ಮಹುವಾದ ಘಮಲು ಮತ್ತು ಪುಟ್ಟ ಹಕ್ಕಿಯ ಅಳಲು

ಜಸಿಂತಾ ಕೆರ್ಕೆಟ್ಟಾ
ನವೆಂಬರ್ 2023ರಲ್ಲಿ ‘ಇಂಡಿಯಾ ಟುಡೇ’ ಕೊಡಮಾಡಿದ ಪ್ರಶಸ್ತಿಯನ್ನು ತಿರಸ್ಕರಿಸಿದ ಕೆರ್ಕೆಟ್ಟಾ, ‘‘ದೇಶದಲ್ಲಿ ಬುಡಕಟ್ಟು ಸಮುದಾಯಗಳ ಜೀವಕ್ಕೆ ಬೆಲೆಯಿಲ್ಲದ ಕಾಲದಲ್ಲಿ, ಮಧ್ಯ ಭಾರತ ಹಾಗೂ ಮಣಿಪುರದ ಆದಿವಾಸಿಗಳು ಘನತೆಯಿಲ್ಲದೆ ಬದುಕುತ್ತಿರುವಾಗ, ಇತರ ಸಮುದಾಯಗಳು ನಿರಂತರ ದಾಳಿಗೆ ಒಳಗಾಗುತ್ತಿರುವಾಗ, ಕವಿ ಅಥವಾ ಲೇಖಕರಿಗೆ ಕೊಡುವ ಗೌರವ ಅವರಿಗೆ ಸಂತೋಷ ಕೊಡುವುದಾದರೂ ಹೇಗೆ?’’ ಎಂದು ಪ್ರಶ್ನಿಸಿದ್ದರು.
ಸುಪ್ರೀಂ ಕೋರ್ಟ್ ತನ್ನ ನವೆಂಬರ್ 2025ರ ಆದೇಶದಲ್ಲಿ ‘‘ಸಾರಂಡದ 314 ಚದರ ಕಿಲೋಮೀಟರ್ ಕಾಡನ್ನು ವನ್ಯಜೀವಿಧಾಮ ಎಂದು ಘೋಷಿಸಬೇಕು; ಕಬ್ಬಿಣದ ಸುಸ್ಥಿರ ಗಣಿಗಾರಿಕೆ ಮತ್ತು ಜೈವಿಕ ವೈವಿಧ್ಯದ ನಡುವೆ ಸಮತೋಲನ ಸಾಧಿಸಬೇಕು’’ ಎಂದು ಹೇಳಿತು. ಸಾರಂಡ ಜಗತ್ತಿನ ಅತ್ಯಂತ ಸಮೃದ್ಧ ಸಾಲ್ ಮರಗಳ ಕಾಡು. ಈ ಕಾಡಿನಲ್ಲಿ ನಿರ್ವಂಶದ ಅಂಚಿನಲ್ಲಿರುವ ಆಮೆ, 4 ಕೊಂಬುಗಳ ಜಿಂಕೆ, ಏಶ್ಯದ ತಾಳೆ ಮರದ ಪುನುಗಿನ ಬೆಕ್ಕು ಅಲ್ಲದೆ ಕಾಡಾನೆಗಳಿವೆ. ಈ ಅರಣ್ಯದಲ್ಲಿ ಶತಮಾನಗಳಿಂದ ಹೋ, ಮುಂಡಾ, ಉರಾಓನ್ ಮತ್ತಿತರ ಆದಿವಾಸಿಗಳು ನೆಲೆಸಿದ್ದಾರೆ. ಈ ಕಾಡಿನಲ್ಲಿ ದೇಶದ ಒಟ್ಟು ಕಬ್ಬಿಣದ ಅದಿರಿನಲ್ಲಿ ಶೇ.26ರಷ್ಟು ಇದ್ದು, ಭಾರತೀಯ ಉಕ್ಕು ಪ್ರಾಧಿಕಾರ(ಸೇಲ್)ಹಾಗೂ ಟಾಟಾ ನಿಕ್ಷೇಪವನ್ನು ಆಧರಿಸಿವೆ. ಜಾರ್ಖಂಡ್ ಸರಕಾರ ‘‘24,941 ಹೆಕ್ಟೇರ್ ಕಾಡನ್ನು ಮಾತ್ರ ವನ್ಯಜೀವಿಧಾಮ ಎಂದು ಘೋಷಿಸಬಹುದು; ಉಳಿದೆಡೆ ಮುಖ್ಯವಾದ ಸಾರ್ವಜನಿಕ ಮೂಲಸೌಲಭ್ಯಗಳಿವೆ’’ ಎಂದು ನ್ಯಾಯಾಲಯದಲ್ಲಿ ಹೇಳಿತ್ತು. ಒಪ್ಪದ ನ್ಯಾಯಾಲಯ, ‘‘ಅರಣ್ಯ ಮತ್ತು ವನ್ಯಜೀವಿಗಳಿಗೆ ರಕ್ಷಣೆ ನೀಡುವುದು ಸರಕಾರದ ಜವಾಬ್ದಾರಿ; ಪರಿಸರ ಸೂಕ್ಷ್ಮ ಪ್ರದೇಶಗಳು ಶಾಸನಾತ್ಮಕವಾಗಿ ರಕ್ಷಿಸಲ್ಪಟ್ಟಿವೆ ಎಂದು ಘೋಷಿಸಬೇಕು’’ ಎಂದು ಹೇಳಿತು. ಈ ಕಾಡು ಮತ್ತು ಇಲ್ಲಿನ ಮೂಲವಾಸಿಗಳ ಉಳಿವಿಗೆ ಹೋರಾಡುತ್ತಿರುವವರು ಕವಿ, ಪತ್ರಕರ್ತೆ ಜಸಿಂತಾ ಕೆರ್ಕೆಟ್ಟಾ.
ನಕ್ಸಲರ ಧ್ವನಿ ಕ್ಷೀಣ
‘‘ಮಧ್ಯ ಭಾರತದಲ್ಲಿ ನಕ್ಸಲರ ಧ್ವನಿ ಉಡುಗಿಸಿದ್ದೇವೆ. ಸರಕಾರ ನಕ್ಸಲಿಸಂನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಈ ಹಿಂದೆ ಮಾವೋವಾದಿ ಚಟುವಟಿಕೆಗಳಿಂದ ಪ್ರಭಾವಿತವಾಗಿದ್ದ ಸುಮಾರು ನೂರು ಜಿಲ್ಲೆಗಳ ಮೇಲೆ ಪರಿಣಾಮ ಉಂಟಾಗಿದೆ’’ ಎಂದು ಗುಜರಾತಿನ ಏಕತಾ ನಗರದಲ್ಲಿ ಪ್ರಧಾನಿ ಇತ್ತೀಚೆಗೆ ಹೇಳಿದರು. 2026ರೊಳಗೆ ದೇಶವನ್ನು ನಕ್ಸಲರಹಿತವನ್ನಾಗಿ ಮಾಡುವುದಾಗಿ ಗೃಹ ಸಚಿವ ಅಮಿತ್ ಶಾ ಕೂಡ ಹೇಳಿದ್ದಾರೆ. ಮಧ್ಯ ಭಾರತ ಅದರಲ್ಲೂ ಮುಖ್ಯವಾಗಿ ಛತ್ತೀಸ್ಗಡ, ಜಾರ್ಖಂಡ್ ನಕ್ಸಲ್ ಪೀಡಿತವಾಗಿವೆ. ಪಶ್ಚಿಮ ಬಂಗಾಳ, ತೆಲಂಗಾಣ-ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ನಕ್ಸಲ್ ಚಟುವಟಿಕೆ ಕ್ಷೀಣಗೊಂಡಿದೆ. ಇದಕ್ಕೆ ಬಡತನ, ತಾರತಮ್ಯ, ಅಸಮಾನತೆ, ಅನಕ್ಷರತೆ, ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಒಡೆತನ ಬುಡಕಟ್ಟು ಜನರ ಕೈತಪ್ಪಿಹೋಗಿದ್ದು ಸೇರಿದಂತೆ ಹಲವು ಕಾರಣಗಳಿವೆ.
ಮನಮೋಹನ್ಸಿಂಗ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಎಲ್ಪಿಜಿ (ಉದಾರೀಕರಣ, ಖಾಸಗೀಕರಣ, ಜಾಗತೀಕರಣ) ಆರಂಭಗೊಂಡ ಬಳಿಕ ಸ್ವಾಭಾವಿಕ ಸಂಪನ್ಮೂಲಗಳು ಖಾಸಗಿ-ಸರಕಾರಿ ಕಂಪೆನಿಗಳಿಗೆ ತೆರೆದುಕೊಂಡವು. ಈ ಪರಭಾರೆಯನ್ನು ಸ್ಥಳೀಯರು ವಿರೋಧಿಸಲಾರಂಭಿಸಿ, ಸಂಘರ್ಷ ಆರಂಭಗೊಂಡಿತು. ಛತ್ತೀಸ್ಗಡದಲ್ಲಿ ನಾಗರಿಕರನ್ನು ಸನ್ನದ್ಧಗೊಳಿಸಿ, ‘ಸಾಲ್ವಾ ಜುಡುಂ’ ಹೆಸರಿನಲ್ಲಿ ಕಣಕ್ಕೆ ಇಳಿಸಲಾಯಿತು. ಈ ಸರಕಾರ ಬೆಂಬಲಿತ ಖಾಸಗಿ ಸೇನೆಯು ನಕ್ಸಲರಿಗಿಂತ ಹೆಚ್ಚು ಸುಲಿಗೆ, ಅತ್ಯಾಚಾರ, ಹತ್ಯೆಗಳನ್ನು ನಡೆಸಿತು. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಕಮಾಂಡೋ ಪಡೆ ಗ್ರೇಹೌಂಡ್ಸ್ ಮೂಲಕ ನಕ್ಸಲರನ್ನು ಹಣಿಯಲಾಯಿತು. ಖನಿಜಗಳು, ಕಲ್ಲಿದ್ದಲು, ಮರಮಟ್ಟುಗಳನ್ನು ಖಾಸಗಿ ಕಂಪೆನಿಗಳಿಗೆ ಪರಭಾರೆ ಮಾಡುವ ಅಡಾವುಡಿಯಲ್ಲಿ ಆದಿವಾಸಿಗಳು ಹೈರಾಣಾದರು.
ಅಣೆಕಟ್ಟು, ಗಣಿಗಾರಿಕೆ, ಭಾರೀ ಜಲವಿದ್ಯುತ್ ಯೋಜನೆಗಳ ವಿರುದ್ಧ ಜನಾಂದೋಲನಗಳು ನಡೆದವು. ನರ್ಮದಾ ಕಣಿವೆ ಯೋಜನೆ ವಿರುದ್ಧ ಮೇಧಾ ಪಾಟ್ಕರ್ ನೇತೃತ್ವದಲ್ಲಿ ದೀರ್ಘ ಕಾಲ ಪ್ರತಿಭಟನೆ ನಡೆದರೂ, ಯೋಜನೆ ಸ್ಥಗಿತವಾಗಲಿಲ್ಲ; ಕಾನೂನು ಹೋರಾಟ ಕೂಡ ವಿಫಲವಾಯಿತು. ಬಿರ್ಸಾ ಮುಂಡಾರಿಂದ ಆರಂಭಗೊಂಡು ಅಲ್ಲೂರಿ ಸೀತಾರಾಮ ರಾಜು, ಬ್ರಿಟಿಷರು ಮತ್ತು ಅವರ ಸಹಭಾಗಿ ಜಮೀನುದಾರರ ವಿರುದ್ಧ 1855ರಲ್ಲಿ ಸಂತಾಲ್ ದಂಗೆಯನ್ನು ಮುನ್ನಡೆಸಿದ ಸಹೋದರರಾದ ಸಿಧು ಮತ್ತು ಕನ್ಹು ಮುರ್ಮು, ಬ್ರಿಟಿಷರನ್ನು ವಿರೋಧಿಸಿದ ಸಂತಾಲ್ ಸಮುದಾಯದ ಮೊದಲ ಆದಿವಾಸಿ ನಾಯಕ ತಿಲ್ಕಾ ಮಾಝಿ, 19ನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಸಶಸ್ತ್ರ ದಂಗೆಯ ನೇತೃತ್ವ ವಹಿಸಿದ್ದ ಮಣಿಪುರದ ಖಾಸಿ ಮುಖ್ಯಸ್ಥ ತಿರೋಟ್ ಸಿಂಗ್, ಬ್ರಿಟಿಷ್ ಕ್ರೌರ್ಯವನ್ನು ವಿರೋಧಿಸಿ ಬುಡಕಟ್ಟು ಜನರನ್ನು ಸಂಘಟಿಸಿದ ಚೋಟಾ ನಾಗ್ಪುರ ಪ್ರದೇಶದ ನಾಯಕ ಶಹೀದ್ ವೀರ್ ನಾರಾಯಣ್ ಸಿಂಗ್, ಖ್ಯಾತ ಲೇಖಕಿ ಮಹಾಶ್ವೇತಾ ದೇವಿ, ಕೇರಳದಲ್ಲಿ ಆದಿವಾಸಿಗಳನ್ನು ಸಂಘಟಿಸಿದ ಜಾನು ಹೀಗೆ ಈ ಪಟ್ಟಿ ಮುಂದುವರಿಯುತ್ತದೆ. ಇವರಲ್ಲಿ ಹೆಚ್ಚಿನವರು ಸೆರೆಮನೆ, ಅವಮಾನ ಮತ್ತು ನಿಂದನೆಗೆ ಒಳಗಾಗಿದ್ದಾರೆ. ನಗರ ಪ್ರದೇಶದಲ್ಲಿ ಸಂಘಟನೆ-ಹೋರಾಟದಲ್ಲಿ ತೊಡಗಿಸಿಕೊಂಡವರನ್ನು ‘ನಗರ ನಕ್ಸಲ್’ ಎಂದು ಹಾಗೂ ಪ್ರತಿಭಟಿಸುವವರನ್ನು ‘ಆಂದೋಲನ್ಜೀವಿ’ ಎಂದು ಹೀನಯಿಸಲಾಗಿದೆ.
ಮಹುವಾ ಹೂವಿನ ಘಮಲು
ಮಹುವಾ ಹೂವು ಕಾಡಿನ ಜೀವಂತಿಕೆಗೆ ಸಾಕ್ಷಿ ಮಾತ್ರವಲ್ಲದೆ, ಆದಿವಾಸಿಗಳ ಜೀವನಾಧಾರವೂ ಹೌದು. ಈ ಹೂವಿನ ಬಗ್ಗೆ ಬರೆಯುತ್ತಲೇ ಆದಿವಾಸಿಗಳನ್ನು ಸಂಘಟಿಸುತ್ತಿರುವ ಜಸಿಂತಾ ಕೆರ್ಕೆಟ್ಟಾ (ಜನನ-ಆಗಸ್ಟ್ 3, 1983), ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಕುರುಖ್(ಅಥವಾ ಒರಾಓನ್) ಬುಡಕಟ್ಟಿಗೆ ಸೇರಿದವರು. ಜಾರ್ಖಂಡ್ ಮತ್ತು ಒಡಿಶಾದ ಗಡಿಯಲ್ಲಿರುವ ಸಾರಂಡ ಕಾಡಿನ ಪಕ್ಕದ ಹಳ್ಳಿಯಲ್ಲಿ ಜನನ; ತಾಯ್ನುಡಿ ಆಸ್ಟ್ರೋಏಶ್ಯಟಿಕ್ ಕುಟುಂಬಕ್ಕೆ ಸೇರಿದ ಸಂತಾಲಿ. ಆಗ್ನೇಯ ಮತ್ತು ದಕ್ಷಿಣ ಏಶ್ಯದ ಕೆಲವು ಭಾಗಗಳ 150ಕ್ಕೂ ಹೆಚ್ಚು ಭಾಷೆಗಳು ಮತ್ತು ಸುಮಾರು 117 ದಶಲಕ್ಷ ಜನ ಮಾತನಾಡುವ ದೊಡ್ಡ ಭಾಷಾ ಕುಟುಂಬಕ್ಕೆ ಸೇರಿದ ಸಂತಾಲಿ, ಕನಿಷ್ಠ ಆರು ದಶಲಕ್ಷ ಜನ ಮಾತನ್ನಾಡುವ ಮತ್ತು ಅಧಿಕೃತ ಸ್ಥಾನಮಾನ ಹೊಂದಿರುವ ಭಾಷೆ ಎಂದು ಲಿವಿಂಗ್ ಟಂಗ್ಸ್ ಇನ್ಸ್ಟಿಟ್ಯೂಟ್ ಫಾರ್ ಎಂಡೇಂಜರ್ಡ್ ಲ್ಯಾಂಗ್ವೇಜಸ್ ಹೇಳುತ್ತದೆ. ಸರಕಾರದ ಬೆಂಬಲ, ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳು ಮತ್ತು ಡಿಜಿಟಲೀಕರಣ ಉಪಕ್ರಮಗಳು ಸಂತಾಲಿಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಕೆಲಸ ಮಾಡುತ್ತಿವೆ ಎಂದು ರಾಂಚಿ ವಿಶ್ವವಿದ್ಯಾನಿಲಯ ಹೇಳುತ್ತದೆ. ಹೀಗಿದ್ದರೂ, ಸಂತಾಲಿ ಭಾಷಿಕರ ಸಂಖ್ಯೆ ಕ್ಷೀಣಿಸುತ್ತಿದೆ.
ಜಾರ್ಖಂಡ್ನಲ್ಲಿ ಸಂಪನ್ಮೂಲ ದಂಡಿಯಾಗಿದೆ; ಆದರೆ, ಶೇ.39ಕ್ಕೂ ಹೆಚ್ಚು ಮಂದಿ ಬಡತನದ ರೇಖೆ ಕೆಳಗಿದ್ದಾರೆ. ಸಾರಂಡ ಅರಣ್ಯದ ಹೆಚ್ಚು ಪಾಲು ಗಣಿಗಾರಿಕೆ ಕಂಪೆನಿಗಳ ಹಿಡಿತದಲ್ಲಿದೆ. ಹೀಗಾಗಿ, ಜೆಸಿಬಿಗಳ ಕರ್ಕಶ ಸದ್ದು ಕಾಡು, ಕಣಿವೆ, ವನ್ಯಜೀವಿಗಳನ್ನು ತಲ್ಲಣಗೊಳಿಸುತ್ತಿದೆ. ಮುಖ್ಯವಾಹಿನಿ ಮಾಧ್ಯಮಗಳು ಮಣಿಪುರದಲ್ಲಿನ ಜನಾಂಗೀಯ ಹಿಂಸೆಯನ್ನು ವರದಿ ಮಾಡದೆ ನಿರ್ಲಕ್ಷಿಸಿದ್ದನ್ನು ಪ್ರತಿಭಟಿಸಿ, ನವೆಂಬರ್ 2023ರಲ್ಲಿ ‘ಇಂಡಿಯಾ ಟುಡೇ’ ಕೊಡಮಾಡಿದ ಪ್ರಶಸ್ತಿಯನ್ನು ತಿರಸ್ಕರಿಸಿದ ಕೆರ್ಕೆಟ್ಟಾ, ‘‘ದೇಶದಲ್ಲಿ ಬುಡಕಟ್ಟು ಸಮುದಾಯಗಳ ಜೀವಕ್ಕೆ ಬೆಲೆಯಿಲ್ಲದ ಕಾಲದಲ್ಲಿ, ಮಧ್ಯ ಭಾರತ ಹಾಗೂ ಮಣಿಪುರದ ಆದಿವಾಸಿಗಳು ಘನತೆಯಿಲ್ಲದೆ ಬದುಕುತ್ತಿರುವಾಗ, ಇತರ ಸಮುದಾಯಗಳು ನಿರಂತರ ದಾಳಿಗೆ ಒಳಗಾಗುತ್ತಿರುವಾಗ, ಕವಿ ಅಥವಾ ಲೇಖಕರಿಗೆ ಕೊಡುವ ಗೌರವ ಅವರಿಗೆ ಸಂತೋಷ ಕೊಡುವುದಾದರೂ ಹೇಗೆ?’’ ಎಂದು ಪ್ರಶ್ನಿಸಿದ್ದರು.
‘‘ನಮ್ಮ ಕಾಡುಗಳು ಶ್ರೀಮಂತವಾಗಿವೆ’’ ಎಂದು ಅವರು ಹೇಳುತ್ತಾರೆ. ‘‘ಆದರೆ, ಹತ್ತಿರದಿಂದ ನೋಡಿದರೆ ಅದು ರಕ್ತಸಿಕ್ತವಾಗಿದೆ. ನಾನು ಜಾರ್ಖಂಡ್ನ ಸಣ್ಣ ಹಳ್ಳಿಯಲ್ಲಿ ಜನಿಸಿದೆ. ಅಲ್ಲಿ ರಾತ್ರಿಗಳು ಮಹುವಾ ಹೂವುಗಳ ಸುವಾಸನೆ ಹೊಂದಿರುತ್ತಿದ್ದವು ಮತ್ತು ಬೆಳಗು ಕೊಡಲಿಗಳ ಶಬ್ದದಿಂದ ಪ್ರಾರಂಭವಾಗುತ್ತಿತ್ತು. ಬಾಲ್ಯದಲ್ಲಿ ಕಾಡು ಏಕೆ ಅಳುತ್ತಿತ್ತು ಎನ್ನುವುದು ನನಗೆ ಅರ್ಥವಾಗುತ್ತಿರಲಿಲ್ಲ. ನನ್ನ ಜನರು ತಾವಿಲ್ಲದ ಗಾಳಿಯಂತೆ ಯಾವಾಗಲೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುತ್ತಾರೆ ಎಂಬುದು ನನಗೆ ತಿಳಿದಿತ್ತು. ತಂದೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಿ; ತಾಯಿ ಮನೆ ನೋಡಿಕೊಳ್ಳುತ್ತಿದ್ದರು. ನಾವು ಬಡವರಲ್ಲ; ಆದರೆ, ಸುರಕ್ಷಿತವಾಗಿರಲಿಲ್ಲ. ರಸ್ತೆಯಲ್ಲಿ ಬೂಟುಗಳ ಶಬ್ದ, ಮಧ್ಯರಾತ್ರಿಯಲ್ಲಿ ಗಣಿಗಾರಿಕೆ ಟ್ರಕ್ಗಳ ಪಿಸುಮಾತು ಮತ್ತು ಸ್ಫೋಟಿಸಿದಾಗ ಬೆಟ್ಟಗಳ ಮೌನ ನನಗೆ ನೆನಪಿದೆ. ಆ ಬೆಟ್ಟಗಳು ನಮಗೆ ಪವಿತ್ರವಾಗಿದ್ದವು; ನಮ್ಮ ಪೂರ್ವಜರು ಅದರ ಗುಹೆಗಳಲ್ಲಿ ವಾಸಿಸುತ್ತಿದ್ದರು, ನಮ್ಮ ಕಥೆಗಳು ಅದರ ಬೇರುಗಳ ಕೆಳಗೆ ಮಲಗಿದ್ದವು.
ದೊಡ್ಡವಳಾದಾಗ ‘ಅಭಿವೃದ್ಧಿ’ ಎಂದರೆ ಏನೆಂದು ನನಗೆ ಅರ್ಥವಾಯಿತು. ಅದರರ್ಥ-ಹೊರಗಿನವರು ನಮ್ಮ ಖನಿಜಗಳನ್ನು ತೆಗೆದೊಯ್ಯುವ ರಸ್ತೆಗಳು, ನಮ್ಮ ಮಕ್ಕಳಿಗೆ ಇಲ್ಲದ ಶಾಲೆಗಳು; ಕಪ್ಪಾಗಿ ಹರಿಯುವ ನದಿಗಳು ಮತ್ತು ಮಹಿಳೆಯರು ಶುದ್ಧ ನೀರು ತರಲು ವರ್ಷದಿಂದ ವರ್ಷಕ್ಕೆ ಹೆಚ್ಚು ದೂರ ನಡೆದುಕೊಂಡು ಹೋಗುವುದು.
ನಾನು ಇಂಥ ಕಥೆಗಳನ್ನು ಹೇಳಲು ಬಯಸಿದ್ದೆ. ಆದರೆ, ಸಣ್ಣ ಹಳ್ಳಿಯ ಬುಡಕಟ್ಟು ಹುಡುಗಿಯ ಮಾತನ್ನು ಯಾರು ಕೇಳುತ್ತಾರೆ? ಪೆನ್ನು ಹಿಡಿದರೆ ಕೇಳುವಂತೆ ಮಾಡಬಹುದು ಎಂದು ನಂಬಿ, ರಾಂಚಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿದೆ. ನನ್ನ ಸಹಪಾಠಿಗಳು ಚಲನಚಿತ್ರ ತಾರೆಯರು ಮತ್ತು ರಾಜಕೀಯದ ಬಗ್ಗೆ ಬರೆದರು. ನಾನು ಯಾರೂ ಭೇಟಿ ನೀಡದ ಹಳ್ಳಿಗಳ ಬಗ್ಗೆ, ಮುದ್ರಣದಲ್ಲಿ ಎಂದೂ ಕಾಣಿಸಿಕೊಳ್ಳದ ಮಹಿಳೆಯರ ಬಗ್ಗೆ ಮತ್ತು ಮರಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರು ಇದ್ದ ಕಾಡುಗಳ ಬಗ್ಗೆ ಬರೆದೆ. ಆದರೆ, ವರದಿಗಾರಿಕೆಯು ಬೀಸುಗಾಳಿಯಲ್ಲಿ ಕೂಗಿದಂತೆ ಭಾಸವಾಯಿತು. ನನ್ನ ಲೇಖನಗಳು ಪ್ರಕಟವಾದವು; ಆದರೆ, ಅವುಗಳಲ್ಲಿನ ಕೋಪ-ಸತ್ಯವನ್ನು ತೆಗೆದುಹಾಕಿ, ಸೌಮ್ಯಗೊಳಿಸಲಾಯಿತು. ಆಗ ನಾನು ಕಾವ್ಯದ ಕಡೆಗೆ ತಿರುಗಿದೆ. ಕಾವ್ಯವು ಮೃದುವಾಗಿ ಕಿರುಚಲು ಅವಕಾಶ ಮಾಡಿಕೊಟ್ಟಿತು.
ನನ್ನ ಮೊದಲ ಸಂಕಲನ ಅಂಗೋರ್(ಅಂದರೆ ಕೆಂಡ, 2022); ನಮ್ಮ ಕಥೆಗಳು ಹೀಗಿವೆ - ಬೂದಿ ಕೆಳಗೆ ಹೊಳೆಯುವ ಕೆಂಡಗಳು; ಬೆಂಕಿಯಾಗಲು ಉಸಿರಿಗಾಗಿ ಕಾಯುತ್ತಿವೆ. ಜಾರ್ಖಂಡ್ನ ಆಚೆ ಅದನ್ನು ಯಾರಾದರೂ ಓದುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಆದರೆ, ಹೇಗೋ ಏನೋ ಜನ ಓದಿದರು. ನನ್ನ ಮಾತುಗಳು ತಾವು ಹಿಂದೆಂದೂ ನೋಡಿರದ ಗಾಯದಂತೆ ಭಾಸವಾಗುತ್ತಿವೆ ಎಂದು ಅವರು ಹೇಳಿದರು. ಆದರೆ, ನಾನು ಸಹಾನುಭೂತಿಗಾಗಿ ಬರೆಯುವುದಿಲ್ಲ. ನೆನಪಿಗಾಗಿ ಬರೆಯುತ್ತೇನೆ; ನಾನು ಬರೆಯುವ ಪ್ರತಿಯೊಂದು ಕವಿತೆಯೂ ಮರೆಯುವಿಕೆ ವಿರುದ್ಧದ ಪ್ರತಿಭಟನೆ; ಆದಿವಾಸಿಗಳು ಬೇರೊಬ್ಬರ ಕಥೆಯಲ್ಲಿ ಅಡಿಟಿಪ್ಪಣಿ ಎಂಬ ಕಲ್ಪನೆ ವಿರುದ್ಧ ಇರಲಿದೆ.
ಆದರೆ, ಅದು ಸುಲಭವಲ್ಲ. ‘ನೀವೇಕೆ ಯಾವಾಗಲೂ ನೋವಿನ ಬಗ್ಗೆಯೇ ಬರೆಯುತ್ತೀರಿ? ಪ್ರೀತಿ ಬಗ್ಗೆ ಏಕೆ ಬರೆಯಬಾರದು?’ ಎಂದು ಕೇಳುತ್ತಾರೆ. ನಾನು ನಗುತ್ತೇನೆ. ಏಕೆಂದರೆ, ನಮಗೆ ಬದುಕುಳಿಯುವುದೇ ಪ್ರೀತಿ. ಕಾಡಿನ ರಕ್ಷಣೆಯೇ ಪ್ರೀತಿ. ನದಿಗೋಸ್ಕರ ಹಾಡುವುದು ಪ್ರೀತಿ.
ನನಗೆ ನೆನಪಿದೆ; ದೊಡ್ಡ ನಗರವೊಂದರಲ್ಲಿ ವ್ಯಕ್ತಿಯೊಬ್ಬರು, ‘ಸಾರ್ವತ್ರಿಕ’ ಕಾವ್ಯವನ್ನು ಬರೆಯುವ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಎಂದು ಕೇಳಿದರು. ನಾನು ಅವರನ್ನು ಕೇಳಿದೆ, ‘ಹೇಳಿ, ತನ್ನ ಮಗು ಭೂಮಿಯನ್ನು ಕಳೆದುಕೊಳ್ಳುವುದನ್ನು ನೋಡುವ ತಾಯಿಯ ಕೂಗಿಗಿಂತ ಹೆಚ್ಚು ಸಾರ್ವತ್ರಿಕವಾದದ್ದು ಯಾವುದು?’
ಕೆಲವೊಮ್ಮೆ ನನ್ನ ಮಾತುಗಳು ನನಗಿಂತ ವೇಗವಾಗಿ ಹೆಚ್ಚು ದೂರ ಪ್ರಯಾಣಿಸುತ್ತವೆ. ನನಗೆ ಗೊತ್ತಿಲ್ಲದ ಭಾಷೆಗಳಿಗೆ ಅವನ್ನು ಅನುವಾದಿಸಲಾಗಿದೆ. ಹೀಗಿದ್ದರೂ, ಸಂದೇಶ ಬದಲಾಗಿಲ್ಲ; ನಾವು ಆದಿಮ ಜೀವಿಗಳಲ್ಲ. ಬಡವರಲ್ಲ. ಜಗತ್ತು ಗೌರವಿಸಲು ಮರೆತ ಕಥೆಗಳ ಪಾಲಕರು ನಾವು.
ನನ್ನ ಪ್ರವಾಸದ ವೇಳೆ ಭೇಟಿಯಾಗುವ ಆದಿವಾಸಿ ಯುವತಿಯರು ತಮ್ಮ ಕನಸುಗಳನ್ನು ನನಗೆ ಉಸುರುತ್ತಾರೆ - ಕೆಲವರು ಬರೆಯಲು, ಇನ್ನು ಕೆಲವರು ಕಲಿಸಲು, ಮತ್ತೆ ಕೆಲವರು ಆಲಿಸಲು ಬಯಸುತ್ತಾರೆ. ನಿಮ್ಮ ಕವಿತೆಗಳಲ್ಲಿ ಧೈರ್ಯವನ್ನು ಕಂಡಿದ್ದೇವೆ ಎಂದು ಹೇಳಿದಾಗ, ನಾನು ಹೇಳುತ್ತೇನೆ: ಧೈರ್ಯ ಅವರದ್ದು; ನಾನು ಅದನ್ನು ಬರೆದಿದ್ದೇನೆ ಅಷ್ಟೇ.
ಜಗತ್ತು ಈಗಲೂ ನಮ್ಮನ್ನು ‘ಬುಡಕಟ್ಟು ಜನಾಂಗ’, ‘ಸ್ಥಳಾಂತರಗೊಂಡವರು’, ‘ಬಾಧಿತರು’ ಎಂಬ ಹಣೆಪಟ್ಟಿಗಳ ಮೂಲಕ ನೋಡುತ್ತದೆ. ಆದರೆ, ನಾನು ಮನೆಗೆ ಹಿಂದಿರುಗಿದಾಗ ಮತ್ತು ಗಾಳಿಯು ಸುಟ್ಟ ಸಾಲ್ ಎಲೆಗಳ ವಾಸನೆಯನ್ನು ಹೊತ್ತೊಯ್ಯುವಾಗ, ಈ ಹಣೆಪಟ್ಟಿಗಳಿಂದ ನಮ್ಮನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎನ್ನುವುದು ನನಗೆ ಗೊತ್ತಿದೆ. ನಮ್ಮ ಅಸ್ಮಿತೆಯು ಕಳೆದುಕೊಂಡಿರುವುದರಲ್ಲಿ ಇಲ್ಲ; ಸಾಯಲು ನಿರಾಕರಿಸುವುದರಲ್ಲಿ ಇದೆ.
ಕೆಲವೊಮ್ಮೆ ತಡರಾತ್ರಿಯಲ್ಲಿ ಮನೆ ಹೊರಗೆ ಕುಳಿತು ಕಾಡಿನ ಉಸಿರನ್ನು ಆಲಿಸುತ್ತೇನೆ. ಚಂದ್ರನ ಬೆಳಕು ಮರಗಳ ಮೂಲಕ ಹಳೆಯ ಸ್ನೇಹಿತನಂತೆ ಜಾರಿ ಹೋಗುತ್ತದೆ. ಭೂಮಿ ನನ್ನ ಪಾದಗಳ ಕೆಳಗೆ ಜೀವಂತವಾಗಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಪೂರ್ವಜರಾದ ಯೋಧರು, ಗಾಯಕರು, ರೈತರು, ವೈದ್ಯರ ಬಗ್ಗೆ ಯೋಚಿಸುತ್ತ ಪಿಸುಗುಟ್ಟುತ್ತೇನೆ, ನಾನು ಈಗಲೂ ನಿಮ್ಮ ಕಥೆಯನ್ನು ಹೇಳುತ್ತಿದ್ದೇನೆ.’’
ಕಾವ್ಯದಿಂದ ಗುಂಡನ್ನು, ಬುಲ್ಡೋಜರ್ನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ‘‘ಬಹುಶಃ ಅದು ನಿಜ. ಆದರೆ, ಅದು ಜನರು ಏಕೆ ದೃಢವಾಗಿ ನಿಲ್ಲಬೇಕು ಎಂಬುದನ್ನು ನೆನಪಿಸುತ್ತದೆ. ಮತ್ತು ನಾನು ನಂಬಿದಂತೆ, ಕ್ರಾಂತಿ ಪ್ರಾರಂಭವಾಗುವುದು ಹೀಗೆಯೇ- ಬಂದೂಕುಗಳಿಂದಲ್ಲ, ಪದಗಳಿಂದ; ನೆನಪಿನಲ್ಲಿ ಇಟ್ಟುಕೊಳ್ಳುವಷ್ಟು ಮೃದುವಾದ ಮತ್ತು ಎಂದಿಗೂ ಸಾಯದಷ್ಟು ಬಲಶಾಲಿ ಪದಗಳಿಂದ’’. (ಆಧಾರ: ಮೋಹನ್ ಗುರುಸ್ವಾಮಿ ಅವರ ಫೇಸ್ಬುಕ್ ಖಾತೆ (https://www.facebook.com/share/p/16YQ6N6bkH/)
ಕನ್ನಡದಲ್ಲಿ ಕರ್ಕೆಟ್ಟಾ
ಅವರ ‘ಅಂಗೋರ್’ ಕವನ ಸಂಕಲನವನ್ನು ಸಂವರ್ತ ‘ಸಾಹಿಲ್’ ಕನ್ನಡಕ್ಕೆ ‘ಗೋರಿಯ ಮೇಲೆ ರಾಗಿಯ ಕೊನರು’ ಎಂದು ಅನುವಾದಿಸಿದ್ದಾರೆ (ಪ್ರಕಟಣೆ-ಅಹರ್ನಿಶಿ ಪ್ರಕಾಶನ, ಶಿವಮೊಗ್ಗ).
‘‘ಅಚಾನಕ್ಕಾಗಿ ಶಬ್ದಗಳ ಬಣ್ಣಗಳು ಅಳಿಸಿಹೋದವು,
ಮೊದಲ ಬಾರಿ ಮಣ್ಣಿಗೆ ಹತ್ತಿರವಾದವು.
‘ಎಷ್ಟೊಂದು ಮರೆವು ಆವರಿಸಿದೆ’ ಎನ್ನುವಾಗಲೇ
ಅಲ್ಲೇ ಪಕ್ಕದಲ್ಲಿ ಮಹುವಾ ಹೂವು ಉದುರಿತು.
ಅದನ್ನು ಸ್ಪರ್ಶಿಸಿದ ಶಬ್ದಗಳ ಬಾಯಿ ಕಟ್ಟಿಹೋಯಿತು.
ಆ ಹೂವು ಮೆಲ್ಲಗೆ
ಅರ್ಥಪೂರ್ಣ ಶಬ್ದವಾಗಿ ಅರಳಿತು.
ಗಾಡಿಗಳ ಗದ್ದಲಕ್ಕೆ ಬೆದರಿ ರಸ್ತೆ ದಾಟಲು ಹಿಂಜರಿಯುತ್ತಿದ್ದ ಹುಡುಗಿಯ ಕೈಯನ್ನು ತಂದೆ ಹಿಡಿದಾಗ ಅದು ಅವಳಿಗೆ ಮುಗ್ಧ ಮಗುವೊಂದರ ಸ್ಪರ್ಶದಂತೆ ತೋರುತ್ತದೆ.
ಅಗಲವಾದ ರಸ್ತೆಯನ್ನು ದಾಟುವ ಸಮಯ
ಮಗಳು ಅನಾಯಾಸವಾಗಿ ತಾಯಿಯಾದಳು.
ಆಗ ಅವಳಿಗೆ
ತಾಯಿಯಾಗಲು ವಯಸ್ಸಿಲ್ಲ ಎಂದು ತಿಳಿಯಿತು.
ತಾಯ್ತನದ ವಯಸ್ಸು ಏನೆಂದು
ಭೂಮಿಯನ್ನೇ ಕೇಳಿ ನೋಡಿ ಯಾರಾದರೂ.’’
ಅವರ ಇನ್ನೊಂದು ಕವನ;
‘‘ಎಲ್ಲಿ ಏನೂ ತಲುಪುವುದಿಲ್ಲವೋ
ಬೆಟ್ಟಗಳ ಮೇಲೆ ಮಂದಿ ಬೆಟ್ಟದ ನೀರನ್ನೇ ಕುಡಿಯುತ್ತಾರೆ
ಸರಕಾರದ ನೀರು ಅಲ್ಲಿಯವರೆಗೆ ತಲುಪುವುದಿಲ್ಲ
ತಾಯ್ನುಡಿಯಲ್ಲಿ ಕಲಿಸುವ ಯಾವುದೇ ಸ್ಕೂಲು ತಲುಪುವುದಿಲ್ಲ
ಆಸ್ಪತ್ರೆಗೆ ಯಾವ ಡಾಕ್ಟರರೂ ತಲುಪುವುದಿಲ್ಲ
ವಿದ್ಯುತ್ ತಲುಪುವುದಿಲ್ಲ ಇಂಟರ್ನೆಟ್ ತಲುಪುವುದಿಲ್ಲ
ಅಲ್ಲಿ ಏನೇನೂ ತಲುಪುವುದಿಲ್ಲ
ಸಾಹೇಬರೇ! ಎಲ್ಲಿ ಏನೇನೂ ತಲುಪುವುದಿಲ್ಲವೋ
ಅಂಥಲ್ಲಿ ಮತ ಮತ್ತು ಆಕಳಿನ ಹೆಸರಿನಲ್ಲಿ
ಮನುಷ್ಯರ ಕೊಲೆ ಮಾಡುವ ಸಲುವಾಗಿ
ಇಷ್ಟೊಂದು ವಿಷ ಹೇಗೆ ತಲುಪುತ್ತದೆ?’’
(ಅನುವಾದ; ಸಂಕೇತ ಪಾಟೀಲ; ಅವರ ಇತ್ತೀಚಿನ ಅನುವಾದಿತ ಕೃತಿ- ಪೆಗ್ಗಿ ಮೋಹನ್ ಅವರ ವಾಂಡರರ್ಸ್, ಕಿಂಗ್ಸ್, ಮರ್ಚೆಂಟ್ಸ್: ದಿ ಸ್ಟೋರಿ ಆಫ್ ಇಂಡಿಯಾ ಥ್ರೂ ಇಟ್ಸ್ ಲ್ಯಾಂಗ್ವೇಜಸ್; ಅಲೆಮಾರಿಗಳು, ಅರಸರು, ವರ್ತಕರು-ಭಾಷೆಗಳ ಹಾದಿಗುಂಟ ಭಾರತದ ಕಥನ; ಋತುಮಾನ, ಬೆಂಗಳೂರು).
‘ಒಂದು ಪುಟ್ಟ ಹಕ್ಕಿಗಾಗಿ ಲೋಕವನ್ನು ಉಳಿಸಲಾಗದು’ ಎಂಬುದು ಕೆರ್ಕೆಟ್ಟಾ ಅವರ ಒಂದು ಸಾಲು. ಪುಟ್ಟ ಹಕ್ಕಿ ಉಳಿಯಲಿ; ಅದನ್ನು ಪೊರೆಯುವ ಸಾರಂಡದ ಕಾಡು ಉಳಿಯಲಿ ಮತ್ತು ಇದರಿಂದ ಈ ಲೋಕವೂ ಉಳಿಯಲಿ ಎನ್ನುವುದೇ ಆಶಯ.







