Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ಕಬ್ಬು ಬೆಳೆಗಾರರ ಪ್ರತಿಭಟನೆ ಮತ್ತು...

ಕಬ್ಬು ಬೆಳೆಗಾರರ ಪ್ರತಿಭಟನೆ ಮತ್ತು ಖಂಡಸಾರಿಗೆ ಅಂಕುಶದ ಪ್ರಯತ್ನ

ಮಾಧವ ಐತಾಳ್ಮಾಧವ ಐತಾಳ್6 Nov 2026 8:50 AM IST
share
ಕಬ್ಬು ಬೆಳೆಗಾರರ ಪ್ರತಿಭಟನೆ ಮತ್ತು ಖಂಡಸಾರಿಗೆ ಅಂಕುಶದ ಪ್ರಯತ್ನ

ರಾಜ್ಯದಲ್ಲಿರುವ 81 ಸಕ್ಕರೆ ಕಾರ್ಖಾನೆಗಳಲ್ಲಿ ಉತ್ತರ ಕರ್ನಾಟಕದ ಪಾಲು 60ಕ್ಕೂ ಅಧಿಕ. ಆದ್ದರಿಂದ, ಅಲ್ಲಿ ಪ್ರತಿಭಟನೆ ತೀವ್ರವಾಗಿದೆ. ಕಾರ್ಖಾನೆಗಳ ನುರಿಯುವ ಸಾಮರ್ಥ್ಯ ಹೆಚ್ಚಳದಿಂದ ಕಬ್ಬು ಖರೀದಿಗೆ ಕಾರ್ಖಾನೆಗಳ ನಡುವೆ ಪೈಪೋಟಿ ಅಧಿಕಗೊಂಡಿದೆ. ಹೊಸ ಕಾರ್ಖಾನೆಗಳಿಗೆ 40ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಕಾರ್ಖಾನೆಗಳು ಹೆಚ್ಚಿದವೇ ಹೊರತು, ಒಳಸುರಿಗಳ ಬೆಲೆ ಹೆಚ್ಚಳದಿಂದ ಕಬ್ಬು ಕೃಷಿ ರೈತರಿಗೆ ಲಾಭದಾಯಕವಾಗಿಲ್ಲ.

ಕಬ್ಬು ಬೆಳೆಗಾರರ ಪ್ರತಿಭಟನೆ ಮುಂದುವರಿದಿದೆ. ಹೆಚ್ಚಿನ ಸಕ್ಕರೆ ಕಾರ್ಖಾನೆಗಳು ಜನಪ್ರತಿನಿಧಿಗಳ ಮಾಲಕತ್ವದಲ್ಲಿದ್ದು, ರೈತರ ಅಳಲು ಯಾರಿಗೂ ಕೇಳಿಸುತ್ತಿಲ್ಲ. ಏತನ್ಮಧ್ಯೆ ಕೇಂದ್ರ ಸರಕಾರ ಶೇ.100 ಎಥೆನಾಲ್ ಹಾಡು ಹಾಡುತ್ತಿದೆ; ಗ್ರಾಮೀಣ ಆರ್ಥಿಕತೆಯಲ್ಲಿ ಗಮನಾರ್ಹ ಪಾತ್ರ ವಹಿಸಿರುವ ಖಂಡಸಾರಿ ಉದ್ಯಮವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ತಂದಿದ್ದ ಕಾಯ್ದೆಯೊಂದರ ಕರಡನ್ನು ಪ್ರತಿರೋಧದ ಹಿನ್ನೆಲೆಯಲ್ಲಿ ವಾಪಸ್ ತೆಗೆದು ಕೊಂಡಿದೆ.

ಮಾರ್ಚ್ 2026ರಲ್ಲಿ ರೈತರ ನಿಯೋಗ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿಯಾಗಿ, ಕಬ್ಬಿಗೆ ನ್ಯಾಯಸಮ್ಮತ ಬೆಲೆ ನೀಡಬೇಕು; ಸಕ್ಕರೆಯ ಕನಿಷ್ಠ ಬೆಲೆ ಕಳೆದ 9 ವರ್ಷದಿಂದ 31 ರೂ.ನಿಂದ ಬದಲಾಗದೆ ಉಳಿದಿದೆ ಎಂದು ಗಮನ ಸೆಳೆದಿತ್ತು. ಕಬ್ಬು ನುರಿಸುವ ಋತುಮಾನ ಆರಂಭವಾದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸೆಪ್ಟಂಬರ್ 29ರಂದು ಹುಬ್ಬಳ್ಳಿ ಜಾಥಾ ನಡೆಸಿ, ಸ್ಪಷ್ಟ ಆಶ್ವಾಸನೆ ನೀಡಬೇಕೆಂದು ರೈತರು ಆಗ್ರಹಿಸಿದರು. ಅವರನ್ನು ದಿಲ್ಲಿಗೆ ಬರಲು ಹೇಳಲಾಯಿತು. ಅಕ್ಟೋಬರ್ 12ರಂದು ಎಲ್ಲ ಭಾಗೀದಾರರ ಸಭೆ ನಡೆಯಿತು. ತಮ್ಮ ಮಾತು ಸರಿಯಾಗಿ ಆಲಿಸಲಿಲ್ಲ ಎಂದು ದೂರಿದ ರೈತರು ಬೆಳಗಾವಿಯಲ್ಲಿ ಪುಣೆ-ಬೆಂಗಳೂರು ಹೆದ್ದಾರಿ ಬಂದ್ ಮಾಡಿದರು. ಅಕ್ಟೋಬರ್ 14ರಂದು ಬೆಳಗಾವಿ ಜಿಲ್ಲೆಯ ಹತ್ತರ್ಗಿಯಿಂದ ಹುಬ್ಬಳ್ಳಿ ಚಲೋ ಪಾದಯಾತ್ರೆ ಆರಂಭವಾಯಿತು. ಎರಡು ದಿನ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಯಿತು. ಬೆಳಗಾವಿಯಲ್ಲಿ ಅಕ್ಟೋಬರ್ 27, 2026ರಂದು ಕಾರ್ಖಾನೆ ಮಾಲಕರು, ರೈತ ಸಂಘಟನೆಗಳು, ಸಚಿವರು ಹಾಗೂ ಶಾಸಕರ ಸಭೆ ನಡೆಯಿತು. ಕೇಂದ್ರ ನಿಗದಿಪಡಿಸುವ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಆಧರಿಸಿ, ಕಬ್ಬಿನ ಬೆಲೆ ನಿರ್ಧರಿ ಸಲು ಕಾರ್ಖಾನೆ ಮಾಲಕರು ಸಮ್ಮತಿಸಿದರು. ಸಭೆ ಬಳಿಕ ರೈತರು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಮನೆ ಎದುರು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಹಿಂಪಡೆದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕಬ್ಬು ಬೆಳೆಗಾರರ ಒಕ್ಕೂಟ, ಸಂಯುಕ್ತ ಕಿಸಾನ್ ಮೋರ್ಚಾ ಮತ್ತಿತರ ಸಂಘಸಂಸ್ಥೆಗಳು ಪ್ರತಿಭಟನೆಗೆ ಬೆಂಬಲ ನೀಡಿದವು. 2025ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಬ್ಬಿನ ಬೆಲೆ ಟನ್‌ಗೆ 3,300 ರೂ. ನಿಗದಿಪಡಿಸಿತ್ತು(ಸಕ್ಕರೆ ಇಳುವರಿ ದರ ಶೇ.11.25 ಎಂದು ಆಧರಿಸಿ).

ರೈತರ ಬೇಡಿಕೆಗಳೇನು?

* ಟನ್ನಿಗೆ ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ(ಎಫ್‌ಆರ್‌ಸಿ) 5,500 ರೂ. ನಿಗದಿ * ಸರಕಾರ ನಿಗದಿಪಡಿಸಿದ ಬೆಲೆ ಮತ್ತು ಕಾರ್ಖಾನೆ ನೀಡುವ ಬೆಲೆ ನಡುವಿನ ಅಂತರ ಸರಿದೂಗಿಸಲು ರಾಜ್ಯ ಸರಕಾರದಿಂದ ನೆರವು * ಸ್ವಾಮಿನಾಥನ್ ಸಮಿತಿ ವರದಿಯ ಶಿಫಾರಸುಗಳ ಅನುಷ್ಠಾನ * ಕಾರ್ಖಾನೆಗಳಿಂದ ರೈತರಿಗೆ ಹಣ ಪಾವತಿಯಲ್ಲಿನ ವಿಳಂಬ ತಪ್ಪಿಸಲು ವ್ಯವಸ್ಥೆ * ತೂಕ ಹಾಕುವಿಕೆಯ ಕಂಪ್ಯೂಟರೀಕರಣದ ನಿಗಾ ವಹಿಸುವಿಕೆ * ಜಮೀನಿನ ಸರ್ವೇ ಸಂಖ್ಯೆಯೊಟ್ಟಿಗೆ ಸಕ್ಕರೆ ಇಳುವರಿ(ಅಂದರೆ, 100 ಕೆ.ಜಿ. ಕಬ್ಬಿನಿಂದ 10 ಕೆ.ಜಿ. ಸಕ್ಕರೆ ಉತ್ಪಾದನೆಯಾದರೆ, ರಿಕವರಿ ಶೇ.10) ದರದ ಪ್ರಕಟಣೆ * ಕಾರ್ಖಾನೆ ಉತ್ಪಾದಿಸುವ ಪ್ರತೀ ಲೀಟರ್ ಎಥೆನಾಲ್‌ಗೆ ರೈತರಿಗೆ 60 ರೂ. ಕೊಡಬೇಕು * ಸಕ್ಕರೆಯ ಭೇದಾತ್ಮಕ ದರ ಕಾರ್ಯನೀತಿ(ಡಿಫರೆನ್ಷಿಯಲ್ ಪ್ರೈಸಿಂಗ್ ಪಾಲಿಸಿ)ಯ ಪುನರಾವಲೋಕನ * ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಈಗಾಗಲೇ 50-60 ರೂ. ಇರುವುದರಿಂದ, ಅದೇ ಬೆಲೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಬೇಕು * ಕೃಷಿ ವಿಜ್ಞಾನಿ ರಮೇಶ್ ಚಂದ್ ನೇತೃತ್ವದ ಸಮಿತಿ ವರದಿಯನ್ನು ಶೀಘ್ರವೇ ಸಲ್ಲಿಸಬೇಕು ಮತ್ತು ಅದರ ಶಿಫಾರಸುಗಳನ್ನು ಅನುಷ್ಠಾನಗೊಳಿಸ ಬೇಕು.

ರಾಜ್ಯ ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರದ ನಂತರ 3ನೇ ಅತಿ ದೊಡ್ಡ ಉತ್ಪಾದಕ. ರಾಜ್ಯದಲ್ಲಿ ಕಾಲಕ್ರಮೇಣ ಕಬ್ಬು ಬೆಳೆ ಪ್ರದೇಶ ಮತ್ತು ಉತ್ಪಾದನೆ ಎರಡೂ ಹೆಚ್ಚಿದೆ. 2016-17ರಲ್ಲಿ ಕಬ್ಬು ಕ್ಷೇತ್ರವಾರು ಬೆಳೆ ಪ್ರದೇಶ 4.58 ಲಕ್ಷ ಹೆಕ್ಟೇರ್ ಮತ್ತು ಉತ್ಪಾದನೆ 2.74 ಕೋಟಿ ಮೆಟ್ರಿಕ್ ಟನ್ ಇದ್ದಿತ್ತು; 2025-26ರಲ್ಲಿ 6.9 ಲಕ್ಷ ಹೆಕ್ಟೇರ್ ಹಾಗೂ ಉತ್ಪಾದನೆ 6.3 ಕೋಟಿ ಮೆಟ್ರಿಕ್ ಟನ್‌ಗೆ ಹೆಚ್ಚಿತು. 2025ರಲ್ಲಿ ಈ ಎಲ್ಲ ಕಾರ್ಖಾನೆಗಳು ಒಟ್ಟು 5.77 ಕೋಟಿ ಮೆಟ್ರಿಕ್ ಕಬ್ಬು ನುರಿದು, 46 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿದ್ದವು. ರಾಜ್ಯದಲ್ಲಿರುವ 81 ಸಕ್ಕರೆ ಕಾರ್ಖಾನೆಗಳಲ್ಲಿ ಉತ್ತರ ಕರ್ನಾಟಕದ ಪಾಲು 60ಕ್ಕೂ ಅಧಿಕ. ಆದ್ದರಿಂದ, ಅಲ್ಲಿ ಪ್ರತಿಭಟನೆ ತೀವ್ರವಾಗಿದೆ. ಕಾರ್ಖಾನೆಗಳ ನುರಿಯುವ ಸಾಮರ್ಥ್ಯ ಹೆಚ್ಚಳದಿಂದ ಕಬ್ಬು ಖರೀದಿಗೆ ಕಾರ್ಖಾನೆಗಳ ನಡುವೆ ಪೈಪೋಟಿ ಅಧಿಕಗೊಂಡಿದೆ. ಹೊಸ ಕಾರ್ಖಾನೆಗಳಿಗೆ 40ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಕಾರ್ಖಾನೆಗಳು ಹೆಚ್ಚಿದವೇ ಹೊರತು, ಒಳಸುರಿಗಳ ಬೆಲೆ ಹೆಚ್ಚಳದಿಂದ ಕಬ್ಬು ಕೃಷಿ ರೈತರಿಗೆ ಲಾಭದಾಯಕವಾಗಿಲ್ಲ.

‘ರಾಜ್ಯ ಸರಕಾರ ಕಬ್ಬಿಗೆ ಎಸ್‌ಎಪಿ(ರಾಜ್ಯ ಬೆಂಬಲ ಬೆಲೆ) ನೀಡಬೇಕು. ಪಂಜಾಬಿನಲ್ಲಿ ಟನ್ನಿಗೆ 4,480 ರೂ., ತಮಿಳುನಾಡಿನಲ್ಲಿ 4,000 ರೂ. ಹಾಗೂ ಉತ್ತರಪ್ರದೇಶದಲ್ಲಿ 4,200 ರೂ. ನೀಡಲಾಗುತ್ತಿದೆ. ಕೃಷಿ ವೆಚ್ಚ ಹೆಚ್ಚಿರುವುದರಿಂದ, ಶೇ.10.25 ಸಕ್ಕರೆ ಇಳುವರಿ ನೀಡುವ ಕಬ್ಬಿಗೆ 4,500 ರೂ. ಎಫ್‌ಆರ್‌ಸಿ ನಿಗದಿ ಮಾಡಬೇಕು. ಕಾರ್ಖಾನೆ 4,500 ರೂ. ಹಾಗೂ ರಾಜ್ಯ ಸರಕಾರ 1,000 ರೂ. ನೀಡಿದರೆ ಸಮಸ್ಯೆ ಬಗೆಹರಿಯುತ್ತದೆ. ಸರಕಾರಕ್ಕೆ ಸಕ್ಕರೆ ಕ್ಷೇತ್ರದಿಂದ ವಾರ್ಷಿಕ 40,000 ಕೋಟಿ ರೂ. ಹಾಗೂ ಕಬ್ಬಿನ ಉಪ ಉತ್ಪನ್ನಗಳಿಂದ 70,000 ಕೋಟಿ ರೂ. ಸಂದಾಯ ಆಗುತ್ತಿದೆ. ಇದರಲ್ಲಿ ರೈತರಿಗೆ 4,000 ಕೋಟಿ ರೂ. ಕೊಡಬಹುದು’ ಎನ್ನುವುದು ರೈತ ಸಂಘಗಳ ಆಗ್ರಹ. ‘ಕಳೆದ ಎರಡು ವರ್ಷಗಳಿಂದ ಜಗತ್ತಿನೆಲ್ಲೆಡೆ ಸಕ್ಕರೆ ಕೊರತೆ ಉಂಟಾಗಿದೆ. ಸಕ್ಕರೆಯನ್ನು ಭಾರೀ ಪ್ರಮಾಣದಲ್ಲಿ ಬಳಸುವ ಆಹಾರ/ಪಾನೀಯ ಕಾರ್ಖಾನೆಗಳು, ಬೇಕರಿ ಸರಪಳಿಗಳು, ಸಿಹಿ ತಿನಿಸು ಉತ್ಪಾದಕರು ಮತ್ತು ದೊಡ್ಡ ಹೋಟೆಲ್-ರೆಸ್ಟೋರೆಂಟ್‌ಗಳಂಥ ವಾಣಿಜ್ಯಿಕ ಬಳಕೆದಾರರಿಗೆ ಅಧಿಕ ದರ ವಿಧಿಸಬೇಕು’ ಎನ್ನುವುದು ರೈತರ ವಾದ.

ಸಕ್ಕರೆ ಬೆಲೆ ಹೆಚ್ಚಳಕ್ಕೆ ಆಗ್ರಹ

ಪ್ರತೀವರ್ಷ ಕೇಂದ್ರ ಸರಕಾರ ಕಬ್ಬಿನ ಎಫ್‌ಆರ್‌ಸಿಯನ್ನು ಪುನರಾವರ್ತಿಸುತ್ತದೆ. ಆದರೆ, ಸಕ್ಕರೆ ಬೆಲೆ 31ರೂ.ಕ್ಕೆ ಸ್ಥಗಿತವಾಗಿದೆ. ಸರಕಾರಿ ಬ್ಯಾಂಕ್‌ಗಳು ಸಾಲ ನೀಡದೆ ಇರುವುದರಿಂದ, ಹೆಚ್ಚು ಬಡ್ಡಿ ವಿಧಿಸುವ ಸಹಕಾರ ಸಂಘಗಳಿಂದ ಸಾಲ ಪಡೆಯಬೇಕಾಗಿ ಬಂದಿದೆ. ಹಳೆಯ ಸಾಲ ತೀರಿಸಲು ಹೊಸ ಸಾಲ ಮಾಡುತ್ತಿದ್ದೇವೆ. ಸಾರ್ವಜನಿಕ ತೈಲ ಮಾರುಕಟ್ಟೆ ಕಂಪೆನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತಿತರವು ಕಬ್ಬಿನ ಹಾಲು ಹಾಗೂ ಸಿ-ಹೆವಿ ಮೊಲಾಸಸ್(ಕಬ್ಬಿನ ರಸದಿಂದ ಸಕ್ಕರೆ ಉತ್ಪಾದಿಸುವ ಪ್ರಕ್ರಿಯೆಯ 2ನೇ ಹಂತದಲ್ಲಿ ಬರುವ ಉತ್ಪನ್ನ)ನಿಂದ ಉತ್ಪಾದಿಸಿದ ಎಥೆನಾಲ್‌ನ್ನು ಖರೀದಿ ಪ್ರಕ್ರಿಯೆ ಟೆಂಡರಿನಿಂದ ಹೊರಗಿಟ್ಟಿವೆ. ಇದು ಕಾರ್ಖಾನೆಗಳ ಮೇಲೆ ವಿಪರಿಣಾಮ ಬೀರಿದೆ. ರಾಜ್ಯದಲ್ಲಿ ಪ್ರತೀವರ್ಷ 275 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆಯಾಗುತ್ತಿದ್ದು, ಕೇಂದ್ರ ಖರೀದಿಸುತ್ತಿರುವುದು 133 ಕೋಟಿ ಲೀಟರ್ ಮಾತ್ರ. ಉತ್ಪಾದಿಸಿದ ಎಲ್ಲ ಎಥೆನಾಲ್ ಖರೀದಿಸಬೇಕು ಎಂದು ಕಾರ್ಖಾನೆ ಮಾಲಕರು ಹೇಳುತ್ತಾರೆ.

‘‘ಮಂಡ್ಯ ಭಾಗದಲ್ಲಿ ವಿಸಿ ಫಾರಂ ಅಭಿವೃದ್ಧಿಪಡಿಸಿರುವ ವೈಸಿಎಫ್ 517 ತಳಿಯನ್ನು ಬೆಳೆಯಲಾಗುತ್ತಿದೆ. ಕಬ್ಬು ಇಳುವರಿ ಎಕರೆಗೆ 50-60 ಟನ್ ಹಾಗೂ ಸಕ್ಕರೆ ಇಳುವರಿ ಶೇ.8-9 ಇದೆ. ಕಾಲಾವಧಿ 10ರಿಂದ 12 ತಿಂಗಳು. ಉಳುಮೆ, ರಸಗೊಬ್ಬರ, ಕಟಾವು, ಕೂಲಿ, ಸಾಗಣೆ ಸೇರಿದಂತೆ ಎಲ್ಲ ಖರ್ಚು ಕಳೆದು ಎಕರೆಗೆ ಗರಿಷ್ಠ 35,000ದಿಂದ 40,000 ರೂ. ಉಳಿತಾಯ ಆಗಬಹುದು. ಇದು ಏನೇನೂ ಸಾಲದು’’ ಎನ್ನುತ್ತಾರೆ ಪತ್ರಕರ್ತ-ಕೃಷಿಕ ಕೆ.ಬಿ. ಮಲ್ಲೇಶ್. (ಬೆಳಗಾವಿ ಭಾಗದಲ್ಲಿ ಕಳೆದ 2 ದಶಕದಿಂದ ಸಿಒ 86032(ನಯನಾ/ನೀರಾ) ತಳಿ ಬೆಳೆಯುತ್ತಿದ್ದು, ಜೈವಿಕವಾಗಿ ದುರ್ಬಲವಾಗಿದೆ. ಇದರಿಂದ ರೋಗ ಹೆಚ್ಚಿದ್ದು, ಇಳುವರಿ ಕುಸಿದಿದೆ). ಹೊಸ ತಳಿಗಳನ್ನು ಪರಿಚಯಿಸಬೇಕಿದೆ) ಈ ವರ್ಷ ಬರದಿಂದ ಅಂತರ್ಜಲ ಕುಸಿತವಲ್ಲದೆ, ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಇದರಿಂದ ಬೆಳೆಗೆ ನೀರು ಸಮರ್ಪಕವಾಗಿ ಪೂರೈಕೆ ಆಗದೆ ಇಳುವರಿ ಕಡಿಮೆಯಾಗಿದೆ. ಅತಿ ನೀರುಣಿಸುವಿಕೆ, ದಿನವಿಡೀ ನೀರು ನಿಲ್ಲಿಸುವಿಕೆ ಮತ್ತು ಹತ್ತಿರ ಸಾಲುಗಳಲ್ಲಿ ಕಬ್ಬು ಬೆಳೆಯುವುದರಿಂದ ಮಣ್ಣಿನ ಆರೋಗ್ಯ ಕುಸಿದಿದ್ದು, ಇಳುವರಿ ಕಡಿಮೆಯಾಗಿದೆ. 3 ವರ್ಷಕ್ಕೊಮ್ಮೆ ಬೆಳೆ ಬದಲಿಸಬೇಕೆಂಬ ಸಲಹೆ ರೈತರಿಗೆ ಪಥ್ಯವಾಗುತ್ತಿಲ್ಲ. ರೈತರ ಮೇಲೆ ಆರ್ಥಿಕ/ಪರಿಸರ ಒತ್ತಡ ಹೆಚ್ಚಿದೆ.

ಖಂಡಸಾರಿ ಕ್ಷೇತ್ರಕ್ಕೆ ಹೊಡೆತ

ಸರಕಾರ ಸಾಂಪ್ರದಾಯಿಕ ಸಕ್ಕರೆ ವಲಯವನ್ನು ಏಕೆ ದುರ್ಬಲಗೊಳಿಸುತ್ತಿದೆ? ಉತ್ತರ ಸರಳವಿದೆ; ಎಥೆನಾಲೀಕರಣ. 2014ರ ನಂತರ ಸರಕಾರ ಕಚ್ಚಾ ತೈಲದ ಆಮದು ಕಡಿಮೆ ಮಾಡಲು ಎಥೆನಾಲ್ ಖರೀದಿ ಮಾನದಂಡಗಳನ್ನು ಸಡಿಲಿಸಿತು; ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮ ಅನುಷ್ಠಾನಗೊಳಿಸಿತು. 2018ರ ಜೈವಿಕ ಇಂಧನಗಳ ರಾಷ್ಟ್ರೀಯ ನೀತಿಯು ಎಥೆನಾಲ್ ಉತ್ಪಾದನೆಗೆ ಅನುಮತಿಸಿದ ಕಚ್ಚಾ ವಸ್ತುಗಳ ಪಟ್ಟಿಗೆ ಕಬ್ಬಿನ ರಸ, ಮೊಲಾಸಸ್, ಮುಗ್ಗಲು ಆಹಾರ ಧಾನ್ಯಗಳು ಮತ್ತು ಅಕ್ಕಿ ನುಚ್ಚನ್ನು ಸೇರಿಸಿತು ಹಾಗೂ ಸಕ್ಕರೆ ಕಾರ್ಖಾನೆಗಳು ಹೆಚ್ಚುವರಿ ಕಬ್ಬನ್ನು ಎಥೆನಾಲ್ ಉತ್ಪಾದನೆಗೆ ಬಳಸುವಂತೆ ಮಾಡಲು ವಿಭಿನ್ನ ಬೆಲೆ ನಿಗದಿಯನ್ನು ಪರಿಚಯಿಸಿತು. 2021ರಲ್ಲಿ ಎಥೆನಾಲ್ ಮಿಶ್ರಣ ಮಾರ್ಗಸೂಚಿ 2025 ಆರಂಭಿಸಲಾಯಿತು. 2022ರಲ್ಲಿ ನಿಗದಿತ ಸಮಯಕ್ಕೆ ಮುನ್ನವೇ ಪೆಟ್ರೋಲ್‌ನಲ್ಲಿ ಶೇ.10 ಎಥೆನಾಲ್ ಮಿಶ್ರಣ ಗುರಿ ಸಾಧಿಸಲಾಯಿತು.

ಸರಕಾರದ ಅಂಕಿಅಂಶಗಳ ಪ್ರಕಾರ, ದೇಶ ಜಗತ್ತಿನ ಅತಿ ದೊಡ್ಡ ಬೆಲ್ಲ ಉತ್ಪಾದಕನಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಶೇ.70ಕ್ಕಿಂತ ಹೆಚ್ಚು ಪಾಲು ಹೊಂದಿದೆ. ಕಬ್ಬಿನ ಶೇ.20-30ರಷ್ಟು ಭಾಗವನ್ನು ಬೆಲ್ಲ ತಯಾರಿಸಲು ಬಳಸಲಾಗುತ್ತದೆ. 2024-25ನೇ ಸಾಲಿನಲ್ಲಿ ಖಂಡಸಾರಿ ವಲಯ 4.71 ಲಕ್ಷ ಟನ್ ಸಕ್ಕರೆ (ಬೆಲ್ಲ ಸೇರಿದಂತೆ) ರಫ್ತು ಮಾಡಿದ್ದು, ಸುಮಾರು 406.8 ದಶಲಕ್ಷ ಡಾಲರ್ ಆದಾಯ ಗಳಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಸುಮಾರು 25 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಅಸಂಘಟಿತ ಖಂಡಸಾರಿ ವಲಯವನ್ನು ನಿಯಂತ್ರಿಸಲು ಸರಕಾರ 1966ರಲ್ಲಿ ಅಗತ್ಯ ಸರಕುಗಳ ಕಾಯ್ದೆಯಡಿ ಕಬ್ಬು (ನಿಯಂತ್ರಣ) ಆದೇಶವನ್ನು ಜಾರಿಗೆ ತಂದಿತು. ಕಬ್ಬು ಉತ್ಪಾದನೆ ಕಡಿಮೆ ಇರುವ ವರ್ಷಗಳಲ್ಲಿ ಖಂಡಸಾರಿ ಘಟಕಗಳು ಎಥೆನಾಲ್ ಉತ್ಪಾದಕರ ಪಾಲು ಕಸಿದುಕೊಳ್ಳುತ್ತವೆ. ಇದನ್ನು ತಡೆದು, ಎಥೆನಾಲ್ ಉತ್ಪಾದನೆಗೆ ಕಬ್ಬಿನ ಸರಬರಾಜನ್ನು ಸ್ಥಿರಗೊಳಿಸಲು ಸರಕಾರ ಕಬ್ಬಿನ ಸಾಂಪ್ರದಾಯಿಕ ಬಳಕೆಗಳನ್ನು ನಿಲ್ಲಿಸಲು ಯತ್ನಿಸುತ್ತಿದೆ. 2025ರಲ್ಲಿ ಖಂಡಸಾರಿಗಳಿಗೆ ಸ್ವಯಂಪ್ರೇರಿತ ನೋಂದಣಿಗೆ ಸಲಹೆ ನೀಡಿತು. ಅದು ಅಪೇಕ್ಷಿತ ಫಲಿತಾಂಶ ನೀಡದ ಹಿನ್ನೆಲೆಯಲ್ಲಿ ಕಬ್ಬು (ನಿಯಂತ್ರಣ) ಆದೇಶ 2026ರ ಕರಡನ್ನು ಪರಿಚಯಿಸಿತು; ಈ ಕಾಯ್ದೆಯು ಖಂಡಸಾರಿ ಅಂದರೆ, ಬೆಲ್ಲ, ಖಾಂಡ್ (ಸಕ್ಕರೆ ಪುಡಿ) ಮತ್ತು ಬೂರಾ (ಸಿಹಿತಿಂಡಿಗೆ ಬಳಸುವ ಸಕ್ಕರೆ ಪುಡಿ) ಉತ್ಪಾದಿಸುವ ಆಲೆಮನೆಗಳು ಹಾಗೂ ಸಂಸ್ಕರಿಸದ ಸಕ್ಕರೆ ತಯಾರಿಕೆ ಘಟಕಗಳ ಮೇಲೆ ಕಠಿಣ ನಿಯಮ-ನಿಬಂಧನೆ ಹೇರುತ್ತಿತ್ತು. ಉತ್ತರ ಭಾರತದಲ್ಲಿ ಖಂಡಸಾರಿ ಘಟಕಗಳು ಹಾಗೂ ರೈತ ಸಂಘಟನೆಗಳು ಇದರ ವಿರುದ್ಧ ಪ್ರತಿಭಟನೆ ನಡೆಸಿದವು. ಮೇ 29, 2026ರಲ್ಲಿ ಮಸೂದೆಯನ್ನು ವಾಪಸ್ ಹಿಂಪಡೆಯಿತು.

ಸರಕಾರ ಎಲ್ಲ ಸಕ್ಕರೆ ಕಾರ್ಖಾನೆಗಳನ್ನು ಬಿಳಿ ಸಕ್ಕರೆ ಮತ್ತು ಎಥೆನಾಲ್ ಉತ್ಪಾದಕರನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ಸಚಿವ ನಿತಿನ್ ಗಡ್ಕರಿ ಅವರ ಶೇ.100 ಎಥೆನಾಲ್ ಮಿಶ್ರಣದ ಕನಸು ನನಸಾಗಿಸಲು ಸಕಲ ಪ್ರಯತ್ನ ನಡೆಯುತ್ತಿದೆ! ಹವಾಮಾನ ಬದಲಾವಣೆ, ಮಳೆಗಾಲದಲ್ಲಿ ವ್ಯತ್ಯಯವನ್ನು ಪರಿಗಣಿಸಿದರೆ, ಸೀಮಿತ ಪ್ರಮಾಣದ ಕಬ್ಬು ಮಾತ್ರ ಬೆಳೆಯಬಹುದು; ಕಾಲಕ್ರಮೇಣ ಎಲ್ಲ ಕಬ್ಬು ಎಥೆನಾಲ್ ಉತ್ಪಾದನೆಗೆ ಬಳಕೆ ಆಗಬಹುದು. ಇದರಿಂದ ಸಕ್ಕರೆ ಮಾರುಕಟ್ಟೆಯಲ್ಲಿ ಕೋಲಾಹಲ ಮತ್ತು ಖಂಡಸಾರಿ ಉದ್ಯಮ ಬಲಿಯಾಗಲಿದೆ. ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವುದು ಸರಕಾರದ ಕರ್ತವ್ಯ. ಆದರೆ, ಸರಕಾರಗಳು ಕಾರ್ಖಾನೆ ಮಾಲಕರು-ಉದ್ಯಮಿಗಳ ಕೃಪಾಕಟಾಕ್ಷದಲ್ಲಿದ್ದು, ರೈತರಿಗೆ ವಂಚನೆ ಮಾಡುತ್ತಿವೆ. ರೈತರು ಪಕ್ಷಗಳಲ್ಲಿ ಹರಿದುಹಂಚಿ ಹೋಗಿ, ರಾಜಕೀಯ ಶಕ್ತಿ ಕಳೆದುಕೊಂಡಿದ್ದಾರೆ. ಸಂಘಟಿತ ಹೋರಾಟದಿಂದಷ್ಟೇ ಅವರಿಗೆ ನ್ಯಾಯ ಸಿಗುತ್ತದೆ; ಸಿಗಬೇಕು.

(ಅಂಕಣಕಾರರು ಪತ್ರಕರ್ತ ಮತ್ತು ಅನುವಾದಕ

www.ruthamedia.com)

Tags

Sugarcane FarmersSugarcane Growers ProtestKhandsari Sugar
share
ಮಾಧವ ಐತಾಳ್
ಮಾಧವ ಐತಾಳ್
Next Story
X