Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ದೇಶಿ ಕೃಷಿ ಕ್ಷೇತ್ರಕ್ಕೆ ಆಮದು-ಕುಲಾಂತರಿ...

ದೇಶಿ ಕೃಷಿ ಕ್ಷೇತ್ರಕ್ಕೆ ಆಮದು-ಕುಲಾಂತರಿ ಪ್ರಹಾರ

ಮಾಧವ ಐತಾಳ್ಮಾಧವ ಐತಾಳ್14 Nov 2025 10:50 AM IST
share
ದೇಶಿ ಕೃಷಿ ಕ್ಷೇತ್ರಕ್ಕೆ ಆಮದು-ಕುಲಾಂತರಿ ಪ್ರಹಾರ

ದೇಶದ ಕೋಟ್ಯಂತರ ಸಣ್ಣ ಹಿಡುವಳಿದಾರರು ಬರ, ಪ್ರವಾಹ, ಕೀಟ ಹಾವಳಿ, ಸಾಲದೊಂದಿಗೆ ಹೋರಾಡುತ್ತಿದ್ದಾರೆ. ಅವರ ಬದುಕು ಅಸ್ಥಿರವಾಗಿದೆ. ಎಂಥ ಸನ್ನಿವೇಶದಲ್ಲೂ ಕುಲಾಂತರಿಗಳಿಗೆ ಅವಕಾಶ ಮಾಡಿಕೊಡಬಾರದು ಮತ್ತು ಕೃಷಿ ಕ್ಷೇತ್ರವನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ತೆರೆಯ ಬಾರದು; ಸರಕಾರ ದಿಟ್ಟತೆಯಿಂದ ಅಮೆರಿಕಕ್ಕೆ ತಿರಸ್ಕಾರ ತೋರಿಸಬೇಕಿದೆ. ಆದರೆ, ಎನ್ಡಿಎ 3.0ಕ್ಕೆ ಆ ದಮ್, ತಾಕತ್ ಇದೆಯೇ?

ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಜಾಗತಿಕ ಮಟ್ಟದಲ್ಲಿ ಅಮೆರಿಕದ ದಬ್ಬಾಳಿಕೆ ಹೆಚ್ಚಿದೆ. ಮಾಗಾ(ಮೇಕ್ ಅಮೆರಿಕ ಗ್ರೇಟ್ ಎಗೇನ್) ಎಂದು ಘೋಷಿಸುತ್ತ, ಕುಸಿದಿರುವ ಉತ್ಪಾದನೆ ಪ್ರವೃತ್ತಿಯನ್ನು ಪ್ರೋತ್ಸಾಹಿಸಲು ಬೇರೆ ದೇಶಗಳ ಕುತ್ತಿಗೆಯನ್ನು ಹಿಚುಕಲಾಗುತ್ತಿದೆ. ಪಾಶ್ಚಾತ್ಯ ದೇಶಗಳ ದಬ್ಬಾಳಿಕೆ ಮನಸ್ಥಿತಿ ಈಗಲೂ ಬದಲಾಗಿಲ್ಲ. 19ನೇ ಶತಮಾನದಲ್ಲಿ ಚೀನಾದ ದೊರೆ ದೇಶದೆಲ್ಲೆಡೆ ಅಫೀಮನ್ನು ನಿಷೇಧಿಸಿದರು. ಭಾರತದಲ್ಲಿ ಬೆಳೆದ ಅಫೀಮನ್ನು ಚೀನಾಕ್ಕೆ ಕಳಿಸಿ ಹಣ ಲೂಟಿ ಹೊಡೆಯುತ್ತಿದ್ದ ಬ್ರಿಟಿಷ್ ವರ್ತಕರಿಗೆ ನಷ್ಟವುಂಟಾಗಿ, ಸಿಟ್ಟಿಗೆದ್ದರು. ವ್ಯಾಪಾರ ನೀತಿಯನ್ನು ಬದಲಿಸಬೇಕು ಹಾಗೂ ಚೀನಾದ ಮೇಲೆ ಯುದ್ಧ ಸಾರಬೇಕೆಂದು ಸರಕಾರದ ಮೇಲೆ ಒತ್ತಡ ಹೇರಿದರು. 1828ರ ಅಮೆರಿಕ ಟ್ಯಾರೀಫ್, ಆಮದು ಉತ್ಪನ್ನಗಳ ಮೇಲೆ ಭಾರೀ ತೆರಿಗೆ ವಿಧಿಸಿತು. ಕೃಷಿಯನ್ನು ಆಧರಿಸಿದ ದಕ್ಷಿಣದ ರಾಜ್ಯಗಳು ಇದನ್ನು ವಿರೋಧಿಸಿದ್ದರಿಂದ, ದಕ್ಷಿಣ ಹಾಗೂ ಉತ್ತರದ ರಾಜ್ಯಗಳ ನಡುವೆ ಸಂಘರ್ಷ ಉಂಟಾಯಿತು. 1929ರ ಮಹಾ ಹಿಂಜರಿತದ ಬಳಿಕ 1930ರಲ್ಲಿ ಜಾರಿಯಾದ ಸ್ಮೂಟ್-ಹಾಲೆ ಟ್ಯಾರೀಫ್ ಕಾಯ್ದೆಯು 20,000ಕ್ಕೂ ಅಧಿಕ ಆಮದು ಉತ್ಪನ್ನಗಳ ಮೇಳೆ ಭಾರೀ ಸುಂಕ ವಿಧಿಸಿತು. ಈ ಚಾಳಿಯನ್ನು ಮುಂದುವರಿಸಿರುವ ಅಮೆರಿಕ, ಸಿಲಿಕಾನ್ ಕಣಿವೆಯ ಏಕಸ್ವಾಮ್ಯ ಕಾರ್ಯಾಚರಣೆ(ಇ-ವಾಣಿಜ್ಯ, ಕ್ರಿಪ್ಟೋ ವಹಿವಾಟು ಅಥವಾ ಸಾಮಾಜಿಕ ಮಾಧ್ಯಮ)ಗೆ ತಡೆ ಒಡ್ಡುವವರ ಮೇಲೆ ದಂಡದ ರೂಪದಲ್ಲಿ ಸುಂಕವನ್ನು ಹೇರುತ್ತಿದೆ.

ಭಾರತ ತನ್ನ ಕೃಷಿ ಕ್ಷೇತ್ರವನ್ನು ಮುಕ್ತಗೊಳಿಸಬೇಕು (ಹೈನುಗಾರಿಕೆ, ಕೋಳಿ ಸಾಕಣೆ, ಕೃಷಿ ಉತ್ಪನ್ನಗಳಾದ ಸೋಯಾ/ಗೋಧಿ/ಭತ್ತ, ಬಾದಾಮಿ, ಸೇಬು ಇತ್ಯಾದಿ) ಎಂದು ಅಮೆರಿಕ ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದೆ. ದೃವೀಕೃತ ಸ್ವಾಭಾವಿಕ ಅನಿಲ(ಎಲ್ಎನ್ಜಿ), ಕಚ್ಚಾ ತೈಲ, ವಿಮಾನ-ವೈಮಾನಿಕ ಸಾಧನ, ಶಸ್ತ್ರಾಸ್ತ್ರಗಳು ಮತ್ತು ಕೃಷಿ ಉತ್ಪನ್ನಗಳನ್ನು ಹೆಚ್ಚು ಪ್ರಮಾಣದಲ್ಲಿ ಖರೀದಿಸಬೇಕು ಎಂದು ಒತ್ತಡ ಹೇರುತ್ತಿದೆ. ಅಮೆರಿಕದ ಕಂಪೆನಿಗಳಿಗೆ ಸರಕಾರಿ ಖರೀದಿಯಲ್ಲಿ ಅವಕಾಶ, ಭಾರೀ ತಂತ್ರಜ್ಞಾನ ಕಂಪೆನಿಗಳಿಗೆ ಅನಿರ್ಬಂಧಿತ ತಂತ್ರಾಂಶ ವರ್ಗಾವಣೆ, ಪೇಟೆಂಟ್ ಕಾಯ್ದೆ ತೆಳುಗೊಳಿಸುವುದು, ಅಮೆಝಾನ್/ವಾಲ್ಮಾರ್ಟ್ನಂಥ ಇ-ವಾಣಿಜ್ಯ ಕಂಪೆನಿಗಳಿಗೆ ನಿಯಮಗಳ ಸಡಿಲಿಕೆಗೆ ಒತ್ತಾಯಿಸುತ್ತಿದೆ. ಭಾರತ ಸರಕಾರ ಇತ್ತೀಚೆಗೆ ಉಪಗ್ರಹ ಅಂತರ್ಜಾಲ ಸೇವಾ ಸಂಸ್ಥೆ ಸ್ಟಾರ್ಲಿಂಕ್ಗೆ ಅನುಮತಿ ನೀಡಿದೆ.

ಟ್ರಂಪ್ ಈಗಾಗಲೇ ಬ್ರಿಕ್ಸ್(ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಗುಂಪು; ಇತ್ತೀಚೆಗೆ ಈಜಿಪ್ಟ್, ಇಥಿಯೋಪಿಯಾ, ಇಂಡೋನೇಶ್ಯ, ಇರಾನ್, ಸೌದಿ ಅರೇಬಿಯ ಮತ್ತು ಯುಎಇ ಸೇರ್ಪಡೆಯಾಗಿವೆ) ದೇಶಗಳ ಮೇಲೆ ಶೇ.10 ಮತ್ತು ರಶ್ಯದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ದೇಶಗಳ ಮೇಲೆ ಶೇ.500 ಶುಲ್ಕ ಹೇರಿದ್ದಾರೆ. ಎಕ್ಸ್ ಸಾಮಾಜಿಕ ವೇದಿಕೆಯಿಂದ ಕೆಲವು ಸಂದೇಶಗಳನ್ನು ತೆಗೆದುಹಾಕಬೇಕೆಂದು ಆದೇಶಿಸಿದ್ದ ಬ್ರೆಝಿಲ್ಗೆ ಶೇ.50 ಸುಂಕ ವಿಧಿಸಿದ್ದಾರೆ. ಅಮೆರಿಕ ಮಾಡಿಕೊಳ್ಳುವ ಹೆಚ್ಚಿನ ವ್ಯಾಪಾರ ಒಪ್ಪಂದಗಳು ಮಸಾಲಾ (ಮ್ಯೂಚುಯಲಿ ಅಗ್ರೀಡ್ ಸೆಟ್ಲ್ಮೆಂಟ್ಸ್ ಅಚೀವ್ಡ್ ಥ್ರೂ ಲಿವರೇಜ್ಡ್ ಆರ್ಮ್ ಟ್ವಿಸ್ಟಿಂಗ್ ಅಂದರೆ, ಕೈ ತಿರುಚಿ, ಮೂಗು ಹಿಡಿದು ಮಾಡುವಂಥವು) ಒಪ್ಪಂದಗಳು. ಅಮೆರಿಕ 20ಕ್ಕೂ ಹೆಚ್ಚು ದೇಶಗಳೊಟ್ಟಿಗೆ ಮಾತುಕತೆ ನಡೆಸುತ್ತಿದೆ ಮತ್ತು 90ಕ್ಕೂ ಅಧಿಕ ದೇಶಗಳಿಂದ ಹೆಚ್ಚು ವಿನಾಯಿತಿ ಕೇಳುತ್ತಿದೆ.

ಹೈನುಗಾರಿಕೆ, ಕೃಷಿ, ಆಹಾರ ಕ್ಷೇತ್ರಕ್ಕೆ ಲಗ್ಗೆ

ಭಾರತದ ಹೈನುಗಾರಿಕೆ, ಕೃಷಿ, ಪಶು-ಕೋಳಿ ಸಾಕಣೆ ಮತ್ತು ಆಹಾರ ಕ್ಷೇತ್ರದ ಮೇಲೆ ಅಮೆರಿಕ ಕಣ್ಣಿರಿಸಿದೆ. ದೇಶದಲ್ಲಿ 700 ದಶಲಕ್ಷಕ್ಕೂ ಅಧಿಕ ಮಂದಿ ಕೃಷಿಯನ್ನು ಆಧರಿಸಿದ್ದಾರೆ; ಚೀನಾದಲ್ಲಿ 350 ದಶಲಕ್ಷ, ಯುರೋಪಿಯನ್ ಯೂನಿಯನ್ 30 ದಶಲಕ್ಷ, ಜಪಾನ್ 4 ದಶಲಕ್ಷ ಹಾಗೂ ದಕ್ಷಿಣ ಕೊರಿಯಾ 1.5 ದಶಲಕ್ಷ ಮಂದಿ ಕೃಷಿ ಅವಲಂಬಿತರು ಇದ್ದಾರೆ. ಅಮೆರಿಕವು ಹೈನುಗಾರಿಕೆ ಉತ್ಪನ್ನ(ಚೀಸ್, ವೇ ಮತ್ತು ಹಾಲಿನ ಪುಡಿ)ಗಳಿಗೆ ಸುಂಕರಹಿತ ಪ್ರವೇಶಕ್ಕೆ ಒತ್ತಾಯಿಸುತ್ತಿದೆ. ಶೀತಲೀಕರಿಸಿದ ಕೋಳಿ ಕಾಲುಗಳಿಗೆ ಶೂನ್ಯ ಸುಂಕದಲ್ಲಿ ಪ್ರವೇಶಾವಕಾಶ ನೀಡಿದರೆ, ಅನೌಪಚಾರಿಕ ಕೋಳಿ ಸಾಕಣೆ ಕ್ಷೇತ್ರದಲ್ಲಿರುವ 30 ದಶಲಕ್ಷಕ್ಕೂ ಅಧಿಕ ಮಂದಿಗೆ ಹಾನಿಯುಂಟಾಗಲಿದೆ. ಭಾರತದಲ್ಲಿ ಕುಲಾಂತರಿ(ಜಿಎಂ, ಜೆನೆಟಿಕಲಿ ಮಾಡಿಫೈಡ್) ಪಶುಆಹಾರಕ್ಕೆ ನಿಷೇಧ ಹೇರಲಾಗಿದೆ. ಅಮೆರಿಕದಲ್ಲಿ ಆಹಾರವನ್ನು ಕುಲಾಂತರಿ ಇಲ್ಲವೇ ಕುಲಾಂತರಿ ಅಲ್ಲದ್ದು ಎಂದು ಪ್ರತ್ಯೇಕಿಸಬೇಕಿಲ್ಲ. ಯುರೋಪಿಯನ್ ಒಕ್ಕೂಟವು ಕುಲಾಂತರಿ ಬೆಳೆಗಳಿಗೆ ನಿಷೇಧ ಹೇರಿದೆ. ನಾವು ಅಮೆರಿಕದ ಕುಲಾಂತರಿ ಪಶು ಆಹಾರಕ್ಕೆ ಅವಕಾಶ ನೀಡಿದಲ್ಲಿ, ಯುರೋಪಿಯನ್ ಮಾರುಕಟ್ಟೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಭಟ್ಟಿ ಇಳಿಸುವ ಕಾರ್ಖಾನೆಗಳ ಕರಗಬಲ್ಲ ಒಣ ಕಾಳು(ಡಿಸ್ಟಿಲ್ಲರ್ಸ್ ಡ್ರೈಡ್ ಗ್ರೇನ್ಸ್ ವಿತ್ ಸಾಲ್ಯುಬಲ್ಸ್, ಡಿಡಿಜಿಎಸ್) ಹಾಗೂ ಗೋಧಿ/ಅಕ್ಕಿಗೆ ಮಾರುಕಟ್ಟೆ ಪ್ರವೇಶ, ಸೇಬಿಗೆ ಕಡಿಮೆ ಸುಂಕ ಹಾಗೂ ಸೋಯಾ ಎಣ್ಣೆಗೆ ತೆರಿಗೆ ಕಡಿಮೆಗೊಳಿಸಬೇಕೆಂದು ಆಗ್ರಹಿಸುತ್ತಿದೆ. ಇದರಿಂದ ಕಾಶ್ಮೀರ-ಹಿಮಾಚಲ ಪ್ರದೇಶದ ಸೇಬು ಬೆಳೆಗಾರರು ಮತ್ತು 6 ದಶಲಕ್ಷ ಸೋಯಾ ಬೆಳೆಗಾರರು ವಿಪರಿಣಾಮ ಎದುರಿಸಬೇಕಾಗುತ್ತದೆ. ಪ್ರಮುಖ ಬೆಳೆಗಳ ಮೇಲೆ ಸುಂಕ ಕಡಿತ-ರಿಯಾಯಿತಿಯಿಂದ, ಅಮೆರಿಕದ ಕಡಿಮೆ ಬೆಲೆಯ ಮತ್ತು ಸಬ್ಸಿಡಿ ಪಡೆದ ಆಹಾರ ದೇಶಿ ಮಾರುಕಟ್ಟೆಯಲ್ಲಿ ತುಂಬುತ್ತದೆ. ಇದರಿಂದ, ಬೆಲೆ ಕುಸಿದು, ರೈತರು ಕೃಷಿಯನ್ನು ತೊರೆಯುತ್ತಾರೆ; ಆಮದನ್ನು ಅವಲಂಬಿಸಬೇಕಾಗಿ ಬರುವುದರಿಂದ, ಕೋಟ್ಯಂತರ ಜನರ ಆಹಾರ ಸುಭದ್ರತೆ ಸಂಕಷ್ಟಕ್ಕೆ ಸಿಲುಕುತ್ತದೆ.

ದ್ವಿಪಕ್ಷೀಯ ಒಪ್ಪಂದಗಳಿಂದ ವ್ಯಾಪಾರ ವಿಸ್ತರಣೆ

ದ್ವಿಪಕ್ಷೀಯ ವ್ಯಾಪಾರ ಒಪ್ಪಂದ(ಬಿಟಿಎ)ಗಳ ಮೂಲಕ ಜಾಗತಿಕ ವ್ಯಾಪಾರ ನಡೆಯುತ್ತದೆ. ಭಾರತ ಕುಲಾಂತರಿ ಜೋಳದ ಮೇಲೆ ನಿಷೇಧ ಹೇರಿರುವುದರಿಂದ, ನಷ್ಟವಾಗುತ್ತಿದೆ ಎಂದು ಅಮೆರಿಕದ ರಾಷ್ಟ್ರೀಯ ಸಿಹಿಜೋಳ ಬೆಳೆಗಾರರ ಸಂಘ(ಎನ್ಜಿಸಿಎ) ದೂರುತ್ತಿದೆ. ಅಮೆರಿಕದಲ್ಲಿ ಬೆಳೆಯುವ ಒಟ್ಟು ಸಿಹಿಜೋಳದಲ್ಲಿ ಕುಲಾಂತರಿ ಪಾಲು ಶೇ.94. ಭಾರತ ಪಶುಆಹಾರದಲ್ಲಿ ಬಳಸುವ ಡಿಡಿಜಿಎಸ್ನ್ನು ನಿರ್ಬಂಧಿಸಿದೆ ಹಾಗೂ ಎಥೆನಾಲ್ ಆಮದಿನ ಮೇಲೆ ಮಿತಿ ಹೇರಿದೆ. ಅಮೆರಿಕದ ಕೃಷಿಕರು ಭಾರತದ ಜೊತೆಗಿನ ಒಪ್ಪಂದದಲ್ಲಿ ಸಿಹಿಜೋಳ ಮತ್ತು ಅದರ ಉತ್ಪನ್ನ(ಎಥೆನಾಲ್ ಮತ್ತು ಉಪಉತ್ಪನ್ನಗಳು)ಗಳನ್ನು ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಕುಲಾಂತರಿ ಸಿಹಿಜೋಳದ ಮೇಲಿನ ನಿರ್ಬಂಧ ತೆಗೆದರೆ 235 ದಶಲಕ್ಷ ಡಾಲರ್, ವಿಮಾನ ಇಂಧನ ಮಾರುಕಟ್ಟೆಯನ್ನು ಮುಕ್ತಗೊಳಿಸಿದರೆ 434 ದಶಲಕ್ಷ ಡಾಲರ್ ಮತ್ತು ಡಿಡಿಜಿಎಸ್ ಆಮದಿಗೆ ಸಮ್ಮತಿಸಿದರೆ 13.75 ದಶಲಕ್ಷ ಡಾಲರ್ ವಹಿವಾಟು ಆಗಲಿದೆ ಎಂದು ಎನ್ಸಿಜಿಎ ಹೇಳುತ್ತದೆ. ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಸಿಹಿಜೋಳ ಲಾಬಿಯನ್ನು ಬೆಂಬಲಿಸುತ್ತಿದ್ದಾರೆ.

ಅಮೆರಿಕದ ಸೋಯಾಬೀನ್ ಸಂಘ(ಎಎಸ್ಎ) ಕೂಡ ಸುಂಕ ಕಡಿತ ಹಾಗೂ ಕುಲಾಂತರಿಗಳ ಮೇಲಿನ ನಿರ್ಬಂಧ ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತಿದೆ. ಭಾರತ ಅಕ್ಕಿ ಮತ್ತು ಗೋಧಿಗೆ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ನಿಗದಿಪಡಿಸಿದ ಮಿತಿಯನ್ನು ಮೀರಿದೆ ಎಂದು ಅಮೆರಿಕ ಮತ್ತು ಡಬ್ಲ್ಯುಟಿಒ ಸದಸ್ಯ ರಾಷ್ಟ್ರಗಳು ನವೆಂಬರ್ 2024ರಲ್ಲಿ ವಾದಿಸಿದ್ದವು. ಒಂದುವೇಳೆ ಭಾರತ ಒತ್ತಡಕ್ಕೆ ಮಣಿದು, ಎಂಎಸ್ಪಿ ಕಡಿತ/ರದ್ದು ಗೊಳಿಸಿದರೆ, ರೈತರು ಭತ್ತ/ಗೋಧಿ ಬೆಳೆಯುವುದನ್ನೇ ನಿಲ್ಲಿಸಬೇಕಾಗುತ್ತದೆ. ಸಮಸ್ಯೆ ಏನೆಂದರೆ, ಡಬ್ಲ್ಯುಟಿಒ ಸದಸ್ಯ ರಾಷ್ಟ್ರಗಳಲ್ಲಿ ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚು ಸಬ್ಸಿಡಿ ನೀಡುತ್ತಿರುವುದು ಅಮೆರಿಕ. 1995ರಲ್ಲಿ 61 ಶತಕೋಟಿ ಡಾಲರ್ ಇದ್ದ ಸಬ್ಸಿಡಿ, 2022ರಲ್ಲಿ 215 ಶತಕೋಟಿ ಡಾಲರ್ಗೆ ಹೆಚ್ಚಿದೆ; ಭಾರತ 2023-24ರಲ್ಲಿ 92 ಶತಕೋಟಿ ಡಾಲರ್ ಸಬ್ಸಿಡಿ ನೀಡಿದೆ. ಆದರೆ, ಇದರಲ್ಲಿ ಶೇ.99.43ರಷ್ಟು ‘ಕಡಿಮೆ ಆದಾಯದ ಮತ್ತು ಸಂಪನ್ಮೂಲ ಕೊರತೆ’ ಇರುವ ಬಡ ಕೃಷಿಕರಿಗೆ ನೀಡುವ ಜೀವನಾಧಾರ ಸಬ್ಸಿಡಿ; ಅಮೆರಿಕ ನೀಡುವ ಸಬ್ಸಿಡಿಗಳು ಕೃಷ್ಯುತ್ಪನ್ನಗಳ ಪ್ರಮುಖ ರಫ್ತುದಾರ ಎಂಬ ಸ್ಥಾನವನ್ನು ರಕ್ಷಿಸಿಕೊಳ್ಳಲು ಶ್ರೀಮಂತ ರೈತರಿಗೆ ನೀಡುವಂಥವು; ಭಾರೀ ಕೃಷಿ ಉದ್ಯಮಗಳು ಜಾಗತಿಕವಾಗಿ ವಿಸ್ತರಿಸಿಕೊಳ್ಳಲು ನೆರವಾಗುತ್ತವೆ.

ಅಮೆರಿಕದ ಕೃಷಿ ಇಲಾಖೆ(ಯುಎಸ್ಡಿಎ) ಮಾಹಿತಿ ಪ್ರಕಾರ, ಈ ಸಬ್ಸಿಡಿಗಳಿಂದ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿದೆ. ಇದರಿಂದ ಕೃಷಿಕರು ತಮ್ಮ ಉತ್ಪನ್ನಗಳ ಬೆಲೆಯನ್ನು ಉತ್ಪಾದನೆ ವೆಚ್ಚಕ್ಕಿಂತ ಕಡಿಮೆ ಇರಿಸಿಕೊಳ್ಳಬಹುದು ಮತ್ತು ಕಟಾವು ಸಮಯದ ಬೆಲೆಗಳು ಅಂತರ್ರಾಷ್ಟ್ರೀಯ ಬೆಲೆಗಿಂತ ಕಡಿಮೆ ಇರುತ್ತವೆ; ಇದರಿಂದ ಸ್ವದೇಶಿ ಮಾರುಕಟ್ಟೆಗೆ ಬೇರೆ ದೇಶದ ಉತ್ಪನ್ನಗಳು ಬರಲು ಆಗುವುದಿಲ್ಲ ಮತ್ತು ವಿದೇಶಿ ಮಾರುಕಟ್ಟೆಗೆ ದೇಶಿ ಉತ್ಪನ್ನಗಳನ್ನು ಸುರಿಯಲಾಗುತ್ತದೆ.

ಕುಲಾಂತರಿಗೆ ಅನುಮತಿಯಿಂದ ಆದೇಶದ ಉಲ್ಲಂಘನೆ

ಒಂದುವೇಳೆ ಕುಲಾಂತರಿಗಳ ಆಮದಿಗೆ ಅನುಮತಿ ನೀಡಿದರೆ, ಅದು ಸುಪ್ರೀಂ ಕೋರ್ಟಿನ ಆದೇಶದ ಉಲ್ಲಂಘನೆ ಆಗಲಿದೆ. ಜುಲೈ 2024ರಲ್ಲಿ ಜಿಎಂ ಹತ್ತಿಯ ವಾಣಿಜ್ಯ ಕೃಷಿಗೆ ಜಿಇಎಸಿ(ಜನೆಟಿಕ್ ಇಂಜಿನಿಯರಿಂಗ್ ಮಾನಿಟರಿಂಗ್ ಸಮಿತಿ) ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠ (ನ್ಯಾ.ಬಿ.ವಿ. ನಾಗರತ್ನಾ ಮತ್ತು ನ್ಯಾ. ಸಂಜಯ್ ಕರೋಲ್), ಭಿನ್ನ ತೀರ್ಪು ನೀಡಿತು. ನ್ಯಾ.ನಾಗರತ್ನಾ ಅವರು ಅನುಮತಿಯನ್ನು ವಜಾ ಮಾಡಿದರೆ, ನ್ಯಾ. ಕರೋಲ್ ಅನುಮತಿಯನ್ನು ಎತ್ತಿ ಹಿಡಿದರು. ಆದರೆ, ಕುಲಾಂತರಿ ಜೀವಿ(ಜಿಎಂಒ)ಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕಾರ್ಯನೀತಿಯನ್ನು ರೂಪಿಸಬೇಕು; ಜಿಇಎಸಿ ಕಾರ್ಯನಿರ್ವಹಣೆಯ ಪುನರಾವಲೋಕನ ಮಾಡಬೇಕು ಮತ್ತು ಇದಕ್ಕಾಗಿ ಸಮಿತಿಯೊಂದನ್ನು ರಚಿಸಬೇಕು ಎಂದು ಇಬ್ಬರೂ ಹೇಳಿದರು. ಸುಪ್ರೀಂ ಕೋರ್ಟ್ 2012ರಲ್ಲಿ ನೇಮಿಸಿದ ತಾಂತ್ರಿಕ ಪರಿಣತರ ಸಮಿತಿ(ಟಿಎಸಿ)ಯು ಬಿಟಿ ಬದನೆ ಮೇಲೆ 10 ವರ್ಷ ನಿಷೇಧ ಹೇರಬೇಕೆಂದು ಶಿಫಾರಸು ಮಾಡಿತ್ತು. ಇದನ್ನು ನ್ಯಾಯಾಲಯ ಅಂಗೀಕರಿಸಿತ್ತು. ಈ ವರದಿಯನ್ನು ಜಿಇಎಸಿ ಪರಿಗಣಿಸಿಲ್ಲ ಎಂದು ನ್ಯಾ. ನಾಗರತ್ನಾ ಹೇಳಿದರು. ಪಶು-ಕೋಳಿ ಆಹಾರದಲ್ಲಿ ಬಳಕೆಗೆ ಕುಲಾಂತರಿ ಸೋಯಾ ಆಮದಿಗೆ ಕೇಂದ್ರ ಅನುಮತಿ ನೀಡಿದ್ದನ್ನು ಪ್ರಶ್ನಿಸಿ, ದಿಲ್ಲಿ ಹೈಕೋರ್ಟಿನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ತನ್ನ ನಿಲುವು ಸಮರ್ಥಿಸಿಕೊಂಡ ಸರಕಾರ, ಆಮದು ಸೋಯಾದಲ್ಲಿ ಕುಲಾಂತರಿ ಜೀವಿ (ಜಿಎಂಒ) ಇರುವುದಿಲ್ಲ; ಆದ್ದರಿಂದ, ಪರಿಸರ ಸಂರಕ್ಷಣೆ ಕಾಯ್ದೆ 1986ರಡಿ ಜಿಇಎಸಿಯ ನಿಯಂತ್ರಣಗಳು ಅನ್ವಯಿಸುವುದಿಲ್ಲ ಎಂದು ಆಗಸ್ಟ್ 2021ರಲ್ಲಿ ವಾದಿಸಿತು. ಕುಲಾಂತರಿ ಪರ ಲಾಬಿದಾರರು ಬಿಟಿ ಹತ್ತಿ ಕೃಷಿಗೆ ಅನುಮತಿ ನೀಡಿದ್ದನ್ನು ಉದಾಹರಿಸಿದ್ದರು. ಆದರೆ, ಅವರು ಮರೆಮಾಚಿದ್ದೇನೆಂದರೆ, ಬಿಟಿ ಹತ್ತಿ ಆಹಾರ ಬೆಳೆಯಲ್ಲ ಮತ್ತು ವಾರ್ಷಿಕ 1.34 ದಶಲಕ್ಷ ಟನ್ ಹತ್ತಿ ಎಣ್ಣೆ ಬಳಕೆಯಾಗುತ್ತಿದ್ದರೂ, ಅದರಲ್ಲಿ ಜೀವಂತ ಜೀವಿಗಳು ಇರುವುದಿಲ್ಲ. ಸುಪ್ರೀಂ ಭಿನ್ನ ತೀರ್ಪಿನ ಬಳಿಕ 3ನೇ ನ್ಯಾಯಮೂರ್ತಿಯನ್ನು ನೇಮಿಸಬೇಕಿದೆ; ಇದಕ್ಕೆ ದೀರ್ಘ ಕಾಲ ತಗಲಬಹುದು. ಅಷ್ಟರಲ್ಲಿ ಕುಲಾಂತರಿ ಸೋಯಾ-ಸಿಹಿಜೋಳಕ್ಕೆ ಸರಕಾರ ಅನುಮತಿ ನೀಡಿದಲ್ಲಿ ಉಂಟಾಗಬಹುದಾದ ವಂಶವಾಹಿ ಮಾಲಿನ್ಯಕ್ಕೆ ಯಾರು ಹೊಣೆ? ಏತನ್ಮಧ್ಯೆ, ಬೇಯರ್ ಸಂಸ್ಥೆಗೆ ಎರಡು ಕುಲಾಂತರಿ ಸಿಹಿಜೋಳ ತಳಿಗಳ ಪ್ರಯೋಗಾರ್ಥ ಕೃಷಿಗೆ ಜಿಇಎಸಿ ಅನುಮತಿ ನೀಡಿದೆ. ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯ ಪ್ರಯೋಗಕ್ಕೆ ಮುಂದಾಗಿದೆ. ಆರೆಸ್ಸೆಸ್ ಬೆಂಬಲಿತ ಭಾರತೀಯ ಕಿಸಾನ್ ಸಂಘ ಇದನ್ನು ಪ್ರತಿಭಟಿಸಿದೆ. ಕುಲಾಂತರಿ ಸೋಯಾ ಆಮದು ಮತ್ತು ಜಿಎಂ ಬೆಳೆಗಳ ಕೃಷಿಗೆ ಅನುಮತಿ ನೀಡಬೇಕೆಂದು ನೀತಿ ಆಯೋಗ ಪ್ರಕಟಣೆಯೊಂದರಲ್ಲಿ ಹೇಳಿತ್ತು. ರೈತ ಸಂಘಟನೆಗಳ ಪ್ರತಿಭಟನೆ ಬಳಿಕ ತನ್ನ ಜಾಲ ತಾಣದಿಂದ ವಿಷಯವನ್ನು ತೆಗೆದುಹಾಕಿತು.

ಅನಾರೋಗ್ಯಕರ ಹಾರ್ಮೋನ್ ಬಳಕೆ

ಚೀನಾ ಸೋಯಾ ಮತ್ತು ಸಿಹಿಜೋಳದ ಪ್ರಮುಖ ಆಮದುದಾರನಾಗಿದ್ದು, ಒಟ್ಟು ಸೋಯಾದಲ್ಲಿ ಶೇ.55 ಹಾಗೂ ಸಿಹಿಜೋಳದ ಶೇ.26ರಷ್ಟನ್ನು ತರಿಸಿಕೊಳ್ಳುತ್ತಿತ್ತು. ಆದರೆ, ಈಗ ಅಮೆರಿಕ ಹೇರಿದ ಸುಂಕವನ್ನು ವಿರೋಧಿಸಿ, ಕಡಿಮೆ ಮಾಡುತ್ತಿದೆ. ಚೀನಾದಲ್ಲಿ ಕಳೆದುಕೊಂಡ ಮಾರುಕಟ್ಟೆಯನ್ನು ಭರ್ತಿ ಮಾಡಿಕೊಳ್ಳಲು ಅಮೆರಿಕ, ಭಾರತದ ಹಿಂದೆ ಬಿದ್ದಿದೆ. ಅಮೆರಿಕದಲ್ಲಿ ಹಾಲು ನೀಡುವ ರಾಸುಗಳ ಇಳುವರಿ ಹೆಚ್ಚಿಸಲು ರಿಕಾಂಬಿನಂಟ್ ಬೊವೈನ್ ಗ್ರೋಥ್ ಹಾರ್ಮೋನ್(ಆರ್ಬಿಜಿಎಚ್)ನ್ನು 1993ರಿಂದಲೇ ನೀಡಲಾಗುತ್ತಿದೆ. ಮರುಸಂಯೋಜನೆ ಡಿಎನ್ಎ ತಂತ್ರಜ್ಞಾನವನ್ನು ಬಳಸಿಕೊಂಡು, ಬಿಜಿಎಚ್ನ ವಂಶವಾಹಿಯನ್ನು ಬ್ಯಾಕ್ಟೀರಿಯಕ್ಕೆ ಸೇರಿಸಿ, ದೊಡ್ಡ ಪ್ರಮಾಣದಲ್ಲಿ ಪ್ರಯೋಗಾಲಯದಲ್ಲಿ ಹಾರ್ಮೋನ್ ಉತ್ಪಾದಿಸಲಾಗುತ್ತದೆ. ಯುರೋಪಿಯನ್ ಯೂನಿಯನ್, ಕೆನಡಾ ಮತ್ತು ಹಲವು ದೇಶಗಳಲ್ಲಿ ಇದು ನಿಷಿದ್ಧ. ಈ ಹಾಲಿನ ಸೇವನೆಯಿಂದ ಮನುಷ್ಯರಲ್ಲಿ ಐಜಿಎಫ್-1(ಒಂದು ಬೆಳವಣಿಗೆ ಹಾರ್ಮೋನ್. ಪ್ರಾಸ್ಟೇಟ್, ಸ್ತನ, ಕೋಲೋರೆಕ್ಟಲ್ ಹಾಗೂ ಇನ್ನಿತರ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಹೇಳಿದೆ) ಪ್ರಮಾಣ ಹೆಚ್ಚಲಿದೆ. ದೇಶದ ನಾಲ್ವರು ವಯಸ್ಕರಲ್ಲಿ ಒಬ್ಬರು ಅಧಿಕ ತೂಕ/ಬೊಜ್ಜು ಹೊಂದಿದ್ದಾರೆ ಹಾಗೂ 2022ರಲ್ಲಿ ಅಂದಾಜು 1.46 ದಶಲಕ್ಷ ಕ್ಯಾನ್ಸರ್ ಹೊಸ ಪ್ರಕರಣಗಳು ದಾಖಲಾಗಿದೆ. ಇಂಥ ಸನ್ನಿವೇಶದಲ್ಲಿ ಹೈನುಗಾರಿಕೆ ಉತ್ಪನ್ನಗಳ ಮೂಲಕ ಸೇರ್ಪಡೆಯಾಗುವ ಐಜಿಎಫ್-1ರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು.

ಅಮೆರಿಕ ಕ್ಷುಲ್ಲಕ ಕಾರಣಗಳಿಗೆ ದಂಡ ಪ್ರಯೋಗಿಸುತ್ತದೆ. ಟ್ರಂಪ್ ಅವಧಿಯಲ್ಲಿ ಅದು ವಿಪರೀತ ಹೆಚ್ಚಿದೆ. ಬ್ರೆಝಿಲ್ ಮಾಜಿ ಅಧ್ಯಕ್ಷ, ಬಲಪಂಥೀಯ ಜೈರ್ ಬೊಲ್ಸೋನಾರೋ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆ ದೇಶದ ಮೇಲೆ ಶೇ.50 ಸುಂಕದ ಪ್ರಸ್ತಾವ ಇಟ್ಟಿದೆ. ಜೈರ್ ಅವರನ್ನು 2022ರ ಚುನಾವಣೆಯನ್ನು ಬುಡಮೇಲು ಮಾಡಲು ಪ್ರಯತ್ನಿಸಿದರು ಎಂಬ ಆರೋಪದಡಿ ಲೂಯಿಸ್ ಇನಾಷಿಯೋ ಅವರ ಸರಕಾರ ಬಂಧಿಸಿದೆ. ಮ್ಯಾನ್ಮಾರ್, ಲಾವೋಸ್ ಹಾಗೂ ವಿಯಟ್ನಾಂ ಮೇಲೆ ಚೀನಾ ನಿಯಂತ್ರಣ ಕಾರ್ಯಸೂಚಿಯ ಭಾಗವಾಗಿ ಹೆಚ್ಚುವರಿ ಶುಲ್ಕ ಹೇರಲಾಗಿದೆ.

ರಕ್ಷಣೆಗೆ ಸಂಬಂಧಿಸಿದ ಒಪ್ಪಂದವೊಂದಕ್ಕೆ ಭಾರತ ಮತ್ತು ಅಮೆರಿಕ ಇತ್ತೀಚೆಗೆ ಸಹಿ ಹಾಕಿವೆ. ಟ್ರಂಪ್ ಬೆದರಿಕೆ ಹಿನ್ನೆಲೆಯಲ್ಲಿ ಡಿಸೆಂಬರ್ 2025ರ ಅಂತ್ಯಭಾಗದಲ್ಲಿ ರಶ್ಯದಿಂದ ಕಚ್ಚಾ ತೈಲ ಆಮದು ನಿಲ್ಲಿಸುವ ಸಾಧ್ಯತೆ ದಟ್ಟ ವಾಗಿದೆ. ಇದರಿಂದ ಪೆಟ್ರೋಲ್-ಡೀಸೆಲ್ ದುಬಾರಿಯಾಗಲಿದೆ. ಹಲವು ದೇಶಗಳು ತಮ್ಮ ಮಾರುಕಟ್ಟೆಯನ್ನು ಅಮೆರಿಕಕ್ಕೆ ತೆರೆಯಲು ನಿರಾಕರಿಸಿವೆ. ದೇಶದ ಕೋಟ್ಯಂತರ ಸಣ್ಣ ಹಿಡುವಳಿದಾರರು ಬರ, ಪ್ರವಾಹ, ಕೀಟ ಹಾವಳಿ, ಸಾಲದೊಂದಿಗೆ ಹೋರಾಡುತ್ತಿದ್ದಾರೆ. ಅವರ ಬದುಕು ಅಸ್ಥಿರವಾಗಿದೆ. ಎಂಥ ಸನ್ನಿವೇಶದಲ್ಲೂ ಕುಲಾಂತರಿಗಳಿಗೆ ಅವಕಾಶ ಮಾಡಿಕೊಡಬಾರದು ಮತ್ತು ಕೃಷಿ ಕ್ಷೇತ್ರವನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ತೆರೆಯ ಬಾರದು; ಸರಕಾರ ದಿಟ್ಟತೆಯಿಂದ ಅಮೆರಿಕಕ್ಕೆ ತಿರಸ್ಕಾರ ತೋರಿಸಬೇಕಿದೆ. ಆದರೆ, ಎನ್ಡಿಎ 3.0ಕ್ಕೆ ಆ ದಮ್, ತಾಕತ್ ಇದೆಯೇ?

share
ಮಾಧವ ಐತಾಳ್
ಮಾಧವ ಐತಾಳ್
Next Story
X