ಯಾವುದೆಲ್ಲ ‘ಪಾಸ್’ ಆದರೆ ಏನೆಲ್ಲ ‘ಫೇಲ್’?

Photo Credit : PTI
ಸಂಸದೀಯ ನಿಯಮಗಳಲ್ಲಿರುವ ಅವಕಾಶವನ್ನು ಬಳಸಿಕೊಂಡು ಸರಕಾರವು, ಇನ್ನೂ ಸಮಾಪ್ತ ಆಗದಿರುವ ಅಧಿವೇಶನವನ್ನು ಮರು ಆರಂಭಿಸಿ, ಅಲ್ಲಿ ತನಗೆ ಪ್ರತಿಷ್ಠೆಯ ವಿಷಯ ಆಗಿರುವ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ‘ಪಾಸ್’ ಮಾಡಿಸಿಕೊಳ್ಳುವುದಕ್ಕೆ ಪ್ರಯತ್ನಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಡಿಸೆಂಬರ್ ಮೊದಲ ವಾರದಿಂದ ಸಂಸತ್ತಿನ ವಾಡಿಕೆಯ ಚಳಿಗಾಲದ ಅಧಿವೇಶನ ಆರಂಭ ಆಗಬೇಕಿದೆ. ಆದರೆ, ಈ ವರ್ಷ ನಾವು ಒಂದು ವಿಚಿತ್ರ ಸನ್ನಿವೇಶದಲ್ಲಿದ್ದೇವೆ. ಜುಲೈ 20, 2026ರಿಂದ ಆಗಸ್ಟ್ 13, 2026ರ ನಡುವೆ 19 ದಿನಗಳ ಕಾಲ ನಡೆದಿದ್ದ ಮುಂಗಾರು ಅಧಿವೇಶನವನ್ನು ಇನ್ನೂ ಔಪಚಾರಿಕವಾಗಿ ಸಮಾಪ್ತ (prorogue) ಮಾಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಚಳಿಗಾಲದ ಅಧಿವೇಶನದ ಮೊದಲು, ಇನ್ನೂ ಸಮಾಪ್ತಿಯಾಗದೇ ಉಳಿದಿರುವ ಮುಂಗಾರು ಅಧಿವೇಶನದ ಕಲಾಪಗಳು ಮುಂದುವರಿಯಬಹುದು; ಇದು ಈ ನವೆಂಬರ್ ತಿಂಗಳಿನಲ್ಲೇ ಒಂದು ಕಿರು ಅಧಿವೇಶನದ ಮೂಲಕ ನಡೆಯಬಹುದೆಂಬ ವದಂತಿಗಳು ಸುತ್ತಾಡುತ್ತಿವೆ. ಈ ಕುರಿತು ‘ದಿ ಇಂಡಿಯನ್ ಎಕ್ಸ್ಪ್ರೆಸ್’ (ನವೆಂ. 13) ವರದಿ ಮಾಡಿತ್ತು.
ಇದೇ ಅಕ್ಟೋಬರ್ 16ರಂದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು, ಸಂಸತ್ ಕಲಾಪಗಳು ಸ್ಥಗಿತಗೊಂಡು ಎರಡು ತಿಂಗಳು ಕಳೆದರೂ, ಅಧಿವೇಶನ ಸಮಾಪ್ತಿ ಪ್ರಕಟಿಸಿಲ್ಲ. ಅದನ್ನು ಕೇವಲ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ (sine die) ಎಂದು ಎಚ್ಚರಿಸಿದ್ದರು. ಅದಕ್ಕೆ ಪ್ರತಿಕ್ರಿಯಿದ್ದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಆಗಿರುವ ಸದನವನ್ನು ಇಷ್ಟೇ ಸಮಯದೊಳಗೆ ಮುಕ್ತಾಯಗೊಳಿಸಬೇಕೆಂದು ಸಂವಿಧಾನ ಹೇಳಿಲ್ಲ. ಈ ಹಿಂದೆ ಕೂಡ ಇಂತಹ ವಿಳಂಬಗಳು ಆದದ್ದಿವೆ ಎಂದು ಸಮರ್ಥಿಸಿಕೊಂಡಿದ್ದರು.
ಭಾರತದಲ್ಲಿ ಸಂಸತ್ತು ಇಂತಹ ನಿರ್ದಿಷ್ಟ ದಿನಾಂಕಗಳಲ್ಲೇ ಆರಂಭವಾಗಿ ಇಂತಹ ದಿನಾಂಕಕ್ಕೇ ಅಂತ್ಯಗೊಳ್ಳಬೇಕೆಂಬ ಕಟ್ಟುನಿಟ್ಟಿಲ್ಲ. ಬದಲಾಗಿ, ಸಂಸದೀಯ ವಾಡಿಕೆಗಳ ಪ್ರಕಾರ ವರ್ಷದಲ್ಲಿ ಮೂರು ಬಾರಿ ಅಧಿವೇಶನ ನಡೆಸಲಾಗುತ್ತದೆ. ಸಂವಿಧಾನದಲ್ಲಿ ಸಂಸತ್ತು ಇಂತಿಷ್ಟು ದಿನ ನಡೆಯಬೇಕೆಂದು ಹೇಳಿಲ್ಲವಾದರೂ, ಎರಡು ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚು ಅಂತರ ಇರಬಾರದು ಎಂದು ವಿಧಿಸಿದೆ. ಅದಕ್ಕನುಗುಣವಾಗಿ, ಬಜೆಟ್ ಅಧಿವೇಶನವು ವರ್ಷದ ಮೊದಲ ಅಧಿವೇಶನವಾಗಿ ಜನವರಿ ಅಂತ್ಯದಿಂದ ಎಪ್ರಿಲ್ ಮೊದಲ ವಾರದ ತನಕ ನಡೆಯುತ್ತದೆ. ಎರಡನೆಯ ಅಧಿವೇಶನವಾದ ಮುಂಗಾರು ಅಧಿವೇಶನವು ಜುಲೈ-ಆಗಸ್ಟ್ ನಡುವೆ ನಡೆಯತ್ತದೆ. ಮೂರನೆಯ ಅಧಿವೇಶನವಾದ ಚಳಿಗಾಲದ ಅಧಿವೇಶನವು ನವೆಂಬರ್-ಡಿಸೆಂಬರ್ ಅವಧಿಯಲ್ಲಿ ನಡೆದುಹೋಗುತ್ತದೆ. ಸಾಮಾನ್ಯವಾಗಿ ಈ ಅಧಿವೇಶನಗಳ ದಿನಾಂಕವನ್ನು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ನಿರ್ಧರಿಸಿ, ರಾಷ್ಟ್ರಪತಿಯವರ ಅನುಮೋದನೆ ಹಾಗೂ ಪ್ರಕಟಣೆಗೆ ಕಳುಹಿಸಿಕೊಡುತ್ತದೆ. ಈ ಸಂಪುಟ ಸಮಿತಿಯಲ್ಲಿ ರಕ್ಷಣೆ, ಗೃಹ, ಹಣಕಾಸು ಇಲಾಖೆಗಳವರು ಸೇರಿದಂತೆ 10 ಪ್ರಮುಖ ಸಚಿವರಿರುತ್ತಾರೆ.
ಈ ಬಾರಿ ಸಂಸತ್ತನ್ನು ಸಮಾಪ್ತಗೊಳಿಸದೆ ಕೇವಲ ಅನಿರ್ದಿಷ್ಟಾವಧಿಗೆ ಮುಂದೂಡಿರುವುದರಲ್ಲಿ, ಮೇಲುನೋಟಕ್ಕೇ ಕಾಣಿಸುವಂತೆ ರಾಜಕೀಯ ತಂತ್ರಗಾರಿಕೆ ಇರುವಂತಿದೆ. ನಿಯಮಗಳ ಪ್ರಕಾರ, ಸಮಾಪ್ತವಾಗಿರುವ ಸಂಸತ್ ಅಧಿವೇಶನವನ್ನು ಪುನಃ ಕಲಾಪ ನಡೆಸುವುದಕ್ಕೆ ಕರೆಯಲು ರಾಷ್ಟ್ರಪತಿಯವರು 15 ದಿನಗಳ ನೋಟಿಸ್ ನೀಡುವುದು ಸಂಪ್ರದಾಯ. ಒಂದು ವೇಳೆ ಸಂಸತ್ ಅಧಿವೇಶನವು ಕೇವಲ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಆಗಿದ್ದರೆ, ವಿಚಾರ ರಾಷ್ಟ್ರಪತಿಗಳ ಬಳಿ ಹೋಗಬೇಕಿಲ್ಲ. ಸದನ ನಿಯಮಗಳ ಅನ್ವಯ (ನಿಯಮ 15) ಅಧ್ಯಕ್ಷಾಧಿಕಾರಿಗಳು ಕಿರು ಅವಧಿಯ ನೋಟಿಸ್ನ ಮೂಲಕವೇ ಸದನ ಕಲಾಪವನ್ನು ಪುನರಾರಂಭಿಸಬಹುದು.
ಸಂಸದೀಯ ನಿಯಮಗಳಲ್ಲಿರುವ ಈ ಅವಕಾಶವನ್ನು ಬಳಸಿಕೊಂಡು ಸರಕಾರವು, ಇನ್ನೂ ಸಮಾಪ್ತ ಆಗದಿರುವ ಅಧಿವೇಶನವನ್ನು ಮರು ಆರಂಭಿಸಿ, ಅಲ್ಲಿ ತನಗೆ ಪ್ರತಿಷ್ಠೆಯ ವಿಷಯ ಆಗಿರುವ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ‘ಪಾಸ್’ ಮಾಡಿಸಿಕೊಳ್ಳುವುದಕ್ಕೆ ಪ್ರಯತ್ನಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗೆ ಕ್ಷೇತ್ರ ಮರುವಿಂಗಡಣೆ ಆದರೆ, ದೇಶದಲ್ಲಿ ಹಾಲಿ ಇರುವ ಲೋಕಸಭಾ ಸೀಟುಗಳ ಸಂಖ್ಯೆಯು 543ರಿಂದ 850ಕ್ಕೆ ಏರಲಿದೆ. ಮಾತ್ರವಲ್ಲದೆ, ಸಂವಿಧಾದ 106ನೇ ತಿದ್ದುಪಡಿ ಕಾಯ್ದೆಯ ಅನ್ವಯ ಸಂಸತ್ತು ಮತ್ತು ವಿಧಾನಮಂಡಲಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗ ಸೀಟುಗಳನ್ನು ಮೀಸಲಿರಿಸುವುದು ಅನಿವಾರ್ಯ ಆಗಲಿದೆ. ಕಣ್ಣೆದುರೇ ಇರುವ ಉತ್ತರ ಪ್ರದೇಶ, ಗುಜರಾತ್, ಪಂಜಾಬ್, ಗೋವಾ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆಗಳ ವೇಳೆ, ಈ ಬೆಳವಣಿಗೆಗಳು ತಮ್ಮ ಪಕ್ಷಕ್ಕೆ ಪೂರಕವಾಗಿ ಪರಿಣಮಿಸಲಿವೆ ಎಂಬುದು ಆಳುವ ಪಕ್ಷದ ಲೆಕ್ಕಾಚಾರವಿರಬೇಕು.
ಈ ವರ್ಷದ ಆದಿಯಲ್ಲಿ, ಬಜೆಟ್ ಅಧಿವೇಶನದ ವೇಳೆ ಈ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತಾದರೂ, ಸಾಂವಿಧಾನಿಕ ತಿದ್ದುಪಡಿಗಳಿಗೆ ಅಗತ್ಯವಿರುವ ಮೂರನೇ ಎರಡು ಬಹುಮತ ಸಿಗದ ಕಾರಣ, ಸರಕಾರ ಅದನ್ನು ಹಿಂದೆಗೆದುಕೊಂಡಿತ್ತು. ಆದರೆ, ಅಲ್ಲಿಂದೀಚೆಗೆ ಸಂಭವಿಸಿರುವ ಕೆಲವು ರಾಜಕೀಯ ಬೆಳವಣಿಗೆಗಳು ಸರಕಾರಕ್ಕೆ ಅನುಕೂಲಕರ ವಾತಾವರಣವನ್ನು ಕಲ್ಪಿಸಿದಂತಿದೆ. ಬಂಗಾಲದ ತೃಣಮೂಲ ಕಾಂಗ್ರೆಸ್ನ ಬಂಡಾಯ ಬಣದ 20 ಸದಸ್ಯರು, ಕಾಂಗ್ರೆಸ್ ಜೊತೆ ಮುನಿದುಕೊಂಡಿರುವ ತಮಿಳುನಾಡಿನ ಡಿಎಂಕೆಯ 22 ಸದಸ್ಯರು ಹಾಗೂ ಶರದ್ ಪವಾರ್ ನೇತೃತ್ವದ ಎನ್ಸಿಪಿ ಬಣದ 8 ಸದಸ್ಯರು ತಮ್ಮ ಜೊತೆ ಸೇರಿದರೆ, ತಮಗೆ ಅಗತ್ಯವಿರುವ ಸಂಖ್ಯಾಬಲ ಹೊಂದಿಸಿಕೊಳ್ಳಬಹುದು ಎಂಬ ನಿರೀಕ್ಷೆ ಸರಕಾರದ್ದು. ಎಪ್ರಿಲ್ನಲ್ಲಿ 298 ಮತಗಳು ಸರಕಾರದ ಪರ ಬಿದ್ದಿದ್ದರೆ, 230 ಮತಗಳು ಸರಕಾರದ ವಿರುದ್ಧ ಬಿದ್ದಿದ್ದವು. ಈ ಮಸೂದೆ ಪಾಸ್ ಆಗಲು ಅಗತ್ಯ ಇರುವ ಮ್ಯಾಜಿಕ್ ನಂಬರ್ 361. ಆಗಸ್ಟ್ನಲ್ಲಿ ಅಧಿವೇಶನವನ್ನು ಮುಂದೂಡಿದ ಬಳಿಕ ಸರಕಾರವು ತನಗೆ ಅಗತ್ಯ ಇರುವ ಮತಗಳನ್ನು ಸಂಗ್ರಹಿಸಿಕೊಳ್ಳಲು ಸಾಕಷ್ಟು ಶ್ರಮ ಹಾಕಿದೆ ಮತ್ತು ಅವೆಲ್ಲ ಸಿಕ್ಕುವುದು ಖಚಿತವಿದ್ದರೆ, ಅಧಿವೇಶನ ತುರ್ತಾಗಿ ಮತ್ತೆ ಆರಂಭಗೊಳ್ಳಲಿದೆ.
ಈ ಬೆಳವಣಿಗೆಗಳಿಗೆಲ್ಲ ಪೂರಕ ಅನ್ನಿಸುವಂತೆ, ಪ. ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, ತಮ್ಮ ಜೊತೆಗೆ ನಿಂತಿರುವ ತೃಣಮೂಲ ಕಾಂಗ್ರೆಸ್ನ ಬಂಡಾಯ ಬಣದ ಸಂಸದರಿಗೆ ಸದನ ಪುನರಾರಂಭಗೊಳ್ಳುವುದೆಂದು ನಿರೀಕ್ಷಿಸಲಾಗುತ್ತಿರುವ ಅವಧಿಯಲ್ಲಿ ಲಭ್ಯರಿರುವಂತೆ ಸೂಚಿಸಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿಯು ಆ ಬಣದ ನಾಯಕ ಸುದೀಪ್ ಬಂಧೋಪಾಧ್ಯಾಯ ಅವರನ್ನು ಉಲ್ಲೇಖಿಸಿ ಹೇಳಿದೆ.
ತಾಂತ್ರಿಕವಾಗಿ, ಸಾಂವಿಧಾನಿಕವಾಗಿ ಎಲ್ಲವೂ ಸರಿ ಇರುವಾಗ ಈ ಬೆಳವಣಿಗೆಗಳಲ್ಲಿ ಏನು ತಪ್ಪು ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಸತ್ವ ಇರುವುದೇ ದೇಶಹಿತಕ್ಕೆ ಸಂಬಂಧಿಸಿದ ಸದನ ಚರ್ಚೆಗಳಲ್ಲಿ. ಈ ರೀತಿಯ ಮಥನಗಳು ನಡೆಯದೆ, ಕೇವಲ ಸಂಖ್ಯಾಬಲದ ಆಧಾರದಲ್ಲಿ ಮಸೂದೆಗಳು ಕಾಯ್ದೆಗಳಾಗುವ ಪ್ರಕ್ರಿಯೆಗಳು ನಡೆಯತೊಡಗುವುದು ಪ್ರಜಾತಂತ್ರ ವ್ಯವಸ್ಥೆಗೆ ಪೂರಕ ಅಲ್ಲ. ಸಂವಿಧಾನದ ಅನುಸರಣೆ ಕೇವಲ ‘ಇನ್ ಲೆಟರ್’ ಮಾತ್ರವಲ್ಲ; ‘ಇನ್ ಸ್ಪಿರಿಟ್’ ಕೂಡ ಇರಬೇಕಾಗುತ್ತದೆ. ಸಂವಿಧಾನ ತನ್ನ ರಕ್ಷಕ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟು ಮೌನ ತಳೆದಿರುವ ಜಾಗಗಳಲ್ಲಿರುವ ‘ಗ್ರೇ ಏರಿಯಾ’ಗಳನ್ನು ಬಳಸಿಕೊಂಡು, ಎಲ್ಲವೂ ಕಾನೂನುಬದ್ಧವಾಗಿ ನಡೆದಿದೆ ಎಂದು ಸಾರುವುದು ಮತ್ತು ತಮ್ಮ ಮೂಗಿನ ನೇರಕ್ಕೆ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಜನಮತವನ್ನು ನಿರ್ಲಕ್ಷಿಸುವುದು ಆರೋಗ್ಯಕರ ಬೆಳವಣಿಗೆ ಅಲ್ಲ. ಕ್ಷೇತ್ರ ಮರುವಿಂಗಡಣೆ ಆದಾಗ, ಭಾರತದ ಉತ್ತರ-ದಕ್ಷಿಣ ಭಾಗಗಳಲ್ಲಿ ಆಗಲಿರುವ ಸೀಟುಗಳ ಸಂಖ್ಯೆ ಬದಲಾವಣೆಗಳು, ಅದರ ಫಲವಾಗಿ ಕಾಣಿಸಿಕೊಳ್ಳಬಹುದಾದ ಪ್ರಾದೇಶಿಕ ತಾರತಮ್ಯಗಳು ಮತ್ತಿತರ ಗಂಭೀರ ಸಂಗತಿಗಳೆಲ್ಲ ಪೂರ್ಣ ಪ್ರಮಾಣದಲ್ಲಿ ಹಾಗೂ ಮುಕ್ತ ಮನಸ್ಸಿನ ಚರ್ಚೆಯನ್ನು ಬೇಡುತ್ತವೆ. ಅದಕ್ಕೆ ಅವಕಾಶ ನೀಡದೆ ಹೋದರೆ, ಸಂಸದೀಯ ವ್ಯವಸ್ಥೆಯೇ ಅಪ್ರಸ್ತುತ ಅನ್ನಿಸಿಕೊಳ್ಳುವ ಅಪಾಯವಿದೆ.
ಒಂದು ಕ್ಷಣ ನಿಂತು ಸಾವಧಾನದಿಂದ, ದೇಶದ ಹಿತದೃಷ್ಟಿಯಿಂದ ಯೋಚಿಸಿದರೆ, ಕ್ಷೇತ್ರ ಪುನರ್ವಿಂಗಡಣೆಗೆ ಇದು ಸಕಾಲ ಅಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈಗ ನಡೆದಿರುವ ಪುನರ್ವಿಂಗಡಣೆಯು 2011ರ ಜನಗಣತಿ ಆಧರಿಸಿದ್ದು. ಅದೀಗ ಸಂಪೂರ್ಣ ಅಪ್ರಸ್ತುತ. ಭಾರತದ ಜನಸಂಖ್ಯೆ 2040-2060ರ ನಡುವೆ ಗರಿಷ್ಠ ಪ್ರಮಾಣ ತಲುಪಿ ತಗ್ಗತೊಡಗಲಿದೆ ಎಂದು ಹಲವಾರು ಅಧ್ಯಯನಗಳು ಗುರುತಿಸಿವೆ. ಕೋವಿಡ್ ಮತ್ತು ಆ ಬಳಿಕದ ಸಾವಿನ ಪ್ರಮಾಣ ಇತ್ಯಾದಿಗಳೆಲ್ಲದರ ವಾಸ್ತವಿಕ ಕಲ್ಪನೆಯೇ ನಮಗೆ ಇಲ್ಲ. ದೇಶದ ಜನಸಂಖ್ಯೆ ಈಗಾಗಲೇ ಪೀಕ್ ದಾಟಿರಲೂ ಬಹುದು. ಹಾಗಾಗಿ, ಈಗಾಗಲೇ 5-6 ವರ್ಷ ವಿಳಂಬ ಆಗಿರುವ ದಶವಾರ್ಷಿಕ ಜನಗಣತಿ ತುರ್ತಾಗಿ ನಡೆಯುವುದು ಆದ್ಯತೆ ಆಗಬೇಕು. ಅದು ಆದ ಬಳಿಕ ಮಾತ್ರ, ಆ ಫಲಿತಾಂಶಗಳನ್ನು ಎದುರಿಟ್ಟುಕೊಂಡು, ಅಗತ್ಯವಿದ್ದರೆ ಕ್ಷೇತ್ರ ಮರುವಿಂಗಡಣೆ ನಡೆಯಬಹುದು. ಅಂತಹದೊಂದು ತೀರ್ಮಾನಕ್ಕೆ ವೈಜ್ಞಾನಿಕ ತಳಹದಿ ಇರುತ್ತದೆ ಮತ್ತು ಅದು ದೀರ್ಘಕಾಲಿಕ ಬಾಳ್ವಿಕೆ ಇರುವ ನಿರ್ಣಯ ಆಗಲಿದೆ.
ಅದನ್ನು ಬಿಟ್ಟು ಕ್ಷಣಿಕ ಲಾಭಕ್ಕಾಗಿ ದೇಶದ ಹಿತಾಸಕ್ತಿಗಳನ್ನು ಬಲಿಕೊಡುವುದರಿಂದ ಸದನದಲ್ಲಿನ ಬಲಾಬಲ ಆಧರಿಸಿ ಮಸೂದೆಯೇನೋ ‘ಪಾಸ್’ ಆಗಬಹುದು. ಆದರೆ, ಅದರ ಫಲವಾಗಿ ದೇಶ ‘ಫೇಲ್’ ಆದರೆ, ಆ ಹೊಣೆ ಹೊರಬೇಕಾದವರು ಯಾರು?
(ಅಂಕಣಕಾರರು ಹಿರಿಯ ಪತ್ರಕರ್ತರು ಮತ್ತು ಚಿಂತಕರು)






