Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ಮೆಟಾಕ್ಕೆ 17.1 ಶತಕೋಟಿ ಡಾಲರ್ ದಂಡ:...

ಮೆಟಾಕ್ಕೆ 17.1 ಶತಕೋಟಿ ಡಾಲರ್ ದಂಡ: ಸಾಮಾಜಿಕ ಮಾಧ್ಯಮಗಳಿಗೆ ಅಂಕುಶ ಅಗತ್ಯ

ಮಾಧವ ಐತಾಳ್ಮಾಧವ ಐತಾಳ್25 Sept 2026 11:52 AM IST
share
ಮೆಟಾಕ್ಕೆ 17.1 ಶತಕೋಟಿ ಡಾಲರ್ ದಂಡ: ಸಾಮಾಜಿಕ ಮಾಧ್ಯಮಗಳಿಗೆ ಅಂಕುಶ ಅಗತ್ಯ

ಭಾರತ/ಚೀನಾ ತಮ್ಮ ದೇಶದಲ್ಲೂ ಮಕ್ಕಳು/ಯುವಜನರಿಗೆ ಇಂಥ ರಕ್ಷಣೆ ಲಭ್ಯವಾಗಬೇಕು ಎಂದು ಕಂಪೆನಿಗಳ ಮೇಲೆ ಒತ್ತಡ ಹೇರಬೇಕಿದೆ. ಅಮೆರಿಕದ ನ್ಯಾಯಾಲಯದ ತೀರ್ಪು ಜಗತ್ತಿನೆಲ್ಲೆಡೆ ಅನ್ವಯಿಸುವಂತೆ ಮಾಡುವುದು ಈಗಿನ ತುರ್ತು. ಬಡತನ, ಮೈ ಬಣ್ಣ, ಜಾತಿ, ಎತ್ತರ, ಭಾಷೆ, ಅಸಮಾನತೆ ಇತ್ಯಾದಿ ಕೀಳರಿಮೆಗಳಿಂದ ಬಳಲುತ್ತಿರುವ ಮತ್ತು ಮಾನಸಿಕ ಆರೋಗ್ಯ ವ್ಯವಸ್ಥೆ ಕ್ಷೀಣವಾಗಿರುವ ನಮ್ಮ ದೇಶದಲ್ಲಿ ಈ ಸಾಮಾಜಿಕ ಮಾಧ್ಯಮ ವೇದಿಕೆಗಳು ಮಾಡಿರುವ ಹಾನಿ ಎಷ್ಟಿರಬಹುದು? ಊಹಿಸಿದರೆ ಭಯ ಆಗುತ್ತದೆ.

ಅಮೆರಿಕದ ಕ್ಯಾಲಿಫೋರ್ನಿಯಾ, ಕೊಲರಾಡೋ, ಕೆಂಟುಕಿ, ನ್ಯೂಜೆರ್ಸಿ ಸೇರಿದಂತೆ 29 ರಾಜ್ಯಗಳು 2023ರಲ್ಲಿ ಮೆಟಾ ವಿರುದ್ಧ ಪ್ರಕರಣ ದಾಖಲಿಸಿದ್ದವು. ನ್ಯಾಯಾಲಯ ಆಗಸ್ಟ್ 26, 2026ರಂದು ನೀಡಿದ ತೀರ್ಪಿನಲ್ಲಿ 47 ರಾಜ್ಯಗಳಿಗೆ 17.1 ಶತಕೋಟಿ ಡಾಲರ್(ಅಂದಾಜು 1,62,757.80 ಕೋಟಿ ರೂ.) ಪರಿಹಾರ ನೀಡಬೇಕೆಂದು ಹೇಳಿದೆ. ಇದೊಂದು ಅವಿಸ್ಮರಣೀಯ ಆದೇಶವಾಗಿದ್ದು, ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸಲು ಜಗತ್ತಿ ನೆಲ್ಲೆಡೆಯ ದೇಶಗಳಿಗೆ ಮಾರ್ಗದರ್ಶಿ ಸೂತ್ರವೊಂದನ್ನು ನೀಡಿದೆ.

‘ಮೆಟಾ ಪೋಷಕರಿಗೆ ಗೊತ್ತಾಗದಂತೆ 13ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ದತ್ತಾಂಶ ಸಂಗ್ರಹಿಸಿದೆ. ಆ ಮೂಲಕ ಮಕ್ಕಳ ಖಾಸಗಿತನಕ್ಕೆ ಸಂಬಂಧಿಸಿದ ರಾಜ್ಯ/ಒಕ್ಕೂಟಗಳ ಹಲವು ಕಾಯ್ದೆಗಳನ್ನು ಉಲ್ಲಂಘಿಸಿದೆ. ತನ್ನ ವೇದಿಕೆಯಿಂದ ಆದ ಹಾನಿಯನ್ನು ಮುಚ್ಚಿಡುವ ಪ್ರಯತ್ನ ಮಾಡಿರುವುದಲ್ಲದೆ, ವೇದಿಕೆಯನ್ನು ಉದ್ದೇಶಪೂರ್ವಕವಾಗಿ ಮಕ್ಕಳು/ಹದಿಹರೆಯದವರಲ್ಲಿ ಗೀಳು ಪ್ರವೃತ್ತಿ ಬೆಳೆಸುವಂತೆ ರೂಪಿಸಿ, ವ್ಯಸನಿಗಳಾಗುವಂತೆ ಮಾಡಿದೆ. ಆಮೂಲಕ ಖಿನ್ನತೆ ಹಾಗೂ ಆತಂಕಕ್ಕೆ ಕಾರಣವಾಗಿದೆ. ಹಾನಿಕರ ವೈಶಿಷ್ಟ್ಯಗಳನ್ನು ತೆಗೆದುಹಾಕಲು ನಿರಾಕರಿಸಿದೆ; ಮಕ್ಕಳ ಸುರಕ್ಷತೆಗೆ ಬದಲಾಗಿ ಆರ್ಥಿಕ ಲಾಭ ಹಾಗೂ ಆದಾಯ ಸೃಷ್ಟಿಯನ್ನು ಗುರಿಯಾಗಿಸಿಕೊಂಡಿದೆ’ ಎಂದು ರಾಜ್ಯಗಳು ದಾವೆ ಹೂಡಿದ್ದವು. ವರ್ಜಿನಿಯಾಕ್ಕೆ ಲಭ್ಯವಾದ 353 ದಶಲಕ್ಷ ಡಾಲರ್ ಪರಿಹಾರವು ರಾಜ್ಯದ ಗ್ರಾಹಕ ರಕ್ಷಣೆ ಚರಿತ್ರೆಯಲ್ಲೇ ಅತಿ ಹೆಚ್ಚು ಎಂದು ಅಟಾರ್ನಿ ಜನರಲ್ ಜೇ ಜೋನ್ಸ್ ಹೇಳಿದ್ದಾರೆ.

ವಿರುದ್ಧ ದಿಕ್ಕಿನ ಪಯಣ

ಸಾಮಾಜಿಕ ಮಾಧ್ಯಮಗಳ ಉದ್ದೇಶ-ಸಾಮಾಜಿಕ ಸಂಬಂಧಗಳ ಉತ್ತೇಜನ ಹಾಗೂ ಸಂವಹನ ಸಾಧಿಸಲು ನೆರವಾಗುವುದು. ಆದರೆ, ಈಗ ಅವು ವಿರುದ್ಧ ದಿಕ್ಕಿನಲ್ಲಿ ಸಾಗಿವೆ. ಈ ವೇದಿಕೆಗಳು ಮಕ್ಕಳು/ಹದಿಹರೆಯದವರು ಮಾತ್ರವಲ್ಲದೆ, ಪ್ರಬುದ್ಧರಲ್ಲೂ ಕೀಳರಿಮೆ, ಸ್ವಯಂ ಹಾನಿ, ಆತಂಕ, ಗೀಳು ಪ್ರವೃತ್ತಿ, ಖಿನ್ನತೆ ಮತ್ತು ಆಹಾರ ಸೇವನೆಯಲ್ಲಿ ವ್ಯತ್ಯಯಕ್ಕೆ ಕಾರಣವಾಗಿದ್ದು, ಮಾನಸಿಕ ಆರೋಗ್ಯದ ಮೇಲೆ ವಿಪರಿಣಾಮ ಬೀರಿವೆ. ಮೆಟಾ(ಇನ್‌ಸ್ಟಾಗ್ರಾಂ/ಫೇಸ್‌ಬುಕ್/ಮೆಸೆಂಜರ್/ವಾಟ್ಸ್ ಆ್ಯಪ್) ಮಾತ್ರವಲ್ಲದೆ, ಆಲ್ಫಾಬೆಟ್(ಗೂಗಲ್/ಯುಟ್ಯೂಬ್) ಹಾಗೂ ಟಿಕ್‌ಟಾಕ್ ಕೂಡ ಗೀಳು ಪ್ರವೃತ್ತಿ ಬೆಳೆಸುವಿಕೆ ಮತ್ತು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿವೆ.

ಪ್ರಕರಣದ ವಿಚಾರಣೆಯು ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡಿನಲ್ಲಿ ಆಗಸ್ಟ್ 18,2026ರಂದು ಆರಂಭವಾಯಿತು. ವಿಚಾರಣೆ ವೇಳೆ ಇನ್‌ಸ್ಟಾಗ್ರಾಂ ಮಕ್ಕಳಲ್ಲಿ ಗೀಳು ಪ್ರವೃತ್ತಿ ಸೃಷ್ಟಿಸುತ್ತದೆ ಎಂಬ ಆಂತರಿಕ ದಾಖಲೆಗಳನ್ನು ಹಾಜರುಪಡಿಸಲಾಯಿತು. ಬ್ರಿಟನ್‌ನ ಹದಿಹರೆಯದ ಬಾಲಕಿಯರಲ್ಲಿ ಶೇ.13.5 ಮಂದಿ ಇನ್‌ಸ್ಟಾಗ್ರಾಂ ಸೇರಿದ ಬಳಿಕ ತಮ್ಮಲ್ಲಿ ಆತ್ಮಹತ್ಯೆ ಆಲೋಚನೆ ಹೆಚ್ಚಿತು ಎಂದು ಫೇಸ್‌ಬುಕ್ ನಡೆಸಿದ ಸಮೀಕ್ಷೆಯಲ್ಲಿ ಹೇಳಿದ್ದು ಪತ್ತೆಯಾಯಿತು. ಈ ಕುರಿತ ಎಚ್ಚರಿಕೆ ಸೂಚನೆಗಳನ್ನು ಕಂಪೆನಿ ನಿರ್ಲಕ್ಷಿಸಿತು ಎಂದು ಮೆಟಾದ ಮಾಜಿ ಉದ್ಯೋಗಿಗಳು ಸಾಕ್ಷಿ ಹೇಳಿದರು. ಕಂಪೆನಿಯ ಆಂತರಿಕ ಸಂಶೋಧಕರ ಪ್ರಕಾರ, ಕೆಲವು ಸಮಸ್ಯೆಗಳು, ಮುಖ್ಯವಾಗಿ, ಸಾಮಾಜಿಕ ಹೋಲಿಕೆಗೆ ಸಂಬಂಧಿಸಿದವು, ಇನ್‌ಸ್ಟಾಗ್ರಾಂಗೆ ಸೀಮಿತವಾಗಿದ್ದವು. ಬೇರೆ ಮಾಧ್ಯಮಗಳು ಮುಖಚಹರೆ ಮತ್ತು ‘ಜೋಕಿ ಫಿಲ್ಟರ್’(ಪ್ರಸಾಧನ ಸಾಮಗ್ರಿ ಬಳಸದ ಇಲ್ಲವೇ ಸುಂದರವಾದ ಮುಖದ ಬದಲು ಮೂರ್ಖ, ಚೇಷ್ಟೆಯ ಇಲ್ಲವೇ ಉತ್ಪ್ರೇಕ್ಷಿತ ಬಿಂಬಗಳನ್ನು ತೋರಿಸುವ ಸಾಮಾಜಿಕ ಮಾಧ್ಯಮದ ಫಿಲ್ಟರ್‌ಗಳು. ಈ ಫಿಲ್ಟರ್‌ಗಳು ವರ್ಧಿತ ವಾಸ್ತವದ ಮೂಲಕ ಬಳಕೆದಾರನ ಮುಖವನ್ನು ಹಾಸ್ಯಾಸ್ಪದವಾಗಿ, ಕಾಮಿಕ್ಸ್‌ಗಳ ಚಿತ್ರದಂತೆ ಬದಲಿಸುತ್ತವೆ ಮತ್ತು ಧ್ವನಿಯನ್ನು ತಿರುಚುತ್ತವೆ)ನ್ನು ಗುರಿಯಾಗಿಸಿಕೊಂಡಿದ್ದರೆ, ಇನ್‌ಸ್ಟಾಗ್ರಾಂ ದೇಹ/ಜೀವನಶೈಲಿಯನ್ನು ಗುರಿಯಾಗಿಸಿಕೊಂಡಿರುತ್ತದೆ. ಇದರಿಂದ ವ್ಯಕ್ತಿ ತನ್ನನ್ನು ಬೇರೆಯವರೊಟ್ಟಿಗೆ ಹೋಲಿಸಿಕೊಂಡು, ತನ್ನಲ್ಲೇನೋ ಕೊರತೆಯಿದೆ ಎಂಬ ಕೀಳರಿಮೆ ಬೆಳೆಸಿಕೊಳ್ಳುತ್ತಾನೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ನಡೆಸಿದ ತನಿಖೆ ಹೇಳಿತು.

ಮುಖ್ಯ ಸಾಕ್ಷಿಯಾದ ಮೆಟಾದ ಮಾಜಿ ಸುರಕ್ಷತಾ ಇಂಜಿನಿಯರ್ ಅರ್ಥುರೋ ಬೆಜಾರ್, ‘‘ಮಕ್ಕಳನ್ನು ಲೈಂಗಿಕ ಪೀಡಕರಿಗೆ ಗುರಿಯಾಗಿಸುವುದು, ಹಿಂಸಾ ಪ್ರವೃತ್ತಿಯ ಗ್ರಾಫಿಕ್‌ಗಳ ಬಳಕೆ ಸೇರಿದಂತೆ ಮಕ್ಕಳ ಮೇಲೆ ತನ್ನ ಉತ್ಪನ್ನ ಮಾಡುತ್ತಿದ್ದ ಹಾನಿ ಬಗ್ಗೆ ಮೆಟಾಗೆ ಅರಿವಿತ್ತು; ತಾವು ಈ ಕುರಿತು ಫೇಸ್‌ಬುಕ್‌ನ ಉದ್ಯೋಗಿಗಳಿಗೆ ತಿಳಿಸಿದರೂ, ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಬಳಕೆದಾರರ ಅಪರಿಮಿತ ಪೆಂಟುವಿಕೆ(ಸ್ಕ್ರಾಲಿಂಗ್) ಪ್ರವೃತ್ತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದೆ’’ ಎಂದು ಹೇಳಿದರು. ಮೆಟಾ ಈ ಎಲ್ಲ ಆರೋಪಗಳನ್ನು ನಿರಾಕರಿಸಿತು. ಮೆಟಾ ವಕೀಲ ಪಾಲ್ ಶ್ಮಿಟ್, ‘‘ಕಂಪೆನಿಯ ದಾಖಲೆಗಳಿಂದ ತಮಗೆ ಬೇಕಿರುವ ಹೇಳಿಕೆಯನ್ನು ಹೆಕ್ಕಿಕೊಳ್ಳಲಾಗಿದೆ. ಮಕ್ಕಳು/ಪ್ರೌಢ ವಯಸ್ಕರು ಇನ್‌ಸ್ಟಾಗ್ರಾಂ ವಿಪರೀತವಾಗಿ ಬಳಸದಂತೆ ಹಲವು ಕ್ರಮ ತೆಗೆದುಕೊಳ್ಳಲಾಗಿದೆ; ಯುವ ಬಳಕೆದಾರರ 10 ಲಕ್ಷ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ’’ ಎಂದು ವಾದಿಸಿದರು. ಒಪ್ಪಂದದ ಬಳಿಕವೂ ಮೆಟಾ ತಾನು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಳ್ಳಲಿಲ್ಲ.

ಇದು ಮೆಟಾಕ್ಕೆ ಮಾತ್ರ ಸೀಮಿತವಾದ ಸಂಗತಿಯಲ್ಲ. ಆಲ್ಫಾಬೆಟ್(ಗೂಗಲ್ ಮತ್ತು ಯುಟ್ಯೂಬ್‌ನ ಮಾತೃಸಂಸ್ಥೆ) ಹಾಗೂ ಟಿಕ್‌ಟಾಕ್, ಪ್ರೌಢವಯಸ್ಕರಲ್ಲಿ ಗೀಳು ಪ್ರವೃತ್ತಿ ಬೆಳೆಸುವಿಕೆ ಮತ್ತು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿವೆ. ಮಾರ್ಚ್ 2026ರಲ್ಲಿ ಲಾಸ್‌ಏಂಜಲಿಸ್‌ನ ಸುಪ್ರೀಂ ಕೋರ್ಟ್, ಮೆಟಾ/ಆಲ್ಫಾಬೆಟ್(ಇತರ ಪ್ರತಿವಾದಿಗಳಾದ ಟಿಕ್‌ಟಾಕ್ ಹಾಗೂ ಸ್ನಾಪ್‌ಚಾಟ್ ವಿಚಾರಣೆಗೆ ಮುನ್ನವೇ ಪರಿಹಾರ ನೀಡಲು ಸಮ್ಮತಿಸಿದ್ದವು) ವೇದಿಕೆಗಳನ್ನು ಗೀಳು ಹಿಡಿಸುವಂತೆ ವಿನ್ಯಾಸಗೊಳಿಸಲಾಗಿದೆ ಎಂದು 6 ದಶಲಕ್ಷ ಡಾಲರ್ ದಂಡ ವಿಧಿಸಿತ್ತು. ತಾನು ಅತಿ ಸಣ್ಣ ವಯಸ್ಸಿನಲ್ಲೇ ಸಾಮಾಜಿಕ ಮಾಧ್ಯಮ, ಅದರಲ್ಲೂ ಯು ಟ್ಯೂಬ್-ಇನ್‌ಸ್ಟಾಗ್ರಾಂಗೆ ದಾಸಳಂತಾಗಿದ್ದು, ಇದರಿಂದ ಮಾನಸಿಕ ಆರೋಗ್ಯ ಹದಗೆಟ್ಟಿದೆ ಎಂದು 20 ವರ್ಷ ವಯಸ್ಸಿನ ಕೆ.ಜಿ.ಎಂ.(ಕಾಲೆ) ಎಂಬಾಕೆ ದೂರಿದ್ದಳು. ಮಾರ್ಚ್ 2026ರಲ್ಲಿ ನ್ಯೂ ಮೆಕ್ಸಿಕೋದ ನ್ಯಾಯಾಲಯವೊಂದು ವೇದಿಕೆ ಮಕ್ಕಳಿಗೆ ಉಂಟುಮಾಡುವ ಹಾನಿಗೆ ಸಂಬಂಧಿಸಿದಂತೆ ಬಳಕೆದಾರರ ದಾರಿ ತಪ್ಪಿಸಿದೆ. ಕಾಮಪ್ರಚೋದಕ, ಗ್ರಾಫಿಕ್ ಹಾಗೂ ಹಿಂಸಾತ್ಮಕ ವಿಷಯಗಳೆಡೆಗೆ ಮಕ್ಕಳು/ಪ್ರೌಢ ವಯಸ್ಕರನ್ನು ಸೆಳೆಯುತ್ತಿದೆ ಎಂದು ಮೆಟಾಗೆ ಒಟ್ಟು 942 ದಶಲಕ್ಷ ಡಾಲರ್ ದಂಡ ವಿಧಿಸಿತ್ತು. ‘ಮೆಟಾ ತನ್ನ ವೇದಿಕೆಯನ್ನು ನಿರ್ಲಕ್ಷ್ಯದಿಂದ ವಿನ್ಯಾಸಗೊಳಿಸಿದೆ. ವೇದಿಕೆ ಮೂಲಕ ಜನರನ್ನು ಪೀಡಿಸುತ್ತಿದೆ’ ಎಂದು ನ್ಯೂ ಮೆಕ್ಸಿಕೋ ವಾದಿಸಿತು. ಸಾಮಾಜಿಕ ವ್ಯಾಕುಲತೆಗೆ ಸಾಮಾಜಿಕ/ಪರಿಸರ ಅಂಶಗಳು ಕಾರಣ ಎಂಬ ಮೆಟಾ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. ಈ ಮೂಲಕ ಸಾಮಾಜಿಕ ಮಾಧ್ಯಮಗಳ ಅಲ್ಗರಿದಂನ್ನು ಸಾರ್ವಜನಿಕ ಆರೋಗ್ಯಕ್ಕೆ ಜೋಡಿಸಿತು. ಈ ತೀರ್ಪಿನ ಆಘಾತ ಮಾಯುವ ಮುನ್ನವೇ 4 ರಾಜ್ಯಗಳು ಹೂಡಿದ ಪ್ರತ್ಯೇಕ ದಾವೆಯಲ್ಲಿ ಹಲವು ಶತಕೋಟಿ ಡಾಲರ್ ಪರಿಹಾರ ನೀಡಲು ಒಪ್ಪಿಕೊಂಡಿತು.

ಟಿಕ್‌ಟಾಕ್ ಸ್ವಯಂ ಹಾನಿ, ಆತಂಕ, ಗೀಳು ಪ್ರವೃತ್ತಿ, ಖಿನ್ನತೆ ಮತ್ತು ಆಹಾರ ಸೇವನೆಯಲ್ಲಿ ವ್ಯತ್ಯಯದಿಂದ ಬಳಲುವಂತೆ ಮಾಡಿದೆ ಎಂದು ದೂರು ನೀಡಿದ್ದ ಮೂವರು ಹದಿಹರೆಯದವರಿಗೆ ಪರಿಹಾರ ನೀಡಿ ಕೈ ತೊಳೆದು ಕೊಂಡಿತ್ತು. ಟಿಕ್‌ಟಾಕ್ ಮಕ್ಕಳ ಖಾಸಗಿತನಕ್ಕೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ದಾಖಲಿಸಿದ್ದ ಪ್ರಕರಣದಲ್ಲಿ ಆಗಸ್ಟ್ 2026ರಲ್ಲಿ 400 ದಶಲಕ್ಷ ಡಾಲರ್ ಪರಿಹಾರ ನೀಡಿ, ಬಗೆಹರಿಸಿಕೊಂಡಿತು.

ಸಾಮಾಜಿಕ ಮಾಧ್ಯಮದಿಂದ ಗೀಳು ಪ್ರವೃತ್ತಿ, ಕೀಳರಿಮೆ ಹೆಚ್ಚಳ

ತಜ್ಞರ ಪ್ರಕಾರ, ಗೀಳು ಪ್ರವೃತ್ತಿ ಎನ್ನುವುದು ಮೆದುಳಿನ ನರಸಮೂಹ, ವಂಶವಾಹಿಗಳು ಮತ್ತು ವ್ಯಕ್ತಿಯ ಜೀವನಾನುಭವವನ್ನು ಒಳಗೊಂಡ ಸಂಕೀರ್ಣ ಪ್ರಕ್ರಿಯೆ. ಈ ಪ್ರವೃತ್ತಿಯವರಲ್ಲಿ ಮಾದಕದ್ರವ್ಯಗಳ ಸೇವನೆ ಮತ್ತಿತರ ಹಾನಿಕರ ವರ್ತನೆ ಕಂಡುಬರುವ ಸಾಧ್ಯತೆ ಇದೆ; ಇದು ಉಪಚರಿಸಬಹುದಾದ ದೀರ್ಘಕಾಲೀನ ವೈದ್ಯಕೀಯ ಸಮಸ್ಯೆ. ಸಾಮಾಜಿಕ ಮಾಧ್ಯಮಗಳು ಕೆಲವರಲ್ಲಿ ಗೀಳು ಪ್ರವೃತ್ತಿಗೆ, ಹಾನಿಕರ ಕ್ರಿಯೆಗಳಿಗೆ ಕಾರಣವಾಗಬಹುದು. 2024ರಲ್ಲಿ ಕ್ಯೂರಿಯಸ್ ವೈದ್ಯವಿಜ್ಞಾನ ಜರ್ನಲ್(www.cureus.com)ನಲ್ಲಿ ಪ್ರಕಟವಾದ ಜಶ್ವಿನಿ ಅಮೃತಲಿಂಗಂ ಮತ್ತು ಅನಿಕಾ ಖೇರಾ ಅವರ ಅಧ್ಯಯನದ ಪ್ರಕಾರ, ಸಾಮಾಜಿಕ ಮಾಧ್ಯಮಗಳಿಂದ ಸೃಷ್ಟಿಯಾಗುವ ಗೀಳು ಪ್ರವೃತ್ತಿಯು ಆತ್ಮವಿಶ್ವಾಸದ ಕೊರತೆ, ಮಾನಸಿಕ ಆರೋಗ್ಯ ಸಮಸ್ಯೆ, ಅಪರಿಮಿತ ಪೆಂಟುವಿಕೆ ಇತ್ಯಾದಿಗೆ ಕಾರಣವಾಗಬಹುದು. ಸಂಜ್ಞಾನಾತ್ಮಕ ಥೆರಪಿ, ಶೈಕ್ಷಣಿಕ ಜಾಗೃತಿ ಮತ್ತು ಪೋಷಕರಿಂದ ಸಾಮಾಜಿಕ ಮಾಧ್ಯಮಗಳ ಬಳಕೆ ಮೇಲೆ ಮಿತಿ ಹೇರುವಿಕೆ ಮೂಲಕ ಇದನ್ನು ಸರಿಪಡಿಸಬಹುದು. ಆದರೆ, ವೈದ್ಯ ಶಾಸ್ತ್ರವು ಸಾಮಾಜಿಕ ಮಾಧ್ಯಮ ಬಳಕೆಯನ್ನು ‘ಗೀಳು ಪ್ರವೃತ್ತಿ’ ಎಂದು ಗುರುತಿಸದ ಕಾರಣ ಇಂಥ ವರ್ತನೆಗಳ ಪತ್ತೆ, ಉಪಶಮನ ಕ್ರಮಗಳು ಹಾಗೂ ಉಪಚಾರ ಕುರಿತ ಮಾರ್ಗಸೂಚಿಗಳು ಸ್ಪಷ್ಟವಾಗಿಲ್ಲ. ಮೆಟಾ ಇದನ್ನು ಆಧಾರವಾಗಿಟ್ಟುಕೊಂಡು ‘ಸಾಮಾಜಿಕ ಮಾಧ್ಯಮ ಗೀಳು ಪ್ರವೃತ್ತಿಗೆ ಕಾರಣವಾಗುತ್ತದೆ ಎನ್ನುವುದು ಸ್ಥಾಪಿತ ಮಾನಸಿಕ ಸ್ಥಿತಿಯಲ್ಲ’ ಎಂದು ವಾದಿಸಿತ್ತು. ಆದರೆ, ಆ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ.

ಸುರಕ್ಷಾ ಕ್ರಮಗಳೇನು?

ಮೆಟಾ ಒಪ್ಪಂದದನ್ವಯ ಪ್ರೌಢವಯಸ್ಕರು/ಮಕ್ಕಳಿಗೆ ಹಲವು ಸುರಕ್ಷಾ ಕ್ರಮಗಳನ್ನು ಅಳವಡಿಸುವುದಾಗಿ ಹೇಳಿದೆ; ಅವೆಂದರೆ, ಮಕ್ಕಳ ಪ್ರತಿನಿತ್ಯದ ಬಳಕೆಗೆ 2 ಗಂಟೆಗಳ ಮಿತಿ ಹೇರುವಿಕೆ, ಶಾಲೆ ಸಮಯ/ರಾತ್ರಿ ವೇಳೆ ಸಂದೇಶಗಳನ್ನು ನಿಶ್ಶಬ್ದಗೊಳಿಸುವುದು, ಬಳಕೆದಾರರ ವಯಸ್ಸಿನ ಪರಿಶೀಲನೆ ಕಡ್ಡಾಯಗೊಳಿಸುವುದು ಮತ್ತು ಪೋಷಕರ ನಿಯಂತ್ರಣವನ್ನು ಬಿಗಿಗೊಳಿಸುವಿಕೆ, ಮಕ್ಕಳು/ಪ್ರೌಢವಯಸ್ಕರ ಖಾತೆಗಳಲ್ಲಿ ‘ಇಷ್ಟ’ ಎಂಬುದನ್ನು ಮುಚ್ಚಿಡುವುದು, ಸಾಮಾಜಿಕ ಹೋಲಿಕೆ(ಮೈ ಬಣ್ಣ, ಎತ್ತರ, ಜಾತಿ, ಗಳಿಸಿದ ಅಂಕಗಳು ಇತ್ಯಾದಿ)ಯನ್ನು ಕಡಿಮೆಗೊಳಿಸಲು ಫಿಲ್ಟರ್‌ಗಳನ್ನು ತೆಗೆದುಹಾಕುವುದು, ಅಪರಿಮಿತ ತೊಡಗಿಸಿಕೊಳ್ಳುವಿಕೆಗೆ ತಡೆ, ಪೀಡಿಸುವಿಕೆ(ಬುಲ್ಲಿಯಿಂಗ್), ಸ್ವಯಂಹಾನಿ ಮತ್ತು ಆಹಾರ ಸೇವನೆಗೆ ಸಂಬಂಧಿಸಿದ ವಿಷಯಗಳಿಗೆ ನಿರ್ಬಂಧ ಇತ್ಯಾದಿ. ಆದರೆ, ಮಕ್ಕಳು ಏನು ನೋಡುತ್ತಾರೆ ಎಂಬುದನ್ನು ಪರಿಶೀಲಿಸಲು ಪೋಷಕರಿಗೆ ಅವಕಾಶ ಇರುವುದಿಲ್ಲ.

ಈ ತೀರ್ಪು ಒಂದು ಚಾರಿತ್ರಿಕ ಘಟನೆ

ಕಂಪೆನಿಗಳು ಬಳಕೆದಾರರು ಮತ್ತು ಸಮಾಜಕ್ಕೆ ಉತ್ತರದಾಯಿ ಆಗಿರಬೇಕು ಎಂಬ ಸಂದೇಶ ನೀಡಿದೆ. ವಾಣಿಜ್ಯಿಕ ಕಾರಣಗಳಿಂದ ತನ್ನ ವಿನ್ಯಾಸ ಮತ್ತು ಕಾರ್ಯನೀತಿಗೆ ಅಂಟಿಕೊಂಡು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಮೆಟಾ ನಿರ್ಲಕ್ಷಿಸಿತ್ತು. ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಮಕ್ಕಳು/ಪ್ರೌಢವಯಸ್ಕರಿಗೆ ಸುರಕ್ಷಿತವಾಗಿಸಲು ಹಾಗೂ ಅವರ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳುವುದನ್ನು ಈ ಆದೇಶ ಕಡ್ಡಾಯಗೊಳಿಸುತ್ತದೆ. ಮೆಟಾ ಪ್ರೌಢವಯಸ್ಕರು/ಮಕ್ಕಳ ಮಾನಸಿಕ ಆರೋಗ್ಯಕ್ಕೆ ಧಕ್ಕೆಯುಂಟು ಮಾಡಿವೆ ಎಂಬುದನ್ನು ತೀರ್ಪು ಗುರುತಿಸಿದೆ. ಆದರೆ, ಮೆಟಾ ತನ್ನ ವ್ಯವಹಾರ ಮಾದರಿಯನ್ನು ಬದಲಿಸಿಲ್ಲ; ಅಪರಿಮಿತ ಪೆಂಟುವಿಕೆ ಹಾಗೂ ಗುರಿನಿರ್ದೇಶಿತ ಜಾಹೀರಾತುಗಳು ಮುಂದುವರಿಯಲಿದೆ. ಹೀಗಾಗಿ, ಮೆಟಾದಲ್ಲಿ ಮೂಲಭೂತ ಬದಲಾವಣೆಗಳು ಆಗುವುದಿಲ್ಲ. ಮೆಟಾ ಸಿಇಒ ಮಾರ್ಕ್ ಝಕರ್‌ಬರ್ಗ್, ಪ್ರತಿಸ್ಪರ್ಧಿಗಳಾದ ಟಿಕ್‌ಟಾಕ್ ಮತ್ತು ಯುಟ್ಯೂಬ್ ಕೂಡ ಇಂಥದ್ದೇ ಕ್ರಮ ತೆಗೆದುಕೊಳ್ಳಬೇಕು. ನಿಯಮ ಜಾರಿಗೊಳಿಸಿದರೆ ಮೆಟಾದ ಬಳಕೆದಾರರು ಬೇರೆ ವೇದಿಕೆ ಬಳಸಲಾರಂಭಿಸುತ್ತಾರೆ ಎಂದಿದ್ದಾರೆ. ಈ ವೇದಿಕೆಗಳ ಗೀಳು ಹತ್ತಿಸಿಕೊಂಡ ಮಕ್ಕಳು/ಯುವಜನರು ಖಿನ್ನತೆ, ಆತ್ಮಹತ್ಯೆ ಪ್ರವೃತ್ತಿ ಬೆಳೆಸಿಕೊಳ್ಳುವುದಲ್ಲದೆ, ಅವರ ಸಾಮಾಜಿಕ/ವೈಯಕ್ತಿಕ ವರ್ತನೆ ಬದಲಾಗುತ್ತದೆ ಹಾಗೂ ಶೈಕ್ಷಣಿದ ಸಾಧನೆ ಮೇಲೆ ವಿಪರಿಣಾಮ ಬೀರುತ್ತದೆ. ಆದ್ದರಿಂದ, ಎಲ್ಲ ಸಾಮಾಜಿಕ ಮಾಧ್ಯಮ ವೇದಿಕೆಗಳೂ ಈ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವಂತೆ ಮಾಡುವುದು ಮುಂದಿನ ಸವಾಲು.

ಈ ಟೆಕ್ ಕಂಪೆನಿಗಳ ಆರ್ಥಿಕ ಬಾಹುಬಲ ಅಸದಳವಾದದ್ದು. ಮೆಟಾದ ಕಿರೀಟದಲ್ಲಿನ ಮುಕುಟಮಣಿ-ಇನ್‌ಸ್ಟಾಗ್ರಾಂ. ಮೆಟಾದ 2026ರ ಮೊದಲರ್ಧದ ಜಾಗತಿಕ ಆದಾಯ 60.8 ಬಿಲಿಯನ್ ಡಾಲರ್ (5,78,451 ಕೋಟಿ ರೂ.). ಹೀಗಾಗಿ, ದಂಡದ ಮೊತ್ತ ಅದಕ್ಕೆ ದೊಡ್ಡದಲ್ಲ ಮತ್ತು ಅಪರಿಮಿತ ಪೆಂಟುವಿಕೆ ಹಾಗೂ ಗುರಿನಿರ್ದೇಶಿತ ಜಾಹೀರಾತುಗಳಿಗೆ ನಿರ್ಬಂಧ ಹಾಕುವುದಿಲ್ಲ. ದೇಶದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಫೇಸ್‌ಬುಕ್ ಬಳಕೆದಾರರಿದ್ದಾರೆ; 70 ಕೋಟಿ(ಆಧಾರ: NapoleonCat). ಅದೇ ರೀತಿ, ಆಲ್ಫಾಬೆಟ್‌ನ ಜಾಗತಿಕ ವಹಿವಾಟು 119.79 ಬಿಲಿಯನ್ ಡಾಲರ್(11,47,000 ಕೋಟಿ ರೂ.). ದೇಶದಲ್ಲಿ 49.1 ಕೋಟಿ ಯುಟ್ಯೂಬ್ ಬಳಕೆದಾರರು, 10 ಕೋಟಿ ಚಾನೆಲ್‌ಗಳು ಮತ್ತು ಇವುಗಳಲ್ಲಿ 15,000 ಚಾನೆಲ್‌ಗಳ ಗ್ರಾಹಕರ ಸಂಖ್ಯೆ 10 ಲಕ್ಷ ದಾಟಿದೆ. ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮತ್ತು ಯುಟ್ಯೂಬ್ ಚಾನೆಲ್‌ಗಳ ಮೂಲಕ ಹಣದ ಹೊಳೆ ಹರಿಯುತ್ತದೆ. ಇದರಿಂದಾಗಿಯೇ ಭಾರೀ ಟೆಕ್ ಕಂಪೆನಿಗಳು ಆಳುವವರನ್ನು ತಮಗೆ ಇಷ್ಟ ಬಂದಂತೆ ಕುಣಿಸುತ್ತವೆ ಮತ್ತು ಅನುಕೂಲಕರ ನೀತಿ-ನಿಯಮ ರೂಪಿಸುವಂತೆ ಮಾಡುತ್ತವೆ. ಅವು ಸರಕಾರವನ್ನೂ ಮೀರಿ ಬೆಳೆದಿವೆ. ಮೆಟಾ ಮಕ್ಕಳು/ಯುವಜನರ ಮಾನಸಿಕ ಆರೋಗ್ಯದ ಮೇಲೆ ತೀವ್ರ ವಿಪರಿಣಾಮ ಬೀರಿರುವ ಗೀಳು ಹಿಡಿಸುವಿಕೆ ಮತ್ತು ಹಾನಿಕರ ವಿನ್ಯಾಸದ ಬಗ್ಗೆ ಮಾಹಿತಿ ನೀಡದೆ ಸಾರ್ವಜನಿಕರನ್ನು ವಂಚಿಸಿದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದರೂ, ಅದರ ವರ್ತನೆ ಬದಲಾಗುವ ಸಾಧ್ಯತೆ ಕಡಿಮೆ. ಏಕೆಂದರೆ, ಹಣ ಸರ್ವಶಕ್ತ.

ಭಾರತ/ಚೀನಾ ತಮ್ಮ ದೇಶದಲ್ಲೂ ಮಕ್ಕಳು/ಯುವಜನರಿಗೆ ಇಂಥ ರಕ್ಷಣೆ ಲಭ್ಯವಾಗಬೇಕು ಎಂದು ಕಂಪೆನಿಗಳ ಮೇಲೆ ಒತ್ತಡ ಹೇರಬೇಕಿದೆ. ಅಮೆರಿಕದ ನ್ಯಾಯಾಲಯದ ತೀರ್ಪು ಜಗತ್ತಿನೆಲ್ಲೆಡೆ ಅನ್ವಯಿಸುವಂತೆ ಮಾಡುವುದು ಈಗಿನ ತುರ್ತು. ಬಡತನ, ಮೈ ಬಣ್ಣ, ಜಾತಿ, ಎತ್ತರ, ಭಾಷೆ, ಅಸಮಾನತೆ ಇತ್ಯಾದಿ ಕೀಳರಿಮೆಗಳಿಂದ ಬಳಲುತ್ತಿರುವ ಮತ್ತು ಮಾನಸಿಕ ಆರೋಗ್ಯ ವ್ಯವಸ್ಥೆ ಕ್ಷೀಣವಾಗಿರುವ ನಮ್ಮ ದೇಶದಲ್ಲಿ ಈ ಸಾಮಾಜಿಕ ಮಾಧ್ಯಮ ವೇದಿಕೆಗಳು ಮಾಡಿರುವ ಹಾನಿ ಎಷ್ಟಿರಬಹುದು? ಊಹಿಸಿದರೆ ಭಯ ಆಗುತ್ತದೆ.

(ಬೆಂಗಳೂರಿನ ನಿಮ್ಹಾನ್ಸ್ ಮಕ್ಕಳಲ್ಲಿ ತಂತ್ರಜ್ಞಾನದ ವ್ಯಸನ ಮತ್ತು ಅದಕ್ಕೆ ಸಂಬಂಧಿಸಿದ ಭಾವನಾತ್ಮಕ ಸವಾಲುಗಳನ್ನು ನಿಭಾಯಿಸಲು ಪೋಷಕರಿಗೆ ನೆರವಾಗಲು ಸಮುದಾಯ ಆಧರಿತ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿದೆ. ನಿಮ್ಹಾನ್ಸ್‌ನ ಡಿಜಿಟಲ್ ಡಿಟಾಕ್ಸ್ ಸಹಾಯವಾಣಿ; 94808 29675. ಖಿನ್ನತೆ, ಕೀಳರಿಮೆ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿರುವವರು ದೂರವಾಣಿ ಸಂಖ್ಯೆ; 91 80 26995360 ಸಂಪರ್ಕಿಸಬಹುದು.

(cam.nimhans.ac.in). ಟೆಲಿಮನಸ್: 14416/1800 891 4416).

(ಅಂಕಣಕಾರರು ಪತ್ರಕರ್ತ ಮತ್ತು ಅನುವಾದಕ

www.ruthamedia.com)

Tags

Metasocial media
share
ಮಾಧವ ಐತಾಳ್
ಮಾಧವ ಐತಾಳ್
Next Story
X