ಹೋಗಿ ಬನ್ನಿ ಗಾಡ್ಗೀಳ್ ಸರ್...ನಮಸ್ಕಾರ

ಗಾಡ್ಗೀಳ್ ಅವರ ಎರಡು ಪುಸ್ತಕಗಳ ಸಹಲೇಖಕ ಇತಿಹಾಸಕಾರ ರಾಮಚಂದ್ರ ಗುಹಾ, ‘‘ಬೌದ್ಧಿಕ ಸ್ವಂತಿಕೆ, ಬೌದ್ಧಿಕ ಮತ್ತು ಪ್ರಾಯೋಗಿಕ ಕಾರ್ಯಸೂಚಿಗಳನ್ನು ಒಂದುಗೂಡಿಸುವ ಸಾಮರ್ಥ್ಯ, ಪ್ರಜಾಸತ್ತಾತ್ಮಕ ಪ್ರವೃತ್ತಿ ಮತ್ತು ಸಿನಿಕತೆಯ ಅನುಪಸ್ಥಿತಿ ಗಾಡ್ಗೀಳ್ ಅವರ ಗುಣ. ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಮತ್ತು ಅಧಿಕಾರಸ್ಥರ ಬಗ್ಗೆ ಆಳವಾದ ಸಂಶಯ ಹೊಂದಿದ್ದರು. ಸಂಪನ್ಮೂಲ ನಿರ್ವಹಣೆಯ ವಿಶ್ವಾಸಾರ್ಹ ಮಾದರಿಗಳನ್ನು ರೂಪಿಸಲು ಸ್ಥಳೀಯರೊಂದಿಗೆ ಕೆಲಸ ಮಾಡಿದರು ಮತ್ತು ಅವರ ಬಗ್ಗೆ ಪತ್ರಿಕೆಗಳಲ್ಲಿ ಬರೆದರು. ಅವರ ನಿಷ್ಠುರತೆ ಯಾವುದೇ ಹೋರಾಟಗಾರನಿಗಿಂತ ಕಡಿಮೆ ಇರಲಿಲ್ಲ’’ ಎಂದು ಬಣ್ಣಿಸುತ್ತಾರೆ.
ಪಶ್ಚಿಮ ಘಟ್ಟದಲ್ಲಿ ಬೇಡ್ತಿ-ವರದಾ ಮತ್ತು ಅಘನಾಷಿನಿ-ವೇದಾವತಿ ನದಿ ಜೋಡಣೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಆಗುಂಬೆ ಸುರಂಗ, ಹೊನ್ನಾವರ ರೈಲು ಮಾರ್ಗ, ಕ್ಯಾಸಲ್‌ರಾಕ್-ಕುಲೆಂ ಜೋಡಿ ಹಳಿ ಮಾರ್ಗ, ಕೊಡಚಾದ್ರಿಗೆ ರೋಪ್‌ವೇ ಸೇರಿದಂತೆ ಹಲವು ಯೋಜನೆಗಳನ್ನು ಉದ್ದೇಶಿಸಲಾಗಿದೆ. ಇದೇ ಹೊತ್ತಿನಲ್ಲಿ ನದಿಗಳಿಗೂ ಜೀವಿಸುವ ಹಕ್ಕು ನೀಡಬೇಕೆಂದು ಆಗ್ರಹಿಸಿ, ಜನವರಿ 11ರಂದು ಶಿರಸಿಯಲ್ಲಿ ಜನ ಸಮಾವೇಶ ನಡೆದಿದೆ. ಪ್ರತಿಯಾಗಿ ಹಾವೇರಿಯಲ್ಲಿ ನದಿ ಜೋಡಣೆ ಪರವಾಗಿ ಸಮಾವೇಶ ನಡೆದಿದೆ. ಇದೆಲ್ಲದರ ನಡುವೆ ಪಶ್ಚಿಮ ಘಟ್ಟಕ್ಕಾಗಿ ತಮ್ಮ ಜೀವವನ್ನೇ ಸವೆಸಿದ್ದ ಮಾಧವ ಗಾಡ್ಗೀಳ್(ಮೇ 24,1942-ಜನವರಿ 7,2026) ತಮ್ಮ ಸಾರ್ಥಕ ಜೀವನಯಾತ್ರೆಯನ್ನು ಅಂತ್ಯಗೊಳಿಸಿದ್ದಾರೆ.
ಮಾಧವ ಗಾಡ್ಗೀಳ್ ಅವರಿಗೆ ಪಶ್ಚಿಮ ಘಟ್ಟಗಳ ಬಗ್ಗೆ ಒಲವು ಮೂಡಿದ್ದು ತಂದೆ ಧನಂಜಯ ರಾಮಚಂದ್ರ ಗಾಡ್ಗೀಳ್ ಅವರಿಂದ. ಡಿ.ಆರ್. ಗಾಡ್ಗೀಳ್ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ್ದ ಅರ್ಥಶಾಸ್ತ್ರಜ್ಞ, ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಪುಣೆಯ ಗೋಖಲೆ ಇನ್‌ಸ್ಟಿಟ್ಯೂಟ್‌ನ ಮಾಜಿ ನಿರ್ದೇಶಕರಾಗಿದ್ದರು; ಕೇಂದ್ರ ಸರಕಾರವು ರಾಜ್ಯಗಳಿಗೆ ಹೇಗೆ ಅನುದಾನ ನಿಗದಿ ಪಡಿಸಬೇಕು ಎಂಬುದನ್ನು ವಿವರಿಸುವ ಗಾಡ್ಗೀಳ್ ಸೂತ್ರದ ಜನಕ. ಮಾಧವ ಗಾಡ್ಗೀಳ್ ಅವರು ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಪದವಿ, ಮುಂಬೈ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದ ಬಳಿಕ ಹಾರ್ವರ್ಡ್ ವಿವಿಯಿಂದ ಗಣಿತಶಾಸ್ತ್ರೀಯ ಪರಿಸರ ವಿಜ್ಞಾನ ಮತ್ತು ಮೀನುಗಳ ವರ್ತನೆ ಕುರಿತು ಪಿಎಚ್.ಡಿ. ಪಡೆದರು. ಐಬಿಎಂ ಫೆಲೋಶಿಪ್ ಪಡೆದು ಹಾರ್ವರ್ಡ್ ಕಂಪ್ಯೂಟಿಂಗ್ ಸೆಂಟರ್‌ನಲ್ಲಿ ಸಂಶೋಧನಾ ಸಹೋದ್ಯೋಗಿಯಾಗಿ ಹಾಗೂ ವಿಶ್ವವಿದ್ಯಾನಿಲಯದಲ್ಲಿ ಜೀವಶಾಸ್ತ್ರದ ಉಪನ್ಯಾಸಕರಾಗಿ 2 ವರ್ಷ ಕೆಲಸ ಮಾಡಿದರು. 1971ರಲ್ಲಿ ಭಾರತಕ್ಕೆ ವಾಪಸಾಗಿ ಪುಣೆಯ ಅಗರ್ಕರ್ ಸಂಶೋಧನಾ ಸಂಸ್ಥೆಯಲ್ಲಿ 2 ವರ್ಷ ಕೆಲಸ ಮಾಡಿದರು. ಪತ್ನಿ ಸುಲೋಚನಾ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯನ್ನು ಸೇರಿದಾಗ, ಆಗಿನ ನಿರ್ದೇಶಕ ಸತೀಶ್ ಧವನ್ ಅವರು ಗಾಡ್ಗೀಳ್ ಅವರನ್ನೂ ಆಹ್ವಾನಿಸಿದರು. 1973ರಲ್ಲಿ ಸೈದ್ಧಾಂತಿಕ ಅಧ್ಯಯನಗಳ ಕೇಂದ್ರದಲ್ಲಿ ಅಧ್ಯಾಪಕರಾಗಿ ಸೇರಿ, 1983ರಲ್ಲಿ ಪರಿಸರ ವಿಜ್ಞಾನಗಳ ಕೇಂದ್ರ(ಸಿಇಎಸ್) ಆರಂಭಿಸಿದರು. ಇದು ಇಂಥ ಮೊದಲ ಶ್ರೇಷ್ಠತಾ ಕೇಂದ್ರವಾಗಿತ್ತು. ಅವರು ತಮ್ಮನ್ನು ಶೈಕ್ಷಣಿಕ ಕ್ಷೇತ್ರಕ್ಕೆ ಸೀಮಿತಗೊಳಿಸಲಿಲ್ಲ; ಕಲಿಕೆ ಜೊತೆಗೆ ಜನರು/ಸಮುದಾಯಗಳ ಪ್ರಯೋಜನಕ್ಕಾಗಿ ತಮ್ಮ ಜ್ಞಾನವನ್ನು ಬಳಸಿದರು. ಪಶ್ಚಿಮ ಘಟ್ಟಗಳಲ್ಲಿನ ಪವಿತ್ರ ವನಗಳ ಅಧ್ಯಯನ, ಅರಣ್ಯ ಮತ್ತು ಪರಿಸರ ನೀತಿಗಳ ಅಧ್ಯಯನ, ಸ್ಥಳೀಯ ಸಮುದಾಯಗಳ ಸಾಂಪ್ರದಾಯಿಕ ಜ್ಞಾನವನ್ನು ರಕ್ಷಿಸುವ ಹಾಗೂ ಆರ್ಥಿಕ ಬೆಂಬಲ ನೀಡುವ ಜೈವಿಕ ವೈವಿಧ್ಯ ಕಾಯ್ದೆ 2002, ಅರಣ್ಯ ಸಂರಕ್ಷಣೆ ಕಾಯ್ದೆ(ಎಫ್‌ಆರ್‌ಎ) ಸೇರಿದಂತೆ ಹಲವು ಪ್ರಮುಖ ಕಾರ್ಯನೀತಿ ಉಪಕ್ರಮಗಳಲ್ಲಿ ಕೈಜೋಡಿಸಿದರು. 2004ರಲ್ಲಿ ನಿವೃತ್ತಿ ಬಳಿಕ ಪುಣೆಯ ಅಗರ್ಕರ್ ಸಂಶೋಧನಾ ಕೇಂದ್ರ ಹಾಗೂ ಗೋವಾ ವಿವಿಯಲ್ಲಿ ಸಂಶೋಧನೆ-ಬೋಧನೆ ಮುಂದುವರಿಸಿದರು.
ಹಲವು ಉಪಕ್ರಮ, ಅಧ್ಯಯನ
ಅವರ ಅಧ್ಯಯನ-ಶ್ರಮದಿಂದ 1986ರಲ್ಲಿ ನೀಲಗಿರಿಯಲ್ಲಿ ದೇಶದ ಮೊದಲ ಜೀವಮಂಡಲ(ಬಯೋಸ್ಪಿಯರ್) ರಚನೆಯಾಯಿತು. 1970ರ ದಶಕದ ಅಂತ್ಯ ಮತ್ತು 1980ರ ದಶಕದ ಆರಂಭದಲ್ಲಿ ಸೈಲೆಂಟ್ ವ್ಯಾಲಿ(ಮೌನ ಕಣಿವೆ) ಮಳೆಕಾಡು ಸಂರಕ್ಷಿಸುವ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದರು. ಆನಂತರ ಪ್ರಧಾನಿ ಇಂದಿರಾ ಗಾಂಧಿ ಅವರು ಪ್ರಸ್ತಾವಿತ ಜಲವಿದ್ಯುತ್ ಯೋಜನೆಯನ್ನು ರದ್ದುಗೊಳಿಸಿದರು. ಕಾಗದ ಕಾರ್ಖಾನೆಗಳು ಬಿದಿರನ್ನು ಬೇಕಾಬಿಟ್ಟಿ ಬಳಸಿದ್ದರಿಂದ ಸಂಪನ್ಮೂಲದ ಕೊರತೆಯುಂಟಾಗಿದೆ ಎಂಬ ಮೇದಾರರ ದೂರು ಕುರಿತು 1974ರಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಕೋರಿಕೆ ಮೇರೆಗೆ ಅಧ್ಯಯನ ನಡೆಸಿದರು. 1986ರ ‘ಪಶ್ಚಿಮಘಟ್ಟ ಉಳಿಸಿ ಅಭಿಯಾನ(ಎಸ್‌ಡಬ್ಲ್ಯುಜಿಎಂ)’ವು ಅರಣ್ಯನಾಶ, ಗಣಿಗಾರಿಕೆ ಮತ್ತು ಅಭಿವೃದ್ಧಿ ಯೋಜನೆಗಳಿಂದ ಆದ ವಿನಾಶವನ್ನು ಎತ್ತಿ ತೋರಿಸಿತು. 100 ದಿನಗಳ ಕಾಲ್ನಡಿಗೆ ಜಾಥಾ ನವೆಂಬರ್ 1987ರಲ್ಲಿ ಪ್ರಾರಂಭವಾಗಿ ಫೆಬ್ರವರಿ 1988ರಲ್ಲಿ ಗೋವಾದಲ್ಲಿ ಕೊನೆಗೊಂಡಿತು. 1990ರಲ್ಲಿ ಕರ್ನಾಟಕ ಸರಕಾರವು ಪಶ್ಚಿಮ ಘಟ್ಟಗಳಲ್ಲಿ ಅಭಿವೃದ್ಧಿ ಯೋಜನೆಗಳ ಮೌಲ್ಯಮಾಪನಕ್ಕೆ ನೇಮಿಸಿದಾಗ, ಆ ಪ್ರದೇಶದ 28 ಕಾಲೇಜುಗಳ ವಿದ್ಯಾರ್ಥಿಗಳು/ಶಿಕ್ಷಕರನ್ನು ಬಳಸಿಕೊಂಡು ಕ್ಷೇತ್ರಕಾರ್ಯ ನಡೆಸಿದರು. 2010ರಲ್ಲಿ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೋಟಗಿರಿಯಲ್ಲಿ ಪರಿಸರ ಸಚಿವ ಜೈರಾಮ್ ರಮೇಶ್ ಪಾಲ್ಗೊಂಡಿದ್ದ ಸಭೆಯು ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ(ಡಬ್ಲ್ಯುಜಿಇಇಪಿ)ಯ ರಚನೆಗೆ ಕಾರಣವಾಯಿತು. ಘಟ್ಟದಾದ್ಯಂತ ಸುತ್ತಿ, ಸ್ಥಳೀಯರೊಟ್ಟಿಗೆ ಬೆರೆತು ವರದಿ ಸಿದ್ಧಗೊಳಿಸಿದರು. ಸಮುದಾಯ-ಜನರು ಅವರ ಸಂರಕ್ಷಣಾ ಸಿದ್ಧಾಂತದ ಕೇಂದ್ರ ಬಿಂದು ಆಗಿದ್ದರು. 6 ರಾಜ್ಯಗಳಲ್ಲಿ ಹರಡಿಕೊಂಡ ಪಶ್ಚಿಮ ಘಟ್ಟದ ಶೇ.75ರಷ್ಟನ್ನು ಸಂರಕ್ಷಿಸಬೇಕೆಂದು ಅವರ ನೇತೃತ್ವದ ಸಮಿತಿ ಆಗಸ್ಟ್ 2011ರಲ್ಲಿ ಶಿಫಾರಸು ಮಾಡಿತು. ಘಟ್ಟದ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸಬೇಕು; ಗ್ರಾಮ-ನಗರ ಪ್ರದೇಶಗಳಲ್ಲಿ ಜೈವಿಕ ವೈವಿಧ್ಯ ನಿರ್ವಹಣೆ ಸಮಿತಿಗಳ ಒಳಗೊಳ್ಳುವಿಕೆಯಿಂದ ಈ ಪ್ರಕ್ರಿಯೆಯನ್ನು ಪ್ರಜಾಸತ್ತಾತ್ಮಕವಾಗಿ ಮಾಡಬೇಕು ಮತ್ತು ವರದಿಯನ್ನು ಸ್ಥಳೀಯ ಭಾಷೆಗಳಲ್ಲಿ ಮುದ್ರಿಸಿ ಸಾರ್ವಜನಿಕರಿಗೆ ಹಂಚಿ, ಗ್ರಾಮಪಂಚಾಯತ್‌ಗಳೊಟ್ಟಿಗೆ ವಿಸ್ತೃತ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೋರಿದ್ದರು. ಆದರೆ, 6 ರಾಜ್ಯಗಳ ಸರಕಾರಗಳು ಮತ್ತು ಸ್ಥಳೀಯ ಸಮುದಾಯಗಳು ಪರಿಸರ ಸೂಕ್ಷ್ಮ ವಲಯಗಳ ನಿಗದಿಗೆ ವಿರೋಧ ವ್ಯಕ್ತಪಡಿಸಿದವು. ಸರಕಾರಗಳು ವರದಿಯನ್ನು ಬಹಿರಂಗಗೊಳಿಸಲಿಲ್ಲ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಮನೆ-ರಸ್ತೆ-ಶಾಲೆ ನಿರ್ಮಾಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಸುಳ್ಳು ಪ್ರಚಾರ ನಡೆಯಿತು. ಅಧಿಕಾರಶಾಹಿ ಹಾಗೂ ರಾಜಕಾರಣಿಗಳು ಜನರನ್ನು ವರದಿ ವಿರುದ್ಧ ಎತ್ತಿಕಟ್ಟಿದರು. ಕೇರಳದಲ್ಲಿ ಚರ್ಚ್ ಕೂಡ ವರದಿಯನ್ನು ವಿರೋಧಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿತು. ಅದರ ಪ್ರತಿಫಲ ಉಣ್ಣಲು ಹೆಚ್ಚು ಕಾಲ ಬೇಕಾಗಲಿಲ್ಲ; 2018ರ ಪ್ರವಾಹದಲ್ಲಿ ಅಧಿಕೃತವಾಗಿ 483 ಮಂದಿ ಮೃತಪಟ್ಟರು; ಮೂಲಸೌಲಭ್ಯ ವ್ಯವಸ್ಥೆಗಳು ನೆಲಸಮವಾದವು. ಆನಂತರ, ಸರಕಾರ ಆಗಸ್ಟ್ 2012ರಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ನೇತೃತ್ವದ ಉನ್ನತಾಧಿಕಾರ ಕಾರ್ಯಕಾರಿ ಗುಂಪು(ಎಚ್‌ಎಲ್‌ಡಬ್ಲ್ಯುಜಿ) ನೇಮಕಗೊಳಿಸಿತು; ಸಮಿತಿಯು ಆಗಸ್ಟ್ 15, 2013ರಲ್ಲಿ ವರದಿ ಸಲ್ಲಿಸಿ, ಸಂರಕ್ಷಿಸಬೇಕಾದ ಪ್ರದೇಶವನ್ನು ಶೇ.37ಕ್ಕೆ ಇಳಿಸಿತು. ಇದು ಕೂಡ ರಾಜಕಾರಣಿಗಳು-ಅಧಿಕಾರಶಾಹಿಗೆ ಸಮ್ಮತವಾಗಲಿಲ್ಲ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ, ತಿಂಗಳೊಳಗೆ ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳನ್ನು ಅಳವಡಿಸುವುದಾಗಿ ಹೇಳಿತು. ಇದರಿಂದ ಗಾಡ್ಗೀಳ್ ನೊಂದುಕೊಂಡರು; ಆದರೆ, ಪಶ್ಚಿಮ ಘಟ್ಟಗಳ ಮೇಲಿನ ಅವರ ಪ್ರೀತಿ ಕಡಿಮೆಯಾಗಲಿಲ್ಲ ಹಾಗೂ ಅವರು ಸಿನಿಕರಾಗಲಿಲ್ಲ. ಅಭಿವೃದ್ಧಿಯು ಮಾನವೀಯ, ಪರಿಸರ ಸಂವೇದನೆಯುಳ್ಳ ಮತ್ತು ನ್ಯಾಯಸಮ್ಮತವಾಗಿರಬೇಕು; ಬಡವರನ್ನು ಪೊರೆಯುವ ಪರಿಸರದ ನಾಶದಿಂದ ಬರಬಾರದು. ನಿಜವಾದ ಅಭಿವೃದ್ಧಿಯ ಬೇರು ವೈಜ್ಞಾನಿಕ ತೀವ್ರತೆ, ನೈತಿಕ ಉತ್ತರದಾಯಿತ್ವ ಮತ್ತು ಸಾಮಾಜಿಕ ನ್ಯಾಯದಲ್ಲಿದ್ದು, ಸ್ವಾಭಾವಿಕ ಸಂಪನ್ಮೂಲಗಳ ನಿರ್ವಹಣೆಯ ಕೇಂದ್ರದಲ್ಲಿ ಸ್ಥಳೀಯ ಜನರು-ಸಮುದಾಯಗಳು ಇರಬೇಕು ಎಂದು ನಂಬಿದ್ದರು. ಕೊಂಕಣ ರೈಲು ಯೋಜನೆ, ಭೋಪಾಲ್ ಅನಿಲ ದುರಂತ ಕುರಿತು ವಸ್ತುನಿಷ್ಠ ವರದಿ ನೀಡಿದ್ದರು; ಅವನ್ನು ನಿರ್ಲಕ್ಷಿಸಲಾಯಿತು. ಬೇಡ್ತಿ ಕೊಳ್ಳ ಯೋಜನೆ ತಡೆಯುವಲ್ಲಿ ಅವರ ಪಾಲು ದೊಡ್ಡದು. ಅಘನಾಷಿನಿ ಕೊಳ್ಳದ ಪ್ರಾಮುಖ್ಯತೆಯನ್ನು ಆಗಲೇ ಗುರುತಿಸಿದ್ದರು.
ಘಟ್ಟದ ಜೀವಕ್ಕೆ ಸಮ್ಮಾನ
‘‘ಪಶ್ಚಿಮ ಘಟ್ಟಗಳು ಗೋದಾವರಿ, ಕೃಷ್ಣ, ನೇತ್ರಾವತಿ, ಕಾವೇರಿ, ಕುಂತಿ, ವೈಗೈ ಸೇರಿದಂತೆ ಹತ್ತು ಹಲವು ನದಿಗಳ ಉಗಮಸ್ಥಾನ. ಕಾಳಿದಾಸ ಪಶ್ಚಿಮ ಘಟ್ಟವನ್ನು ಸುಂದರ ಯುವತಿಗೆ ಹೋಲಿಸಿದ್ದಾನೆ; ‘ಅಗಸ್ತ್ಯಮಲೈ ಆಕೆಯ ತಲೆ, ಅಣ್ಣೆಮಲೈ ಮತ್ತು ನೀಲಗಿರಿ ಸ್ತನಗಳು, ಕೆನರಾ ಮತ್ತು ಗೋವಾದ ಶ್ರೇಣಿಗಳು ಸೊಂಟ, ಉತ್ತರ ಸಹ್ಯಾದ್ರಿ ಕಾಲುಗಳು. ಆಕೆ ಹಸಿರು ಸೀರೆ ಧರಿಸಿದ್ದಾಳೆ’. ಆದರೆ, ಹಣವಂತರು ದುರಾಸೆಯಿಂದ ಹಾಗೂ ಬಡವರು ತಮ್ಮ ಜೀವನಾಧಾರಕ್ಕೆ ಆಕೆಯನ್ನು ಬಗೆದಿದ್ದಾರೆ. ಈ ಪರ್ವತಶ್ರೇಣಿ ದಕ್ಷಿಣ ಭಾರತದ ಆರ್ಥಿಕ ಮತ್ತು ಇಕಾಲಜಿಯ ಬೆನ್ನುಮೂಳೆ ಇದ್ದಂತೆ’’ ಎಂದು ಅವರು ಒಮ್ಮೆ ಹೇಳಿದ್ದರು.
ಬ್ರಿಟಿಷ್ ಇಕಲಾಜಿಕಲ್ ಸೊಸೈಟಿ, ಅಮೆರಿಕದ ರಾಷ್ಟ್ರೀಯ ವಿಜ್ಞಾನ ಅಕಾಡಮಿ ಮತ್ತು ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದರು. ಅನೇಕ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು; 2006ರಲ್ಲಿ ಪದ್ಮಭೂಷಣ ಮತ್ತು 2024ರಲ್ಲಿ ವಿಶ್ವಸಂಸ್ಥೆಯ ಚಾಂಪಿಯನ್ಸ್ ಆಫ್ ದ ಅರ್ಥ್ ಪುರಸ್ಕಾರ ಲಭಿಸಿತು. 2021ರಲ್ಲಿ ಪಶ್ಚಿಮ ಘಟ್ಟಗಳ ನೆಲ್ಲಿಯಂಪತಿ ಬೆಟ್ಟದಲ್ಲಿ ಪತ್ತೆಹಚ್ಚಿದ ಹೊಸ ಸಸ್ಯಕ್ಕೆ ಗಾಡ್ಗೀಳ್ ಅವರ ಗೌರವಾರ್ಥ ‘ಎಲಿಯೋಕಾರ್ಪಸ್ ಗಾಡ್ಗೀಳಿ’ ಎಂದು ಹೆಸರಿಡಲಾಯಿತು. ‘ಎ ಫಿಶರ್ಡ್ ಲ್ಯಾಂಡ್’- ಮಾಧವ ಗಾಡ್ಗೀಳ್ ಮತ್ತು ರಾಮಚಂದ್ರ ಗುಹಾ, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಇಂಡಿಯಾ, 1992; ‘ಇಕಾಲಜಿ ಆಂಡ್ ಈಕ್ವಿಟಿ; ದಿ ಯೂಸ್ ಆಂಡ್ ಅಬ್ಯೂಸ್ ಆಫ್ ನೇಚರ್ ಇನ್ ಕಂಟೆಂಪರರಿ ಇಂಡಿಯಾ’-ಮಾಧವ ಗಾಡ್ಗೀಳ್ ಮತ್ತು ರಾಮಚಂದ್ರ ಗುಹಾ, ರೂಟ್ಲೆಡ್ಜ್, 1995; ‘ನರ್ಚರಿಂಗ್ ಬಯೋಡೈವರ್ಸಿಟಿ; ಆನ್ ಇಂಡಿಯನ್ ಅಜೆಂಡಾ’-ಮಾಧವ ಗಾಡ್ಗೀಳ್ ಮತ್ತು ಪಿ.ಆರ್. ಶೇಷಗಿರಿ ರಾವ್ 1998, ಪರಿಸರ ಶಿಕ್ಷಣ ಕೇಂದ್ರ; ‘ಡೈವರ್ಸಿಟಿ: ದ ಕಾರ್ನರ್‌ಸ್ಟೋನ್ ಆಫ್ ಲೈಫ್’-ಮಾಧವ ಗಾಡ್ಗೀಳ್, ವಿಜ್ಞಾನ ಪ್ರಸಾರ, 2005; ‘ಇಕಲಾಜಿಕಲ್ ಜರ್ನೀಸ್’-ಮಾಧವ ಗಾಡ್ಗೀಳ್, ಓರಿಯಂಟ್ ಬ್ಲ್ಯಾಕ್ಸ್ವಾನ್, 2005 ಅವರ ಹೊತ್ತಗೆಗಳು. ಅವರ ಆತ್ಮಚರಿತ್ರೆ- ‘ಎ ವಾಕ್ ಅಪ್ ದ ಹಿಲ್: ಲಿವಿಂಗ್ ವಿತ್ ಪೀಪಲ್ ಆಂಡ್ ನೇಚರ್’, ಪೆಂಗ್ವಿನ್ ಅಲೆನ್ ಲೇನ್, 2023(ಕನ್ನಡ ಅನುವಾದ-ಏರುಘಟ್ಟದ ನಡಿಗೆ, ಶಾರದಾ ಗೋಪಾಲ ಮತ್ತು ನಾಗೇಶ ಹೆಗಡೆ, ಆಕೃತಿ ಆಶಯ ಪಬ್ಲಿಕೇಶನ್, ಮಂಗಳೂರು).
ಸಾಮಾಜಿಕ ನ್ಯಾಯದ ಹರಿಕಾರ
ಗಾಡ್ಗೀಳ್ ಅವರ ಎರಡು ಪುಸ್ತಕಗಳ ಸಹಲೇಖಕ ಇತಿಹಾಸಕಾರ ರಾಮಚಂದ್ರ ಗುಹಾ, ‘‘ಬೌದ್ಧಿಕ ಸ್ವಂತಿಕೆ, ಬೌದ್ಧಿಕ ಮತ್ತು ಪ್ರಾಯೋಗಿಕ ಕಾರ್ಯಸೂಚಿಗಳನ್ನು ಒಂದುಗೂಡಿಸುವ ಸಾಮರ್ಥ್ಯ, ಪ್ರಜಾಸತ್ತಾತ್ಮಕ ಪ್ರವೃತ್ತಿ ಮತ್ತು ಸಿನಿಕತೆಯ ಅನುಪಸ್ಥಿತಿ ಗಾಡ್ಗೀಳ್ ಅವರ ಗುಣ. ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಮತ್ತು ಅಧಿಕಾರಸ್ಥರ ಬಗ್ಗೆ ಆಳವಾದ ಸಂಶಯ ಹೊಂದಿದ್ದರು. ಸಂಪನ್ಮೂಲ ನಿರ್ವಹಣೆಯ ವಿಶ್ವಾಸಾರ್ಹ ಮಾದರಿಗಳನ್ನು ರೂಪಿಸಲು ಸ್ಥಳೀಯರೊಂದಿಗೆ ಕೆಲಸ ಮಾಡಿದರು ಮತ್ತು ಅವರ ಬಗ್ಗೆ ಪತ್ರಿಕೆಗಳಲ್ಲಿ ಬರೆದರು. ಅವರ ನಿಷ್ಠುರತೆ ಯಾವುದೇ ಹೋರಾಟಗಾರನಿಗಿಂತ ಕಡಿಮೆ ಇರಲಿಲ್ಲ’’ ಎಂದು ಬಣ್ಣಿಸುತ್ತಾರೆ.
ಅವರ ಆತ್ಮಚರಿತ್ರೆಯ ಅನುವಾದ ಸಂಬಂಧ ಅವರನ್ನು ಐಐಎಸ್‌ಸಿಯಲ್ಲಿ ಭೇಟಿ ಆಗಿದ್ದೇ ಕೊನೆ. ಅವರ ಸೌಜನ್ಯ, ಹೃದಯವಂತಿಕೆ, ಸರಳತೆ ಮೇರೆ ಇಲ್ಲದ್ದು. ವೈಯಕ್ತಿಕ ಕಾರಣಗಳಿಂದಾಗಿ ಪುಸ್ತಕದ ಅನುವಾದ ಸಾಧ್ಯವಾಗಲಿಲ್ಲ. ಐಐಎಸ್‌ಸಿಯಲ್ಲಿ ಹವಾಮಾನ ಸಂಶೋಧಕಿಯಾಗಿದ್ದ ಅವರ ಪತ್ನಿ ಸುಲೋಚನಾ ಅವರು ಜುಲೈ 2025ರಲ್ಲಿ ಮರಣ ಹೊಂದಿದರು. ಅವರ ಪುತ್ರ ಸಿದ್ಧಾರ್ಥ ಐಐಎಸ್‌ಸಿಯಲ್ಲಿ ಗಣಿತಶಾಸ್ತ್ರಜ್ಞ ಮತ್ತು ಪುತ್ರಿ ಗೌರಿ ಪತ್ರಕರ್ತೆ.
‘‘ಗಾಡ್ಗೀಳ್ ಅವರ ಅಂತ್ಯಸಂಸ್ಕಾರದ ವೇಳೆ ಕೇವಲ 50 ಜನ ಇದ್ದರು. ಸರಕಾರಗಳಿಂದ ಯಾವುದೇ ಗೌರವ ಸಲ್ಲಿಕೆಯಾಗಲಿಲ್ಲ’’ ಎಂದು ಪತ್ರಕರ್ತ ಎ.ವಿ.ಎಸ್. ನಂಬೂದಿರಿ ಬರೆದಿದ್ದಾರೆ. ಇದಕ್ಕೆ ಪೂರಕವಾಗಿ ಪತ್ರಕರ್ತ ಕೆ.ಎ.ಶಾಜಿ ಬರೆಯುತ್ತಾರೆ; ‘‘ಗಾಡ್ಗೀಳ್ ಅವರು ನಿಶ್ಯಬ್ದವಾಗಿ, ಯಾರೂ ನೋಡದೆ ಇರುವಾಗ ಸುಡುವ ಕಾಡಿನಂತೆ ಸ್ಥಿರವಾಗಿ ಮತ್ತು ಚಮತ್ಕಾರವಿಲ್ಲದೆ ಪಂಚಭೂತಗಳಲ್ಲಿ ಲೀನವಾದರು. ತೋರುಗಾಣಿಕೆಯನ್ನು ವಿರೋಧಿಸುತ್ತಿದ್ದ ಅವರು ಪ್ರೇಕ್ಷಕರನ್ನು ಬೆಳೆಸಲಿಲ್ಲ; ವಾದಗಳನ್ನು ಬೆಳೆಸಿದರು. ರಾಜ್ಯದ ಅನುಮೋದನೆಯನ್ನು ಕೇಳಲಿಲ್ಲ; ಅದರ ಖಚಿತತೆಯನ್ನು ಪ್ರಶ್ನಿಸಿದರು. ಚಪ್ಪಾಳೆಗಳಿಂದ ಅವರಿಗೆ ಅಸಮಾಧಾನ ಆಗುತ್ತಿತ್ತು; ಏಕೆಂದರೆ, ಅದನ್ನು ಸುಲಭವಾಗಿ, ಹೆಚ್ಚು ಖರ್ಚಿಲ್ಲದೆ ಗಳಿಸಬಹುದು ಎಂಬುದು ಅವರಿಗೆ ಗೊತ್ತಿತ್ತು. ಅವರು ಸಾರ್ವಜನಿಕ ಜೀವನವನ್ನು ಆಯ್ಕೆ ಮಾಡಿಕೊಳ್ಳಲು ಮಹತ್ವಾಕಾಂಕ್ಷೆ ಕಾರಣವಲ್ಲ; ಬದ್ಧತೆ ಕಾರಣ. ಸೈಲೆಂಟ್ ವ್ಯಾಲಿಯಿಂದ ಅವರು ಪ್ರಸಿದ್ಧರಾಗಲಿಲ್ಲ; ಬದಲಿಗೆ, ಆಂದೋಲನ ಅವರ ಮೇಲೆ ಜವಾಬ್ದಾರಿ ಹೊರಿಸಿತು. ಅಭಿವೃದ್ಧಿಯನ್ನು ಹೇಗೆ ಪ್ರಶ್ನಿಸಬೇಕು ಎಂಬುದನ್ನು ಮತ್ತು ವಿಜ್ಞಾನವು ಅಧಿಕಾರಕ್ಕೆ ತಲೆಬಾಗುವ ಅಗತ್ಯವಿಲ್ಲ ಎಂದು ತೋರಿಸಿಕೊಟ್ಟರು. ಪಶ್ಚಿಮ ಘಟ್ಟಗಳನ್ನು ರೈತರು, ಕಾಡು, ನದಿ ಹಾಗೂ ಇಳಿಜಾರುಗಳಿರುವ ಜೀವನ ವ್ಯವಸ್ಥೆ ಎಂದು ನೋಡಿದರು. ಅವರ ವರದಿ ಸರಕಾರ/ಧಾರ್ಮಿಕ ಸಂಸ್ಥೆಗಳನ್ನು ಅಸ್ಥಿರಗೊಳಿಸಿತು; ಏಕೆಂದರೆ, ಅದು ಸತ್ಯವನ್ನು ಅನುಕೂಲಕ್ಕಾಗಿ ದುರ್ಬಲಗೊಳಿಸಲು ನಿರಾಕರಿಸಿತು. ಇದರಿಂದ ಜೀವನ ಮಾತ್ರವಲ್ಲದೆ ಸಾವಿನಲ್ಲಿಯೂ ಅವರು ಸಾರ್ವಜನಿಕ ಗೌರವಕ್ಕೆ ಅಸ್ಪಶ್ಯರಾದರು. ಅಧಿಕಾರವು ತನಗೆ ವಿನಯದಿಂದ ಸೇವೆ ಸಲ್ಲಿಸುವವರನ್ನು ಗೌರವಿಸುತ್ತದೆ; ಆದರೆ, ಬೌದ್ಧಿಕವಾಗಿ ಅವಿಧೇಯರನ್ನು ಹೇಗೆ ಎದುರಿಸಬೇಕೆಂದು ಅದಕ್ಕೆ ತಿಳಿದಿಲ್ಲ. ಹೀಗಾಗಿ ಅಂಥವರನ್ನು ನಿರ್ಲಕ್ಷಿಸಲಾಗುತ್ತದೆ. ತಟಸ್ಥತೆ ಮತ್ತು ಪ್ರಾಮಾಣಿಕತೆ ಒಂದೇ ಅಲ್ಲ ಎಂದು ಅರಿತ ಪ್ರತಿಯೊಬ್ಬರಲ್ಲಿ ಅವರು ಬದುಕಿರುತ್ತಾರೆ. ಮಂತ್ರಿಗಳು ಮತ್ತು ಅಧಿಕಾರಿಗಳು ಅಡಿ ಟಿಪ್ಪಣಿಗಳಾಗಿ ಮಸುಕಾದ ನಂತರವೂ ಅವರ ಪ್ರಶ್ನೆಗಳು ನ್ಯಾಯಾಲಯಗಳು ಮತ್ತು ಸಾರ್ವಜನಿಕರ ಆತ್ಮಸಾಕ್ಷಿಯನ್ನು ಪ್ರಶ್ನಿಸುತ್ತಲೇ ಇರುತ್ತವೆ. ಅವರು ರಕ್ಷಿಸಲು ಪ್ರಯತ್ನಿಸಿದ ಭೂಮಿಯ ದೀರ್ಘ ಸ್ಮರಣೆಯಲ್ಲಿ ಬೃಹತ್ತಾಗಿ ಬೆಳೆಯುತ್ತಾರೆ’’.
ಹೌದು. ಜನ ಕೃತಘ್ನರು; ಅಧಿಕಾರಶಾಹಿ ಲಾಭಬಡುಕತನದ್ದು. ಆದರೆ, ಪಶ್ಚಿಮ ಘಟ್ಟಗಳು ನಿಮ್ಮನ್ನು ಮರೆಯುವುದಿಲ್ಲ. ಹೋಗಿ ಬನ್ನಿ ಸರ್. ನಿಮಗೆ ವಿದಾಯ.







