Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ಸಂರಕ್ಷಣೆ ಕಾಯ್ದೆಗಳು ನಿಶ್ಶಕ್ತ:...

ಸಂರಕ್ಷಣೆ ಕಾಯ್ದೆಗಳು ನಿಶ್ಶಕ್ತ: ಭ್ರಷ್ಟಾಚಾರ, ಉದ್ಯಮಕ್ಕೆ ಕಾಡುಗಳ ಬಲಿ

ಮಾಧವ ಐತಾಳ್ಮಾಧವ ಐತಾಳ್26 Sept 2025 8:49 AM IST
share
ಸಂರಕ್ಷಣೆ ಕಾಯ್ದೆಗಳು ನಿಶ್ಶಕ್ತ: ಭ್ರಷ್ಟಾಚಾರ, ಉದ್ಯಮಕ್ಕೆ ಕಾಡುಗಳ ಬಲಿ

ದೇಶದ ಅರಣ್ಯಗಳು ಉಳ್ಳವರ ಪಾಲಾಗುತ್ತಿವೆ. ಆಗುಂಬೆಯಲ್ಲಿ ಕಾಳಿಂಗಗಳ ಸಂರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ವಹಿವಾಟು ಖಂಡನೀಯ; ಆಡಳಿತಶಾಹಿ ಈ ಅವ್ಯವಹಾರದಲ್ಲಿ ಕೈಜೋಡಿಸಿದೆ. ದೇವದಾರಿ ಗಣಿ ವಿರುದ್ಧ ಗ್ರಾಮಸಭೆ ನಿರ್ಣಯ ಕೈಗೊಂಡಿರುವುದರಿಂದ, ಅರಣ್ಯ ಸಂರಕ್ಷಣೆ ಕಾಯ್ದೆಯನ್ವಯ ಗಣಿಗಾರಿಕೆ ನಡೆಸುವಂತಿಲ್ಲ. ಆದರೆ, ವ್ಯವಸ್ಥೆ ಅಡ್ಡದಾರಿ ಹಿಡಿಯುತ್ತದೆ. ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್(ಪಿಎಸ್‌ಪಿ) ಯೋಜನೆಯು ಗುತ್ತಿಗೆದಾರರಿಂದ, ಗುತ್ತಿಗೆದಾರರಿಗಾಗಿ, ಗುತ್ತಿಗೆದಾರರಿಗೋಸ್ಕರ ರೂಪುಗೊಂಡಿರುವಂಥದ್ದು. ಕಾಂಚಾಣ ಎಲ್ಲವನ್ನೂ ಕೊಳ್ಳುತ್ತಿರುವ ಕಾಲದಲ್ಲಿ ಸಂರಕ್ಷಣೆಯ ಹಾದಿ ಅಸ್ಪಷ್ಟ ಮತ್ತು ಕಠಿಣ. ಪಂಜಾಬ್, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಪ್ರವಾಹದಿಂದ ಆಗಿರುವ ಪ್ರಾಣ-ಆಸ್ತಿ ಹಾನಿಯಿಂದ ನಾವು ಯಾವ ಪಾಠವನ್ನೂ ಕಲಿಯುವುದಿಲ್ಲ ಎನ್ನುವುದು ದುರಂತ.

ಆ ಗುಂಬೆಯ ಅರಣ್ಯದಲ್ಲಿ ಕಾಳಿಂಗ ಸರ್ಪಗಳ ದುರ್ಬಳಕೆ ಬಹಿರಂಗಗೊಂಡು ಈ ಸಂಬಂಧ ದೂರು ಸಲ್ಲಿಕೆಯಾಗಿದ್ದರೂ, ಅರಣ್ಯ ಇಲಾಖೆ-ಸರಕಾರ ಮೌನವಾಗಿವೆ; ಕುದುರೆಮುಖ ಕಬ್ಬಿಣ ಅದಿರು ಕಂಪೆನಿ(ಕೆಐಒಸಿಎಲ್)ಯ ದೇವದಾರಿ ಗಣಿ ವಿರುದ್ಧ ಗ್ರಾಮಸಭೆ ನಿರ್ಣಯ ಕೈಗೊಂಡಿದೆ. ಕರ್ನಾಟಕ ವಿದ್ಯುತ್ ನಿಗಮ ಯೋಜಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್(ಪಿಎಸ್‌ಪಿ) ಕುರಿತ ಸಾರ್ವಜನಿಕ ಅಹವಾಲು ಸಭೆಯಲ್ಲಿ ಯೋಜನೆ ವಿರುದ್ಧ ಸುಮಾರು 10 ಸಾವಿರ ಅಹವಾಲುಗಳು ಸಲ್ಲಿಕೆಯಾಗಿವೆ ಮತ್ತು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಜನ ಎಚ್ಚರಿಸಿದ್ದಾರೆ. ದೇಶದೆಲ್ಲೆಡೆ ಅರಣ್ಯಗಳು ಉದ್ಯಮಕ್ಕೆ, ಭ್ರಷ್ಟಾಚಾರಕ್ಕೆ ಬಲಿಯಾಗುತ್ತಿವೆ. ಸಂಪನ್ಮೂಲ ಸಮೃದ್ಧ ಛತ್ತೀಸ್‌ಗಡ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ದೇಶದೆಲ್ಲೆಡೆ ಅರಣ್ಯದ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆಯ ಪ್ರತಿಬಿಂಬದಂತೆ ಇವೆ.

ಮರುನಾಮಕರಣ

2023ರಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ(ಎಂಒಇಎಫ್‌ಸಿಸಿ) ಅರಣ್ಯ ಸಂರಕ್ಷಣೆ ಕಾಯ್ದೆ (ಎಫ್‌ಸಿಎ)ಗೆ ತಿದ್ದುಪಡಿ ತಂದು, ‘ವನ್ ಸಂರಕ್ಷಣ್ ಏವಂ ಸಂವರ್ಧನ್ ಅಧಿನಿಯಮ್’ ಎಂದು ನಾಮಕರಣ ಮಾಡಿತು. ಅರಣ್ಯವನ್ನು ಅರಣ್ಯೇತರ ಉದ್ದೇಶಗಳಿಗೆ ಕೊಡುವ, ‘ವ್ಯವಹಾರ ಸುಲಲಿತಗೊಳಿಸುವಿಕೆ’ ಕಾರ್ಯಸೂಚಿ ಇದರ ಹಿಂದೆ ಇತ್ತು. ಅರಣ್ಯ ಭೂಮಿ ಎಂದರೆ ನಿಘಂಟಿನ ಅರ್ಥದ ‘ಅರಣ್ಯ’ ಮಾತ್ರವಲ್ಲ; ಮಾಲಕತ್ವವನ್ನು ಲೆಕ್ಕಿಸದೆ ಸರಕಾರಿ ದಾಖಲೆಯಲ್ಲಿ ಅರಣ್ಯ ಎಂದು ದಾಖಲಿಸಿದ ಎಲ್ಲ ಪ್ರದೇಶವೂ ಸೇರುತ್ತದೆ ಎಂದು ಸುಪ್ರೀಂ ಕೋರ್ಟ್ ಡಿಸೆಂಬರ್ 12, 1996ರಂದು ಹೇಳಿತ್ತು (ಡಬ್ಯುಪಿಸಿ, 202/1995). ಆದರೆ, 2023ರ ತಿದ್ದುಪಡಿಯು ಸುಪ್ರೀಂ ಕೋರ್ಟ್‌ನ ವ್ಯಾಖ್ಯಾನವನ್ನು ಹಿಂಪಡೆದಿದೆ. 1.99 ಲಕ್ಷ ಚದರ ಕಿ.ಮೀ. ಅರಣ್ಯವನ್ನು ಬೇರೆ ಉದ್ದೇಶಕ್ಕೆ ನೀಡಬಹುದೇ ಅಥವಾ ಬೇಡವೇ ಎಂದು ನಿರ್ಧರಿಸುವ ಅಧಿಕಾರವನ್ನು ಅರಣ್ಯಾಧಿಕಾರಿಗಳಿಂದ ಕಿತ್ತುಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಚನೆಯಾದ ತಜ್ಞರ ಸಮಿತಿಗಳು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಗುರುತಿಸಿದ ಅರಣ್ಯಗಳ ವಿವರ ಇನ್ನಷ್ಟೇ ಗೊತ್ತಾಗಬೇಕಿದೆ.

ದೇಶದ ಅರಣ್ಯಗಳ ಪರಿಸ್ಥಿತಿ ವರದಿ(ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್) 2023ರ ಪ್ರಕಾರ, ದೇಶದಲ್ಲಿ 7,15,342.61 ಚದರ ಕಿ.ಮೀ. ಅಥವಾ ಶೇ.21.76ರಷ್ಟು ಅಧಿಸೂಚಿತ ಕಾಡುಗಳಿವೆ. ಕೆಲವು ನಿವೃತ್ತ ಅರಣ್ಯ ಅಧಿಕಾರಿಗಳು ಮತ್ತು ಇತರರು ಸಲ್ಲಿಸಿದ ಅರ್ಜಿ(ಡಬ್ಯ್ಲುಪಿಸಿ ಸಂಖ್ಯೆ 1164/2023)ಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಅರಣ್ಯ ಎಂದರೇನು ಎಂಬುದಕ್ಕೆ ಸೇರ್ಪಡೆಯನ್ನು ಹೊರತುಪಡಿಸುವ ಕ್ರಮಗಳಿಗೆ ತಡೆ ನೀಡಿತು. ಇದರಿಂದ ಅಧಿಸೂಚಿತ ‘ಅರಣ್ಯ’ಗಳಿಗಿಂತ ಹೆಚ್ಚು ಪ್ರಮಾಣದಲ್ಲಿರುವ ಇತರ ಕಾಡುಗಳ ಮೇಲಿನ ಅಧಿಕಾರಿಗಳ ಆಧಿಪತ್ಯ ಅಬಾಧಿತವಾಗಿ ಮುಂದುವರಿಯಿತು.

ಮೇ 2002ರಲ್ಲಿ ಅರಣ್ಯ ಇಲಾಖೆ ಆದೇಶದನ್ವಯ ದೇಶದೆಲ್ಲೆಡೆ ಅರಣ್ಯ ತೆರವು ನಡೆದಿತ್ತು. ಇದನ್ನು ವಿರೋಧಿಸಿ ಆದಿವಾಸಿಗಳು-ಸಾರ್ವಜನಿಕರು ತೀವ್ರ ಹೋರಾಟ ನಡೆಸಿದ್ದರು. ಆಕ್ರೋಶವನ್ನು ತಣಿಸಲು ಸಂಸತ್ತು ಪರಿಶಿಷ್ಟ ಬುಡಕಟ್ಟುಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯ್ದೆ 2006 (ಎಫ್‌ಆರ್‌ಎ) ಜಾರಿಗೊಳಿಸಿತು. 2009ರಲ್ಲಿ ಅರಣ್ಯ ಮಂತ್ರಾಲಯವು ಆಹಾರ ಮತ್ತು ಕೃಷಿ ಸಂಸ್ಥೆ(ಎಫ್‌ಎಒ)ಗೆ ಸಲ್ಲಿಸಿದ ವರದಿಯಲ್ಲಿ ‘ಸುಮಾರು 40 ದಶಲಕ್ಷ ಹೆಕ್ಟೇರ್ ಅರಣ್ಯವನ್ನು ಗ್ರಾಮ ಮಟ್ಟದ ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ನಿಯೋಜಿಸಲಾಗಿದೆ. ಎಫ್‌ಆರ್‌ಎಗೆ ಅನುಗುಣವಾಗಿ ಇನ್ನಿತರ ಅರಣ್ಯ ಸಂಬಂಧಿತ ಕಾನೂನುಗಳ ಸುಧಾರಣೆ ಅಗತ್ಯವಿದೆ’ ಎಂದು ಹೇಳಿತ್ತು. ಎಫ್‌ಆರ್‌ಎ ವಿರುದ್ಧ ವಿವಿಧ ಹೈಕೋರ್ಟ್‌ಗಳಲ್ಲಿ ನಿವೃತ್ತ ಅರಣ್ಯಾಧಿಕಾರಿಗಳು ಮತ್ತು ಸರಕಾರೇತರ ಸಂಸ್ಥೆಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಆದರೆ, ನ್ಯಾಯಾಲಯ ಕಾನೂನಿನ ಅನುಷ್ಠಾನಕ್ಕೆ ತಡೆ ನೀಡಿಲ್ಲ.

ಗ್ರಾಮಸಭೆಗಳಿಗೆ ಅಧಿಕಾರ

ಅರಣ್ಯ ಸಂರಕ್ಷಣೆ ಕಾಯ್ದೆಯನ್ನು ಅಕ್ಷರಶಃ ಪಾಲಿಸಿದರೆ, ದೇಶದ ಅರ್ಧಕ್ಕಿಂತ ಹೆಚ್ಚು ಅರಣ್ಯಗಳನ್ನು ಅರಣ್ಯ ಇಲಾಖೆಯು ಅರಣ್ಯವಾಸಿಗಳ ಗ್ರಾಮಸಭೆಗಳ ಸುಪರ್ದಿಗೆ ವರ್ಗಾಯಿಸಬೇಕಾಗು ತ್ತದೆ. ಗ್ರಾಮಸಭೆಗಳು ಅರಣ್ಯ, ವನ್ಯಜೀವಿ ಮತ್ತು ಜೀವವೈವಿಧ್ಯದ ಸಂರಕ್ಷಣೆ, ನಿಯಂತ್ರಣ ಮತ್ತು ನಿರ್ವಹಣೆ ಮಾತ್ರವಲ್ಲದೆ, ಅರಣ್ಯವನ್ನು ಅರಣ್ಯೇತರ ಉದ್ದೇಶಕ್ಕೆ ನೀಡುವ ಅಧಿಕಾರವನ್ನೂ ಹೊಂದಿವೆ. ಇಂಥ ಸನ್ನಿವೇಶದಲ್ಲಿ 2023ರ ಅರಣ್ಯ ಸಂರಕ್ಷಣೆ ಕಾನೂನು ಆಡಳಿತದ ನೆರವಿಗೆ ಬಂದಿತು. ಅರಣ್ಯ ಪರಿವರ್ತನೆಗೆ ಅಗತ್ಯವಿದ್ದ ಗ್ರಾಮಸಭೆಯ ಒಪ್ಪಿಗೆಯೂ ಸೇರಿದಂತೆ ಎಫ್‌ಆರ್‌ಎ ಕಡ್ಡಾಯ ಅನುಸರಣೆ ಜವಾಬ್ದಾರಿಯನ್ನು ರಾಜ್ಯ ಸರಕಾರಗಳಿಗೆ ನೀಡಲಾಯಿತು. ಇದರಿಂದ ಅರಣ್ಯಾಧಿಕಾರಿಗಳು ತಮ್ಮ ಕಾನೂನು ಮತ್ತು ಭೌಗೋಳಿಕ ಅಧಿಕಾರವನ್ನು ವಿಸ್ತರಿಸಿಕೊಂಡರು; ಅರಣ್ಯ ಪರಿವರ್ತನೆಗೆ ಗ್ರಾಮಸಭೆಗಳ ಒಪ್ಪಿಗೆಯನ್ನು ತಳ್ಳಿಹಾಕಿದರು; ಮತ್ತು ಸಂಬಂಧವೇ ಇಲ್ಲದ ಕಾನೂನುಗಳನ್ನು ಉಲ್ಲೇಖಿಸಿ, ಜನಸಾಮಾನ್ಯರ ಅರಣ್ಯ ಹಕ್ಕುಗಳನ್ನು ತಳ್ಳಿಹಾಕುತ್ತಿದ್ದಾರೆ; ಹುಲಿ ಮೀಸಲು ಪ್ರದೇಶಗಳಿಂದ ‘ಸ್ವಯಂಪ್ರೇರಿತ ವಲಸೆ’ ನೆಪದಲ್ಲಿ ಅರಣ್ಯವಾಸಿಗಳನ್ನು ಹೊರತಳ್ಳುವುದಲ್ಲದೆ, ಅರಣ್ಯಗಳ ಗುತ್ತಿಗೆಯನ್ನು ಅರಣ್ಯ ಹಕ್ಕು ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲು ಅನುಮೋದನೆಗೆ ಕಾಯುತ್ತಿದ್ದಾರೆ. ಆದರೆ, ಅದೇ ಹೊತ್ತಿನಲ್ಲಿ ಅರಣ್ಯಗಳ ಒಂದು ಭಾಗದ ಮೇಲಿನ ಹಿಡಿತವನ್ನು ಗ್ರಾಮಸಭೆಗಳಿಗೆ ಬಿಟ್ಟು ಕೊಡಬೇಕಾಯಿತು ಮತ್ತು ಗ್ರಾಮಸಭೆಗಳ ಅಧಿಕಾರ-ಕಾರ್ಯಚಟುವಟಿಕೆಗಳನ್ನು ಅತಿಕ್ರಮಿಸುವ ಪ್ರಯತ್ನದಲ್ಲಿ ವಿಫಲರಾದರು.

ಗ್ರಾಮಸಭೆಗಳ ಸಮುದಾಯ ಅರಣ್ಯ ಸಂಪನ್ಮೂಲ(ಸಿಎಫ್‌ಆರ್) ಹಕ್ಕುಗಳನ್ನು ಗುರುತಿಸುವಲ್ಲಿ ಛತ್ತೀಸ್‌ಗಡ ಅಗ್ರಸ್ಥಾನದಲ್ಲಿದೆ. ಸಿಎಫ್‌ಆರ್ ಎನ್ನುವುದು ಗ್ರಾಮದ ಸಾಂಪ್ರದಾಯಿಕ ಅಥವಾ ಸಾಂಸ್ಕೃತಿಕ ಗಡಿಯೊಳಗೆ ಇರುವ ಅರಣ್ಯ; ಗ್ರಾಮಸಭೆಗಳು ಅದರ ಸಂರಕ್ಷಣೆ, ನಿಯಂತ್ರಣ ಮತ್ತು ನಿರ್ವಹಣೆ ಅಧಿಕಾರ ಹೊಂದಿವೆ. ರಾಜ್ಯದ 4,349 ಗ್ರಾಮಸಭೆಗಳ ಅಂದಾಜು 20,06,224 ಹೆಕ್ಟೇರ್ ಅರಣ್ಯವನ್ನು ಸಿಎಫ್‌ಆರ್ ಪ್ರದೇಶವೆಂದು ಘೋಷಿಸಲಾಗಿದೆ. ವಿಚಿತ್ರ ನಡೆಯೊಂದರಲ್ಲಿ ಅರಣ್ಯ ಇಲಾಖೆ ಮೇ 15, 2025ರಂದು ಸಿಎಫ್‌ಆರ್ ಪ್ರದೇಶಗಳ ನಿರ್ವಹಣೆಗೆ ತನ್ನನ್ನೇ ‘ನೋಡಲ್ ಏಜೆನ್ಸಿ’ ಎಂದು ಸ್ವಯಂ ಘೋಷಿಸಿಕೊಂಡಿತು! ಸೆಪ್ಟಂಬರ್ 2024ರಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ‘ಪ್ರಧಾನ ಮಂತ್ರಿ ಜನಜಾತೀಯ ಉನ್ನತ ಗ್ರಾಮ ಅಭಿಯಾನ (ಪಿಎಂ-ಜೆಯುಜಿಎ)’ದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ ಬಳಿಕ ನಡೆದ ಪಲ್ಲಟ ಇದು. ಇದರನ್ವಯ ಸಿಎಫ್‌ಆರ್ ಯೋಜನೆಯಡಿ ಪ್ರತೀ 100 ಹೆಕ್ಟೇರ್‌ಗೆ 15 ಲಕ್ಷ ರೂ. ಮತ್ತು ಅನುಷ್ಠಾನಕ್ಕೆ ಪ್ರತೀ ಹೆಕ್ಟೇರ್‌ಗೆ 15,000 ರೂ. ನೀಡಲಾಗುತ್ತದೆ; ಅಂದರೆ, ಛತ್ತೀಸ್‌ಗಡಕ್ಕೆ 6,000 ಕೋಟಿ ರೂ. ಅನುದಾನ ಲಭ್ಯವಾಗುತ್ತಿತ್ತು. ಈ ಭಾರೀ ಮೊತ್ತದ ಮೇಲೆ ಸರಕಾರದ ಕಣ್ಣು ಬಿದ್ದಿತು. ಇದಲ್ಲದೆ, ಬುಡಕಟ್ಟು ವ್ಯವಹಾರಗಳ ಸಚಿವಾಲಯ (ಮಿನಿಸ್ಟ್ರಿ ಆಫ್ ಟ್ರೈಬಲ್ ಅಫೇರ್ಸ್, ಎಂಒಟಿಎ)ವು 2015ರ ಸಿಎಫ್‌ಆರ್ ಮಾರ್ಗಸೂಚಿಗಳನ್ನು 2023ರ ಮಾರ್ಗಸೂಚಿಯಿಂದ ಸ್ಥಳಾಂತರಿಸಿತು. ನೂತನ ಮಾರ್ಗಸೂಚಿಗಳು ಅಧಿಕಾರಶಾಹಿಗೆ, ವಿಶೇಷವಾಗಿ, ಅರಣ್ಯ ಇಲಾಖೆಗೆ ಸಿಎಫ್‌ಆರ್ ಪ್ರದೇಶದ ನಿಯಂತ್ರಣಕ್ಕೆ ಅವಕಾಶ ಮಾಡಿಕೊಟ್ಟವು; ಗ್ರಾಮಸಭೆಗಳ ಸ್ವಾಯತ್ತೆ ದುರ್ಬಲಗೊಂಡಿತು. ಇಲಾಖೆಯ ಕ್ರಮಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಎಚ್ಚೆತ್ತ ಇಲಾಖೆ ಮುದ್ರಣದೋಷದ ನೆಪ ನೀಡಿ, ಜುಲೈ 3, 2025ರಂದು ಆದೇಶವನ್ನು ತಡೆ ಹಿಡಿಯಿತು.

ಇನ್ನೊಂದು ವಿಚಿತ್ರ ಬೆಳವಣಿಗೆಯಲ್ಲಿ ಅರಣ್ಯ ಇಲಾಖೆಯು ಅರಣ್ಯ ಅಭಿವೃದ್ಧಿ ನಿಗಮ(ಎಫ್‌ಡಿಸಿ)ಕ್ಕೆ ಗುತ್ತಿಗೆ ನೀಡಿದ 2,17,881 ಹೆಕ್ಟೇರ್ ಅರಣ್ಯವನ್ನು ಎಫ್‌ಆರ್‌ಎ ವ್ಯಾಪ್ತಿಯಿಂದ ಹೊರಗಿಟ್ಟಿತು. ಅರಣ್ಯ ಅಭಿವೃದ್ಧಿ ನಿಗಮವು ಜನವರಿ 2025ರಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿತು. ನಿಗಮಕ್ಕೆ ಗುತ್ತಿಗೆ ನೀಡಿದ ಅರಣ್ಯದ ಮೇಲೆ ಸಿಎಫ್‌ಆರ್ ಹಕ್ಕುಗಳನ್ನು ಸ್ಥಾಪಿಸಬಾರದು ಎಂದು ಬುಡಕಟ್ಟು ಮತ್ತು ಪರಿಶಿಷ್ಟ ಜಾತಿ ಇಲಾಖೆಗೆ ಮೇ 6, 2025ರಂದು ಅರ್ಜಿ ಸಲ್ಲಿಕೆಯಾಯಿತು. ನಿಗಮಕ್ಕೆ ನೀಡಿದ ಅರಣ್ಯದ ಮೇಲೆ ಗ್ರಾಮಸಭೆಗಳ ಹಕ್ಕುಗಳನ್ನು ರದ್ದುಗೊಳಿಸಬೇಕೆಂದು ಅರಣ್ಯ ಇಲಾಖೆ ಜೂನ್ 2025ರಲ್ಲಿ ಒತ್ತಾಯಿಸಿತು.

1995ರ ಸುಪ್ರೀಂ ಕೋರ್ಟ್ ಆದೇಶ(ಡಬ್ಲ್ಯುಪಿಸಿ 202)ಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಮಂತ್ರಾಲಯ, ಮರ ಆಧಾರಿತ ಕೈಗಾರಿಕೆ (ಸ್ಥಾಪನೆ ಮತ್ತು ನಿಯಂತ್ರಣ) ಮಾರ್ಗಸೂಚಿಗಳು 2016 ಬಳಸಿಕೊಂಡು ಅರಣ್ಯಾಧಿಕಾರಿಗಳ ಅಧಿಕಾರವನ್ನು ವಿಸ್ತರಿಸಿತು; ಮರ ಆಧಾರಿತ ಉದ್ಯಮ, ಅವುಗಳ ಸಾಮರ್ಥ್ಯ ವಿಸ್ತರಣೆ, ಮರಮಟ್ಟು ಸಂಗ್ರಹ-ಪೂರೈಕೆಯನ್ನು ನಿಯಂತ್ರಿಸುವ ಅಧಿಕಾರ ನೀಡಿತು. ಅರಣ್ಯಾಧಿಕಾರಿಗಳ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿ, ಕೃಷಿ ಭೂಮಿಯಲ್ಲಿರುವ ಮರಗಳ ಕಟಾವಿಗೆ ಮಾದರಿ ನಿಯಮಗಳನ್ನು ಅಳವಡಿಸಿಕೊಳ್ಳುವಂತೆ ರಾಜ್ಯ ಸರಕಾರಗಳಿಗೆ ಜೂನ್ 18, 2025 ರಂದು ಸೂಚಿಸಿತು.

ಸಾರ್ವಜನಿಕ ಸೌಲಭ್ಯ ನಿರ್ಮಾಣಕ್ಕೆ ತಡೆ

ಅರಣ್ಯ ಸಂರಕ್ಷಣೆ ಕಾಯ್ದೆ ಪ್ರಕಾರ, ಅರಣ್ಯ ಭೂಮಿಯಲ್ಲಿ 13 ಸಾರ್ವಜನಿಕ ಸೌಲಭ್ಯಗಳನ್ನು ಸ್ಥಾಪಿಸಲು ಅವಕಾಶವಿದೆ. ಅವೆಂದರೆ, ಶಾಲೆ, ಔಷಧಾಲಯ ಅಥವಾ ಆಸ್ಪತ್ರೆ, ಅಂಗನವಾಡಿ, ನ್ಯಾಯಬೆಲೆ ಅಂಗಡಿ, ವಿದ್ಯುತ್ ಮತ್ತು ದೂರಸಂಪರ್ಕ ಮಾರ್ಗ, ಕೆರೆ ಮತ್ತು ಇತರ ಸಣ್ಣ ಜಲಮೂಲ, ಕುಡಿಯುವ ನೀರು ಸರಬರಾಜು ಮತ್ತು ನೀರಿನ ಕೊಳವೆ ಮಾರ್ಗ, ಮಳೆಕೊಯ್ಲು ರಚನೆ, ಅಸಾಂಪ್ರದಾಯಿಕ ಇಂಧನ ಮೂಲ, ಕೌಶಲ ಉನ್ನತೀಕರಣ ಅಥವಾ ವೃತ್ತಿಪರ ತರಬೇತಿ ಕೇಂದ್ರ ಇತ್ಯಾದಿ. ಪ್ರತೀ ಮೂಲಸೌಲಭ್ಯಕ್ಕೆ ಒಂದು ಹೆಕ್ಟೇರ್‌ವರೆಗೆ ಅರಣ್ಯ ಭೂಮಿ ಬಳಸಲು ಮತ್ತು 75 ಮರ ಕಡಿಯಲು ಅನುಮತಿ ಇದೆ; ಇದಕ್ಕೆ ಗ್ರಾಮಸಭೆಯ ಶಿಫಾರಸು ಕಡ್ಡಾಯ. ಆದರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 (ಡಬ್ಲ್ಯುಎಲ್‌ಪಿಎ)ಯನ್ನು ಬಳಸಿಕೊಂಡ ಅಧಿಕಾರಿಗಳು ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ ಮತ್ತು ಹುಲಿ ಕಾಡುಗಳಲ್ಲಿ ಈ ಮೂಲಸೌಲಭ್ಯಗಳ ನಿರ್ಮಾಣವನ್ನು ತಡೆದರು; ವನ್ಯಜೀವಿ ಮಂಡಳಿಯ ಅನುಮತಿ ಅಗತ್ಯವೆಂದು ಹೇಳಲಾಯಿತು. ಆದರೆ, ಪರಿಸರ ಸಂರಕ್ಷಣಾ ಕಾಯ್ದೆ 1986ರ ಪ್ರಕಾರ, ಸಂರಕ್ಷಿತ ಅಥವಾ ಪರಿಸರ ಸೂಕ್ಷ್ಮ ವಲಯದಲ್ಲಿ ಗಣಿಗಾರಿಕೆ, ವಿದ್ಯುತ್ ಉತ್ಪಾದನೆ ಇತ್ಯಾದಿಗೆ ವನ್ಯಜೀವಿ ಮಂಡಳಿಯ ಪರವಾನಿಗೆ ಅಗತ್ಯವಿದೆ. ಒತ್ತಡಕ್ಕೆ ಮಣಿದ ಆದಿವಾಸಿ ವ್ಯವಹಾರಗಳ ಇಲಾಖೆ, ‘ಅರಣ್ಯ ಸಂರಕ್ಷಣೆ ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸದ ಹೊರತು ಇಂಥ ಅನುಮತಿ ಅಗತ್ಯವಿಲ್ಲ’ ಎಂದು ಜುಲೈ 2, 2025ರಂದು ತಿಪ್ಪೆ ಸಾರಿಸಿತು.

ಹುಲಿ ಕಾರಿಡಾರ್ ಉಲ್ಲಂಘನೆ

ಛತ್ತೀಸಗಡವನ್ನು ಅನುಸರಿಸಿದ ಪರಿಸರ ಮಂತ್ರಾಲಯ ಮತ್ತು ತೆಲಂಗಾಣದ ಅರಣ್ಯ ಇಲಾಖೆ, 1,492.88 ಚದರ ಕಿ.ಮೀ. ವಿಸ್ತೀರ್ಣದ ಹುಲಿ ಕಾರಿಡಾರ್‌ನ್ನು ಕುಮುರಂ ಭೀಮ್ ಸಂರಕ್ಷಿತ ಪ್ರದೇಶ ಎಂದು ಅಧಿಸೂಚನೆ ಹೊರಡಿಸಿದವು(ಮೇ 30, 2025). ಇದು ತೆಲಂಗಾಣದ ಕಾವಲ್ ಹುಲಿ ಕಾಡನ್ನು ಮಹಾರಾಷ್ಟ್ರದ ತಡೋಬ್-ಅಂಧಾರಿ ಹುಲಿ ಕಾಡಿನೊಂದಿಗೆ ಸಂಪರ್ಕಿಸುತ್ತದೆ. ಈ ಸಂರಕ್ಷಿತ ಪ್ರದೇಶವು 78 ಮೀಸಲು ಅರಣ್ಯ ವಲಯ ಮತ್ತು 339 ಹಳ್ಳಿಗಳನ್ನು ಒಳಗೊಂಡಿದೆ. ಇಲ್ಲಿನ ಅರಣ್ಯ ಗ್ರಾಮಸಭೆಗಳ ವ್ಯಾಪ್ತಿಗೆ ಬರುತ್ತದೆ. ಆಸಿಫಾಬಾದ್ ಮತ್ತು ಆದಿಲಾಬಾದ್ ಜಿಲ್ಲೆಗಳಲ್ಲಿ ವ್ಯಾಪಕ ಪ್ರತಿಭಟನೆ ಮತ್ತು ಬಂದ್ ನಡೆದ ಬಳಿಕ ಈ ಕಾನೂನುಬಾಹಿರ ಆದೇಶವನ್ನು ಜುಲೈ 21ರಂದು ಹಿಂಪಡೆಯಲಾಯಿತು.

ಸುಳ್ಳು ದತ್ತಾಂಶ ಹರಡುವಿಕೆ

1990ರಲ್ಲಿ ಅರಣ್ಯ ಮಂತ್ರಾಲಯವು 1980ರ ಹಿಂದಿನ ಎಲ್ಲ ಅತಿಕ್ರಮಣಗಳನ್ನು ಕ್ರಮಬದ್ಧಗೊಳಿಸಲು ಆದೇಶಿಸಿತು. ಇದರಿಂದ ತಮ್ಮದೇ ನೆಲದಲ್ಲಿ ‘ಅತಿಕ್ರಮಣಕಾರ’ರಾಗಿದ್ದ ಅರಣ್ಯವಾಸಿಗಳು ‘ಅರ್ಹ ಅತಿಕ್ರಮಣಕಾರ’ರಾಗಿ ಬದಲಾದರು. 2008ರಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ ಅನುಷ್ಠಾನಕ್ಕೆ ಬಂದ ಬಳಿಕ ‘ಅರ್ಹ ಅತಿಕ್ರಮಣಕಾರರು’ ಕಾನೂನುಬದ್ಧ ‘ಹಕ್ಕುದಾರ’ರಾದರು. ಆದರೆ, ಯಾರು ಕಾನೂನುಬದ್ಧ ಹಕ್ಕುದಾರರು ಮತ್ತು ಅವರು ಎಷ್ಟು ಅರಣ್ಯ ಭೂಮಿಯನ್ನು ಆಕ್ರಮಿಸಿಕೊಳ್ಳಲು ಅರ್ಹರು ಎಂಬುದು ಈವರೆಗೆ ಅಂತಿಮಗೊಂಡಿಲ್ಲ. ಅರಣ್ಯ ಹಕ್ಕುಗಳ ಕಾಯ್ದೆಯ ಸೆಕ್ಷನ್ 4(5), ‘ಅರಣ್ಯವಾಸಿಗಳನ್ನು ಅವರ ಸ್ವಾಧೀನದಲ್ಲಿರುವ ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸಬಾರದು’ ಎಂದು ಸ್ಪಷ್ಟವಾಗಿ ಹೇಳುತ್ತದೆ. ಅರಣ್ಯ ಹಕ್ಕುಗಳ ಕಾಯ್ದೆಯ ಅನುಷ್ಠಾನ ಸಮರ್ಪಕವಾಗಿಲ್ಲ ಎಂದು ಗ್ರಹಿಸಿದ ಆದಿವಾಸಿ ವ್ಯವಹಾರಗಳ ಮಂತ್ರಾಲಯ, ಸೆಪ್ಟಂಬರ್ 2024ರಲ್ಲಿ ವೇಗವರ್ಧನೆಗೆ ಮುಂದಾಯಿತು. ಏತನ್ಮಧ್ಯೆ ಪರಿಸರ ಮಂತ್ರಾಲಯ ವಾಸ್ತವಾಂಶವನ್ನು ತೆರೆದಿಡುವ ಬದಲು, ‘ಮಾರ್ಚ್ 2024ರ ಹೊತ್ತಿಗೆ ಸುಮಾರು 1.3 ದಶಲಕ್ಷ ಹೆಕ್ಟೇರ್ ಅರಣ್ಯ ಭೂಮಿ ಅತಿಕ್ರಮಣಕ್ಕೆ ಒಳಗಾಗಿದೆ’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಪ್ರಮಾಣಪತ್ರ ಸಲ್ಲಿಸಿತು. ಇದು ರಾಜ್ಯಗಳ ಅರಣ್ಯ ಇಲಾಖೆಗಳು ಸಚಿವಾಲಯಕ್ಕೆ ನೀಡಿದ ದೃಢೀಕರಿಸದ ದತ್ತಾಂಶ. ಹೀಗಿದ್ದರೂ, ಇಲಾಖೆ ಈ ದತ್ತಾಂಶವನ್ನು ಮಾಧ್ಯಮಗಳು ಮತ್ತು ನ್ಯಾಯಾಲಯಗಳಿಗೆ ಹಂಚಿತು. ಅತಿಕ್ರಮಣಕಾರರನ್ನು ತಕ್ಷಣ ಹೊರಹಾಕಿ ಕಾಡುಗಳನ್ನು ಉಳಿಸಬೇಕು ಎಂಬ ಕೂಗು ತೀವ್ರಗೊಂಡಿತು. ಇದಲ್ಲದೆ, ‘ಅರಣ್ಯ ಪರಿಸ್ಥಿತಿ ವರದಿ 2023’ರಲ್ಲಿ ಕಾಡುಗಳ ನಾಶಕ್ಕೆ ಅರಣ್ಯ ಸಂರಕ್ಷಣೆ ಕಾಯ್ದೆಯಡಿ ಕೊಟ್ಟ ಹಕ್ಕುಪತ್ರಗಳೂ ಕಾರಣ ಎಂದು ಪರಿಸರ ಮಂತ್ರಾಲಯ ದೂರಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬುಡಕಟ್ಟು ಮಂತ್ರಾಲಯ, ‘ಈ ಸಂಬಂಧ ಪುರಾವೆ ನೀಡಬೇಕು’ ಎಂದು ಒತ್ತಾಯಿಸಿತು; ಅರಣ್ಯ ಹಕ್ಕುಗಳ ಕಾಯ್ದೆಯು ಅತಿಕ್ರಮಣವನ್ನು ಕ್ರಮಬದ್ಧಗೊಳಿಸುವುದಿಲ್ಲ; ಅಸ್ತಿತ್ವದಲ್ಲಿರುವ ಹಕ್ಕುಗಳನ್ನು ಗುರುತಿಸುತ್ತದೆ ಎಂದು ಹೇಳಿತು(ಜುಲೈ 2,2025). ಪ್ರಗತಿಪರ ಕಾನೂನುಗಳಾದ ಅರಣ್ಯ ಸಂರಕ್ಷಣೆ ಕಾಯ್ದೆ ಮತ್ತು ಅರಣ್ಯ ಹಕ್ಕುಗಳ ಕಾಯ್ದೆಯನ್ನು ವ್ಯವಸ್ಥಿತವಾಗಿ ನಿಶ್ಶಕ್ತಗೊಳಿಸಲಾಗಿದೆ.

ಮಧ್ಯ ಭಾರತದಲ್ಲಿ ನಡೆಯುತ್ತಿರುವ ನಕ್ಸಲರ ಹತ್ಯೆಗಳು ಕೂಡ ಕಾಡುಗಳನ್ನು ಉದ್ಯಮಿಗಳಿಗೆ ತೆರೆಯುವ ಕಾರ್ಯನೀತಿಯ ಒಂದು ಭಾಗ. 2005ರಲ್ಲಿ ನಕ್ಸಲರಿಗೆ ಪ್ರತಿಯಾಗಿ ಸೃಷ್ಟಿಯಾದ ‘ಸಾಲ್ವಾ ಜುಡುಂ’ ಅನ್ನು ಯುಪಿಎ ಸರಕಾರ ಬೆಂಬಲಿಸಿತು. ಆಗ ಆರಂಭವಾದ ನಕ್ಸಲರ ವಿರುದ್ಧದ ಕದನವು ಎನ್‌ಡಿಎ ಆಡಳಿತದಲ್ಲಿ ವೇಗ ಪಡೆದುಕೊಂಡಿತು. ಖನಿಜ ಸಮೃದ್ಧ ಕಾಡುಗಳನ್ನು ನಕ್ಸಲರ ಹಿಡಿತದಿಂದ ತೆರವುಗೊಳಿಸಿ, ಉದ್ಯಮಿಗಳಿಗೆ ಪರಭಾರೆ ಮಾಡಲಾಗುತ್ತಿದೆ. ಬಿಹಾರದ ಭಾಗಲ್ಪುರ ಜಿಲ್ಲೆಯ ಪಿರ್ಪೈಂಟಿಯಲ್ಲಿ ಅದಾನಿ ಗ್ರೂಪ್‌ನ ಅಂಗಸಂಸ್ಥೆ ಅದಾನಿ ಪವರ್‌ಗೆ ವಾರ್ಷಿಕ 1 ರೂ.ನಂತೆ 1,020 ಎಕರೆ ಭೂಮಿಯನ್ನು 25 ವರ್ಷ ಕಾಲ ಗುತ್ತಿಗೆಗೆ ನೀಡಿರುವುದು ಇದರ ಮುಂದುವರಿದ ಭಾಗ.

ದೇಶದ ಅರಣ್ಯಗಳು ಉಳ್ಳವರ ಪಾಲಾಗುತ್ತಿವೆ. ಆಗುಂಬೆಯಲ್ಲಿ ಕಾಳಿಂಗಗಳ ಸಂರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ವಹಿವಾಟು ಖಂಡನೀಯ; ಆಡಳಿತಶಾಹಿ ಈ ಅವ್ಯವಹಾರದಲ್ಲಿ ಕೈಜೋಡಿಸಿದೆ. ದೇವದಾರಿ ಗಣಿ ವಿರುದ್ಧ ಗ್ರಾಮಸಭೆ ನಿರ್ಣಯ ಕೈಗೊಂಡಿರುವುದರಿಂದ, ಅರಣ್ಯ ಸಂರಕ್ಷಣೆ ಕಾಯ್ದೆಯನ್ವಯ ಗಣಿಗಾರಿಕೆ ನಡೆಸುವಂತಿಲ್ಲ. ಆದರೆ, ವ್ಯವಸ್ಥೆ ಅಡ್ಡದಾರಿ ಹಿಡಿಯುತ್ತದೆ. ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್(ಪಿಎಸ್‌ಪಿ) ಯೋಜನೆಯು ಗುತ್ತಿಗೆದಾರರಿಂದ, ಗುತ್ತಿಗೆದಾರರಿಗಾಗಿ, ಗುತ್ತಿಗೆದಾರರಿಗೋಸ್ಕರ ರೂಪುಗೊಂಡಿರುವಂಥದ್ದು. ಕಾಂಚಾಣ ಎಲ್ಲವನ್ನೂ ಕೊಳ್ಳುತ್ತಿರುವ ಕಾಲದಲ್ಲಿ ಸಂರಕ್ಷಣೆಯ ಹಾದಿ ಅಸ್ಪಷ್ಟ ಮತ್ತು ಕಠಿಣ. ಪಂಜಾಬ್, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಪ್ರವಾಹದಿಂದ ಆಗಿರುವ ಪ್ರಾಣ-ಆಸ್ತಿ ಹಾನಿಯಿಂದ ನಾವು ಯಾವ ಪಾಠವನ್ನೂ ಕಲಿಯುವುದಿಲ್ಲ ಎನ್ನುವುದು ದುರಂತ.

share
ಮಾಧವ ಐತಾಳ್
ಮಾಧವ ಐತಾಳ್
Next Story
X