Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ನಾರಾಯಣ ಗುರುವಿನ ನೆಲದಲ್ಲಿ ಕೋಮುವಾದ...

ನಾರಾಯಣ ಗುರುವಿನ ನೆಲದಲ್ಲಿ ಕೋಮುವಾದ ಸೋಲಲಿ

ಮಾಧವ ಐತಾಳ್ಮಾಧವ ಐತಾಳ್6 March 2026 3:40 PM IST
share
ನಾರಾಯಣ ಗುರುವಿನ ನೆಲದಲ್ಲಿ ಕೋಮುವಾದ ಸೋಲಲಿ

ಕೇರಳದಲ್ಲಿ ವಿಧಾನಸಭೆ ಚುನಾವಣೆ ಎಪ್ರಿಲ್‌ನಲ್ಲಿ ನಡೆಯಬೇಕಿದೆ. ಇದೇ ಹೊತ್ತಿನಲ್ಲಿ ನಡೆದಿರುವ ಕೆಲವು ಘಟನೆಗಳು ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ; ಕೇರಳದ ಕುಂಭಮೇಳ ಎಂದೇ ಹೆಸರಾದ ‘ಮಹಾಮಾಘಂ ಮಹೋತ್ಸವಂ’ 271 ವರ್ಷಗಳ ಬಳಿಕ ನಡೆದಿದೆ. ಶ್ರೀ ನಾರಾಯಣ ಧರ್ಮ ಪರಿಷತ್ ಪರಿಪಾಲನಾ(ಎಸ್‌ಎನ್‌ಡಿಪಿ) ಯೋಗಂ ಮತ್ತು ನಾಯರ್ ಸರ್ವೀಸ್ ಸೊಸೈಟಿ(ಎನ್‌ಎಸ್‌ಎಸ್) ಹತ್ತಿರವಾಗಿವೆ. ಸುಪ್ರೀಂ ಕೋರ್ಟಿನಲ್ಲಿ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಯುತ್ತಿದೆ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪ್ರಶ್ನಾರ್ಹ ನಿಲುವುಗಳು ಚರ್ಚೆಯನ್ನು ಹುಟ್ಟುಹಾಕಿವೆ.

ಕೇರಳ ಈಗ ‘ಕೇರಳಂ’ ಆಗಿದೆ. ಪಶ್ಚಿಮ ಬಂಗಾಳಕ್ಕಿಲ್ಲದ ಹೆಸರು ಬದಲಾವಣೆ ಭಾಗ್ಯ ರಾಜ್ಯಕ್ಕೆ ಲಭಿಸಿದೆ. ಇದೇ ಹೊತ್ತಿನಲ್ಲಿ ‘ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಎನ್ನುವ ಸುಳ್ಳುಗಳೇ ತುಂಬಿರುವ ಪ್ರೊಪಗಾಂಡ ಸಿನೆಮಾ ಕೂಡ ಬಿಡುಗಡೆಯಾಗಿದೆ. ಈ ಮೂಲಕ ಬಿಜೆಪಿ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಬಿಜೆಪಿ ತಿರುವನಂತಪುರ ಕಾರ್ಪೊರೇಷನ್‌ನಲ್ಲಿ ಮತ್ತು ಇತರೆಡೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವು ಸಾಧಿಸಿವೆ; ಆಡಳಿತ ವಿರೋಧ ಅಲೆಯ ಹಿನ್ನೆಲೆಯಲ್ಲಿ ಎಡರಂಗ ನೇತೃತ್ವದ ಸರಕಾರ ಹಿನ್ನಡೆ ಅನುಭವಿಸಿದೆ. ಪ್ರಶ್ನೆ ಏನೆಂದರೆ, ಗೆಲುವಿನ ಸಾಧ್ಯತೆ ಇರುವಾಗ ತನ್ನ ಕಾಲಿನ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವ ಪ್ರವೃತ್ತಿಯಿಂದ ಕಾಂಗ್ರೆಸ್ ಹೊರಬರುವುದೇ? ರಾಜ್ಯದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯುವ ಕಾಲ ಬಂದಿದೆಯೇ? ಪ್ರಾಯಶಃ ಇಲ್ಲ. ಆದರೆ, ಪಕ್ಷ ನಿಧಾನವಾಗಿ ಮತ್ತು ನಿಶ್ಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವುದಂತೂ ನಿಜ.

ವಿಧಾನಸಭೆ ಚುನಾವಣೆ ಎಪ್ರಿಲ್‌ನಲ್ಲಿ ನಡೆಯಬೇಕಿದೆ. ಇದೇ ಹೊತ್ತಿನಲ್ಲಿ ನಡೆದಿರುವ ಕೆಲವು ಘಟನೆಗಳು ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ; ಕೇರಳದ ಕುಂಭಮೇಳ ಎಂದೇ ಹೆಸರಾದ ‘ಮಹಾಮಾಘಂ ಮಹೋತ್ಸವಂ’ 271 ವರ್ಷಗಳ ಬಳಿಕ ನಡೆದಿದೆ. ಶ್ರೀ ನಾರಾಯಣ ಧರ್ಮ ಪರಿಷತ್ ಪರಿಪಾಲನಾ(ಎಸ್‌ಎನ್‌ಡಿಪಿ) ಯೋಗಂ ಮತ್ತು ನಾಯರ್ ಸರ್ವೀಸ್ ಸೊಸೈಟಿ(ಎನ್‌ಎಸ್‌ಎಸ್) ಹತ್ತಿರವಾಗಿವೆ. ಸುಪ್ರೀಂ ಕೋರ್ಟಿನಲ್ಲಿ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಯುತ್ತಿದೆ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪ್ರಶ್ನಾರ್ಹ ನಿಲುವುಗಳು ಚರ್ಚೆಯನ್ನು ಹುಟ್ಟುಹಾಕಿವೆ.

15ನೇ ವಿಧಾನಸಭೆ ಚುನಾವಣೆ ಎಪ್ರಿಲ್ 6, 2021ರಂದು ನಡೆದಿತ್ತು. ಎಲ್‌ಡಿಎಫ್ 99(ಸಿಪಿಐಎಂ 62, ಸಿಪಿಐ 17, ಕೇರಳ ಕಾಂಗ್ರೆಸ್(ಮಣಿ) 5, ಜಾತ್ಯತೀತ ದಳ/ಎನ್‌ಸಿಪಿ ತಲಾ 2, ಐಎನ್‌ಎಲ್/ಎಲ್‌ಜೆಡಿ/ಎನ್ ಎಸ್‌ಸಿ/ಕೆಸಿ(ಬಿ)/ಸಿ(ಎಸ್)/ಜೆಕೆಸಿ ತಲಾ 1, ಸ್ವತಂತ್ರ ಅಭ್ಯರ್ಥಿಗಳು 5 ಕ್ಷೇತ್ರಗಳಲ್ಲಿ ಜಯ) ಗಳಿಸಿತ್ತು. ಮತ ಗಳಿಕೆ ಪ್ರಮಾಣ ಶೇ.25.38. ಯುಡಿಎಫ್ 41(ಕಾಂಗ್ರೆಸ್ 21, ಐಯುಎಂಎಲ್ 15, ಕೆಇಸಿ 2, ಕೆಸಿಜೆ/ಆರ್‌ಎಂ ಪಿಐ/ಸ್ವತಂತ್ರ ತಲಾ 1 ಸ್ಥಾನ) ಗಳಿಸಿತ್ತು. ಮತಗಳಿಕೆ ಪ್ರಮಾಣ ಶೇ.25.12. ಕಾಂಗ್ರೆಸ್ 6 ಸ್ಥಾನ ಕಳೆದುಕೊಂಡರೆ, ಎಲ್‌ಡಿಎಫ್ ಒಕ್ಕೂಟ 8 ಹೆಚ್ಚುವರಿ ಸ್ಥಾನ ಗಳಿಸಿತ್ತು.

ಮಹಾಮಾಘಂ ಮಹೋತ್ಸವ

ಈ ಹಿಂದೆ 12 ವರ್ಷಕ್ಕೊಮ್ಮೆ ನಡೆಯುತ್ತಿದ್ದ ‘ಮಹಾಮಾಘಂ ಮಹೋತ್ಸವಂ’ ಪುನಾರಂಭಗೊಂಡಿತು. ಭರತಪುಳ ನದಿ ದಂಡೆಯಲ್ಲಿ ಪರಶುರಾಮ ತನ್ನ ಮೊದಲ ಯಾಗವನ್ನು ಮಾಡಿದ್ದರು ಎಂಬ ಪ್ರತೀತಿ ಇದೆ. ಬಳಿಕ ಯಾಗಕ್ಕೆ ಮಹಾಮಾಘಂ ಎಂಬ ಹೆಸರು ಬಂದಿತು. 271 ವರ್ಷಗಳ ಬಳಿಕ ಈ ವರ್ಷದ ಜನವರಿ 18ರಂದು ಆರಂಭಗೊಂಡು ಫೆಬ್ರವರಿ 3ರಂದು ಅಂತ್ಯಗೊಂಡಿತು. ಮಹೋತ್ಸವದ ಬಗ್ಗೆ ಎಲ್‌ಡಿಎಫ್ ಸರಕಾರ ಇಲ್ಲವೇ ಕಾಂಗ್ರೆಸ್ ಅಷ್ಟೇನೂ ಆಸಕ್ತಿ ತೋರಿಸಲಿಲ್ಲ; ಅಲ್ಪಸಂಖ್ಯಾತರ ಓಲೈಕೆ ಇದಕ್ಕೆ ಕಾರಣ ಎಂದು ಬಿಜೆಪಿ ದೂರಿತು. ಬಿಜೆಪಿ-ಸಂಘ ಪರಿವಾರ ಉತ್ಸವವನ್ನು ವಿಧಾನಸಭೆ ಚುನಾವಣೆಗೆ ಖಂಡಿತವಾಗಿಯೂ ಬಳಸಿಕೊಳ್ಳಲಿದೆ. ಯಶಸ್ಸಿನಿಂದ ಪ್ರೇರಿತರಾಗಿರುವ ಆಯೋಜಕರಾದ ಮೋಹನ್‌ಜಿ ಫೌಂಡೇಷನ್, ಪ್ರಯಾಗದ ಕುಂಭ ಮೇಳವನ್ನು ಹೋಲುವ ಮೇಳವನ್ನು 2028ರಲ್ಲಿ ನಡೆಸುವುದಾಗಿ ಘೋಷಿಸಿದೆ.

ಹಿಂದುತ್ವ ಗುಂಪುಗಳ ಪ್ರಭಾವ

ದಕ್ಷಿಣ ಮತ್ತು ಮಧ್ಯ ಕೇರಳದಲ್ಲಿ ಪ್ರಭಾವ ಹೊಂದಿರುವ ಶ್ರೀನಾರಾಯಣ ಧರ್ಮ ಪರಿಷತ್ ಪರಿಪಾಲನಾ ಯೋಗಂ(ಎಸ್‌ಎನ್‌ಡಿಪಿ) ಮತ್ತು ನಾಯರ್ ಸರ್ವೀಸ್ ಸೊಸೈಟಿ (ಎನ್‌ಎಸ್‌ಎಸ್) ಪರಸ್ಪರ ಹತ್ತಿರವಾಗಿವೆ. 2012 ಮತ್ತು 2014ರಲ್ಲಿ ಈ ಸಂಘಟನೆಗಳನ್ನು ಒಗ್ಗೂಡಿಸುವ ಪ್ರಯತ್ನಗಳು ಜಾತಿ ಆಧರಿತ ಮೀಸಲು ಹಾಗೂ ದೇವಸ್ವಂ ಮಂಡಳಿಗೆ ನೇಮಕಕ್ಕೆ ಸಂಬಂಧಿಸಿದ ಭಿನ್ನಾಭಿಪ್ರಾಯದಿಂದ ವಿಫಲವಾಗಿದ್ದವು. ಈಗ ಈ ಸಂಘಟನೆಗಳು ಹತ್ತಿರವಾಗಲು ಎರಡು ಕಾರಣವಿದೆ; ಮೊದಲಿಗೆ, ಸೆಪ್ಟಂಬರ್ 2025ರಲ್ಲಿ ಸರಕಾರ ಶಬರಿಮಲೆಯ ದೇವಳದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪಂಪಾ ಕ್ಷೇತ್ರದಲ್ಲಿ ನಡೆಸಿದ ಅಯ್ಯಪ್ಪ ಸಂಗಮಂ ಹಾಗೂ ಎರಡನೆಯದು-ಎನ್‌ಎಸ್‌ಎಸ್ ಮಹಾಕಾರ್ಯದರ್ಶಿ ಜಿ.ಸುಕುಮಾರನ್ ನಾಯರ್ ಮತ್ತು ಎಸ್‌ಎನ್‌ಡಿಪಿಯ ವೆಲ್ಲಪಲ್ಲಿ ನಟೇಶನ್ ಅವರಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ವಿ.ಡಿ.ಸತೀಶನ್ ಕುರಿತ ದ್ವೇಷ. ಕೇರಳದ ರಾಜಕೀಯದಲ್ಲಿ ಮುಸ್ಲಿಮ್ ಸಮುದಾಯದ ಪ್ರಭಾವ ಹೆಚ್ಚಳ ಎರಡೂ ಸಂಘಟನೆಗಳಿಗೆ ತಲೆನೋವಾಗಿದೆ.

ಈ ಸಂಘಟನೆಗಳು ಹತ್ತಿರವಾಗುವಲ್ಲಿ ಸಿಪಿಐ(ಎಂ) ಒತ್ತಾಸೆಯಿದೆ ಎಂಬ ಗುಮಾನಿ ಇದೆ. ಯುಡಿಎಫ್ ಆಡಳಿತಕ್ಕೆ ಬಂದರೆ ಗೃಹ ಖಾತೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ನಿಯಂತ್ರಿಸಲಿದೆ ಎನ್ನುವ ಸಿಪಿಐ(ಎಂ) ಮುಖಂಡ ಎ.ಕೆ.ಬಾಲನ್ ಹೇಳಿಕೆ ಅಥವಾ ಮುಸ್ಲಿಮ್ ಲೀಗ್ ಅಭ್ಯರ್ಥಿಗಳ ಕುರಿತ ಸಚಿವ ಸಾಜಿ ಚೆರಿಯನ್ ಹೇಳಿಕೆಯನ್ನು ಇದೇ ಕಾರಣದಿಂದ ಸಿಪಿಐ(ಎಂ) ಇಲ್ಲವೇ ಎಲ್‌ಡಿಎಫ್ ಖಂಡಿಸಲಿಲ್ಲ ಎಂದು ದೂರಲಾಗಿದೆ. ಮಲಬಾರ್‌ನಲ್ಲಿ ಮುಸ್ಲಿಮರು ಹಾಗೂ ಕೇಂದ್ರ ಟ್ರಾವಂಕೂರಿನಲ್ಲಿ ಕ್ರಿಶ್ಚಿಯನ್ನರು ಯುಡಿಎಫ್ ಬೆಂಬಲಿಗರು. ಎಸ್‌ಎನ್‌ಡಿಪಿ-ಎನ್‌ಎಸ್‌ಎಸ್ ಸಮೀಪವಾಗುತ್ತಿರುವುದು ಕಾಂಗ್ರೆಸ್‌ಗೆ ಒಳ್ಳೆಯ ಸೂಚನೆಯಲ್ಲ.

ಎರಡು ಇಂಜಿನ್ ಸರಕಾರ

ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಗೆಲುವು ಬಿಜೆಪಿಯಲ್ಲಿ ಉತ್ಸಾಹ ತುಂಬಿದೆ. ಜನವರಿ 23, 2026ರಂದು ನಡೆದ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ, ‘‘ಉತ್ತರದ ರಾಜ್ಯಗಳಂತೆ ಕೇರಳವನ್ನು ಅಭಿವೃದ್ಧಿಪಡಿಸುತ್ತೇವೆ’’ ಎಂದು ಹೇಳಿದರು. ಇದೊಂದು ಹಾಸ್ಯಾಸ್ಪದ ಹೇಳಿಕೆ. ಕೇರಳೀಯರ ವಾರ್ಷಿಕ ತಲಾದಾಯ 3.08 ಲಕ್ಷ ರೂ. ಇದೆ (ದೇಶದಲ್ಲಿ 7ನೇ ಸ್ಥಾನ). ಬಿಹಾರ 70,000 ರೂ., ಮಧ್ಯ ಪ್ರದೇಶ 1.7 ಲಕ್ಷ ರೂ. ಹಾಗೂ ಉತ್ತರ ಪ್ರದೇಶದ ತಲಾದಾಯ 1.1ರಿಂದ 1.27 ಲಕ್ಷ ರೂ. ಇದೆ. ಈ ಎಲ್ಲ ರಾಜ್ಯಗಳಲ್ಲಿ ಡಬಲ್ ಇಂಜಿನ್ ಸರಕಾರ ಇದೆ. ಕೇರಳ ಪ್ರಮುಖ ಸಾಮಾಜಿಕ ಸೂಚ್ಯಂಕಗಳಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ; ಅತ್ಯಧಿಕ ಸಾಕ್ಷರತೆ ದರ ಶೇ. 94, ಅತ್ಯಧಿಕ ಜೀವಿತಾವಧಿ, ಕಡಿಮೆ ಶಿಶು ಮರಣ ಸಂಖ್ಯೆ ಮತ್ತು ಉತ್ತಮ ಆರೋಗ್ಯ ಸೇವೆ ವ್ಯವಸ್ಥೆಯನ್ನು ಹೊಂದಿದೆ. ಎನ್‌ಡಿಎ ಅಧಿಕಾರಕ್ಕೆ ಬಂದರೆ ಕೇರಳವನ್ನು ಹಿಂದಕ್ಕೆ ಒಯ್ಯುಲಾಗುತ್ತದೆಯೇ?

ತಿರುವನಂತಪುರ ನಗರಾಡಳಿತ ಕಳೆದ 4 ದಶಕಗಳಿಂದ ಎಲ್‌ಡಿಎಫ್ ಹಿಡಿತದಲ್ಲಿತ್ತು. 2015ರಲ್ಲಿ ಬಿಜೆಪಿ ಸ್ಥಾನಬಲ 6ರಿಂದ 35ಕ್ಕೆ ಹೆಚ್ಚಿತು. 2020ರಲ್ಲಿ ವಿ.ವಿ.ರಾಜೇಶ್ ಅವರನ್ನು ಮೇಯರ್ ಅಭ್ಯರ್ಥಿ ಎಂದು ಘೋಷಿಸಿತು. ಅವರು ಗೆದ್ದರು; ಆದರೆ, ಪಕ್ಷ ಗಳಿಸಿದ್ದು 34 ಸ್ಥಾನ ಮಾತ್ರ. 2025ರಲ್ಲಿ 50(ಬಹುಮತಕ್ಕೆ ಒಂದು ಸ್ಥಾನ ಕಡಿಮೆ) ಗಳಿಸಿತು; ಎಲ್‌ಡಿಎಫ್ 29, ಯುಡಿಎಫ್ 19 ಮತ್ತು ಸ್ವತಂತ್ರರು 2 ಸ್ಥಾನದಲ್ಲಿ ಜಯಿಸಿದರು. ಎನ್‌ಡಿಎ 1,919 ವಾರ್ಡ್‌ಗಳಲ್ಲಿ (2020ರಲ್ಲಿ 1,597) ಮತ್ತು ಕಾರ್ಪೊರೇಷನ್‌ಗಳ 93 ವಾರ್ಡ್ (2020ರಲ್ಲಿ 59)ಗಳಲ್ಲಿ ಗೆಲುವು ಸಾಧಿಸಿದೆ. ಕ್ರಮೇಣ ತನ್ನ ಹೆಜ್ಜೆ ಗುರುತು ವಿಸ್ತರಿಸುತ್ತಿದೆ. ಮಾಜಿ ಡಿಜಿಪಿ ಆರ್. ಶ್ರೀಲೇಖಾ ಮತ್ತು ರಾಜೇಶ್ ನಡುವೆ ಮೇಯರ್ ಸ್ಥಾನಕ್ಕೆ ಸ್ಪರ್ಧೆ ಇತ್ತು. ಎಬಿವಿಪಿ ಮಾಜಿ ಕಾರ್ಯಕರ್ತ ಮತ್ತು 2011, 2016 ಹಾಗೂ 2021ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದ ರಾಜೇಶ್‌ಗೆ ಮೇಯರ್ ಪಟ್ಟ ಒಲಿಯಿತು. ಸಮಸ್ಯೆಯೇನೆಂದರೆ, ಬಿಜೆಪಿ ಮತಗಳಿಕೆ ಪ್ರಮಾಣ ಲೋಕಸಭೆ ಚುನಾವಣೆ(ಶೇ.19.26)ಗೆ ಹೋಲಿಸಿದರೆ, ಶೇ.14.76ಕ್ಕೆ ಕುಸಿದಿದೆ. ಗೃಹ ಸಚಿವ ಅಮಿತ್ ಶಾ, ಸ್ಥಳೀಯ ಚುನಾವಣೆಯಲ್ಲಿ ಶೇ.25ರಷ್ಟು ಮತ ಗಳಿಕೆಯ ಗುರಿ ನೀಡಿದ್ದರೂ, ಅದನ್ನು ತಲುಪಲು ಸಾಧ್ಯವಾಗಿಲ್ಲ. ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಸಾಧನೆ ಶೂನ್ಯ. ರಾಜ್ಯದ 6 ಕಾರ್ಪೊರೇಷನ್‌ಗಳಲ್ಲಿ 4 ಯುಡಿಎಫ್ ಪಾಲಾಗಿವೆ. ಎಲ್‌ಡಿಎಫ್ ಕೋಝಿಕ್ಕೋಡ್‌ನಲ್ಲಿ ಗೆದ್ದು, ತಿರುವನಂತಪುರವನ್ನು ಕಳೆದುಕೊಂಡಿದೆ. ಕೇರಳ ಎಲ್ಲ ಕಡೆಯಿಂದ ಆವೃತ್ತಗೊಂಡ ರಾಜ್ಯ; ಕರಾವಳಿ ತೀರದಲ್ಲಿ ಭೂಕೊರೆತ, ಸಮುದ್ರದ ನೀರು ಒಳನುಗ್ಗುವಿಕೆ ಮತ್ತು ‘ಅಭಿವೃದ್ಧಿ’ಯ ಸಮಸ್ಯೆ ಇದೆ. ಉಳಿದ ನಗರಗಳಲ್ಲಿ ಜನಸಂಖ್ಯೆ ಹೆಚ್ಚಳ, ವಾಹನ ದಟ್ಟಣೆ, ಮಾಲಿನ್ಯ, ತ್ಯಾಜ್ಯ ನಿರ್ವಹಣೆ ಇತ್ಯಾದಿ ಸಮಸ್ಯೆ ಇದೆ.

ಶಬರಿಮಲೆ ಸಮಸ್ಯೆ

‘‘ಶಬರಿಮಲೆ ದೇವಳಕ್ಕೆ 10-50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶ ನೀಡಬಾರದು’’ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಉಲ್ಟಾ ಹೊಡೆದಿದೆ. ಋತುಸ್ರಾವ ಆಗುವ ವಯಸ್ಸಿನ ಮಹಿಳೆಯರಿಗೆ ಕೂಡ ದೇವಸ್ಥಾನ ಪ್ರವೇಶಿಸುವ ಹಕ್ಕು ಇದೆ ಎಂದು ಸೆಪ್ಟಂಬರ್ 2018ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದೇಶವನ್ನು ಪಾಲಿಸುವುದಾಗಿ ದೇವಸ್ವಂ ಮಂಡಳಿ ಹಾಗೂ ಸರಕಾರ ಹೇಳಿದ್ದವು. ಬಿಜೆಪಿ ಮತ್ತು ಸಂಘಪರಿವಾರ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದವು. ನ್ಯಾಯಾಲಯದ ಆದೇಶದ ಬಳಿಕ ಬಿಂದು ಅಮ್ಮಿಣಿ ಮತ್ತು ಕನಕದುರ್ಗ ಎಂಬವರು ಜನವರಿ 2, 2019ರಂದು ಪೊಲೀಸ್ ರಕ್ಷಣೆಯೊಂದಿಗೆ ದೇಗುಲವನ್ನು ಪ್ರವೇಶಿಸಿದ್ದರು.

ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ತೀರ್ಪಿನ ಮರುಪರಿಶೀಲನೆ ಅರ್ಜಿಗಳನ್ನು ಪರಿಶೀಲಿಸುತ್ತಿದೆ. ಸರಕಾರ ಸೇರಿದಂತೆ ಸಂಬಂಧಿಸಿದವರು ಮಾರ್ಚ್ 14ರೊಳಗೆ ತಮ್ಮ ನಿಲುವು ತಿಳಿಸಬೇಕೆಂದು ನ್ಯಾಯಾಲಯ ಹೇಳಿತ್ತು. ದೇವಸ್ವಂ ಮಂಡಳಿ, ‘ಸಂಪ್ರದಾಯವನ್ನು ರಕ್ಷಿಸಬೇಕು ಮತ್ತು ಅನುಸರಿಸಬೇಕು’ ಎಂದು ಹೇಳಿದೆ. ಸರಕಾರ ತನ್ನ ನಿಲುವು ಸ್ಪಷ್ಟಪಡಿಸಿಲ್ಲ. ಆದರೆ, ಚುನಾವಣೆ ಹಿನ್ನೆಲೆಯಲ್ಲಿ ಸರಕಾರ ತನ್ನ ನಿಲುವು ಬದಲಿಸುವ ಸಾಧ್ಯತೆ ಇದೆ. ಕಾನೂನು ಸಚಿವ ಪಿ. ರಾಜೀವ್, ನಂಬಿಕೆಯನ್ನು ರಕ್ಷಿಸಲು ಸರಕಾರ ಬದ್ಧವಿದೆ ಎಂದು ಇತ್ತೀಚೆಗೆ ಹೇಳಿದ್ದರು. ಅವರ ಹೇಳಿಕೆಗೆ ಖಂಡನೆ ವ್ಯಕ್ತವಾಗಿತ್ತು. ಸರಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ, ಅದು ಒಂದು ಗುಂಪನ್ನು ಕೆರಳಿಸುವ ಸಾಧ್ಯತೆ ಇದೆ. ಬಿಜೆಪಿ ಎಂದಿನಂತೆ ‘ಹಿಂದುಗಳ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು’ ಎಂದು ರಾಗ ಹಾಡಲಿದೆ.

ಕಾಂಗ್ರೆಸನ್ನು ಕಾಡುವ ಅನಿಶ್ಚಿತೆ

ಜಯದ ಹೊಸ್ತಿಲಿನಲ್ಲಿ ಎಡವುವುದು ಕಾಂಗ್ರೆಸ್‌ಗೆ ರೂಢಿ ಆಗಿಬಿಟ್ಟಿದೆ. ನಿರ್ಧಾರ ತೆಗೆದುಕೊಳ್ಳುವಲ್ಲಿ ಅನಿಶ್ಚಿತತೆ ಇದಕ್ಕೆ ಮುಖ್ಯ ಕಾರಣ. ತಿರುವನಂತಪುರ ಸಂಸದ ಶಶಿ ತರೂರ್ ಅವರ ನಿದರ್ಶನ ನೋಡೋಣ; ತಾವು ಪಕ್ಷವನ್ನು ಮೀರಿದ ರಾಜಕೀಯ ಮುತ್ಸದ್ದಿ; ತಮ್ಮ ನಿಷ್ಠೆ ರಾಷ್ಟ್ರಕ್ಕೆ ಎಂದು ತೋರಿಸಿಕೊಳ್ಳಲು ತರೂರ್ ಪ್ರಯತ್ನಿಸುತ್ತಿರುತ್ತಾರೆ. ಅವರು ವಿಶ್ವ ಸಂಸ್ಥೆಯಿಂದ ನಿವೃತ್ತರಾದ ಬಳಿಕ 2009ರಲ್ಲಿ ಕಾಂಗ್ರೆಸ್ ಟಿಕೆಟ್ ಕೊಟ್ಟವರು ಸೋನಿಯಾ ಗಾಂಧಿ. ಆದರೆ, ಗಾಂಧಿ ಕುಟುಂಬ ವಂಶಾಧಿಕಾರದ ರಾಜಕೀಯ ಮಾಡುತ್ತದೆ ಎಂದು ಟೀಕಿಸಿದ್ದರು; ಪಕ್ಷದಲ್ಲಿ ಸುಧಾರಣೆ ಆಗಬೇಕೆಂದು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದ ಜಿ 23 ನಾಯಕರಲ್ಲಿ ಒಬ್ಬರು. ಆಗಾಗ ಪಕ್ಷವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಅವರು ವಿಮಾನದಲ್ಲಿ ಇಕಾನಮಿ ವರ್ಗವನ್ನು ‘ಕ್ಯಾಟಲ್ ಕ್ಲಾಸ್’ ಎಂದು ಹೇಳಿದ್ದರು; ಹಿಂದೊಮ್ಮೆ ಮೋದಿ ಹಾಗೂ ಅಡ್ವಾಣಿ ಅವರನ್ನು ಶ್ಲಾಘಿಸಿದ್ದರು. ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಗೌರವಾರ್ಥ ಭೋಜನಕೂಟಕ್ಕೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡದೆ ಇದ್ದರೂ, ತರೂರ್ ಪಾಲ್ಗೊಂಡಿದ್ದರು. ಮೋದಿ ಸರಕಾರ ವಿದೇಶಗಳಲ್ಲಿ ‘ಆಪರೇಷನ್ ಸಿಂಧೂರ’ದ ಬಗ್ಗೆ ಪ್ರಚಾರಕ್ಕೆ ಆಯ್ಕೆ ಮಾಡಿದ್ದ ತಂಡದಲ್ಲಿದ್ದರು. ಬಲಪಂಥೀಯ ಸರಕಾರೇತರ ಸಂಘಟನೆಯಿಂದ ಸಾವರ್ಕರ್ ಅಂತರ್‌ರಾಷ್ಟ್ರೀಯ ಇಂಪ್ಯಾಕ್ಟ್ ಪುರಸ್ಕಾರ ಸ್ವೀಕಾರಕ್ಕೆ ಸಂಬಂಧಿಸಿದಂತೆ, ‘‘ವಿಷಯ ಮಾಧ್ಯಮಗಳಿಂದ ತಿಳಿದುಬಂದಿದ್ದು, ಸಂಘಟಕರು ಬೇಜವಾಬ್ದಾರಿ ತೋರಿದ್ದಾರೆ’’ ಎಂದು ದೂರಿದರು. ಆದರೆ, ವೈಯಕ್ತಿಕ ಭೇಟಿ ವೇಳೆ ಪುರಸ್ಕಾರ ಸ್ವೀಕರಿಸಲು ಸಮ್ಮತಿಸಿದ್ದರು ಎಂದು ಸಂಘಟನೆ ಹೇಳಿತು! ಮಾರ್ಚ್ 2025ರಲ್ಲಿ ಪಾಡ್‌ಕಾಸ್ಟ್ ಒಂದರಲ್ಲಿ ಕಾಂಗ್ರೆಸ್‌ಗೆ ತಾವು ಬೇಡವಾಗಿದ್ದರೆ, ತಮಗೆ ಬೇರೆ ಆಯ್ಕೆಗಳಿವೆ ಎಂದು ಹೇಳಿದ್ದರು. ಜನವರಿ 19, 2026ರಂದು ಕೊಚ್ಚಿಯಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ, ತರೂರ್ ವೇದಿಕೆಯಲ್ಲಿದ್ದರೂ ಅವರ ಹೆಸರು ಪ್ರಸ್ತಾಪಿಸಲಿಲ್ಲ. ಇದಕ್ಕೆ ಪ್ರತೀಕಾರ ಎಂಬಂತೆ ಕೇರಳ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ದಿಲ್ಲಿಯಲ್ಲಿ ಕರೆದಿದ್ದ ಸಭೆ(ಜನವರಿ 23, 2026)ಗೆ ಗೈರುಹಾಜರಾದರು. ಆನಂತರ ಖರ್ಗೆ ಮತ್ತು ರಾಹುಲ್ ಅವರನ್ನು ಭೇಟಿ ಮಾಡಿ, ಎಲ್ಲವೂ ಚೆನ್ನಾಗಿದೆ ಎಂದು ತೇಪೆ ಹಾಕಿದರು! ಇಷ್ಟೆಲ್ಲ ಆದರೂ ಕಾಂಗ್ರೆಸ್ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಹಿಂದೆಮುಂದೆ ನೋಡುತ್ತದೆ!

ಮೋದಿ ಸರಕಾರ ಪ್ರತಿಪಕ್ಷಗಳನ್ನು ದೇಶದ ವೈರಿಗಳು ಎಂದು ಬಿಂಬಿಸುತ್ತಿದೆ; ಇಂಥ ಸಂದರ್ಭದಲ್ಲಿ ತರೂರ್ ನಿಲುವು ಹಿಂದುತ್ವವಾದ ಮತ್ತು ನಿರಂಕುಶಾಧಿಕಾರದ ವಿರುದ್ಧದ ಹೋರಾಟಕ್ಕೆ ಪೂರಕವಾಗಿಲ್ಲ. ಅವರಿಗೆ ಜಾತಿ/ಸಮುದಾಯ ಇಲ್ಲವೇ ಕಾರ್ಯಕರ್ತರ ಬೆಂಬಲ ಇಲ್ಲ; ಒಂದುವೇಳೆ ಅವರು ಬಿಜೆಪಿಗೆ ಸೇರಿದರೂ, ಪಕ್ಷಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ. ಹೆಚ್ಚೆಂದರೆ, ಕಾಂಗ್ರೆಸ್‌ಗೆ ಕಿರಿಕಿರಿ ಆಗಬಹುದಷ್ಟೇ. ತಿರುವನಂತಪುರ ಕ್ಷೇತ್ರದಿಂದ ಅವರ ಗೆಲುವಿನ ಅಂತರ ಕ್ರಮೇಣ ಕಡಿಮೆಯಾಗಿದೆ(2024ರಲ್ಲಿ 16,077). ಇಂಥ ಅನಿಶ್ಚಿತತೆಗಳು ಕಾಂಗ್ರೆಸ್‌ನ ನಿರಂತರ ಸೋಲಿಗೆ ಕಾರಣ. ಇದರಿಂದ 100 ಸ್ಥಾನಗಳಲ್ಲಿ ಜಯ ಗಳಿಸುವ ಗುರಿ ಇರಿಸಿಕೊಂಡಿರುವ ರಾಜ್ಯಾಧ್ಯಕ್ಷ ಸತೀಶನ್ ಅವರ ಲೆಕ್ಕಾಚಾರ ತಲೆಕೆಳಗು ಆಗಬಹುದು.

ಆಡಳಿತ ವಿರೋಧಿ ಅಲೆ?

ಪಿಣರಾಯಿ ವಿಜಯನ್ ಸರಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಸ್ಥಳೀಯ ಚುನಾವಣೆಯಲ್ಲಿ ಯುಡಿಎಫ್ ಶೇ.40ಕ್ಕಿಂತ ಅಧಿಕ, ಎಲ್‌ಡಿಎಫ್ ಶೇ.35 ಮತ್ತು ಎನ್‌ಡಿಎ ಶೇ.15ರಷ್ಟು ಮತ ಗಳಿಸಿವೆ. ಪೂರಕ ಬೆಳವಣಿಗೆಯೊಂದರಲ್ಲಿ 3 ಬಾರಿ ಶಾಸಕಿ ಮತ್ತು ಸಿಪಿಐ(ಎಂ)ನ ಹಿರಿಯ ನಾಯಕಿ ಪಿ.ಐಶಾ ಪೊಟ್ಟಿ(67), ಜನವರಿ 13, 2026ರಂದು ಕಾಂಗ್ರೆಸ್ ಸೇರಿದ್ದಾರೆ. ಅವರು 2006ರಲ್ಲಿ ಕಾಂಗ್ರೆಸ್ ಮುಖಂಡ ಆರ್. ಬಾಲಕೃಷ್ಣ ಪಿಳ್ಳೈ ಅವರನ್ನು ಸೋಲಿಸುವ ಮೂಲಕ ದೈತ್ಯ ಸಂಹಾರಕಿ ಎಂದು ಖ್ಯಾತಿ ಗಳಿಸಿದ್ದರು. ಕಾಂಗ್ರೆಸ್ ಹಾಲಿ ಮೂರು ರಾಜ್ಯಗಳಲ್ಲಿ ಮಾತ್ರ ಆಡಳಿತದಲ್ಲಿದ್ದು, ಕೇರಳದಲ್ಲಿ ಗೆಲುವು ಪಕ್ಷಕ್ಕೆ ಮುಖ್ಯವಾಗಲಿದೆ. ಶಬರಿಮಲೆ ಚಿನ್ನದ ಕಳವು ಪ್ರಕರಣ ಸಿಪಿಐ(ಎಂ) ಮುಖಂಡರು ಮತ್ತು ಎಲ್‌ಡಿಎಫ್‌ಗೆ ಇರಿಸುಮುರಿಸು ಉಂಟುಮಾಡಿದೆ. ಕೇಂದ್ರದ ಅಸಹಕಾರದಿಂದ, ರಾಜ್ಯ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಸ್ಥಳೀಯ ಚುನಾವಣೆಗೆ ಮುನ್ನ 60 ಲಕ್ಷ ಫಲಾನುಭವಿಗಳ ಪಿಂಚಣಿಯನ್ನು 1,600 ರೂ.ಗಳಿಂದ 2,000 ರೂ.ಗೆ ಹೆಚ್ಚಿಸಿದರೂ, ಅದರಿಂದ ಪ್ರಯೋಜನ ಆಗಲಿಲ್ಲ. ಬಿಹಾರದ ಮಹಿಳಾ ರೋಜ್‌ಗಾರ್ ಯೋಜನೆ ಮತ್ತು ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದ ನೇರ ನಗದು ವರ್ಗಾವಣೆ ಕಾರ್ಯಕ್ರಮದಂತೆ ಎಲ್‌ಡಿಎಫ್, 35-60 ವರ್ಷದ ಮಹಿಳೆಯರಿಗೆ ‘ಸ್ತ್ರೀ ಸುರಕ್ಷಾ’ ಕಾರ್ಯಕ್ರಮದಡಿ ಮಾಸಿಕ 1,000 ರೂ. ಮತ್ತು ‘ಚೀಪ್ ಮಿನಿಸ್ಟರ್ಸ್ ಕನೆಕ್ಟ್ ಟು ವರ್ಕ್’ನಡಿ 18-30 ವಯೋಮಾನದವರಿಗೆ ಉದ್ಯೋಗ ತರಬೇತಿ ಪಡೆಯಲು 1000 ರೂ. ನೆರವು ಘೋಷಿಸಿದೆ. ಇದು ಎಷ್ಟು ಪ್ರಯೋಜನಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

‘ಜಗತ್ತಿನಲ್ಲಿರುವುದು ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು’ ಎಂದು ಹೇಳಿದ್ದ ನಾರಾಯಣ ಗುರುವಿನ ನೆಲದಲ್ಲಿ ಕೋಮುವಾದ ಉಸಿರಾಗಿರುವವರ ಗೆಲುವಿನ ಪ್ರಯತ್ನ ಸೋಲಲಿ.

Tags

keralaKeralam
share
ಮಾಧವ ಐತಾಳ್
ಮಾಧವ ಐತಾಳ್
Next Story
X