ಯುಎಪಿಎ; ಜಾಮೀನು ಇಲ್ಲವೇ ಸೆರೆವಾಸದ ದ್ವಂದ್ವ

ಯುಎಪಿಎ ಪ್ರಕರಣಗಳಲ್ಲಿ ಜಾಮೀನು ನೀಡಿಕೆ ಕುರಿತು ಸ್ಪಷ್ಟನೆಗೆ ಸಂವಿಧಾನ ಪೀಠಕ್ಕೆ ಒಪ್ಪಿಸಿರುವುದು ಅದರ ದುರುಪಯೋಗವನ್ನು ತಡೆಯಬಹುದು; ಪ್ರಕರಣದಲ್ಲಿ ಆರೋಪಿಯ ಪಾತ್ರ, ವಿಚಾರಣೆಯ ವಿಳಂಬಕ್ಕೆ ಕಾರಣ ಮತ್ತು ಒಂದುವೇಳೆ ಅಪರಾಧ ಸಾಬೀತಾದರೆ ವಿಧಿಸಬಹುದಾದ ಶಿಕ್ಷೆ- ಇವೆಲ್ಲವನ್ನೂ ಪರಿಗಣಿಸಿ, ಜಾಮೀನು ನೀಡಬಹುದು/ಬಾರದು ಎಂದು ನಿರ್ಧರಿಸಲು ಸ್ಪಷ್ಟ ಮಾರ್ಗಸೂಚಿ ಅಗತ್ಯವಿದೆ. ಇನ್ನಷ್ಟು ವಿಶೇಷ ನ್ಯಾಯಾಲಯಗಳ ಸ್ಥಾಪನೆ, ಪ್ರತಿನಿತ್ಯ ವಿಚಾರಣೆ, ಸರಕಾರಿ ವಕೀಲರು-ಖಾಲಿ ಹುದ್ದೆಗಳಿಗೆ ನೇಮಕ, ಆರೋಪಪಟ್ಟಿ ಸಲ್ಲಿಕೆ/ವಿಚಾರಣೆಗೆ ಕಾಲಮಿತಿ ವಿಧಿಸುವಿಕೆ, ಮೂಲಸೌಲಭ್ಯದ ಉನ್ನತೀಕರಣ ಮತ್ತು ಸಿಬ್ಬಂದಿಗೆ ಅಗತ್ಯ ತರಬೇತಿ ಹಾಗೂ ವಿಚಾರಣಾಧೀನ ಕೈದಿಗಳ ಪುನರಾವಲೋಕನ ಸಮಿತಿ(ಯುಟಿಆರ್‌ಸಿ)ಗಳ ಬಲವರ್ಧನೆ ಆಗಬೇಕಿದೆ; ಯುಎಪಿಎ ಆರೋಪಿಗಳಿಗೆ ಕಾನೂನು ನೆರವು ವಿಸ್ತರಣೆಯಲ್ಲದೆ, ನಿರ್ದಿಷ್ಟ ಕಾಲಾವಧಿ ಬಳಿಕ ಜಾಮೀನು ನೀಡುವ ಸಂಬಂಧ ಯುಎಪಿಎ ಕಾಯ್ದೆಗೆ ತಿದ್ದುಪಡಿ ತರಬೇಕಿದೆ.
ಅಕ್ರಮ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ) ಅಡಿ ಬಂಧಿತರಿಗೆ ಜಾಮೀನು ನೀಡಿಕೆ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ಎರಡು ಪೀಠಗಳು ವಿಭಿನ್ನ ತೀರ್ಪು ನೀಡಿರುವುದರಿಂದ, ಆದೇಶದ ಪರಾಮರ್ಶನಕ್ಕೆ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ. ಸಯೀದ್ ಅಹ್ಮದ್ ಅಬ್ದುಲ್ ವಾಹಿದ್ ಚೌಧರಿ ವಿ/ಎಸ್ ಮಹಾರಾಷ್ಟ್ರ ಸರಕಾರ(2026) ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ನ್ಯಾ.ಮಾಧವ ಜಾಮದಾರ ಅವರು ‘‘ಶಾಂತಿಯುತ ಪ್ರತಿಭಟನೆ ಪ್ರತಿಯೊಬ್ಬರಿಗೂ ಸಂವಿಧಾನ ನೀಡಿರುವ ಹಕ್ಕು; ಪೊಲೀಸರು ಪ್ರಜೆಗಳ ಸೇವಕರೇ ಹೊರತು ಸರಕಾರದ ಉನ್ನತ ಅಧಿಕಾರಿಗಳ ಸೇವಕರಲ್ಲ’’ ಎಂದು ಜುಲೈ 3, 2026ರಂದು ಹೇಳಿದ್ದಾರೆ. ಉತ್ತರ ಪ್ರದೇಶದ ಎಟಾವಾದ ಪ್ರಬಲ್ ಪ್ರತಾಪ್ ಎಂಬವರು ಜುಲೈ 10, 2026ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಹಾಗೂ ಅಲೋಕ್ ಅರಾಧೆ ಅವರನ್ನು ನಿಂದಿಸಿ, ಕಡತವನ್ನು ಎಸೆದರು. ಪಾಟ್ನಾ ಹೈಕೋರ್ಟ್ ನ್ಯಾಯಮೂರ್ತಿ ಮಹಿಳೆಯ ಸ್ತನದ ಸ್ಪರ್ಶ ಹಾಗೂ ಸಲ್ವಾರ್ ಸೆಳೆಯುವುದು ಶಿಷ್ಟತೆಯ ಉಲ್ಲಂಘನೆಯೇ ಹೊರತು ಅತ್ಯಾಚಾರದ ಪ್ರಯತ್ನ ಅಲ್ಲ ಎಂದು ಜುಲೈ 9,2026ರಂದು ಹೇಳಿದರು! ಈ ಪ್ರಕರಣಗಳು ಮಿಶ್ರ ಸಂದೇಶಗಳನ್ನು ಹೊರಡಿಸುತ್ತವೆ.
ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಂಗ-ನ್ಯಾಯಾಧೀಶರ ನಿಂದನೆ ಸರ್ವೇಸಾಮಾನ್ಯವಾಗಿದೆ. ಅಂತೆಯೇ ನ್ಯಾಯದಾನದಲ್ಲಿ ವಿಳಂಬದಿಂದ ಆರೋಪಿಗಳಿಗೆ ದೀರ್ಘ ಸೆರೆವಾಸ ಕೂಡ. ದೇಶದ ಎಲ್ಲ ಹಂತದ ನ್ಯಾಯಾಲಯಗಳಲ್ಲಿ 5.39 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ; ಸುಪ್ರೀಂ ಕೋರ್ಟ್‌ನಲ್ಲಿ 92,000, ಹೈಕೋರ್ಟ್‌ಗಳಲ್ಲಿ 63.6 ಲಕ್ಷ ಹಾಗೂ ಜಿಲ್ಲೆ-ಕೆಳಹಂತದ ನ್ಯಾಯಾಲಯಗಳಲ್ಲಿ 4.76 ಕೋಟಿ ಪ್ರಕರಣ (www.indj.eco urts.gov.in). ನ್ಯಾಯಾಧೀಶರ ಕೊರತೆ(ಹೈಕೋರ್ಟ್ ಮತ್ತು ಕೆಳ ಹಂತದಲ್ಲಿ ಶೇ.20-33ರಷ್ಟು ಇದೆ; 1 ಲಕ್ಷ ಜನರಿಗೆ 21 ನ್ಯಾಯಾಧೀಶರು ಇದ್ದಾರೆ. ಅಮೆರಿಕದಲ್ಲಿ ಈ ಪ್ರಮಾಣ 150), ಮೂಲಸೌಲಭ್ಯದ ಕೊರತೆ ಹಾಗೂ ವಿಚಾರಣೆ ಮುಂದೂಡಿಕೆ ವಿಳಂಬಕ್ಕೆ ಮುಖ್ಯ ಕಾರಣ. 10 ವರ್ಷಕ್ಕಿಂತ ಹೆಚ್ಚು ಕಾಲದಿಂದ ವಿಚಾರಣೆಯಾಗದೆ ಉಳಿದ ಪ್ರಕರಣಗಳ ಪ್ರಮಾಣ- ಸಿವಿಲ್ ಶೇ.18 ಮತ್ತು ಕ್ರಿಮಿನಲ್ ಶೇ.82. ಇದರಿಂದ ದೇಶದ ಸೆರೆಮನೆಗಳು ಸಾಮರ್ಥ್ಯ ಮೀರಿ ತುಂಬಿ ತುಳುಕುತ್ತಿವೆ; 1,332 ಜೈಲುಗಳಲ್ಲಿ 5,30,333 ಬಂದಿಗಳಿದ್ದು, ಇವರಲ್ಲಿ ವಿಚಾರಣಾಧೀನ ಕೈದಿಗಳ ಪ್ರಮಾಣ 2/3(dataforindia.com). ಸರಕಾರ ಅತಿ ದೊಡ್ಡ ದಾವೆದಾರ; ಹೆಚ್ಚು ಪ್ರಕರಣಗಳನ್ನು ದಾಖಲಿಸುತ್ತದೆ.
ಯುಎಪಿಎ ಪ್ರಕರಣಗಳಲ್ಲಿ ವಿಭಿನ್ನ ತೀರ್ಪು
ಯುಎಪಿಎ ಪ್ರಕರಣಗಳಲ್ಲಿ ಹೆಚ್ಚಿನವು ಪ್ರತಿಪಕ್ಷಗಳು ಹಾಗೂ ಸರಕಾರದ ನಿಲುವಿಗೆ ಭಿನ್ನ ಅಭಿಪ್ರಾಯ ಇರುವವರನ್ನು ಗುರಿಯಾಗಿಸಿಕೊಂಡಿವೆ. ಜೊತೆಗೆ, ತೀರ್ಪುಗಳು ಕೂಡ ವಿಭಿನ್ನವಾಗಿವೆ. ರಾಜಸ್ಥಾನ ರಾಜ್ಯ ವಿ/ಎಸ್ ಬಾಲ್‌ಚಂದ್ ಪ್ರಕರಣ(1978)ದಲ್ಲಿ ನ್ಯಾ. ವಿ.ಆರ್. ಕೃಷ್ಣಯ್ಯರ್ ಅವರು ಬಳಸಿದ ‘ಜಾಮೀನು ನಿಯಮ; ಸೆರೆವಾಸ ವಿನಾಯಿತಿ(ಬೇಲ್ ಈಸ್ ದ ರೂಲ್; ಜೈಲ್ ಈಸ್ ದ ಎಕ್ಸ್‌ಸೆಪ್ಷನ್)’ ಎಂಬುದು ಕ್ರಿಮಿನಲ್ ನ್ಯಾಯವ್ಯವಸ್ಥೆಯ ಪರಮಪದ. ಆದರೆ, ಇದು ಎಲ್ಲ ಪ್ರಕರಣಗಳಲ್ಲಿ ಅನ್ವಯವಾಗುತ್ತಿಲ್ಲ. ದಿಲ್ಲಿ ಗಲಭೆ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಇದಕ್ಕೊಂದು ನಿದರ್ಶನ. ಜನವರಿ 5, 2026ರಂದು ಇವರಿಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್‌ನ ನ್ಯಾ. ಅರವಿಂದ್ ಕುಮಾರ್ ಹಾಗೂ ಎನ್.ವಿ. ಅಂಜಾರಿಯ ಅವರ ಪೀಠ, ‘ಆರೋಪಿಗಳು ಒಂದು ವರ್ಷದ ಬಳಿಕ ಜಾಮೀನು ಅರ್ಜಿ ಸಲ್ಲಿಸಬಹುದು’ ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ, ನ್ಯಾ.ಬಿ.ವಿ. ನಾಗರತ್ನ ಹಾಗೂ ನ್ಯಾ. ಉಜ್ಜಲ್ ಭುಯಾನ್ ಅವರ ಪೀಠ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾದಕವಸ್ತು ಪೂರೈಕೆ ಹಾಗೂ ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಹಂದ್ವಾಡದ ಸಯ್ಯದ್ ಇಫ್ತಿಕಾರ್ ಅಂದ್ರಾಬಿಗೆ ಜಾಮೀನು ನೀಡಿ, ‘ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಜಾಮೀನು ನಿರಾಕರಿಸಬಹುದು ಎಂಬ ಅಂಶ ಯುಎಪಿಎ ಅಡಿ ದಾಖಲಾದ ಪ್ರಕರಣಗಳಿಗೂ ಅನ್ವಯಿಸುತ್ತದೆ’ ಎಂದು ಹೇಳಿತು. ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) 2020ರಲ್ಲಿ ಯುಎಪಿಎ ಮತ್ತು ಐಪಿಸಿ ಅಡಿ ಅಂದ್ರಾಬಿ ಮೇಲೆ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದೆ. ಭಯೋತ್ಪಾದಕರ ಸಂಬಂಧ ಹೊಂದಿದ್ದರು ಎಂದು ಜಮ್ಮು-ಕಾಶ್ಮೀರ ಹೈಕೋರ್ಟ್ ನೀಡಿದ್ದ ತೀರ್ಪನ್ನು ಅಂದ್ರಾಬಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ‘ಯುಎಪಿಎಯ ಸೆಕ್ಷನ್ 43 ಡಿ(5) ಅನಿರ್ದಿಷ್ಟಾವಧಿ ಸೆರೆವಾಸವನ್ನು ಸಮರ್ಥಿಸುವುದಿಲ್ಲ. ಸಂವಿಧಾನದ ವಿಧಿ 21 ಮತ್ತು 22 ನೀಡುವ ಖಾತ್ರಿಗಳಡಿ ಅದು ಕಾರ್ಯನಿರ್ವಹಿಸಬೇಕು’ ಎಂದು ಪೀಠ ಹೇಳಿತು. ಖಾಲಿದ್ ಮತ್ತು ಶರ್ಜೀಲ್‌ಗೆ ಜಾಮೀನು ನಿರಾಕರಣೆಗೆ ಪ್ರತಿಕ್ರಿಯಿಸಿ, ‘ಕೆ.ಎ. ನಜೀಬ್ ಪ್ರಕರಣದ ತೀರ್ಪಿನ ಪಾಲನೆ ಆಗಿಲ್ಲ’ ಎಂದು ನ್ಯಾ.ಭುಯಾನ್ ಹೇಳಿದರು. ‘‘ಈ ಕಾಯ್ದೆಯಡಿ ಅಪರಾಧ ಸಾಬೀತು ಪ್ರಮಾಣ ಶೇ.1ಕ್ಕಿಂತ ಕಡಿಮೆ(2019-2023) ಎಂಬ ಅಂಕಿಅಂಶ ಎದುರು ಇರುವಾಗ, ಅರ್ಜಿದಾರನ ಸೆರೆವಾಸವನ್ನು ಮುಂದುವರಿಸಬೇಕೇ ಅಥವಾ ಗಂಭೀರ ಆರೋಪವಾದ್ದರಿಂದ, ನಂತರದ ದಿನಗಳಲ್ಲಿ ನಿರ್ಧರಿಸಬೇಕೇ?’’ ಎಂದು ಪೀಠ ಪ್ರಶ್ನಿಸಿತು. ದಿಲ್ಲಿ ಗಲಭೆ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಅಬ್ದುಲ್ ಖಾಲಿದ್ ಸೈಫಿ ಹಾಗೂ ತಮೀಮ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ನ್ಯಾ. ಅರವಿಂದ್ ಕುಮಾರ್ ಮತ್ತು ಪಿ.ಬಿ. ವರಾಳೆ ಅವರ ಪೀಠಕ್ಕೆ ‘‘ಎರಡು ಪೀಠಗಳು ವಿಭಿನ್ನ ತೀರ್ಪು ನೀಡಿರುವುದರಿಂದ, ವಿಷಯವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಬೇಕು’’ ಎಂದು ದಿಲ್ಲಿ ಪೊಲೀಸರು ಮೇ 22, 2026ರಂದು ಕೋರಿಕೆ ಸಲ್ಲಿಸಿದ್ದರು. ನ್ಯಾಯಮೂರ್ತಿಗಳು ಆದೇಶದ ಪರಾಮರ್ಶನಕ್ಕೆ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಿ, ಯುಎಪಿಎ ಸೆಕ್ಷನ್ 43 ಡಿ(5)ರಡಿ ಜಾಮೀನು ನೀಡಿಕೆಗೆ ವಿಧಿಸಿರುವ ಕಠಿಣ ಷರತ್ತುಗಳನ್ನು ದೀರ್ಘಕಾಲ ಸೆರೆವಾಸವು ತಳ್ಳಿಹಾಕುವುದೇ ಎಂಬ ಕುರಿತು ಸ್ಪಷ್ಟತೆ ಕೋರಿದರು. ಜೊತೆಗೆ, ಇಬ್ಬರು ಆರೋಪಿಗಳಿಗೆ ಜಾಮೀನು ನೀಡಿದರು.
ರಾಷ್ಟ್ರೀಯ ಸುರಕ್ಷತೆ ಹಾಗೂ ವೈಯಕ್ತಿಕ ಸ್ವಾತಂತ್ರ್ಯ ಎರಡನ್ನೂ ಸಮತೋಲಗೊಳಿಸಿದ ಹಲವು ಆದೇಶಗಳು ಬಂದಿವೆ. ಭಾರತ ಸರಕಾರ ವಿ/ಎಸ್ ಕೆ.ಎ. ನಜೀಬ್(2021) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠವು ಯುಎಪಿಎ ಅಡಿ ಜಾಮೀನು ನೀಡಿಕೆಗೆ ವಿಧಿಸಿರುವ ಕಠಿಣ ಶರತ್ತುಗಳಿಂದ ಆಗಬಹುದಾದ ದೀರ್ಘ ಕಾಲ ಸೆರೆಮನೆ ವಾಸವು ಸಂವಿಧಾನದ ವಿಧಿ 21 ಕೊಡಮಾಡುವ ಬದುಕುವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ. ದೀರ್ಘ ವಿಳಂಬ ಆಗಿರುವ ಪ್ರಕರಣಗಳಲ್ಲಿ ಸೆಕ್ಷನ್ 43 ಡಿ(5) ವಿಧಿಸುವ ಷರತ್ತುಗಳು ‘ಕರಗಿ ಹೋಗುತ್ತವೆ’. ‘‘ವಿಚಾರಣೆ ತೀರ ವಿಳಂಬವಾಗಿದ್ದಲ್ಲಿ ಯುಎಪಿಎ ಪ್ರಕರಣಗಳಲ್ಲಿ ಕೂಡ ಜಾಮೀನು ನೀಡಬಹುದು. ಈ ತೀರ್ಪನ್ನು ವಿಚಾರಣೆ ನ್ಯಾಯಾಲಯ, ಹೈಕೋರ್ಟ್ ಇಲ್ಲವೇ ತನ್ನದೇ ಪೀಠ ತಳ್ಳಿಹಾಕುವಂತಿಲ್ಲ’’ ಎಂದು ಅತ್ಯಂತ ಮಹತ್ವದ ತೀರ್ಪು ನೀಡಿತ್ತು. ಆದರೆ, ಈ ತೀರ್ಪಿನ ಅನ್ವಯಿಸುವಿಕೆ ಸ್ಥಿರ ವಾಗಿಲ್ಲ. ಎನ್‌ಐಎ ವಿ/ಎಸ್ ಜಹೂರ್ ಅಮ್ಜದ್ ಶಾ ವತಾಲಿ(2019) ಪ್ರಕರಣದಲ್ಲಿ ಜಾಮೀನು ನೀಡಿಕೆ ಹಂತದಲ್ಲಿ ಪ್ರಾಸಿಕ್ಯೂಷನ್ ವಾದವನ್ನು ಅಂಗೀಕರಿಸಬೇಕು ಎಂದು ನ್ಯಾಯಾಲಯ ಹೇಳಿತ್ತು. ಇದು ಜಾಮೀನು ನಿರಾಕರಣೆಗೆ, ವರ್ಷಗಟ್ಟಲೆ ಸೆರೆವಾಸಕ್ಕೆ ದಾರಿ ಮಾಡಿಕೊಡುತ್ತದೆ. ಮೃತ ಚಿಕ್ಕಪ್ಪನ ಅಂತಿಮ ಕ್ರಿಯೆಗಳಲ್ಲಿ ಪಾಲ್ಗೊಳ್ಳಲು ಹಾಗೂ ಅನಾರೋಗ್ಯಪೀಡಿತ ತಾಯಿಯನ್ನು ನೋಡಲು 15 ದಿನ ಜಾಮೀನು ನೀಡಬೇಕು ಎಂಬ ಖಾಲಿದ್ ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ವಿಚಾರಣೆ ನ್ಯಾಯಾಲಯ ವಜಾಗೊಳಿಸಿತು. ಆದರೆ, ಮೇ 21ರಂದು ದಿಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಂ. ಸಿಂಗ್ ಮತ್ತು ಮಧು ಜೈನ್ ಅವರ ಪೀಠ ತಾಯಿಯ ಶಸ್ತ್ರಕ್ರಿಯೆ ವೇಳೆ ಹಾಜರಿರಲು ಜಾಮೀನು ನೀಡಬೇಕೆಂಬ ಖಾಲಿದ್ ಮನವಿ ಪುರಸ್ಕರಿಸಿ, ಜೂನ್ 1,2026ರಿಂದ ಜೂನ್ 3,2026ರವರೆಗೆ ಮಧ್ಯಂತರ ಜಾಮೀನು ನೀಡಿತು.
1967ರಲ್ಲಿ ಜಾರಿಯಾಗಿ, 2008 ಮತ್ತು 2019ರಲ್ಲಿ ತಿದ್ದುಪಡಿಯಾದ ಯುಎಪಿಎ, ಭಯೋತ್ಪಾದನೆ ಮತ್ತು ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ನಿಯಮಗಳನ್ನು ಒಳಗೊಂಡಿದೆ. ವಿಭಾಗ 43 ಡಿ(5) ಪ್ರಕಾರ, ದೋಷಾರೋಪ ಪಟ್ಟಿ ಮತ್ತು ಪ್ರಕರಣ ದಿನಚರಿ ಆಧರಿಸಿದ ಪ್ರಾಸಿಕ್ಯೂಷನ್‌ನ ವಾದ ನಿಜ ಎಂದು ಅನ್ನಿಸಿದರೆ, ನ್ಯಾಯಾಲಯ ಜಾಮೀನು ನಿರಾಕರಿಸಬಹುದು. ದೋಷಾರೋಪ ಪಟ್ಟಿ ಸಲ್ಲಿಸಲು 180 ದಿನ ಸಮಯಾವಕಾಶ ಇರಲಿದೆ(ಅವಶ್ಯವೆನ್ನಿಸಿದಲ್ಲಿ ವಿಸ್ತರಿಸಬಹುದು). ವಿಶೇಷ ಎನ್‌ಐಎ ನ್ಯಾಯಾಲಯ ಇಲ್ಲವೇ ಸೆಷನ್ಸ್ ನ್ಯಾಯಾಲಯ ಇದ್ದರೂ, ಮೂಲಸೌಲಭ್ಯ ಹಾಗೂ ನ್ಯಾಯಾಧೀಶರ ಕೊರತೆ ಇದೆ. ಸಮಸ್ಯೆಯ ಕೇಂದ್ರದಲ್ಲಿರುವುದು-ಆಳವಾದ ರಾಚನಿಕ ಸಮಸ್ಯೆ: ತನಿಖೆ, ದೋಷಾರೋಪ ಪಟ್ಟಿ ಸಲ್ಲಿಕೆ, ವಿಚಾರಣೆ ಆರಂಭ ಮತ್ತು ಪೂರ್ಣಗೊಳಿಸುವಲ್ಲಿ ಅನಿರ್ದಿಷ್ಟ ಕಾಲ ವಿಳಂಬದಿಂದ ಆರೋಪಿಗಳು ದೀರ್ಘ ಸಮಯ ವಿಚಾರಣೆಪೂರ್ವ ಬಂಧನದಲ್ಲಿ ಇರುತ್ತಾರೆ. ಯುಎಪಿಎ, ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ಮತ್ತು ಬಿಎನ್‌ಎಸ್ ಎಸ್(ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ)ಗಳು ಶೀಘ್ರ ವಿಚಾರಣೆ ನಡೆಸಬೇಕೆಂದು ಹೇಳುತ್ತವೆ. ವಾಸ್ತವ ಏನೆಂದರೆ, ಆರೋಪಪಟ್ಟಿ ಸಿದ್ಧಪಡಿಸಲು ಕೆಲವೊಮ್ಮೆ 5 ವರ್ಷ ಆಗುವುದೂ ಇದೆ. 2014-2022ರ ಅವಧಿಯಲ್ಲಿ ವರ್ಷವೊಂದಕ್ಕೆ ಸಾವಿರಾರು ಯುಎಪಿಎ ಪ್ರಕರಣಗಳು ದಾಖಲಾಗಿವೆ; ಆದರೆ, ಅಪರಾಧ ಸಾಬೀತು ಪ್ರಮಾಣ ಶೇ.15ರಿಂದ ಶೇ.6 ಇದೆ. 2019-23ರ ಅವಧಿಯಲ್ಲಿ ಬಂಧಿತರಾದ 10,440 ಜನರಲ್ಲಿ ಶಿಕ್ಷೆಯಾಗಿರುವುದು 335 ಮಂದಿಗೆ ಮಾತ್ರ; ಜಮ್ಮು-ಕಾಶ್ಮೀರದಲ್ಲಿ 3,662(23 ಮಂದಿಗೆ ಶಿಕ್ಷೆ), ಉತ್ತರಪ್ರದೇಶ 2,805(222 ಮಂದಿಗೆ ಶಿಕ್ಷೆ). ಕರ್ನಾಟಕದಲ್ಲಿ 2019ರಲ್ಲಿ 6, 2020ರಲ್ಲಿ 2, 2021ರಲ್ಲಿ ಶೂನ್ಯ, 2022ರಲ್ಲಿ 3 ಮತ್ತು 2023ರಲ್ಲಿ 10 ಮಂದಿಯನ್ನು ಬಂಧಿಸಿದ್ದು, ಇವರಲ್ಲಿ ಮೂವರಿಗೆ ಶಿಕ್ಷೆಯಾಗಿದೆ.
ವಿಚಾರಣೆ ವಿಳಂಬದಿಂದ ವಿಪತ್ತು
ಹೆಚ್ಚಿನ ಪ್ರಕರಣಗಳು ವರ್ಷಗಟ್ಟಲೆ ಎಳೆಯುತ್ತವೆ. ದೋಷಾರೋಪ ಪಟ್ಟಿ ಸಲ್ಲಿಕೆಯಲ್ಲಿ ವಿಳಂಬ-ಲೋಪ, ತನಿಖೆಯ ಸಂಕೀರ್ಣತೆ, ಸಾಕ್ಷಿದಾರರ ಅನುಪಸ್ಥಿತಿ ಹಾಗೂ ವಕೀಲರ ಮೇಲಿನ ಪ್ರಕರಣಗಳ ಹೊರೆಯಿಂದ ವಿಚಾರಣೆಯ ಮುಂದೂಡಿಕೆ ಸಾಮಾನ್ಯ ಆಗಿರುತ್ತದೆ; ಭಯೋತ್ಪಾದನೆ ಪ್ರಕರಣಗಳ ವಿಚಾರಣೆಗೆ ನೇಮಿಸಿದ ವಿಶೇಷ ನ್ಯಾಯಾಲಯಗಳಲ್ಲೂ ನ್ಯಾಯಾಧೀಶರು ಹಾಗೂ ಮೂಲಸೌಕರ್ಯದ ಕೊರತೆಯಿದೆ. ಇದನ್ನು ಮನಗಂಡ ಸುಪ್ರೀಂ ಕೋರ್ಟ್, ಯುಎಪಿಎ ಪ್ರಕರಣಗಳ ವಿಚಾರಣೆಗೆ ಇನ್ನಷ್ಟು ವಿಶೇಷ ನ್ಯಾಯಾಲಯಗಳ ಸ್ಥಾಪನೆ, ಪ್ರತಿನಿತ್ಯ ವಿಚಾರಣೆ ಮತ್ತು ಸಾಧ್ಯವಿರುವಲ್ಲಿ ಒಂದು ವರ್ಷದೊಳಗೆ ವಿಚಾರಣೆ ಮುಗಿಸಬೇಕೆಂದು ರಾಜ್ಯಗಳಿಗೆ ನಿರ್ದೇಶನ ನೀಡಿತು. ಈ ಆದೇಶದ ಅನುಷ್ಠಾನ ಸಮರ್ಪಕವಾಗಿಲ್ಲ. ವಿಚಾರಣೆ ವಿಳಂಬದಿಂದ ಕುಟುಂಬಗಳು ಛಿದ್ರವಾಗಿವೆ; ಜೀವನಾಧಾರ ತಪ್ಪಿ ಹೋಗಿದೆ ಮತ್ತು ದೈಹಿಕ-ಮಾನಸಿಕ ಆರೋಗ್ಯಕ್ಕೆ ಧಕ್ಕೆಯಾಗಿದೆ. ಜೇಸುಯಿಟ್ ಪಾದ್ರಿ ಸ್ಟ್ಯಾನ್ ಸ್ವಾಮಿ(84) ಪ್ರಕರಣ ಇದಕ್ಕೊಂದು ನಿದರ್ಶನ. ಅವರನ್ನು ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಅಕ್ಟೋಬರ್ 2020ರಲ್ಲಿ ಬಂಧಿಸಲಾಯಿತು. ಪಾರ್ಕಿನ್ಸನ್ ಪೀಡಿತ ಫಾ.ಸ್ಟ್ಯಾನ್ ಅವರಿಗೆ ನೀರು ಕುಡಿಯಲು ಕೊಳವೆ ಮತ್ತು ಸಿಪ್ಪರ್ ನೀಡದೆ ಸತಾಯಿಸಲಾಯಿತು; ಗಂಭೀರ ಆರೋಗ್ಯ ಸಮಸ್ಯೆಯಿದ್ದರೂ, ಜಾಮೀನು ನಿರಾಕರಿಸಲಾಯಿತು. 9 ತಿಂಗಳು ಜೈಲಿನಲ್ಲಿದ್ದ ಅವರು ಜುಲೈ 5, 2021ರಲ್ಲಿ ಮರಣ ಹೊಂದಿದರು. ಭಿನ್ನ ಧ್ವನಿಗಳ ಹತ್ತಿಕ್ಕುವಿಕೆಗೆ ಇದೊಂದು ಉದಾಹರಣೆ. ಉಮರ್ ಖಾಲಿದ್ ಸೆಪ್ಟಂಬರ್ 2020ರಿಂದ ಜೈಲಿನಲ್ಲಿದ್ದಾರೆ. ಒಂದುವೇಳೆ ಬಿಡುಗಡೆಯಾದರೂ, ಸಾಮಾಜಿಕ ಕಳಂಕ, ಕಳೆದುಹೋದ ಪ್ರಾಯ ಹಾಗೂ ಆರ್ಥಿಕ ನಷ್ಟದಿಂದ ಸಮಾಜದಲ್ಲಿ ಒಳಗೊಳ್ಳುವುದು ಸವಾಲು ಆಗಲಿದೆ. ಇಂಥ ಪ್ರಕರಣಗಳಲ್ಲಿ ವಿಚಾರಣೆ ಪ್ರಕ್ರಿಯೆಯೇ ಶಿಕ್ಷೆಯಾಗಿ ಪರಿಣಮಿಸಲಿದ್ದು, ಕಾನೂನು ವ್ಯವಸ್ಥೆಯಲ್ಲಿ ಜನ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ.
ಪ್ರತಿಭಟನೆ ಹಕ್ಕು ಸಂವಿಧಾನದತ್ತ
ನ್ಯಾಯದಾನದಲ್ಲಿ ವಿಳಂಬ ಮತ್ತು ವ್ಯತ್ಯಯದ ನಡುವೆಯೂ ಬೆಳ್ಳಿ ರೇಖೆಗಳು ಇವೆ. ಸಯೀದ್ ಅಹ್ಮದ್ ಅಬ್ದುಲ್ ವಾಹಿದ್ ಚೌಧರಿ ವಿ/ಎಸ್ ಮಹಾರಾಷ್ಟ್ರ ಸರಕಾರ (2026) ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್, ‘‘ಪೊಲೀಸರು ಪ್ರಜೆಗಳ ಸೇವಕರೇ ಹೊರತು ಸರಕಾರದ ಉನ್ನತ ಅಧಿಕಾರಿಗಳ ಸೇವಕರಲ್ಲ’’ ಎಂದು ಜುಲೈ 3, 2026ರಂದು ಹೇಳಿತು. ಚೌಧರಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಪ್ರತಿಭಟನೆಗೆ ಒಪ್ಪಿಗೆ ಪಡೆದಿರಲಿಲ್ಲ ಎಂದು ಮುಂಬೈ ಪೊಲೀಸರು ದೋಷಾರೋಪ ಹೊರಿಸಿದ್ದರು; ಜೊತೆಗೆ, ಅವರು ಮುಂಬೈ ಪ್ರವೇಶಿಸದಂತೆ 2025ರಲ್ಲಿ ಗಡಿಪಾರು ಆದೇಶ ಹೊರಡಿಸಿದ್ದರು. ವಿಚಾರಣೆ ನಡೆಸಿದ ನ್ಯಾ. ಮಾಧವ ಜಾಮದಾರ ಅವರು, ‘‘ವ್ಯಕ್ತಿಯೊಬ್ಬರ ಮೇಲೆ ಎಫ್‌ಐಆರ್ ದಾಖಲಿಸುವುದು, ನಗರ ಪ್ರವೇಶಿಸದಂತೆ ನಿರ್ಬಂಧ ಹೇರುವುದು ನ್ಯಾಯ ಸಮ್ಮತವಲ್ಲ; ಪೊಲೀಸರ ಕ್ರಮದಿಂದ ಅವರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ. ಸರಕಾರದ ವಿರುದ್ಧ ಧಿಕ್ಕಾರ ಕೂಗುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಇಲ್ಲವೇ ಗಡಿಪಾರು ಮಾಡಲು ಕಾನೂನು ಸಮ್ಮತಿಸುವುದಿಲ್ಲ; ಸರಕಾರದ ಕ್ರಮಗಳಿಗೆ ಅಸಮ್ಮತಿ, ಭಿನ್ನಾಭಿಪ್ರಾಯ ಇಲ್ಲವೇ ವಿರೋಧಿಸಿ ಪ್ರತಿಭಟಿಸುವುದು ನ್ಯಾಯಸಮ್ಮತ ಪ್ರಕ್ರಿಯೆ; ಸಂವಿಧಾನದ ವಿಧಿ 19 ನೀಡುವ ವಾಕ್/ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಭಾಗ. ಸಮರ್ಪಕ ಸಾಕ್ಷ್ಯವಿಲ್ಲದೆ ಶಿಕ್ಷೆಗೆ ಗುರಿ ಮಾಡುವುದು ಸಂವಿಧಾನದ ಆಶಯದ ಮಸುಕುಗೊಳಿಸುವಿಕೆ ಮತ್ತು ಪ್ರಜಾಪ್ರಭುತ್ವದ ಹೊಣೆಗಾರಿಕೆ ಕುಗ್ಗಿಸುವ ಪ್ರಯತ್ನ’’ ಎಂದು ಹೇಳಿತು. ದುರಂತವೆಂದರೆ, ಈ ಆದೇಶ ಹೊರಬಿದ್ದ 2 ದಿನದಲ್ಲೇ ದಿಲ್ಲಿ ಹೈಕೋರ್ಟ್ ಖಾಲಿದ್ ಮತ್ತು ಶರ್ಜೀಲ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಆಮೂಲಕ ನ್ಯಾಯದಾನ ವ್ಯವಸ್ಥೆಯಲ್ಲಿನ ದ್ವಂದ್ವಗಳನ್ನು ಅನಾವರಣಗೊಳಿಸಿತು.
ಪತ್ರಕರ್ತರಿಗೆ ಸೆರೆವಾಸ
ಯುಎಪಿಎ ಸಂತ್ರಸ್ತರಲ್ಲಿ ಪತ್ರಕರ್ತರ ಸಂಖ್ಯೆ ಸಾಕಷ್ಟಿದೆ. 2020ರಲ್ಲಿ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವರದಿ ಮಾಡಲು ತೆರಳುತ್ತಿದ್ದಾಗ ಬಂಧಿತರಾದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್, 28 ತಿಂಗಳು ಸೆರೆವಾಸ ಅನುಭವಿಸಿ, ಫೆಬ್ರವರಿ 2, 2023ರಂದು ಬಿಡುಗಡೆಯಾದರು. ಕಾಶ್ಮೀರದ ಪತ್ರಕರ್ತ ಇರ್ಫಾನ್ ಮೆಹ್ರಾಬ್ ಮಾರ್ಚ್ 20, 2023ರಿಂದ ಜೈಲಿನಲ್ಲಿದ್ದಾರೆ. ನ್ಯೂಸ್‌ಕ್ಲಿಕ್ ಸಂಸ್ಥಾಪಕ ಸಂಪಾದಕ ಪ್ರಬೀರ್ ಪುರಕಾಯಸ್ಥ 225 ದಿನ ಜೈಲಿನಲ್ಲಿದ್ದರು. ಪುರಕಾಯಸ್ಥ ಅವರನ್ನು ಪಿಎಂಎಲ್‌ಎ(ಅಕ್ರಮ ಹಣ ಸಕ್ರಮಗೊಳಿಸುವಿಕೆ ತಡೆ ಕಾಯ್ದೆ) ಅಡಿ ಬಂಧಿಸಿರುವುದನ್ನು ಖಂಡಿಸಿದ ಸುಪ್ರೀಂ ಕೋರ್ಟ್, ‘‘ಕಾನೂನಿನ ಸರಿಯಾದ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಕಳ್ಳಾಟದ ದಾರಿ ಹಿಡಿಯಲಾಗಿದೆ’’ ಎಂದು ಹೇಳಿತು. ನ್ಯೂಸ್‌ಕ್ಲಿಕ್ ಸುದ್ದಿ ವೇದಿಕೆ ಮೇಲೆ ದಾಖಲಿಸಿದ್ದ ಪ್ರಕರಣಗಳನ್ನು ಮೇ 29, 2026ರಲ್ಲಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್ ನ್ಯಾ. ನೀನಾ ಬನ್ಸಾಲ್ ಕೃಷ್ಣ, ಜಾರಿ ನಿರ್ದೇಶನಾಲಯ ಹಾಗೂ ದಿಲ್ಲಿ ಪೊಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗ(ಇಒಡಬ್ಲ್ಯು) ಕ್ಕೆ ತಪರಾಕಿ ಬಾರಿಸಿದರು. ಇಒಡಬ್ಲ್ಯು ನ ದೋಷಾರೋಪ ಪಟ್ಟಿ ಹಾಗೂ ಜಾರಿ ನಿರ್ದೇಶನಾಲಯದ ಇಸಿಐಆರ್(ಜಾರಿ ಪ್ರಕರಣ ಮಾಹಿತಿ ವರದಿ) ಎರಡನ್ನೂ ರದ್ದುಗೊಳಿಸಿ, ‘‘ಈ ಪ್ರಕರಣ ಕಾನೂನು ಪ್ರಕ್ರಿಯೆಯ ದುರ್ಬಳಕೆ. ಪಿಎಂಎಲ್‌ಎ ಅಡಿ ಶಿಕ್ಷಾರ್ಹ ಅಪರಾಧ ನಡೆದಿದೆ ಎನ್ನುವ ಸಣ್ಣ ಸುಳಿವೂ ಇಲ್ಲ. ಈ ಕಾಯ್ದೆಯಡಿ ಪ್ರಕರಣ ದಾಖಲಿಸುವಂಥ ಯಾವುದೇ ಅಕ್ರಮ ಇಲ್ಲವೇ ಅಪರಾಧ ನ್ಯೂಸ್‌ಕ್ಲಿಕ್‌ನಿಂದ ನಡೆದಿಲ್ಲ’’ ಎಂದು ಹೇಳಿದರು. ನ್ಯೂಸ್‌ಕ್ಲಿಕ್ ವಿರುದ್ಧದ ಕ್ರಮ ದುರುದ್ದೇಶಪೂರಿತ ಮತ್ತು ಪರ್ಯಾಯ, ಮುಕ್ತ ಮಾಧ್ಯಮಗಳ ಮೇಲೆ ನಡೆಸಿದ ದಾಳಿಯಾಗಿತ್ತು.
ಯುಎಪಿಎ ಪ್ರಕರಣಗಳಲ್ಲಿ ಜಾಮೀನು ನೀಡಿಕೆ ಕುರಿತು ಸ್ಪಷ್ಟನೆಗೆ ಸಂವಿಧಾನ ಪೀಠಕ್ಕೆ ಒಪ್ಪಿಸಿರುವುದು ಅದರ ದುರುಪಯೋಗವನ್ನು ತಡೆಯಬಹುದು; ಪ್ರಕರಣದಲ್ಲಿ ಆರೋಪಿಯ ಪಾತ್ರ, ವಿಚಾರಣೆಯ ವಿಳಂಬಕ್ಕೆ ಕಾರಣ ಮತ್ತು ಒಂದುವೇಳೆ ಅಪರಾಧ ಸಾಬೀತಾದರೆ ವಿಧಿಸಬಹುದಾದ ಶಿಕ್ಷೆ- ಇವೆಲ್ಲವನ್ನೂ ಪರಿಗಣಿಸಿ, ಜಾಮೀನು ನೀಡಬಹುದು/ಬಾರದು ಎಂದು ನಿರ್ಧರಿಸಲು ಸ್ಪಷ್ಟ ಮಾರ್ಗಸೂಚಿ ಅಗತ್ಯವಿದೆ. ಇನ್ನಷ್ಟು ವಿಶೇಷ ನ್ಯಾಯಾಲಯಗಳ ಸ್ಥಾಪನೆ, ಪ್ರತಿನಿತ್ಯ ವಿಚಾರಣೆ, ಸರಕಾರಿ ವಕೀಲರು-ಖಾಲಿ ಹುದ್ದೆಗಳಿಗೆ ನೇಮಕ, ಆರೋಪಪಟ್ಟಿ ಸಲ್ಲಿಕೆ/ವಿಚಾರಣೆಗೆ ಕಾಲಮಿತಿ ವಿಧಿಸುವಿಕೆ, ಮೂಲಸೌಲಭ್ಯದ ಉನ್ನತೀಕರಣ ಮತ್ತು ಸಿಬ್ಬಂದಿಗೆ ಅಗತ್ಯ ತರಬೇತಿ ಹಾಗೂ ವಿಚಾರಣಾಧೀನ ಕೈದಿಗಳ ಪುನರಾವಲೋಕನ ಸಮಿತಿ(ಯುಟಿಆರ್‌ಸಿ)ಗಳ ಬಲವರ್ಧನೆ ಆಗಬೇಕಿದೆ; ಯುಎಪಿಎ ಆರೋಪಿಗಳಿಗೆ ಕಾನೂನು ನೆರವು ವಿಸ್ತರಣೆಯಲ್ಲದೆ, ನಿರ್ದಿಷ್ಟ ಕಾಲಾವಧಿ ಬಳಿಕ ಜಾಮೀನು ನೀಡುವ ಸಂಬಂಧ ಯುಎಪಿಎ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಇದರಿಂದ ಅಪರಾಧ ಸಾಬೀತು ಆಗುವವರೆಗೆ ಆತ ನಿರಪರಾಧಿ ಎಂಬ ಮೂಲಭೂತ ತತ್ವಕ್ಕೆ ಮನ್ನಣೆ ಸಿಗಲಿದೆ.






