ಇದು ಭಾಗ್ಯ, ಇದು ಭಾಗ್ಯ, ಇದು ‘ಬಿಟ್ಟಿ ಭಾಗ್ಯ’ವಯ್ಯ!

ದೇಶದಲ್ಲಿ ಶೇ. 60-70 ಇರುವ ಬಡ ಮತ್ತು ಮಧ್ಯಮ ವರ್ಗದ ಜನಸಮುದಾಯಗಳಿಗೆ ಯಾವುದೇ ಸರಕಾರಿ ಸವಲತ್ತು, ಸಬ್ಸಿಡಿ ನೀಡಿದಾಗ ಅದು ‘ಬಿಟ್ಟಿ ಭಾಗ್ಯ’ ಎಂದು ಹೀಗಳೆಯುವವರಿಗೆ, ಹೀಗೆ ಬಲಾಢ್ಯ ಕಾರ್ಪೊರೇಟ್‌ಗಳ ಲಾಬಿಯ ಒತ್ತಡಕ್ಕೆ ಮಣಿದು, ಸರಕಾರಗಳು ಮಂಡಿಯೂರಿ ಸಬ್ಸಿಡಿ ನೀಡುವುದು/ಮುಂದುವರಿಸುವುದು ಏನನ್ನಿಸುತ್ತದೆ?
ಭಾರತ ಸರಕಾರವು ದೇಶದ ಒಳಗೆ ಉತ್ಪಾದನೆ ಹೆಚ್ಚಳ ಹಾಗೂ ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಆರಂಭಿಸಿದ ಉತ್ಪಾದನೆ ಆಧರಿತ ಪ್ರೋತ್ಸಾಹಧನ (ಪಿಎಲ್‌ಐ) ಯೋಜನೆಯ ಕುರಿತು ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಂ ರಾಜನ್ ಅವರು 2023ರಲ್ಲಿ ನೀಡಿದ ಕಾರ್ಣಿಕದ ‘ನುಡಿ’ಯೊಂದು ಈಗ ಅವರ ಮುಂಗಾಣ್ಕೆ ಎಷ್ಟು ನಿಖರವಾಗಿತ್ತು ಎಂಬುದನ್ನು ಸಾಬೀತುಪಡಿಸುತ್ತಿದೆ.
2021-22ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರಕಾರವು 14 ಕ್ಷೇತ್ರಗಳಿಗೆ 1.97 ಲಕ್ಷ ಕೋಟಿ ರೂ.ಗಳ ಗಾತ್ರದ ಪಿಎಲ್‌ಐ ಸಬ್ಸಿಡಿಯನ್ನು ಒದಗಿಸಲು ಬಜೆಟರಿ ಅನುದಾನವನ್ನು ಪ್ರಕಟಿಸಿತ್ತು. ಈ ಯೋಜನೆಯಡಿ ಭಾರತದಲ್ಲಿ ಉತ್ಪಾದನೆ ಆದ ಸರಕುಗಳಿಗೆ ಶೇ. 4-6 ಪ್ರೋತ್ಸಾಹಧನ ಸಿಗುತ್ತದೆ. (ಗಮನಿಸಿ: ಈ ಬಗ್ಗೆ 23 ಸೆಪ್ಟಂಬರ್, 2023ರಂದು ಪ್ರಕಟಗೊಂಡ ಪಿಟ್ಕಾಯಣದಲ್ಲಿ ವಿವರವಾಗಿ ಹೇಳಲಾಗಿದೆ.) ಈ ಯೋಜನೆಯ ಸ್ವರೂಪದ ಬಗ್ಗೆ 2023ರಲ್ಲಿ ಟೀಕೆ ಮಾಡಿದ್ದ ರಘುರಾಂ ರಾಜನ್ ಅವರು, ಮೊಬೈಲ್ ಫೋನಿನ ಪ್ರಮುಖ ಬಿಡಿಭಾಗಗಳಾದ PCBA, ಡಿಸ್‌ಪ್ಲೇ, ಕ್ಯಾಮರಾ, ಬ್ಯಾಟರಿ, ಸೆಮಿಕಂಡಕ್ಟರ್... ಇವು ಯಾವುವೂ ಭಾರತದಲ್ಲಿ ಉತ್ಪಾದನೆ ಆಗುವುದಿಲ್ಲ. ಇಲ್ಲಿ ಏನಿದ್ದರೂ ಅವುಗಳ ಅಸೆಂಬ್ಲಿ-ಫಿನಿಷಿಂಗ್-ಟೆಸ್ಟಿಂಗ್ ನಡೆಯುತ್ತದೆ. ಅಂತಿಮವಾಗಿ ಒಂದು ಮೊಬೈಲ್ ಫೋನಿನ ಉತ್ಪಾದನಾ ವೆಚ್ಚದ ಮೇಲೆ ಇಲ್ಲಿ ನಡೆಯುವ ವ್ಯಾಲ್ಯೂ ಎಡಿಷನ್ ಕೇವಲ ಶೇ. 4 ಮಾತ್ರ. ಅದಕ್ಕೆ ಶೇ. 4-6 ಸಬ್ಸಿಡಿಯನ್ನು ಸರಕಾರ ನೀಡುವುದಿದ್ದರೆ, ಯಾರು ತಾನೇ ಬೇಡ ಎನ್ನುತ್ತಾರೆ? ಇವು ಆರಂಭದಲ್ಲಿ ಸ್ವಲ್ಪ ಉದ್ಯೋಗ ಸೃಷ್ಟಿ ಮಾಡಬಹುದಾದರೂ, ಕೌಶಲ ವೃದ್ಧಿ ಮಾಡುವುದಿಲ್ಲ. ಅಂತಿಮವಾಗಿ ಐದು ವರ್ಷ ಮುಗಿಯುವ ಹೊತ್ತಿಗೆ ಅಕಸ್ಮಾತ್ ಪಿಎಲ್‌ಐ ನಿಲ್ಲಿಸಿದರೆ, ಈ ಕಂಪೆನಿಗಳು ಇಲ್ಲಿಯೇ ಮುಂದುವರಿಯುವ ಗ್ಯಾರಂಟಿಯೂ ಇಲ್ಲ. ಇದು ಸಮಸ್ಯೆಯ ಒಂದು ಮುಖವಾದರೆ, ಇನ್ನೊಂದೆಡೆ ಬಿಡಿ ಭಾಗಗಳ ಆಮದು ಪ್ರಮಾಣ ತೀವ್ರವಾಗಿ ಹೆಚ್ಚಲಿದ್ದು, ಇದು ನಮ್ಮ ಆಮದು-ರಫ್ತು ಅಸಮತೋಲನಕ್ಕೆ ಕಾರಣ ಆಗಬಹುದು ಎಂದೆಲ್ಲ ವಿವರಿಸಿದ್ದರು.
ರಘುರಾಂ ರಾಜನ್ ಅವರು ಹೇಳಿದ ಮಾತುಗಳು ಇಂದು ಬಹುತೇಕ ಸತ್ಯವಾಗುವ ಹಂತದಲ್ಲಿ ಇವೆ. ಪಿಎಲ್‌ಐ ಯೋಜನೆಯ ಉದ್ದೇಶಿತ ಐದು ವರ್ಷಗಳು 2025-26ಕ್ಕೆ ಪೂರ್ಣಗೊಳ್ಳಲಿದ್ದು, ಆ ಹಿನ್ನೆಲೆಯಲ್ಲಿ ಕೆಲವು ಸಂಗತಿಗಳು ಗಮನ ಸೆಳೆಯುತ್ತಿವೆ. ಕಳೆದ ವಾರ ಬ್ಯುಸಿನೆಸ್ ಲೈನ್ ಪತ್ರಿಕೆಯು ಸ್ಮಾರ್ಟ್‌ಫೋನ್ ಉದ್ಯಮದ ಮೂಲಗಳನ್ನು ಆಧರಿಸಿ, ಕೆಲವು ಬೆಳವಣಿಗೆಗಳನ್ನು ವರದಿ ಮಾಡಿತ್ತು. ಆ ವರದಿಯ ಪ್ರಕಾರ, ಬೃಹತ್ ಇಲೆಕ್ಟ್ರಾನಿಕ್ ಉತ್ಪಾದನಾ ಕ್ಷೇತ್ರಕ್ಕೆ ನೀಡಲಾಗಿರುವ ಪಿಎಲ್‌ಐ ಸಬ್ಸಿಡಿ ಯೋಜನೆ ಇನ್ನು ಮೂರು ತಿಂಗಳಲ್ಲಿ ಅಂತ್ಯಕಾಣಲಿದ್ದು, ಸರಕಾರದ ಕಡೆಯಿಂದ ಆ ಯೋಜನೆಯನ್ನು ಮುಂದುವರಿಸುವ ಯಾವುದೇ ಸೂಚನೆ ಇಲ್ಲಿಯ ತನಕ ಬಂದಿಲ್ಲ. ಹಾಗಾಗಿ ಮೊಬೈಲ್ ಫೋನ್ ಉದ್ಯಮ ವಲಯ ಕಳವಳಗೊಂಡಿದೆ. ಸರಕಾರ ಒಂದೋ ಪಿಎಲ್‌ಐ ಅನ್ನು ವಿಸ್ತರಿಸಬೇಕು ಇಲ್ಲವೇ ಅಂತಹದೇ ಬೇರೆ ಬೆಂಬಲ ಮೆಕ್ಯಾನಿಸಂ ಒಂದನ್ನು ಯೋಜಿಸಿ ಪ್ರಕಟಿಸಬೇಕು. ಈಗಿರುವ ವೇಗದಲ್ಲಿ ಬೆಳವಣಿಗೆಯನ್ನು ಉಳಿಸಿಕೊಳ್ಳಲು, ಈ ವಿಚಾರದಲ್ಲಿ ಸ್ಪಷ್ಟ ಚಿತ್ರಣ ಸಿಗಬೇಕಾದುದು ಅಗತ್ಯ ಎಂದು ಮೊಬೈಲ್ ಫೋನ್ ಇಂಡಸ್ಟ್ರಿ ಮೂಲಗಳು ಹೇಳಿವೆ. 2030ರ ಒಳಗಡೆ ಉದ್ದೇಶಿತ 45 ಲಕ್ಷ ಕೋಟಿ ರೂ.ಗಳ ಮಾರಾಟದ ಗುರಿಯನ್ನು ಸಾಧಿಸಬೇಕಿದ್ದರೆ, ಪಿಎಲ್‌ಐ ಬೆಂಬಲ ಉದ್ಯಮಕ್ಕೆ ಅನಿವಾರ್ಯ. 2025ರ ಹೊತ್ತಿಗೆ ಈ ಉದ್ಯಮ 1.61ಲಕ್ಷ ಕೋಟಿ ರೂ.ಗಳ ಹೂಡಿಕೆ ಭರವಸೆಯನ್ನು ಭಾರತಕ್ಕೆ ತಂದಿದೆಯಲ್ಲದೇ ಈಗಾಗಲೇ 1.76 ಲಕ್ಷ ಕೋಟಿ ರೂ.ಗಳ ಹೂಡಿಕೆ ಆಗಿದೆ. ಮೊಬೈಲ್ ಫೋನ್ ಒಂದೇ ಕ್ಷೇತ್ರದಲ್ಲಿ, 5.45 ಲಕ್ಷ ಕೋಟಿ ರೂ.ಗಳ ಉತ್ಪಾದನೆ ಸಾಧಿಸಲಾಗಿದೆ. ಫಾಕ್ಸ್‌ಕಾನ್, ಪೆಗಾಟ್ರಾನ್‌ನಂತಹ ಪ್ರಮುಖ ಆ್ಯಪಲ್ ಫೋನ್ ಬಿಡಿಭಾಗಗಳ ಸರಬರಾಜುದಾರರು ಭಾರತದಲ್ಲಿ ಅಂಗಡಿ ತೆರೆದಿದ್ದಾರೆ. ಮೊಬೈಲ್ ಫೋನ್ ಉತ್ಪಾದಕರಿಗೆ ಪಿಎಲ್‌ಐ ಮಾತ್ರವಲ್ಲದೇ ತೆರಿಗೆ ರಜೆ, ಕಡಿಮೆ ಬೆಲೆಗೆ ಭೂಮಿಯಂತಹ ಹಲವು ಬೇರೆ ಭಾಗ್ಯಗಳೂ ಇವೆ. ಕರ್ನಾಟಕ ಸೇರಿದಂತೆ, ರಾಜ್ಯಸರಕಾರಗಳು ಇವರಿಗೆಲ್ಲ ಕೆಂಪುಹಾಸಿನ ಸ್ವಾಗತ ಕೋರಲು ಅತ್ಯುತ್ಸಾಹ ತೋರಿಸುತ್ತಿವೆ. ಹಾಗಾಗಿ ಬಹುರಾಷ್ಟ್ರೀಯ ಮೊಬೈಲ್ ಉತ್ಪಾದಕ ಕಂಪೆನಿಗಳಿಗೆ ಇಲ್ಲಿ ಹೂಡಿಕೆ ಆಕರ್ಷಕ ಅನ್ನಿಸುವುದು ಸಹಜ.
ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಎಸ್. ಕೃಷ್ಣನ್ ಅವರು, ಪಿಎಲ್‌ಐ ಮುಂದುವರಿಕೆಯ (ಪಿಎಲ್‌ಐ 2.0) ಕುರಿತು ಸಂಬಂಧಿತರೊಂದಿಗೆ ಮಾತುಕತೆ ನಡೆಸಿದ್ದೇವೆ. ಇಲ್ಲಿಯ ತನಕ ಆ ಕ್ಷೇತ್ರಕ್ಕೆ 14,900 ಕೊಟಿ ರೂ.ಗಳ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ ಎಂಬ ಬಗ್ಗೆ ಕೂಡ ಪತ್ರಿಕೆ ವರದಿ ಮಾಡಿದ್ದು, ಅದರ ಅರ್ಥ- ಸರಕಾರ ಕೂಡ, ಈ ಹೊಸ ಸಬ್ಸಿಡಿ ಚಕ್ರವ್ಯೆಹದಲ್ಲಿ ಸಿಕ್ಕಿಹಾಕಿಕೊಳ್ಳಲು ಸಿದ್ಧವಾಗುತ್ತಿರುವಂತಿದೆ. ಆರಂಭದಲ್ಲಿ ಭಾರತ ಸರಕಾರದ ಉದ್ದೇಶ ಇದ್ದುದು, ಐದು ವರ್ಷಗಳಲ್ಲಿ 30 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಕೈಗಾರಿಕಾ ಉತ್ಪಾದನೆ ಮತ್ತು 60 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿ. ಆದರೆ, 2025ರ ಮಾರ್ಚ್ ಹೊತ್ತಿಗೆ ಈ ಯೋಜನೆ ಉದ್ದೇಶಿತ ಗುರಿ ತಲುಪಿಲ್ಲ ಎಂಬುದನ್ನು ಸರಕಾರವೇ ಸಂಸತ್ತಿನಲ್ಲಿ ಬಹಿರಂಗಪಡಿಸಿಕೊಂಡಿದೆ. ಉತ್ಪಾದನೆಯಲ್ಲಿ 16.5 ಲಕ್ಷ ಕೋಟಿ ರೂ.ಗಳ ಹೆಚ್ಚಳ ಆಗಿದ್ದರೆ, 12 ಲಕ್ಷ (ನೇರ ಮತ್ತು ಪರೋಕ್ಷ ಒಟ್ಟು ಸೇರಿ) ಉದ್ಯೋಗಗಳು ಸೃಷ್ಟಿ ಆಗಿವೆ (ಆಧಾರ: ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ 2,625. ದಿನಾಂಕ: 5 ಆಗಸ್ಟ್, 2025). ಅಂದರೆ ಸರಕಾರದ ಉದ್ದೇಶಿತ ಗುರಿಯ ಶೇ. 50 ಕೂಡ ಸಾಧನೆ ಆಗಿಲ್ಲ. ಸದ್ಯಕ್ಕೆ ದೇಶದ ರಫ್ತಿನ ಗಮನಾರ್ಹ ಭಾಗವನ್ನು ಆವರಿಸಿಕೊಂಡಿರುವ ಮೊಬೈಲ್ ಫೋನ್ ರಫ್ತು 2021-22ರಲ್ಲಿ 22,850 ಕೋಟಿ ರೂ. ಇದ್ದುದು ಈಗ 2024-25ರಲ್ಲಿ 2 ಲಕ್ಷ ಕೋಟಿ ರೂ. ಗಾತ್ರವನ್ನು ದಾಟಿದೆ; ಮೊಬೈಲ್ ಉತ್ಪಾದನೆಯ ಪ್ರಮಾಣ 2.14 ಲಕ್ಷ ಕೋಟಿ ರೂ. (2021-22) ಇದ್ದಲ್ಲಿಂದ 5.25 ಲಕ್ಷ ಕೋಟಿ ರೂ.ಗೆ ತಲುಪಿದೆ.
2023ರಲ್ಲಿ ರಘುರಾಂ ರಾಜನ್ ಅವರು ಹೇಳಿದ್ದು ಇದನ್ನೇ. ಶೇ. 4 ವ್ಯಾಲ್ಯೂ ಎಡಿಷನ್ ಮಾಡಿದ್ದಕ್ಕೆ ಶೇ. 4-6 ಸಬ್ಸಿಡಿ ನೀಡುವುದಾದರೆ, ಕಂಪೆನಿಗಳು ನಾ ಮುಂದು-ತಾ ಮುಂದು ಎಂದು ಬರುತ್ತವೆ, ಆದರೆ ಸಬ್ಸಿಡಿ ನಿಲ್ಲಿಸಿದ ದಿನ ಅವರು ಇಲ್ಲಿ ಉಳಿಯುವ ಸಾಧ್ಯತೆಗಳಿಲ್ಲ ಎಂದು. ಒಂದು ವೇಳೆ ಸಬ್ಸಿಡಿ ನಿಲ್ಲಿಸಿ, ಕಂಪೆನಿಗಳು ಇಲ್ಲಿಂದ ಗುಳೆ ಹೋದರೆ, ಇಲ್ಲಿ ಕೇವಲ ‘ಸ್ಕ್ರೂಡ್ರೈವರ್’ ಬಳಸುವ ತಾಂತ್ರಿಕ ಕೌಶಲ ಕಲಿತಿರುವ ಕೆಲಸಗಾರರು ಅತಂತ್ರರಾಗಬಹುದು. ಇದು ದೇಶದಲ್ಲಿ ಉತ್ಪಾದನಾ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ ವೃದ್ಧಿಗೆ ಯಾವ ರೀತಿಯಲ್ಲೂ ಸಹಾಯಕ ಅಲ್ಲ ಎಂಬ ಕಳಕಳಿ ಅವರದಾಗಿತ್ತು. ಈಗ ಪಿಎಲ್‌ಐ ಮುಂದುವರಿಸಲು ನಡೆದಿರುವ ಲಾಬಿಯನ್ನು ಗಮನಿಸಿದರೆ, ರಘುರಾಂ ರಾಜನ್ ಅವರ ಮುಂಗಾಣ್ಕೆ ಎಷ್ಟು ಮಹತ್ವದ್ದೆಂಬುದು ಸ್ಪಷ್ಟವಾಗುತ್ತದೆ.
ಅಂದಿನ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರು ರಘುರಾಂ ರಾಜನ್ ಅವರ ಆ ನಿಲುವನ್ನು ಕಟುವಾಗಿ ಖಂಡಿಸಿದ್ದರು. ‘‘ಅವರ ತೀರ್ಮಾನವೇನೂ ಭಯಂಕರ ರಾಕೆಟ್ ಸಯನ್ಸ್ ಅಲ್ಲ. ಆದರೆ ಅದಕ್ಕೆ ಅವರು ಬಳಸಿರುವುದು ತಪ್ಪು ಅಂಕಿ-ಸಂಖ್ಯೆಗಳನ್ನು, ಪ್ರಶ್ನಾರ್ಹ ವಿಶ್ಲೇಷಣೆಗಳನ್ನು ಹಾಗೂ ಗುರುತು ಬಹಿರಂಗಪಡಿಸದ ಉದ್ಯಮ ಪರಿಣತರನ್ನು. ಇದು ನೈತಿಕ ದಿವಾಳಿತನದ ಪ್ರತೀಕ. ಅವರಿಗೆ ಇಲೆಕ್ಟ್ರಾನಿಕ್ಸ್ ಉತ್ಪಾದನೆ, ಸರಬರಾಜು ಸರಪಣಿಯ ಬಗ್ಗೆ ಏನೂ ಅರಿವಿಲ್ಲದಿರುವುದು ಮಾತ್ರವಲ್ಲದೆ, ಕಡೆಗೆ ಅರ್ಥಶಾಸ್ತ್ರದ ಅರಿವೂ ಇಲ್ಲದಿರುವುದನ್ನು ಅವರ ಟೀಕೆ ತೋರಿಸುತ್ತದೆ’’ ಎಂದು ದೇಶದ ಪ್ರಮುಖ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾದ ರಘುರಾಂ ರಾಜನ್ ಅವರನ್ನು ಸಚಿವರು ಟೀಕಿಸಿದ್ದರು. (ಆಧಾರ: ಬ್ಯುಸಿನೆಸ್ ಸ್ಟಾಂಡರ್ಡ್ 15 ಜೂನ್, 2023).
ಈ ಹಿನ್ನೆಲೆಯಲ್ಲಿ ಸರಕಾರ ಈಗ ಮೊಬೈಲ್ ಉತ್ಪಾದಕರ ಲಾಬಿಗೆ ಮಣಿದು ಅವರಿಗೆ ಮತ್ತಷ್ಟು ಪಿಎಲ್‌ಐ ಸಬ್ಸಿಡಿಗಳನ್ನು ನೀಡಲಿದೆಯೋ ಅಥವಾ ನೈಜ ಉತ್ಪಾದನಾ ಕ್ಷೇತ್ರಗಳತ್ತ ಗಮನ ಹರಿಸಿ, ನಿಜಕ್ಕೂ ಆತ್ಮನಿರ್ಭರ ಆಗಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ. ದೇಶದಲ್ಲಿ ಶೇ. 60-70 ಇರುವ ಬಡ ಮತ್ತು ಮಧ್ಯಮ ವರ್ಗದ ಜನಸಮುದಾಯಗಳಿಗೆ ಯಾವುದೇ ಸರಕಾರಿ ಸವಲತ್ತು, ಸಬ್ಸಿಡಿ ನೀಡಿದಾಗ ಅದು ‘ಬಿಟ್ಟಿ ಭಾಗ್ಯ’ ಎಂದು ಹೀಗಳೆಯುವವರಿಗೆ, ಹೀಗೆ ಬಲಾಢ್ಯ ಕಾರ್ಪೊರೇಟ್‌ಗಳ ಲಾಬಿಯ ಒತ್ತಡಕ್ಕೆ ಮಣಿದು, ಸರಕಾರಗಳು ಮಂಡಿಯೂರಿ ಸಬ್ಸಿಡಿ ನೀಡುವುದು/ಮುಂದುವರಿಸುವುದು ಏನನ್ನಿಸುತ್ತದೆ? ಪಿಎಲ್‌ಐ ಮುಂದುವರಿಸುವುದಿದ್ದರೆ, ಈ ವರ್ಷದ ಬಜೆಟ್ ವೇಳೆ ಹಣಕಾಸು ಸಚಿವರು ಆ ಬಗ್ಗೆ ಬಜೆಟರಿ ಅನುದಾನವನ್ನು ಪ್ರಕಟಿಸಬೇಕಿರುತ್ತದೆ. ‘ಬಿಟ್ಟಿ ಭಾಗ್ಯ’ ಎಂದು ಮೂದಲಿಸುವವರ ಪ್ರತಿಕ್ರಿಯೆ ಆಗ ಹೇಗಿರಲಿದೆ?!







