ಮಗುವನ್ನು ಚಿವುಟುವುದೂ ಅವರೇ, ತೊಟ್ಟಿಲು ತೂಗುವುದೂ ಅವರೇ!

ಪ್ರತಿಯೊಂದು ಬೆಳವಣಿಗೆ ಕೂಡ ಖಚಿತವಾಗಿ ಹೇಳುತ್ತಿರುವುದು ಏನೆಂದರೆ, 2070ಕ್ಕೆ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕಿಳಿಯಲು ಪ್ರಾಕ್ಟಿಕಲೀ ಸಾಧ್ಯ ಇಲ್ಲ ಎಂದೇ. ಹಾಗಿದ್ದ ಮೇಲೆ, ಈ COP31ನಂತಹ ಅಂತರ್ರಾಷ್ಟ್ರೀಯ ಸಮಾವೇಶಗಳ ಅಂತಿಮ ಉದ್ದೇಶ- ಹೊಸ ಕಾಲಕ್ಕೆ ತಕ್ಕ ಹೊಸ ಹೊಸ ಮಾರುಕಟ್ಟೆ ಸಾಧ್ಯತೆಗಳನ್ನು ಅರಸುವುದು ಎಂದೇ ಅರ್ಥ ಅಲ್ಲವೇ?
ಇವತ್ತು ಜಗತ್ತಿನಲ್ಲಿ ನಡೆಯುತ್ತಿರುವ ಅತ್ಯಂತ ಅಸಂಗತವಾದ ಒಂದು ಸಂಗತಿ ಎಂಬುದಿದ್ದರೆ, ಅದು ಹವಾಮಾನ ಬದಲಾವಣೆಯ ಕುರಿತು ಸರಕಾರಗಳು ಒಟ್ಟುಸೇರಿ ನಡೆಸುವ ಚರ್ಚೆ. ಇದು ಬಹುತೇಕ ಕುರಿಗಳ ಯೋಗಕ್ಷೇಮ ನಿರ್ಧರಿಸಲು ಕಟುಕರ ಸಭೆ ನಡೆದಂತೆಯೇ ನಡೆಯುತ್ತಾ ಬರುತ್ತಿದೆ. ಪರಿಸರದ ಮೇಲೆ ಮಾನವ ಹಸ್ತಕ್ಷೇಪಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಲು ಕಾನ್ಫರೆನ್ಸ್ ಆಫ್ ಪಾರ್ಟೀಸ್ (COP)ಯು 1992ರಲ್ಲಿ, ರಯೊ ಡಿ ಜೆನಿರೊದಲ್ಲಿ ಸ್ವೀಕರಿಸಿದ ‘ಹವಾಮಾನ ಬದಲಾವಣೆ ಕುರಿತು ವಿಶ್ವಸಂಸ್ಥೆಯ ಒಪ್ಪಂದ ಚೌಕಟ್ಟಿನ(UNFCCC)’ ಅನ್ವಯ ಈ ಶೃಂಗ ಸಭೆಯು ಪ್ರತೀ ವರ್ಷ, ಜಗತ್ತಿನ ಬೇರೆಬೇರೆ ದೇಶಗಳ ಸರಕಾರಗಳ ಆಶ್ರಯದಲ್ಲಿ ನಡೆಯುತ್ತದೆ. ಈ ಸಭೆಯ 31ನೇ ಆವೃತ್ತಿ ಈಗ (COP 31) ತುರ್ಕಿಯದ ಅಂತಾಲ್ಯಾದಲ್ಲಿ (ನವೆಂಬರ್ 09ರಿಂದ 20) ನಡೆಯುತ್ತಿದೆ. (https://unfccc.int/cop31)
ತಮಾಷೆ ಎಂದರೆ, ಕಳೆದ 30 ವರ್ಷಗಳಲ್ಲಿ ಈ ಸಭೆಗಳ ಕಾರಣಕ್ಕೆ ಜಾಗತಿಕ ಹವಾಮಾನ ಸನ್ನಿವೇಶ ಒಂದಿಂಚೂ ಸುಧಾರಿಸಿಲ್ಲ; ಬದಲಾಗಿ ಇನ್ನಷ್ಟು ಹದಗೆಟ್ಟಿದೆ. ಪ್ರತಿಯೊಂದು ದೇಶವೂ ತನ್ನ ‘ಅಭಿವೃದ್ಧಿ’ಯ ಹಾದಿಯಿಂದ ಕಿಂಚಿತ್ತೂ ಕದಲದೆ, ಉಳಿದವರಿಗೆಲ್ಲ ಉಪದೇಶ ನೀಡುವುದೇ COP ಸಭೆಗಳ ಅಜೆಂಡಾ ಆಗಿಬಿಟ್ಟಿದೆ. ಈ ಸ್ಥಿತಿಯ ವಾಸ್ತವ ಅರಿಯಬೇಕಿದ್ದರೆ, ವಿಶ್ವ ಹವಾಮಾನ ಸಂಸ್ಥೆ (WMO)ಯು COP31 ಆರಂಭದ ದಿನ ಬಿಡುಗಡೆ ಮಾಡಿರುವ ‘ಜಾಗತಿಕ ಹವಾಮಾನ ಸ್ಥಿತಿಗತಿ ವರದಿ’ಯನ್ನು ನೋಡಬೇಕು. ಅದರ ಪ್ರಕಾರ, 2026 ಈ ಭೂಮಿಯ ಮೇಲೆ ಅತ್ಯಂತ ಹೆಚ್ಚು ಬಿಸಿ ಏರಿಕೆ ಕಂಡ ವರ್ಷಗಳಲ್ಲಿ ಒಂದೆಂದು ದಾಖಲಾಗುವ ಸಾಧ್ಯತೆಗಳಿವೆ. ಈ ವರ್ಷ ಜನವರಿ-ಸೆಪ್ಟಂಬರ್ ನಡುವಿನ ಉಷ್ಣತೆಯು ಕೈಗಾರಿಕಾಪೂರ್ವ ವರ್ಷಗಳ ಸರಾಸರಿಗೆ (1850-1900) ಹೋಲಿಸಿದರೆ 1.47ಲಿಅ ಹೆಚ್ಚಿದೆ. (ವರದಿ ಇಲ್ಲಿ ಲಭ್ಯ: https://library.wmo.int/records/item/69998-state-of-the-climate-update-for-cop31 )
ಈ ವರದಿಯಲ್ಲಿ ಭಾರತದ ಕುರಿತು ಹೇಳುತ್ತಾ, ಇಲ್ಲಿ ಈ ವರ್ಷ ಮುಂಗಾರು ಮಳೆ ವಾಡಿಕೆಗಿಂತ ಶೇ. 40 ಕಡಿಮೆ ಇತ್ತು ಮತ್ತು ವಾರ್ಷಿಕ ಒಟ್ಟು ಮಳೆಯಲ್ಲಿ ಶೇ. 12 ಕೊರತೆ ಕಂಡುಬಂದಿದೆ, ಇದು ದೇಶದ ಕೃಷಿ ಹಾಗೂ ಜಲಸಂಪನ್ಮೂಲಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ. ಜೊತೆಗೆ, ಎಪ್ರಿಲ್ನಲ್ಲಿ ಸಂಭವಿಸಿದ ಬಿಸಿಗಾಳಿಯ ಅಲೆಗೆ ದೇಶದ 14.65 ಕೋಟಿ ಜನರು 35ಲಿಅಗಿಂತ ಹೆಚ್ಚಿನ ಉಷ್ಣತೆಯ ಬೇಗೆಯನ್ನು ಅನುಭವಿಸಿದರು ಎಂದೂ ಹೇಳಲಾಗಿದೆ. ಭಾರತದಲ್ಲಿ ಮುಂಗಾರು ಮಳೆ ದುರ್ಬಲವಾಗಿದ್ದರೂ, ಜುಲೈ ಹೊತ್ತಿಗೆ ಅತಿವೃಷ್ಟಿಯಿಂದ ನೆರೆಯೇರಿ 21,000 ಹೆಕ್ಟೇರ್ ಕೃಷಿ ಮುಳುಗಡೆಯಾಯಿತು, 11,000ಕ್ಕೂ ಮಿಕ್ಕಿ ಜಾನುವಾರುಗಳು ಬಲಿಯಾದವು ಎಂದು ವರದಿ ದಾಖಲಿಸಿದೆ.
ಈಗ ಅಂತಾಲ್ಯಾದಲ್ಲಿ ನಡೆಯುತ್ತಿರುವ COP31 ಶೃಂಗಸಭೆಯು ಇಂಗಾಲ ಹೊರಹೊಮ್ಮುವಿಕೆಯನ್ನು ತಗ್ಗಿಸುವ ಗುರಿಗಳ ಕುರಿತು ಹಾಗೂ ಸುಸ್ಥಿರ ಅಭಿವೃದ್ಧಿಗೆ ದೇಶಗಳ ಇಂಧನ ನೀತಿಗಳು ಹೇಗಿರಬೇಕೆಂದು ಚರ್ಚಿಸುವುದಲ್ಲದೆ, ಆ ಬದಲಾವಣೆಗಳಿಗೆ ಅಗತ್ಯವಿರುವ ಅಪಾರ ಹಣ ಹೊಂದಿಸಿಕೊಳ್ಳುವುದು ಹೇಗೆ ಎಂಬ ಕುರಿತು ಕೂಡ ಚರ್ಚಿಸಲಿದ್ದು, ಇಲ್ಲಿಯ ತನಕ ನಡೆಯುತ್ತಾ ಬಂದಿರುವ ಸಭೆಗಳಲ್ಲಿ ಕೈಗೊಂಡಿರುವ ನಿರ್ಣಯಗಳ ಮುಂದಿನ ಹಂತವನ್ನು ನಿರ್ಧರಿಸಲಿದೆ ಎಂದು ಆಯೋಜಕ ದೇಶವಾದ ತುರ್ಕಿಯ ಹೇಳಿಕೊಂಡಿದೆ. ಶೂನ್ಯ ತ್ಯಾಜ್ಯ (zero waste)ಕ್ಕೆ ಸಂಬಂಧಿಸಿದಂತೆ ಜಗತ್ತಿಗೆ ಮಾದರಿ ಆಗಿರುವ ತುರ್ಕಿಯ, ಈ ಬಾರಿ ಸುಸ್ಥಿರ ಅಭಿವೃದ್ಧಿಯಲ್ಲಿ ಶೂನ್ಯ ತ್ಯಾಜ್ಯದ ಪಾತ್ರಕ್ಕೆ ಆದ್ಯತೆ ಒದಗಿಸುವ ನಿರೀಕ್ಷೆ ಇದೆ.
ಅಭಿವೃದ್ಧಿಶೀಲ ದೇಶಗಳು 2070ಕ್ಕೆ ಮುನ್ನ ತಮ್ಮಲ್ಲಿ ಇಂಗಾಲ ಹೊರಹೊಮ್ಮಿಸುವಿಕೆಯನ್ನು ಶೂನ್ಯಗೊಳಿಸಿಕೊಳ್ಳುವುದಕ್ಕೆ ಅಗತ್ಯವಿರುವ ತಂತ್ರಜ್ಞಾನಗಳನ್ನು ಅನುಷ್ಠಾನಕ್ಕೆ ತರಲು ಅಪಾರ ಹಣದ ಅಗತ್ಯವಿದೆ. ಜಗತ್ತಿನ ಮುಂದುವರಿದ ದೇಶಗಳು ತಮ್ಮ ಅಭಿವೃದ್ಧಿಗಾಗಿ ದೊಡ್ಡ ಪ್ರಮಾಣದಲ್ಲಿ ಹವಾಮಾನ ವೈಪರೀತ್ಯಗಳಿಗೆ ಕಾರಣ ಆಗುತ್ತಿರುವುದರಿಂದ, ಅವು ತಪ್ಪುಕಾಣಿಕೆಯ ರೂಪದಲ್ಲಿ ಅಭಿವೃದ್ಧಿಶೀಲ ದೇಶಗಳಿಗೆ ಆರ್ಥಿಕ ಸಹಾಯ ಒದಗಿಸಬೇಕೆಂಬ ವಾದವು ಪ್ರತೀ ಬಾರಿ ಅಔP ಸಮಾವೇಶಗಳು ನಡೆದಾಗ ಬಲಗೊಳ್ಳುತ್ತಿದೆ. ಅದರ ಹೊಸ ರೂಪವೊಂದು ಈ ಬಾರಿ ತಲೆ ಎತ್ತಿದಂತಿದೆ. ಇದನ್ನು ಭಾರತಕ್ಕೆ ಸಂಬಂಧಿಸಿದಂತೆ ವಿವರಿಸಬೇಕೆಂದರೆ, ಈ ತಿಂಗಳ ಆದಿಯಲ್ಲಿ ಆಸ್ಟ್ರೇಲಿಯದ ಅರ್ಥಶಾಸ್ತ್ರಜ್ಞ ನಿಕಿ ಹಟ್ಲೀ ಅವರು ಸಿದ್ಧಪಡಿಸಿರುವ, ‘India’s Net zero transition is the world’s net zero transition’ ಎಂಬ ಬರೆಹವನ್ನು ಗಮನಿಸಬೇಕು. ಭಾರತದ ನೀತಿ ಆಯೋಗ ಒದಗಿಸಿರುವ ಅಂಕಿ-ಅಂಶಗಳನ್ನು ಆಧರಿಸಿ ಅವರು, 2070ರ ಹೊತ್ತಿಗೆ ಭಾರತವು ನೆಟ್ ಝೀರೊ ಸಾಧಿಸಲು ಸುಮಾರು 22.7 ಟ್ರಿಲಿಯನ್ ಡಾಲರ್ (ಅಂದಾಜು 2,130 ಲಕ್ಷ ಕೋಟಿ ರೂ.) ಹೂಡಿಕೆ ಆಗಬೇಕಿದೆ. ಸಂಪನ್ಮೂಲ ಸಂಗ್ರಹದಲ್ಲಿ ನೀತ್ಯಾತ್ಮಕವಾಗಿ ಗಮನಾರ್ಹ ಪರಿವರ್ತನೆಗಳನ್ನು (ಕಾರ್ಪೊರೇಟ್ ಬಾಂಡ್ ಮಾರುಕಟ್ಟೆಗಳ ವಿಸ್ತರಣೆ, ಪಿಂಚಿಣಿ ಉಳಿತಾಯಗಳಿಗೆ ಪ್ರೇರಣೆ, ವಿಮಾ ಹೂಡಿಕೆಗೆ ಪ್ರೋತ್ಸಾಹ, ಹಸಿರು ಬಾಂಡ್ಗಳಿಗೆ ಪ್ರೋತ್ಸಾಹ ಇತ್ಯಾದಿ) ಮಾಡಿಕೊಂಡರೆ, ಈ ಪೈಕಿ ಶೇ. 70ನ್ನು ಭಾರತ ಆಂತರಿಕವಾಗಿ ಹುಟ್ಟಿಸಿಕೊಂಡು ವೆಚ್ಚ ಮಾಡಬಹುದು. ಇಷ್ಟಾಗಿ ಕೂಡ, ಭಾರತಕ್ಕೆ ಅಂದಾಜು 6.5 ಟ್ರಿಲಿಯನ್ ಡಾಲರ್ (ಅಂದಾಜು 640 ಲಕ್ಷ ಕೋಟಿ ರೂ.) ಕೊರತೆ ಕಾಣಿಸಿಕೊಳ್ಳಲಿದೆ. ಈ ಮೊತ್ತವು ದೇಶದ ಒಳಗೆ ಖಾಸಗಿ ಮತ್ತು ಹೊರಗಿನ ಅಂತರ್ರಾಷ್ಟ್ರೀಯ ಹೂಡಿಕೆಗಳಿಗೆ ದೊಡ್ಡ ಅವಕಾಶವಾಗಲಿದೆ ಎಂದು ನಿಕಿ ಹಟ್ಲೀ ಹೇಳುತ್ತಾರೆ.
ಅರ್ಥಾತ್, ವಿದೇಶಿ ಕಾರ್ಪೊರೇಟ್ಗಳು ಭಾರತದ ಈ ಸಂಕಟದ ಸ್ಥಿತಿಯನ್ನೂ ತಮಗೆ ಲಾಭ ತರಬಲ್ಲ ಮಾರುಕಟ್ಟೆಯಾಗಿ ರೂಪಿಸಿಕೊಂಡು, ಅದರ ಭರಪೂರ ಉಪಯೋಗಕ್ಕೆ ಹೊಸ ಹಾದಿ ತೆರೆದುಕೊಳ್ಳಲು ಸನ್ನದ್ಧವಾಗುತ್ತಿವೆ! ಈ ಶತಮಾನದ ಆರಂಭದಲ್ಲಿ, ಭಾರತದ ಜನಸಂಖ್ಯೆಯನ್ನು ಕೂಡ ‘ಮಾನವ ಸಂಪನ್ಮೂಲ’ ಎಂದು ಗುರುತಿಸಿ, ಇಲ್ಲಿನ ಈ ದೊಡ್ಡ ಮಾರುಕಟ್ಟೆ ತಮಗೆ ಅಪಾರ ಲಾಭ ತಂದುಕೊಡಲಿದೆ ಎಂದು ಯೋಜಿಸಿ, ಉದಾರೀಕರಣದ ಹೆಸರಿನಲ್ಲಿ ಭಾರತದ ಮಾರುಕಟ್ಟೆಯನ್ನು ತಮ್ಮ ಮೂಗಿನ ನೇರಕ್ಕೆ ಬಗ್ಗಿಸಲಾಯಿತು. ಈಗ, ಅದರ ಮುಂದುವರಿಕೆಗೆ ಅವಕಾಶ ತೆರೆದುಕೊಂಡಿದೆ. ತಮ್ಮ ಜಾಗತೀಕರಣದ ಹಸ್ತಕ್ಷೇಪಗಳ ಕಾರಣಕ್ಕಾಗಿಯೇ ಆಗಿರುವ ‘ಆಧುನಿಕ ವಿಕಾಸದ’ ದುಷ್ಪರಿಣಾಮಗಳನ್ನು ನಿವಾರಿಸಲು, ಮತ್ತೆ ಹೂಡಿಕೆ ನಡೆಯಲಿದೆ. ಅಂದರೆ ಮಗುವನ್ನು ಚಿವುಟುವವರೂ ಅವರೇ, ತೊಟ್ಟಿಲು ತೂಗುವವರೂ ಅವರೇ!
ಭಾರತವೇನೂ ಇದಕ್ಕೆ ಪ್ರತಿರೋಧ ಒಡ್ಡುವ ಮೂಡ್ನಲ್ಲಿಲ್ಲ. ಬದಲಾಗಿ, COP31ರ ಉದ್ಘಾಟನಾ ಅಧಿವೇಶನದಲ್ಲಿ ಪಾಲ್ಗೊಂಡ ಭಾರತದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಕಾರ್ಯದರ್ಶಿ ನರೇಂದ್ರ ಭೂಷಣ್ ಅವರು, ಹವಾಮಾನ ಬದಲಾವಣೆಯ ಕುರಿತ ಭಾರತದ ಬದ್ಧತೆಯನ್ನು ಖಚಿತಪಡಿಸುತ್ತಲೇ, ಅಭಿವೃದ್ಧಿ ಹೊಂದಿದ ದೇಶಗಳು ಪ್ಯಾರಿಸ್ ಒಪ್ಪಂದದ ಅನ್ವಯ ತಮ್ಮ ಬಾಧ್ಯತೆಗಳನ್ನು ಪೂರೈಸಬೇಕು. ಅಭಿವೃದ್ಧಿ ಹೊಂದಿದ ದೇಶಗಳ ಹಣಕಾಸು ನೆರವು ಹವಾಮಾನ ಸುಧಾರಣೆಗೆ ಕಾರ್ಯೋನ್ಮುಖವಾಗಲು ಮುಖ್ಯಭೂಮಿಕೆ ವಹಿಸಬೇಕಿದ್ದು, ಅಗತ್ಯ ಬದಲಾವಣೆಗಳ ಅಳವಡಿಕೆಗೆ ಆರ್ಥಿಕ ಹರಿವನ್ನು ಒದಗಿಸಬೇಕು ಎಂದು ಹೇಳಿರುವುದಲ್ಲದೇ, ಪ್ಯಾರಿಸ್ ಒಪ್ಪಂದದ 9.1ನೇ ವಿಧಿಯನ್ವಯ ಇದು ಅಭಿವೃದ್ಧಿ ಹೊಂದಿದ ದೇಶಗಳ ಬಾಧ್ಯತೆ ಎಂದೂ ಹೇಳಿದ್ದಾರೆ. (PIB Release ID: 2334571)
ಅಲ್ಲಿಗೆ, ರೋಗಿ ಬಯಸಿದ್ದೂ ಹಾಲು, ವೈದ್ಯ ಕೊಟ್ಟದ್ದೂ ಹಾಲು. ಈ ರೀತಿಯ ಬೆಳವಣಿಗೆಗಳನ್ನು ಗಮನಿಸಿದರೆ, ದೇಶದ ಒಳಗೆ 2070ಕ್ಕೆ ಮುನ್ನ ಕಾರ್ಬನ್ ಹೊರಸೂಸುವಿಕೆ ಶೂನ್ಯಕ್ಕಿಳಿಯಲಿದೆ ಎಂಬ ನಂಬಿಕೆ ಯಾರಿಗೂ ಇದ್ದಂತಿಲ್ಲ. ಭಾರತದಲ್ಲಿ ಇಂದಿಗೂ ಅತ್ಯಂತ ಮಾಲಿನ್ಯಕಾರಕ ಕಲ್ಲಿದ್ದಲು ಆಧರಿತ ಉಷ್ಣವಿದ್ಯುತ್ ಸ್ಥಾವರಗಳೇ ವಿದ್ಯುತ್ತಿಗೆ ಮುಖ್ಯ ಮೂಲ. ಅವುಗಳ ಬಳಕೆಯನ್ನು ಅಭಿವೃದ್ಧಿಹೊಂದಿದ ದೇಶಗಳು ಹಂತಹಂತವಾಗಿ ತಗ್ಗಿಸುತ್ತಾ ಬರುತ್ತಿದ್ದರೆ, ಭಾರತದಲ್ಲಿ ಅವುಗಳ ಸಂಖ್ಯೆ ಏರುತ್ತಿದೆ! ನ್ಯೂಕ್ಲಿಯರ್ ವಿದ್ಯುತ್ತಿಗೆ ಅಗತ್ಯವಿರುವ ಇಂಧನ ಮೂಲಗಳ ಗಣಿಗಾರಿಕೆಗೆ ವೇಗ ಸಿಗುತ್ತಿದೆ, ಜಗತ್ತಿನಾದ್ಯಂತದಿಂದ ಭಾರತದಲ್ಲಿ ಬಂದು ರಾಶಿ ಬೀಳಲು ಸನ್ನದ್ಧವಾಗಿರುವ ಡೇಟಾ ಸೆಂಟರ್ಗಳು, ಇಲ್ಲಿನ ಅತಿ ನೀರು ಬಳಕೆ ಮಾಡಿಕೊಳ್ಳುವ ಎಥೆನಾಲ್ ಉತ್ಪಾದನೆ, ವಿವಿಧ ಆಧುನಿಕ ‘ಪರ್ಯಾಯ ಇಂಧನ ತಂತ್ರಜ್ಞಾನಗಳಿಗೆ’ ಅಗತ್ಯವಿರುವ ರೇರ್ ಅರ್ಥ್ ಮಿನರಲ್ಸ್ಗಳ ಗಣಿಗಾರಿಕೆಗೆ ನಡೆಯುತ್ತಿರುವ ಸನ್ನದ್ಧತೆ... ಹೀಗೆ ಪ್ರತಿಯೊಂದು ಬೆಳವಣಿಗೆ ಕೂಡ ಖಚಿತವಾಗಿ ಹೇಳುತ್ತಿರುವುದು ಏನೆಂದರೆ, 2070ಕ್ಕೆ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕಿಳಿಯಲು ಪ್ರಾಕ್ಟಿಕಲೀ ಸಾಧ್ಯ ಇಲ್ಲ ಎಂದೇ. ಹಾಗಿದ್ದ ಮೇಲೆ, ಈ COP31ನಂತಹ ಅಂತರ್ರಾಷ್ಟ್ರೀಯ ಸಮಾವೇಶಗಳ ಅಂತಿಮ ಉದ್ದೇಶ- ಹೊಸ ಕಾಲಕ್ಕೆ ತಕ್ಕ ಹೊಸ ಹೊಸ ಮಾರುಕಟ್ಟೆ ಸಾಧ್ಯತೆಗಳನ್ನು ಅರಸುವುದು ಎಂದೇ ಅರ್ಥ ಅಲ್ಲವೇ?
ದೇಶ ಈಗಾಗಲೇ ಅಗಾಧ ಪ್ರಮಾಣದ ಸಾಲದ ಹೊರೆ ಹೊತ್ತು ಅತಿ ಖಾಸಗೀಕರಣದ ಹಾಗೂ ಏಕಸ್ವಾಮ್ಯದ ಹೊಸ್ತಿಲಿನಲ್ಲಿ ನಿಂತಿರುವಾಗ, ಹವಾಮಾನ ಸುಧಾರಣೆಗೆ ಇನ್ನಷ್ಟು ವಿದೇಶೀ ಸಾಲ-ನೆರವು-ಹಸ್ತಕ್ಷೇಪ ಇತ್ಯಾದಿಗಳೆಲ್ಲ ನಮ್ಮನ್ನು ಎಲ್ಲಿಗೆ ತಲುಪಿಸಲಿವೆ?
ಹಾಸಿಗೆ ಇದ್ದಷ್ಟೇ ಕಾಲು ಚಾಚಿದರೆ ಸಾಲದೆ?.
(ಅಂಕಣಕಾರರು ಹಿರಿಯ ಪತ್ರಕರ್ತರು ಮತ್ತು ಚಿಂತಕರು)






