Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ಹಳೆಯ ವಾಹನಗಳ ವಿಲೇವಾರಿ ಸಂಕಷ್ಟ

ಹಳೆಯ ವಾಹನಗಳ ವಿಲೇವಾರಿ ಸಂಕಷ್ಟ

ಮಾಧವ ಐತಾಳ್ಮಾಧವ ಐತಾಳ್30 Oct 2026 11:55 AM IST
share
ಹಳೆಯ ವಾಹನಗಳ ವಿಲೇವಾರಿ ಸಂಕಷ್ಟ

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯ(ಎಂಒಆರ್‌ಟಿಎಚ್)ದ ಇ-ವಾಹನ್ ಜಾಲತಾಣದ ಪ್ರಕಾರ, ದೇಶದಲ್ಲಿ 390 ದಶಲಕ್ಷ ನೋಂದಾಯಿತ ವಾಹನಗಳಿದ್ದು, ಇದರಲ್ಲಿ ಅರ್ಧದಷ್ಟರ ಜೀವಿತಾವಧಿ 2030ಕ್ಕೆ ಮುಗಿಯಲಿದೆ. ಆದರೆ, ಇದರಲ್ಲಿ ಎಲ್ಲವೂ ಗುಜರಿಗೆ ಹೋಗಬೇಕಿಲ್ಲ. ಸಂಸತ್ತಿನಲ್ಲಿ ಸರಕಾರದ ಹೇಳಿಕೆ ಪ್ರಕಾರ, ಹಳೆಯ ಮತ್ತು ಅಸಮರ್ಥ ವಾಹನಗಳು ಹೊಸ ವಾಹನಗಳಿಗಿಂತ 10-12 ಪಟ್ಟು ಮಾಲಿನ್ಯ ಸೃಷ್ಟಿಸುತ್ತವೆ ಮತ್ತು ರಸ್ತೆಯಲ್ಲಿ ಅಪಾಯಕಾರಿ ಆಗಿರುತ್ತವೆ. ಆದರೆ, ಗುಜರಿ ವ್ಯವಸ್ಥೆಯಲ್ಲಿನ ವ್ಯತ್ಯಯಗಳಿಂದ ಪರಿಸರ-ಜನಾರೋಗ್ಯಕ್ಕೆ ಧಕ್ಕೆ ಉಂಟಾಗುತ್ತಿದೆ.

ಬೆಂಗಳೂರು ಸೇರಿದಂತೆ ನಗರಗಳ ರಸ್ತೆ ಬದಿಯಲ್ಲಿ/ಖಾಲಿ ಮೈದಾನಗಳಲ್ಲಿ ತುಕ್ಕು ಹಿಡಿಯುತ್ತ ಬಿದ್ದಿರುವ ಹಳೆ ವಾಹನಗಳು ದೃಷ್ಟಿ ಬೊಟ್ಟಿನಂತೆ ಕಾಣಿಸುತ್ತವೆ. ಪ್ರತಿದಿನ ಸಹಸ್ರಗಟ್ಟಲೆ ಹೊಸ ವಾಹನ ಗಳು ನೋಂದಣಿ ಆಗುತ್ತಿದ್ದು, ರಸ್ತೆಗಳು ವಾಹನಗಳಿಂದ ಕಿಕ್ಕಿರಿದಿವೆ. ಆದರೆ, ಜೀವಿತಾವಧಿ ಮುಗಿಸಿದ ಹಳೆಯ ವಾಹನಗಳ ವಿಲೇವಾರಿ ಏಕೆ ಆಗುತ್ತಿಲ್ಲ? ಈ ಪ್ರಶ್ನೆಗೆ ಉತ್ತರ ಸರಳವಿದೆ; ಕಾರ್ಯನೀತಿ ಮತ್ತು ಕಾರ್ಯನಿರ್ವಹಣೆಯಲ್ಲಿನ ಗೊಂದಲ.

ದಿಲ್ಲಿಯಲ್ಲಿ ಚಳಿಗಾಲದಲ್ಲಿ ತೀವ್ರಗೊಳ್ಳುವ ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ದ ಮಧ್ಯಪ್ರವೇಶದ ಬಳಿಕ 2015ರಲ್ಲಿ ವಾಹನ ವಿಲೇವಾರಿ ವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸಲು ಸರಕಾರ ಮುಂದಾಯಿತು. 2020-21ರಲ್ಲಿ ಸ್ವಯಂಪ್ರೇರಿತ ವಾಹನ ಆಧುನೀಕರಣ ಕಾರ್ಯಕ್ರಮ(ವಾಲಂಟರಿ ವೆಹಿಕಲ್ ಫ್ಲೀಟ್ ಮಾಡ್ರನೈಸೇಷನ್ ಪ್ರೋಗ್ರಾಂ)ವನ್ನು ಪರಿಚಯಿಸಲಾಯಿತು. ಈ ಕಾರ್ಯಕ್ರಮದ ಪ್ರಮುಖ ಉದ್ದೇಶಗಳೆಂದರೆ, ಹಳೆಯ/ದೋಷಪೂರಿತ ವಾಹನಗಳ ಸಂಖ್ಯೆ ಕಡಿಮೆಗೊಳಿಸುವುದು, ಅಂತರ್‌ರಾಷ್ಟ್ರೀಯ ಒಪ್ಪಂದಗಳ ಅನ್ವಯ ದೇಶದ ಹವಾಮಾನ ಬದ್ಧತೆಯನ್ನು ಪೂರೈಸಲು ವಾಯುಮಾಲಿನ್ಯ ಕಡಿತಗೊಳಿಸುವಿಕೆ ಗುರಿ ಸಾಧನೆ, ರಸ್ತೆ-ವಾಹನಗಳ ಸುರಕ್ಷತೆಯ ಸುಧಾರಣೆ, ಇಂಧನ ಕ್ಷಮತೆ ಹೆಚ್ಚಳ, ಹಳೆ ವಾಹನಗಳ ವಿಲೇವಾರಿ ಉದ್ಯಮವನ್ನು ಅಧಿಕೃತಗೊಳಿಸುವುದು ಮತ್ತು ವಾಹನಗಳಿಂದ ಉಕ್ಕು ಹಾಗೂ ಇಲೆಕ್ಟ್ರಾನಿಕ್ಸ್ ಉದ್ಯಮಕ್ಕೆ ಕಡಿಮೆ ದರದಲ್ಲಿ ಕಚ್ಚಾ ವಸ್ತು ಲಭ್ಯತೆ ಹೆಚ್ಚಳ. ಈ ಕಾರ್ಯನೀತಿಯು 10,000 ಕೋಟಿ ರೂ. ಹೂಡಿಕೆ ಹಾಗೂ 35,000 ಉದ್ಯೋಗ ಸೃಷ್ಟಿಸುತ್ತದೆ; ನೂತನ ವಾಹನ ಮಾರಾಟದಲ್ಲಿ ಶೇ.8ರಷ್ಟು ಹೆಚ್ಚಳ ಹಾಗೂ ಜಿಡಿಪಿ ಬೆಳವಣಿಗೆಗೆ ಶೇ.0.5 ಕೊಡುಗೆ ನೀಡಲಿದೆ ಎಂದು ಸರಕಾರ ಹೇಳಿಕೊಂಡಿತ್ತು. ಮಾರ್ಚ್ 2021ರಲ್ಲಿ ಕಾರ್ಯನೀತಿ ಘೋಷಣೆಯಾದಾಗ ದೇಶದಲ್ಲಿ ಒಂದು ಕೋಟಿ(ದ್ವಿ/ತ್ರಿ ಚಕ್ರ, ಲಘು ಮೋಟರ್ ವಾಹನ ಮತ್ತು ಮಧ್ಯಮ/ಭಾರೀ ವಾಣಿಜ್ಯ ವಾಹನ) ವಾಹನಗಳನ್ನು ಗುಜರಿಗೆ ಹಾಕಬಹುದು ಎಂದು ಅಂದಾಜಿಸಲಾಗಿತ್ತು.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯ(ಎಂಒಆರ್‌ಟಿಎಚ್) ದ ಇ-ವಾಹನ್ ಜಾಲತಾಣದ ಪ್ರಕಾರ, ದೇಶದಲ್ಲಿ 390 ದಶಲಕ್ಷ ನೋಂದಾಯಿತ ವಾಹನಗಳಿದ್ದು, ಇದರಲ್ಲಿ ಅರ್ಧದಷ್ಟರ ಜೀವಿತಾವಧಿ 2030ಕ್ಕೆ ಮುಗಿಯಲಿದೆ. ಆದರೆ, ಇದರಲ್ಲಿ ಎಲ್ಲವೂ ಗುಜರಿಗೆ ಹೋಗಬೇಕಿಲ್ಲ. ಸಂಸತ್ತಿನಲ್ಲಿ ಸರಕಾರದ ಹೇಳಿಕೆ ಪ್ರಕಾರ, ಹಳೆಯ ಮತ್ತು ಅಸಮರ್ಥ ವಾಹನಗಳು ಹೊಸ ವಾಹನಗಳಿಗಿಂತ 10-12 ಪಟ್ಟು ಮಾಲಿನ್ಯ ಸೃಷ್ಟಿಸುತ್ತವೆ ಮತ್ತು ರಸ್ತೆಯಲ್ಲಿ ಅಪಾಯಕಾರಿ ಆಗಿರುತ್ತವೆ. ಆದರೆ, ಗುಜರಿ ವ್ಯವಸ್ಥೆಯಲ್ಲಿನ ವ್ಯತ್ಯಯಗಳಿಂದ ಪರಿಸರ-ಜನಾರೋಗ್ಯಕ್ಕೆ ಧಕ್ಕೆ ಉಂಟಾಗುತ್ತಿದೆ.

ಖಾಸಗಿ ವಿ/ಎಸ್ ಅಧಿಕೃತ ಗುಜರಿ

ಅವಧಿ ಮೀರಿದ ವಾಹನಗಳನ್ನು ಮಾಲಕರು ಔಪಚಾರಿಕ/ಅನೌಪಚಾರಿಕ ವ್ಯವಸ್ಥೆ ಮೂಲಕ ವಿಲೇವಾರಿ ಮಾಡುತ್ತಾರೆ. ಈ ವಾಹನಗಳ ವಿಲೇವಾರಿಯಲ್ಲಿ ಎರಡು ಮುಖ್ಯ ಅಂಗಗಳಿರುತ್ತವೆ; ವಾಹನ ಸಂಚಾರಕ್ಕೆ ಅರ್ಹವಾಗಿದೆಯೇ ಎಂದು ಪರಿಶೀಲಿಸುವ ಸ್ವಯಂಚಾಲಿತ ಪರೀಕ್ಷೆ ಕೇಂದ್ರ(ಎಟಿಎಸ್) ಹಾಗೂ ಇಂಥ ವಾಹನಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಕಳಚುವ/ಬಿಡಿ ಭಾಗಗಳನ್ನು ಮರುಬಳಕೆ ಮಾಡುವ ಆರ್‌ವಿಎಸ್‌ಎಫ್‌ಗಳು(ರಿಜಿಸ್ಟ್ರರ್ಡ್ ವೆಹಿಕಲ್ ಸಕ್ಯೆಾಪಿಂಗ್ ಫೆಸಿಲಿಟಿ, ನೋಂದಾಯಿತ ವಾಹನ ವಿಲೇವಾರಿ ಸೌಲಭ್ಯ). ನೀತಿ ಆಯೋಗದ ದತ್ತಾಂಶದ ಪ್ರಕಾರ, ದೇಶದಲ್ಲಿ ಇವೆರಡೂ ಸಾಕಷ್ಟಿಲ್ಲ ಮತ್ತು ಹಂಚಿಕೆ ಅಸಮವಾಗಿದೆ. ಆರ್‌ವಿಎಫ್‌ಎಸ್‌ಗಳ ಅಲಭ್ಯತೆಯಿಂದ ಎಲ್ಲ ವಿಧದ ಹಳೆಯ ವಾಹನಗಳ ವಿಲೇವಾರಿ ಕಠಿಣವಾಗಿ ಪರಿಣಮಿಸಿದೆ. 15 ವರ್ಷ ದಾಟಿದ ವಾಹನಗಳನ್ನು ಸದೃಢತೆ ಪ್ರಮಾಣಪತ್ರ(ಎಫ್‌ಸಿ, ಫಿಟ್ನೆಸ್ ಸರ್ಟಿಫಿಕೇಟ್) ಪಡೆದು ಬಳಸಬೇಕಾಗುತ್ತದೆ. ಈ ಪ್ರಮಾಣಪತ್ರ ಪಡೆಯುವಿಕೆ ಒಂದು ಹಗರಣ. ಬೆಂಗಳೂರು ಕೇಂದ್ರ/ಕೋರಮಂಗಲ ಆರ್‌ಟಿಒದಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಹಿರಿಯ ಮೋಟರ್ ವಾಹನ ನಿರೀಕ್ಷಕರೊಬ್ಬರು ಆಗಸ್ಟ್ 1,2025-ಜನವರಿ 1,2026ರ ಅವಧಿಯಲ್ಲಿ ಪ್ರತ್ಯಕ್ಷ ಪರಿಶೀಲನೆ ನಡೆಸದೆ ಹೊರ ರಾಜ್ಯಗಳ 10,210 ವಾಣಿಜ್ಯ/ಭಾರೀ ವಾಹನಗಳಿಗೆ ಅರ್ಜಿ 38(ಎ) ಹಾಗೂ 38(2) ಅಡಿ ಎಫ್‌ಸಿ ನೀಡಿದ್ದರು ಎಂದು ಎಚ್‌ಎಸ್‌ಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರ್‌ಟಿಒ ಕಚೇರಿಗಳು ಭ್ರಷ್ಟಾಚಾರದ ಮಹಾಕೂಪವಾಗಿದ್ದು, ಇದು ಒಂದು ನಿದರ್ಶನ ಅಷ್ಟೆ.

ಅಧಿಕೃತ ಗುಜರಿಗಳು ನೀಡುವ ಸಿಒಡಿ(ಸರ್ಟಿಫಿಕೇಟ್ ಆಫ್ ಡಿಪಾಸಿಟ್-ಪ್ರಮಾಣಪತ್ರ)ಯಿಂದ ಹೊಸ ವಾಹನ ಖರೀದಿಸಿದವರಿಗೆ ರಸ್ತೆ ಸುಂಕದಲ್ಲಿ ಶೇ.25ರಷ್ಟು ರಿಯಾಯಿತಿ ಮತ್ತು ಕಾರಿನ ಉತ್ಪಾದಕರಿಂದ ಕಡ್ಡಾಯ ವಿಶೇಷ ರಿಯಾಯಿತಿ ಸಿಗುತ್ತದೆ; ಜೊತೆಗೆ, ವಾಹನ ದುರುಪಯೋಗದಿಂದ ಆಗಬಹುದಾದ ಕಾನೂನು ಸಮಸ್ಯೆಯಿಂದ ಬಚಾವಾಗಬಹುದು. ಒಂದು ರಾಜ್ಯದಲ್ಲಿ ವಾಹನವನ್ನು ಗುಜರಿಗೆ ಹಾಕಿ ಬೇರೊಂದು ರಾಜ್ಯದಲ್ಲಿ ಹೊಸ ವಾಹನ ಖರೀದಿಸಿದರೆ, ಸಿಗಬಹುದಾದ ರಿಯಾಯಿತಿ ಕಡಿಮೆ ಆಗುತ್ತದೆ. ಅಧಿಕೃತ ಗುಜರಿಗಳಿಗೆ ವಾಹನ ನೀಡಲು ಹತ್ತುಹನ್ನೊಂದು ದಾಖಲೆ ನೀಡ ಬೇಕಾಗುತ್ತದೆ. ಇವು ನಿಯಮಾನುಸಾರ ವಾಹನ ವಿಲೇವಾರಿ ಮಾಡಿ, ಮರುಬಳಕೆ ವಸ್ತುಗಳನ್ನು ನೋಂದಾಯಿತ ಸಂಸ್ಥೆಗಳಿಗೆ ರವಾನಿಸುತ್ತವೆ. ಅಧಿಕೃತ ಗುಜರಿಗಳಿಗೆ ಹೋಲಿಸಿದರೆ, ಖಾಸಗಿ ಗುಜರಿಗಳು ಹಳೆಯ ವಾಹನಗಳಿಗೆ ಹೆಚ್ಚು ಹಣ ಪಾವತಿಸುತ್ತವೆ. ಹೂಡಿಕೆ-ನಿರ್ವಹಣೆ ವೆಚ್ಚ ಕಡಿಮೆ ಇರುವುದು, ಪರಿಸರ ಸುರಕ್ಷಾ ಕ್ರಮ ತೆಗೆದುಕೊಳ್ಳದೆ ಇರುವುದು ಮತ್ತು ಬಿಡಿಭಾಗಗಳ ಮಾರಾಟದಿಂದ ಇದು ಸಾಧ್ಯವಾಗುತ್ತದೆ. ಖಾಸಗಿ ಗುಜರಿಗಳು ಹೆಚ್ಚು ದಾಖಲೆ ಕೇಳುವುದಿಲ್ಲ; ಆರ್‌ಸಿ(ನೋಂದಣಿ ಪ್ರಮಾಣಪತ್ರ) ನೀಡಿದರೆ ಸಾಕು. ಹಲವು ದಾಖಲೆಗಳನ್ನು ಹೊಂಚುವ ಕಾಟದಿಂದ ತಪ್ಪಿಸಿಕೊಳ್ಳಲು ಹಾಗೂ ಹೆಚ್ಚು ಹಣ ಸಿಗುವುದರಿಂದ, ವಾಹನ ಮಾಲಕರು ಆಕರ್ಷಿತರಾಗುತ್ತಾರೆ. ಸಣ್ಣ ಗುಜರಿಗಳು ಹಳೆಯ ವಾಹನಗಳಿಂದ ಬಳಸಬಹುದಾದ ಭಾಗಗಳನ್ನು ಪ್ರತ್ಯೇಕಿಸಿ ಬ್ಯಾಟರಿ, ಟೈರ್, ಆಯಿಲ್, ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತವೆ. ಆದರೆ, ಹಾನಿಕರ ದ್ರಾವಣಗಳು ಹಾಗೂ ತ್ಯಾಜ್ಯವನ್ನು ಸಂಸ್ಕರಿಸದೆ ಇರುವುದರಿಂದ, ನೆಲ/ಜಲ ಮಾಲಿನ್ಯ, ಅಗ್ನಿ ದುರಂತದ ಸಾಧ್ಯತೆಯಲ್ಲದೆ, ಸಿಬ್ಬಂದಿ ವಿಷಯುಕ್ತ ವಸ್ತುಗಳಿಗೆ ಒಡ್ಡಿಕೊಳ್ಳುತ್ತಾರೆ; ವಿಷಯುಕ್ತ ದ್ರಾವಣಗಳ ಬಿಡುಗಡೆ, ಬ್ಯಾಟರಿ/ಭಾರೀ ಲೋಹ/ಮಲಿನ ವಸ್ತುಗಳು, ಏರ್‌ಬ್ಯಾಗ್/ತಂಪುಕಾರಕ (ರೆಫ್ರಿಜರೆಂಟ್) ದ್ರಾವಣ/ಇಂಧನ ಶೇಷಾಂಶದ ಅವೈಜ್ಞಾನಿಕ ವಿಲೇವಾರಿ, ಪ್ಲಾಸ್ಟಿಕ್/ಗಾಜು ಇತ್ಯಾದಿಯನ್ನು ಅಕ್ರಮವಾಗಿ ಭೂಭರ್ತಿ ಜಾಗದಲ್ಲಿ ತುಂಬುವುದರಿಂದ ವಾತಾವರಣ ಮಲಿನಗೊಳ್ಳುತ್ತದೆ. ಇಂಥ ಗುಜರಿಗಳಲ್ಲಿ ವಿಲೇವಾರಿಯಾದ ವಾಹನಗಳ ನೋಂದಣಿ ವಜಾಗೊಳ್ಳದೆ ಇರುವುದರಿಂದ, ವಾಹನಗಳ ಲೆಕ್ಕದಲ್ಲಿ ವ್ಯತ್ಯಯ ಆಗಲಿದೆ.

ಮೂಲಸೌಕರ್ಯ ಕೊರತೆ

ನೀತಿ ಆಯೋಗದ ಪ್ರಕಾರ, ದೇಶದಲ್ಲಿ 235 ಆರ್‌ವಿಎಸ್‌ಎಫ್ ಇರಬೇಕಿದ್ದು, ಇರುವುದು 129 ಮಾತ್ರ. ಇವು 4 ರಾಜ್ಯಗಳಲ್ಲಿ ಕೇಂದ್ರೀಕೃತವಾಗಿದ್ದು, ಉತ್ತರ ಪ್ರದೇಶದಲ್ಲಿ 93 ಆರ್‌ವಿಎಸ್‌ಎಫ್‌ಗಳಿವೆ (ಅಂದಾಜು ಅಗತ್ಯ 17 ಮಾತ್ರ). ನಮ್ಮ ರಾಜ್ಯದ ಅಗತ್ಯ 18; ಇರುವುದು 3 ಮಾತ್ರ. ಹುಬ್ಬಳ್ಳಿ ಮತ್ತು ಕೊಪ್ಪಳದಲ್ಲಿ ಗುಜರಿಗೆ ಅನುಮತಿ ನೀಡಲಾಗಿದೆ. ತಮಿಳುನಾಡಿಗೆ ಬೇಕಿರುವುದು 23; ಇರುವುದು 4. ಅಸ್ಸಾಂ ಹೊರತುಪಡಿಸಿ ಈಶಾನ್ಯ ಭಾರತದಲ್ಲಿ ಒಂದೇ ಒಂದು ಆರ್‌ವಿಎಸ್‌ಎಫ್ ಇಲ್ಲ. ಉತ್ತರ ಭಾರತದ ರಾಜ್ಯಗಳು ಹಳೆಯ ವಾಹನಗಳ ಮಾಲಕರಿಗೆ ಹೆಚ್ಚು ಪರಿಹಾರ ನೀಡುತ್ತಿರುವುದರಿಂದ, ಇಲ್ಲಿ ಆರ್‌ವಿಎಸ್‌ಎಫ್‌ಗಳು ಲಾಭದಾಯಕ ಉದ್ಯಮವಾಗಿ ಪರಿಣಮಿಸಿವೆ. ಇಷ್ಟಲ್ಲದೆ, ರಾಜ್ಯಗಳು ಹಳೆಯ ವಾಹನಗಳ ಮಾಲಕರಿಗೆ ನೀಡುವ ಪರಿಹಾರ ಮೊತ್ತದಲ್ಲಿ ಏಕರೂಪತೆ ಇಲ್ಲ.

ಅಂದಾಜಿನ ಪ್ರಕಾರ, 2027ರೊಳಗೆ 227 ಆರ್‌ವಿಎಸ್‌ಎಫ್(ಕೊರತೆ 100) ಹಾಗೂ 500 ಎಟಿಎಸ್ (ಕೊರತೆ 300) ಅಗತ್ಯವಿದೆ. 16 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇವಲ 156 ಎಟಿಎಸ್‌ಗಳು ಚಾಲನೆಯಲ್ಲಿವೆ; ಅಗತ್ಯವಿರುವುದು 441(ಮಾರ್ಚ್ 2026ರ ಮಾಹಿತಿ). ಸ್ವಯಂಚಾಲಿತ ವಾಹನ ಪರೀಕ್ಷೆಯಿಂದ ಸಮರೂಪತೆ ಹಾಗೂ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಬಹುದು. ಜಿಲ್ಲೆಗೊಂದು ವಿಶ್ವಾಸಾರ್ಹ ಹಾಗೂ ಸುಲಭ ಪ್ರವೇಶ ಇರುವ ಎಟಿಎಸ್ ಅಗತ್ಯವಿದೆ ಎಂದು ನೀತಿ ಆಯೋಗ ಹೇಳುತ್ತದೆ. ಆದರೆ, ಹಂಚಿಕೆಯಲ್ಲಿನ ಲೋಪದಿಂದ ಹಳೆಯ ವಾಹನಗಳ ವಿಲೇವಾರಿ/ಪತ್ತೆ ದುಸ್ತರವಾಗಿದೆ. ಶೇ.25ರಷ್ಟು ಹಳೆಯ ವಾಹನಗಳು ಎಟಿಎಸ್ ಹಾಗೂ ಉಳಿದವು ಮಾನವಶಕ್ತಿಯಿಂದ ಪರೀಕ್ಷೆಗೆ ಒಳಪಡುತ್ತಿವೆ.

ವಾಹನ ಸಂಖ್ಯೆ ಹೆಚ್ಚಳ

ದೇಶದಲ್ಲಿ 2023ರಲ್ಲಿ 39 ಕೋಟಿ ವಾಹನಗಳಿದ್ದವು; ಪ್ರತಿವರ್ಷ ಅಂದಾಜು ಎರಡು ಕೋಟಿ ವಾಹನಗಳು ರಸ್ತೆಗಿಳಿಯುತ್ತಿವೆ. 2020ರ ಅಂತ್ಯಕ್ಕೆ ದೇಶದಲ್ಲಿ ಅವಧಿ ಮೀರಿದ ಒಂದು ಕೋಟಿ(ದ್ವಿ/ತ್ರಿ ಚಕ್ರ ವಾಹನ 0.8 ಕೋಟಿ; 4 ಚಕ್ರ/ಸಾಗಣೆ ವಾಹನಗಳು 0.2 ಕೋಟಿ) ವಾಹನಗಳಿದ್ದವು. ಇದು 2030ಕ್ಕೆ ಮೂರು ಕೋಟಿಗೆ ಹೆಚ್ಚುವ ಸಾಧ್ಯತೆ ಇದೆ. 2021-26ರ ಅವಧಿಯಲ್ಲಿ 4.3 ಲಕ್ಷ ವಾಹನಗಳನ್ನು ಅಧಿಕೃತ ಗುಜರಿಗಳಲ್ಲಿ ವಿಲೇವಾರಿ ಮಾಡಲಾಗಿದೆ. ರಾಜ್ಯದಲ್ಲಿ ಅಂದಾಜು 3.3 ಕೋಟಿ ವಾಹನ(ಇದರಲ್ಲಿ ಶೇ.71 ದ್ವಿಚಕ್ರ ವಾಹನ, 48.9 ಲಕ್ಷ ಕಾರು) ಹಾಗೂ ಬೆಂಗಳೂರಿನಲ್ಲಿ ಅಂದಾಜು 1.2 ಕೋಟಿ ವಾಹನಗಳು(83.8 ಲಕ್ಷ ದ್ವಿಚಕ್ರ ಹಾಗೂ 24-25 ಲಕ್ಷ ಕಾರು) ಇವೆ. ಹೊಸ ವಾಹನಗಳು ಪ್ರವಾಹದೋಪಾದಿಯಲ್ಲಿ ರಸ್ತೆಗೆ ಇಳಿಯುತ್ತಿವೆ. 2025-26ರಲ್ಲಿ 7.9 ಲಕ್ಷ ವಾಹನಗಳು ನೋಂದಣಿಯಾದವು; ಅಂದರೆ, ದಿನವೊಂದಕ್ಕೆ ಅಂದಾಜು 2,100. ಹಬ್ಬಗಳ ಹಿನ್ನೆಲೆಯಲ್ಲಿ ಅಕ್ಟೋಬರ್ ಮಾಸದಲ್ಲಿ ಅತಿ ಹೆಚ್ಚು ವಾಹನಗಳು ಬಿಕರಿ ಆಗುತ್ತವೆ. ಅಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಂದ ಸ್ವಂತ ವಾಹನ ಬಳಕೆ ಅನಿವಾರ್ಯವಾಗಿದೆ. ಸಾರಿಗೆ ಇಲಾಖೆ ಪ್ರಕಾರ, ರಾಜ್ಯದಲ್ಲಿ 14.36 ಲಕ್ಷ ವಿಲೇವಾರಿ ಮಾಡಬೇಕಾದ ವಾಹನಗಳಿವೆ. ಇದರಲ್ಲಿ ಸೆಪ್ಟಂಬರ್ 2026ರೊಳಗೆ ವಿಲೇವಾರಿ ಆಗಿರುವುದು 16,904 ವಾಹನ ಮಾತ್ರ. ಇದರಲ್ಲಿ ಹೆಚ್ಚಿನವು ಸರಕಾರಿ ವಾಹನಗಳು. ಅಧಿಕೃತ ಗುಜರಿಗಳು ವಾರ್ಷಿಕ 2-3 ಲಕ್ಷ ವಾಹನಗಳನ್ನು ವಿಲೇವಾರಿ ಮಾಡಬಹುದಾದರೂ, ವಿಲೇವಾರಿ ಆಗುತ್ತಿರುವುದು 72,000 ವಾಹನ ಮಾತ್ರ. ಅವುಗಳ ಸಾಮರ್ಥ್ಯ ಸಂಪೂರ್ಣ ಬಳಕೆಯಾಗುತ್ತಿಲ್ಲ.

ದೋಷಪೂರಿತ ವ್ಯವಸ್ಥೆ

ಎಪ್ರಿಲ್ 1, 2025ರಿಂದ ಜಾರಿಗೊಂಡಿರುವ ಪರಿಸರ ಸಂರಕ್ಷಣೆ(ಎಂಡ್ ಆಫ್ ಲೈಫ್ ವೆಹಿಕಲ್ಸ್) ನಿಯಮಗಳು ಜೀವಿತಾವಧಿ ಮುಗಿದ ವಾಹನಗಳಿಗೆ ಉತ್ಪಾದಕರ ಜವಾಬ್ದಾರಿ ವಿಸ್ತರಣೆ (ಎಕ್ಸ್ಟೆಂಡೆಡ್ ಪ್ರೊಡ್ಯೂಸರ್ ರೆಸ್ಪಾನ್ಸಿಬಿಲಿಟಿ- ಇಪಿಆರ್)ಯನ್ನು ಪರಿಚಯಿಸಿದೆ; ವಾಹನ ಉತ್ಪಾದಕರಿಗೆ ವಿಲೇವಾರಿ ಗುರಿ ನಿಗದಿಪಡಿಸಿದೆ. ಈ ನಿಯಮದಡಿ ಆರ್‌ವಿಎಸ್‌ಎಫ್‌ಗಳು ಹಳೆಯ ವಾಹನಗಳಿಂದ ಸಂಗ್ರಹಿಸಿದ ಉಕ್ಕಿನ ಪ್ರಮಾಣ ಆಧರಿಸಿ, ಇಪಿಆರ್ ಪ್ರಮಾಣಪತ್ರ ನೀಡಲಾಗುತ್ತದೆ. ವಾಹನ ಉತ್ಪಾದಕರು ತಮ್ಮ ಇಪಿಆರ್ ಗುರಿ ಮುಟ್ಟಲು ಬೇರೊಬ್ಬರಿಂದ ಪ್ರಮಾಣಪತ್ರಗಳನ್ನು ಖರೀದಿಸಬಹುದು. ಆದರೆ, ಹಳೆಯ ವಾಹನಗಳಿಂದ ನಿರೀಕ್ಷಿಸಿದಷ್ಟು ಕಚ್ಚಾ ವಸ್ತುಗಳು ಲಭ್ಯವಾಗುತ್ತಿಲ್ಲ. 2030-31ರೊಳಗೆ ವಾಹನ ಉತ್ಪಾದಕರು ಹಳೆಯ ವಾಹನಗಳಿಂದ ಶೇ.18ರಷ್ಟು ಉಕ್ಕು ಸಂಗ್ರಹಿಸಬೇಕಿದೆ. ಆದರೆ, ಅಂತರ್‌ರಾಷ್ಟ್ರೀಯ ಶುದ್ಧ ಸಾರಿಗೆ ಮಂಡಳಿ(ಇಂಟರ್‌ನ್ಯಾಷನಲ್ ಕೌನ್ಸಿಲ್ ಫಾರ್ ಕ್ಲೀನ್ ಟ್ರಾನ್ಸ್‌ಪೋರ್ಟೇಷನ್, ಐಸಿಸಿಟಿ) ಪ್ರಕಾರ, ದೇಶಿ ಇಪಿಆರ್ ವ್ಯವಸ್ಥೆಯಿಂದ ಶೇ.12-14ರಷ್ಟು ಉಕ್ಕು ಮಾತ್ರ ಸಂಗ್ರಹವಾಗುತ್ತಿದೆ(2006-2025ರ ಅವಧಿಯಲ್ಲಿ). ದೇಶ 33.4 ದಶಲಕ್ಷ ಟನ್ ಕಬ್ಬಿಣದ ಶೇಷಾಂಶ ಆಮದು ಮಾಡಿಕೊಳ್ಳುತ್ತಿದ್ದು, ದೇಶಿ ಶೇಷಾಂಶದ ಪ್ರಮಾಣ ಶೇ.7 ಮಾತ್ರ.

ಹಳೆಯ ವಾಹನಗಳ ವಿಲೇವಾರಿ ಕಾರ್ಯನೀತಿ ದೋಷಪೂರಿತವಾಗಿದೆ; ಪರಿಸರ ಸಂರಕ್ಷಣೆಯನ್ನು ಒಳಗೊಂಡಿಲ್ಲ. ಹೊಸ ವಾಹನಗಳು ಕೂಡ ಪಳೆಯುಳಿಕೆ ಇಂಧನ, ಕಚ್ಚಾ ವಸ್ತು ಬಳಸುತ್ತವೆ; ಇಂಗಾಲದ ಡೈಆಕ್ಸೈಡ್ ಹೊರಸೂಸುತ್ತವೆ. ಹಳೆಯ ಆದರೆ ಬಳಸಬಹುದಾದ ವಾಹನಗಳಿಗೆ ಡೀಸೆಲ್ ಕಣಗಳನ್ನು ಸೋಸುವ ಸಲಕರಣೆ, ಸಿಎನ್‌ಜಿ(ಒತ್ತಡದಲ್ಲಿರಿಸಿದ ಸ್ವಾಭಾವಿಕ ಅನಿಲ) ಮತ್ತು ಹೈಬ್ರಿಡ್ ರೆಟ್ರೋಫಿಟ್ ಕಿಟ್ ಅಳವಡಿಸಿ, ಕೊಳೆಗಾಳಿ ಹೊರಚೆಲ್ಲುವಿಕೆ ಕಡಿಮೆ ಮಾಡಬಹುದು. ರೆಟ್ರೋಫಿಟ್ಟಿಂಗ್ ಮೂಲಕ ವಾಹನಗಳ ಮರುಬಳಕೆಯನ್ನು ಉತ್ತೇಜಿಸಬೇಕಿದೆ. ಇದರಿಂದ ಇಂಧನ, ಲೋಹ ಮತ್ತಿತರ ವಸ್ತುಗಳ ಉಳಿತಾಯ ಸಾಧ್ಯವಿದೆ. ಜೊತೆಗೆ, ವಾಹನ ದುರಸ್ತಿ ಕಾರ್ಯಾಗಾರಗಳಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಕೊಳೆಗಾಳಿ ಚೆಲ್ಲುವಿಕೆ, ಸದೃಢತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ನಿಯಮಗಳ ಕಠಿಣ ಜಾರಿಯಲ್ಲದೆ, ವಾಹನ ಮಾಲಕರಿಗೆ ರೆಟ್ರೋಫಿಟ್ಟಿಂಗ್‌ಗೆ ಹಣಕಾಸು ನೆರವು ಹಾಗೂ ವರ್ಕ್‌ಶಾಪ್ ಸಿಬ್ಬಂದಿಗೆ ರೆಟ್ರೋಫಿಟ್ ಬಗ್ಗೆ ತರಬೇತಿ ನೀಡಬೇಕಿದೆ.

ಕೇಂದ್ರದ ಪ್ರಸ್ತುತ ಕಾರ್ಯನೀತಿಯು ಭಾರತ್ ಹಂತ 3(ಬಿಎಸ್‌3) ವಾಹನಗಳನ್ನು ಬಿಎಸ್ 6ಕ್ಕೆ ಪರಿವರ್ತನೆಗೆ ಸೀಮಿತವಾಗಿದೆ. ಅಧಿಕೃತ ಗುಜರಿಗಳು ಜನರಿಗೆ ಹತ್ತಿರವಾಗಬೇಕು ಮತ್ತು ಗುಜರಿ ನೀತಿ ಹಳೆಯ ವಾಹನಗಳ ಮಾಲಕರಿಗೆ ಲಾಭದಾಯಕ ಆಗಬೇಕು. 15 ವರ್ಷ ದಾಟಿದ್ದರೂ, ಸುಸ್ಥಿತಿಯಲ್ಲಿರುವ ವಾಹನಗಳನ್ನು ಬಳಸಬಹುದು ಎಂದು ಕಾರ್ಯನೀತಿ ಹೇಳುತ್ತದೆ. ದೆಹಲಿ ಸರಕಾರ ವಿದ್ಯುತ್ ವಾಹನ(ಇವಿ) ಕಾರ್ಯನೀತಿ ರೂಪಿಸಿದ್ದು, ಪಳೆಯುಳಿಕೆ ಇಂಧನ ಬಳಕೆದಾರರು ವಿದ್ಯುತ್ ವಾಹನಕ್ಕೆ ಬದಲಾಗಲು ಆರ್ಥಿಕ ನೆರವು ನೀಡುತ್ತಿದೆ. ಪೆಟ್ರೋಲ್/ಡೀಸೆಲ್‌ಗೆ ಪರ್ಯಾಯವಾಗಿ ಸಿಎನ್‌ಜಿ, ವಿದ್ಯುತ್ ಮತ್ತು ಜಲಜನಕ ಕೋಶಗಳು ಬಂದಿವೆ. ರಾಜ್ಯ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಸಾರಿಗೆ(ಬಿಎಂಟಿಸಿ) ಡೀಸೆಲ್ ವಾಹನಗಳನ್ನು ಸಿಎನ್‌ಜಿ ಮತ್ತು ಬ್ಯಾಟರಿ ಬಳಕೆಗೆ ಪರಿವರ್ತಿಸಲು ಪ್ರಯತ್ನಿಸುತ್ತಿದೆ.

ಉಕ್ಕು ಸೇರಿದಂತೆ ಕಚ್ಚಾ ವಸ್ತುಗಳು ದುಬಾರಿಯಾಗುತ್ತಿವೆ; ಅವುಗಳ ಗಣಿಗಾರಿಕೆಯಿಂದ ಪರಿಸರ ಹಾನಿ ಆಗುತ್ತಿದೆ. ಹೀಗಾಗಿ, ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಿಡುವ ಜವಾಬ್ದಾರಿ ನಮ್ಮ ಮೇಲಿದೆ. ಪಳೆಯುಳಿಕೆ ಇಂಧನಗಳು ಹೊರಸೂಸುವ ಕೊಳೆಗಾಳಿ ಭೂಮಿ ಬಿಸಿಯಾಗಲು ಮುಖ್ಯ ಕಾರಣವಾಗಿದ್ದು, ಜನ-ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಂತರ್‌ರಾಷ್ಟ್ರೀಯ ಶುದ್ಧ ಸಾರಿಗೆ ಮಂಡಳಿ ವರದಿ ಪ್ರಕಾರ, ರಸ್ತೆ ಸಾರಿಗೆಯಿಂದ ಉಂಟಾಗುವ ಮಾಲಿನ್ಯದಿಂದ ಆರು ನಿಮಿಷಕ್ಕೊಬ್ಬ ಭಾರತೀಯ ಅಕಾಲಿಕ ಸಾವಿಗೀಡಾಗುತ್ತಿದ್ದಾನೆ; 2024ರಲ್ಲಿ ಅಂದಾಜು 90,000 ಅಕಾಲಿಕ ಸಾವು ಸಂಭವಿಸಿದೆ. ಹೊಸ ವಾಹನಗಳ ಉತ್ಪಾದನೆಗೆ ಕಚ್ಚಾ ವಸ್ತುಗಳ ಕೊರತೆಯಿದೆ ಮತ್ತು ಪಳೆಯುಳಿಕೆ ಇಂಧನಗಳು ದಿನೇದಿನೇ ದುಬಾರಿಯಾಗುತ್ತಿರುವುದರಿಂದ, ವೈಯಕ್ತಿಕ/ಸಾರ್ವಜನಿಕ ವಾಹನಗಳನ್ನು ವಿದ್ಯುತ್ ವಾಹನಗಳಿಗೆ ಬದಲಿಸಬೇಕಿದೆ. ಜತೆಗೆ, ವೈಯಕ್ತಿಕ ವಾಹನದ ಬದಲು ಸಾರ್ವಜನಿಕ ವಾಹನಗಳನ್ನು ಬಳಸುವ ಪ್ರವೃತ್ತಿ ಹೆಚ್ಚಬೇಕಿದೆ. ಹಳೆಯ ವಾಹನ ವಿಲೇವಾರಿ ವ್ಯವಸ್ಥೆಯಲ್ಲಿನ ಲೋಪದಿಂದ ಆರ್ಥಿಕ ನಷ್ಟ ಹಾಗೂ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ವಾಹನ ಮಾಲಕರಿಗೆ ಸೂಕ್ತ ಆರ್ಥಿಕ ಪರಿಹಾರದ ಖಾತರಿ, ಅಧಿಕೃತ ಗುಜರಿಗಳ ಸಂಖ್ಯೆ ಹೆಚ್ಚಳ-ಸುಲಭ ಪ್ರವೇಶ ಹಾಗೂ ಸುಸ್ಥಿರ ಕಾರ್ಯ ನೀತಿಯನ್ನು ರೂಪಿಸದೆ ಇದ್ದಲ್ಲಿ ಮಾಲಿನ್ಯ ತಡೆ ಮರೀಚಿಕೆ ಆಗಲಿದೆ. ಜತೆಗೆ, ಹಳೆಯ ವಾಹನಗಳು ಕಣ್ಣಿಗೆ ಹೊಡೆಯುವಂತೆ ಎಲ್ಲೆಡೆ ಬಿದ್ದಿರುವುದು ಮುಂದುವರಿಯುತ್ತದೆ.

(ಅಂಕಣಕಾರರು ಪತ್ರಕರ್ತ ಮತ್ತು ಅನುವಾದಕ www.ruthamedia.com)

Tags

ChallengevehiclesOld Vehicles
share
ಮಾಧವ ಐತಾಳ್
ಮಾಧವ ಐತಾಳ್
Next Story
X