Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ಪ್ರತಿದಿನ 2,000 ರೈತರು ಬೇಸಾಯದಿಂದ...

ಪ್ರತಿದಿನ 2,000 ರೈತರು ಬೇಸಾಯದಿಂದ ಹೊರಗೆ

ಮಾಧವ ಐತಾಳ್ಮಾಧವ ಐತಾಳ್31 Oct 2025 10:58 AM IST
share
ಪ್ರತಿದಿನ 2,000 ರೈತರು ಬೇಸಾಯದಿಂದ ಹೊರಗೆ

ಹತ್ತಿ ಸೇರಿದಂತೆ ಯಾವುದೇ ಉತ್ಪನ್ನಕ್ಕೆ ದೇಶ-ವಿದೇಶದಲ್ಲಿ ಬೇಡಿಕೆ ಕಡಿಮೆ ಇರುವಾಗ, ಇಳುವರಿ ಮತ್ತು ಗುಣಮಟ್ಟ ಹೆಚ್ಚಳಕ್ಕೆ ಹೊಲದಿಂದ ಗಿರಣಿವರೆಗಿನ ಪೂರೈಕೆ ಸರಪಳಿಯನ್ನು ಸಬಲಗೊಳಿಸಬೇಕಾಗುತ್ತದೆ. ಎಂಎಸ್‌ಪಿಯಲ್ಲಿ ಖರೀದಿ, ಒಳಸುರಿಗಳ ಬೆಲೆ ಇಳಿಕೆ ಮತ್ತು ಸ್ವಾಭಾವಿಕ ಅವಘಡಗಳ ನಿರ್ವಹಣೆಗೆ ದೀರ್ಘಕಾಲೀನ ಕಾರ್ಯನೀತಿ ಅಗತ್ಯವಿದೆ. ಇವೆಲ್ಲಕ್ಕೂ ಬಂಡವಾಳ ಹೂಡಬೇಕಾಗುತ್ತದೆ. ಘೋಷಣೆಗಳಿಂದ ಕೃಷಿ ಸಮಸ್ಯೆಯನ್ನು ಪರಿಹರಿಸಲು ಆಗುವುದಿಲ್ಲ. ಹತ್ತಿ ಆಮದು ಸುಂಕ ಮತ್ತೆ ಜಾರಿಯಾಗುವವರೆಗೆ ಕೃಷಿಕರಿಗೆ ರಕ್ಷಣಾತ್ಮಕ ಸಬ್ಸಿಡಿ ನೀಡಬೇಕು.

ಕರ್ನಾಟಕದ ರಾಜ್ಯ ಪಕ್ಷಿ ನೀಲಕಂಠ(ಇಂಡಿಯನ್ ರೋಲರ್, ಕೊರಾಸಿಯಸ್ ಬೆಂಗಾಲೆನ್ಸಿಸ್)ನ ವೈಶಿಷ್ಟ್ಯವೇನೆಂದರೆ, ಅದು ಆಂಧ್ರಪ್ರದೇಶ, ಬಿಹಾರ ಮತ್ತು ಒಡಿಶಾದ ರಾಜ್ಯ ಪಕ್ಷಿಯೂ ಹೌದು. ಒಡಿಶಾದಲ್ಲಿ ನೀಲಕಂಠನನ್ನು ತಿಹಾ ಎಂದು ಕರೆಯುತ್ತಾರೆ. ಬೇಡಿದ್ದನ್ನು ನೀಡುತ್ತಾನೆ ಎಂದು ರೈತರು ನಂಬಿರುವುದರಿಂದ, ದಸರಾ ಹಬ್ಬದಂದು ನೀಲಕಂಠನನ್ನು ನೋಡುವ ಸಂಪ್ರದಾಯವಿದೆ. ಆದರೆ, ಈ ವರ್ಷ ಮತುಪಲಿ ಗ್ರಾಮದ ರೈತ ಪಿತಬಾಷಾ, ಹಕ್ಕಿಯನ್ನು ನೋಡಲು ಹೋಗಲಿಲ್ಲ. ಏಕೆ ಎಂಬ ಪ್ರಶ್ನೆಗೆ ‘‘ನಾನು ಬೇಡಿಕೊಳ್ಳುವುದನ್ನು ನಿಲ್ಲಿಸಿದ್ದೇನೆ’’ ಎಂಬ ಪ್ರತಿಕ್ರಿಯೆ ಬಂದಿತು. 2025ರ ಸೆಪ್ಟಂಬರ್‌ನಲ್ಲಿ ಸುರಿದ ನಿರಂತರ ಮಳೆಗೆ ಅವರ ಒಂದು ಹೆಕ್ಟೇರ್ ಭೂಮಿಯಲ್ಲಿನ ಭತ್ತ ಸಂಪೂರ್ಣ ನಾಶವಾಯಿತು. ಚರಿತ್ರೆಯಲ್ಲಿ ಪದವಿ ಗಳಿಸಿದ ಬಳಿಕ ಗ್ರಾಮಕ್ಕೆ ವಾಪಸಾದ ಅವರು ಉದ್ಯೋಗಕ್ಕೆ ಸೇರು ಎಂಬ ತಂದೆಯ ಮಾತು ತಳ್ಳಿ ಹಾಕಿ, ಕೃಷಿಯನ್ನು ನೆಚ್ಚಿಕೊಂಡರು. ‘ಮನುಷ್ಯರ ಚರಿತ್ರೆ ಎನ್ನುವುದು ಭೂಮಿ ಮತ್ತು ಅನ್ನ ಬೆಳೆಯುವ ಜನರಿಗೆ ಸಂಬಂಧಿಸಿದೆ’ ಎಂಬುದು ಅವರ ನಂಬಿಕೆಯಾಗಿತ್ತು. ಆದರೆ, ಕಳೆದ 10 ವರ್ಷದಲ್ಲಿ 8 ಬಾರಿ ಬೆಳೆ ನಷ್ಟವಾಗಿದೆ; ಈಗ ಕೃಷಿಯನ್ನೇ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ; ಮುಂದೇನು ಮಾಡುವುದು ಎನ್ನುವ ಬಗ್ಗೆ ಅವರಿಗೆ ಸ್ಪಷ್ಟತೆ ಇಲ್ಲ. ದೇಶದಲ್ಲಿ ಪ್ರತಿದಿನ 2,000 ರೈತರು ಕೃಷಿಯನ್ನು ತೊರೆಯುತ್ತಿದ್ದು, ಅವರಲ್ಲಿ ಪಿತಬಾಷಾ ಕೂಡ ಒಬ್ಬರು.

ಕೃಷಿಯಲ್ಲಿ ಸಾರ್ವಜನಿಕ ಹೂಡಿಕೆ ಕಡಿಮೆಯಾಗುತ್ತಿದೆ, ಹವಾಮಾನ ಬದಲಾವಣೆಯ ಕರಿ ನೆರಳು ಬಿದ್ದಿದೆ; ಋತುಮಾನ ಎನ್ನುವುದೇ ಇಲ್ಲವಾಗಿದೆ. ಇದೇ ಹೊತ್ತಿನಲ್ಲಿ ಅಂತರ್‌ರಾಷ್ಟ್ರೀಯ ಒಪ್ಪಂದಗಳಿಂದಾಗಿ ರಫ್ತು-ಆಮದು ನೀತಿಯಲ್ಲಿ ಬದಲಾವಣೆ, ಉದ್ಯಮದ ಒತ್ತಡ ಹಾಗೂ ಸರಕಾರದ ಅಯೋಮಯ ನೀತಿಗಳಿಂದ ಕೃಷಿ ಕ್ಷೇತ್ರ ಹೈರಾಣಾಗಿದೆ. ಸೆಪ್ಟಂಬರ್ 2025ರಲ್ಲಿ ಸರಕಾರ ಹತ್ತಿ ಮೇಲಿನ ಆಮದು ಸುಂಕ ರದ್ದುಗೊಳಿಸಿದ್ದು ಇಂಥ ನೀತಿಗಳಲ್ಲಿ ಒಂದು. ಇದರಿಂದ ಬಸವಳಿದಿರುವ ರೈತರು ಕೃಷಿಯನ್ನೇ ತೊರೆಯುತ್ತಿದ್ದಾರೆ. ಸರಕಾರ, ಉದ್ಯಮ ಇಲ್ಲವೇ ಅಧಿಕಾರಶಾಹಿಗೆ ಇದರ ದೂರಗಾಮಿ ಪರಿಣಾಮಗಳ ಅರಿವು ಇಲ್ಲ.

ಆಮದು ಹತ್ತಿ ಮೇಲಿನ ಸುಂಕ ಮನ್ನಾ

ಸೆಪ್ಟಂಬರ್ 2025ರಲ್ಲಿ ಕೇಂದ್ರ ಸರಕಾರ ಹತ್ತಿ ಮೇಲಿನ ಶೇ.11 ಆಮದು ಸುಂಕವನ್ನು ರದ್ದುಗೊಳಿಸಿತು. ರದ್ದತಿಯು ಡಿಸೆಂಬರ್ 31, 2025ರವರೆಗೆ ಇರಲಿದೆ. ವಸ್ತ್ರೋದ್ಯಮದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಣ್ಣು ಬಿದ್ದಿದೆ. ಇದರಿಂದ ರಫ್ತು ಕುಸಿದು, ದೇಶದ 2ನೇ ಅತಿ ದೊಡ್ಡ ಉದ್ಯೋಗದಾತನಾಗಿರುವ ವಸ್ತ್ರೋದ್ಯಮದಲ್ಲಿ ಮಹಿಳಾ ಕಾರ್ಮಿಕರನ್ನು ವಜಾಗೊಳಿಸಲಾಗುತ್ತಿದೆ. ಸುಂಕ ಹೆಚ್ಚಳದಿಂದ ಗ್ರಾಹಕರ ಮೇಲೆಯೂ ಹೊರೆ ಬೀಳುತ್ತಿದೆ. ಜಾಗತಿಕ ರಾಜಕೀಯ-ಆರ್ಥಿಕ ಪಲ್ಲಟಗಳು ಮಾತ್ರವಲ್ಲದೆ, ದೇಶಿ ಹತ್ತಿ ಉದ್ಯಮದಲ್ಲಿನ ರಾಚನಿಕ ದೋಷಗಳು ಹಾಗೂ ಹತ್ತಿ ಸಂಶೋಧನೆ-ಅಭಿವೃದ್ಧಿಯಲ್ಲಿನ ಲೋಪಗಳ ಹಿನ್ನೆಲೆಯಲ್ಲಿ ಇದನ್ನು ಪರಿಶೀಲಿಸಬೇಕಿದೆ.

ಸ್ವಾತಂತ್ರ್ಯಾನಂತರ ಹತ್ತಿ ಬೆಳೆಯುವ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರಿದವು. ತೀವ್ರ ಹತ್ತಿ ಉತ್ಪಾದನೆ ಕಾರ್ಯಕ್ರಮ ಮತ್ತು 1970ರಲ್ಲಿ ಹೈಬ್ರಿಡ್ ತಳಿಗಳನ್ನು ಪರಿಚಯಿಸಲಾಯಿತು. ಹತ್ತಿ ತಂತ್ರಜ್ಞಾನ ಮಿಷನ್(1999-2000ದಿಂದ 2013-14)ನಿಂದ ಇಳುವರಿ ಮತ್ತು ಗುಣಮಟ್ಟ ಎರಡೂ ಹೆಚ್ಚಿದವು. 2002ರಲ್ಲಿ ಪಶ್ಚಿಮ ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಮತ್ತು 2006ರಲ್ಲಿ ಉತ್ತರದ ರಾಜ್ಯಗಳಲ್ಲಿ ಬಿಟಿ ಹತ್ತಿ(ಬೋಲ್‌ಗಾರ್ಡ್ 2)ಯನ್ನು ಪರಿಚಯಿಸಲಾಯಿತು. ಇದರಿಂದ ಹತ್ತಿ ಉತ್ಪಾದನೆ ಹೆಚ್ಚಿತು. ದೇಶ ಈ ಮೊದಲು ಬಂಗಾಳದ ದೇಇಇ ಹಾಗೂ ಗಿಡ್ಡ ಎಳೆ ಹತ್ತಿಯನ್ನು ರಫ್ತು ಮಾಡುತ್ತಿತ್ತು. ಆನಂತರ ಮಧ್ಯಮ ಉದ್ದದ ಹಾಗೂ ಉದ್ದ ಎಳೆಯ ಹತ್ತಿಯ ರಫ್ತು ಆರಂಭಗೊಂಡಿತು. ಉತ್ಪಾದನೆ ಹೆಚ್ಚಳದಿಂದ ಆಮದು ಕಡಿಮೆಯಾಗಿ, ಹತ್ತಿ ಬಿಡಿಸುವ ಸ್ಥಳೀಯ ಗಿರಣಿಗಳು ಹೆಚ್ಚಿದವು; ಗುಜರಾತಿನ ಸೌರಾಷ್ಟ್ರದ ಎಣ್ಣೆ ಗಿರಣಿಗಳನ್ನು ಹತ್ತಿ ಗಿರಣಿಗಳಾಗಿ ಹಾಗೂ ಹತ್ತಿ ಬೀಜದಿಂದ ಎಣ್ಣೆ ತಯಾರಿಸುವ ಗಿರಣಿಗಳಾಗಿ ಪರಿವರ್ತಿಸಲಾಯಿತು.

ದೇಶಿ ಹತ್ತಿ ಪೂರೈಕೆ ಸರಪಳಿಯು ರೈತರಿಂದ ಆರಂಭವಾಗಿ ಗಿರಣಿಗಳು, ವಸ್ತ್ರೋದ್ಯಮದ ಮೂಲಕ ಜಾಗತಿಕ ಬ್ರಾಂಡ್‌ಗಳನ್ನು ತಲುಪುತ್ತದೆ. ಚೀನಾ, ಭಾರತ ಮತ್ತು ಅಮೆರಿಕ ಹತ್ತಿ ಬೆಳೆಯುವ ಪ್ರಮುಖ ದೇಶಗಳು; ಇತರ ಉತ್ಪಾದಕರೆಂದರೆ ಬ್ರೆಝಿಲ್, ಪಾಕಿಸ್ತಾನ, ತುರ್ಕಿಯ, ಆಸ್ಟ್ರೇಲಿಯ, ಉಜ್ಬೆಕಿಸ್ತಾನ್ ಮತ್ತು ಪಶ್ಚಿಮ ಆಫ್ರಿಕಾ. ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಒಪ್ಪಂದದ ಬಳಿಕ ಜಾಗತಿಕ ಮಾರುಕಟ್ಟೆಯೊಂದಿಗೆ ದೇಶಿ ಮಾರುಕಟ್ಟೆ ಏಕೀಕೃತಗೊಂಡಿದ್ದು, ದೇಶಿ ಹತ್ತಿ ಬೆಲೆಯು ಜಾಗತಿಕ ಸರಕು ಸೂಚ್ಯಂಕದಿಂದ ಪ್ರಭಾವಿತವಾಗುತ್ತಿದೆ. ಜಾಗತಿಕ ಉತ್ಪನ್ನದಲ್ಲಿ ದೇಶದ ಪಾಲು ಶೇ.37. ಮಹಾರಾಷ್ಟ್ರ, ಗುಜರಾತ್ ಮತ್ತು ತೆಲಂಗಾಣ ಶೇ.70 ಹತ್ತಿ ಕೃಷಿ ಕ್ಷೇತ್ರವನ್ನು ಹೊಂದಿದೆ; ಬೆಳೆ ಪ್ರದೇಶ ಹೆಚ್ಚಿದ್ದರೂ, ಇಳುವರಿ ತೀರಾ ಕಡಿಮೆ ಇದೆ (2000-01ರಲ್ಲಿ ಹೆಕ್ಟೇರಿಗೆ 190 ಕೆ.ಜಿ.). ಕರ್ನಾಟಕದಲ್ಲಿ ಈ ಹಂಗಾಮಿನಲ್ಲಿ 6.11 ಲಕ್ಷ ಹೆಕ್ಟೇರಿನಲ್ಲಿ ಬಿತ್ತನೆಯಾಗಿದೆ; ರಾಜ್ಯದಲ್ಲಿ ಸರಾಸರಿ ಇಳುವರಿ ಹೆಕ್ಟೇರಿಗೆ 274 ಕೆ.ಜಿ. ನಾರು. ಇದು ರಾಷ್ಟ್ರೀಯ ಸರಾಸರಿಯ ಶೇ.85. ದೇಶದಲ್ಲಿ 1960-61ರಲ್ಲಿ 76 ಲಕ್ಷ ಹೆಕ್ಟೇರಿನಷ್ಟಿದ್ದ ಹತ್ತಿ ಕೃಷಿ ಕ್ಷೇತ್ರವು 2023-24ರಲ್ಲಿ 127 ಲಕ್ಷ ಹೆಕ್ಟೇರಿಗೆ ಹೆಚ್ಚಿದೆ. ಬಿಟಿ, ಬಿಟಿ ಅಲ್ಲದ ಹೈಬ್ರಿಡ್ ಹಾಗೂ ದೇಶಿ ತಳಿಗಳು ಬಳಕೆಯಲ್ಲಿವೆ. ಬಿಟಿ ಪಾಲು ಅಧಿಕ. ಬಿಟಿ ಹತ್ತಿ ಪರಿಚಯಿಸಿದ ಬಳಿಕ ಕೃಷಿ ಕ್ಷೇತ್ರ 77 ಲಕ್ಷ ಹೆಕ್ಟೇರಿನಿಂದ 127 ಲಕ್ಷ ಹೆಕ್ಟೇರಿಗೆ ಮತ್ತು ಉತ್ಪಾದನೆ 86 ಲಕ್ಷದಿಂದ 325 ಲಕ್ಷ ಬೇಲ್‌ಗೆ ಹೆಚ್ಚಿತು(ಒಂದು ಬೇಲ್=170 ಕೆ.ಜಿ.). ಇದರಿಂದ ಕೃಷಿಕರಿಗೆ ಏನಾದರೂ ಲಾಭವಾಯಿತೇ? ಇಲ್ಲ. ಹತ್ತಿ ಕೃಷಿ ದುಬಾರಿ ಮತ್ತು ನಷ್ಟದ ಸಾಧ್ಯತೆ ಹೆಚ್ಚು. ಮೊದಲಿಗೆ, ಹತ್ತಿ ಕೃಷಿ ಕ್ಷೇತ್ರದ ಶೇ.70ರಷ್ಟು ಮಳೆಯಾಧರಿತ. 2ನೆಯದಾಗಿ, ಕೀಟ ಬಾಧೆ ಅಧಿಕ; ಇದರಿಂದ ಕೀಟನಾಶಕಗಳಿಗೆ ಹಣ ವೆಚ್ಚ ಮಾಡಬೇಕಾಗುತ್ತದೆ. ಮೂರನೆಯದಾಗಿ, ಹತ್ತಿ ಕೃಷಿಗೆ ಹೆಚ್ಚು ಮಾನವ ಸಂಪನ್ಮೂಲ ಅಗತ್ಯವಿದೆ. ಇದರಿಂದ ವೆಚ್ಚ ಹೆಚ್ಚುತ್ತದೆ.

ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ(ಸಿಎಸಿಪಿ)ದ ದತ್ತಾಂಶದ ಪ್ರಕಾರ, ಅಕ್ಟೋಬರ್ 2020 ಮತ್ತು ಜನವರಿ 2025ರ ಅವಧಿಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಹತ್ತಿ ಬೆಲೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಗಿಂತ ಕಡಿಮೆ ಇತ್ತು. ಒಟ್ಟು ಹತ್ತಿಯಲ್ಲಿ 1/3ರಷ್ಟು ಬೆಳೆಯುವ ಮಹಾರಾಷ್ಟ್ರದಲ್ಲಿ 2000-01ರಲ್ಲಿ ಹೆಕ್ಟೇರ್ ಒಂದಕ್ಕೆ 14,234ರೂ. ಇದ್ದ ವೆಚ್ಚವು 2021-22ರಲ್ಲಿ 94,710 ರೂ. ಹಾಗೂ ತಮಿಳುನಾಡಿನಲ್ಲಿ 28,149 ರೂ.ಗಳಿಂದ 1,24,993 ರೂ.ಗೆ ಹೆಚ್ಚಿದೆ. ಆದರೆ, ಉತ್ಪನ್ನದ ಮೌಲ್ಯ(ವಿಒಪಿ, ವ್ಯಾಲ್ಯೂ ಆಫ್ ಪ್ರೊಡಕ್ಷನ್; ಉತ್ಪಾದಿಸುವ ಸರಕು ಮತ್ತು ಸೇವೆಗಳ ಆರ್ಥಿಕ ಮೌಲ್ಯ) ವೆಚ್ಚಕ್ಕೆ ಅನುಗುಣವಾಗಿ ಹೆಚ್ಚಿಲ್ಲ. ಮಹಾರಾಷ್ಟ್ರದಲ್ಲಿ ವಿಒಪಿ 12,418 ರೂ.ನಿಂದ 86,207 ರೂ.ಗೆ ಹೆಚ್ಚಳಗೊಂಡಿದೆ; ಇದರಿಂದ, 130 ಲಕ್ಷ ಹೆಕ್ಟೇರಿನಲ್ಲಿ ಹತ್ತಿ ಬೆಳೆಯುತ್ತಿರುವ 58 ಲಕ್ಷ ರೈತರಿಗೆ ನಷ್ಟವಾಗುತ್ತಿದೆ. ನೀರಾವರಿಯಲ್ಲಿ ಹತ್ತಿ ಬೆಳೆಯುವ ತಮಿಳುನಾಡಿನಲ್ಲಿ ಕಳೆದ 15 ವರ್ಷದಲ್ಲಿ 14ರಲ್ಲಿ ರೈತರಿಗೆ ನಷ್ಟವಾಗಿದೆ. ಇದು ಬಹುತೇಕ ರಾಜ್ಯಗಳಲ್ಲಿನ ಹತ್ತಿ ಬೆಳೆಗಾರರ ಕತೆ. ನಷ್ಟಕ್ಕೆ ಪ್ರಮುಖ ಕಾರಣ-ಎಂಎಸ್‌ಪಿ ಅಥವಾ ಅದಕ್ಕಿಂತ ಅಧಿಕ ಮಾರುಕಟ್ಟೆ ಬೆಲೆ ಸಿಗದೆ ಇರುವುದು. ಆಮದು ಸುಂಕ ರದ್ದುಗೊಳಿಸಿರುವುದರಿಂದ, ವಿದೇಶಿ ಸರಕು ಮಾರುಕಟ್ಟೆಯಲ್ಲಿ ತುಂಬಿಕೊಂಡು, ಬೆಲೆ ಇನ್ನಷ್ಟು ಕಡಿಮೆಯಾಗಿ ರೈತರ ಆದಾಯ ಕುಸಿಯಲಿದೆ; ನಷ್ಟ ಹೆಚ್ಚಲಿದೆ.

ವಸ್ತ್ರೋದ್ಯಮವು ಆಮದು ಸುಂಕ ರದ್ದು, ರಫ್ತಿನ ಮೇಲೆ ನಿರ್ಬಂಧ ಮತ್ತು ಫ್ಯೂಚರ್ಸ್ ವಹಿವಾಟಿನಿಂದ ಹತ್ತಿಯನ್ನು ತೆಗೆದುಹಾಕಿ, ನಾರಿನ ಬೆಲೆ ಕಡಿಮೆ ಮಾಡಬೇಕೆಂದು ಒತ್ತಡ ಹೇರಿದೆ. ಈ ಬೇಡಿಕೆ ಸಮರ್ಪಕವೇ? ಹತ್ತಿಯ ಬೆಲೆ ಹಲವು ವರ್ಷಗಳಿಂದ ಏರಿಳಿತವಿಲ್ಲದೆ ಸ್ಥಿರವಾಗಿದ್ದಾಗ, ಉದ್ಯಮಿಗಳು ರೈತರ ಪರ ಧ್ವನಿ ಎತ್ತಲಿಲ್ಲ. ಆದರೆ, ಕೋವಿಡ್ ಬಳಿಕ ಬೇಡಿಕೆ ಹೆಚ್ಚಿ, ಬೆಲೆ ಸ್ವಲ್ಪ ಹೆಚ್ಚಳಗೊಂಡ ತಕ್ಷಣ ಬೆಲೆ ನಿಯಂತ್ರಿಸಬೇಕೆಂದು ಕೂಗಲಾರಂಭಿಸಿದರು. ರಫ್ತಿನ ಮೇಲೆ ನಿರ್ಬಂಧ ಹೇರುವುದರಿಂದ, ರೈತರು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅವಕಾಶ ತಪ್ಪುತ್ತದೆ ಮತ್ತು ಆಮದು ಸುಂಕ ರದ್ದುಗೊಳಿಸಿದರೆ ದೇಶಿ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುತ್ತದೆ; ಈ ಎರಡರಿಂದಲೂ ಲಾಭವಾಗುವುದು ಉದ್ಯಮಕ್ಕೆ. ಆದರೆ, ಒಂದುವೇಳೆ ದೇಶಿ ಉತ್ಪಾದನೆ ಕುಸಿದು ಉದ್ಯಮಗಳು ಜಾಗತಿಕ ಮಾರುಕಟ್ಟೆಯನ್ನು ಅವಲಂಬಿಸಬೇಕಾಗಿ ಬಂದರೆ, ಭವಿಷ್ಯದಲ್ಲಿ ಅವು ಕೂಡ ಅನಿಶ್ಚಿತತೆಗೆ ಸಿಲುಕುತ್ತವೆ. ಇದು ಉದ್ಯಮಕ್ಕೆ ಗೊತ್ತಿಲ್ಲವೆಂದಲ್ಲ.

ಇಳುವರಿ ಸಾರ್ವತ್ರಿಕ ಕುಸಿತ

ಸುಂಕ ಹೇರಿದ್ದಾಗ ಕೂಡ ಹತ್ತಿಯ ಆಮದು ಕಡಿಮೆಯಾಗಿರಲಿಲ್ಲ. 2024-25ರಲ್ಲಿ 5.25 ಲಕ್ಷ ಟನ್ ಹತ್ತಿ ಆಮದಾಗಿದೆ(2023-24ಕ್ಕಿಂತ ಶೇ.77ರಷ್ಟು ಹೆಚ್ಚಳ). ಭಾರತೀಯ ಹತ್ತಿ ನಿಗಮ(ಸಿಸಿಐ)ವು ಮಾರುಕಟ್ಟೆ ದರವು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಯಾದಾಗ, ಹತ್ತಿಯನ್ನು ಖರೀದಿಸುತ್ತದೆ; ಈ ವರ್ಷ ಅದು ಉತ್ಪಾದನೆಯಾದ ಹತ್ತಿಯಲ್ಲಿ ಶೇ.34ರಷ್ಟನ್ನು ಖರೀದಿಸಿದೆ (ಜೂನ್ 2025ರವರೆಗೆ); ಇದು 7 ವರ್ಷದಲ್ಲಿ ಅತಿ ಹೆಚ್ಚು. ಅಂದಾಜಿನ ಪ್ರಕಾರ, 2024-25ರಲ್ಲಿ ಹತ್ತಿ ಎಕರೆವಾರು ಇಳುವರಿ ಶೇ.8.7ರಷ್ಟು ಕಡಿಮೆಯಾಗಿದೆ. 1997-2003ರಲ್ಲಿ ಹೆಕ್ಟೇರಿಗೆ ನಾರು ಉತ್ಪಾದನೆ 207 ಕೆ.ಜಿ. ಇತ್ತು. 2012-17ರಲ್ಲಿ 481 ಕೆ.ಜಿ.ಗೆ ಹೆಚ್ಚಳಗೊಂಡಿತು. ಈಗ 437 ಕೆ.ಜಿ.ಗೆ ಕುಸಿದಿದೆ. ಆದರೆ, ಜಾಗತಿಕ ಅನುಪಾತ 833 ಕೆ.ಜಿ.; ಬ್ರೆಝಿಲ್ 1,903 ಕೆ.ಜಿ. ಮತ್ತು ಚೀನಾ 2,257 ಕೆ.ಜಿ. ಇದೆ. ಹತ್ತಿ ಕೃಷಿಯಿಂದ ಬೇಸತ್ತು ಉತ್ತರ ಭಾರತದ ಕೃಷಿಕರು ಭತ್ತ ಹಾಗೂ ಗುಜರಾತಿನ ರೈತರು ಸೋಯಾ ಮತ್ತು ಕಡಲೆಕಾಯಿ ಬೆಳೆಗೆ ಸ್ಥಿತ್ಯಂತರಗೊಂಡಿದ್ದಾರೆ.

ಒಟ್ಟು ಹತ್ತಿ ಕೃಷಿ ಕ್ಷೇತ್ರದಲ್ಲಿ ಬಿಟಿ ಹೈಬ್ರಿಡ್‌ಗಳ ಪ್ರಮಾಣ ಶೇ.95ಕ್ಕಿಂತ ಹೆಚ್ಚು ಇದೆ. 20 ವರ್ಷ ಹಿಂದೆ ಬಂದ ಬಿಟಿ ತಳಿಗಳಿಗೆ ಕೀಟಗಳು ಪ್ರತಿರೋಧ ಬೆಳೆಸಿಕೊಂಡಿರುವುದರಿಂದ, ಬಹುತೇಕ ನಿರುಪಯುಕ್ತವಾಗಿವೆ. ಆಸ್ಟ್ರೇಲಿಯ ಮತ್ತು ಬ್ರೆಝಿಲ್ ಬೋಲ್‌ಗಾರ್ಡ್ 3 ಹಾಗೂ ಅತಿ ದೊಡ್ಡ ಹತ್ತಿ ಉತ್ಪಾದಕ ಚೀನಾ ಸಿಆರ್‌ಐಎಸ್‌ಪಿಆರ್ ಆಧಾರಿತ ವಂಶವಾಹಿ ಎಡಿಟಿಂಗ್ ತಂತ್ರಜ್ಞಾನ ಬಳಸುತ್ತಿದೆ. ಇದರಿಂದ ಇಳುವರಿ ಹೆಚ್ಚಿದೆ. ತದ್ವಿರುದ್ಧವಾಗಿ, ನಮ್ಮಲ್ಲಿ ಉತ್ಪಾದನೆ ಕುಸಿದಿದೆ. ವಿಭಿನ್ನ ಹವಾಮಾನ-ಕೃಷಿ ಪರಿಸರಕ್ಕೆ ಹೊಂದಿಕೊಳ್ಳಬಲ್ಲ, ಅಧಿಕ ನಾರು ಇಳುವರಿ ನೀಡುವ ಮತ್ತು ಸುಸ್ಥಿರ ಸಂಪನ್ಮೂಲ ನಿರ್ವಹಣೆ ಮಾಡಬಲ್ಲ ಉನ್ನತ ಬೀಜ ತಂತ್ರಜ್ಞಾನ ಅಗತ್ಯವಿದೆ. ಆದರೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸಂಶೋಧನೆ-ಅಭಿವೃದ್ಧಿಗೆ ಅತಿ ಕಡಿಮೆ ಹಣ ವೆಚ್ಚ ಮಾಡುತ್ತಿರುವ ದೇಶ ನಮ್ಮದು. ಕೃಷಿ ಸಂಸದೀಯ ಸ್ಥಾಯಿ ಸಮಿತಿಯ ಅನುದಾನ ಬೇಡಿಕೆ ವರದಿ ಪ್ರಕಾರ, ಕೇಂದ್ರಿಯ ಯೋಜನಾ ವೆಚ್ಚದಲ್ಲಿ 2012-22ರಲ್ಲಿ ಶೇ.3.53ರಷ್ಟಿದ್ದ ಅನುದಾನ, ಶೇ.3.14(2022-23), ಶೇ.2.57(2023-24) ಹಾಗೂ ಶೇ.2.51(20 24-25)ಕ್ಕೆ ಕುಸಿದಿದೆ.

ರಾಚನಿಕ ದೋಷ

ಕೃಷಿ ಆರ್ಥಿಕತೆಯಲ್ಲಿನ ರಾಚನಿಕ ಅಸಮಾನತೆಗೆ ಹತ್ತಿ ಕ್ಷೇತ್ರ ಒಂದು ಉದಾಹರಣೆ. ಸರಕಾರಗಳು ಉದ್ಯಮಕ್ಕೆ ಅಗ್ಗದ ದರದಲ್ಲಿ ಕಚ್ಚಾವಸ್ತು ಖಾತ್ರಿಗೊಳಿಸುತ್ತಿವೆಯೇ ಹೊರತು ರೈತರಿಗೆ ವೈಜ್ಞಾನಿಕ ದರ ನೀಡುವುದು ಅವುಗಳ ಆದ್ಯತೆಯಾಗಿಲ್ಲ. ಕಳೆದ 5 ವರ್ಷದಲ್ಲಿ ಹತ್ತಿ ಕೃಷಿ ಕ್ಷೇತ್ರ 22 ಲಕ್ಷ ಹೆಕ್ಟೇರ್ ಕಡಿಮೆಯಾಗಿದೆ; ಅತಿ ದೊಡ್ಡ ವಸ್ತ್ರೋದ್ಯಮಗಳಿರುವ ತಮಿಳುನಾಡಿನಲ್ಲಿ ಹತ್ತಿ ಕೃಷಿ ಕ್ಷೇತ್ರ 1960-61ರಲ್ಲಿದ್ದ 3.96 ಲಕ್ಷ ಹೆಕ್ಟೇರಿನಿಂದ 2023-24ರಲ್ಲಿ 1.30 ಲಕ್ಷ ಹೆಕ್ಟೇರಿಗೆ ಕುಸಿದಿದೆ. ‘ರೈತರ ಆದಾಯ ದುಪ್ಪಟ್ಟು’ ಇತ್ಯಾದಿ ಪೊಳ್ಳು ಘೋಷಣೆಗಳು ಮತ್ತು ಕಾಗದದ ಮೇಲೆ ಮಾತ್ರ ಇರುವ ಯೋಜನೆಗಳು ಎಷ್ಟು ಫಲಪ್ರದ ಎಂಬ ಮಾಹಿತಿ-ದತ್ತಾಂಶ ಸರಕಾರದ ಬಳಿ ಇಲ್ಲ; ಕೇಳಿದರೆ, ‘ಡೇಟಾ ಇಲ್ಲ’ ಎಂಬ ಉತ್ತರ ಬರುತ್ತದೆ. ಕೇಂದ್ರ ಸರಕಾರವು 11 ಇಲಾಖೆಗಳ 36 ಕಾರ್ಯಕ್ರಮಗಳು, ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ, ಪಿಎಂ ಫಸಲ್ ವಿಮಾ ಯೋಜನೆ ಹಾಗೂ ರಾಜ್ಯಗಳ ಜಿಲ್ಲಾ ಧನಧಾನ್ಯ ಸಮಿತಿಗಳ ಕಾರ್ಯಕ್ರಮಗಳನ್ನು ವಿಲೀನಗೊಳಿಸಿ, ಪ್ರಧಾನಮಂತ್ರಿಯವರ ಧನ ಧಾನ್ಯ ಕೃಷಿ ಯೋಜನೆ(ಪಿಎಂಡಿಡಿಕೆವೈ) ಎಂಬ ನೂತನ ಯೋಜನೆಗೆ ಅಕ್ಟೋಬರ್ 2025ರಲ್ಲಿ ಚಾಲನೆ ನೀಡಿದೆ; 6 ವರ್ಷದಲ್ಲಿ 24,000 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಯೋಜನೆಯನ್ನು 100 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುತ್ತದೆ. ಉತ್ಪಾದಕತೆ ಹೆಚ್ಚಳ, ಕೃಷಿ ಮತ್ತು ಸಂಬಂಧಿಸಿದ ಕ್ಷೇತ್ರಗಳಲ್ಲಿ ಮೌಲ್ಯವರ್ಧನೆ, ಸ್ಥಳೀಯ ಜೀವನಾಧಾರ ಸೃಷ್ಟಿ ಮೂಲಕ ದೇಶಿ ಉತ್ಪಾದನೆ ಹೆಚ್ಚಳ ಮತ್ತು ಸ್ವಾವಲಂಬನೆ ಸಾಧಿಸಬೇಕೆಂಬ ಯೋಜನೆಯ ಉದ್ದೇಶವೇನೋ ಘನವಾಗಿದೆ. ಆದರೆ, ಇದು ರೈತರಿಗೆ ಪ್ರಯೋಜನಕರವೇ?

ರೈತರು ಕೃಷಿಯನ್ನು ತೊರೆಯುತ್ತಿರುವುದಲ್ಲದೆ, ಸಾಲ ಮತ್ತಿತರ ಕಾರಣಗಳಿಂದ ಆತ್ಮಹತ್ಯೆಗಳು ಕೂಡ ಹೆಚ್ಚುತ್ತಿವೆ. 2023ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ(ಎನ್‌ಸಿಆರ್‌ಬಿ) ದತ್ತಾಂಶದ ಪ್ರಕಾರ, ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ 10,786 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ; ಇವರಲ್ಲಿ 4,690 ರೈತರು-ಸಾಗುವಳಿದಾರರು (ಅಂದರೆ, ದಿನಕ್ಕೆ ಅಂದಾಜು 13) ಮತ್ತು 6,096 ಕೃಷಿ ಕಾರ್ಮಿಕರು ಇದ್ದಾರೆ. 2023ರಲ್ಲಿ ನಡೆದ ಒಟ್ಟು ಆತ್ಮಹತ್ಯೆಗಳಲ್ಲಿ ಕೃಷಿ ವಲಯದ ಪಾಲು ಶೇ. 6.3. ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಅತಿ ಹೆಚ್ಚು 2,518 (ಶೇ.38.5) ಮತ್ತು ಕರ್ನಾಟಕ ಶೇ.22.5 ಪಾಲು ಹೊಂದಿವೆ.

ಬೆಳೆ ವೈವಿಧ್ಯೀಕರಣ, ನೀರು ಮತ್ತು ಮಣ್ಣಿನ ಆರೋಗ್ಯದ ರಕ್ಷಣೆ, ಕೃಷಿ ಮತ್ತು ಸಂಬಂಧಿಸಿದ ಕ್ಷೇತ್ರಗಳಲ್ಲಿ ಸ್ವಾವಲಂಬನೆಗೆ ಸಂಬಂಧಿಸಿದ ಯೋಜನೆಗಳು ರಾಜ್ಯ, ಸ್ಥಳೀಯ ಸರಕಾರಗಳು, ಪ್ರಾಥಮಿಕ ರೈತ ಸಹಕಾರ ಸೊಸೈಟಿ, ಕೃಷಿ ವಿಶ್ವವಿದ್ಯಾನಿಲಯಗಳು, ರೈತ ಸಂಘಟನೆಗಳು ಹಾಗೂ ವರ್ತಕರನ್ನು ಒಳಗೊಂಡ ಉಪಕ್ರಮ ಆಗಬೇಕು. ಹತ್ತಿ ಸೇರಿದಂತೆ ಯಾವುದೇ ಉತ್ಪನ್ನಕ್ಕೆ ದೇಶ-ವಿದೇಶದಲ್ಲಿ ಬೇಡಿಕೆ ಕಡಿಮೆ ಇರುವಾಗ, ಇಳುವರಿ ಮತ್ತು ಗುಣಮಟ್ಟ ಹೆಚ್ಚಳಕ್ಕೆ ಹೊಲದಿಂದ ಗಿರಣಿವರೆಗಿನ ಪೂರೈಕೆ ಸರಪಳಿಯನ್ನು ಸಬಲಗೊಳಿಸಬೇಕಾಗುತ್ತದೆ. ಎಂಎಸ್‌ಪಿಯಲ್ಲಿ ಖರೀದಿ, ಒಳಸುರಿಗಳ ಬೆಲೆ ಇಳಿಕೆ ಮತ್ತು ಸ್ವಾಭಾವಿಕ ಅವಘಡಗಳ ನಿರ್ವಹಣೆಗೆ ದೀರ್ಘಕಾಲೀನ ಕಾರ್ಯನೀತಿ ಅಗತ್ಯವಿದೆ. ಇವೆಲ್ಲಕ್ಕೂ ಬಂಡವಾಳ ಹೂಡಬೇಕಾಗುತ್ತದೆ. ಘೋಷಣೆಗಳಿಂದ ಕೃಷಿ ಸಮಸ್ಯೆಯನ್ನು ಪರಿಹರಿಸಲು ಆಗುವುದಿಲ್ಲ. ಹತ್ತಿ ಆಮದು ಸುಂಕ ಮತ್ತೆ ಜಾರಿಯಾಗುವವರೆಗೆ ಕೃಷಿಕರಿಗೆ ರಕ್ಷಣಾತ್ಮಕ ಸಬ್ಸಿಡಿ ನೀಡ ಬೇಕು. ವಸ್ತ್ರೋದ್ಯಮ 45 ದಶಲಕ್ಷಕ್ಕಿಂತ ಹೆಚ್ಚು ಜನರಿಗೆ ನೇರವಾಗಿ ಉದ್ಯೋಗ ಹಾಗೂ ಸಂಬಂಧಿತ ವಲಯಗಳಲ್ಲಿ 60 ದಶಲಕ್ಷ ಜನರನ್ನು ಬೆಂಬಲಿಸುತ್ತಿದೆ; 2024-25ರಲ್ಲಿ ಸುಮಾರು 147 ಶತಕೋಟಿ ಡಾಲರ್ ದೇಶಿ ಮಾರುಕಟ್ಟೆ ಮೌಲ್ಯ ಮತ್ತು 2023-24ರಲ್ಲಿ 34.4 ಶತಕೋಟಿ ಡಾಲರ್ ರಫ್ತು ಮೌಲ್ಯ ಹೊಂದಿದ್ದ ವಸ್ತ್ರೋದ್ಯಮ ಕಾಲಕ್ರಮೇಣ ಕುಸಿಯಲಿದೆ.

ಪಿತಬಾಷಾ ಕೃಷಿಯನ್ನು ತೊರೆದಂತೆ, ಹೆಣ್ಣುಮಕ್ಕಳು ಗಾರ್ಮೆಂಟ್ಸ್ ಕಾರ್ಖಾನೆಯ ಕೆಲಸವನ್ನು ತೊರೆಯಬೇಕಾಗುತ್ತದೆ; ಎರಡೂ ದುರಂತಗಳೇ.

share
ಮಾಧವ ಐತಾಳ್
ಮಾಧವ ಐತಾಳ್
Next Story
X