Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ಈ ‘ಗೋವಾ ಮಾದರಿ’ಯಲ್ಲಿ ನಮಗೇನು ಪಾಠ ಇದೆ?

ಈ ‘ಗೋವಾ ಮಾದರಿ’ಯಲ್ಲಿ ನಮಗೇನು ಪಾಠ ಇದೆ?

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು21 Feb 2026 10:08 AM IST
share
ಈ ‘ಗೋವಾ ಮಾದರಿ’ಯಲ್ಲಿ ನಮಗೇನು ಪಾಠ ಇದೆ?

ಇಂದು ಕನ್ನಡ ಕರಾವಳಿ ಎಗ್ಗಿಲ್ಲದೆ ‘ಆನಿಪಾಲು’ ಆಗುತ್ತಿದೆ, ಸ್ಥಳೀಯರು ನಮಗೆ ಕೊಡಿರೆಂದು ಕೇಳದ, ವಿಷವೂಡುವ, ಇಲ್ಲಿನ ಪರಿಸರ ಮತ್ತು ಜನಪದಗಳನ್ನು ಹೇಳಹೆಸರಿಲ್ಲದಂತೆ ನಾಶಮಾಡಬಲ್ಲ ಯೋಜನೆಗಳನ್ನು ‘ಡೇಬಲಾಪ್‌ಮೇಂಟ್’ ಹೆಸರಿನಲ್ಲಿ ಇಲ್ಲಿಗೆ ತಂದು ಸುರಿಯಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ, ಇಲ್ಲಿನ ಅಸ್ಮಿತೆಗೆ ಧಕ್ಕೆ ಬಂದಾಗ ಜನ ಹೇಗೆ ರಾಜಕೀಯ, ಪಂಥ, ಪರಾಕ್ರಮಗಳನ್ನೆಲ್ಲ ಮರೆತು ನಾಡಿನ ಹಿತದೃಷ್ಟಿಯಿಂದ ಪ್ರತಿಕ್ರಿಯಿಸಬೇಕು ಎಂಬುದಕ್ಕೆ ಗೋವಾದ ಈ ಮಾದರಿ ನಮಗೆ ಪಾಠ ಆಗಬೇಕು.

ಗೋವಾದಲ್ಲೊಂದು ವಿಶಿಷ್ಟ ವಿದ್ಯಮಾನ ನಡೆಯುತ್ತಿದೆ. ದಕ್ಷಿಣ ಗೋವಾದ ದಾಬೋಲಿಮ್‌ನಲ್ಲಿರುವ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಬೇಕೆಂಬ ‘ಆನಿ ಒತ್ತಡ’ವನ್ನು ಗೋವಾದ ಬಿಜೆಪಿ, ಕಾಂಗ್ರೆಸ್, AAP, ಇತರ ಪ್ರಾದೇಶಿಕ ಪಕ್ಷಗಳೆಲ್ಲವೂ ಒಟ್ಟಾಗಿ ಒಕ್ಕೊರಲಿನಿಂದ ವಿರೋಧಿಸುತ್ತಿವೆ ಮತ್ತು ತಮ್ಮ ಅಭಿಪ್ರಾಯವನ್ನು ಮೀರಿ ಅಂತಹದೇನಾದರೂ ಸಂಭವಿಸಿದರೆ, ಎಲ್ಲರೂ ಒಟ್ಟಾಗಿ ಹೋರಾಟ ಕಟ್ಟುವ ಎಚ್ಚರಿಕೆಗಳೂ ಹೊರಬೀಳುತ್ತಿವೆ. ಈ ಜನಾಭಿಪ್ರಾಯದ ಮಹಾಪೂರಕ್ಕೆ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸದ್ಯಕ್ಕೆ ಮಣಿದಿರುವಂತೆ ಕಾಣಿಸುತ್ತಿದೆ.

ವಿಷಯ ಏನೆಂದರೆ, ಪುಟ್ಟ ರಾಜ್ಯವಾಗಿರುವ ಗೋವಾದಲ್ಲಿ ಎರಡು ವಿಮಾನ ನಿಲ್ದಾಣಗಳಿವೆ. ಒಂದು ದಕ್ಷಿಣ ಗೋವಾದ ದಾಬೋಲಿಮ್‌ನಲ್ಲಿರುವ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವಾದರೆ, ಇನ್ನೊಂದು ಉತ್ತರ ಗೋವಾದ ಮೋಪಾದಲ್ಲಿ ಇರುವ ‘ಮನೋಹರ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ’. ಈ ಮೋಪಾದಲ್ಲಿರುವ ವಿಮಾನ ನಿಲ್ದಾಣವನ್ನು GMR ಎಂಬ ಖಾಸಗಿ ಸಂಸ್ಥೆ ನಿರ್ವಹಿಸುತ್ತಿದೆ. ದೇಶದ ಪ್ರಮುಖ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳಲ್ಲಿ GMR ಕೂಡ ಒಂದು. ದಾಬೋಲಿಮ್‌ನಲ್ಲಿರುವ ವಿಮಾನ ನಿಲ್ದಾಣ ಮುಚ್ಚಿಕೊಂಡರೆ, ತಮ್ಮ ಮೋಪಾ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಲಾಭ ಇದೆ ಎಂಬುದು ಖಾಸಗಿ ನಿರ್ವಾಹಕರ ದೂರಾಲೋಚನೆ ಇರುವಂತಿದೆ.

ಖಾಸಗಿ ದೂರಾಲೋಚನೆಯ ಹಿಂದೆ ಒಂದು ಬಲವಾದ ಕಾರಣ ಇದೆ. ದಾಬೋಲಿಮ್‌ನಲ್ಲಿರುವ ವಿಮಾನ ನಿಲ್ದಾಣವನ್ನು 1955ರಲ್ಲಿ ಪೋರ್ಚುಗೀಸರು ನಿರ್ಮಿಸಿದ್ದರು. 1961ರಲ್ಲಿ ಗೋವಾ ವಿಮೋಚನೆ ಆದ ಬಳಿಕ, ಈ ನಿಲ್ದಾಣವನ್ನು ಭಾರತೀಯ ನೌಕಾಪಡೆಯ ವಿಮಾನಗಳ ವಿಭಾಗ ನಿರ್ವಹಿಸುತ್ತಾ ಬಂದಿದೆ. ಹಾಗಾಗಿ, ಈ ವಿಮಾನ ನಿಲ್ದಾಣ ಇನ್ನೂ ಭಾರತೀಯ ರಕ್ಷಣಾ ಇಲಾಖೆಯ ಸುಪರ್ದಿಯಲ್ಲೇ ಇದೆ. ಅದು ನೌಕಾಪಡೆಯ ಐಎನ್‌ಎಸ್ ಹಂಸ ಹೆಲಿಕಾಪ್ಟರ್‌ಗಳ ಏರ್‌ಬೇಸ್ ಕೂಡ ಹೌದು. ಆ ಏರ್‌ಬೇಸಿನ ಒಂದು ಭಾಗವನ್ನು ಭಾರತೀಯ ವಿಮಾನಯಾನ ಪ್ರಾಧಿಕಾರವು (ಎಎಐ) ನಾಗರಿಕ ವಿಮಾನಯಾನಕ್ಕೆ ಬಳಸುತ್ತಿದೆ. ಅಲ್ಲಿನ ಏರ್ ಟ್ರಾಫಿಕ್ ನಿಯಂತ್ರಣ ಇನ್ನೂ ನೌಕಾಪಡೆಯ ಕೈಯಲ್ಲಿದೆ. ಅಲ್ಲಿ 1983ರಲ್ಲಿ ಡೊಮೆಸ್ಟಿಕ್ ಟರ್ಮಿನಲ್ ಮತ್ತು 1996ರಲ್ಲಿ ಇಂಟರ್‌ನ್ಯಾಷನಲ್ ಟರ್ಮಿನಲ್‌ಗಳನ್ನು ನಿರ್ಮಿಸಲಾಗಿದೆ. 2006ರಲ್ಲಿ ನಾಗರಿಕ ವಿಮಾನಯಾನ ಇಲಾಖೆಯು ಅಲ್ಲಿ ನಿಲ್ದಾಣ ವಿಸ್ತರಣೆಗೆ ಹೊರಟಿತಾದರೂ, ಭೂಸ್ವಾಧೀನಕ್ಕೆ ನೌಕಾಪಡೆಯ ಕಡೆಯಿಂದ ಪೂರಕ ಅಭಿಪ್ರಾಯ ವ್ಯಕ್ತ ಆಗದೆ, ಯೋಜನೆ ನನೆಗುದಿಗೆ ಬಿದ್ದಿತ್ತು. ಈ ನಡುವೆ, ಉತ್ತರ ಗೋವಾದ ಮೋಪಾದಲ್ಲಿ ಮನೋಹರ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡ ಬಳಿಕ, ದಾಬೋಲಿಮ್‌ನಲ್ಲಿ ವಿಸ್ತರಣೆಗೆ ಅಡಚಣೆಗಳಿರುವ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಇಲಾಖೆಯು ದಾಬೋಲಿಮ್ ನಿಲ್ದಾಣವನ್ನು ನಾಗರಿಕ ಬಳಕೆಗೆ ಮುಚ್ಚುವ ಯೋಚನೆ ಮಾಡಿತ್ತು. ಆದರೆ ಸಾರ್ವಜನಿಕರಿಂದ ತೀವ್ರ ಪ್ರತಿರೋಧ ಎದುರಾದ ಹಿನ್ನೆಲೆಯಲ್ಲಿ ಆ ತೀರ್ಮಾನವನ್ನು ಕೈಬಿಟ್ಟು, 2010ರಲ್ಲಿ ದಾಬೋಲಿಮ್ ನಿಲ್ದಾಣವನ್ನು ವಿಸ್ತರಿಸುವ, ಮೇಲ್ದರ್ಜೆಗೆ ಏರಿಸುವ, ನವೀಕರಿಸುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಕಡೆಗೆ ನವೀಕೃತ-ವಿಸ್ತರಿತ ದಾಬೋಲಿಮ್ ವಿಮಾನ ನಿಲ್ದಾಣ ಉದ್ಘಾಟನೆಗೊಂಡದ್ದು 2013ರಲ್ಲಿ.

ಈ ವಿಚಾರದಲ್ಲಿ ಈಗ ಮತ್ತೊಮ್ಮೆ ಗದ್ದಲ ಎದ್ದಿದೆ. ಮೋಪಾ ನಿಲ್ದಾಣದ ನಿರ್ವಹಣೆ ಮಾಡುತ್ತಿರುವ ಖಾಸಗಿ ಸಂಸ್ಥೆಯು ಗೋವಾದ ಪ್ರವಾಸೋದ್ಯಮ ಸಾಧ್ಯತೆಗಳು ಮತ್ತು ತನ್ನ ಲಾಭವನ್ನು ಗಮನದಲ್ಲಿ ಇರಿಸಿಕೊಂಡು, ದಕ್ಷಿಣ ಗೋವಾದ ದಾಬೋಲಿಮ್ ನಿಲ್ದಾಣವನ್ನು ಮುಚ್ಚಬೇಕೆಂದು ಮತ್ತು ಪೂರ್ಣಪ್ರಮಾಣದ ನೌಸೇನಾ ನೆಲೆಯಾಗಿ ಅಭಿವೃದ್ಧಿಪಡಿಸಬೇಕೆಂದು ಬಲವಾದ ಲಾಬಿ ಮಾಡುತ್ತಿದೆಯಂತೆ.

ಒಂದು ವೇಳೆ ಈ ಲಾಬಿ ಜಯಪ್ರದವಾದರೆ, ಅಂತರ್‌ರಾಷ್ಟ್ರೀಯ ಪ್ರವಾಸೋದ್ಯಮವೇ ಆದಾಯ ಮೂಲ ಆಗಿರುವ ಗೋವಾದ ದಾಬೋಲಿಮ್‌ಗೆ ದೊಡ್ಡ ಪ್ರಮಾಣದಲ್ಲಿ ಬಂದಿಳಿಯುತ್ತಿರುವ ವಿದೇಶಿ ಪ್ರಯಾಣಿಕರು ಮತ್ತು ದೇಶಿ ಪ್ರಯಾಣಿಕರು (ವಾರ್ಷಿಕ ಅಂದಾಜು ಸುಮಾರು 60 ಲಕ್ಷಕ್ಕೂ ಮಿಕ್ಕಿ ಮಂದಿ) ಉತ್ತರ ಗೋವಾದ ಖಾಸಗಿ ನಿರ್ವಹಣೆಯ ನಿಲ್ದಾಣ ಮೋಪಾದಲ್ಲಿಯೇ ಇಳಿದು ಅಲ್ಲಿಂದ ಮೂರು ತಾಸು ಬಾಡಿಗೆ ಕಾರಿನಲ್ಲಿ ಪ್ರಯಾಣಿಸಿ (ಬಾಡಿಗೆ ಅಂದಾಜು 4,500-5,000 ರೂ.) ದಕ್ಷಿಣ ಗೋವಾದ ಪಾಲೋಲಿಮ್ ತಲುಪಬೇಕಾಗುತ್ತದೆ. ಸ್ಟ್ರಾಟಜಿಕ್ ಆಗಿ, ಗೋವಾದ ಎಲ್ಲ ಪ್ರಮುಖ ಪ್ರವಾಸಿ ತಾಣಗಳಿಗೆ ದಾಬೋಲಿಮ್ ಸಮಾನದೂರದಲ್ಲಿರುವುದರಿಂದ ಬಹುತೇಕ ಗೋವನ್ನರು ದಾಬೋಲಿಮ್ ನಿಲ್ದಾಣ ಮುಚ್ಚುವುದನ್ನು ವಿರೋಧಿಸುತ್ತಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ವಾರ ದಿಲ್ಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿರುವ ಗೋವಾದ ಸಾರಿಗೆ ಸಚಿವ ಮತ್ತು ದಾಬೋಲಿಮ್ ಶಾಸಕ ಮೌವಿನ್ ಗೊಧಿಣೊ ಅವರು ಈ ಎಲ್ಲ ವಿವರಗಳನ್ನು ಬಿಚ್ಚಿಟ್ಟಿದ್ದು, ರಕ್ಷಣಾ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಹೇಳಿದ್ದಾರೆ. ಇದೇ ವೇಳೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಕೂಡ ಹೇಳಿಕೆ ನೀಡಿ, ‘‘ದಾಬೋಲಿಮ್ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಸ್ಥಗಿತಗೊಳ್ಳಲಿದೆ ಎಂಬುದು ಸುಳ್ಳು ಸುದ್ದಿ ಮತ್ತು ತಪ್ಪು ಹಾದಿಗೆಳೆಯುವಂತಹದು’’ ಎಂದು ಸ್ಪಷ್ಟಪಡಿಸಿದ್ದಾರೆ. ಬಹುತೇಕ ಎಲ್ಲ ರಾಜಕೀಯ ಪಕ್ಷಗಳು, ಪ್ರವಾಸೋದ್ಯಮ ವ್ಯವಹಾರಸ್ಥರು ದಾಬೋಲಿಮ್ ವಿಮಾನ ನಿಲ್ದಾಣ ಮುಚ್ಚುಗಡೆಯಾದರೆ, ರಾಜ್ಯದಲ್ಲಿ ಪ್ರವಾಸೋದ್ಯಮವನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡಿರುವ ಶೇ. 65 ಜನರಿಗೆ ಮತ್ತು ಗೋವಾದ ಒಟ್ಟು ಪ್ರವಾಸೋದ್ಯಮ ರಂಗಕ್ಕೇ ಅದು ಮಾರಕ ಹೊಡೆತವಾಗಲಿದೆ ಎಂದು ಒಕ್ಕೊರಲಿನಿಂದ ಹೇಳಿದ್ದಾರೆ. ಇದನ್ನು ಪ್ರತಿಭಟಿಸುವುದಕ್ಕೂ ಅವರು ಸನ್ನದ್ಧರಾಗುತ್ತಿದ್ದಾರೆ.

ನಮಗೇನು ಪಾಠ?

ಗೋವಾದ ಈ ಘಟನೆಯಲ್ಲಿ, ಅದೇ ಪಶ್ಚಿಮ ಕರಾವಳಿಯ ಮುಂದುವರಿಕೆ ಆಗಿರುವ ಕರ್ನಾಟಕ ಕರಾವಳಿಗೂ ಪಾಠ ಇದೆ.

ಮೊದಲನೆಯದಾಗಿ, ದಾಬೋಲಿಮ್ ವಿಮಾನ ನಿಲ್ದಾಣವು ಒಂದು ವೇಳೆ ಸೇನಾನೆಲೆಯಾಗಿ ಉಳಿಯದೆ ಸಂಪೂರ್ಣವಾಗಿ ನಾಗರಿಕ ವಿಮಾನಯಾನಕ್ಕೆ ಸೀಮಿತಗೊಂಡರೆ, ಸಹಜವಾಗಿಯೇ ನೌಸೇನಾ ವಾಯುನೆಲೆಯು ಕಾರವಾರದ ಸೀಬರ್ಡ್ ನೌಕಾನೆಲೆಗೆ ಸ್ಥಳಾಂತರಗೊಳ್ಳಬೇಕಾಗುತ್ತದೆ. ದೇಶದ ಭದ್ರತೆ ಆದ್ಯತೆಯ ಸಂಗತಿಯೇ ಆದರೂ, ಈಗಾಗಲೇ ಕರ್ನಾಟಕ ಕರಾವಳಿಯನ್ನು ಆವರಿಸುತ್ತಿರುವ ಖಾಸಗಿ ಚಟುವಟಿಕೆಗಳ ಜೊತೆಗೆ ಸೇನಾ ಚಟುವಟಿಕೆಗಳೂ ವಿಸ್ತಾರಗೊಳ್ಳತೊಡಗಿದರೆ, ಅದರ ಸಾಧಕ-ಬಾಧಕಗಳನ್ನು, ಕರಾವಳಿ ಕರ್ನಾಟಕದ ಧಾರಣ ಶಕ್ತಿಯನ್ನು ಅಧ್ಯಯನ ನಡೆಸುವ ತುರ್ತು ಇದೆ.

ಎರಡನೆಯದಾಗಿ, ದೇಶದ ಎಲ್ಲೆಡೆ ವಿಮಾನ ನಿಲ್ದಾಣಗಳು ಖಾಸಗೀಕರಣಗೊಳ್ಳುತ್ತಿವೆ. ಈ ಗುತ್ತಿಗೆ ಪಡೆದುಕೊಳ್ಳುವ, ವಿಮಾನ ನಿಲ್ದಾಣಗಳ ಉಸ್ತುವಾರಿ ಹೊರುವ ಪ್ರಭಾವಿ ‘ಆನಿಗಳು’ ಮುಂದಿನ ದಿನಗಳಲ್ಲಿ ಹೇಗೆ ಕಾರ್ಯಾಚರಿಸಬಹುದೆಂಬುದಕ್ಕೆ ಈ ಪ್ರಕರಣ ಒಂದು ಒಳ್ಳೆಯ ನಿದರ್ಶನ. ಈ ಪ್ರಭಾವಿಗಳು ತಮ್ಮ ಲಾಭದ ಮೂಗಿನ ನೇರಕ್ಕೆ ತೀರ್ಮಾನಗಳನ್ನು ತೆಗೆದುಕೊಳ್ಳುವಂತೆ ಪ್ರಭುತ್ವದ ಮೇಲೆ ಒತ್ತಡ ಹೇರತೊಡಗಿದರೆ, ಅದು ದೇಶದ ಸಾರ್ವಜನಿಕ ಹಿತಾಸಕ್ತಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದೆಂಬುದನ್ನು ಅರ್ಥೈಸಿಕೊಳ್ಳಬೇಕಾಗಿದೆ.

ಮೂರನೆಯದಾಗಿ, ಪ್ರಭಾವೀ ಆನಿಗಳು ರಾಜಕೀಯ ಲಾಬಿಗಳಲ್ಲಿ ತೊಡಗಿಕೊಂಡಾಗ, ಅದು ಪ್ರಾದೇಶಿಕ ಅಸ್ಮಿತೆಗೆ ಧಕ್ಕೆ ತರುವಂತಹ ಸ್ಥಿತಿಯನ್ನು ಮುಂದೊಡ್ಡಿದರೆ, ಆಗ ನಾಡಿನ ಜನತೆ ಹೇಗೆ ಪ್ರತಿಕ್ರಿಯಿಸಬಹುದು ಎಂಬುದಕ್ಕೆ ಈ ಗೋವಾದ ಮಾದರಿ ಅನುಸರಣಯೋಗ್ಯ ಮಾದರಿ ಅನ್ನಿಸುತ್ತದೆ. ಬ್ಯಾಂಕಿಂಗ್‌ನ ತೊಟ್ಟಿಲು ಎಂದೆನ್ನಿಸಿಕೊಂಡಿದ್ದ ಕರ್ನಾಟಕ ಕರಾವಳಿಯ ಎಲ್ಲ ಬ್ಯಾಂಕುಗಳೂ ಏಕಾಏಕಿ ಹೇಳಹೆಸರಿಲ್ಲದಂತೆ ಮಾಯವಾದಾಗ ನಮ್ಮ ನಾಗರಿಕ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಪ್ರಭುತ್ವದ ಪರ-ವಿರುದ್ಧ ವಾಗ್ವಾದಗಳ ಅಬ್ಬರದಲ್ಲಿ ನಮ್ಮದೆಂಬ ಯಾವ ಬ್ಯಾಂಕೂ ನಮಗೆ ಉಳಿಯಲಿಲ್ಲ. ಗುಜರಾತ್ ಬ್ಯಾಂಕುಗಳು ಅವನ್ನು ನುಂಗಿಬಿಟ್ಟವು.

ಇಂದು ಕನ್ನಡ ಕರಾವಳಿ ಎಗ್ಗಿಲ್ಲದೆ ‘ಆನಿಪಾಲು’ ಆಗುತ್ತಿದೆ, ಸ್ಥಳೀಯರು ನಮಗೆ ಕೊಡಿರೆಂದು ಕೇಳದ, ವಿಷವೂಡುವ, ಇಲ್ಲಿನ ಪರಿಸರ ಮತ್ತು ಜನಪದಗಳನ್ನು ಹೇಳಹೆಸರಿಲ್ಲದಂತೆ ನಾಶಮಾಡಬಲ್ಲ ಯೋಜನೆಗಳನ್ನು ‘ಡೇಬಲಾಪ್‌ಮೇಂಟ್’ ಹೆಸರಿನಲ್ಲಿ ಇಲ್ಲಿಗೆ ತಂದು ಸುರಿಯಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ, ಇಲ್ಲಿನ ಅಸ್ಮಿತೆಗೆ ಧಕ್ಕೆ ಬಂದಾಗ ಜನ ಹೇಗೆ ರಾಜಕೀಯ, ಪಂಥ, ಪರಾಕ್ರಮಗಳನ್ನೆಲ್ಲ ಮರೆತು ನಾಡಿನ ಹಿತದೃಷ್ಟಿಯಿಂದ ಪ್ರತಿಕ್ರಿಯಿಸಬೇಕು ಎಂಬುದಕ್ಕೆ ಗೋವಾದ ಈ ಮಾದರಿ ನಮಗೆ ಪಾಠ ಆಗಬೇಕು.

Tags

Goa
share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X