ಸ್ಪೀಕರ್, ಮುಖ್ಯ ಚುನಾವಣೆ ಆಯುಕ್ತ ಮತ್ತು ಸುಳ್ಳುಗಳ ಸುಗ್ಗಿ

ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸುವಂತಿಲ್ಲ ಎನ್ನುವುದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಅಪಾಯಕರ ತಂತ್ರ. ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ ಎಂಬ ಪ್ರತಿಪಕ್ಷಗಳ ದೂರಿಗೆ ವಿವರಣೆ ನೀಡುವುದು ಸರಕಾರದ ಕರ್ತವ್ಯ. ಆದರೆ, ಸ್ಪೀಕರ್ ಪ್ರಧಾನಿಯ ಟೀಕಾಕಾರರನ್ನು ಹೊರಹಾಕುವ ಮೂಲಕ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ತಾವು ಸರಕಾರದ ಬುಲ್ಡೋಜರ್ ಅಲ್ಲ ಎನ್ನುವುದನ್ನು ಅವರು ಅರ್ಥ ಮಾಡಿಕೊಂಡಿಲ್ಲ. ಇದೇ ಮಾತು ಬಿಜೆಪಿಯ ಕೈಗೊಂಬೆ ಆಗಿರುವ ಸಿಇಸಿಗೂ ಅನ್ವಯಿಸುತ್ತದೆ. ಇವರಿಬ್ಬರು ಪ್ರಜಾಪ್ರಭುತ್ವದ ಮಾನ ಮತ್ತು ಸಂಸತ್‌ನ ಘನತೆಯನ್ನು ಹರಾಜು ಹಾಕಿದ್ದಾರೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯ ಅಂದುಕೊಂಡಂತೆ ಬಿದ್ದುಹೋಗಿದೆ. ಲೋಕಸಭೆ-ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳಿಗೆ ಮಾತನ್ನಾಡಲು ಅವಕಾಶ ನೀಡದ ಹಾಗೂ ಮಾತನ್ನಾಡುತ್ತಿದ್ದಾಗ ಧ್ವನಿವರ್ಧಕ ಬಂದ್ ಮಾಡುವ ಸ್ಪೀಕರ್‌ಗೆ ಮುಖಭಂಗ ಆಗಿದೆ. ಇದೇ ಹೊತ್ತಿಗೆ ಪ್ರತಿಪಕ್ಷಗಳು ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆರವುಗೊಳಿಸಬೇಕು ಎಂದು ನೋಟಿಸ್ ನೀಡಿವೆ. ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ಆಯೋಗದ ಮುಖ್ಯಸ್ಥರ ಪಕ್ಷಪಾತ ಪ್ರವೃತ್ತಿಯನ್ನು ಪ್ರತಿಪಕ್ಷಗಳು ಪ್ರಶ್ನಿಸಿವೆ.
ಹಿಂದಿನ ಎಲ್ಲ ಸ್ಪೀಕರ್‌ಗಳು ನಿಷ್ಪಕ್ಷಪಾತಿಗಳಾಗಿದ್ದರು ಎನ್ನಲಾಗದು. ಮೊದಲ ಸ್ಪೀಕರ್ ಜಿ.ವಿ. ಮಾವಲಂಕರ್ ಮೇ 15, 1952ರಲ್ಲಿ ಅಧಿಕಾರ ಸ್ವೀಕರಿಸಿದರು. ಎಂ.ಎ. ಅಯ್ಯಂಗಾರ್ ಮತ್ತು ಗುರುದಯಾಳ್ ಸಿಂಗ್ ಧಿಲ್ಲೋನ್(6 ವರ್ಷ), ಬಲರಾಂ ಜಾಖಡ್(9 ವರ್ಷ, 329 ದಿನ) ಹೊರತುಪಡಿಸಿದರೆ, 2ನೇ ಬಾರಿ ಆಯ್ಕೆಯಾದ ಓಂ ಬಿರ್ಲಾ 17 ಮತ್ತು 18ನೇ ಸ್ಪೀಕರ್. ರಾಜಸ್ಥಾನದ ಕೋಟಾಬಂಡಿ ಕ್ಷೇತ್ರದ ಸಂಸದ. ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯ ವಿಫಲಗೊಳ್ಳುವುದು ಖಚಿತವಾಗಿತ್ತು. ಆದರೆ, ಈ ಗೆಲುವು ಅವರಿಗೆ ನ್ಯಾಯಸಮ್ಮತತೆಯನ್ನು ನೀಡಿತೇ? ಸ್ಥಾನಮಾನದ ಘನತೆ ಹೆಚ್ಚಿಸಿತೇ? ಖಂಡಿತವಾಗಿಯೂ ಇಲ್ಲ. ಸಂವಿಧಾನದ 94 (ಸಿ) ವಿಧಿಯಡಿ ಸಲ್ಲಿಕೆಯಾದ ಈ ನಿರ್ಣಯವು ಕಳೆದ ನಲವತ್ತು ವರ್ಷಗಳಲ್ಲಿ ನಡೆದ ಇಂಥ ಮೊದಲ ಪ್ರಕ್ರಿಯೆ.
ನಿಷ್ಪಕ್ಷಪಾತ ಮಧ್ಯಸ್ಥಗಾರ
ಸರಕಾರವನ್ನು ಜವಾಬ್ದಾರಿಯುತ ಮತ್ತು ಉತ್ತರದಾಯಿಯಾಗಿ ಮಾಡುವುದು ಸಂಸತ್‌ನ ಪ್ರಾಥಮಿಕ ಉದ್ದೇಶ. ಸಂವಿಧಾನ ಪ್ರಜಾಪ್ರಭುತ್ವದ ರಕ್ಷಣೆಗೆ ಸಂಸತ್‌ನಲ್ಲಿ ಸ್ಪೀಕರ್ ರೂಪದಲ್ಲಿ ನಿಷ್ಪಕ್ಷಪಾತ ಮಧ್ಯಸ್ಥಗಾರನನ್ನು ನೇಮಿಸಿದೆ; ಸ್ಪೀಕರ್ ಕೆಲಸ ಕಲಾಪ ನಡೆಸುವುದಕ್ಕೆ ಸೀಮಿತವಲ್ಲ. ಅವರು ಇರುವುದು ಶಕ್ತಿಶಾಲಿಗಳನ್ನು ರಕ್ಷಿಸಲು ಅಲ್ಲ; ಬದಲಾಗಿ, ಶಕ್ತಿಹೀನರ ಧ್ವನಿ ಕೇಳುವುದನ್ನು ಖಚಿತಪಡಿಸಿಕೊಳ್ಳಲು. ಈ ಶಕ್ತಿಹೀನರು ಪ್ರತಿಪಕ್ಷಗಳ ಮೂಲಕ ಮಾತನಾಡುವ ಜನಸಾಮಾನ್ಯರು. ಬಿರ್ಲಾ ಪ್ರತಿಪಕ್ಷಗಳ ಹಕ್ಕುಗಳನ್ನು ನಿರಾಕರಿಸಿದ್ದಲ್ಲದೆ, ಸಂಸತ್‌ನ ನೂತನ ಕಟ್ಟಡದ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭಕ್ಕೆ ರಾಷ್ಟ್ರಪತಿಗಳಿಗೆ ಆಹ್ವಾನ ನೀಡಿರಲಿಲ್ಲ. ಅವಿಶ್ವಾಸ ನಿರ್ಣಯದ ಸೋಲನ್ನು ಆಡಳಿತ ಪಕ್ಷ ಸಂಭ್ರಮಿಸಿರುವುದು ಅಂಪೈರ್‌ನ ತಟಸ್ಥತೆ ಕಡಿಮೆಯಾಗುತ್ತಿದೆ ಎಂಬುದಕ್ಕೆ ಸಾಕ್ಷಿ.
ಗೃಹ ಸಚಿವ ಅಮಿತ್ ಶಾ ತಮ್ಮ ಭಾಷಣದಲ್ಲಿ ಹೇಳಿದರು: ‘‘ಸ್ಪೀಕರ್ ಸಂಸದೀಯ ಘನತೆಯನ್ನು ಸಂಕೇತಿಸುತ್ತಾರೆ; ಅವರ ನಿರ್ಧಾರದ ಪರಿಶೀಲನೆ ಅಥವಾ ಟೀಕೆ ಸಲ್ಲದು. ಅವರನ್ನು ಪ್ರಶ್ನಿಸಿದರೆ ಪ್ರಜಾಪ್ರಭುತ್ವ ಮಬ್ಬಾಗುತ್ತದೆ’’. ಆದರೆ, ದೇಶದಲ್ಲಿ ಪ್ರಜಾಪ್ರಭುತ್ವ 2014ರಿಂದ ಆರಂಭವಾಗಿಲ್ಲ. ವ್ಯಕ್ತಿಯೊಬ್ಬ ಸಾಂವಿಧಾನಿಕ ಸಂಸ್ಥೆಗಳನ್ನು ಬುಡಮೇಲು ಮಾಡುವ ಸಾಧ್ಯತೆ ಕುರಿತು ಸ್ವತಃ ಬಿ.ಆರ್.ಅಂಬೇಡ್ಕರ್ ಎಚ್ಚರಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ, ಮುಖ್ಯ ನ್ಯಾಯಮೂರ್ತಿ, ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭೆ ಅಧ್ಯಕ್ಷರ ವಿಶ್ವಾಸಾರ್ಹತೆ ಪ್ರಶ್ನಾರ್ಹವಾದಾಗ, ಪ್ರಜಾಪ್ರಭುತ್ವ ನ್ಯಾಯಸಮ್ಮತತೆಯನ್ನು ಕಳೆದುಕೊಳ್ಳುತ್ತದೆ. ನ್ಯಾಯಸಮ್ಮತತೆ ಎಂದರೆ ಸಾಂವಿಧಾನಿಕ ಸಂಸ್ಥೆಗಳ ಸಾಂಸ್ಥಿಕ ಸ್ವಾಯತ್ತೆ ಮತ್ತು ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸುವುದು. ಪ್ರಧಾನಿ ಎಂದಿನಂತೆ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾಗ, ಅವರ ಬದಲು ಪ್ರತಿಕ್ರಿಯಿಸಿದ ಗೃಹ ಸಚಿವರು ಪಕ್ಷದ ಸಂಸದರಿಗೆ ತಿಳಿಹೇಳಬೇಕಿತ್ತು. ಬದಲಾಗಿ, ನಿಯಮ ಉಲ್ಲಂಘಿಸುವ ಸದಸ್ಯರನ್ನು ತಡೆಯಲು ಸ್ಪೀಕರ್‌ಗೆ ಅಧಿಕಾರವಿದೆ ಎಂದರು; ಆದರೆ, ಸ್ಪೀಕರ್ ಕರ್ತವ್ಯದ ಬಗ್ಗೆ ಒಂದು ಮಾತು ಕೂಡ ಆಡಲಿಲ್ಲ.
ಕಣ್ಣು ಹೊಡೆಯುತ್ತಾರೆ!
ಪ್ರತಿಪಕ್ಷ ನಾಯಕ ಸಂಸತ್‌ನಲ್ಲಿ ಕಣ್ಣು ಮಿಟುಕಿಸುತ್ತಾರೆ, ತಬ್ಬಿಕೊಳ್ಳುತ್ತಾರೆ ಎಂದು ಶಾ ದೂರುತ್ತಾರೆ; ‘ಆಂಖೆ ಮಾರ್ತೆ ಹೈಂ’! ಅದೇನು ಘನಘೋರ ಅಪರಾಧವೇ? ನೂರಾರು ಕೋಟಿ ವಂಚಿಸಿದವರು, ಅತ್ಯಾಚಾರ, ಕೊಲೆ, ಕೋಮುಗಲಭೆ ರೂಪಿಸಿದವರು ಮತ್ತು ನಕಲಿ ಎನ್‌ಕೌಂಟರ್‌ನಂಥ ಘನಘೋರ ಆರೋಪ ಹೊತ್ತ ವರು ಸಂಸತ್‌ನಲ್ಲಿ ಇದ್ದಾರೆ. ಹೀಗಿರುವಾಗ, ಕಣ್ಣು ಮಿಟುಕಿಸುವುದು ಅಪರಾಧ ಆಗಿದ್ದು ಯಾವಾಗ? ‘‘ವಿದೇಶ್ ಸೇ ಸದನ್ ಮೆ ಕೈಸೆ ಬೋಲೋಗೇ?’’(ಪ್ರತಿಪಕ್ಷ ನಾಯಕ ಅಧಿವೇಶನದ ವೇಳೆ ಜರ್ಮನಿ, ಇಂಗ್ಲೆಂಡ್, ಸಿಂಗಾಪುರಕ್ಕೆ ಹಾರಿದರು. ಅವರು ವಿದೇಶದಿಂದ ಹೇಗೆ ಮಾತನಾಡುತ್ತಾರೆ?). ಇದು ಪ್ರತಿಪಕ್ಷ ನಾಯಕ ತನ್ನ ಕೆಲಸದ ಬಗ್ಗೆ ಗಂಭೀರವಾಗಿಲ್ಲ ಎಂದು ದೇಶವನ್ನು ನಂಬಿಸಲು ನಡೆಸಿದ ಕುತಂತ್ರ. ಈ ಕಿಡಿಗೇಡಿ ಮಾತಿಗೆ ಬಿಜೆಪಿ ಸದಸ್ಯರು ಅಟ್ಟಹಾಸಗೈದರು; ಅದಾನಿ ಮತ್ತು ಅಂಬಾನಿ ಹಿಡಿತದಲ್ಲಿರುವ ಕೃಪಾಪೋಷಿತ ಮಾಧ್ಯಮಗಳು ನರ್ತಿಸಿದವು. ‘‘ಸಂಸತ್ತು ನಿಯಮಗಳು ಮತ್ತು ಕಾರ್ಯವಿಧಾನಗಳ ಪ್ರಕಾರ ನಡೆಯುತ್ತದೆ’’ ಎಂಬ ಕ್ಲೀಷೆಯನ್ನು ಪುನರಾವರ್ತಿಸುವ ಮೂಲಕ ಶಾ ಪ್ರಹಸನಕ್ಕೆ ಶಕ್ತಿ ತುಂಬಿದರು. ತರ್ಕಹೀನತೆಯ ಕಾವಳವು ಸತ್ಯವನ್ನು ಮುಚ್ಚಿತು. ಸುಳ್ಳು ಪ್ರಚಾರ ತಾರ್ಕಿಕತೆಯನ್ನು ಮತ್ತು ಜನರ ನಿರ್ಣಯ ಸಾಮರ್ಥ್ಯವನ್ನು ಮಂದಗೊಳಿಸುತ್ತದೆ.
‘‘ಪ್ರತೀ ಅಧಿವೇಶನದಲ್ಲೂ ಕಾಂಗ್ರೆಸ್‌ಗೆ ಹಲವು ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಆದರೆ, ರಾಹುಲ್ ಯಾವುದೇ ಚರ್ಚೆಯಲ್ಲಿ ಭಾಗವಹಿಸಲಿಲ್ಲ. ಅವರು ಮಾತನಾಡಲು ಸ್ವತಂತ್ರರು; ಆದರೆ, ಏನು ಮಾತನಾಡುತ್ತಾರೆ ಎಂಬುದನ್ನು ನಿಯಂತ್ರಿಸಲಾಗುವುದು. ಪ್ರಧಾನಿ ಮತ್ತು ಸ್ಪೀಕರ್ ಪಾತ್ರವನ್ನು ಕೂಲಂಕಷವಾಗಿ ಪರಿಶೀಲಿಸಿದರೆ, ಪ್ರತಿಪಕ್ಷದ ನಾಯಕನ ನಡವಳಿಕೆಯನ್ನೂ ಪರಿಶೀಲಿಸಲಾಗುತ್ತದೆ’’ ಎಂದು ಶಾ ಹೇಳಿದರು. ಆದರೆ, ಪ್ರಧಾನಿಯ ಜವಾಬ್ದಾರಿಯನ್ನು ಪ್ರತಿಪಕ್ಷ ನಾಯಕನ ಕೆಲಸದೊಟ್ಟಿಗೆ ಹೇಗೆ ಹೋಲಿಸುತ್ತೀರಿ? ಅಡಾಲ್ಫ್ ಹಿಟ್ಲರ್‌ನಿಂದ ಆರಂಭಿಸಿ ಡೊನಾಲ್ಡ್ ಟ್ರಂಪ್‌ವರೆಗೆ ಆಡಳಿತದಲ್ಲಿದ್ದವರು ಏನು ಮಾಡುತ್ತಾರೆ ಎಂಬುದು ಜಗತ್ತಿಗೆ ಕಾಣಿಸುತ್ತದೆ. ಆದರೆ, ವಿನ್‌ಸ್ಟನ್ ಚರ್ಚಿಲ್ 2ನೇ ಮಹಾಯುದ್ಧದಲ್ಲಿ ಸೈನಿಕರನ್ನು ಮುನ್ನಡೆಸಿದಾಗ, ಪ್ರತಿಪಕ್ಷದ ನಾಯಕ ಏನು ಮಾಡುತ್ತಿದ್ದರು ಎನ್ನುವುದು ಯಾರಿಗೆ ಗೊತ್ತಿದೆ? ಮಾಧ್ಯಮಗಳಿಗೆ ಅರ್ಥವಾಗಬೇಕಿರುವುದು ಏನೆಂದರೆ, ಪ್ರಶ್ನೆಗಳಿಗೆ ಉತ್ತರಿಸಬೇಕಿರುವುದು ಆಡಳಿತ ಪಕ್ಷವೇ ಹೊರತು ಪ್ರತಿಪಕ್ಷ ಇಲ್ಲವೇ ಅದರ ನಾಯಕನಲ್ಲ.
ಸಂಸತ್ ಮೇಳವಲ್ಲ
ಸಂಸತ್‌ನಲ್ಲಿ ಯಾರು ಬೇಕಾದರೂ ಮಾತನಾಡಬಹುದು ಎಂದು ಶಾ ಹೇಳುತ್ತಾರೆ. ಆದರೆ, ಸಂಸತ್ ಮೇಳ ಅಥವಾ ಜಾತ್ರೆಯಲ್ಲ. ನಡೆಯುತ್ತಿರುವುದು ಪ್ರಜಾಪ್ರಭುತ್ವ ಮತ್ತು ಸಾರ್ವಭೌಮತ್ವ, ನ್ಯಾಯ ಮತ್ತು ಉತ್ತರದಾಯಿತ್ವದ ಹೋರಾಟ. ನಿರಂತರ ದೂಷಣೆ, ಲೆಕ್ಕವಿಲ್ಲದಷ್ಟು ಪ್ರಕರಣ ದಾಖಲು ಮತ್ತು ಸಂಸತ್‌ನಿಂದ ವಜಾ ಹೊರತಾಗಿಯೂ ಪ್ರತಿಪಕ್ಷಗಳು ಸುಮ್ಮನಿಲ್ಲ. ಪ್ರತಿಪಕ್ಷ ಸದಸ್ಯರು ರಫೇಲ್ ಕಡತ ಕಣ್ಮರೆ, ಚೀನಾದ ಆಕ್ರಮಣ, ಅಮೆರಿಕ ಜೊತೆ ವ್ಯಾಪಾರ ಒಪ್ಪಂದದಲ್ಲಿ ಶರಣಾಗತಿ, ಬಾಲಕಿಯರ ಕಳ್ಳಸಾಗಣೆ-ಅತ್ಯಾಚಾರ ಮಾಡಿದ ಎಪ್‌ಸ್ಟೀನ್ ಜೊತೆ ಸಚಿವರ ಸಂಬಂಧ ಕುರಿತು ಮಾತನ್ನಾಡಿದರೆ, ಸ್ಪೀಕರ್ ಧ್ವನಿವರ್ಧಕ ನಿಲ್ಲಿಸುತ್ತಾರೆ ಇಲ್ಲವೇ ಕ್ಯಾಮರಾ ಸ್ಪೀಕರ್ ಕಡೆ ತಿರುಗುತ್ತದೆ. ನಿಶಿಕಾಂತ್ ದುಬೆ ಇಲ್ಲವೇ ಅನುರಾಗ್ ಠಾಕೂರ್ ಅವರನ್ನು ಛೂ ಬಿಡಲಾಗುತ್ತದೆ. ಅವರು ನೆಹರೂ ಸೇರಿದಂತೆ ನಾಲ್ಕು ತಲೆಮಾರುಗಳ ಮೇಲೆ ಕೆಸರು ಎರಚುತ್ತಾರೆ. ಆಗ ಸ್ಪೀಕರ್ ಮಧ್ಯಪ್ರವೇಶಿಸುವುದಿಲ್ಲ. ಏಕೆಂದರೆ, ಅವರ ‘ಪವಿತ್ರ ಕರ್ತವ್ಯ’ ಪ್ರತಿಪಕ್ಷ ನಾಯಕರ ನಿರ್ಬಂಧ ಮಾತ್ರ.
ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರ ಅಪ್ರಕಟಿತ ಪುಸ್ತಕದಿಂದ ವಿಷಯಗಳನ್ನು ಉಲ್ಲೇಖಿಸಲು ರಾಹುಲ್ ಅವರಿಗೆ ಸ್ಪೀಕರ್ ಅವಕಾಶ ನೀಡಲಿಲ್ಲ. ಫೆಬ್ರವರಿ 2026ರಲ್ಲಿ ರಾಹುಲ್ ಭಾಷಣವನ್ನು 20 ಬಾರಿ ತಡೆಯಲಾಗಿದೆ ಎಂದು ಕಾಂಗ್ರೆಸ್ ದೂರಿದೆ. ‘‘ಪ್ರತಿಪಕ್ಷಗಳಿಗೆ ಶೂನ್ಯವೇಳೆಯಲ್ಲಿ ಶೇ. 56ರಷ್ಟು ಕಾಲಾವಕಾಶ, 364 ಪೂರಕ ಪ್ರಶ್ನೆಗಳಿಗೆ ಅವಕಾಶ ನೀಡಲಾಗಿದೆ; ಅಧಿಕ ಸಂಖ್ಯೆಯಲ್ಲಿರುವ ಆಡಳಿತ ಪಕ್ಷದ ಸದಸ್ಯರ 321 ಪ್ರಶ್ನೆಗಷ್ಟೇ ಅವಕಾಶ ನೀಡಲಾಗಿದೆ. ಸದನದಲ್ಲಿ 14 ಭಾಷೆಗಳಲ್ಲಿ ಚರ್ಚೆ ನಡೆದಿದೆ’’ ಎಂದು ಸರಕಾರ ಹೇಳುತ್ತದೆ. ಆದರೆ, ಪದಚ್ಯುತಿ ನಿರ್ಣಯ ವಿಫಲಗೊಂಡ ಒಂದು ದಿನದ ನಂತರ, ಮಾರ್ಚ್ 12, 2026ರಂದು, ಪೆಟ್ರೋಲಿಯಂ ಸಚಿವ ಹರದೀಪ್ ಪುರಿ ಮತ್ತು ಜೆಫ್ರಿ ಎಪ್‌ಸ್ಟೀನ್ ನಡುವಿನ ಸಂಬಂಧ ಕುರಿತು ಮಾತನಾಡಲು ರಾಹುಲ್ ಅವರಿಗೆ ಸ್ಪೀಕರ್ ಅವಕಾಶ ನೀಡಲಿಲ್ಲ. ವಿರೋಧ ಪಕ್ಷಗಳ ನಿಲುವು ಸರಿಯಿದೆ ಎಂಬುದಕ್ಕೆ ಇದು ಸಾಕ್ಷಿ.
ಕೃಷಿ ಮಸೂದೆ ಅವಾಂತರ
ಲೋಕಸಭೆ ಸೆಪ್ಟಂಬರ್ 2020ರಲ್ಲಿ ಬಿರ್ಲಾ ಅವರ ಉಪಸ್ಥಿತಿಯಲ್ಲಿ ಚರ್ಚೆಯಿಲ್ಲದೆ ಮೂರು ಕೃಷಿ ಮಸೂದೆಗಳನ್ನು ಅಂಗೀಕರಿಸಿತು. ಮಸೂದೆಗಳ ಸಮರ್ಪಕ ಚರ್ಚೆ ನಡೆಯಬೇಕು ಎಂಬ ಪ್ರತಿಪಕ್ಷಗಳ ಮನವಿಗೆ ಸ್ಪೀಕರ್ ಕಿವಿಗೊಡಲಿಲ್ಲ. 8 ಸಂಸದರನ್ನು ವಜಾಗೊಳಿಸಿದರು; ಸದನ ರಣಾಂಗಣವಾಗಿ ಬದಲಾಯಿತು. ಆದರೆ, ಮಸೂದೆ ರೂಪಿಸುವ ಮುನ್ನ ರೈತರ ಜತೆ ಸಮಾಲೋಚನೆ ನಡೆಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು. ರೈತರ ಅಹಿಂಸಾತ್ಮಕ ಪ್ರತಿಭಟನೆಗೆ ಮಣಿದ ಸರಕಾರ, ಕ್ಷಮೆಯಾಚಿಸಿ ಕಾನೂನುಗಳನ್ನು ರದ್ದುಗೊಳಿಸಿತು.
ಪ್ರಶ್ನಿಸುವುದು ಹಕ್ಕು
ಡಿಸೆಂಬರ್ 22, 1952ರಂದು ಪುಣೆಯ ಜಿಲ್ಲಾ ಕಾನೂನು ಗ್ರಂಥಾಲಯದಲ್ಲಿ ಎಲ್. ಆರ್. ಗೋಖಲೆಯವರ ಭಾವಚಿತ್ರವನ್ನು ಅನಾವರಣಗೊಳಿಸಿದ ಡಾ. ಬಿ.ಆರ್. ಅಂಬೇಡ್ಕರ್, ‘‘ಸಂಸತ್‌ನಲ್ಲಿ ಸರಕಾರವನ್ನು ಪ್ರಶ್ನಿಸಲು ಸದಾಕಾಲ ಸನ್ನದ್ಧರಾಗಿರುವವರು ಇರಬೇಕು. ಪ್ರಜಾಪ್ರಭುತ್ವ ಎನ್ನುವುದು ಶಾಶ್ವತ ಆಳ್ವಿಕೆಗೆ ಅವಕಾಶವಿಲ್ಲದ ವ್ಯವಸ್ಥೆ. ಪ್ರತಿಪಕ್ಷಗಳು ಪ್ರಜಾಪ್ರಭುತ್ವದ ಒಂದು ಷರತ್ತು; ಪ್ರಶ್ನಿಸಿದಾಗ ಸರಕಾರ ತನ್ನ ಕೆಲಸವನ್ನು ಸಮರ್ಥಿಸಿಕೊಳ್ಳಬೇಕು’’ ಎಂದು ಹೇಳಿದ್ದರು. ಮೊದಲ ಲೋಕಸಭೆ ಆರಂಭವಾದ ಕೆಲವು ತಿಂಗಳುಗಳ ನಂತರ ಹೇಳಿದ ಆ ಮಾತುಗಳು ಇಂದಿಗೂ ಪ್ರಸ್ತುತ. ಗಾಂಧಿ ಜುಲೈ 17, 1938ರಂದು ಹರಿಜನ ಪತ್ರಿಕೆಯ ‘ಸ್ಪೀಕರ್ಸ್ ಆಂಡ್ ಪಾಲಿಟಿಕ್ಸ್’ ಲೇಖನದಲ್ಲಿ, ‘‘ಸ್ಪೀಕರ್ ಸ್ಥಾನ ಪ್ರಧಾನ ಮಂತ್ರಿಗಿಂತ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ’’ ಎಂದು ಬರೆದಿದ್ದರು. ಈಗ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಬಾಯಿ ಬಿಡಲು ಹೆಣಗಾಡುವ ಸ್ಥಿತಿ ಸೃಷ್ಟಿಯಾಗಿದೆ ಮತ್ತು ಸ್ಪೀಕರ್ ಆಡಳಿತ ಪಕ್ಷದ ಕೈಗೊಂಬೆ ಆಗಿದ್ದಾರೆ.
ಸಂಸತ್ ಪರಮೋಚ್ಚ
ಇತರ ದೇಶಗಳ ಮೇಲೆ ಸುಂಕ ವಿಧಿಸುವ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ಅಸಾಂವಿಧಾನಿಕ ಎಂದು ಫೆಬ್ರವರಿ 21, 2026ರಂದು ಅಮೆರಿಕದ ಸುಪ್ರೀಂ ಕೋರ್ಟ್ ಹೇಳಿತು. ‘‘ಆಡಳಿತ ಹಾಗೂ ಪ್ರತಿಪಕ್ಷ ಎಂಬ ಭೇದವಿಲ್ಲದೆ, ಸದನ ಹಾಗೂ ಸದಸ್ಯರ ಘನತೆ ಮತ್ತು ಹಕ್ಕುಗಳನ್ನು ಎತ್ತಿ ಹಿಡಿಯದ ಸ್ಪೀಕರ್, ಸದನವನ್ನು ದುರ್ಬಲಗೊಳಿಸುತ್ತಾರೆ. ಅಮೆರಿಕನ್ನರ ಹಕ್ಕುಗಳು ಮತ್ತು ಜವಾಬ್ದಾರಿಗಳ ಮೇಲೆ ಪರಿಣಾಮ ಬೀರುವ ಪ್ರಮುಖ ನಿರ್ಧಾರಗಳನ್ನು (ತೆರಿಗೆ ಮತ್ತು ಸುಂಕ ಪಾವತಿ ಕರ್ತವ್ಯ ಸೇರಿದಂತೆ) ಶಾಸಕಾಂಗ ಪ್ರಕ್ರಿಯೆ ಮೂಲಕ ತೆಗೆದುಕೊಳ್ಳಬೇಕೆಂದು ಹೇಳಲು ನಿರ್ದಿಷ್ಟ ಕಾರಣಗಳಿವೆ. ದೇಶದ ಆಡಳಿತ ಮತ್ತು ಭವಿಷ್ಯದಲ್ಲಿ ಪ್ರತಿಯೊಬ್ಬರಿಗೂ ಪಾಲು ಇದೆ ಎಂದು ಖಚಿತಪಡಿಸಿಕೊಳ್ಳಲು ಇದು ಅಗತ್ಯ’’ ಎಂದು ಹೇಳಿತು.
ಸಿಇಸಿ ವಿರುದ್ಧ ಅವಿಶ್ವಾಸ
ಏತನ್ಮಧ್ಯೆ ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ತೆರವುಗೊಳಿಸಬೇಕು ಎಂದು ಪ್ರತಿಪಕ್ಷಗಳು ನೋಟಿಸ್ ನೀಡಿವೆ. ನಿಯಮಗಳ ಪ್ರಕಾರ, ಇಂಥ ನೋಟಿಸ್‌ಗೆ ಕನಿಷ್ಠ 100 ಸಂಸದರು ಹಾಗೂ 50 ರಾಜ್ಯಸಭೆ ಸದಸ್ಯರು ಸಹಿ ಹಾಕಬೇಕು; 130 ಸಂಸದರು ಹಾಗೂ 63 ರಾಜ್ಯಸಭೆ ಸದಸ್ಯರು ಸಹಿ ಹಾಕಿದ್ದಾರೆ. ಇದೇ ಮೊದಲ ಬಾರಿಗೆ ಪ್ರತಿಪಕ್ಷಗಳು ಸಿಇಸಿ ಮೇಲೆ ಅವಿಶ್ವಾಸ ವ್ಯಕ್ತಪಡಿಸಿವೆ.
ಜ್ಞಾನೇಶ್ ಕುಮಾರ್ 26ನೇ ಸಿಇಸಿ(ಫೆ. 19, 2025). ಕೇರಳ ಕೇಡರ್‌ನ 1988ನೇ ಬ್ಯಾಚ್ ಐಎಎಸ್ ಅಧಿಕಾರಿ. ಗೃಹ ಸಚಿವ ಅಮಿತ್ ಶಾ ಅವರ ನಿಕಟವರ್ತಿ. ಹಲವು ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸಿ, ಜನವರಿ 31, 2024ರಲ್ಲಿ ನಿವೃತ್ತರಾದರು. ತಮಾಷೆ ಎಂದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅವರನ್ನು ರಕ್ಷಣಾ ಸಚಿವಾ ಲಯಕ್ಕೆ ನಿಯೋಜಿಸಿತ್ತು! 10 ಪುಟಗಳ ನೋಟಿಸ್‌ನಲ್ಲಿ ಏಳು ಆರೋಪ ಹೊರಿಸಲಾಗಿದೆ; ಪಕ್ಷಪಾತ ಮತ್ತು ತಾರತಮ್ಯ ನಡವಳಿಕೆ, ಚುನಾವಣೆ ಅಕ್ರಮದ ತನಿಖೆಗೆ ಬೇಕೆಂದೇ ಅಡ್ಡಿ, ಮತದಾರ ಪಟ್ಟಿಯಿಂದ ಮತದಾರರನ್ನು ತೆಗೆದುಹಾಕಿರುವುದು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಿಜೆಪಿಗೆ ನೆರವು ಇತ್ಯಾದಿ. ಇಂಥ ಸನ್ನಿವೇಶದಲ್ಲಿ ಸಭಾಧ್ಯಕ್ಷ-ಸಭಾಪತಿ ದೂರಿನ ತನಿಖೆಗೆ ಸಮಿತಿಯೊಂದನ್ನು ರಚಿಸಬೇಕು ಮತ್ತು ಸಮಿತಿಯ ವರದಿಯನ್ನು ಸದನದಲ್ಲಿ ಮಂಡಿಸಬೇಕಾಗುತ್ತದೆ. ಆದರೆ, ಬಹುಮತ ಇರುವ ಎನ್‌ಡಿಎ ಈ ನಿಲುವಳಿಯನ್ನು ಸೋಲಿಸಲಿದೆ. ಇದರಿಂದ ಜ್ಞಾನೇಶ್ ಕುಮಾರ್‌ಗೆ ಏನೇನೂ ಅವಮಾನ ಆಗುವುದಿಲ್ಲ! ಆದರೆ, ಈ ಅವಿಶ್ವಾಸ ನೋಟಿಸ್ ಸಂಸತ್‌ನ ಕಡತಗಳಲ್ಲಿ ಶಾಶ್ವತವಾಗಿ ಕಪ್ಪು ಚುಕ್ಕೆಯಂತೆ ಉಳಿಯಲಿದೆ.
ಸರಕಾರ ಸಿಇಸಿಗೆ ಉದ್ದೇಶಪೂರ್ವಕವಾಗಿ ನಿರಂಕುಶಾಧಿಕಾರ ನೀಡಿದೆ. ಈ ಹಿಂದೆ ಪ್ರಧಾನಿ, ಪ್ರತಿಪಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಇದ್ದ ಸಮಿತಿ ಸಿಇಸಿಯನ್ನು ಆಯ್ಕೆ ಮಾಡುತ್ತಿತ್ತು. 2023ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದು, ನ್ಯಾಯಮೂರ್ತಿ ಬದಲು ಕೇಂದ್ರ ಸಚಿವರನ್ನು ಸೇರಿಸಲಾಯಿತು ಹಾಗೂ ಸಿಇಸಿ ಕ್ರಮಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ ಎಂಬ ಷರತ್ತು ವಿಧಿಸಲಾಯಿತು. 1989ರವರೆಗೆ ಚುನಾವಣೆ ಆಯೋಗ ಏಕ ಸದಸ್ಯ ಸಂಸ್ಥೆಯಾಗಿತ್ತು. ಆನಂತರ, ಸಿಇಸಿಗೆ ನೆರವಾಗಲು ಇಬ್ಬರು ಆಯುಕ್ತರನ್ನು ನೇಮಿಸಲಾಯಿತು. ಚುನಾವಣೆ ಆಯೋಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಸಂಸ್ಥೆಯಾದರೂ, ಟಿ.ಎನ್. ಶೇಷನ್ (1990-1996) ಬರುವವರೆಗೆ ಆಯೋಗದ ಬಗ್ಗೆ ಜನರಿಗೆ ಗೊತ್ತಿರಲಿಲ್ಲ. ಶೇಷನ್ ಚುನಾವಣೆಗಳಲ್ಲಿ ಭ್ರಷ್ಟಾಚಾರ ಮತ್ತು ಮತಗಳವು ಕೊನೆಗೊಳಿಸಲು ಗಂಭೀರ ಪ್ರಯತ್ನ ನಡೆಸಿದರು. ಆದರೆ, ಆನಂತರ ಬಂದವರು ಹೊಂದಾಣಿಕೆ ಮಾಡಿಕೊಂಡರು. ಸಿಇಸಿ ಪದಚ್ಯುತಿ ಸುಲಭವಲ್ಲ: ಏಕೆಂದರೆ, ಸಂವಿಧಾನದ ವಿಧಿ 324(5)ರನ್ವಯ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯೊಬ್ಬರ ಪದಚ್ಯುತಿಗೆ ಅನುಸರಿಸುವ ವಿಧಾನವನ್ನೇ ಸಿಇಸಿಗೂ ಅನ್ವಯಿಸಬೇಕಾಗುತ್ತದೆ.
ಚುನಾವಣೆ ಬಂದರೆ ಬಿಜೆಪಿಗೆ ಸುಗ್ಗಿ
ಸುಳ್ಳುಗಳನ್ನು ಪ್ರವಾಹದೋಪಾದಿ ಹರಿಬಿಡುತ್ತದೆ. ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಇತ್ತೀಚೆಗೆ ‘‘ಮಹಾತ್ಮಾ ಗಾಂಧಿ ಅವರ ಹೆಸರು ಎಪ್‌ಸ್ಟೀನ್ ಕಡತಗಳಲ್ಲಿ ಇದೆ’’ ಎಂದರು. ಗಾಂಧೀಜಿ ಮೃತಪಟ್ಟಿದ್ದು 1948ರಲ್ಲಿ; ಎಪ್‌ಸ್ಟೀನ್ ಜನಿಸಿದ್ದು 1953ರಲ್ಲಿ! ಸಮಸ್ಯೆ ಏನೆಂದರೆ, ಗಾಂಧಿ, ನೆಹರೂ ಅವರನ್ನು ವಿನಾ ಕಾರಣ ದ್ವೇಷ ಸಾಧಿಸುವವರು ಇದನ್ನೆಲ್ಲ ನಂಬುತ್ತಾರೆ. ಕೆಲ ದಿನಗಳ ಹಿಂದೆ ಅಸ್ಸಾಮಿನಲ್ಲಿ ಮಾತನ್ನಾಡಿದ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಇಲಾಖೆಯಲ್ಲಿ ಈ ಹಿಂದೆ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು; ತಮಾಷೆ ಎಂದರೆ, ಆಗ ಆರೋಗ್ಯ ಸಚಿವ ಆಗಿದ್ದವರು ಹಾಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ. ಇವರು ಪಕ್ಷಾಂತರ ಮಾಡಿ ಬಿಜೆಪಿಯ ವಾಷಿಂಗ್ ಮಶಿನ್‌ನಿಂದ ಪರಿಶುದ್ಧವಾದವರು!
ಸಂಸತ್‌ನಲ್ಲಿ ಪ್ರತಿಪಕ್ಷಗಳ ಸದಸ್ಯರು-ನಾಯಕರಿಗೆ ಮಾತನ್ನಾಡಲು ಬಿಡದ ಹಾಗೂ ಮಾತನ್ನಾಡುತ್ತಿರುವಾಗ ಧ್ವನಿವರ್ಧಕ ಬಂದ್ ಮಾಡುವ ಸ್ಪೀಕರ್‌ಗೆ ಮುಖಭಂಗ ಆಗಿದೆ; ಇದರಿಂದ ಅವರು ಪಾಠ ಕಲಿಯುತ್ತಾರೆ ಎಂದುಕೊಳ್ಳಬೇಕಿಲ್ಲ. ಇದು ಅಧಿಕಾರಕ್ಕೆ ಸಂಬಂಧಿಸಿದ ಸಂಘರ್ಷವಲ್ಲ; ಸಾರ್ವಜನಿಕ ಒಳಿತಿನ ಪ್ರಶ್ನೆ. ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸುವಂತಿಲ್ಲ ಎನ್ನುವುದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಅಪಾಯಕರ ತಂತ್ರ. ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ ಎಂಬ ಪ್ರತಿಪಕ್ಷಗಳ ದೂರಿಗೆ ವಿವರಣೆ ನೀಡುವುದು ಸರಕಾರದ ಕರ್ತವ್ಯ. ಆದರೆ, ಸ್ಪೀಕರ್ ಪ್ರಧಾನಿಯ ಟೀಕಾಕಾರರನ್ನು ಹೊರಹಾಕುವ ಮೂಲಕ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ತಾವು ಸರಕಾರದ ಬುಲ್ಡೋಜರ್ ಅಲ್ಲ ಎನ್ನುವುದನ್ನು ಅವರು ಅರ್ಥ ಮಾಡಿಕೊಂಡಿಲ್ಲ. ಇದೇ ಮಾತು ಬಿಜೆಪಿಯ ಕೈಬೊಂಬೆ ಆಗಿರುವ ಸಿಇಸಿಗೂ ಅನ್ವಯಿಸುತ್ತದೆ. ಇವರಿಬ್ಬರು ಪ್ರಜಾಪ್ರಭುತ್ವದ ಮಾನ ಮತ್ತು ಸಂಸತ್‌ನ ಘನತೆಯನ್ನು ಹರಾಜು ಹಾಕಿದ್ದಾರೆ.






