Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ಡೇಟಾ ಕಾಯ್ದೆ ಬಂತು; ಡೇಟಾ ಮಂಡಳಿ...

ಡೇಟಾ ಕಾಯ್ದೆ ಬಂತು; ಡೇಟಾ ಮಂಡಳಿ ಬರಲಿಲ್ಲ!

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು17 Oct 2026 10:27 AM IST
share
ಡೇಟಾ ಕಾಯ್ದೆ ಬಂತು; ಡೇಟಾ ಮಂಡಳಿ ಬರಲಿಲ್ಲ!

ಡೇಟಾಗಳನ್ನು ಇಂದು ವಿಮಾನ ನಿಲ್ದಾಣಗಳಲ್ಲಿ ಬಳಸುತ್ತಿರುವುದು ಸ್ವತಃ ಸರಕಾರ ಅಲ್ಲ. ಬದಲಾಗಿ, ವಿಮಾನ ನಿಲ್ದಾಣದ ಗುತ್ತಿಗೆ ಹಿಡಿದಿರುವ ಖಾಸಗಿ ಕಾರ್ಪೋರೇಟ್‌ಗಳು. ಸರಕಾರ ಬಳಸದಿದ್ದರೂ, ಈ ಖಾಸಗಿ ಕಾರ್ಪೊರೇಟ್‌ಗಳು ತಮ್ಮ ಬಳಿ ಇರುವ ಡೇಟಾಗಳನ್ನು ಹೇಗೆ ಬಳಸುತ್ತವೆ/ಬಳಸಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಕ್ರೊನಾಲಜಿಯನ್ನು ಸಾದ್ಯಂತ ಗಮನಿಸಿದರೆ, ಇವೆಲ್ಲ ಉದ್ದೇಶಪೂರ್ವಕ ಇರಬಹುದೇ ಎಂಬ ಸಂಶಯ ಬರುವುದು ತಪ್ಪಲ್ಲ.

ಅಕ್ಟೋಬರ್ 10ರಂದು ಕೇರಳ ಹೈಕೋರ್ಟ್ ಭಾರತ ಸರಕಾರಕ್ಕೆ ಒಂದು ಆದೇಶ ನೀಡಿ (W.P. (PIL) No. 15 of 2026- ಸಿ. ಆರ್. ನೀಲಕಂಠನ್ ವರ್ಸಸ್ ಭಾರತ ಸರಕಾರ ಮತ್ತು ಇತರರು.) ಮುಂದಿನ ಎಂಟು ವಾರಗಳ ಒಳಗೆ ಡೇಟಾ ಸಂರಕ್ಷಣಾ ಮಂಡಳಿ ಕಾರ್ಯಾಚರಿಸಬೇಕೆಂದು ನ್ಯಾಯಾಲಯ ಅಪೇಕ್ಷಿಸುತ್ತದೆ ಎಂದು ಹೇಳಿದೆ. ಡಿಜಿಯಾತ್ರಾದಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಪ್ರಯಾಣಿಕರ ಖಾಸಗಿ ಡೇಟಾಗಳನ್ನು ಸಂಗ್ರಹಿಸಲಾಗುತ್ತಿರುವ ಹಿನ್ನೆಲೆಯಲ್ಲಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (ಪಿಐಎಲ್) ಇದಾಗಿತ್ತು. ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾ.ಸೌಮೆನ್ ಸೇನ್ ಮತ್ತು ನ್ಯಾ.ಶ್ಯಾಮ್ ಕುಮಾರ್ ವಿ.ಎಂ. ಅವರ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಒಂದು ಸರಕಾರ ತನಗೆ ಬೇಕೆನಿಸಿದ ಕಾನೂನನ್ನು ರಾತ್ರಿ ಬೆಳಗಾಗುವುದರೊಳಗೆ ಜಾರಿಗೆ ತರುವ ಮತ್ತು ತನ್ನ ಚಟುವಟಿಕೆಗಳಿಗೆ ಅಡ್ಡಿ ಆಗುವಂತಹ (ತಾನೇ ರೂಪಿಸಿದ) ಕಾನೂನನ್ನು ನನೆಗುದಿಗೆ ಹಾಕುವ ಶಾಸನಾತ್ಮಕ ತಾರತಮ್ಯ ತೋರತೊಡಗಿದಾಗ, ಆ ಕಾನೂನಿನ ಅಗತ್ಯ ಮನಗಂಡಿರುವ ಜನಸಾಮಾನ್ಯರು ನ್ಯಾಯಾಲಯಗಳ ಬಾಗಿಲು ತಟ್ಟದೇ ಬೇರೆ ಹಾದಿ ಉಳಿದಿರುವುದಿಲ್ಲ. ದುರಂತ ಎಂದರೆ, ಇಂತಹ ಸಣ್ಣ-ಪುಟ್ಟ ಕಾರಣಗಳಿಗೂ ಇಂದು ನ್ಯಾಯಾಲಯದ ಹಸ್ತಕ್ಷೇಪ ಅನಿವಾರ್ಯ ಎಂಬಂತಹ ಸನ್ನಿವೇಶವನ್ನು ಜನತೆಯ ಎದುರು ಒಡ್ಡಲಾಗುತ್ತಿದೆ. ಜನಸಾಮಾನ್ಯ ತನ್ನ ಸಹಜ ಹಕ್ಕುಗಳನ್ನು ಕಾಡಿ-ಬೇಡಿ-ಅಂಗಲಾಚಿ ಪಡೆಯಬೇಕಾಗಿದೆ. ಸ್ವತಃ ನ್ಯಾಯಾಲಯವೇ ಹೇಳಿರುವಂತೆ ‘ಸೊಳ್ಳೆ ಹೊಡೆಯಲು ಸುತ್ತಿಗೆ ಬಳಸುವುದು’ ಪದೇಪದೇ ನಡೆಯುತ್ತಿದೆ.

ದಿನ ಬೆಳಗಾದರೆ ದೇಶದಾದ್ಯಂತ ನೂರಾರು ಜನ ತಮ್ಮ ಶ್ರಮದ ದುಡಿಮೆಯ ಕೋಟ್ಯಂತರ ರೂ.ಗಳನ್ನು ಡಿಜಿಟಲ್ ವಂಚನೆಗಳಿಗೆ ಕಳೆದುಕೊಳ್ಳುತ್ತಿದ್ದಾರೆ. ಬ್ಯಾಂಕುಗಳ ಮೂಲಕವೇ ನಡೆಯುವ ಈ ವಂಚನೆ ವ್ಯವಹಾರಗಳನ್ನು ಸಮೂಲ ನಾಶ ಮಾಡುವಲ್ಲಿ ಭಾರತ ಸರಕಾರ ದಯನೀಯವಾಗಿ ವಿಫಲಗೊಂಡಿದೆ. ಕಳೆದ 3-4 ವರ್ಷಗಳಲ್ಲಿ ಸರಕಾರಿ ವ್ಯವಸ್ಥೆಯ ಈ ಗಾತ್ರದ ನಿಷ್ಕ್ರಿಯತೆಯನ್ನು ಕಂಡಾಗ, ಈ ಡಿಜಿಟಲ್ ವಂಚನೆ ಪ್ರಕರಣಗಳ ಹಿಂದೆ ಉದ್ದೇಶ ಪೂರ್ವಕ ನಿರ್ಲಕ್ಷ್ಯ ಇರಬಹುದೇ ಎಂಬ ಸಂಶಯ ಬರುವುದು ಸಹಜ. ಅದಕ್ಕೆ ಸಕಾರಣಗಳೂ ಇವೆ.

ಡಿಜಿಟಲ್ ಇಂಡಿಯಾದ ಮೂಲಾಧಾರ ಆಗಿರುವ ‘ಆಧಾರ್ ನಂಬರ್’ ನಮ್ಮ ವೈಯಕ್ತಿಕ ಡೇಟಾಗಳ ಖಾಸಗಿ ಸ್ವರೂಪವನ್ನು ನಾಶ ಮಾಡಬಹುದೆಂಬ ಆತಂಕಗಳು ಎದ್ದದ್ದು 2012ರಷ್ಟು ಹಿಂದೆಯೇ. ಈ ಪ್ರಕರಣದ (ಕೆ.ಎಸ್. ಪುಟ್ಟಸ್ವಾಮಿ ಪ್ರಕರಣ) ತೀರ್ಪು ಹೊರಬಂದದ್ದು 2017ರ ಆಗಸ್ಟ್ 24ರಂದು. ರಾಷ್ಟ್ರಪತಿಗಳು ‘ಶಾಸನ’ ಎಂದು 2023ರ ಆಗಸ್ಟ್ 14ರಂದು ಅಂಗೀಕರಿಸಿರುವ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣೆ ಕಾಯ್ದೆ(DPDP Act)- 2023ರ ಮೂಲ ಇರುವುದು ಪುಟ್ಟಸ್ವಾಮಿ ಪ್ರಕರಣದ ತೀರ್ಪಿನಲ್ಲಿ. ಅಂದರೆ ಈಗ 15 ವರ್ಷಗಳಾಗಿವೆ. ಆದರೂ DPDP ಕಾಯ್ದೆ ಪೂರ್ಣಪ್ರಮಾಣದಲ್ಲಿ ಜಾರಿಗೆ ತರುವುದು ಭಾರತ ಸರಕಾರಕ್ಕೆ ಸಾಧ್ಯ ಆಗಿಲ್ಲ. ಈ ಕಾಯ್ದೆಯ ಪ್ರವಧಾನಗಳ ನಿರ್ವಹಣೆಯ ಅಧಿಕಾರ ಹೊಂದಿರುವ ಡೇಟಾ ಸಂರಕ್ಷಣಾ ಮಂಡಳಿಯನ್ನೇ ಭಾರತ ಸರಕಾರ ಇನ್ನೂ ಕಾರ್ಯಗತಗೊಳಿಸಿಲ್ಲ. ಕಳೆದ 15 ವರ್ಷಗಳಿಂದಲೂ ಈ ಕಾಯ್ದೆ ಜಾರಿಗೆ ತರುವಲ್ಲಿ ಭಾರತ ಸರಕಾರದ ನಿರ್ಲಕ್ಷ್ಯ, ಉದಾಸೀನಗಳು ಗಮನಾರ್ಹ ಪ್ರಮಾಣದಲ್ಲಿ ಕಾಣಿಸುತ್ತಿವೆ. ಹಾಗಾಗಿಯೇ ಕೇರಳದ ಹೈಕೋರ್ಟ್ ಕಳೆದ ವಾರದ ಕೊನೆಯಲ್ಲಿ ಮುಂದಿನ ಎಂಟು ವಾರಗಳ ಒಳಗೆ ಆ ಮಂಡಳಿಯನ್ನು ರಚಿಸಬೇಕು ಎಂದು ಭಾರತ ಸರಕಾರಕ್ಕೆ ಚಾಟಿ ಬೀಸಿದೆ. ಇಷ್ಟಾದರೂ ಸರಕಾರ ಈ ಕೆಲಸ ಪೂರ್ಣಗೊಳಿಸೀತೆಂಬ ನಂಬಿಕೆ ಇಲ್ಲ. ಅವರಿಗೆ ಸಾವಿರ ಸಬೂಬುಗಳು ಸಿಗುತ್ತಿರುತ್ತವೆ. ದೇಶದ ಅತಿದೊಡ್ಡ ಡೇಟಾ ಸಂಗ್ರಹ ಪ್ರಕ್ರಿಯೆಯಾದ ಜನಗಣತಿಯನ್ನೇ 16 ವರ್ಷಗಳಿಂದ ಮಾಡದೇ ನನೆಗುದಿಗೆ ಹಾಕಿ ಕುಳಿತವರಿಗೆ ಇದೆಲ್ಲ ಲೆಕ್ಕವೇ ಅಲ್ಲ!

ಹಾಲಿ ಪ್ರಕರಣದಲ್ಲಿ ಅರ್ಜಿದಾರರು ಡಿಜಿಯಾತ್ರಾ (ಈ ಡಿಜಿಯಾತ್ರಾ ಪ್ಲಾಟ್‌ಫಾರ್ಮ್ ಕುರಿತು ಇದೇ ಅಂಕಣದಲ್ಲಿ 2025ರ ಜುಲೈ 5ರಂದು ವಿವರಿಸಲಾಗಿದೆ.) ಮೂಲಕ ದೊರಕುವ ಜನಸಾಮಾನ್ಯರ ಡೇಟಾಗಳನ್ನು ಸಂಗ್ರಹಿಸುವಲ್ಲಿ, ದಾಸ್ತಾನಿರಿಸುವಲ್ಲಿ, ಸಂಸ್ಕರಿಸುವಲ್ಲಿ ಹಾಗೂ ಡೇಟಾ ವಿನಿಮಯಗಳ ವೇಳೆಯಲ್ಲಿ, DPDP ಕಾಯ್ದೆಯ ಅನ್ವಯ ವಿಮಾನ ಪ್ರಯಾಣಿಕರ ಡೇಟಾ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸುವಂತೆ ಭಾರತ ಸರಕಾರದ ವಿಮಾನಯಾನ ಇಲಾಖೆಗೆ, ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) ಹಾಗೂ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳಿಗೆ ನಿರ್ದೇಶನ ನೀಡುವಂತೆ ಕೋರಿ ಕೇರಳದ ಹೈಕೋರ್ಟಿನಲ್ಲಿ ಪಿಐಎಲ್ ಸಲ್ಲಿಸಿದ್ದರು.

ಡಿಜಿಯಾತ್ರಾ ಫೌಂಡೇಷನ್ ಒಂದು ಲಾಭೋದ್ದೇಶವಿಲ್ಲದ ಜಾಯಿಂಟ್ ವೆಂಚರ್ (ಜೆವಿ) ಖಾಸಗಿ ಕಂಪೆನಿ. ಭಾರತ ಸರಕಾರದ ನಾಗರಿಕ ವಿಮಾನಯಾನ ಖಾತೆಯ ಅಡಿಯಲ್ಲಿ 2019ರ ಫೆಬ್ರವರಿ 20ರಂದು ಸ್ಥಾಪನೆಗೊಂಡಿರುವ ಈ ಕಂಪೆನಿಯ ಪ್ಲಾಟ್‌ಫಾರ್ಮ್ ಮೂಲಕ ಪ್ರಯಾಣಿಕರ ಮುಖಚಹರೆ ಬಳಸಿಕೊಂಡು, ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಗುರುತು ಖಚಿತಪಡಿಸಿಕೊಳ್ಳಲಾಗುತ್ತದೆ ಹಾಗೂ ಅವರ ಪ್ರಯಾಣ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ದೇಶದಲ್ಲಿ ಈ ವರ್ಷ ಮೇ ಹೊತ್ತಿಗಾಗಲೇ 2.4 ಕೋಟಿ ಮಂದಿ ಡಿಜಿಯಾತ್ರಾ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡಿದ್ದು, ದೇಶದ 38 ವಿಮಾನ ನಿಲ್ದಾಣಗಳ ಮೂಲಕ 10 ಕೋಟಿಗೂ ಮಿಕ್ಕಿ ಸಂಖ್ಯೆಯಲ್ಲಿ ಪ್ರಯಾಣಗಳು ಡಿಜಿಯಾತ್ರಾ ಬಳಸಿ ನಡೆದಿವೆ. ಡಿಜಿಯಾತ್ರಾ ತನ್ನ ವಿನ್ಯಾಸದಲ್ಲೇ ಖಾಸಗಿತನ ಕಾಪಾಡಿಕೊಳ್ಳುವ ಸವಲತ್ತು ಹೊಂದಿದ್ದು, ಪ್ರಯಾಣಿಕರ ಡೇಟಾಗಳು ಎನ್‌ಕ್ರಿಪ್ಟ್ ಆಗಿರುತ್ತವೆ ಮತ್ತು ಆ ಡೇಟಾ ಬಳಕೆದಾರರ ಫೋನ್‌ನಲ್ಲೇ ಇರುತ್ತದೆ. ಗುರುತು ಖಚಿತಪಡಿಸಿಕೊಳ್ಳಲು ವಿಮಾನ ನಿಲ್ದಾಣಗಳು ಸೀಮಿತ ಅವಧಿಗೆ ಈ ಡೇಟಾವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತವೆ ಎಂದು ಸರಕಾರ ಹೇಳುತ್ತಿದೆ. (PIB release ID: 2267024)

ಈ ಪ್ರಯಾಣಿಕರ ಡೇಟಾಗಳನ್ನು DPDP ಕಾಯ್ದೆಯಡಿ ಜವಾಬ್ದಾರಿಯುತವಾಗಿ ಬಳಸುವಂತಾಗಬೇಕೆಂಬುದು ಅರ್ಜಿದಾರರ ಕಳಕಳಿ ಆಗಿತ್ತು. ಪ್ರಕರಣದ ವಿಚಾರಣೆಯ ವೇಳೆ ಭಾರತ ಸರಕಾರದ ವಕೀಲರು, ಡೇಟಾ ನಿರ್ವಹಣೆ ಮಂಡಳಿ ರಚಿಸಲಾಗಿದೆ, ಆದರೆ ಅದು ಕಾರ್ಯಾರಂಭಿಸಿಲ್ಲ ಎಂದು ಹೇಳಿದ್ದಾರೆ. ಇದು ಎಂತಹ ಅರ್ಧಸತ್ಯ ಎಂದರೆ, ಮಂಡಳಿ ‘ರಚನೆ’ ಆಗಿರುವುದು DPDP ಕಾಯ್ದೆಯಲ್ಲಿ ಹಾಗೂ 2025ರ ನವೆಂಬರ್ 13ರಂದು ಪ್ರಕಟಗೊಂಡಿರುವ ಈ DPDP ಕಾಯ್ದೆಯ ನಿಯಮಗಳಲ್ಲಿ. ಮಂಡಳಿಯ ಅಧ್ಯಕ್ಷರು-ಸದಸ್ಯರ ನೇಮಕಾತಿ ಪ್ರಕ್ರಿಯೆಗಳೇ ಇನ್ನೂ ಆರಂಭಗೊಂಡಂತಿಲ್ಲ. ಸರಕಾರದ ವಕೀಲರ ಈ ಹೇಳಿಕೆಯನ್ನು ದಾಖಲಿಸಿಕೊಂಡಿರುವ ನ್ಯಾಯಾಲಯವು ಮುಂದಿನ ಎಂಟುವಾರಗಳಲ್ಲಿ ಈ ಮಂಡಳಿ ಕಾರ್ಯಾಚರಿಸಲಾರಂಭಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದಿದೆ.

ಗಂಭೀರವಾದ ಲೋಪ ಇದು

ಭಾರತ ಸರಕಾರವು ನ್ಯಾಯಾಲಯದಲ್ಲಿ ಬೀಸುವ ಕತ್ತಿ ತಪ್ಪಿಸಿಕೊಂಡಿದೆಯಾದರೂ, ಡೇಟಾ ಸಂರಕ್ಷಣೆಯ ಕುರಿತು ಅದು ಹೊಂದಿರುವ ಔದಾಸೀನ್ಯವು ಒಂದು ಗಂಭೀರವಾದ ಆಡಳಿತಾತ್ಮಕ ಲೋಪವಾಗಿದೆ, ಇಲ್ಲವೇ ಉದ್ದೇಶಪೂರ್ವಕ ವಿಳಂಬದ ಕೃತ್ಯವಾಗಿದೆ. ಸದ್ಯಕ್ಕೆ ಗದ್ದಲ ಎಬ್ಬಿಸುತ್ತಿರುವ ಎಸ್‌ಐಆರ್ ವಿವಾದದಲ್ಲಿ ಚುನಾವಣಾ ಆಯೋಗಕ್ಕೆ ಸಗಟಾಗಿ ಸಲ್ಲಿಕೆ ಆಗುತ್ತಿರುವ ಫಾರ್ಮ್-7, ಮತದಾರರ ಖಾಸಗಿತನದ ಸ್ಪಷ್ಟ ಉಲ್ಲಂಘನೆ. ರಾಜಕೀಯ ಪಕ್ಷಗಳ ಬಳಿ ಇರುವ ಮತದಾರರ ಡೇಟಾವನ್ನು ಅದನ್ನು ಒದಗಿಸಲಾಗಿರುವ ಉದ್ದೇಶಕ್ಕೆ ಹೊರತಾದ ಕೆಲಸಗಳಿಗೆ (ಈ ಪ್ರಕರಣಗಳಲ್ಲಿ ಮತದಾರರ ಹೆಸರನ್ನು ಅಳಿಸಲು) ಬಳಸುವುದು DPDP ಕಾಯ್ದೆಯ ಅನ್ವಯ ಅಪರಾಧ ಅನ್ನಿಸುತ್ತದೆ. ಇದೇ ರೀತಿ, ಸರಕಾರದ ಕಡೆಯಿಂದ ನೂರಾರು ಡೇಟಾ ಪ್ಲಾಟ್‌ಫಾರಂಗಳನ್ನು ‘ಇಂಡಿಯಾ ಸ್ಟ್ಯಾಕ್’ ಹೆಸರಿನಲ್ಲಿ ರಚಿಸಲಾಗಿದೆ (ಹೆಚ್ಚಿನ ವಿವರಗಳಿಗೆ ಈ ಲೇಖಕರ ಮಮಡೇಟಾ ಪುಸ್ತಕ ಗಮನಿಸಬಹುದು). ಈ ಪ್ರತಿಯೊಂದೂ ಸ್ಟ್ಯಾಕ್‌ಗಳು ಭಾರತದ ಕೋಟ್ಯಂತರ ಪ್ರಜೆಗಳ ವಿವಿಧ ಡೇಟಾಗಳನ್ನು ಸಂಗ್ರಹಿಸುತ್ತಿವೆ. ಆ ಡೇಟಾಗಳ ಬಳಕೆಯಲ್ಲಿ ನಿಯಂತ್ರಣಕ್ಕೆ ಯಾವುದೇ ಪರಿಣಾಮಕಾರಿ ವ್ಯವಸ್ಥೆಗಳಿಲ್ಲ. ಸ್ವತಃ ಸರಕಾರ ತನ್ನನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರಿಸಿಕೊಂಡುಬಿಟ್ಟಿದೆ. ಹಾಗಾಗಿ, ಡೇಟಾ ಬಳಕೆಯಲ್ಲಿ ಹೊಣೆಗಾರಿಕೆ ಸಡಿಲವಾಗಿದೆ. ಈಗಾಗಲೇ ಜಾರಿ ಮಾಡಿಕೊಂಡಿರುವ DPDP ಕಾಯ್ದೆಯನ್ನು ಆಚರಣೆಗೆ ತರಲು ಸರಕಾರಕ್ಕೆ ಮನಸ್ಸು ಕೂಡ ಇದ್ದಂತಿಲ್ಲ.

ಇಂದು ಡೇಟಾಗಳು ವಾಣಿಜ್ಯ ಮೌಲ್ಯ ಹೊಂದಿರುವ ಸಂಪತ್ತುಗಳು. ಅದಕ್ಕೇ ಅವುಗಳನ್ನು ಎರಡನೆಯ ಚಿನ್ನ ಎಂದು ಕರೆಯಲಾಗುತ್ತದೆ. ದೇಶದ ಪ್ರತಿಯೊಬ್ಬ ಪ್ರಜೆಯ ಈ ಚಿನ್ನದ ಖಜಾನೆಗೆ ಕೈ ಹಾಕಿ, ಡೇಟಾಗಳನ್ನು ಯಾವುದೇ ಕಾನೂನಿನ ಅಡೆತಡೆಗಳಿಲ್ಲದೆ ಮೊಗೆದುಕೊಳ್ಳುವ ಕೆಲಸ ಪ್ರಭುತ್ವದ ಕಡೆಯಿಂದಲೇ ನಡೆಯುತ್ತಿರುವಂತಿದೆ. ಇಂದು ತಂತ್ರಜ್ಞಾನ ಮತ್ತು ಅದರ ಬಳಕೆದಾರರ ಸ್ಥಿತಿ ಹೇಗಿದೆ ಎಂದರೆ, ತಮ್ಮ ಬಳಕೆಯಿಂದ ಯಾವ ಡೇಟಾ ಯಾರಿಗೆ ಸೋರಿ ಹೋಗಿದೆ ಎಂಬುದರ ಅರಿವೂ ಜನಸಾಮಾನ್ಯರಿಗೆ ಇಲ್ಲ. ಅವರಿಗೆ ಶಕ್ತಿ ನೀಡಬೇಕಾಗಿದ್ದ DPDP ಕಾಯ್ದೆಯನ್ನು ಜಾರಿಗೆ ತರಲು ಮೀನ ಮೇಷ ಎಣಿಸಲಾಗುತ್ತಿದೆ. ಡೇಟಾಗಳನ್ನು ಇಂದು ವಿಮಾನ ನಿಲ್ದಾಣಗಳಲ್ಲಿ ಬಳಸುತ್ತಿರುವುದು ಸ್ವತಃ ಸರಕಾರ ಅಲ್ಲ. ಬದಲಾಗಿ, ವಿಮಾನ ನಿಲ್ದಾಣದ ಗುತ್ತಿಗೆ ಹಿಡಿದಿರುವ ಖಾಸಗಿ ಕಾರ್ಪೋರೇಟ್‌ಗಳು. ಸರಕಾರ ಬಳಸದಿದ್ದರೂ, ಈ ಖಾಸಗಿ ಕಾರ್ಪೊರೇಟ್‌ಗಳು ತಮ್ಮ ಬಳಿ ಇರುವ ಡೇಟಾಗಳನ್ನು ಹೇಗೆ ಬಳಸುತ್ತವೆ/ಬಳಸಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಕ್ರೊನಾಲಜಿಯನ್ನು ಸಾದ್ಯಂತ ಗಮನಿಸಿದರೆ, ಇವೆಲ್ಲ ಉದ್ದೇಶಪೂರ್ವಕ ಇರಬಹುದೇ ಎಂಬ ಸಂಶಯ ಬರುವುದು ತಪ್ಪಲ್ಲ.

(ಅಂಕಣಕಾರರು ಪತ್ರಕರ್ತರು)

Tags

dataDPDP Act
share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X