Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ಬಿಜೆಪಿ ಸರಣಿ ವಿಜಯ: ಕಾಂಗ್ರೆಸ್,...

ಬಿಜೆಪಿ ಸರಣಿ ವಿಜಯ: ಕಾಂಗ್ರೆಸ್, ಪ್ರತಿಪಕ್ಷಗಳ ಕಾರ್ಯನೀತಿ ಏನು?

ಮಾಧವ ಐತಾಳ್ಮಾಧವ ಐತಾಳ್22 May 2026 10:18 AM IST
share
ಬಿಜೆಪಿ ಸರಣಿ ವಿಜಯ: ಕಾಂಗ್ರೆಸ್, ಪ್ರತಿಪಕ್ಷಗಳ ಕಾರ್ಯನೀತಿ ಏನು?

ಪ್ರತಿಪಕ್ಷಗಳು ಒಟ್ಟಾಗಿ ಪರ್ಯಾಯ ಕಾರ್ಯತಂತ್ರವನ್ನು ರೂಪಿಸಬೇಕಿದೆ. ಇದರೊಟ್ಟಿಗೆ ಪಂಜಾಬ್‌ನಲ್ಲಿ ಆಪ್, ತೆಲಂಗಾಣ, ಹರ್ಯಾಣ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ ಹೇಗಿದೆ ಎಂಬುದರ ಮೌಲ್ಯಮಾಪನ ಆಗಬೇಕಿದೆ. ರಾಜ್ಯದಲ್ಲಿ ಸರಕಾರ ಮೂರು ವರ್ಷ ಪೂರೈಸಿದೆ. ಭಿನ್ನಮತ ಸ್ವಲ್ಪಮಟ್ಟಿಗೆ ಶಮನವಾಗಿದೆ ಎಂದುಕೊಳ್ಳುವಷ್ಟರಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮತ್ತೆ ರಾಗ ಆರಂಭಿಸಿದ್ದಾರೆ. ಉತ್ತರದಾಯಿತ್ವ ಎಲ್ಲಿದೆ? ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ಪಕ್ಷ ಯಾವ ಸಿದ್ಧತೆ ನಡೆಸಿದೆ? ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ‘ಗ್ಯಾರಂಟಿ’ಗಳನ್ನು ಕೊಡುತ್ತಿರುವುದರಿಂದ, ಅದಕ್ಕಿಂತ ಹೆಚ್ಚಿನದೇನನ್ನು ಕಾಂಗ್ರೆಸ್ ಕೊಡಬಲ್ಲದು? ಗೋವಾ, ಪಂಜಾಬ್, ಉತ್ತರಪ್ರದೇಶ, ಉತ್ತರಾಖಂಡ ಮತ್ತು ಮಣಿಪುರದ ಚುನಾವಣೆಗಳಿಗೆ ಪ್ರತಿಪಕ್ಷಗಳ ಕಾರ್ಯತಂತ್ರ ಏನು? ಪೂರ್ವಸಿದ್ಧತೆ ಆರಂಭಿಸಬೇಕಿತ್ತಲ್ಲವೇ?

ಐದು ರಾಜ್ಯಗಳ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಕೇರಳದಲ್ಲಿ ಎಡ ರಂಗ ಸೋಲುಂಡಿವೆ. ಅಸ್ಸಾಮಿನಲ್ಲಿ ಎನ್‌ಡಿಎ 3ನೇ ಅವಧಿಗೆ ಹಾಗೂ ಪುದುಚೇರಿಯಲ್ಲಿ ಎನ್.ರಂಗಸ್ವಾಮಿ ಮತ್ತೊಮ್ಮೆ ಗದ್ದುಗೆ ಹಿಡಿದಿದ್ದಾರೆ. ಪ್ರತಿಪಕ್ಷಗಳಿಗೆ 2024ರ ಲೋಕಸಭೆ ಚುನಾವಣೆ ತೆರೆದಿದ್ದ ಬಾಗಿಲು ಈಗ ಬಹುತೇಕ ಮುಚ್ಚಿಹೋಗಿದೆ; ಧರ್ಮ, ಭಾಷೆ ಮತ್ತು ಜಾತಿಗಳ ವಿಸ್ತೃತ ವೈವಿಧ್ಯವಿದ್ದರೂ, ಶೇ.80ರಷ್ಟು ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ ಮತ್ತು ಕಾಂಗ್ರೆಸ್ ನಾಲ್ಕು ರಾಜ್ಯಗಳಿಗೆ ಸೀಮಿತವಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಎಡ ಪಕ್ಷಗಳ ಸರಕಾರ ಇಲ್ಲದಂತೆ ಆಗಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಎನ್‌ಸಿಪಿ-ಎಸ್‌ಪಿ ಮತ್ತು ಶಿವಸೇನೆ-ಯುಬಿಟಿ, ಬಿಹಾರದಲ್ಲಿ ಆರ್‌ಜೆಡಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಕೇರಳದಲ್ಲಿ ಎಲ್‌ಡಿಎಫ್, ಬಿಜೆಪಿಗೆ ಪ್ರಬಲ ಪ್ರತಿರೋಧ ಒಡ್ಡಿದ್ದವು. ಆನಂತರದ 2 ವರ್ಷಗಳಲ್ಲಿ ಒಂದೊಂದೇ ಪ್ರಾದೇಶಿಕ ಪಕ್ಷ ಹಳ್ಳ ಸೇರಿದೆ. 2024ರಲ್ಲಿ ಲೋಕಸಭೆ ಜೊತೆಗೆ ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳವನ್ನು ಬಿಜೆಪಿ ಮತ್ತು ಆಂಧ್ರಪ್ರದೇಶದಲ್ಲಿ ಜಗನ್ಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್‌ನ್ನು ಎನ್‌ಡಿಎ(ಬಿಜೆಪಿ + ಪವನ್ ಕಲ್ಯಾಣ್ ಅವರ ಜನ ಸೇನಾ ಪಾರ್ಟಿ) ಮಣಿಸಿತ್ತು. ಈ ಚುನಾವಣೆಯಲ್ಲಿ ಬಿಜೆಪಿಗೆ ಆದ ಹಿನ್ನಡೆಯು ಮೋದಿ ಪ್ರಭಾವ ಕುಸಿಯುತ್ತಿರುವುದರ ಸೂಚನೆಯಾಗಿತ್ತು; ಆದರೆ, ಬಿಜೆಪಿ 2024-26ರ ಅವಧಿಯಲ್ಲಿ ಮಹಾರಾಷ್ಟ್ರ, ಹರ್ಯಾಣ, ದಿಲ್ಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಿತು; ಅಸ್ಸಾಮಿನಲ್ಲಿ ಬಹುಮತ (82 ಸ್ಥಾನ) ಗಳಿಸಿತು ಹಾಗೂ ಪುದುಚೆರಿಯಲ್ಲಿ ಎನ್.ರಂಗಸ್ವಾಮಿ ನೇತೃತ್ವದ ಅಖಿಲ ಭಾರತ ಎನ್‌ಆರ್‌ಸಿಗೆ ಸರಕಾರ ರಚಿಸಲು ಸಾಥ್ ನೀಡಿತು. ಕಾಂಗ್ರೆಸ್ ದಕ್ಷಿಣದಲ್ಲಿ 3 ಹಾಗೂ ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಹಿಡಿದಿದೆ.

ಪ್ರಾಂತೀಯ ಪಕ್ಷಗಳಿಗೆ ಕುತ್ತು

ಬಿಜೆಪಿ ತಾನು ದುರ್ಬಲವಾಗಿರುವ ರಾಜ್ಯಗಳಲ್ಲಿ ಪ್ರಾಂತೀಯ ಪಕ್ಷಗಳನ್ನು ಬಳಸಿಕೊಂಡು, ಸ್ವಂತ ಬಲ ಬೆಳೆಸಿಕೊಳ್ಳುತ್ತದೆ. ಆನಂತರ, ಆ ಪಕ್ಷಗಳನ್ನು ಬದಿಗೆ ಸರಿಸುತ್ತದೆ, ಇಲ್ಲವೇ ವಿಲೀನಗೊಳಿಸಿಕೊಳ್ಳುತ್ತದೆ. ಬಿಹಾರದಲ್ಲಿ 20 ವರ್ಷ ಆಡಳಿತ ನಡೆಸಿದ್ದ ಜೆಡಿ(ಯು)ನ ನಿತೀಶ್ ಕುಮಾರ್ ಅವರನ್ನು ಇಳಿಸಿ, ಮೇಲ್ಮನೆಗೆ ಕಳಿಸಲಾಯಿತು; ಪುತ್ರ ನಿಶಾಂತ್‌ಗೆ ಸಚಿವ ಸ್ಥಾನ ನೀಡಲಾಯಿತು. ಆನಂತರ ಬಿಜೆಪಿ, ಸಾಮ್ರಾಟ್ ಚೌಧರಿ ಅವರನ್ನು ಮುಖ್ಯ ಮಂತ್ರಿ ಸ್ಥಾನದಲ್ಲಿ ಕೂರಿಸಿತು(ಜೆಡಿಯು 85, ಬಿಜೆಪಿ 89 ಮತ್ತು ಆರ್‌ಜೆಡಿ 25 ಸ್ಥಾನ). ರಾಜ್ಯದಲ್ಲಿ ಜೆಡಿ(ಯು) ತಳವನ್ನು ಕೀಳಲು ಬಿಜೆಪಿ 25 ವರ್ಷ ತೆಗೆದುಕೊಂಡಿತು. ವೈಎಸ್‌ಆರ್ ಕಾಂಗ್ರೆಸ್ ಮತ್ತು ಬಿಆರ್‌ಎಸ್, ಎನ್‌ಡಿಎ ಜೊತೆಗೆ ಅಧಿಕೃತವಾಗಿ ಗುರುತಿಸಿಕೊಂಡಿಲ್ಲ; ಆದರೆ, ತಮ್ಮ ರಾಜ್ಯಗಳಲ್ಲಿ ಬಿಜೆಪಿ ನೆಲೆಯೂರಲು ನೆರವಾಗಿವೆ. ಒಡಿಶಾದಲ್ಲಿ ಫೆಬ್ರವರಿ 1998ರಲ್ಲಿ ಬಿಜೆಡಿ-ಬಿಜೆಪಿ ಮೈತ್ರಿ ಮಾಡಿಕೊಂಡವು; ಮಾರ್ಚ್ 2009ರಲ್ಲಿ ಪಾಲುದಾರಿಕೆ ಕೊನೆಗೊಂಡಿತು. ಅಷ್ಟರಲ್ಲಿ ಬಿಜೆಪಿ ತನ್ನ ಬೇರುಗಳನ್ನು ಆಳವಾಗಿ ಊರಿತ್ತು. 2025ರ ಚುನಾವಣೆಯಲ್ಲಿ ನವೀನ್ ಪಟ್ನಾಯಕ್ ಅವರ ವೈಯಕ್ತಿಕ ತೇಜೋವಧೆ ಮಾಡಿ, ತಮಿಳುನಾಡು ಮೂಲದ ಐಎಎಸ್ ಅಧಿಕಾರಿಯ ಕೀಲುಗೊಂಬೆ ಆಗಿದ್ದಾರೆ ಎಂದು ಪ್ರಚಾರ ಮಾಡಿತು. ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳ(ಎಸ್‌ಎಡಿ; ಕೃಷಿ ಕಾಯ್ದೆಯನ್ನು ವಿರೋಧಿಸಿ ಸೆಪ್ಟಂಬರ್ 2020ರಲ್ಲಿ ಎನ್‌ಡಿಎ ತೊರೆಯಿತು), ಅಸ್ಸಾಮಿನಲ್ಲಿ ಅಸ್ಸಾಂ ಗಣ ಪರಿಷತ್ ಮತ್ತು ಗೋವಾದ ಅತ್ಯಂತ ಪುರಾತನ ಪಕ್ಷವಾದ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ(ಎಂಜಿಪಿ, 1961ರಲ್ಲಿ ಸ್ಥಾಪನೆ) ಕೂಡ ಈಗ ಬಿಜೆಪಿಯ ಬಾಲದಂತೆ ಆಗಿವೆ. ಕರ್ನಾಟಕದಲ್ಲಿ ಜಾತ್ಯತೀತ ದಳ ಇಬ್ಬರು ಸಂಸದರು(ಮತ್ತು, ರಾಜ್ಯಸಭೆಯಲ್ಲಿ ಒಬ್ಬರು ಸದಸ್ಯ) ಹಾಗೂ 18 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ ಜೊತೆ ಮೈತ್ರಿ ಕಡಿದುಕೊಂಡು, ಬಿಜೆಪಿ ಜೊತೆ ಕೂಡಾವಳಿ ಮಾಡಿಕೊಂಡಿತು. ಕಾಲಕ್ರಮೇಣ ದಳದ ಮತಗಳು ಬಿಜೆಪಿಯಲ್ಲಿ ಲೀನವಾದರೆ, ಆಶ್ಚರ್ಯ ಪಡಬೇಕಿಲ್ಲ. ಸಿಕ್ಕಿಂನಲ್ಲಿ ಸರಕಾರ ರಚಿಸಿರುವ ಸಿಕ್ಕಿಂ ಕ್ರಾಂತಿ ಮೋರ್ಚಾ(ಎಸ್‌ಕೆಎಂ), ಈಗ ಎನ್‌ಡಿಎ ಬೆಂಬಲಿಸುತ್ತಿದೆ. ಆಂಧ್ರಪ್ರದೇಶದಲ್ಲಿ ಟಿಡಿಪಿ ನೇತೃತ್ವದ ಮೈತ್ರಿ ಸರಕಾರವಿದೆ. ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫೆರೆನ್ಸ್ ಮತ್ತು ಜಾರ್ಖಂಡ್‌ನ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ‘ಇಂಡಿಯಾ’ ಮೈತ್ರಿಕೂಟದಲ್ಲಿದ್ದರೂ, ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿವೆ. ತಮಿಳುನಾಡಿನ ಆಡಳಿತಾರೂಢ ಪಕ್ಷ ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ(ಟಿವಿಕೆ)ಗೆ ಕಾಂಗ್ರೆಸ್, ಎಡ ಪಕ್ಷಗಳು, ವಿಡುತಲೈ ಚಿರತೆಗಳ್ ಕಚ್ಛಿ ಹಾಗೂ ಎಡಿಎಂಕೆಯ ಒಂದು ಗುಂಪು ಬೆಂಬಲ ನೀಡಿದೆ. ಪಂಜಾಬ್‌ನಲ್ಲಿ ಆಪ್ ಸರಕಾರವಿದೆ; ಪಕ್ಷದ 7 ಮೇಲ್ಮನೆ ಸದಸ್ಯರನ್ನು ಬಿಜೆಪಿ ಸೆಳೆದುಕೊಂಡಿದೆ. 2027ರ ಚುನಾವಣೆಯಲ್ಲಿ ಆಪ್‌ಗೆ ಇವರು ಯಾವ ರೀತಿ ಅಪಾಯಕಾರಿ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತಳವೂರುವಲ್ಲಿ ಟಿಎಂಸಿಯ ಪಾಲು ಇದೆ. ಟಿಎಂಸಿ ಎಡ ಪಕ್ಷಗಳನ್ನು ಸೋಲಿಸಲು, ಕೇಸರಿ ಪಕ್ಷದ ಜೊತೆಗೆ ಸಂಬಂಧ ಬೆಳೆಸಿತು; ಮಮತಾ ಬ್ಯಾನರ್ಜಿ ಕೇಂದ್ರ ರೈಲ್ವೆ ಸಚಿವೆಯೂ ಆದರು. ಆನಂತರ ಸಂಬಂಧ ಕಳಚಿಕೊಂಡು, ಕಾಂಗ್ರೆಸ್ ಜೊತೆಯಾದರು. 2024ರ ಲೋಕಸಭೆ ಚುನಾವಣೆ ಬಳಿಕ ‘ಇಂಡಿಯಾ’ ಮೈತ್ರಿಕೂಟದ ಎಲ್ಲ ಪಕ್ಷಗಳು ಒಟ್ಟಿಗೆ ಕೂರಲು ನಿರ್ಧರಿಸಿದರೆ, ಟಿಎಂಸಿ ತನ್ನನ್ನು ಪ್ರತ್ಯೇಕ ಗುಂಪು ಎಂದು ಪರಿಗಣಿಸಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿತ್ತು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಮಮತಾ ಬ್ಯಾನರ್ಜಿ, ಟಿಎಂಸಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಹೇಳಿದರು. ಪಶ್ಚಿಮ ಬಂಗಾಳದ ವ್ಯಾಪ್ತಿ ಮೀರಲಾಗದ ಮಮತಾ ಅವರಿಗೆ ರಾಷ್ಟ್ರ ಮಟ್ಟದ ಸ್ಥಾನದ ಆಕಾಂಕ್ಷೆ ಇತ್ತು. ಆದರೆ, ಈಗ ಅವರ ರೆಕ್ಕೆ ಮುರಿದಿದೆ. ಟಿಎಂಸಿ 2021ರಲ್ಲಿ ಕಾಂಗ್ರೆಸ್ ಅಪ್ರಸ್ತುತ ಎಂದಿತ್ತು. ತಾನು ಕಾಂಗ್ರೆಸ್‌ಗೆ ಪರ್ಯಾಯ ಎಂದು ಆಮ್ ಆದ್ಮಿ ಘೋಷಿಸಿಕೊಂಡಿತ್ತು. ಕಾಂಗ್ರೆಸ್ ತಮಗೆ ಹೊರೆ ಎಂದು ಮಾಯಾವತಿ ಹೇಳಿದ್ದರು. ಕಳೆದ ಎರಡು ವರ್ಷಗಳಲ್ಲಿ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ನವೀನ್ ಪಟ್ನಾಯಕ್, ಮಾಯಾವತಿ, ಚಂದ್ರಶೇಖರ ರಾವ್, ಜಗನ್ ಮೋಹನ್ ರೆಡ್ಡಿ, ಸ್ಟಾಲಿನ್ ಸೇರಿದಂತೆ ಹೆಚ್ಚಿನವರು ಸೋಲುಂಡಿದ್ದಾರೆ.

ಕಪ್ಪು ಕಲೆ

ಸಾಂವಿಧಾನಿಕ ಹಕ್ಕು ಮತ್ತು ಮೌಲ್ಯಗಳು, ಒಕ್ಕೂಟ ವ್ಯವಸ್ಥೆ, ಫ್ಯಾಶಿಸಂನ ಕರಾಳತೆ ಮತ್ತು ಸೈದ್ಧಾಂತಿಕ ರಾಜಕಾರಣ ಈ ಚುನಾವಣೆಯಲ್ಲಿ ಮುಖ್ಯವಾಗಿರಲಿಲ್ಲ. ಇದು ದೇಶದ ಇತಿಹಾಸದಲ್ಲಿ ಕಪ್ಪು ಕಲೆಯಾಗಿ ಉಳಿಯುವ ಚುನಾವಣೆ. ಫಲಿತಾಂಶವು ಜಾತ್ಯತೀತ, ಪ್ರಜಾಸತ್ತಾತ್ಮಕ, ಒಕ್ಕೂಟ ಗಣತಂತ್ರದ ದಿಕ್ಕುದೆಸೆ ಮೇಲೆ ಪರಿಣಾಮ ಬೀರಬಲ್ಲ ಹಲವು ಅಂಶಗಳನ್ನು ಒಳಗೊಂಡಿವೆ. 2024ರ ಚುನಾವಣೆಯಲ್ಲಿ ಬಿಜೆಪಿ, ಪಶ್ಚಿಮ ಬಂಗಾಳದಲ್ಲಿ ದೀದಿಯ ಹೊಡೆತದಿಂದ ಜರ್ಜರಿತವಾಗಿತ್ತು. ಮಹಾರಾಷ್ಟ್ರ, ಒಡಿಶಾ ಹಾಗೂ ಅಸ್ಸಾಮಿನಲ್ಲಿ ಪ್ರಾಂತೀಯ ಪಕ್ಷಗಳನ್ನು ಹಣಿದ ಬಳಿಕ ತನ್ನೆಲ್ಲ ಗಮನವನ್ನು ಬಂಗಾಳದ ಮೇಲೆ ಹರಿಸಿತು. 27 ಲಕ್ಷ ಜನರನ್ನು ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ಮತಪಟ್ಟಿಯಿಂದ ತೆಗೆದುಹಾಕಲಾಯಿತು. ಮಥುವಾ ಮತ್ತು ರಾಜ್‌ಬನ್ಷಿಯಂಥ ಜಾತಿ/ಸಮುದಾಯಗಳನ್ನು ಹಿಂದೂ ಹೊರತುಪಡಿಸುವಿಕೆ ನರೇಟಿವ್‌ನಲ್ಲಿ ಒಳಗೊಳ್ಳಲಾಯಿತು. ಕಾಶ್ಮೀರ ಮತ್ತು ಈಶಾನ್ಯ ಭಾರತ ಹೊರತುಪಡಿಸಿ, ಇನ್ನೆಲ್ಲೂ ಬಳಸದಷ್ಟು ಅರೆ ಸೇನಾ ಪಡೆಯನ್ನು ನಿಯೋಜಿಸಲಾಯಿತು. ರಾಷ್ಟ್ರೀಯ ನಾಗರಿಕತ್ವ ರಿಜಿಸ್ಟ್ರಿ(ಎನ್‌ಸಿಆರ್), ಡಿವೋಟರ್ ಗುಂಪು(ಸಂದೇಹಾಸ್ಪದ ಮತದಾರ), ಕ್ಷೇತ್ರ ಮರುವಿಂಗಡಣೆ, ಪೊಲೀಸ್ ಕಣ್ಗಾವಲು ಮೂಲಕ ಜನರನ್ನು ಪ್ರತ್ಯೇಕಿಸಲಾಯಿತು. ದೇಶಿ (ಹಿಂದೂ) ವಿ/ಎಸ್ ಅನ್ಯ(ಮುಸ್ಲಿಮ್) ನರೇಟಿವ್ ಯಥೇಚ್ಛ ಬಳಕೆಯಾಯಿತು. ನರೇಗಾ, ಪ್ರಧಾನ ಮಂತ್ರಿ ಆವಾಸ್ ಮತ್ತಿತರ ಯೋಜನೆಗಳಿಗೆ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡದೆ ಸತಾಯಿಸಿತು; ಚುನಾವಣಾ ಆಯೋಗ ಕೋಮು ದ್ವೇಷ-ವಿಷ ಭಾಷಣಕ್ಕೆ ಕಿವುಡಾಗಿತ್ತು. ಸುಪ್ರೀಂ ಕೋರ್ಟ್ ಪ್ರಜಾಪ್ರಭುತ್ವದ ಮೇಲಿನ ಈ ಅಕ್ರಮ ದಾಳಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಸೋಲಿನ ಬಳಿಕ ಟಿಎಂಸಿ ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿದೆ. ಮಮತಾ ಬ್ಯಾನರ್ಜಿ ಅವರಿಗೆ ಈಗ 71 ವರ್ಷ. ಈ ಹಿಂದೆ ಕಾಂಗ್ರೆಸ್-ಎಡ ಪಕ್ಷಗಳ ಮತದಾರರು ಪಕ್ಷ ಬದಲಿಸಿದಂತೆ, ಕಾಲಕ್ರಮೇಣ ಟಿಎಂಸಿ ಮತದಾರರು ಬಿಜೆಪಿ ಮತದಾರರಾಗುತ್ತಾರೆ. ಮತದಾರರ ಪಟ್ಟಿಯಿಂದ ರದ್ದುಗೊಳಿಸಿದವರ ಪ್ರಮಾಣ ಶೇ.4.3; ಟಿಎಂಸಿ ಮತ್ತು ಬಿಜೆಪಿ ನಡುವಿನ ಮತ ವ್ಯತ್ಯಾಸ ಶೇ.4.6. ಒಂದುವೇಳೆ 27 ಲಕ್ಷ ಜನರು ಮತ ಚಲಾಯಿಸಿದ್ದರೆ, ಫಲಿತಾಂಶ ಏನಾಗುತ್ತಿತ್ತು? ಚುನಾವಣೆಯಲ್ಲಿ ಬಿಜೆಪಿ 2,92,24,804 ಮತ, ಟಿಎಂಸಿ 2,60,13,377, ಕಾಂಗ್ರೆಸ್ 18,90,858 ಹಾಗೂ ಎಡಪಕ್ಷಗಳಿಗೆ 31,79,479 ಮತಗಳು ಬಂದಿದ್ದವು. ಒಟ್ಟು ಸೇರಿಸಿದರೆ, 3,10,83,714 ಆಗಲಿದೆ. ರಾಜಕೀಯ ಎನ್ನುವುದು ಗಣಿತಶಾಸ್ತ್ರವಲ್ಲ; ನಿಜ. ಆದರೆ, ಗಣಿತ ಸುಳ್ಳು ಹೇಳುವುದಿಲ್ಲ.

ಕಾಂಗ್ರೆಸ್ ಸಮಸ್ಯೆ

ಡಿಎಂಕೆ ಮತ್ತು ಟಿಎಂಸಿ ಸೋಲಿನಿಂದ ‘ಇಂಡಿಯಾ’ ಮೈತ್ರಿಕೂಟ ದುರ್ಬಲಗೊಂಡಿದೆ. ಆದರೆ, ಕಾಂಗ್ರೆಸ್ ಬಲ ಹೆಚ್ಚಿದೆ. ಕೇರಳದಲ್ಲಿ ಗೆಲ್ಲದಿದ್ದರೆ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರೋಧಿ ಗುಂಪಿನ ಮುನ್ನಡೆಸುವ ಅದರ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಏಳುತ್ತಿದ್ದವು. ಡಿಎಂಕೆ ಮೈತ್ರಿಕೂಟ, ಎಡಿಎಂಕೆ ಮೈತ್ರಿಕೂಟ ಹಾಗೂ ಟಿವಿಕೆ ಮತಗಳಿಕೆಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ತ್ರಿಕೋನ ಸ್ಪರ್ಧೆಯಿಂದಾಗಿ, ಜನಾದೇಶ ಟಿವಿಕೆ ಪರವಾಗಿದೆ. ಆದರೆ, ಡಿಎಂಕೆ/ಟಿಎಂಸಿ ಸೋಲಿನಿಂದ ಸೃಷ್ಟಿಯಾಗಿರುವ ನಿರ್ವಾತವನ್ನು ಕಾಂಗ್ರೆಸ್ ತುಂಬಬಲ್ಲದೇ? ಬಹುಶಃ ಸಾಧ್ಯವಿಲ್ಲ. ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡು ಬಹಳ ಕಾಲವಾಗಿದೆ. ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ 1947-1962 ಮತ್ತು 1972-1977 ಹಾಗೂ ತಮಿಳುನಾಡಿನಲ್ಲಿ 1947ರಿಂದ 1967ರವರೆಗೆ ಆಡಳಿತ ನಡೆಸಿತ್ತು. ಬಿಜೆಪಿಯೊಟ್ಟಿಗೆ ನೇರ ಸ್ಪರ್ಧೆ ಎದುರಿಸುವ ರಾಜ್ಯಗಳಲ್ಲೂ ಕಾಂಗ್ರೆಸ್ ತಿಣುಕಾಡುತ್ತಿದೆ. ಗುಜರಾತ್‌ನಲ್ಲಿ ಆಪ್‌ಗೆ ಜಾಗ ಬಿಟ್ಟುಕೊಟ್ಟಿದೆ. 2026ರ ವಿಧಾನಸಭೆ ಚುನಾವಣೆ ಬಳಿಕ ನಾಲ್ಕು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು ತಕ್ಷಣ ಅಧಿಕಾರ ಸ್ವೀಕರಿಸಿದರು; ಆದರೆ, ಕಾಂಗ್ರೆಸ್ ಕೇರಳದಲ್ಲಿ ವಿ.ಡಿ. ಸತೀಶನ್ ಅವರನ್ನು ಆಯ್ಕೆ ಮಾಡಲು ಸಾಕಷ್ಟು ತಿಣುಕಿತು.

ಡಿಎಂಕೆ/ಟಿಎಂಸಿ ಸೋಲಿನಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಲೋಕಸಭೆಯಲ್ಲಿ ಡಿಎಂಕೆಯ 27 ಸಂಸದರು ಹಾಗೂ ರಾಜ್ಯಸಭೆಯಲ್ಲಿ 9 ಸದಸ್ಯರು ಇದ್ದಾರೆ. ಒಂದು ವೇಳೆ ವಿಜಯ್ ‘ಇಂಡಿಯಾ’ ಮೈತ್ರಿ ಕೂಟ ಸೇರಿದರೂ, ಲೋಕಸಭೆಗೆ ಸಂಸದರನ್ನು ಕಳಿಸಲು 2029ರವರೆಗೆ ಕಾಯಬೇಕಾಗುತ್ತದೆ. ತಮಿಳುನಾಡಿನಲ್ಲಿ 1967ರ ಬಳಿಕ ಇಬ್ಬರು ಕಾಂಗ್ರೆಸ್ ಶಾಸಕರು ಸಚಿವ ಸಂಪುಟ ಸೇರಿದ್ದಾರೆ; 2006ರಲ್ಲಿ ಡಿಎಂಕೆ ಸರಕಾರದಲ್ಲಿ ಸಚಿವ ಸ್ಥಾನ ಪಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು. 2008ರಲ್ಲಿ ದೇಶಾದ್ಯಂತ ಕಾಂಗ್ರೆಸ್‌ನ 1,204 ಶಾಸಕರಿದ್ದರು; ಈಗ ಅದು 676ಕ್ಕೆ ಕುಸಿದಿದೆ(-ಶೇ.44); ಇದೇ ಹೊತ್ತಿನಲ್ಲಿ ಬಿಜೆಪಿ ಬಲ 889ರಿಂದ 1,787ಕ್ಕೆ ಹೆಚ್ಚಿದೆ(+ಶೇ.100).

ಬಿಜೆಪಿ ಎಷ್ಟು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ ಎನ್ನುವಷ್ಟೇ ಮುಖ್ಯವಾದದ್ದು ಆ ರಾಜ್ಯಗಳಲ್ಲಿ ಪ್ರಮುಖ ಪ್ರತಿಪಕ್ಷ ಯಾವುದು ಎನ್ನುವುದು. ಪಶ್ಚಿಮ ಬಂಗಾಳ-ಟಿಎಂಸಿ, ಬಿಹಾರ-ಆರ್‌ಜೆಡಿ, ಜಾರ್ಖಂಡ್-ಜಾರ್ಖಂಡ್ ಮುಕ್ತಿ ಮೋರ್ಚಾ, ಒಡಿಶಾ-ಬಿಜು ಜನತಾ ದಳ ಮತ್ತು ಗುಜರಾತ್-ಆಮ್ ಆದ್ಮಿ. ಈಗಲೂ ದ್ವಿಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಿದೆ; ಆದರೆ, ಅದು ಕಾಂಗ್ರೆಸ್ ವಿ/ಎಸ್ ಬಿಜೆಪಿ ಅಲ್ಲ. 2014 ಮತ್ತು 2019ರಲ್ಲಿ ಬಿಜೆಪಿ ವಿಜಯಕ್ಕೆ ದೇಶದೆಲ್ಲೆಡೆ ಕಾಂಗ್ರೆಸ್ ಕುಸಿತ ಕಾರಣ. 2024ರಲ್ಲಿ ಬಿಜೆಪಿ ಬಲ ಕಡಿಮೆಯಾಗಲು ಉತ್ತರಪ್ರದೇಶ ಮತ್ತು ರಾಜಸ್ಥಾನದಲ್ಲಿನ ಪಕ್ಷದ ಆಂತರಿಕ ಸಮಸ್ಯೆ ಕಾರಣವೇ ಹೊರತು ಕಾಂಗ್ರೆಸ್ ಬಲ ಹೆಚ್ಚಳವಲ್ಲ. 2024ರಲ್ಲಿ ಕಾಂಗ್ರೆಸ್ ಸಂಖ್ಯಾಬಲ 44ರಿಂದ 99ಕ್ಕೆ ಹೆಚ್ಚಿದಾಗ, ಕಾಂಗ್ರೆಸ್ ಬಲಗೊಂಡಿದೆ ಎಂದುಕೊಳ್ಳಲಾಗಿತ್ತು. ಆದರೆ, ಈ ಸ್ಥಾನಗಳಲ್ಲಿ ಹೆಚ್ಚಿನವು ಪ್ರಾಂತೀಯ ಪಕ್ಷಗಳ ಸಖ್ಯದಿಂದ ಬಂದಿತ್ತು. ಜೊತೆಗೆ, ಪ್ರಮುಖ ಪ್ರಾಂತೀಯ ಪಕ್ಷಗಳ ಬಲ ಹೆಚ್ಚಳದ ಸಾಧ್ಯತೆ ಕೂಡ ಮಸುಕಾಗಿದೆ; ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ, ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ವೈಭವದ ದಿನಗಳು ಕಳೆದುಹೋಗಿವೆ. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಹಾಗೂ ಉದ್ಧವ್ ಠಾಕ್ರೆ ಬಲಗುಂದಿದ್ದಾರೆ. ಅಸ್ಸಾಮಿನಲ್ಲಿ ಕಾಂಗ್ರೆಸ್ 1985ರಲ್ಲಿ ಗಳಿಸಿದ ಸ್ಥಾನಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಜಯಿಸಿದೆ. ರಾಜ್ಯಾಧ್ಯಕ್ಷ ಗೌರವ್ ಗೊಗೋಯಿ ಸೋತಿದ್ದಾರೆ; ಮಿತ್ರ ಪಕ್ಷಗಳಾದ ರೈಜೋರ್ ದಳ ಮತ್ತು ಅಸ್ಸಾಂ ಜಾತೀಯ ಪರಿಷತ್ ಧೂಳೀಪಟವಾಗಿವೆ.

ಆತ್ಮಾವಲೋಕನಕ್ಕೆ ಸಕಾಲ

2027ರಲ್ಲಿ ಗೋವಾ, ಪಂಜಾಬ್, ಉತ್ತರಪ್ರದೇಶ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿಗೆ ಸ್ವಂತ ಬಹುಮತವಿಲ್ಲದಿದ್ದರೂ, ಮೈತ್ರಿಪಕ್ಷಗಳಿಂದ ಹೆಚ್ಚು ಒತ್ತಡ ಇಲ್ಲ. ಇವು ತಮ್ಮ ಹಿತಾಸಕ್ತಿಗೆ ಧಕ್ಕೆ ಬರುವವರೆಗೆ ಬಿಜೆಪಿ ವಿರುದ್ಧ ಧ್ವನಿಯೆತ್ತುವುದಿಲ್ಲ. ಬಿಜೆಪಿ ವಿವಿಧ ಜಾತಿ/ಸಮುದಾಯಗಳ ಬೆಂಬಲವಿರುವ ಪಕ್ಷಗಳೊಂದಿಗೆ ಮಾಡಿಕೊಂಡ ಮೈತ್ರಿ ಶಾಶ್ವತವಾಗಿರುತ್ತದೆ ಎನ್ನಲಾಗದು. ‘ಕಾಂಗ್ರೆಸ್ ಮುಕ್ತ ಭಾರತ’, ‘ಬಿಜೆಪಿಮುಕ್ತ ಭಾರತ’ ಅಥವಾ ‘ಎಡ ಪಕ್ಷ ಮುಕ್ತ ಭಾರತ’ ಕಾರ್ಯಸಾಧುವಲ್ಲ. ಕಾಂಗ್ರೆಸ್ ಸಮಸ್ಯೆ ಏನು ಎನ್ನುವುದು ಎಲ್ಲರಿಗೂ ಗೊತ್ತಿರುವಾಗ, ಕಾಂಗ್ರೆಸ್‌ಗೆ ಗೊತ್ತಿಲ್ಲವೇ? ಗೊತ್ತಿದೆ ಎಂದಾದಲ್ಲಿ ಅದು ಏನು ಮಾಡುತ್ತಿದೆ? ಗೊತ್ತಿಲ್ಲ ಅಂದರೆ ಗೊತ್ತಾಗುವುದು ಯಾವಾಗ? ಕಾಂಗ್ರೆಸ್‌ಗೆ ಸಂಘಟನೆಯ ಬಲವರ್ಧನೆಗೆ ಆಸಕ್ತಿ ಇಲ್ಲ; ಪಕ್ಷದಲ್ಲಿ ಎಲ್ಲರೂ ನಾಯಕರೇ! ಬಿಜೆಪಿ ಪರ ಚುನಾವಣಾ ಆಯೋಗ, ಕೇಂದ್ರೀಯ ಸಂಸ್ಥೆಗಳು(ಈ.ಡಿ., ಸಿಬಿಐ, ಐಟಿ ಇತ್ಯಾದಿ), ಆರೆಸ್ಸೆಸ್ ಹಾಗೂ ಅಪಾರ ಮಾನವ-ಆರ್ಥಿಕ ಸಂಪನ್ಮೂಲ ಇದೆ. ಚುನಾವಣೆ ಪ್ರಕ್ರಿಯೆಯ ವಿಶ್ವಾಸಾರ್ಹತೆ ಕನಿಷ್ಠ ಮಟ್ಟ ತಲುಪಿರುವಾಗ, ಬಿಜೆಪಿಯ ಚುನಾವಣೆ ಯಂತ್ರವನ್ನು ತಡೆಯುವುದು ಹೇಗೆ? ಉಳಿದ ದಾರಿಯೆಂದರೆ, ಜನರೇ ಕಿತ್ತೆಸೆಯಬೇಕು. ಅಂಥ ಕಾಲ ಇನ್ನೂ ಬಂದಿಲ್ಲ.

ಪ್ರತಿಪಕ್ಷಗಳು ಒಟ್ಟಾಗಿ ಪರ್ಯಾಯ ಕಾರ್ಯತಂತ್ರವನ್ನು ರೂಪಿಸಬೇಕಿದೆ. ಇದರೊಟ್ಟಿಗೆ ಪಂಜಾಬ್‌ನಲ್ಲಿ ಆಪ್, ತೆಲಂಗಾಣ, ಹರ್ಯಾಣ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ ಹೇಗಿದೆ ಎಂಬುದರ ಮೌಲ್ಯಮಾಪನ ಆಗಬೇಕಿದೆ. ರಾಜ್ಯದಲ್ಲಿ ಸರಕಾರ ಮೂರು ವರ್ಷ ಪೂರೈಸಿದೆ. ಭಿನ್ನಮತ ಸ್ವಲ್ಪಮಟ್ಟಿಗೆ ಶಮನವಾಗಿದೆ ಎಂದುಕೊಳ್ಳುವಷ್ಟರಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮತ್ತೆ ರಾಗ ಆರಂಭಿಸಿದ್ದಾರೆ. ಉತ್ತರ ದಾಯಿತ್ವ ಎಲ್ಲಿದೆ? ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ಪಕ್ಷ ಯಾವ ಸಿದ್ಧತೆ ನಡೆಸಿದೆ? ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ‘ಗ್ಯಾರಂಟಿ’ಗಳನ್ನು ಕೊಡುತ್ತಿರುವುದರಿಂದ, ಅದಕ್ಕಿಂತ ಹೆಚ್ಚಿನದೇನನ್ನು ಕಾಂಗ್ರೆಸ್ ಕೊಡಬಲ್ಲದು? ಗೋವಾ, ಪಂಜಾಬ್, ಉತ್ತರಪ್ರದೇಶ, ಉತ್ತರಾಖಂಡ ಮತ್ತು ಮಣಿಪುರದ ಚುನಾವಣೆಗಳಿಗೆ ಪ್ರತಿಪಕ್ಷಗಳ ಕಾರ್ಯತಂತ್ರ ಏನು? ಪೂರ್ವಸಿದ್ಧತೆ ಆರಂಭಿಸಬೇಕಿತ್ತಲ್ಲವೇ?

ಬಿಜೆಪಿ/ಕಾಂಗ್ರೆಸ್ ಹೊರತಾದ ಒಕ್ಕೂಟವೊಂದು ಹೊರಹೊಮ್ಮಬಹುದೇ?

ಒಂದು ಆಲೋಚನೆ ಇಲ್ಲವೇ ಒಂದು ರಾಜಕೀಯ ಸಂಘಟನೆಗೆ ಸ್ವಾಭಾವಿಕವಾಗಿ ಇಲ್ಲವೇ ಶಾಶ್ವತವಾಗಿ ನ್ಯಾಯಬದ್ಧತೆ ಪ್ರಾಪ್ತವಾಗುವುದಿಲ್ಲ. ನಿರ್ದಿಷ್ಟ ಪರಿಸ್ಥಿತಿ ಮತ್ತು ಸನ್ನಿವೇಶಕ್ಕೆ ಅನುಗುಣವಾಗಿ ರಾಜಕೀಯ ಸಂಘಟನೆಗಳು ರಚನೆಯಾಗುತ್ತವೆ. ತುರ್ತು ಪರಿಸ್ಥಿತಿ ಬಳಿಕ ಜನತಾ ಪಕ್ಷ ಅಧಿಕಾರ ಹಿಡಿಯುತ್ತದೆ ಎಂದು ಎಷ್ಟು ಜನ ಊಹಿಸಿದ್ದರು? ಡಿಎಂಕೆ 1999-2003ರಲ್ಲಿ ಎ.ಬಿ. ವಾಜಪೇಯಿ ಅವರ ಸರಕಾರದ ಭಾಗವಾಗಿತ್ತು. 2004ರಲ್ಲಿ ಯುಪಿಎ ಸೇರಿತು; ಟಿಎಂಸಿಯದೂ ಇದೇ ಕತೆ. ಡಿಎಂಕೆ, ಟಿಎಂಸಿ, ಆರ್‌ಜೆಡಿ, ಎಸ್‌ಪಿ, ಬಿಜೆಡಿ, ಬಿಆರ್‌ಎಸ್, ಬಿಎಸ್‌ಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಒಳಗೊಂಡ ಮೂರನೇ ಒಕ್ಕೂಟವೊಂದು ರಚನೆಯಾಗುವುದೇ? ಆದಲ್ಲಿ ಇದರಿಂದ ಬಿಜೆಪಿಗೆ ಯಾವುದೇ ನಷ್ಟವಾಗುವುದಿಲ್ಲ. ಬಿಜೆಪಿಯ ಚುನಾವಣೆ ಯಂತ್ರವನ್ನು ಸಂಘ ಪರಿವಾರ, ಮಾಧ್ಯಮಗಳು, ಭಾರೀ ಕೈಗಾರಿಕೋದ್ಯಮಿಗಳು ಹಾಗೂ ಚುನಾವಣೆ ಆಯೋಗ ಸೇರಿದಂತೆ ಸರಕಾರದ ಸಂಸ್ಥೆಗಳು ಮುಂದೊಯ್ಯುತ್ತಿವೆ. ಇದನ್ನು ತಡೆಯುವುದು ಸುಲಭವಲ್ಲ.

Tags

BJPCongressopposition parties
share
ಮಾಧವ ಐತಾಳ್
ಮಾಧವ ಐತಾಳ್
Next Story
X