. ಅದರಲ್ಲಿ ಶೇ. 40 ಭಾಗ ಕೇವಲ LLM ಗಳದು.
2010ರ ತನಕ ಜಗತ್ತಿನಾದ್ಯಂತ ಸರಕಾರಗಳು ಮಾತ್ರ AI ಸಂಶೋಧನೆ-ಅಭಿವೃದ್ಧಿಗೆ ಹಣ ತೊಡಗಿಸುತ್ತಿದ್ದವು. 2019ರಲ್ಲಿ ಔಠಿeಟಿಂIಗೆ ಮೈಕ್ರೊಸಾಫ್ಟ್ 9,500 ಕೋಟಿ ರೂ. ಹೂಡಿಕೆ ಮಾಡುವುದರೊಂದಿಗೆ AI ಅಭಿವೃದ್ಧಿ ಚಟುವಟಿಕೆಗಳು ಖಾಸಗಿ ರಂಗದಲ್ಲಿ ವೇಗ ಪಡೆದುಕೊಳ್ಳತೊಡಗಿದ್ದವು. 2023-24ರ ಹೊತ್ತಿಗೆ AI ಒಂದು ಪ್ರಮುಖ ವ್ಯಾವಹಾರಿಕ ವರ್ಟಿಕಲ್ ಆಗಿ ರೂಪುಗೊಂಡಿತು. ಅಲ್ಲಿಯವರೆಗೂ ಕೇವಲ ಮಾದರಿಗಳ ಮಟ್ಟದಲ್ಲಿದ್ದ ಂI ತಂತ್ರಜ್ಞಾನವು 2025ರ ಹೊತ್ತಿಗೆ ಸ್ಕೇಲೆಬಲ್, ಕಾರ್ಯಶೀಲ ಯೋಜನೆಗಳ ರೂಪ ಪಡೆಯತೊಡಗಿದಂತೆ, ಅದಕ್ಕೆ ಹೂಡಿಕೆಗಳನ್ನು ಆಕರ್ಷಿಸುವುದು ಅಗತ್ಯ ಇತ್ತು.
ತಮಾಷೆ ಎಂದರೆ, ಈಗ AI ಸಾಧಿಸಿರುವುದು ಕಿಂಚಿತ್. ಅದರ ಆರಂಭದ ಬೆರಗು ಇಂದು ಉಳಿದಿಲ್ಲ. ಹೂಡಿಕೆದಾರರು ತಮ್ಮ ಹೂಡಿಕೆಗೆ ಪ್ರತಿಫಲ ಕೇಳತೊಡಗಿದ್ದಾರೆ. ಈ ಹಂತದಲ್ಲಿ ಅದು ಸಾಧ್ಯವಿಲ್ಲ ಎಂಬುದು ಂI ಕಂಪೆನಿಗಳಿಗೆಲ್ಲ ಚೆನ್ನಾಗಿ ಅರಿವಿದೆ. ತೀರಾ ಕೆಳಹಂತದ ಕೆಲವು ಉದ್ಯೋಗಗಳಿಗೆ ಸಂಚಕಾರ ತಂದದ್ದು ಬಿಟ್ಟರೆ, ಂI ಮೊದಲಿಗೆ ಕೊಚ್ಚಿಕೊಂಡ ಸಾಧನೆಗಳನ್ನೇನೂ ಮಾಡಿಲ್ಲ. ಂIಗೆ ಅಗತ್ಯವಿರುವ ಅಗಾಧ ಡೇಟಾ ಸಂಗ್ರಹ, ಅದರ ದಾಸ್ತಾನಿಗೆ ಡೇಟಾ ಸೆಂಟರ್‌ಗಳು, ಹೀಗೆ ಸನ್ಯಾಸಿ ಸಂಸಾರ ಬೆಳೆಯುತ್ತಲೇ ಇದೆ. ಸಣ್ಣ ಕಂಪೆನಿಗಳೂ ಂI ರಂಗ ಪ್ರವೇಶಿಸುತ್ತಿವೆ. ಈ ಹಂತದಲ್ಲಿ ಹೂಡಿಕೆದಾರರ ಒತ್ತಡ ತಗ್ಗಿಸಿಕೊಳ್ಳುವುದಕ್ಕೆ, ಸ್ಪರ್ಧಿಗಳನ್ನು ನಿವರಿಸಿಕೊಳ್ಳುವುದಕ್ಕೆ ದೊಡ್ಡ ಂI ಕಂಪೆನಿಗಳು ಹೂಡಿರುವ ಬೃಹನ್ನಾಟಕಗಳಂತೆ ಕಳೆದ ವಾರದ ಬೆಳವಣಿಗೆಗಳೆಲ್ಲ ಕಾಣಿಸತೊಡಗಿದೆ.
ಈ ನಾಟಕಗಳ ಹಿಂದಿರುವ ಕೆಲವು ಕಾಗಕ್ಕ-ಗುಬ್ಬಕ್ಕ ಕಥೆಗಳಂತೂ ಬಹಳ ಜಬರ್ದಸ್ತ್ ಇವೆ. ಇದೇ ಜುಲೈ ತಿಂಗಳಿನಲ್ಲಿ, OpenAI ಸಂಸ್ಥೆಯ ಕೆಲವು ಏಜೆಂಟಿಕ್ AI ಟೂಲುಗಳು ಸೈಬರ್ ಸೆಕ್ಯೂರಿಟಿ ತಪಾಸಣೆ ತಾಲೀಮಿನ ವೇಳೆ ಬಂಡೆದ್ದು, ತಮಗೆ ತಾವೇ ಗುಂಪುಕಟ್ಟಿಕೊಂಡು, Hugging Face ಎಂಬ ಇನ್ನೊಂದು ಕಂಪೆನಿಯ ವ್ಯವಸ್ಥೆಯನ್ನು ಹ್ಯಾಕ್ ಮಾಡಿದ್ದವಂತೆ. ಆಗಸ್ಟ್‌ನಲ್ಲಿ Anthropicನ ಕ್ಲಾಡ್ ಮೈಥೋಸ್ ಮಾದರಿಯನ್ನು ಇಂಗ್ಲೆಂಡ್‌ನಲ್ಲಿ ಸರಕಾರಿ ಸಂಸ್ಥೆಯೊಂದು ಪರೀಕ್ಷಿಸುತ್ತಿದ್ದಾಗ, ಆ ಮಾದರಿಯು ಬಂಡೆದ್ದು ವರ್ತಿಸಿ, ಒಂದು ಓಪನ್ ಸೋರ್ಸ್ ವ್ಯವಸ್ಥೆಯೊಳಗೆ ‘ಮಾಲ್‌ವೇರ್’ ತುರುಕಿಸಲು ವ್ಯಕ್ತಿಯೊಬ್ಬರನ್ನು ಪುಸಲಾ ಯಿಸಿತಂತೆ. ಹಾಗೇ, ಸೆಪ್ಟಂಬರ್‌ನಲ್ಲಿ OpenAIಗೆ ಸೇರಿದ ಮಾದರಿಗಳು ಇನ್ನೊಂದು ಸೈಟ್ ಮೇಲೆ ದಾಳಿ ನಡೆಸಲು ಪರಸ್ಪರ ಮಾತುಕತೆ ನಡೆಸುವುದಕ್ಕಾಗಿ, ಬಳಸದೇ ಪಾಳುಬಿದ್ದಿದ್ದ ಜರ್ಮನ್ ಫೋರಂ ಒಂದನ್ನು ಬಳಸಿಕೊಂಡಿದ್ದವೆಂಬುದನ್ನು ಸ್ವತಂತ್ರ ಸಂಶೋಧಕರ ತಂಡವೊಂದು ಗುರುತಿಸಿದೆಯಂತೆ. ಇಷ್ಟೆಲ್ಲ ಕಾಗಕ್ಕ-ಗುಬ್ಬಕ್ಕ ಕಥೆ ಹೇಳುವ ಈ ಕಂಪೆನಿಗಳು ಅಪಾಯದ ಚಿಹ್ನೆಗಳು ಕಾಣಿಸಿಕೊಂಡಾಗ ಏಕೆ ಅದರ ನಿವಾರಣೆಗೆ ಕಾರ್ಯಾಚರಿಸಿಲ್ಲ? ಅವರ ಆಂತರಿಕ ಸಮಸ್ಯೆಗಳಿಗೆ ಸಾರ್ವಜನಿಕ ರೋದನ ಏಕೆ? ಎಂಬೆಲ್ಲ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತದೆ.
ಈ ಎಲ್ಲ ಕ್ಷಿಪ್ರ ಬೆಳವಣಿಗೆಗಳು ಮತ್ತು ಅವಕ್ಕೆ ಸಿಕ್ಕ ಪ್ರಚಾರದ ಫಲವಾಗಿ, ಇಂದು AI ಕುರಿತು ಜಗತ್ತಿನಾದ್ಯಂತ ಆತಂಕ ಶುರುವಾಗಿದೆ. ಆ ಆತಂಕದ ಮುಸುಕಿನ ಮರೆಯಲ್ಲಿ AI ಕಂಪೆನಿಗಳಿಗೆ ತಮ್ಮ ಹೂಡಿಕೆದಾರರ ಒತ್ತಡವನ್ನು ಬದಿಗೆ ಸರಿಸುವ ಸದವಕಾಶವೊಂದು ದೊರೆತಂತಿದೆ. ಜೊತೆಗೆ, ತಮ್ಮ ಸ್ಥಾನದ ಏಕಸ್ವಾಮ್ಯವನ್ನು ಭದ್ರಪಡಿಸಿಕೊಂಡ ಬಳಿಕ, ಬೇರೆ ಸಣ್ಣ ಕಂಪೆನಿಗಳಿಗೆ ಹೆಚ್ಚಿನ ಅವಕಾಶ ಸಿಗದಂತೆ ಮಾಡುವ, ಓಪನ್ ಸೋರ್ಸ್ ಬೆಳವಣಿಗೆಗಳನ್ನು ಹತ್ತಿಕ್ಕುವ ಹುನ್ನಾರದ ಭಾಗ ಇದು ಎಂದೂ ವ್ಯಾಖ್ಯಾನಿಸಲಾಗುತ್ತಿದೆ. ಸ್ವತಃ ಅಮೆರಿಕ ಮತ್ತು ಚೀನಾಗಳೂ ತಮ್ಮ ತಮ್ಮ ಜಿಯೊಪೊಲಿಟಿಕಲ್ ಹಿತಾಸಕ್ತಿಗಳ ಕಾರಣಕ್ಕಾಗಿ ಈ ‘ಭಯ ಹುಟ್ಟಿಸುವ’ ತಂತ್ರಗಳನ್ನು ಖಂಡಿಸಿವೆ. Nvidiaದ ಮುಖ್ಯಸ್ಥ ಜೆನ್ಸನ್ ಹುವಾಂಗ್, Hugging Faceನ ಮುಖ್ಯಸ್ಥ ಕೆಲ್ಮೆಂಟ್ ಡಿಲಾಂಗ್ ಮತ್ತಿತರ ಕೆಲವರು AI ‘ವಿನಾಶಕ’ ಎಂಬ ವಾದವನ್ನು ಸಾರಾಸಗಟು ತಿರಸ್ಕರಿಸಿದ್ದಾರೆ.
AI ಏಜೆಂಟ್‌ಗಳ ಬಗ್ಗೆ ಇರಬೇಕಾದ ನಿಜವಾದ ಭಯ ಎಂದರೆ, ಅವುಗಳ ಸಹಾಯ ಪಡೆದು, ರೌಡಿ ದೇಶಗಳೆಂದು ಗುರುತಿಸಲಾಗುವ ಕೆಲವು ದೇಶಗಳು ವಿನಾಶಕ ವೈರಸ್‌ಗಳನ್ನು ಜೈವಿಕ ಆಯುಧಗಳಾಗಿ ಅಭಿವೃದ್ಧಿಪಡಿಸುವ, ಒಂದು ದೇಶದ ವಿದ್ಯುತ್ ಗ್ರಿಡ್ ವ್ಯವಸ್ಥೆಯ ಮೇಲೆ ಅಥವಾ ಆರ್ಥಿಕ ವ್ಯವಸ್ಥೆಯ ಮೇಲೆ ವಿನಾಶಕ ದಾಳಿ ನಡೆಸುವ ಮೂಲಕ ಅರಾಜಕತೆಗೆ ದಾರಿ ತೆರೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಸಾರ್ವಭೌಮ ದೇಶಗಳು, ಜಾಗತಿಕ ವ್ಯವಸ್ಥೆಗಳು ಈ ನಿಟ್ಟಿನಲ್ಲಿ ತಂತ್ರಜ್ಞಾನಕ್ಕಿಂತ ಬಹಳ ಹಿಂದುಳಿದಿವೆ. ಅವು ಸಕಾಲಿಕ ಕಾನೂನು ಚೌಕಟ್ಟುಗಳನ್ನು, ನೈತಿಕ ಗಡಿಗಳನ್ನು ರೂಪಿಸಿದರೆ AI ಮೇಲೆ ಹಿಡಿತ ಸಾಧ್ಯವಿದೆ. ಅದು ಸಾಧ್ಯವಿಲ್ಲ ಎಂದಾದರೆ, ಕ್ಲೋನಿಂಗ್‌ನಂತಹ ಜೀವವಿರೋಧಿ ಸಂಶೋಧನೆಗಳಿಗೆ ತಡೆ ಒಡ್ಡಿದ ರೀತಿಯಲ್ಲೇ AI ಭಸ್ಮಾಸುರ ಅವತಾರಕ್ಕೂ ತಡೆ ಒಡ್ಡಬೇಕು. ಅದನ್ನು ಬಿಟ್ಟು ನಡುರಸ್ತೆಯಲ್ಲಿ ಅಳುಮೋರೆ ತೋರಿಸುವ ಈಗಿನ ಬೆಳವಣಿಗೆಗಳು ಯಾಕೋ ಸಹಜ ಅನ್ನಿಸುತ್ತಿಲ್ಲ.
(ಅಂಕಣಕಾರರು ಹಿರಿಯ ಪತ್ರಕರ್ತರು ಮತ್ತು ಚಿಂತಕರು)






