ಕಿರಾಣಿ ಅಂಗಡಿಗಳನ್ನು ಹಳ್ಳಕ್ಕಿಳಿಸುತ್ತಿರುವ ಭಾರತ ಸರಕಾರ

ಈಗ ಎಲ್ಲೆಡೆ ಸದ್ದು ಮಾಡುತ್ತಿರುವ, ನೀವು ಮಧ್ಯರಾತ್ರಿ ಆರ್ಡರ್ ನೀಡಿದರೂ 10-15 ನಿಮಿಷಗಳಲ್ಲಿ ನೀವು ಕೇಳಿದ ಕಿರಾಣಿ ತಂದು ಮನೆಬಾಗಿಲಿಗೇ ಮುಟ್ಟಿಸುವ ಬ್ಲಿಂಕಿಟ್ (ರೊಮ್ಯಾಟೊ); ಇನ್‌ಸ್ಟಾ ಮಾರ್ಟ್ (ಸ್ವಿಗ್ಗಿ), ಝೆಪ್ಟೊ, ಜಿಯೊಮಾರ್ಟ್ ಇತ್ಯಾದಿಗಳೆಲ್ಲ ಒಟ್ಟಾಗಿ 2030ರ ಹೊತ್ತಿಗೆ 11.5 ಲಕ್ಷ ಕೋಟಿ ರೂ. ಗಳ ಅಗಾಧ ಗಾತ್ರದ ಮಾರುಕಟ್ಟೆ ಹೊಂದಲಿವೆ ಎಂದು ಮಾರುಕಟ್ಟೆ ಪರಿಣತರು ಅಂದಾಜಿಸಿದ್ದಾರೆ. ಈ ಬೆಳವಣಿಗೆಯ ನೇರ ಪರಿಣಾಮ ದೇಶದಲ್ಲಿ ಇದೆ ಎಂದು ಅಂದಾಜಿಸಲಾಗಿರುವ ಸುಮಾರು ಮೂರು ಕೋಟಿಗೂ ಮಿಕ್ಕಿ ಕಿರಾಣಿ ಅಂಗಡಿಗಳ ಮೇಲೆ ಆಗಲಿದೆ.
ನಿಮ್ಮ ಓಣಿ, ರಸ್ತೆ, ಮನೆ, ಗ್ರಾಮದಲ್ಲಿ ಕಳೆದ 20 ವರ್ಷಗಳ ಹಿಂದೆ ನಿಮ್ಮೂರಿನಲ್ಲಿದ್ದ ಕಿರಾಣಿ ಅಂಗಡಿಗಳು ಈವತ್ತೂ ಇವೆಯೆ? ಕಾಲದೊಂದಿಗೆ ಅವು ಸೂಪರ್ ಸ್ಟೋರ್, ಹೈಪರ್ ಮಾರ್ಕೆಟ್ ಇತ್ಯಾದಿ ಹೆಸರಲ್ಲಿ ಅಪ್‌ಗ್ರೇಡ್ ಆಗಿವೆಯೆ? ಕೋವಿಡ್ ಬಳಿಕದ ಐದು ವರ್ಷಗಳಲ್ಲಿ ನಿಮ್ಮ ಕಡೆ ಎಷ್ಟು ಕಿರಾಣಿ ಅಂಗಡಿಗಳು ಮುಚ್ಚಿವೆ? ಇವಿಷ್ಟು ಪ್ರಶ್ನೆಗಳಿಗೆ ನಿಮ್ಮಷ್ಟಕ್ಕೆ ನೀವೇ ಉತ್ತರಿಸಿಕೊಳ್ಳಿ.
ಹಾಗೆಯೇ ಮಹಾನಗರಗಳಲ್ಲಿ ದುಡಿಯುತ್ತಿರುವ ನಿಮ್ಮ ಮಕ್ಕಳು, ಕುಟುಂಬಿಕರು ಮನೆಯಲ್ಲಿ ಕಿರಾಣಿ ದಾಸ್ತಾನು ಕಡಿಮೆ ಆದಾಗ ಏನು ಮಾಡುತ್ತಾರೆಂದು ಗಮನಿಸಿದ್ದೀರಾ? ಅವರು ನಿಮ್ಮಂತೆ ಒಮ್ಮೆಗೇ ಅಥವಾ ತಿಂಗಳ ಲೆಕ್ಕ ಬರೆಸಿ ಆಗಾಗ ಕಿರಾಣಿ ತಂದು, ಸಂಬಳ ಬಂದಾಗ ಹಣ ಪಾವತಿಸುತ್ತಿದ್ದಾರೆಯೆ?
ಈಗ ಎಲ್ಲೆಡೆ ಸದ್ದು ಮಾಡುತ್ತಿರುವ, ನೀವು ಮಧ್ಯರಾತ್ರಿ ಆರ್ಡರ್ ನೀಡಿದರೂ 10-15 ನಿಮಿಷಗಳಲ್ಲಿ ನೀವು ಕೇಳಿದ ಕಿರಾಣಿ ತಂದು ಮನೆಬಾಗಿಲಿಗೇ ಮುಟ್ಟಿಸುವ ಬ್ಲಿಂಕಿಟ್ (ರೊಮ್ಯಾಟೊ); ಇನ್‌ಸ್ಟಾಮಾರ್ಟ್ (ಸ್ವಿಗ್ಗಿ), ಝೆಪ್ಟೊ, ಜಿಯೊಮಾರ್ಟ್ ಇತ್ಯಾದಿಗಳೆಲ್ಲ ಒಟ್ಟಾಗಿ 2030ರ ಹೊತ್ತಿಗೆ 11.5 ಲಕ್ಷ ಕೋಟಿ ರೂ. ಗಳ ಅಗಾಧ ಗಾತ್ರದ ಮಾರುಕಟ್ಟೆ ಹೊಂದಲಿವೆ ಎಂದು ಮಾರುಕಟ್ಟೆ ಪರಿಣತರು ಅಂದಾಜಿಸಿದ್ದಾರೆ.
ಈ ಬೆಳವಣಿಗೆಯ ನೇರ ಪರಿಣಾಮ - ದೇಶದಲ್ಲಿ ಇದೆ ಎಂದು ಅಂದಾಜಿಸಲಾಗಿರುವ ಸುಮಾರು ಮೂರು ಕೋಟಿಗೂ ಮಿಕ್ಕಿ ಕಿರಾಣಿ ಅಂಗಡಿಗಳ ಮೇಲೆ ಆಗಲಿದೆ. ಈಗಾಗಲೇ ಸೂಪರ್ ಸ್ಟೋರ್‌ಗಳು, ಮಾಲ್‌ಗಳಲ್ಲಿರುವ ಹೈಪರ್ ಮಾರ್ಕೆಟ್‌ಗಳು ಕಿರಾಣಿ ಅಂಗಡಿಗಳ ಸ್ಥಿತಿಯನ್ನು ಕಂಗೆಡಿಸಿ ಆಗಿದೆ. ಇದಲ್ಲದೆ ನೋಟು ರದ್ದತಿ, ಕೋವಿಡ್ ಲಾಕ್‌ಡೌನ್‌ಗಳೂ ಸಣ್ಣಪುಟ್ಟ ಕಿರಾಣಿ ಅಂಗಡಿಗಳವರನ್ನು ತಳತಪ್ಪಿಸಿವೆ. ಅದರ ಮುಂದುವರಿಕೆಯಾಗಿ ಈಗ ರಂಗ ಪ್ರವೇಶಿಸಿರುವುದೇ ಬಲಿಷ್ಠರ ಕ್ವಿಕ್ ಕಾಮರ್ಸ್ (Q-com) ವ್ಯವಹಾರ. ಬಾಯುಪಚಾರಕ್ಕೆ ತಾವು ಕಿರಾಣಿ ಅಂಗಡಿಗಳ ಪರ ಎಂದು ಹೇಳಿಕೊಳ್ಳುವ ಸರಕಾರಗಳು ಕಳೆದ ಎರಡು ಮೂರು ವರ್ಷಗಳಲ್ಲಿ, ಈ e-com ಹಾಗೂ Q-com ವ್ಯಾಪಾರಸ್ಥರ ಜೀವಸೆಲೆ ಆಗಿರುವ, ಅರ್ಥಾತ್ ಅವರಿಗೆ ಬಂದ ಆರ್ಡರ್‌ಗಳನ್ನು ಸಕಾಲದಲ್ಲಿ ಗ್ರಾಹಕರ ಮನೆಬಾಗಿಲಿಗೆ ತಲುಪಿಸಿಬರುವ ಗಿಗ್ ಕೆಲಸಗಾರರಿಗೆ ಯಾವೆಲ್ಲ ರೀತಿಯ ಪ್ರೋತ್ಸಾಹ, ಸಹಾಯ, ಸಹಕಾರಗಳನ್ನು ಒದಗಿಸುತ್ತಿವೆ ಎಂಬುದನ್ನು ಗಮನಿಸಿ. ನಿರುದ್ಯೋಗದ ಸಮಸ್ಯೆ ಭೂತಾಕಾರವಾಗಿ ಬೆಳೆದು ನಿಂತಾಗ ಸರಕಾರಕ್ಕೆ ಬೀಸುವ ಕತ್ತಿ ತಪ್ಪಿಸಿಕೊಂಡರೆ ಸಾಕಾಗಿತ್ತು. ಹಾಗಾಗಿ ಗಿಗ್ ಕೆಲಸಗಾರರಿಗೆ ಕೊಟ್ಟ ಪ್ರೋತ್ಸಾಹ, ಈಗ ಅದನ್ನೊಂದು ಅಧಿಕೃತ ಉದ್ಯೋಗ ಎಂದೇ ಪರಿಗಣಿಸಿ ಮುಂದುವರಿಯುತ್ತಿದೆ. ದೇಶದ ಯುವಕರು ಕೂಡ ‘ಪಕೋಡಾ ಮಾರುವ’ ಬದಲು ಇದು ಅಡ್ಡಿಲ್ಲ ಎಂದು ಸಹಿಸಿಕೊಂಡಿರುವಂತಿದೆ.
ಎಲ್ಲ ಸಾಮಾಜಿಕ ನೈತಿಕತೆಯನ್ನೂ, ಕಾನೂನಿನ ಬೇಲಿಗಳನ್ನೂ, ಸಾಂವಿಧಾನಿಕ ಚೌಕಟ್ಟನ್ನೂ ದಾಟಿ ವ್ಯವಹರಿಸಲು ಸರಕಾರಗಳೇ ಈ Q-com ಸಂಸ್ಥೆಗಳಿಗೆ ಅನುವು ಮಾಡಿಕೊಟ್ಟಿವೆ. ಅದು ಹೇಗೆಂಬುದನ್ನು ಕೊಂಚ ವಿವರವಾಗಿ ನೋಡೋಣ:
ವಿದೇಶೀ ನೇರ ಹೂಡಿಕೆ ನೀತಿ (FDI Policy) ಮತ್ತು FEMA, 1999 ಕಾಯ್ದೆಯ ಅಡಿಯಲ್ಲಿ, ಈ Q-com ಕಂಪೆನಿಗಳು ತಮ್ಮ ವಿದೇಶಿ ಮೂಲದ ಹೂಡಿಕೆಗಳನ್ನು ಮೂಲಸೌಕರ್ಯಗಳ ನಿರ್ಮಾಣಕ್ಕೆ ಬಳಸಬೇಕೇ ಹೊರತು ನಿರುತ್ಪಾದಕ ಚಟವಟಿಕೆಗಳಲ್ಲಿ ಬಳಸುವಂತಿಲ್ಲ. ಅವು ಕೇವಲ ಮಾರುಕಟ್ಟೆ ಪ್ಲಾಟ್ ಫಾರ್ಮ್‌ಗಳಾಗಿ ವರ್ತಿಸಬಹುದೇ ಹೊರತು ತಮ್ಮ ಪಾಲುದಾರಿಕೆ ಇರುವ ಕಂಪೆನಿಗಳ ಸರಕುಗಳನ್ನು ಅಥವಾ ತಾವೇ ಖರೀದಿಸಿ ದಾಸ್ತಾನು ಇರಿಸಿಕೊಂಡಿರುವ ಸರಕುಗಳನ್ನು ಮಾರುವಂತಿಲ್ಲ. ಅನಾರೋಗ್ಯಕರ ಸ್ಪರ್ಧೆ ನಿಯಂತ್ರಣ ಕಾಯ್ದೆಯ (Competition Act) ಅನ್ವಯ, ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಸಣ್ಣ ಪುಟ್ಟ ಸ್ಪರ್ಧಿಗಳ ಹತ್ತಿಕ್ಕುವಿಕೆಗೆ ಬಳಸುವಂತಿಲ್ಲ.
ಆದರೆ ಇವೆಲ್ಲವನ್ನೂ Q-com ಕಂಪೆನಿಗಳು ಇತ್ತೀಚೆಗಿನ ವರೆಗೂ ಎಗ್ಗಿಲ್ಲದೆ ಉಲ್ಲಂಘಿಸಿವೆ. ಉದಾಹರಣೆಗೆ, ಬಹುತೇಕ ಕಂಪೆನಿಗಳು ತಮಗೆ ಬಂದಿರುವ ವಿದೇಶೀ ಹೂಡಿಕೆಗಳಲ್ಲಿ ತೀರಾ ಸಣ್ಣ ಪ್ರಮಾಣವನ್ನು ಮಾತ್ರ ಮೂಲಸೌಕರ್ಯಕ್ಕೆ ಬಳಸುತ್ತಿದ್ದು, ಉಳಿದೆಲ್ಲ ಮೊತ್ತವನ್ನು ತಮಗೆ ಸದ್ಯಕ್ಕೆ ಆಗುತ್ತಿರುವ ನಷ್ಟ ಭರ್ತಿ ಮಾಡಿಕೊಳ್ಳಲು ಹಾಗೂ ತಮ್ಮ ಮಾರಾಟಗಾರರಿಗೆ ಪರೋಕ್ಷವಾಗಿ ಆರ್ಥಿಕ ಬೆಂಬಲ ಒದಗಿಸಲು ವ್ಯಯಿಸುತ್ತಿವೆಯಂತೆ. ಗಮನಿಸಬೇಕಾದ ಸಂಗತಿ ಎಂದರೆ ಸದ್ಯಕ್ಕೆ ದೇಶದ ಎಲ್ಲ Q-com ಕಂಪೆನಿಗಳೂ ನಷ್ಟದಲ್ಲಿಯೇ ಮುನ್ನಡೆಯುತ್ತಿವೆ ಮತ್ತು ಅವರ ತಕ್ಷಣದ ಉದ್ದೇಶ ಇರುವುದು, ಇಲ್ಲಿ ಅವರ ಸಾಂಪ್ರದಾಯಿಕ ಸ್ಪರ್ಧಿಗಳಾದ ಕಿರಾಣಿ ಅಂಗಡಿಗಳ ತಳತಪ್ಪಿಸಿ ಅವನ್ನು ಮುಚ್ಚಿಸುವುದು. ಆ ಬಳಿಕ ಅವರು ಆಡಿದ್ದೇ ಆಟ.
ಕಾನೂನಿನ ಪ್ರಕಾರ ಅನಾರೋಗ್ಯಕರ ಸ್ಪರ್ಧೆಗೆ ಬಲಾಢ್ಯ ಕಂಪೆನಿಗಳು ತಮ್ಮ ಶಕ್ತಿಯನ್ನು ಬಳಸಿಕೊಳ್ಳುವಂತಿಲ್ಲ. ಕಾನೂನಿನ ಅಡಿ ಎಲ್ಲರೂ ಸಮಾನರು. ಆದರೆ ವಾಸ್ತವದಲ್ಲಿ ಈ ಕಂಪೆನಿಗಳು ಎಲ್ಲ ವ್ಯಾಪಾರಿಗಳಿಗೆ ಸಮಾನಾವಕಾಶ ಕಲ್ಪಿಸುವ ಬದಲು, ತಮಗೆ ಬೇಕಾದವರನ್ನು ಮಾತ್ರ ವ್ಯಾಪಾರಸ್ಥರು ಎಂದು ದಾಖಲೆಗಳಲ್ಲಿ ಗುರುತಿಸಿಕೊಂಡು, ಅವರ ಮೂಲಕ ಪರೋಕ್ಷವಾಗಿ ತಾವೇ ವ್ಯವಹರಿಸುತ್ತವೆ. ತಮ್ಮ ಸರಕುಗಳ ಖರೀದಿ, ದಾಸ್ತಾನು ನಿರ್ವಹಣೆ, ವಿತರಣೆಗಳೆಲ್ಲವನ್ನೂ ತಾವೇ ವ್ಯಾಪಾರಸ್ಥರ ಹೆಸರಿನಲ್ಲಿ ನಿರ್ವಹಿಸುವ ಮೂಲಕ ಚಾಪೆಯಡಿ ತೂರುತ್ತವೆ, ಸ್ಥಳೀಯ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಖರೀದಿಸಿ, ಗ್ರಾಹಕರಿಗೆ ಸ್ಪರ್ಧಾತ್ಮಕ ದರ ಎನ್ನಿಸುವಂತಹ ಭಾವನೆ ಮೂಡಿಸಿ, ಬೇರೆ ಕಿರಾಣಿ ಅಂಗಡಿಗಳಿಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತವೆ. ಆ ದರದಲ್ಲಿ ಬಡಪಾಯಿ ಕಿರಾಣಿ ಅಂಗಡಿಯವರಿಗೆ ಮಾರಾಟ ಮಾಡುವುದು ಸಾಧ್ಯವಾಗುವುದಿಲ್ಲ; ಅವರಿಗೆ ಅಂಗಡಿ ಮುಚ್ಚದೇ ಬೇರೆ ದಾರಿ ಉಳಿದಿರುವುದಿಲ್ಲ.
ಬಲಾಢ್ಯ ಸ್ಥಿತಿಯಲ್ಲಿರುವುದರಿಂದ ಈ ಕಂಪೆನಿಗಳು ಮಧ್ಯದ ದಲ್ಲಾಳಿಗಳನ್ನೆಲ್ಲ ನಿವಾರಿಸಿಕೊಂಡು, ನೇರವಾಗಿ ಬೆಳೆದವರಿಂದಲೇ ಖರೀದಿಸುವ ವ್ಯವಸ್ಥೆ ಏರ್ಪಡಿಸುವ ಮೂಲಕ ಸರಕಿನ ದರದಲ್ಲಿ ಏಕಸ್ವಾಮ್ಯ ಮಾತ್ರವಲ್ಲದೆ, ಬೇರೆ ಸ್ಪರ್ಧಿಗಳಿಗೆ ಮಾರುಕಟ್ಟೆ ಪ್ರವೇಶವನ್ನೂ ನಿಯಂತ್ರಿಸುತ್ತವೆ. ಈ ಸ್ಥಿತಿಯ ಅಂತಿಮ ಫಲಿತಾಂಶ - ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಬೇರೆ ಆಯ್ಕೆಗಳಿಲ್ಲದಿರುವುದು. ಇವೆಲ್ಲವೂ ಕಾಗದಪತ್ರಗಳಲ್ಲಿ ಮೇಲ್ನೋಟಕ್ಕೆ ಕಾನೂನುಬದ್ಧವಾಗಿಯೇ ನಡೆಯುತ್ತಿವೆ ಎಂದು ತೋರಿದರೂ, ಕಾನೂನಿನ ಅಕ್ಷರಗಳ ನಡುವಿನ ಕಳ್ಳಹಾದಿಗಳಲ್ಲೇ ಜಾರಿಕೊಂಡು ಸಾಗಿಬಿಡುತ್ತವೆ. ಹಾಗಾಗಿ ಯಾವುದೇ ನ್ಯಾಯವ್ಯವಸ್ಥೆಯ ಚೌಕಟ್ಟಿನಲ್ಲಿ ಇವರನ್ನು ನಿಯಂತ್ರಿಸುವುದು ಸದ್ಯಕ್ಕೆ ಕಷ್ಟ.
ಕಳೆದ ವಾರ ಫಿನಾನ್ಷಿಯಲ್ ಟೈಮ್ಸ್ ಜೊತೆ ಮಾತನಾಡಿದ ರಿಲಯನ್ಸ್ ರಿಟೇಲ್‌ನ ಹಣಕಾಸು ಮುಖ್ಯಸ್ಥ ದಿನೇಶ್ ತಲೂಜಾ ಅವರು, ‘‘ಸದ್ಯ ಸ್ಪರ್ಧೆ ಇರುವುದು ಕೇವಲ 10-20 ದೊಡ್ಡ ನಗರಗಳಲ್ಲಿ. ನಾವು ಈಗಾಗಲೇ 1,000ಕ್ಕೂ ಮಿಕ್ಕಿ ನಗರಗಳನ್ನು ಪ್ರವೇಶಿಸಿ ಆಗಿದೆ. ನಾವೀಗ ಇರುವ ಜಾಗಕ್ಕೆ ಬರಲು ಸ್ಪರ್ಧಿಗಳಿಗೆ ಹಲವು ವರ್ಷಗಳೇ ಬೇಕಾಗಬಹುದು’’ ಎಂದಿದ್ದಾರೆ. ಅಂಬಾನಿ ಕುಟುಂಬದ ಇಷಾ ಅಂಬಾನಿ ಅವರ ಒಡೆತನದ ರಿಲಯನ್ಸ್ ರಿಟೇಲ್‌ನ e-com ಪ್ಲಾಟ್‌ಫಾರ್ಮ್ ಜಿಯೊ ಮಾರ್ಟ್, ತಮ್ಮ 20,000ಕ್ಕೂ ಮಿಕ್ಕಿ ರಿಲಯನ್ಸ್ ರಿಟೇಲ್ ಅಂಗಡಿಗಳ ಬೆನ್ನೆಲುಬಾಗಿ ಈ ವರ್ಷ ನೂರಕ್ಕೂ ಮಿಕ್ಕಿ ‘ಡಾರ್ಕ್ ಸ್ಟೋರ್’ಗಳನ್ನು (ಡಾರ್ಕ್ ಸ್ಟೋರ್ ಎಂದರೆ, ಗ್ರಾಹಕರಿಗೆ ಪ್ರವೇಶ ಇಲ್ಲದ, ಆದರೆ ಸಂಗ್ರಹ ಇಟ್ಟುಕೊಂಡು ಆರ್ಡರ್ ಅನುಸಾರ ಗ್ರಾಹಕರಿಗೆ ತಲಪಿಸುವ ಕೇಂದ್ರಗಳು) ತೆರೆದಿದೆಯಂತೆ.
ಈ ವಿಚಾರದ ಕುರಿತು ಸಂಸತ್ತಿನ ಚಳಿಗಾಲದ ಅಧಿವೇಶನದ ಎರಡನೇ ದಿನ ಲೋಕಸಭೆಯಲ್ಲಿ ಕರ್ನಾಟಕದ ಸಂಸದ ಜಿ. ಕುಮಾರ್ ನಾಯ್ಕ್ ಅವರ ಚುಕ್ಕಿ ಸಹಿತ ಪ್ರಶ್ನೆ (ನಂ: 32, ಡಿಸೆಂಬರ್ 02, 2025)ಗೆ ಉತ್ತರಿಸಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ನೀಡಿರುವ ಹೇಳಿಕೆಯು ಸರಕಾರದ ಮನೋಸ್ಥಿತಿಯನ್ನು ಚೆನ್ನಾಗಿ ಬಿಂಬಿಸುತ್ತಿದೆ. ಸರಕಾರದ ಪ್ರಕಾರ, ಬೆಲೆ ನಿಗದಿ, ಡಿಸ್ಕೌಂಟ್ ನೀಡಿಕೆಗಳೆಲ್ಲ ಮಾರುಕಟ್ಟೆ ಪ್ರೇರಿತ ತೀರ್ಮಾನಗಳಾಗಿದ್ದು, ಬಲಿಷ್ಠ ಸಂಸ್ಥೆಗಳು ಹೀಗೆ ಮಾಡಿದರೆ ಅದಕ್ಕೆ ತುತ್ತಾದವರು (ಸಣ್ಣಪುಟ್ಟ ಕಿರಾಣಿ ಅಂಗಡಿಯವರು) ಭಾರತದ ಕಾಂಪಿಟಿಷನ್ ಕಮಿಷನ್ (CCI)ಗೆ ದೂರು ನೀಡಬಹುದಂತೆ! FDI ನೀತಿಯಲ್ಲಿ ಅನ್ಯಾಯ ಆಗದಂತೆ, ಸಿಂಗಲ್ ಬ್ರ್ಯಾಂಡ್ ರಿಟೇಲ್ ವ್ಯಾಪಾರಸ್ಥರು (SBRT) ಶೇ. 51ಕ್ಕಿಂತ ಹೆಚ್ಚಿನ ವಿದೇಶೀ ಹೂಡಿಕೆ ಹೊಂದಿದ್ದರೆ, ಅವರ ಖರೀದಿಯ ಶೇ. 30 ಮೌಲ್ಯದಷ್ಟು ಕಡ್ಡಾಯವಾಗಿ ದೇಶೀ ಖರೀದಿ ಆಗಿರಬೇಕಂತೆ. ತಮ್ಮ ಇಲಾಖೆಯ ಕಡೆಯಿಂದ ಡಿಜಿಟಲ್ ಕಾಮರ್ಸ್‌ಗೆ ಓಪನ್ ನೆಟ್‌ವರ್ಕ್ (ONDC) ಸ್ಥಾಪಿಸಲಾಗಿದ್ದು, ಸಣ್ಣ ವ್ಯವಹಾರಸ್ಥರು ಅದನ್ನು ಬಳಸಬೇಕು ಎಂದು ಸಚಿವರು ಸೂಚಿಸಿದ್ದಾರೆ. ಇದಲ್ಲದೆ ಕಿರಾಣಿ ಅಂಗಡಿಗಳ ಆಧುನೀಕರಣಕ್ಕೆ ಮೊಬೈಲ್ ಅಪ್ಲಿಕೇಷನ್‌ಗಳು, ಡಿಜಿಟಲೀಕರಣ, ಸಾಮರ್ಥ್ಯ ವೃದ್ಧಿಗೆ ತರಬೇತಿ, ಕಾರ್ಯಾಚರಣೆಯ ಸಾಮರ್ಥ್ಯ ವೃದ್ಧಿಗೆ ಲಾಜಿಸ್ಟಿಕ್ಸ್, ಸಪ್ಲೈ ಚೈನ್, ಡೇಟಾ ಆಧರಿತ ಪರಿಕರಗಳು, ಡಿಜಿಟಲ್ ಆರ್ಥಿಕತೆಯಲ್ಲಿ ಸ್ಪರ್ಧಾತ್ಮಕವಾಗಿ ಉಳಿದುಕೊಳ್ಳಲು ಕ್ರಮಗಳು... ಇತ್ಯಾದಿಗಳನ್ನೆಲ್ಲ ಸಲಹೆ ನೀಡಿದ್ದಾರೆ.
ಇಂತಹ ‘ಡಿಜಿಟಲ್’ ಕ್ರಮಗಳೆಲ್ಲ ಬೊಟ್ಟು ಮಾಡುತ್ತಿರುವುದು ಒಂದೇ ಸಂಗತಿಯತ್ತ. ಅದೇನೆಂದರೆ, ಹಾಲಿ ಭಾರತ ಸರಕಾರಕ್ಕೆ ತಳಮಟ್ಟದಲ್ಲಿ ಕಿರಾಣಿ ಅಂಗಡಿಗಳನ್ನು ನಡೆಸುತ್ತಿರುವ ಹೊಟ್ಟೆಪಾಡಿನ, ಗ್ರಾಮೀಣ ಜನ ಸಮುದಾಯದ ಸ್ಥಿತಿಗತಿಗಳ ಪರಿಚಯವೇ ಇಲ್ಲ. ಸರಕಾರದ್ದೇನಿದ್ದರೂ ನಗರ ಕೇಂದ್ರಿತ, ಮೇಲು ಮಧ್ಯಮ ವರ್ಗ ಕೇಂದ್ರಿತ ಯೋಚನೆಗಳು!







