ನೇಪಥ್ಯಕ್ಕೆ ಸರಿದ ದಂತಕಥೆ ಮಾರ್ಕ್ ಟುಲ್ಲಿ

ಹಸನ್ಮುಖ, ನಿರರ್ಗಳ ಹಿಂದಿ ಮತ್ತು ಸುಸಂಸ್ಕೃತ ಇಂಗ್ಲಿಷ್‌ನಿಂದ ಜನರನ್ನು ಸೆಳೆಯುತ್ತಿದ್ದ ಅವರು ದಯೆ, ಕಾಳಜಿ ಹೊಂದಿದ್ದ ಧಾರ್ಮಿಕ ವ್ಯಕ್ತಿ. ಅವರ ರೇಡಿಯೊ ವರದಿಗಳು ವೃತ್ತಪತ್ರಿಕೆಗಳ ವರದಿಗಳಿಗಿಂತ ತಕ್ಷಣ ಮತ್ತು ಹೆಚ್ಚು ಪರಿಣಾಮ ಬೀರಿದವು. ಅವರಿಗೆ ಪತ್ರಿಕೋದ್ಯಮಕ್ಕಿಂತ ಭಾರತದ ಮೇಲೆ ಹೆಚ್ಚು ಪ್ರೀತಿಯಿತ್ತು. ದೇಶ ಸುತ್ತುತ್ತ ಜನರೊಂದಿಗೆ ಬೆರೆತು, ರೇಡಿಯೊದಲ್ಲಿ ವರದಿ-ವ್ಯಾಖ್ಯಾನ ಮಾಡುತ್ತ ನಡೆದರು. ಬಿಬಿಸಿ ಜೊತೆಗೆ ಟುಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಇರುತ್ತದೆ. ಆದರೆ, ನಿಝಾಮುದ್ದೀನ್ ಪೂರ್ವದ 1ನೇ ಸಂಖ್ಯೆಯ ಮನೆಯಲ್ಲಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಮತ್ತು ‘ದೈನಿಕ್ ಭಾಸ್ಕರ್’ ಓದುತ್ತ ಕುಳಿತಿರುವ ಟುಲ್ಲಿ ಮಾತ್ರ ಇನ್ನುಮುಂದೆ ಕಾಣಸಿಗುವುದಿಲ್ಲ.
ಪತ್ರಕರ್ತ ವಿಲಿಯಂ ಮಾರ್ಕ್ ಟುಲ್ಲಿ ತಮ್ಮ 90ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು (ಅಕ್ಟೋಬರ್ 24,1935-ಜನವರಿ 25, 2026), ದಂತಕತೆಯೊಂದು ಕಣ್ಮರೆಯಾಗಿದೆ. ಆದರೆ, ಟುಲ್ಲಿ ಅವರ ಬೆಚ್ಚಗಿನ, ನಿರ್ಭೀತ ಮತ್ತು ನಿಷ್ಪಕ್ಷಪಾತ ಧ್ವನಿಯು ದಕ್ಷಿಣ ಏಶ್ಯ ಮತ್ತು ಪ್ರಪಂಚದಾದ್ಯಂತದ ಶ್ರೋತೃಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳಲಿದೆ.
ಕಲ್ಕತ್ತಾದಲ್ಲಿ ಜನನ; ತಂದೆ ವಿಲಿಯಂ ಸ್ಕಾರ್ಥ್ ಕಾರ್ಲೈಸ್ಲ್ ಟುಲ್ಲಿ ಬ್ರಿಟಿಷ್ ಮ್ಯಾನೇಜಿಂಗ್ ಏಜೆನ್ಸಿ ಗಿಲ್ಯಾಂಡರ್ ಅರ್ಬುತ್‌ನಾಟ್ಸ್‌ನ ಹಿರಿಯ ಪಾಲುದಾರ ಮತ್ತು ತಾಯಿ ಪೇಷನ್ಸ್ ಟ್ರೆಬಿ. ತಾಯಿಯ ಹಿರಿಯರು ಬಾಂಗ್ಲಾದಲ್ಲಿ ತಲೆಮಾರುಗಳಿಂದ ನೆಲೆಸಿದ್ದರು. ಡಾರ್ಜಿಲಿಂಗ್‌ನ ಬ್ರಿಟಿಷ್ ಬೋರ್ಡಿಂಗ್ ಶಾಲೆ, ಇಂಗ್ಲೆಂಡ್‌ನ ಮಾರ್ಲ್‌ಬರೋ ಕಾಲೇಜಿನ ಬಳಿಕ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಟ್ರಿನಿಟಿ ಹಾಲ್‌ನಲ್ಲಿ ಥಿಯಾಲಜಿ(ದೇವತಾ ಶಾಸ್ತ್ರ)ಯನ್ನು ಅಧ್ಯಯನ ಮಾಡಿದರು; ಆದರೆ, ಧರ್ಮಗುರುವಾಗಲಿಲ್ಲ. ‘ಧರ್ಮಗುರು ವೃತ್ತಿ, ಬಿಯರ್-ವಿಸ್ಕಿ ಉಲ್ಲೇಖ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತಾಡುವುದು ನನಗೆ ಆಗಿಬರುವುದಿಲ್ಲ’ ಎಂದು ಹೇಳುತ್ತಿದ್ದರು. 1994ರಲ್ಲಿ ‘ದಿ ಇಂಡಿಪೆಂಡೆಂಟ್’ ಪತ್ರಿಕೆ ಜೊತೆ ಮಾತನ್ನಾಡುತ್ತ, ‘‘ನನ್ನ ವ್ಯಕ್ತಿತ್ವದಲ್ಲಿ ದ್ವಂದ್ವ ಇದೆ- ತುಂಬಾ ಧಾರ್ಮಿಕತೆ; ಆದರೂ, ನೈತಿಕವಾಗಿ ಕೆಟ್ಟತನ’’. ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ‘‘ನನ್ನ ವೈಯಕ್ತಿಕ ನೈತಿಕತೆ ಬಗ್ಗೆ ನನಗೆ ವಿಶ್ವಾಸ ಇರಲಿಲ್ಲ. ಚರ್ಚ್ ನನಗೆ ಮಹತ್ವದ್ದಾಗಿತ್ತು; ಈಗಲೂ ಕೂಡ. ಆದ್ದರಿಂದ, ಅದನ್ನು ವಂಚಿಸಲು ಬಯಸಲಿಲ್ಲ’’ ಎಂದು ಹೇಳಿದ್ದರು. ಚರ್ಚ್‌ನ ನಷ್ಟವು ಪತ್ರಿಕೋದ್ಯಮಕ್ಕೆ ವರವಾಗಿ ಪರಿಣಮಿಸಿತು.
ಬಿಬಿಸಿಗೆ ಸೇರ್ಪಡೆ
ಧರ್ಮಗುರು ವೃತ್ತಿ ಸೂಕ್ತವಲ್ಲ ಎಂದು ನಿರ್ಧರಿಸಿದ ಬಳಿಕ ಕೆಲಕಾಲ ಬೋಧನೆ, ಆನಂತರ ನಾಲ್ಕು ವರ್ಷ ಚೆಷೈರ್‌ನಲ್ಲಿ ವಸತಿ ದತ್ತಿಯೊಂದಿಗೆ ಕೆಲಸ ಮಾಡಿದರು. ಕ್ವಿಟ್ ಇಂಡಿಯಾ ಚಳವಳಿ, ಕೋಮುಹಿಂಸೆ, 2ನೇ ಮಹಾಯುದ್ಧ ಹಾಗೂ ಬ್ರಿಟಿಷ್ ಆಡಳಿತದ ಅಂತ್ಯ ಸಮೀಪಿಸುತ್ತಿದ್ದ ಕಾಲ ಅದು. 1965ರಲ್ಲಿ ಬಿಬಿಸಿಯ ಸಹಾಯಕ ಪ್ರತಿನಿಧಿಯಾಗಿ ಆಡಳಿತ ವಿಭಾಗದಲ್ಲಿ ಕೆಲಸ ಆರಂಭಿಸಿ, 1971ರಲ್ಲಿ ಹೊಸ ದಿಲ್ಲಿ ವರದಿಗಾರ ಆದರು. ಸಹೋದ್ಯೋಗಿ ಆಂಡ್ರ್ಯೂ ವೈಟ್‌ಹೆಡ್, ಟುಲ್ಲಿ ಅವರನ್ನು ‘ಬ್ರಿಟಿಷ್ ರಾಜ್‌ನ ಮಗು’ ಎಂದು ಕರೆದಿದ್ದರು. 1960ರಲ್ಲಿ ಆಕಾಶವಾಣಿಯದೇ ಸಾಮ್ರಾಜ್ಯ. ಹಲವು ಅಡೆತಡೆ ಹಾಗೂ ಸರಕಾರದ ಒತ್ತಡದ ನಡುವೆಯೂ ಬಿಬಿಸಿಯನ್ನು ಕಟ್ಟಿದರು; 20 ವರ್ಷ ದಕ್ಷಿಣ ಏಶ್ಯ ಬ್ಯೂರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಸಹೋದ್ಯೋಗಿ ಸತೀಶ್ ಜೇಕಬ್ ಮತ್ತು ಆನಂತರ ಗಿಲಿಯನ್ ರೈಟ್ (ಗಿಲ್ಲಿ) ಜೊತೆಗೆ ಉಪಖಂಡವನ್ನು ಸುತ್ತಿದರು. ರಾಜಕೀಯ ನಾಯಕರು, ಜನಸಾಮಾನ್ಯರೊಟ್ಟಿಗೆ ಸಂಪರ್ಕ ಬೆಳೆಸಿಕೊಂಡರು. ಬದಲಾಗುತ್ತಿದ್ದ ದೇಶ ಕುರಿತು ವರದಿ ಮಾಡಲು ಇವರೆಲ್ಲರೂ ನೆರವಾದರು. ಬಿಬಿಸಿಯನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಲು ಯತ್ನಿಸುತ್ತಿದ್ದ ಮಹಾನಿರ್ದೇಶಕ ಜಾನ್ ಬ್ರಿಟ್ ಅವರೊಂದಿಗೆ ಮನಸ್ತಾಪ ಉಂಟಾಯಿತು. ಬಿಬಿಸಿಯ ವಾಣಿಜ್ಯೀಕರಣ ಅವರಿಗೆ ಪಥ್ಯವಾಗಲಿಲ್ಲ; ಚಿಂತನೆಯಲ್ಲಿ ಬದಲಾವಣೆಯು ವಿಕಾಸದಿಂದ ಬರಬೇಕೇ ಹೊರತು ಕ್ರಾಂತಿಯಿಂದಲ್ಲ ಎಂದು ಹೇಳುತ್ತಿದ್ದರು. ಟೀಕೆ ಮಾಡಬಾರದೆಂದು ಹೇಳಿದ್ದರಿಂದ, ಬಿಬಿಸಿಗೆ 1994ರಲ್ಲಿ ರಾಜೀನಾಮೆ ನೀಡಿದರು. ಆದರೆ, ಕಾರ್ಯಕ್ರಮ ನೀಡುವುದನ್ನು ಮುಂದುವರಿಸಿದರು.
1994ರಲ್ಲಿ ಗ್ರೇಟ್ ರೈಲ್ವೆ ಜರ್ನೀಸ್ ಸರಣಿಯಲ್ಲಿ ‘ಕರಾಚಿ ಟು ದಿ ಖೈಬರ್ ಪಾಸ್’ಗೋಸ್ಕರ ಪಾಕಿಸ್ತಾನದಾದ್ಯಂತ ರೈಲಿನಲ್ಲಿ ಪ್ರಯಾಣಿಸಿದರು; ವರ್ಲ್ಡ್ ಸ್ಟೀಮ್ ಕ್ಲಾಸಿಕ್ಸ್ ಸರಣಿಯ ಭಾಗವಾದ ‘ಸ್ಟೀಮ್ಸ್ ಇಂಡಿಯನ್ ಸಮ್ಮರ್’ಗೆ ಕೆಲಸ ಮಾಡಿದರು. 1995ರಲ್ಲಿ ಬಿಬಿಸಿಯ ರೇಡಿಯೊ 4ಕ್ಕೆ ಪ್ರತೀ ರವಿವಾರ ‘ಸಮ್‌ಥಿಂಗ್ ಅಂಡರ್‌ಸ್ಟುಡ್’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ನಂಬಿಕೆ, ಆಧ್ಯಾತ್ಮಿಕತೆ ಮತ್ತು ಮನುಷ್ಯರ ಜೀವನವನ್ನು ಆಧರಿಸಿದ್ದ ಈ ಜನಪ್ರಿಯ ಕಾರ್ಯಕ್ರಮವನ್ನು 2019ರಲ್ಲಿ ನಿಲ್ಲಿಸಲಾಯಿತು. ‘‘ಇದು ತಮಗೆ ನೋವುಂಟು ಮಾಡಿತು. ಅದು ಅಪಾರ ಶ್ರೋತೃಗಳಿದ್ದ ಕಾರ್ಯಕ್ರಮ. ರೇಡಿಯೊ ಇರಬೇಕಾದ್ದು ಹೀಗೆ ಎಂದು ಶ್ರೋತೃಗಳು ಹೇಳುತ್ತಿದ್ದರು’’ ಎಂದು ರೇಡಿಯೊ ಟೈಮ್ಸ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಚರಿತ್ರೆಯನ್ನು ದಾಖಲಿಸಿದ ವರದಿಗಳು
ಭಾರತ-ಪಾಕಿಸ್ತಾನ ಯುದ್ಧ, ಅಫ್ಘಾನಿಸ್ತಾನದ ಮೇಲೆ ರಶ್ಯ ಆಕ್ರಮಣ, ಬಾಂಗ್ಲಾದೇಶದ ಉದಯ, ಶ್ರೀಲಂಕಾ ಮತ್ತು ಇತರೆಡೆಗಳಲ್ಲಿ ದಂಗೆ, 1980ರ ಆರಂಭದಲ್ಲಿ ಪಂಜಾಬ್‌ನಲ್ಲಿ ತಲೆಯೆತ್ತಿದ ಖಾಲಿಸ್ತಾನ್ ಚಳವಳಿ, ಅಮೃತಸರದ ಹರ್ಮಂದಿರ್ ಸಾಹಿಬ್(ಸ್ವರ್ಣ ಮಂದಿರ) ಮೇಲೆ ಸೇನೆ ಕಾರ್ಯಾಚರಣೆ, ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆ ಮತ್ತು ಯೂನಿಯನ್ ಕಾರ್ಬೈಡ್‌ನ ಭೋಪಾಲ್ ಅನಿಲ ದುರಂತಗಳನ್ನು ವರದಿ ಮಾಡಿದರು. ಡಿಸೆಂಬರ್ 1979ರಲ್ಲಿ ರಶ್ಯ, ಅಫ್ಘಾನಿಸ್ತಾದ ಮೇಲೆ ದಾಳಿ ನಡೆಸಿತು; ರಶ್ಯದ ಟ್ಯಾಂಕ್‌ಗಳು ಪ್ರವೇಶಿಸುತ್ತಿದ್ದಂತೆ, ವಿದೇಶಿ ಸುದ್ದಿಸಂಸ್ಥೆಗಳು ದೇಶ ತೊರೆದವು. ಟುಲ್ಲಿ ಮತ್ತು ಸಹೋದ್ಯೋಗಿ ಸತೀಶ್ ಜೇಕಬ್ ಹೊಸದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಕಾಬೂಲ್‌ನಿಂದ ಆಗಮಿಸಿದ ಪ್ರಯಾಣಿಕರಿಂದ ಸುದ್ದಿ ಸಂಗ್ರಹಿಸಿ, ವರದಿ ಮಾಡಿದರು. ಪಾಕಿಸ್ತಾನ ಸೇನೆ ಮುಖ್ಯಸ್ಥ ಜನರಲ್ ಜಿಯಾ ಉಲ್ ಹಕ್ ಅವರಿಂದ ಹತ್ಯೆಯಾದ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋ ಅವರ ಹಿರಿಯ ಮಗ ಮುರ್ತಝಾ ಭುಟ್ಟೋ, ಬೆಂಬಲಕ್ಕಾಗಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಭೇಟಿ ಆಗುತ್ತಿದ್ದರು ಎನ್ನುವುದು ಗೊತ್ತಾಯಿತು. ಮುರ್ತಝಾ ಅವರನ್ನು ದಿಲ್ಲಿಯ ಹೋಟೆಲ್ ಒಂದರಲ್ಲಿ ಟುಲ್ಲಿ-ಜೇಕಬ್ ಭೇಟಿ ಮಾಡಿದರು. ಜನರಲ್ ಜಿಯಾ ಉಲ್ ಹಕ್ ಅವರನ್ನು ಪದಚ್ಯುತಗೊಳಿಸುವ ಗುರಿ ಹೊಂದಿದ್ದ ‘ಮೂವ್‌ಮೆಂಟ್ ಫಾರ್ ದಿ ರಿಸ್ಟೋರೇಶನ್ ಆಫ್ ಡೆಮಾಕ್ರಸಿ (ಎಂಆರ್‌ಡಿ)’ ಕುರಿತು ವ್ಯಾಪಕ ವರದಿ ಮಾಡಿದರು. 1984ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು ಸ್ವರ್ಣ ಮಂದಿರದ ಆವರಣದಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿ ಇಟ್ಟಿದ್ದ ಸಿಖ್ ಪ್ರತ್ಯೇಕವಾದಿಗಳನ್ನು ಹೊರತೆಗೆಯಲು ಸೇನಾ ಕಾರ್ಯಾಚರಣೆಗೆ ಆದೇಶ ನೀಡಿದರು. ಟುಲ್ಲಿ ಮತ್ತು ಅವರ ಸತೀಶ್ ಜೇಕಬ್, ಮಂದಿರದ ಒಳಗಿನಿಂದ ಕಾರ್ಯಾಚರಣೆಯನ್ನು ವರದಿ ಮಾಡಿದರು. ಡಿಸೆಂಬರ್ 1992ರಲ್ಲಿ ಅಯೋಧ್ಯೆಯಲ್ಲಿ ಮಸೀದಿಯನ್ನು ಉರುಳಿಸಿದ ಕರಸೇವಕರು ಕಾರಿನಲ್ಲಿದ್ದ ಟುಲ್ಲಿ ಅವರನ್ನು ಗುರುತಿಸಿ ಹಲ್ಲೆ ನಡೆಸಿದರು ಮತ್ತು ಅವರು ಸೇರಿದಂತೆ ಐವರನ್ನು ಕೊಠಡಿಯೊಂದರಲ್ಲಿ ಕೂಡಿಹಾಕಿದರು. ‘‘ಡೆತ್ ಟು ಮಾರ್ಕ್ ಟುಲ್ಲಿ ಮತ್ತು ಡೆತ್ ಟು ಬಿಬಿಸಿ ಎಂದು ಕಿರುಚುತ್ತಿದ್ದ ದೊಡ್ಡ ಗುಂಪು ನಮ್ಮನ್ನು ಸುತ್ತುವರಿದಿತ್ತು’’ ಎಂದು ಅವರು ಲಾಸ್ ಏಂಜಲೀಸ್ ಟೈಮ್ಸ್‌ಗೆ ಹೇಳಿದರು. 2 ಗಂಟೆ ಕಾಲ ಬಂಧಿತರಾಗಿದ್ದ ಅವರನ್ನು ಬಡಾ ಸ್ಥಾನ್‌ನ ಮಹಂತ ಬಿಡಿಸಿದರು.
ತುರ್ತು ಪರಿಸ್ಥಿತಿ ಸಮಯದಲ್ಲಿ ಟುಲ್ಲಿ ಅವರು ಸೆನ್ಸರ್‌ಶಿಪ್ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದರಿಂದ, ದೇಶ ತೊರೆಯಲು 24 ಗಂಟೆ ಕಾಲಾವಕಾಶ ನೀಡಲಾಯಿತು. ಇತರ ವಿದೇಶಿ ಬಾತ್ಮೀದಾರರ ಜೊತೆಗೆ ಅವರನ್ನು ದೇಶದಿಂದ ಹೊರಹಾಕಲಾಯಿತು. ‘‘ಶ್ರೀಮತಿ ಗಾಂಧಿ ಅವರಲ್ಲದೆ, ಸರಕಾರ ಕೂಡ ನಮ್ಮನ್ನು ದ್ವೇಷಿಸುತ್ತಿತ್ತು. ಕಚೇರಿಯನ್ನು ಮುಚ್ಚಿ ಮತ್ತು ನನ್ನನ್ನು ಹೊರಹಾಕಿ, ಬಿಬಿಸಿಯ ಬಾಯಿ ಮುಚ್ಚಿಸಬಹುದು ಎಂಬ ಅವರ ಅನಿಸಿಕೆ ಸುಳ್ಳಾಯಿತು. ಬಿಬಿಸಿ ಮುಂದುವರಿಯಿತು. ನಮ್ಮ ವಿಶ್ವಾಸಾರ್ಹತೆಗೆ ನಾವು ಧಕ್ಕೆಯುಂಟು ಮಾಡಿಕೊಳ್ಳಲಿಲ್ಲ’’ ಎಂದು ಹೇಳಿದ್ದರು. ತುರ್ತುಪರಿಸ್ಥಿತಿ ಹಾಗೂ ಇಂದಿರಾ ಅವರ ಹತ್ಯೆ ಸಮಯದಲ್ಲಿ ಮಾಧ್ಯಮಗಳ ಉಸಿರು ನಿಂತಿದ್ದಾಗ, ಅಸಂಖ್ಯ ಭಾರತೀಯರು ಶಾರ್ಟ್‌ವೇವ್ ರೇಡಿಯೊದಿಂದ ಬಿಬಿಸಿಯಿಂದ ಸುದ್ದಿಗಳನ್ನು ಕೇಳಿದರು.
ಗೌರವ-ಪುಸ್ತಕ
ಸರಕಾರ ಅವರಿಗೆ ಅತ್ಯುನ್ನತ ನಾಗರಿಕ ಗೌರವ ನೀಡಿ ಗೌರವಿಸಿತು; ಪದ್ಮಶ್ರೀ (1992) ಮತ್ತು ಪದ್ಮಭೂಷಣ (2005). ಬ್ರಿಟಿಷ್ ಸರಕಾರದಿಂದ ನೈಟ್ ಹುದ್ದೆ ಪಡೆದರೂ, ಹೆಸರಿನ ಮುಂದೆ ‘ಸರ್’ ಬಳಸಲಿಲ್ಲ. ಅವರ ಮೊದಲ ಪುಸ್ತಕ- ‘ಅಮೃತಸರ: ಮಿಸ್ಟ್ರೆಸ್ ಗಾಂಧೀಸ್ ಲಾಸ್ಟ್ ಬ್ಯಾಟಲ್’(1985), ಸಹಲೇಖಕ ಸತೀಶ್ ಜೇಕಬ್; ಕೊನೆಯ ಪುಸ್ತಕ ಉತ್ತರ ಭಾರತದ ಗ್ರಾಮೀಣ ಕಥೆಗಳನ್ನು ಒಳಗೊಂಡ ‘ಅಪ್‌ಕಂಟ್ರಿ ಟೇಲ್ಸ್: ಒನ್ಸ್ ಅಪಾನ್ ಎ ಟೈಮ್ ಇನ್ ದಿ ಹಾರ್ಟ್ ಆಫ್ ಇಂಡಿಯಾ’(2017). ಆಪರೇಷನ್ ಬ್ಲೂಸ್ಟಾರ್‌ಗೆ ಕಾರಣವಾದ ಘಟನೆಗಳು ಹಾಗೂ ಸ್ವತಂತ್ರ ಭಾರತದ ಮೊದಲ ನಾಲ್ಕು ದಶಕಗಳ ಕುರಿತ ಅವರ ಪ್ರಬಂಧಗಳ ಸಂಕಲನ ‘ನೋ ಫುಲ್ ಸ್ಟಾಪ್ಸ್ ಇನ್ ಇಂಡಿಯಾ’(1991); ಪುಸ್ತಕದ ಮುನ್ನುಡಿಯಲ್ಲಿ ‘ಆರ್ಥಿಕ ಬೆಳವಣಿಗೆಯೊಂದಿಗೆ ದೇಶದ ಸಂಸ್ಕೃತಿಯನ್ನು ರಕ್ಷಿಸುವುದು ಸಹ ಅಗತ್ಯ. ಪ್ರಗತಿ ಎಂದರೆ ಪಾಶ್ಚಾತ್ಯ ಸಂಸ್ಕೃತಿಯ ನಿರ್ಜೀವ ಉಪಯೋಗವಾದದ ನಕಲು ಮಾಡುವುದಲ್ಲ’’ ಎಂದು ಹೇಳಿದ್ದರು. ವರದಿಗಾರಿಕೆಯ ಹೊರೆ ತಪ್ಪಿದ ಬಳಿಕ ‘ಇಂಡಿಯಾ ಇನ್ ಸ್ಲೋ ಮೋಷನ್’ ಮತ್ತು ‘ಇಂಡಿಯಾಸ್ ಅನ್‌ಎಂಡಿಂಗ್ ಜರ್ನಿ’ ಪ್ರಕಟಿಸಿದರು; ಆತ್ಮಚರಿತ್ರೆ ಬರೆಯುತ್ತಿದ್ದರು.
1960ರ ದಶಕದ ಆರಂಭದಲ್ಲಿ ಲಂಡನ್‌ನಲ್ಲಿ ಮಾರ್ಗರೆಟ್ ಅವರನ್ನು ವಿವಾಹವಾದರು; ಅವರಿಂದ ಪ್ರತ್ಯೇಕಗೊಂಡ ಬಳಿಕ ಗಿಲಿಯನ್ (ಗಿಲ್ಲಿ) ರೈಟ್ ಜೊತೆ ಸಹಜೀವನ ನಡೆಸಿದರು. ‘ಮಾರ್ಗರೆಟ್ ಮತ್ತು ಗಿಲಿಯನ್ ಅವರಿಗೆ ಋಣಿಯಾಗಿದ್ದೇನೆ. ಪತ್ನಿ ಜೊತೆಗೆ ಸುದೀರ್ಘ ಕಾಲ ಕಳೆದಿದ್ದರಿಂದ, ಅವರಿಂದ ವಿಚ್ಛೇದನ ಪಡೆಯಲಿಲ್ಲ; ಪತ್ನಿ ಮತ್ತು ಮಕ್ಕಳೊಂದಿಗೆ ಸ್ನೇಹದಿಂದ ಇರಲು ಬಯಸಿದೆ’ ಎಂದು ಸಂದರ್ಶನವೊಂದರಲ್ಲಿ ಹೇಳಿದರು. 2004ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ನಿಯತಕಾಲಿಕೆ ಕ್ಯಾಮ್‌ಗೆ ನೀಡಿದ ಸಂದರ್ಶನದಲ್ಲಿ, ‘ಪತ್ನಿ ಅಥವಾ ಗಿಲಿಯನ್ ಅವರ ಮಾತುಗಳನ್ನು ನಾನು ಆಡುವುದು ಸರಿಯಲ್ಲ’ ಎಂದು ಹೇಳಿದ್ದರು. 2003ರಲ್ಲಿ ಬಿಬಿಸಿಯ ಡೆಸರ್ಟ್ ಐಲ್ಯಾಂಡ್ ಡಿಸ್ಕ್ಸ್‌ನಲ್ಲಿ ಜಾತಿ ವ್ಯವಸ್ಥೆಯನ್ನು ಖಂಡಿಸಿದ್ದರು; ‘ನಾವು ಜಾತಿ ವ್ಯವಸ್ಥೆಯಲ್ಲಿನ ಒಳಿತು ಮತ್ತು ಕೆಡುಕನ್ನು ನೋಡಬೇಕು; ಒಳ್ಳೆಯ ಅಂಶವೆಂದರೆ, ಅದು ಭದ್ರತೆ, ಒಡನಾಟ ಮತ್ತು ಸಮುದಾಯದಲ್ಲಿ ಒಳಗೊಳ್ಳುವಿಕೆಯನ್ನು ನೀಡುತ್ತದೆ’ ಎಂದು ಹೇಳಿದ್ದರು. ಆದರೆ, ಭಾರತದ ಜಾತಿ ವ್ಯವಸ್ಥೆಯಲ್ಲಿ ಒಳ್ಳೆಯದು ಎಂಬುದು ಏನೂ ಇಲ್ಲ ಎನ್ನುವ ಅಂಶ ಅವರ ತಿಳಿವನ್ನು ಮೀರಿತ್ತು. ಜಾತ್ಯತೀತತೆ ಪರ ಹಾಗೂ ಹಿಂದೂ ರಾಷ್ಟ್ರೀಯತೆಯ ಕಟು ವಿಮರ್ಶಕರಾಗಿದ್ದರು. ಸಾಂಪ್ರದಾಯಿಕ ಜೀವನಶೈಲಿ ಮತ್ತು ಆಚರಣೆಗಳನ್ನು ಬದಲಿಸಿದ ಅಭಿವೃದ್ಧಿ ಹಾಗೂ ಆಧುನೀಕರಣವನ್ನು ವಿರೋಧಿಸಿದ್ದರು; ಗ್ರಾಹಕೀಕರಣ ಮತ್ತು ಇನ್ನಿತರ ಬದಲಾವಣೆಗಳು ಪ್ರಗತಿಯನ್ನು ಸಾಧಿಸುವ ಮಾರ್ಗವೆಂದು ಒಪ್ಪಿಕೊಳ್ಳಲು ನಿರಾಕರಿಸಿದರು.
ದಿಲ್ಲಿಯ ಸೆಳೆತ
ಪತ್ನಿ ಮಾರ್ಗರೆಟ್, ಮಕ್ಕಳಾದ ಸಾರಾ, ಸ್ಯಾಮ್, ಎಮ್ಮಾ ಮತ್ತು ಪ್ಯಾಟ್ರಿಕ್ ಹಾಗೂ ಮೀರತ್‌ನ ಬಾಣಸಿಗ ಗರೀಬ್ ಒಟ್ಟಿಗೆ ದಿಲ್ಲಿಯ ಹೌಜ್ ಖಾಸ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದರು. ಗರೀಬ್ ಮರಣದ ಬಳಿಕ ಅವರ ಮಗಳು ಬಬ್ಲಿ ತಂದೆಯ ಸ್ಥಾನ ತುಂಬಿದರು; ಆಕೆಯ ಮಗ ಕಾಕಾ, ಟುಲ್ಲಿ ಅವರ ಚಾಲಕ. 1994ರಿಂದ ಹೊಸ ದಿಲ್ಲಿಯ ಪೂರ್ವ ನಿಝಾಮುದ್ದೀನ್‌ನಲ್ಲಿ ನೆಲೆಸಿದ್ದ ಅವರು, ಮನೆಯೊಡತಿ ಮಾಸಿಕ ಒಂದು ಲಕ್ಷ ರೂ. ಬಾಡಿಗೆಗೆ ಬೇಡಿಕೆಯಿಟ್ಟಾಗ ಸ್ವಂತ ಫ್ಲಾಟ್ ಖರೀದಿಸಲು ನಿರ್ಧರಿಸಿದರು. 2010ರಲ್ಲಿ ನಿಝಾಮುದ್ದೀನ್ ಪಶ್ಚಿಮದಲ್ಲಿ ಫ್ಲ್ಯಾಟ್ ಖರೀದಿಸಿದರು. ನಿವೃತ್ತಿ ಬಳಿಕ ಹಿಮಾಲಯದ ತಪ್ಪಲಿನಲ್ಲಿ ಪ್ರಕೃತಿಯ ನಡುವೆ ಬದುಕಬಹುದಿತ್ತು; ಆದರೆ, ಲೋಧಿ ಗಾರ್ಡನ್ಸ್, ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್, ಜಿಮ್‌ಖಾನಾ ಕ್ಲಬ್, ಖಾನ್ ಮಾರ್ಕೆಟ್‌ನ ಫಕೀರ್ ಚಂದ್ ಆಂಡ್ ಸನ್ಸ್ ಪುಸ್ತಕದ ಅಂಗಡಿ, ಕೆಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್, ಜನಪಥ್‌ನ ಶರವಣ ಭವನ ಇವೆಲ್ಲದರ ಸೆಳೆತ ಅವರನ್ನು ಬಿಡಲಿಲ್ಲ. ರಾಜಧಾನಿಯ ಮಾಲಿನ್ಯ, ಕೆಟ್ಟ ರಸ್ತೆಗಳು, ರಸ್ತೆಯಲ್ಲಿ ವಾಹನ ಚಾಲಕರ ಆಕ್ರೋಶ, ಬಿಲ್ಡರ್ ಗಳ ಅಟ್ಟಹಾಸ, ದಲ್ಲಾಳಿಗಳ ದುಷ್ಟತನ ಅವರನ್ನು ತಟ್ಟಿತ್ತು. ‘‘ದಿಲ್ಲಿಯ ಜನ ಹೆಚ್ಚು ಒತ್ತಡವನ್ನು ನಿಭಾಯಿಸುತ್ತಾರೆ; ಅದು ಅವರ ವರ್ತನೆಯಲ್ಲಿ ಕಾಣಿಸುತ್ತದೆ. ವಾಹನ ಚಾಲಕರಿಗೆ ಸಂಬಂಧಿಸಿದಂತೆ ಇದು ಸತ್ಯ; ಪರಿಸ್ಥಿತಿ ಭಯಾನಕವಾಗಿದೆ. ದಿಲ್ಲಿಯು ಪಾಣಿಪತ್ (ಹರ್ಯಾಣ), ನೊಯ್ಡಾದವರೆಗೆ ಕೊಳಕಾಗಿ ವಿಸ್ತರಿಸಿದೆ; ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
ಹಸನ್ಮುಖ, ನಿರರ್ಗಳ ಹಿಂದಿ ಮತ್ತು ಸುಸಂಸ್ಕೃತ ಇಂಗ್ಲಿಷ್‌ನಿಂದ ಜನರನ್ನು ಸೆಳೆಯುತ್ತಿದ್ದ ಅವರು ದಯೆ, ಕಾಳಜಿ ಹೊಂದಿದ್ದ ಧಾರ್ಮಿಕ ವ್ಯಕ್ತಿ. ಅವರ ರೇಡಿಯೊ ವರದಿಗಳು ವೃತ್ತಪತ್ರಿಕೆಗಳ ವರದಿಗಳಿಗಿಂತ ತಕ್ಷಣ ಮತ್ತು ಹೆಚ್ಚು ಪರಿಣಾಮ ಬೀರಿದವು. ಅವರಿಗೆ ಪತ್ರಿಕೋದ್ಯಮಕ್ಕಿಂತ ಭಾರತದ ಮೇಲೆ ಹೆಚ್ಚು ಪ್ರೀತಿಯಿತ್ತು. ದೇಶ ಸುತ್ತುತ್ತ ಜನರೊಂದಿಗೆ ಬೆರೆತು, ರೇಡಿಯೊದಲ್ಲಿ ವರದಿ-ವ್ಯಾಖ್ಯಾನ ಮಾಡುತ್ತ ನಡೆದರು. ಬಿಬಿಸಿ ಜೊತೆಗೆ ಟುಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಇರುತ್ತದೆ. ಆದರೆ, ನಿಝಾಮುದ್ದೀನ್ ಪೂರ್ವದ 1ನೇ ಸಂಖ್ಯೆಯ ಮನೆಯಲ್ಲಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಮತ್ತು ‘ದೈನಿಕ್ ಭಾಸ್ಕರ್’ ಓದುತ್ತ ಕುಳಿತಿರುವ ಟುಲ್ಲಿ ಮಾತ್ರ ಇನ್ನುಮುಂದೆ ಕಾಣಸಿಗುವುದಿಲ್ಲ.







