ಸನ್ಯಾಸಿ ಸಂಸಾರ ಆಗುತ್ತಿರುವ ಭೂಗರ್ಭ ತೈಲ ಸಂಗ್ರಹಾಗಾರ

ನಿಗೂಢತೆಯ ಮುಸುಕು ತೊಡಿಸಿ ಆರಂಭಗೊಂಡ ಭೂಗರ್ಭ ತೈಲ ಸಂಗ್ರಹಾಗಾರಗಳು ನಿಧಾನಕ್ಕೆ ಸನ್ಯಾಸಿ ಸಂಸಾರದಂತೆ ವಿಸ್ತರಿಸಿಕೊಳ್ಳತೊಡಗಿರುವುದು ಆತಂಕಕಾರಿ ಬೆಳವಣಿಗೆ. ಸ್ಟೇಕ್‌ಹೋಲ್ಡರ್‌ಗಳನ್ನು ಪರಿಗಣನೆಗೇ ತೆಗೆದುಕೊಳ್ಳದ ಈ ಸಂವಾದ ರಹಿತ ಏಕಪಕ್ಷೀಯ ತೀರ್ಮಾನಗಳು ಕರ್ನಾಟಕದ ಕರಾವಳಿಯನ್ನು ಅಗ್ನಿಕುಂಡಕ್ಕೆ ಏರಿಸುತ್ತಿವೆ.
ರಾಜಕಾರಣದಲ್ಲಿ ಪಕ್ಷ ಪ್ರೇಮ, ಜಾತಿ ಪ್ರೇಮ, ನೀತಿ ಪ್ರೇಮ ಇತ್ಯಾದಿಗಳೆಲ್ಲ ಇರಬೇಕು ಸರಿ. ಆದರೆ, ನಿಂತ ನೆಲಕ್ಕೇ ಬೆಂಕಿ ಹೊತ್ತಿ ಉರಿಯುತ್ತಿರುವಾಗಲೂ ತ್ಯಾಗಮಯಿ ಆಗುವುದು, ‘ಪೊಲಿಟಿಕಲಿ ಕರೆಕ್ಟ್’ ಅನ್ನಿಸಿಕೊಳ್ಳಲು ಹೊರಡುವುದು, ಹೊರಗಿನಿಂದ ನೋಡುವವರಿಗೆ ‘ಪೊಲಿಟಿಕಲಿ ಕರಪ್ಟ್’ ಅನ್ನಿಸಬಹುದು ಎಂಬ ಪ್ರಾಥಮಿಕ ಜ್ಞಾನ ಕೂಡ ರಾಜಕಾರಣದಲ್ಲಿ ಇರಬೇಕಾಗುತ್ತದೆ. ಕರಾವಳಿಯ ಜನಪ್ರತಿನಿಧಿಗಳನ್ನುದ್ದೇಶಿಸಿ ಈ ಮಾತು.
ಕರಾವಳಿಯ ‘ಅಸ್ಮಿತೆ’ ಎಂದು ಗುರುತಿಸಿದ ಒಂದೊಂದೇ ಅಂಶಗಳು ಕಳೆದ 40 ವರ್ಷಗಳಲ್ಲಿ ಇಲ್ಲಿಂದ ಒಂದಾದ ಮೇಲೊಂದು ಕೈತಪ್ಪಿ ಹೋಗುತ್ತಿವೆ. ಅತ್ಯುತ್ಕೃಷ್ಟ ಸರಕಾರಿ ಶಿಕ್ಷಣ ವ್ಯವಸ್ಥೆ ಕೈತಪ್ಪಿತು- ಮಾತನಾಡಲಿಲ್ಲ; ಬ್ಯಾಂಕಿಂಗ್‌ನ ತೊಟ್ಟಿಲು ಎಂಬ ಪಟ್ಟ ಕಳಚಿಕೊಂಡಿತು - ಮಾತನಾಡಲಿಲ್ಲ; ನಮ್ಮದೆಂಬ ಹಂಚಿನ ಕಾರ್ಖಾನೆಗಳು ಮುಚ್ಚಿಕೊಂಡವು- ಮಾತನಾಡಲಿಲ್ಲ; ಆರೋಗ್ಯ ಕೆಡಿಸುವ ಕೈಗಾರಿಕೆಗಳು ಬಂದವು - ಮಾತನಾಡಲಿಲ್ಲ; ಸಮುದ್ರ ತೀರ ಇಂಚಿಂಚಾಗಿ ಆನಿ ಪಾಲಾಗುತ್ತಿದೆ - ಮಾತನಾಡುತ್ತಿಲ್ಲ.... ಈ ಸುದೀರ್ಘ ಪಟ್ಟಿಯ ಸಾಲಿಗೆ ಇನ್ನೊಂದು ಸೇರ್ಪಡೆಯ ಬಗ್ಗೆ ಈ ಬರೆಹ ಚರ್ಚಿಸುತ್ತಿದೆ.
ಎರಡು ವಾರಗಳ ಹಿಂದೆ, ಜುಲೈ 09ರಂದು ಸರಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ನಿರ್ದೇಶಕ ಮಂಡಳಿಯು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಮಂಗಳೂರಿನಲ್ಲಿ ಹೊಸದಾಗಿ ಮತ್ತೊಂದು ಸ್ಟ್ರಾಟೆಜಿಕ್ ಭೂಗರ್ಭ ಪೆಟ್ರೋಲಿಯಂ ಸಂಗ್ರಹಾಗಾರವನ್ನು ನಿರ್ಮಿಸಲು ತೀರ್ಮಾನಿಸಿದೆ. 1.75 ಮಿಲಿಯನ್ ಮೆಟ್ರಿಕ್ ಟನ್ (MMT) ಸಾಮರ್ಥ್ಯದ ಮೊದಲ ಹಂತದ ವಿಸ್ತರಣೆ ಇದಾಗಲಿದೆಯಂತೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ನಿರ್ದೇಶನದಂತೆ ರಾಷ್ಟ್ರೀಯ ಮಹತ್ವದ ಯೋಜನೆಯಾಗಿ ಈ ಯೋಜನೆಯನ್ನು ಪರಿಗಣಿಸಲಾಗುವುದು ಎಂದು ಒಎನ್‌ಜಿಸಿ ಹೇಳಿದೆ. ಜೊತೆಗೆ, ಈ ಸಂಗ್ರಹಾಗಾರದ ತೈಲವನ್ನು ವಾಣಿಜ್ಯ ಬಳಕೆಗೂ ಸಿಗುವಂತೆ ಏರ್ಪಡಿಸಿಕೊಳ್ಳಲು ಒಎನ್‌ಜಿಸಿ ನಿರ್ದೇಶಕ ಮಂಡಳಿ ಸೂಚಿಸಿದೆಯಂತೆ. ಇವಿಷ್ಟು ಇತ್ತೀಚೆಗಿನ ಬೆಳವಣಿಗೆಗಳು.
1998ರ ಗಲ್ಫ್ ಯುದ್ಧ ಕಾಲದಲ್ಲಿ ತೈಲ ಮಾರುಕಟ್ಟೆ ಸಂಕಟ ಕಾಣಿಸಿಕೊಂಡಾಗ, ರಾಷ್ಟ್ರೀಯ ಹಿತಾಸಕ್ತಿಯ ನೆಲೆಯಲ್ಲಿ ಸ್ಟ್ರಾಟೆಜಿಕ್ ತೈಲ ಸಂಗ್ರಹಕ್ಕೆಂದು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ಅನ್ನು ಅಂದಿನ ಪ್ರಧಾನಿ ವಾಜಪೇಯಿ ಆರಂಭಿಸಿದ್ದರು. ಈ ISPRL ವತಿಯಿಂದ ಮಂಗಳೂರಿನಲ್ಲಿ 0.75MMT ಸಾಮರ್ಥ್ಯದ ಎರಡು (ಒಟ್ಟು 1.5MMT) ಭೂಗರ್ಭ ಸಂಗ್ರಹಾಗಾರಗಳು ಸ್ಥಾಪನೆಯಾದವು. ಉಡುಪಿ ಜಿಲ್ಲೆಯ ಪಾದೂರಿನಲ್ಲಿ, 2.5 MMT ಮತ್ತು ವಿಶಾಖಪಟ್ಟಣಂನಲ್ಲಿ 1.33 MMT ಸಾಮರ್ಥ್ಯದ ಭೂಗರ್ಭ ಸಂಗ್ರಹಾಗಾರಗಳು ಸ್ಥಾಪನೆಗೊಂಡವು. ಅದಾದ ಬಳಿಕ ಎರಡನೇ ಹಂತದಲ್ಲಿ 2021ಜುಲೈ ಹೊತ್ತಿಗೆ, ಒಡಿಶಾದ ಚಂದಿಕೋಲ್ ಎಂಬಲ್ಲಿ 4 MMT ಮತ್ತು ಉಡುಪಿ ಜಿಲ್ಲೆಯ ಪಾದೂರಿನಲ್ಲಿ ಮತ್ತೆ 2.5 MMT ಸಾಮರ್ಥ್ಯದ ಸಂಗ್ರಹಾಗಾರಗಳ ಸ್ಥಾಪನೆಗೆ ಕೆಲಸಗಳು ನಡೆಯುತ್ತಿವೆ. ಇದರಿಂದ ದೇಶದಲ್ಲಿ ಒಟ್ಟು ತೈಲ ಸಂಗ್ರಹಣಾ ಸಾಮರ್ಥ್ಯ 6.5 MMTಗೆ ಏರಲಿದೆ. ಈ ಸಂಗ್ರಹಾಗಾರಗಳು ಒಟ್ಟಾಗಿ ದೇಶದಲ್ಲಿ ತುರ್ತುಸ್ಥಿತಿಗಳ ವೇಳೆ 21.5 ದಿನಗಳಿಗೆ ಸಾಕಾಗುವಷ್ಟು ತೈಲ ಸಂಗ್ರಹ ಸಾಮರ್ಥ್ಯವನ್ನು ಒದಗಿಸಲಿವೆ. (ಆಧಾರ: PIB Release IDs: 2113233; 1694712).
ಈ ISPRL ಆರಂಭಗೊಂಡಾಗ, ಅದರ ತೈಲ ಸಂಗ್ರಹ ಮತ್ತು ಯೋಜನೆ ನಿರ್ವಹಣೆಯ ಜವಾಬ್ದಾರಿಗಳನ್ನು ಭಾರತ ಸರಕಾರ ಹೊಂದಿತ್ತು. ಆದರೆ ಯೋಜನೆ ಕಾರ್ಯರೂಪಕ್ಕೆ ಬರುವ ಮೊದಲೇ, ಅಂದರೆ 2017 ಜನವರಿ ಹೊತ್ತಿಗಾಗಲೇ, ಮೂಲಸೌಕರ್ಯಗಳ ಸಂಪುಟ ಸಮಿತಿ (ಸಿಸಿಐ) ಅಲ್ಲಿ ತೈಲ ತುಂಬಿಸುವ ಖರ್ಚು ಭರಿಸಲು ಪರ್ಯಾಯ ಹಾದಿಗಳನ್ನು ಹುಡುಕಲು ಹೇಳಿತ್ತು. 2021ರ ಹೊತ್ತಿಗೆ ಸರಕಾರವು ತನ್ನ ತೈಲ ನೀತಿಯಲ್ಲಿ ಬದಲಾವಣೆ ಮಾಡಿಕೊಂಡು, ಪಿಪಿಪಿ ಆಧಾರದಲ್ಲಿ ಖಾಸಗಿಯವರಿಗೆ ಈ ತೈಲ ಸಂಗ್ರಹಾಗಾರಗಳನ್ನು ಗುತ್ತಿಗೆಗೆ ಕೊಡುವ ನಿರ್ಧಾರ ಕೈಗೊಂಡಾಗಿತ್ತು. 2024ರ ಜನವರಿಯಲ್ಲಿ ISPRL ಆಡಳಿತ ನಿರ್ದೇಶಕರು, ತಮ್ಮ ಸಂಗ್ರಹಾಗಾರದಲ್ಲಿ 10 ಲಕ್ಷ ಟನ್ ತೈಲ ಹಿಡಿಸುವಷ್ಟು ಜಾಗ ಖಾಲಿ ಇದೆ. ಅದನ್ನು ವಿದೇಶಿ ಖಾಸಗಿ ತೈಲ ಕಂಪೆನಿಗಳಿಗೆ ಗುತ್ತಿಗೆ ನೀಡಲಾಗುವುದು ಎಂದು ಹೇಳಿದ್ದರು (ಈ ಬಗ್ಗೆ 10-2-2024ರ ಪಿಟ್ಕಾಯಣದಲ್ಲಿ ವಿವರಿಸಲಾಗಿದೆ.)
ಭಾರತ ಸರಕಾರವು ಇದೇ ಫೆಬ್ರವರಿಯಲ್ಲಿ ಸಂಸತ್ತಿಗೆ ಹೇಳಿರುವ ಪ್ರಕಾರ (ರಾಜ್ಯಸಭೆಯ ಚುಕ್ಕೆ ಸಹಿತ ಪ್ರಶ್ನೆ 92; ದಿನಾಂಕ 09-02-2026), ದೇಶದಲ್ಲಿ ಬಳಕೆಯಲ್ಲಿರುವ 5.33MMT ತೈಲ ಸಾಮರ್ಥ್ಯದಲ್ಲಿ ಕೇವಲ ಶೇ. 77 ಭಾಗ ಮಾತ್ರ (4.094 MMT) ಭರ್ತಿ ಇದ್ದು, ಅದರಲ್ಲೂ ಶೇ. 50 ವಾಣಿಜ್ಯ ಚಟುವಟಿಕೆಗಳ ಪಾಲು. ಅರ್ಥಾತ್, ಖಾಸಗಿಯವರು ಗುತ್ತಿಗೆ ಪಡೆದು ಸಂಗ್ರಹಿಸಿಟ್ಟಿರುವುದು. ಈ ವರ್ಷ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಕಾರಣದಿಂದಾಗಿ, ಮಾರ್ಚ್ ತಿಂಗಳಿನಿಂದ ಮತ್ತೆ ಯುದ್ಧದ ಸನ್ನಿವೇಶವನ್ನು ಜಗತ್ತು ಅನುಭವಿಸುತ್ತಿದೆ. ಯುದ್ಧದ ಪರಿಣಾಮವಾಗಿ ದೇಶದಲ್ಲಿ ತೈಲಬಿಕ್ಕಟ್ಟು ಒಂದು ಹಂತಕ್ಕೆ ಕಾಣಿಸಿಕೊಂಡಿದೆ. ಆದರೆ, ದೇಶದ ತೈಲ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಈ ISPRL ಸಂಗ್ರಹಾಗಾರಗಳ ಪಾತ್ರ ಏನಿತ್ತು? ಎಂಬುದು ಇನ್ನೂ ಸ್ಪಷ್ಟವಿಲ್ಲ. ಏಕೆಂದರೆ ಅಲ್ಲಿರುವ ಅರ್ಧಕ್ಕರ್ಧ ತೈಲ ಖಾಸಗಿಯವರದು. ಅದರ ಮೊದಲ ಹಕ್ಕು ಸರಕಾರದ್ದು ಎಂಬ ಷರತ್ತು ಒಪ್ಪಂದದಲ್ಲಿ ಇರುತ್ತದಂತೆ, ಆದರೆ ಆ ಹಕ್ಕು ಈ ಯುದ್ಧಕಾಲದಲ್ಲಿ ಬಳಕೆಯಾಗಿದೆಯೇ? ಗೊತ್ತಿಲ್ಲ.
ಈಗ ಹೊಸದಾಗಿ, ಪ್ರಧಾನಮಂತ್ರಿಯವರು ಮೇ 15, 2026ರಂದು ಅಬುಧಾಬಿಗೆ ತೆರಳಿದ್ದಾಗ, ಅಲ್ಲಿ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪೆನಿ (ಎಡಿಎನ್‌ಒಸಿ)ಯು ಭಾರತದ ISPRL ಭೂಗರ್ಭ ತೈಲ ಸಂಗ್ರಹಾಗಾರಗಳಲ್ಲಿ ಹೆಚ್ಚುವರಿ 30 ಮಿಲಿಯ ಬ್ಯಾರಲ್ (4.09MMT) ತೈಲ ಸಂಗ್ರಹಿಸುವುದಕ್ಕೆ ಅನುವು ಮಾಡಿಕೊಡುವ MoUಗೆ ಸಹಿ ಮಾಡಿ ಬಂದಿದ್ದಾರೆ (PIB Release ID: 2261385). ಜೊತೆಗೆ, ಜುಲೈ 02ರಂದು ಭಾರತಕ್ಕೆ ಭೇಟಿ ನೀಡಿರುವ ಜಪಾನ್ ಪ್ರಧಾನಿ ತಾಕಾಯಿಚಿ ಸಾನಾಯೆ ಅವರ ಜೊತೆ ಪೆಟ್ರೋಲಿಯಂ ಉತ್ಪನ್ನಗಳ ಸ್ಟ್ರಾಟೆಜಿಕ್ ಸ್ಟಾಕ್‌ಪೈಲಿಂಗ್ ಎಕೊಸಿಸ್ಟಮ್ ಮತ್ತು ರಿಸರ್ವ್ ಮೆಕ್ಯಾನಿಸಂ ಅನ್ನು ಅಭಿವೃದ್ಧಿಪಡಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿರುವ ಕುರಿತು ಭಾರತ-ಜಪಾನ್ ಸರಕಾರಗಳು ಜಂಟಿ ಹೇಳಿಕೆ ಹೊರಡಿಸಿವೆ (PIB Release ID: 2280425).
ವಾಸ್ತವ ಹೀಗಿರುವಾಗ, ಒಎನ್‌ಜಿಸಿ ಮತ್ತೆ ಮಂಗಳೂರಿನಲ್ಲಿ ತೈಲ ಸಂಗ್ರಹಾಗಾರ ವಿಸ್ತರಿಸಲು ಹೊರಟಿರುವುದು ಮತ್ತು ವಿವಿಧ ಒಪ್ಪಂದಗಳ ಮೂಲಕ ಸಂಗ್ರಹಾಗಾರಗಳಲ್ಲಿ ಖಾಸಗಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿಕೊಡಲು ವ್ಯವಸ್ಥೆ ಮಾಡುತ್ತಿರುವುದು ಹಲವು ಪ್ರಶ್ನೆಗಳನ್ನು ಎತ್ತುತ್ತಿದೆ. ದೇಶದ ಭದ್ರತೆಯ ಕಾರಣ ಮುಂದಿಟ್ಟು, ಸ್ಥಳೀಯ ಜನರ ಮನವೊಲಿಸಿ ಜಾಗ ಪಡೆದು, ಉದ್ಯೋಗಾ ವಕಾಶಗಳು ಹುಟ್ಟಲಿವೆ ಎಂದು ಮೊಣಕೈಗೆ ಬೆಲ್ಲ ಸವರಿ, ಈಗ ಆ ಜಾಗದಲ್ಲಿ ಖಾಸಗಿಯವರಿಗೆ ತೈಲ ಸಂಗ್ರಹಕ್ಕೆ ಅವಕಾಶ ಮಾಡಿಕೊಡುವ ಪ್ರಯತ್ನಗಳು ಕರಾವಳಿಗೆ ಆಗಿರುವ ಅನ್ಯಾಯ ಎಂದು ಯಾರಿಗೂ ಅನ್ನಿಸದಿರುವುದು ಅಚ್ಚರಿಯ ಸಂಗತಿ. ಇವುಗಳಿಗೆಲ್ಲ ಉತ್ತರದಾಯಿ ಆಗಬೇಕಾದ ಜನಪ್ರತಿನಿಧಿಗಳ ಸ್ಟ್ರಾಟೆಜಿಕ್ ಮೌನ ಮಾತಿಗಿಂತಲೂ ಹೆಚ್ಚಿನ ಅಭಿವ್ಯಕ್ತಿಗಳಿಗೆ ಕಾರಣ ಆಗುತ್ತಿದೆ. ನಿಗೂಢತೆಯ ಮುಸುಕು ತೊಡಿಸಿ ಆರಂಭಗೊಂಡ ಈ ಭೂಗರ್ಭ ತೈಲ ಸಂಗ್ರಹಾಗಾರಗಳು ನಿಧಾನಕ್ಕೆ ಸನ್ಯಾಸಿ ಸಂಸಾರದಂತೆ ವಿಸ್ತರಿಸಿಕೊಳ್ಳತೊಡಗಿರುವುದು ಆತಂಕಕಾರಿ ಬೆಳವಣಿಗೆ. ಸ್ಟೇಕ್‌ಹೋಲ್ಡರ್‌ಗಳನ್ನು ಪರಿಗಣನೆಗೇ ತೆಗೆದುಕೊಳ್ಳದ ಈ ಸಂವಾದ ರಹಿತ ಏಕಪಕ್ಷೀಯ ತೀರ್ಮಾನಗಳು ಕರ್ನಾಟಕದ ಕರಾವಳಿಯನ್ನು ಅಗ್ನಿಕುಂಡಕ್ಕೆ ಏರಿಸುತ್ತಿವೆ.
ಬಂದರು ಇದೆಯೆಂಬ ಕಾರಣಕ್ಕೆ ತೈಲ ಸಂಸ್ಕರಣಾಗಾರ ಮತ್ತದರ ಉಪ ಉತ್ಪನ್ನಗಳ ಸಂಸ್ಕರಣೆ-ಉತ್ಪಾದನೆ ಕಾರ್ಖಾನೆಗಳು ಬಂದವು; ತೈಲ ಸಂಸ್ಕರಣಾಗಾರ ಇದೆ ಎಂಬ ಕಾರಣಕ್ಕೆ ಭೂಗರ್ಭ ತೈಲ ಸಂಗ್ರಹಾಗಾರಗಳು ಬಂದವು; ಈಗ ತೈಲ ಸಂಗ್ರಹಾಗಾರದ ವಿಸ್ತರಣೆ ಹೀಗೆ ಕರಾವಳಿಯಲ್ಲಿ ಯೋಜನೆಗಳ ಮೇಲೆ ಯೋಜನೆಗಳು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ದಿಲ್ಲಿಯಿಂದಲೇ ಉದುರುತ್ತಿವೆ. ಈಗಾಗಲೇ ಪರಿಸರದ ದೃಷ್ಟಿಯಿಂದ ತೀರಾ ಹದಗೆಟ್ಟಿರುವ ಕರಾವಳಿಯು ಜನವಸತಿ ದಟ್ಟಣೆ ಇರುವ ಪ್ರದೇಶ. ಇಲ್ಲಿ ಒಂದರ ಮೇಲೊಂದು ಅಪಾಯಕಾರಿ ಯೋಜನೆಗಳನ್ನು ಯಾವುದೇ ಚರ್ಚೆಗಳಿಲ್ಲದೆ, ಸ್ಥಳೀಯರ ಬೇಕು-ಬೇಡಗಳನ್ನು ಕೇಳದೇ ಹೇರಲಾಗುತ್ತಿದೆ. ಇದು ನಮಗೆ ಸ್ವೀಕಾರಾರ್ಹ ಅಲ್ಲ ಎಂದು ಹೇಳುವುದಕ್ಕೂ ಕರಾವಳಿಯನ್ನು ಕೋಮು-ಧರ್ಮಗಳ ಹೆಸರಿನಲ್ಲಿ ವಿಭಜಿಸಿ ಬಾಯಿ ಕಟ್ಟಲಾಗಿದೆ. ಜನಪ್ರತಿನಿಧಿಗಳಂತೂ ಇಂತಹ ವಿಚಾರಗಳಲ್ಲಿ ಇದ್ದೂ ಇಲ್ಲದಂತಾಗಿಬಿಟ್ಟಿದ್ದಾರೆ. ಯಾರೂ ಏನೆಂದರೆ ಏನೂ ಮಾತನಾಡದಿರುವುದರಿಂದ, ಯಾವುದೇ ಯೋಜನೆಯನ್ನು ತಂದು ಕರಾವಳಿಯನ್ನು ಡಂಪಿಂಗ್ ಯಾರ್ಡ್ ಮಾಡುವುದು ಸುಲಭ ಆಗಿಬಿಟ್ಟಿದೆ. ಅಭಿವೃದ್ಧಿ ಇದೇ ಶೈಲಿ ಮತ್ತು ಇದೇ ವೇಗದಲ್ಲಿ ಮುಂದುವರಿದರೆ ಇನ್ನು 15-20 ವರ್ಷಗಳಲ್ಲಿ ನಮ್ಮ ಕರಾವಳಿ ವಾಸಯೋಗ್ಯ ನೆಲವಾಗಿ ಉಳಿದಿರುವುದಿಲ್ಲ. ಬರೆದಿಟ್ಟುಕೊಳ್ಳಿ ಬೇಕಿದ್ದರೆ.






