Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ‘ಸಂವಿಧಾನ ಹತ್ಯಾ ದಿವಸ್’ ಆಚರಣೆಯಿಂದ...

‘ಸಂವಿಧಾನ ಹತ್ಯಾ ದಿವಸ್’ ಆಚರಣೆಯಿಂದ ವಾಸ್ತವ ಬದಲಾಗುವುದಿಲ್ಲ

ಮಾಧವ ಐತಾಳ್ಮಾಧವ ಐತಾಳ್4 July 2025 10:38 AM IST
share
‘ಸಂವಿಧಾನ ಹತ್ಯಾ ದಿವಸ್’ ಆಚರಣೆಯಿಂದ ವಾಸ್ತವ ಬದಲಾಗುವುದಿಲ್ಲ
ಸ್ಪಷ್ಟವಾಗಿ, ದೃಢವಾಗಿ, ಗಟ್ಟಿಯಾಗಿ ಹೇಳೋಣ; ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ; ಅದು ಮಾಡಿದ ಗಾಯಗಳು ಇಂದಿಗೂ ಮಾಸದೆ ಉಳಿದಿವೆ. ಆದರೆ, ಪ್ರತಿಪಕ್ಷಗಳು-ಅಭಿಪ್ರಾಯಭೇದ ಇರುವವರನ್ನು ಹಣಿಯಲು ಈ.ಡಿ.-ಆದಾಯ ತೆರಿಗೆ-ಸಿಬಿಐ ಬಳಕೆ, ಒಬ್ಬನೇ ನಾಯಕನ ವೈಭವೀಕರಣ, ಸಂಸತ್ತು ಸೇರಿದಂತೆ ಪ್ರಜಾಸತ್ತಾತ್ಮಕ ಸಂಸ್ಥೆಗಳ ಅಪಮೌಲ್ಯ ಮತ್ತು ದೇಶವ್ಯಾಪಿ ಅಸಹಿಷ್ಣುತೆ ಹೆಚ್ಚಳಗಳು ತುರ್ತುಪರಿಸ್ಥಿತಿಗಿಂತ ಹೇಗೆ ಭಿನ್ನ? 50 ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿಯನ್ನು ‘ಸಂವಿಧಾನ ಹತ್ಯಾ ದಿವಸ್’ವಾಗಿ ಆಚರಿಸುವ ಗೋಸುಂಬೆತನದಿಂದ ವಾಸ್ತವ ಮುಚ್ಚಿಹೋಗುವುದಿಲ್ಲ.

ತುರ್ತು ಪರಿಸ್ಥಿತಿಗೆ 50 ವರ್ಷ ಸಂದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಜೂನ್ 25ನ್ನು ‘ಸಂವಿಧಾನ ಹತ್ಯಾ ದಿವಸ್’ ಎಂದು ಹೇಳಿಕೊಂಡಿದೆ. ಕಾಂಗ್ರೆಸನ್ನು ಹೀಗಳೆಯುವ ಯಾವುದೇ ಅವಕಾಶವನ್ನು ಬಿಜೆಪಿ ಬಿಡುವುದಿಲ್ಲ; ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಈ ಆಡಳಿತದಲ್ಲಿ ನಿಂತಿದೆಯೇ: ಇಲ್ಲ. ಇನ್ನಷ್ಟು ಬಿರುಸಿನಿಂದ ಮುನ್ನಡೆದಿದೆ. ಸಿನೆಮಾ ಸೇರಿದಂತೆ ಪ್ರದರ್ಶನ ಕಲೆಗಳ ಮೇಲೆ ಸೆನ್ಸರ್‌ನ ಕತ್ತಿ ನೇತಾಡುತ್ತಲೇ ಇದೆ. ಚಲನಚಿತ್ರ, ಸಾಕ್ಷ್ಯಚಿತ್ರ ಮತ್ತು ಸ್ಟ್ರೀಮಿಂಗ್ ಕಾರ್ಯಕ್ರಮಗಳಿಗೆ ಇದು ಕರಾಳ ಯುಗ. ಇದಕ್ಕೆ ಇತ್ತೀಚಿನ ಉದಾಹರಣೆ- ‘ಜಾನಕಿ ವಿ/ಎಸ್ ಸ್ಟೇಟ್ ಆಫ್ ಕೇರಳ’ ಮತ್ತು ‘ಸಿತಾರೆ ಝಮೀನ್ ಪರ್’ ಸಿನೆಮಾಗಳು. ಕೇಂದ್ರದ ನಿಯಂತ್ರಣದಲ್ಲಿರುವ ಸಿಬಿಎಫ್‌ಸಿ(ಕೇಂದ್ರೀಯ ಸೆನ್ಸರ್ ಪ್ರಮಾಣಪತ್ರ ಮಂಡಳಿ)ಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ.

1975, ಜೂನ್ 25ರಂದು ಪ್ರಧಾನಿ ಇಂದಿರಾ ಗಾಂಧಿ ಅವರು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. 1975 ಮತ್ತು 1977ರ ನಡುವೆ ಸಂವಿಧಾನ ಖಾತರಿಪಡಿಸಿದ ಮೂಲಭೂತ ಹಕ್ಕುಗಳು ಅಮಾನತುಗೊಂಡವು; ವಿರೋಧ ಪಕ್ಷದ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಬಂಧಿಸಲ್ಪಟ್ಟರು. ಅದೊಂದು ಕರಾಳ ಅಧ್ಯಾಯ; ತೀವ್ರ ಖಂಡನೆಗೆ ಅರ್ಹವಾದುದು ಮತ್ತು ಅದು ಮರುಕಳಿಸದಂತೆ ನೋಡಿಕೊಳ್ಳಬೇಕು. ಆದರೆ, ಎನ್‌ಡಿಎ 3.0 ಸರಕಾರ ‘ಸಂವಿಧಾನ ಹತ್ಯಾ ದಿವಸ್’ ಆಚರಣೆಗೆ ನಿರ್ಧರಿಸಿರುವುದು ವಿಪರ್ಯಾಸ; ಏಕೆಂದರೆ, ಈ ಆಡಳಿತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ತೀವ್ರಗೊಂಡಿದೆ. ಆಗ ಇಂದಿರಾ ಗಾಂಧಿಯವರ ದಬ್ಬಾಳಿಕೆಗೆ ಗಣ್ಯರು ಎನಿಸಿಕೊಂಡವರ ಮೌನಸಮ್ಮತಿ, ಸಂಸತ್ತು, ನ್ಯಾಯಾಂಗ ಮತ್ತು ಮಾಧ್ಯಮದ ಮೇಲೆ ಆದ ವಿಪರಿಣಾಮ ಕುರಿತು ಮತ್ತು ಭವಿಷ್ಯದಲ್ಲಿ ಇಂಥದ್ದನ್ನು ತಡೆಯುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಯಬೇಕಿತ್ತು. ಇಂಥ ಚರ್ಚೆಗಳು ಚಲನಚಿತ್ರ, ಸಾಕ್ಷ್ಯಚಿತ್ರ ಮತ್ತು ಸ್ಟ್ರೀಮಿಂಗ್ ಕಾರ್ಯಕ್ರಮಗಳ ಮೇಲೆ ಸೆನ್ಸರ್‌ಶಿಪ್ ಇರುವ ಈ ಕರಾಳ ಸಮಯದಲ್ಲಿ ಪ್ರಸ್ತುತವಾಗಲಿವೆ.

ತುರ್ತು ಪರಿಸ್ಥಿತಿಗೆ ಮೊದಲ ಬಲಿ-ಅಮೃತ್ ನಹತಾ ಅವರ ‘ಕಿಸ್ಸಾ ಕುರ್ಸಿ ಕಾ’ ಸಿನೆಮಾ. ಇದರಲ್ಲಿ ಸರಕಾರದ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಬಗ್ಗೆ ವಿಡಂಬನೆ ಇದ್ದು, ಎಪ್ರಿಲ್ 1975ರಲ್ಲಿ ಪೂರ್ಣಗೊಂಡಿತು. ಸೆನ್ಸರ್ ಮಂಡಳಿ ಚಿತ್ರಕ್ಕೆ 51 ಕಡಿತಗಳನ್ನು ಸೂಚಿಸಿತು; ಆನಂತರ ನಿಷೇಧಿಸಿತು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ವಿ.ಸಿ.ಶುಕ್ಲಾ, ಸಿನೆಮಾದ ಪ್ರಿಂಟ್‌ಗಳನ್ನು ನಾಶಪಡಿಸಿದರು. 1978ರಲ್ಲಿ ಕಾಂಗ್ರೆಸ್ ಸೋತು, ಜನತಾ ಪಕ್ಷ ಅಧಿಕಾರಕ್ಕೆ ಬಂದಿತು. ನಹತಾ ಚಿತ್ರವನ್ನು ಮರುನಿರ್ಮಿಸಿದರು. ಆದರೆ, ಹೊಸ ಆವೃತ್ತಿಯೂ ಸೆನ್ಸರ್ ಹಿಡಿತಕ್ಕೆ ಸಿಲುಕಿಕೊಂಡಿತು; ಇಪ್ಪತ್ತೈದು ಕಡಿತಗಳನ್ನು ಆದೇಶಿಸಲಾಯಿತು. ಅಧಿಕಾರಕ್ಕೆ ಬಂದ ಪಕ್ಷ ಕೂಡ ಸಿನೆಮಾಕ್ಕೆ ಅವಕಾಶ ನೀಡಲಿಲ್ಲ.

1980 ಮತ್ತು 1990ರಲ್ಲಿ ಪಂಜಾಬ್‌ನಲ್ಲಿ ನಡೆದ ಉಗ್ರರ ನಿಗ್ರಹ ಕಾರ್ಯಾಚರಣೆ ವೇಳೆ ನಡೆದ ವ್ಯಕ್ತಿಗಳ ಕಣ್ಮರೆ ಮತ್ತು ನ್ಯಾಯಾಂಗೇತರ ಹತ್ಯೆ ಕುರಿತ ಹನಿ ಟ್ರೆಹಾನ್ ಅವರ ಚಿತ್ರ ‘ಪಂಜಾಬ್ 95’ ವಿಷಯದಲ್ಲೂ ಇದೇ ಆಯಿತು(ಮೊದಲಿನ ಹೆಸರು ಗಲ್ಲುಗಾರ ಅಂದರೆ ಹತ್ಯಾಖಾಂಡ). ಟ್ರೆಹಾನ್ ಅವರ ಚಲನಚಿತ್ರವು ಮಾನವ ಹಕ್ಕುಗಳ ಕಾರ್ಯಕರ್ತ ಜಸ್ವಂತ್ ಸಿಂಗ್ ಖಾಲ್ರಾ ಅವರ ವರದಿ ಆಧರಿಸಿದ್ದು, ಪೊಲೀಸರು-ಭದ್ರತಾ ಪಡೆಗಳು ನಡೆಸಿದ ದೌರ್ಜನ್ಯಗಳನ್ನು ಪರಿಶೋಧಿಸುತ್ತದೆ. ಖಾಲ್ರಾ ಸೆಪ್ಟಂಬರ್ 6,1995ರಂದು ಅಮೃತಸರದ ಮನೆಯಿಂದ ಕಾಣೆಯಾದರು. ಅವರಿಗೆ ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು ಎಂದು ಸಿಬಿಐ ಹೇಳಿತು. ಆದರೆ, ಶವ ಪತ್ತೆಯಾಗಲಿಲ್ಲ. ಚಿತ್ರವನ್ನು ಸೆನ್ಸರ್‌ಗೆ ಡಿಸೆಂಬರ್ 2022ರಲ್ಲಿ ಸಲ್ಲಿಸಲಾಯಿತು. ಸೆನ್ಸರ್ ಮಿತಿಮೀರಿ ಕಿರುಕುಳ ನೀಡಿತು; ಮೊದಲಿಗೆ ಹೆಸರು ಬದಲಿಸಲು ಹೇಳಿತು; ಆನಂತರ 127 ದೃಶ್ಯಗಳನ್ನು ಕಡಿತಗೊಳಿಸಲು ಹೇಳಿತು. ನಿರ್ಮಾಪಕರು ಬಾಂಬೆ ಹೈಕೋರ್ಟ್‌ನಲ್ಲಿ ಈ ಸಂಬಂಧ ಮೇಲ್ಮನವಿ ಸಲ್ಲಿಸಿದರು. ಒಂದು ವೇಳೆ ಸೆನ್ಸರ್ ಮಂಡಳಿ ಸೂಚಿಸಿದಷ್ಟು ಕಡಿತಗಳನ್ನು ಮಾಡಿದರೆ, ಸಿನೆಮಾ ಗುರುತಿಸಲಾಗದಷ್ಟು ಬದಲಾಗುತ್ತಿತ್ತು.

ಸಿಬಿಎಫ್‌ಸಿ ಕೈಚಳಕ

ಮಾಹಿತಿ ಮತ್ತು ಪ್ರಸಾರ ಸಚಿವಾಲಯದಡಿ ಬರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ) ಅಥವಾ ಸೆನ್ಸರ್ ಮಂಡಳಿಯು ಆಡಳಿತ ಪಕ್ಷವನ್ನು ಟೀಕಿಸುವವರ ಬಾಯಿ ಮುಚ್ಚಿಸಲು ಶ್ರಮಿಸುತ್ತಿದೆ. ಪ್ರತಿಯಾಗಿ, ಸರಕಾರವನ್ನು ಹೊಗಳುವ ಚಲನಚಿತ್ರಗಳನ್ನು ವೈಭವೀಕರಿಸಲಾಗುತ್ತಿದೆ. ಈಗ ಚಲನಚಿತ್ರಗಳನ್ನು ಸೆಲ್ಯುಲಾಯ್ಡ್ ಬದಲು ಡಿಜಿಟಲ್ ರೂಪದಲ್ಲಿ ರಕ್ಷಿಸುವುದರಿಂದ, ಸಿನೆಮಾಗಳ ಭೌತಿಕ ನಾಶ ಕಷ್ಟಕರ. ಆದರೆ, ಭ್ರಷ್ಟಾಚಾರ, ಸಣ್ಣ ತಪ್ಪಿಗೆ ಕಠಿಣ ಶಿಕ್ಷೆಗೆ ಗುರಿಯಾದ ಸಮುದಾಯಗಳು ಮತ್ತು ಜನಸಾಮಾನ್ಯರ ಮೇಲಿನ ದಬ್ಬಾಳಿಕೆಯ ಕಥೆಗಳನ್ನು ದುರ್ಬಲಗೊಳಿಸಲು ಅಥವಾ ಉಸಿರು ಕಟ್ಟಿಸಲು ಸಾಕಷ್ಟು ಮಾರ್ಗಗಳಿವೆ. ಇತ್ತೀಚೆಗೆ ಬಿಡುಗಡೆಯಾದ ‘ಸಿತಾರೆ ಝಮೀನ್ ಪರ್’ ಚಿತ್ರದಲ್ಲಿ ಆಮಿರ್ ಖಾನ್ ಬೌದ್ಧಿಕ ವಿಶೇಷಚೇತನ ಬಾಸ್ಕೆಟ್‌ಬಾಲ್ ಆಟಗಾರರಿಗೆ ತರಬೇತಿ ನೀಡುವ ತರಬೇತುದಾರ. ಚಿತ್ರದ ದೃಶ್ಯವೊಂದರಿಂದ ‘ಕಮಲ್’ ಎಂಬ ಪದವನ್ನು ತೆಗೆದುಹಾಕಿಸಲಾಯಿತು. ‘ಕಮಲ’ ಬಿಜೆಪಿಯ ಚಿಹ್ನೆ. ಜೊತೆಗೆ, 2047ರ ವೇಳೆಗೆ ದೇಶವು ದೈಹಿಕ ಮತ್ತು ಬೌದ್ಧಿಕ ಸವಾಲು ಎದುರಿಸುವ ಭಾರತೀಯರ ಒಳಗೊಳ್ಳುವಿಕೆಯನ್ನು ಖಚಿತಪಡಿಸುತ್ತದೆ ಎಂಬ ಪ್ರಧಾನಿ ಹೇಳಿಕೆಯನ್ನು ಪ್ರಕಟಿಸಬೇಕಾಯಿತು. 2047 ದೇಶದ ಸ್ವಾತಂತ್ರ್ಯದ ಶತಮಾನೋತ್ಸವ ಮತ್ತು ಬಿಜೆಪಿ ಸರಕಾರ ಆಶ್ವಾಸನೆ ನೀಡಿರುವ ‘ವಿಕಸಿತ ಭಾರತ’ ಸಾಕಾರಗೊಳ್ಳುವ ವರ್ಷ ಕೂಡ.

ಸೆನ್ಸರ್ ಮಂಡಳಿಯು ಹಿಂದುತ್ವ ಬ್ರಿಗೇಡ್ ಮುಂದೊತ್ತುವ ಭಾರತೀಯ ಸಂಸ್ಕೃತಿಯನ್ನು ಗೌರವಿಸದ ಚಿತ್ರ ನಿರ್ಮಾಪಕರನ್ನು ಶಿಕ್ಷಿಸುತ್ತದೆ. ಜಾನಕಿ ಎಂಬ ಪಾತ್ರವನ್ನು ಹೊಂದಿರುವ ಎರಡು ಮಲಯಾಳಂ ಚಲನಚಿತ್ರಗಳನ್ನು ಮಂಡಳಿ ಇತ್ತೀಚೆಗೆ ತಡೆ ಹಿಡಿಯಿತು. ‘ಜಾನಕಿ ವಿ/ಎಸ್ ಸ್ಟೇಟ್ ಆಫ್ ಕೇರಳ’ ಸಿನೆಮಾ ಅದರ ಶೀರ್ಷಿಕೆಯಿಂದ ಸೆನ್ಸರ್ ಮಂಡಳಿಯ ಆಕ್ಷೇಪಗಳನ್ನು ಎದುರಿಸಿತು. ಇದರಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ಸಂಸದ ಸುರೇಶ್ ಗೋಪಿ, ಲೈಂಗಿಕ ದೌರ್ಜನ್ಯದಿಂದ ಬದುಕುಳಿದವಳನ್ನು ಪ್ರತಿನಿಧಿಸುವ ವಕೀಲನ ಪಾತ್ರ ವಹಿಸಿದ್ದಾರೆ. ಜಾನಕಿ ರಾಮಾಯಣ ಮಹಾಕಾವ್ಯದ ನಾಯಕಿ ಸೀತೆಯ ಮತ್ತೊಂದು ಹೆಸರು. ಇನ್ನೂ ಬಿಡುಗಡೆ ಆಗಬೇಕಿರುವ ಮಲಯಾಳಂ ಚಿತ್ರ ‘ಟೋಕನ್ ನಂಬರ್’ನಲ್ಲಿ ಮೊದಲಿನ ಜಾನಕಿ ಅಬ್ರಹಾಂ ಎಂಬ ಪಾತ್ರವನ್ನು ಜಯಂತಿ ಎಂದು ಬದಲಿಸಲಾಯಿತು. ಈ ಎರಡೂ ಚಲನಚಿತ್ರಗಳಿಗೆ ಸೆನ್ಸರ್ ಮಂಡಳಿಯ ಒಂಭತ್ತು ಕೇಂದ್ರಗಳಲ್ಲಿ ಒಂದಾದ ತಿರುವನಂತಪುರಂನಲ್ಲಿರುವ ಕಚೇರಿ ಪ್ರದರ್ಶನಕ್ಕೆ ಅನುಮತಿ ನೀಡಿತ್ತು. ಆದರೆ, ಆನಂತರ ಅವುಗಳನ್ನು ಮುಂಬೈನಲ್ಲಿರುವ ಪ್ರಧಾನ ಕಚೇರಿಗೆ ಕಳುಹಿಸಲಾಯಿತು. ಪರಿಷ್ಕರಣೆ ಸಮಿತಿ ಬದಲಾವಣೆಗಳನ್ನು ಸೂಚಿಸಿತು.

ಸೆನ್ಸರ್ ವ್ಯವಸ್ಥೆಯಲ್ಲಿ ಬದಲಾವಣೆ

2021 ರವರೆಗೆ ಮೂರು ಹಂತದ ಪ್ರಮಾಣೀಕರಣ ಪ್ರಕ್ರಿಯೆ ಅನುಸರಿಸಲಾಗುತ್ತಿತ್ತು; ಆರಂಭಿಕ ಪರಿಶೀಲನೆ ಸಮಿತಿ, ಪರಿಷ್ಕರಣೆ ಸಮಿತಿ ಮತ್ತು ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ನ್ಯಾಯಮಂಡಳಿ. ಮೇಲ್ಮನವಿ ನ್ಯಾಯ ಮಂಡಳಿಯು ಸಿಬಿಎಫ್‌ಸಿಯ ಮೇಲ್ಮನವಿ ನ್ಯಾಯಾಲಯದಂತೆ ಕಾರ್ಯನಿರ್ವಹಿಸುತ್ತಿತ್ತು. ಚಲನಚಿತ್ರ ನಿರ್ಮಾಪಕರು ತಮಗೆ ಒಪ್ಪಿಗೆಯಾಗದ ತೀರ್ಪುಗಳನ್ನು ಇಲ್ಲಿ ಪ್ರಶ್ನಿಸಬಹುದಿತ್ತು. ಆನಂತರವೂ ನ್ಯಾಯ ಸಿಕ್ಕಿಲ್ಲ ಎಂದಾದರೆ, ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಬಹುದಿತ್ತು. ಆದರೆ, ಸರಕಾರ 2021ರಲ್ಲಿ ನ್ಯಾಯಮಂಡಳಿಯನ್ನು ರದ್ದುಗೊಳಿಸಿತು. ಇದರಿಂದ ಚಿತ್ರ ನಿರ್ಮಾಪಕರು ಸೆನ್ಸರ್ ಮಂಡಳಿಯ ಕಪಿಮುಷ್ಟಿಗೆ ಸಿಲುಕಿದರು. ಮಂಡಳಿಯ ನಿರ್ಧಾರ ಸಮ್ಮತವಾಗದಿದ್ದರೆ, ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಿತ್ತು. ಆರ್ಥಿಕವಾಗಿ ಬಲಾಢ್ಯ ನಿರ್ಮಾಪಕರು ಮಾತ್ರ ಇಂಥ ಸಾಹಸ ಮಾಡಬಹುದಷ್ಟೆ. ದುಬಾರಿ ಬಡ್ಡಿಗೆ ಸಾಲ ತೆಗೆದುಕೊಂಡು ಚಿತ್ರ ನಿರ್ಮಿಸಿರುವ ನಿರ್ಮಾಪಕರು, ವಿಚಾರಣೆಯಲ್ಲಿನ ವಿಳಂಬ ಮತ್ತು ಅಧಿಕ ವೆಚ್ಚದಿಂದಾಗಿ ಹೈರಾಣಾಗಿ ಹೋಗುತ್ತಾರೆ. ಚಿತ್ರ ಬಿಡುಗಡೆ ಮುಂದೆಹೋದಂತೆ ಅವರ ಆರ್ಥಿಕ ಸಂಕಷ್ಟಗಳು ಹೆಚ್ಚುತ್ತ ಹೋಗುತ್ತವೆ.

ಅಭಿಪ್ರಾಯಭೇದದ ಹತ್ತಿಕ್ಕುವಿಕೆ

ಅಭಿಪ್ರಾಯಭೇದದ ಹತ್ತಿಕ್ಕುವಿಕೆ ಬಿಜೆಪಿಗೆ ಮಾತ್ರ ಸೀಮಿತವಾಗಿಲ್ಲ. ವಸಾಹತುಶಾಹಿ ಯುಗದಿಂದ ಆರಂಭಿಸಿ, ಕಾಂಗ್ರೆಸ್ ಅಥವಾ ಕಾಂಗ್ರೆಸೇತರ ಸರಕಾರಗಳು ಸಾರ್ವಜನಿಕರು ಏನು ವೀಕ್ಷಿಸಬಹುದು ಅಥವಾ ಏನು ವೀಕ್ಷಿಸಬಾರದು ಎಂಬುದನ್ನು ನಿರ್ಧರಿಸುತ್ತಿವೆ. 2014ರಲ್ಲಿ ಎನ್‌ಡಿಎ ಸರಕಾರ ಬಂದಾಗ, ಈ ಪ್ರವೃತ್ತಿ ತೊಲಗಬಹುದೇನೋ ಎಂದು ಆಶಿಸಲಾಯಿತು. ಆದರೆ, ಸೆನ್ಸರ್‌ಶಿಪ್ ಇನ್ನಷ್ಟು ಹೆಚ್ಚಿತು. ನೈಜ ಘಟನೆಗಳಿಂದ ಪ್ರೇರಿತ ಚಲನಚಿತ್ರ ಅಥವಾ ಪ್ರದರ್ಶನ, ಸ್ಟ್ಯಾಂಡ್ ಅಪ್ ಕಾಮಿಡಿ, ರಾಜ್ಯ ವಿರೋಧಿಗಳ ಜೀವನಚರಿತ್ರೆ, ಸರಕಾರದ ನೀತಿಗಳು, ಪ್ರಧಾನಿ-ಸರಕಾರದ ಟೀಕೆ, ಪಾತ್ರವೊಂದರ ಹೆಸರು, ಕೇಸರಿ ಧ್ವಜ ಅಥವಾ ಕಮಲ ಸೇರಿದಂತೆ ಅಧಿಕೃತ ದೃಷ್ಟಿಕೋನಕ್ಕೆ ಹೊಂದಿಕೆಯಾಗದ ಎಲ್ಲವೂ ನಿಷೇಧಕ್ಕೆ ಬಲಿಯಾಗುತ್ತಿವೆ. ಅಮೆಝಾನ್ ಪ್ರೈಮ್ ಪ್ರಸಾರ ಮಾಡಿದ ಸರಣಿ ‘ತಾಂಡವ್’ (2021) ವಿರುದ್ಧ ದಾಖಲಾದ ಪ್ರಕರಣಗಳು ಮತ್ತು ನೆಟ್‌ಫ್ಲಿಕ್ಸ್ ನ ‘ತೀಸ್’ ಚಲನಚಿತ್ರವನ್ನು ರದ್ದುಗೊಳಿಸಿದ ರೀತಿಯನ್ನು ನೋಡಿದರೆ, ಸೆನ್ಸರ್ ಮಂಡಳಿ ತನ್ನ ಕಾರ್ಯವ್ಯಾಪ್ತಿಯನ್ನು ಮೀರಿ ಒಡೆಯರ ಆಣತಿಗೆ ಅನುಸಾರ ಕೆಲಸ ಮಾಡುತ್ತಿದೆ ಎನ್ನುವುದು ಸ್ಪಷ್ಟ. ಮೋಹನ್‌ಲಾಲ್ ನಾಯಕನಾಗಿ ನಟಿಸಿರುವ ಎಲ್‌2 ಎಂಪುರಾನ್, 2002ರಲ್ಲಿ ಗುಜರಾತಿನಲ್ಲಿ ನಡೆದ ಹತ್ಯಾಕಾಂಡದ 15 ನಿಮಿಷಗಳ ದೃಶ್ಯದಿಂದ ಆರಂಭಗೊಳ್ಳುತ್ತದೆ. ಸಾಬರಮತಿ ಎಕ್ಸ್‌ಪ್ರೆಸ್‌ನ ಬೋಗಿಯೊಂದರ ದಹನ, ಬಿಲ್ಕಿಸ್ ಬಾನು ಕುಟುಂಬದ ಸಾಮೂಹಿಕ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ 11 ಮಂದಿಗೆ ಶಿಕ್ಷೆ ಮತ್ತಿತರ ಉಲ್ಲೇಖಗಳನ್ನು ಒಳಗೊಂಡಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ಗೋಪಾಲಕೃಷ್ಣನ್, ನಿರ್ಮಾಪಕಿ ಸುಪ್ರಿಯಾ ಮೆನನ್(ನಟ ಪೃಥ್ವಿರಾಜ್ ಸುಕುಮಾರನ್ ಅವರ ಪತ್ನಿ) ಅವರನ್ನು ‘ನಗರ ನಕ್ಸಲ್’ ಎಂದು ಕರೆದರು; ಸಂಘದ ಮುಖವಾಣಿ ‘ಆರ್ಗನೈಸರ್’ ಚಿತ್ರದ ವಿರುದ್ಧ ಮೂರು ಲೇಖನ ಪ್ರಕಟಿಸಿತು. ಒಂದರಲ್ಲಿ ಪೃಥ್ವಿರಾಜ್ ಅವರನ್ನು ರಾಷ್ಟ್ರ ವಿರೋಧಿಗಳ ಧ್ವನಿ ಎಂದು ಹೆಸರಿಸಿತು. ಮೋಹನ್ ಲಾಲ್ ಒತ್ತಡಕ್ಕೆ ಸಿಲುಕಿ ಕ್ಷಮೆ ಕೋರಿದರು; 2.08 ನಿಮಿಷ ಕಾಲಾವಧಿಯ 20 ದೃಶ್ಯಗಳನ್ನು ಸ್ವಯಂ ಸೆನ್ಸರ್ ಮಾಡಲಾಯಿತು. ಇದು ಇಷ್ಟಕ್ಕೆ ನಿಲ್ಲಲಿಲ್ಲ; ಎಂಪುರಾನ್ ಸಹ ನಿರ್ಮಾಣದಿಂದ ಬಂದ ಹಣದ ವಿವರ ಕೇಳಿ ಪೃಥ್ವಿರಾಜ್ ಅವರಿಗೆ ನೋಟಿಸ್ ನೀಡಲಾಯಿತು; ಚಿತ್ರದ ಇನ್ನೊಬ್ಬ ನಿರ್ಮಾಪಕ ಹಾಗೂ ಉದ್ಯಮಿ, ಗೋಕುಲಂ ಗೋಪಾಲನ್ ಅವರ ಚಿಟ್‌ಫಂಡ್ ಕಂಪೆನಿ ಮೇಲೆ ಜಾರಿ ನಿರ್ದೇಶನಾಲಯ(ಈ.ಡಿ.) ದಾಳಿ ನಡೆಸಿತು.

ಸಿನೆಮಾ ಮಾತ್ರವಲ್ಲ: ವ್ಯಂಗ್ಯಚಿತ್ರಗಳು, ಸ್ಟಾರ್ಟ್ ಅಪ್ ಕಾಮಿಡಿ, ಕವನ ಕೂಡ ಈಗ ಎಫ್‌ಐಆರ್-ಸೆರೆವಾಸಕ್ಕೆ ದಾರಿ ಮಾಡಿಕೊಡುತ್ತಿವೆ. ಪ್ರಧಾನಿ ಅವರ ಅಮೆರಿಕ ಭೇಟಿಯನ್ನು ಟೀಕಿಸುವ ವ್ಯಂಗ್ಯಚಿತ್ರವನ್ನು ಪ್ರಕಟಿಸಿದ್ದರಿಂದ, ‘ವಿಕಟನ್ ಪ್ಲಸ್’ ಮ್ಯಾಗಝಿನ್‌ನ ಜಾಲತಾಣವನ್ನು ನಿರ್ಬಂಧಿಸಲಾಗಿದೆ ಎಂದು ವಿಕಟನ್ ಫೆ.10, 2025ರಂದು ದೂರು ನೀಡಿತು. ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ ಭಾರತೀಯರನ್ನು ಕೈಕೋಳ ತೊಡಿಸಿ ಕಳುಹಿಸಿದ್ದನ್ನು ಟೀಕಿಸಿದ್ದ ವಿಕಟನ್, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ಪ್ರಧಾನಿ ಕೈಕೋಳ ತೊಟ್ಟು ಕುಳಿತಿದ್ದ ವ್ಯಂಗ್ಯಚಿತ್ರವನ್ನು ಪ್ರಕಟಿಸಿತ್ತು. ಆಗ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕೆ. ಅಣ್ಣಾಮಲೈ ಈ ಸಂಬಂಧ ದೂರು ನೀಡಿದರು. ಮದ್ರಾಸ್ ಹೈಕೋರ್ಟ್ ವ್ಯಂಗ್ಯಚಿತ್ರವನ್ನು ತೆಗೆದುಹಾಕಬೇಕೆಂದು ಮಾರ್ಚ್ 7, 2025ರಂದು ಆದೇಶ ನೀಡಿತು. ‘‘ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಬೇಕು. ಆನಂತರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಬಂಧವನ್ನು ಹಿಂಪಡೆಯಬೇಕು’’ ಎಂದು ನ್ಯಾ.ಭರತ ಚಕ್ರವರ್ತಿ ಹೇಳಿದರು.

ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಗಢಿ ಅವರದು ಇನ್ನೊಂದು ಕತೆ. ಅವರು ಬರೆದಿದ್ದ ಕವನವು ಜಾತಿ ಮತ್ತು ಧರ್ಮದ ಆಧಾರದಲ್ಲಿ ದ್ವೇಷವನ್ನು ಉತ್ತೇಜಿಸುತ್ತದೆ ಎಂದು ಗುಜರಾತ್ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟಿನ ನ್ಯಾಯ ಮೂರ್ತಿಗಳಾದ ಎ.ಎಸ್. ಓಕಾ ಹಾಗೂ ಉಜ್ಜಲ್ ಭುಯಾನ್ ಅವರ ಪೀಠ, ‘‘ಪೊಲೀಸರಿಗೆ ಮೂಲಭೂತ ಹಕ್ಕುಗಳಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅರ್ಥವೇ ತಿಳಿದಿಲ್ಲ’’ ಎಂದು ಮಾರ್ಚ್ 3, 2025ರಂದು ಹೇಳಿತು. ಎಫ್‌ಐಆರ್ ವಜಾಗೊಳಿಸಬೇಕೆಂಬ ಮನವಿಯನ್ನು ಗುಜರಾತ್ ಹೈಕೋರ್ಟ್ ಜನವರಿ 2025ರಲ್ಲಿ ತಿರಸ್ಕರಿಸಿತ್ತು. ‘‘ಕಾವ್ಯ, ನಾಟಕ, ಸ್ಟ್ಯಾಂಡ್‌ಅಪ್ ಹಾಸ್ಯ ಮತ್ತು ಅಣಕದ ಮೂಲಕ ಅಭಿವ್ಯಕ್ತಿಯು ಮೂಲಭೂತ ಹಕ್ಕು’’ ಎಂದ ಸುಪ್ರೀಂ ಕೋರ್ಟ್, ಮಾರ್ಚ್ 28ರಂದು ಸಂಸದನ ಮೇಲಿನ ಎಫ್‌ಐಆರ್ ವಜಾಗೊಳಿಸಿತು.

‘‘ಭಾರತದಲ್ಲಿ ಮಹಿಳೆಯರನ್ನು ಹಗಲು ಪೂಜಿಸಲಾಗುತ್ತದೆ; ರಾತ್ರಿ ಅತ್ಯಾಚಾರ ಮಾಡಲಾಗುತ್ತದೆ’’ ಎಂಬ ಹೇಳಿಕೆಗೆ ನಟ ವೀರ್‌ದಾಸ್ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಸ್ಟ್ಯಾಂಡ್‌ಅಪ್ ಹಾಸ್ಯಗಾರ ಕುನಾಲ್ ಕಾಮ್ರಾ ತಮ್ಮ ‘ನಯಾಭಾರತ್’ ಪ್ರದರ್ಶನದಲ್ಲಿ 2022ರಲ್ಲಿ ಏಕನಾಥ ಶಿಂದೆ ಅವರು ಶಿವಸೇನೆಯ ಉದ್ಧವ್ ಠಾಕ್ರೆ ವಿರುದ್ಧ ನಡೆಸಿದ ಬಂಡಾಯ ಕುರಿತು ವ್ಯಂಗ್ಯವಾಡಿ, ‘ಗದ್ದರ್’ ಪದ ಬಳಸಿದ್ದರು. ಶಿಂದೆ ಬೆಂಬಲಿಗರು ಮುಂಬೈನ ಹ್ಯಾಬಿಟೇಟ್ ಸ್ಟುಡಿಯೋ ಧ್ವಂಸಗೊಳಿಸಿದರು. ಕ್ಷಮೆ ಕೋರಲು ನಿರಾಕರಿಸಿದ ಕಾಮ್ರಾ, ‘‘ನಾನು ಗುಂಪುಗಳಿಗೆ ಹೆದರುವುದಿಲ್ಲ. ಶಿಂದೆ ಬಗ್ಗೆ ಅಜಿತ್ ಪವಾರ್ ಅವರು ಹೇಳಿದ್ದನ್ನೇ ನಾನು ಪುನರಾವರ್ತಿಸಿದ್ದೇನೆ’’ ಎಂದು ಪ್ರತಿಕ್ರಿಯಿಸಿದರು. ಕಾಮ್ರಾ ಮೇಲೆ ಎಫ್‌ಐಆರ್ ದಾಖಲಿಸಲಾಯಿತು. ‘‘ಕಾಮ್ರಾ ಅವರಿಗೆ ಬುಕ್ ಮೈ ಶೋ ವೇದಿಕೆಯಲ್ಲಿ ಅವಕಾಶ ನೀಡ ಬಾರದು’’ ಎಂದು ಶಿವಸೇನೆಯ ಸಾಮಾಜಿಕ ತಾಣದ ಉಸ್ತುವಾರಿ ರಾಹುಲ್, ಬುಕ್ ಮೈ ಶೋ ಸಿಇಒ ಆಶೀಶ್ ಹೇಮ್‌ರಾಜಾನಿ ಅವರಿಗೆ ಪತ್ರ ಬರೆದಿದ್ದರು. ಅಧಿಕಾರಸ್ಥರ ಒತ್ತಡಕ್ಕೆ ಮಣಿದ ಬುಕ್ ಮೈ ಶೋ, ಕಾಮ್ರಾ ಅವರ ಕಾರ್ಯಕ್ರಮಗಳನ್ನು ಪಟ್ಟಿಯಿಂದ ತೆಗೆದುಹಾಕಿತು ಮತ್ತು ಅವರ ಕುರಿತ ಎಲ್ಲ ವಿವರಗಳನ್ನು ಆ್ಯಪ್‌ನಿಂದ ಅಳಿಸಿಹಾಕಿತು. ಮದ್ರಾಸ್ ಹೈಕೋರ್ಟ್ ಕಾಮ್ರಾ ಅವರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಿತು(ಮಾರ್ಚ್ 28, 2025).

ಪ್ರತಿಯಾಗಿ, ಬಿಜೆಪಿಯನ್ನು ಹೊಗಳುವ ಪ್ರೊಪಗಾಂಡಾ ಸಿನೆಮಾಗಳಿಗೆ ಸೆನ್ಸರ್ ಸಮಸ್ಯೆ ಇರುವುದಿಲ್ಲ. ಉದಾಹರಣೆಗೆ, ‘ಕೇರಳ ಸ್ಟೋರಿ’ಯಲ್ಲಿ ಕೇರಳ ವಿರುದ್ಧ ಅಪಪ್ರಚಾರ ಮತ್ತು ದ್ವೇಷ ಭಾಷಣಗಳಿದ್ದವು. ಹೀಗಿದ್ದರೂ, ಚಿತ್ರಕ್ಕೆ ಸೆನ್ಸರ್ ಕತ್ತರಿ ಬೀಳಲಿಲ್ಲ. ಪ್ರತಿಯಾಗಿ, ಬಿಜೆಪಿ ಸರಕಾರ ಇರುವ ಹಲವು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಯಿತು. ಸಿಬಿಎಫ್‌ಸಿ ಇತ್ತೀಚೆಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘಿಸಲ್ಪಟ್ಟ ‘ಸಂತೋಷ್’ ಸಿನೆಮಾಕ್ಕೆ ಅನುಮತಿ ನಿರಾಕರಿಸಿತು. ಪೊಲೀಸ್ ಹಿಂಸಾಚಾರ, ಜಾತಿ ತಾರತಮ್ಯ ಮತ್ತು ಸ್ತ್ರೀದ್ವೇಷವನ್ನು ಚಿತ್ರ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ದೇಶದಲ್ಲಿ ಚರಿತ್ರೆ ಮತ್ತು ಆತ್ಮಕತೆಗಳನ್ನು ರಾಜಕೀಯ ಪ್ರಾಬಲ್ಯ ಸಾಧಿಸಲು ಮತ್ತು ಬೇರೆ ಸಮುದಾಯಗಳನ್ನು ‘ಅನ್ಯ’ವಾಗಿಸಲು ಬಳಸುವುದು ಹೆಚ್ಚಿದೆ. ಇಂಥ ಚಿತ್ರಗಳಿಗೆ ಸೆನ್ಸರ್ ಅನುಮತಿ ಸುಲಭವಾಗಿ ಸಿಗುತ್ತದೆ.

ತಟಸ್ಥ ಸಂಸ್ಥೆಯೊಂದು ಅಗತ್ಯ

ರಾಜಕೀಯ ಎಲ್ಲವನ್ನೂ ಆವರಿಸಿರುವ ಯುಗವಿದು. ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ನ್ಯಾಯಮಂಡಳಿಯ ಅನುಪಸ್ಥಿತಿ ಮತ್ತು ಸೆನ್ಸರ್ ಮಂಡಳಿಯ ನಿರಂಕುಶ ವರ್ತನೆಯಿಂದಾಗಿ, ಸೆನ್ಸರ್ ಮಂಡಳಿ ಮತ್ತು ಚಿತ್ರ ನಿರ್ಮಾಪಕರ ಸೃಜನಶೀಲ ಹಕ್ಕುಗಳ ನಡುವೆ ಸಮತೋಲನ ಕಾಯ್ದುಕೊಳ್ಳಬಲ್ಲ ತಟಸ್ಥ ಸಂಸ್ಥೆಯೊಂದರ ಅಗತ್ಯವಿದೆ. ಸಿನೆಮಾಗಳ ಮೇಲೆ ಸೆನ್ಸರ್ ಮಂಡಳಿಯ ನಿಯಂತ್ರಣ ಆತ್ಯಂತಿಕವಾದದ್ದು; ಸೆನ್ಸರ್ ಪ್ರಮಾಣಪತ್ರವಿಲ್ಲದೆ ಚಿತ್ರಮಂದಿರಗಳಲ್ಲಿ ಸಿನೆಮಾ ಪ್ರದರ್ಶಿಸಲು ಸಾಧ್ಯವಿಲ್ಲ. ಸೆನ್ಸರ್ ಮೇಲ್ವಿಚಾರಣೆ ಚಲನಚಿತ್ರೋತ್ಸವಗಳಿಗೂ ವಿಸ್ತರಿಸುತ್ತದೆ; ಚಿತ್ರೋತ್ಸವಗಳ ಆಯೋಜಕರು ತಮ್ಮ ಆಯ್ಕೆಗಳನ್ನು ಸಚಿವಾಲಯದ ಅನುಮತಿ ಪಡೆದೇ ಅಂತಿಮಗೊಳಿಸಬೇಕಾಗುತ್ತದೆ. ಸ್ಟ್ರೀಮಿಂಗ್ ವೇದಿಕೆಗಳು ಸ್ವಯಂನಿಯಂತ್ರಿತ ನೀತಿಸಂಹಿತೆಯನ್ನು ಅನುಸರಿಸುತ್ತವೆ. ಅಪೂರ್ವಾ ಆರೋರಾ ವಿ/ಎಸ್ ಎನ್‌ಸಿಟಿ ಸರಕಾರ ದಿಲ್ಲಿ(2024) ಪ್ರಕರಣದಲ್ಲಿ ‘ಕಾಲೇಜ್ ರೊಮಾನ್ಸ್’ ಹೆಸರಿನ ಒಟಿಟಿ ಪ್ರದರ್ಶನದಲ್ಲಿ ಬಳಸಿದ ಭಾಷೆಯನ್ನು ವಿರೋಧಿಸಿ ಹೂಡಿದ್ದ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿತು. ‘‘ಒರಟು ಭಾಷೆ ಎಷ್ಟೇ ಅಸಹ್ಯಕರ ಮತ್ತು ಅನುಚಿತವಾಗಿದ್ದರೂ, ಅದು ತನ್ನಿಂದತಾನೇ ಅಶ್ಲೀಲವಾಗುವುದಿಲ್ಲ’’ ಎಂದು ಹೇಳಿತು.

ಸಿನೆಮಾ, ಕಾಮಿಡಿ ಶೋ ಇತ್ಯಾದಿ ಮೇಲೆ ಮುಗಿಬೀಳುವವರು ರಾಜಕಾರಣಿಗಳ ದ್ವೇಷ ಭಾಷಣ ಕುರಿತು ಮೌನವಾಗಿದ್ದಾರೆ. 2024ರ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ಸೇರಿದಂತೆ ಹಲವು ರಾಜಕಾರಣಿಗಳು ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣ ಮಾಡಿದರು. ಸಂಶೋಧನಾ ಗುಂಪು ‘ಇಂಡಿಯಾ ಹೇಟ್‌ಲ್ಯಾಬ್’ನ ಇತ್ತೀಚಿನ ಅಧ್ಯಯನದ ಪ್ರಕಾರ, 2024ರಲ್ಲಿ ರಾಜಕೀಯಸ್ಥರ ದ್ವೇಷ ಭಾಷಣ ಶೇ.74.4ರಷ್ಟು ಹೆಚ್ಚಿತು. ಹೀಗಿದ್ದರೂ, ಚುನಾವಣಾ ಆಯೋಗ ಮತ್ತು ಪೊಲೀಸರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ಪ್ರತಿಪಕ್ಷ ಗಳು ಕೂಡ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಿಲ್ಲ. ಹೆಚ್ಚಿನ ಟಿ.ವಿ. ಚಾನೆಲ್‌ಗಳು ದ್ವೇಷವನ್ನೇ ಉಸಿರಾಡುತ್ತವೆ. ಇದು ಸರಕಾರ-ನಾಗರಿಕ ಸಮಾಜವನ್ನು ಕಾಡಲಿಲ್ಲ.

ಎನ್‌ಡಿಎ ಆಡಳಿತದಲ್ಲಿ ಬದುಕುಳಿಯಲು ಮೌನವಾಗಿರಬೇಕು ಎಂಬುದನ್ನು ಹೆಚ್ಚಿನ ಚಿತ್ರ ನಿರ್ಮಾಪಕರು ಕಲಿತುಕೊಂಡಿದ್ದಾರೆ. ಎಂ.ಎಸ್. ಸತ್ಯು ಅವರ ‘ಗರಮ್ ಹವಾ’(1974), ದೇಶ ವಿಭಜನೆ ನಂತರ ಮುಸ್ಲಿಮ್ ಕುಟುಂಬವೊಂದು ಎದುರಿಸಿದ ಸಂಕಷ್ಟ ಕುರಿತ ಮೇರುಕೃತಿ. ಸಿನೆಮಾಕ್ಕೆ ಸೆನ್ಸರ್ ಮಂಡಳಿ ತಡೆ ನೀಡಿತ್ತು. ಆದರೆ, ಸತ್ಯು ಮಣಿಯಲಿಲ್ಲ. ಬಳಿಕ ಇಂದಿರಾ ಗಾಂಧಿ ಅವರು ಮಧ್ಯಸ್ಥಿಕೆ ವಹಿಸಿ, ಸಿನೆಮಾಕ್ಕೆ ಅನುಮತಿ ಕೊಡಿಸಿದರು. ಸಾಯಿ ಪರಾಂಜಪೆ ಕುಚೋದ್ಯದ ಮೂಲಕ ಸೆನ್ಸರ್ ಮಂಡಳಿಯನ್ನು ಖಂಡಿಸಿದ್ದರು. ಅವರ ಸಿನೆಮಾ ‘ಕಥಾ (1982)’ದಲ್ಲಿ ಪಾತ್ರಧಾರಿ ಬಾಶು (ಫಾರೂಕ್ ಶೇಕ್) ನೆರೆಹೊರೆಯವರಿಗೆ ‘ಮಹಿಳಾ ಹಾಸ್ಟೆಲ್ ಮುಂದೆ ನಡೆದು ಹೋಗುತ್ತಿರುವ ಅಮೆರಿಕನ್, ರಶ್ಯನ್ ಮತ್ತು ಭಾರತೀಯ’ ನ ಬಗ್ಗೆ ಹಾಸ್ಯ ಚಟಾಕಿ ಹೇಳಲು ಪ್ರಾರಂಭಿಸುತ್ತಾರೆ. ಎಲ್ಲರೂ ಜೋರಾಗಿ ನಗುತ್ತಾರೆ. ಆದರೆ, ಚಟಾಕಿಯ ಉಳಿದ ಭಾಗ ಪ್ರೇಕ್ಷಕರಿಗೆ ಕೇಳಿಸುವುದಿಲ್ಲ. ಧ್ವನಿಯನ್ನು ಮ್ಯೂಟ್ ಮಾಡಿ, ಪರದೆ ಮೇಲೆ ‘ಸೆನ್ಸರ್ ಮಾಡಲಾಗಿದೆ’ ಎಂಬ ಪದ ದೊಡ್ಡ ಅಕ್ಷರಗಳಲ್ಲಿ ಬರುತ್ತದೆ! ಈಗ ಈ ದೃಶ್ಯವನ್ನು ಸಂಪೂರ್ಣವಾಗಿ ಕತ್ತರಿಸಬೇಕಾಗುತ್ತಿತ್ತು!

ಸ್ಪಷ್ಟವಾಗಿ, ದೃಢವಾಗಿ, ಗಟ್ಟಿಯಾಗಿ ಹೇಳೋಣ; ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ; ಅದು ಮಾಡಿದ ಗಾಯಗಳು ಇಂದಿಗೂ ಮಾಸದೆ ಉಳಿದಿವೆ. ಆದರೆ, ಪ್ರತಿಪಕ್ಷಗಳು-ಅಭಿಪ್ರಾಯಭೇದ ಇರುವವರನ್ನು ಹಣಿಯಲು ಈ.ಡಿ.-ಆದಾಯ ತೆರಿಗೆ-ಸಿಬಿಐ ಬಳಕೆ, ಒಬ್ಬನೇ ನಾಯಕನ ವೈಭವೀಕರಣ, ಸಂಸತ್ತು ಸೇರಿದಂತೆ ಪ್ರಜಾಸತ್ತಾತ್ಮಕ ಸಂಸ್ಥೆಗಳ ಅಪಮೌಲ್ಯ ಮತ್ತು ದೇಶವ್ಯಾಪಿ ಅಸಹಿಷ್ಣುತೆ ಹೆಚ್ಚಳಗಳು ತುರ್ತುಪರಿಸ್ಥಿತಿಗಿಂತ ಹೇಗೆ ಭಿನ್ನ? 50 ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿಯನ್ನು ‘ಸಂವಿಧಾನ ಹತ್ಯಾ ದಿವಸ್’ವಾಗಿ ಆಚರಿಸುವ ಗೋಸುಂಬೆತನದಿಂದ ವಾಸ್ತವ ಮುಚ್ಚಿಹೋಗುವುದಿಲ್ಲ.

share
ಮಾಧವ ಐತಾಳ್
ಮಾಧವ ಐತಾಳ್
Next Story
X