Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ಕರಿಯರದೊ ಬಿಳಿಯರದೊ ಯಾರದಾದರೆ ಏನು...?

ಕರಿಯರದೊ ಬಿಳಿಯರದೊ ಯಾರದಾದರೆ ಏನು...?

ಮಾಧವ ಐತಾಳ್ಮಾಧವ ಐತಾಳ್12 Jun 2026 11:56 AM IST
share
ಕರಿಯರದೊ ಬಿಳಿಯರದೊ ಯಾರದಾದರೆ ಏನು...?

ಮೂಲಸೌಲಭ್ಯ ಒದಗಿಸಲು ಸರಕಾರಕ್ಕೆ ಭೂಮಿ ಬೇಕು; ರೈತರಿಗೆ ತಮ್ಮ ಅಸ್ತಿತ್ವ-ಬದುಕಿಗೆ ಭೂಮಿ ಬೇಕು; ಜನರಿಗೆ ಸೂರು ಬೇಕು ಮತ್ತು ಎಲ್ಲರಿಗೂ ತಿನ್ನಲು ಅನ್ನ ಬೇಕು. ನಾವು ಭೂಮಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಆದರೆ, ಅದರ ಸಮರ್ಪಕ ಬಳಕೆ ಸಾಧ್ಯವಿದೆ. ಸಮಸ್ಯೆ ಏನೆಂದರೆ, ಸರಕಾರಗಳೇ ರಿಯಲ್ ಎಸ್ಟೇಟ್ ದಲ್ಲಾಳಿಗಳಾಗಿ ಬದಲಾಗಿವೆ. ಇದರಿಂದ ಭೂಮಿ, ಕೃಷಿ ಮತ್ತು ಕೃಷಿಕರ ಉಳಿವು ಸಂಕಷ್ಟದಲ್ಲಿದೆ. ‘ಕರಿಯರದೊ ಬಿಳಿಯರದೊ ಯಾರದಾದರೆ ಏನು.... ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ’ ಎಂದು ಕುವೆಂಪು ಹೇಳಿದ್ದರು. ಇದು ಎಲ್ಲ ಕಾಲಕ್ಕೂ ಸಲ್ಲುವ ಸತ್ಯವಾದ ಮಾತು.

ಬಿಡದಿಯಲ್ಲಿ ಸರಕಾರ ಸ್ಥಾಪಿಸಲು ಪ್ರಸ್ತಾವಿಸಿರುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್(ಜಿಬಿಐಟಿ) ರೈತರಲ್ಲಿ ಆತಂಕ ಮೂಡಿಸಿದೆ. ದೇಶದ ಮೊದಲ ಎಐ ಚಾಲಿತ ಉಪನಗರ ಇದಾಗಿದ್ದು, ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡುತ್ತದೆ; ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಸುತ್ತದೆ ಎಂದು ಸರಕಾರ ಹೇಳಿಕೊಂಡಿದೆ. ಆದರೆ, ರೈತರು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ಮಾರ್ಚ್ 2025ರಿಂದ ಪ್ರತಿಭಟನೆ ಆರಂಭಿಸಿದ್ದಾರೆ. ‘ನನ್ನ ಭೂಮಿ, ನನ್ನ ಹಕ್ಕು’ ಎಂದು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಶೇ. 80ರಷ್ಟು ರೈತರು ಜಮೀನು ನೀಡಲು ಸಮ್ಮತಿಸಿದ್ದು, ಜೂನ್ 30ರೊಳಗೆ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ; ರೈತರಿಗೆ ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ, ಪುನರ್ವಸತಿ ಹಾಗೂ ಮರುಸ್ಥಾಪನೆ(ಆರ್‌ಎಫ್‌ಸಿಟಿಎಲ್‌ಎಆರ್‌ಆರ್) ಕಾಯ್ದೆ 2013ರ ಅನ್ವಯ ಪರಿಹಾರವಲ್ಲದೆ, ಅಭಿವೃದ್ಧಿಪಡಿಸಿದ ನಿವೇಶನ ನೀಡುವವರೆಗೆ ಜೀವನಾಧಾರ ನೆರವು ನೀಡಲಾಗುತ್ತದೆ ಎಂದು ಸರಕಾರ ಹೇಳಿಕೊಂಡಿದೆ.

ಯೋಜನೆಗಳ ಮಹಾಪೂರ

ಜಿಬಿಐಟಿ ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ-ಅಭಿವೃದ್ಧಿಯ ಹೊಸ ಅಲೆಗೆ ದಾರಿ ಮಾಡಿಕೊಡಲಿದೆ ಎಂದು ಸರಕಾರ ಹೇಳುತ್ತಿದೆ. ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿರುವುದು ಹಾಗೂ ತುಮಕೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಮೂಲಕ ಅದನ್ನು ಬೆಂಗಳೂರಿಗೆ ಸೇರ್ಪಡೆಗೊಳಿಸುವ ಪ್ರಯತ್ನ ನಡೆದಿದೆ. ಪೆರಿಫೆರಲ್ ರಿಂಗ್ ರಸ್ತೆ(ಪಿಆರ್‌ಆರ್)ಯನ್ನು ನಿರ್ವಹಿಸಲೆಂದೇ ಎಸ್‌ಪಿಪಿ(ಸ್ಪೆಷಲ್ ಪರ್ಪಸ್ ವೆಹಿಕಲ್), ಬೆಂಗಳೂರು ಬಿಸಿನೆಸ್ ಕಾರಿಡಾರ್ ಲಿ.ನ್ನು ಸರಕಾರ ರಚಿಸಿದೆ. ಪಿಆರ್‌ಆರ್ ಮತ್ತು ಸಟಲೈಟ್ ಟೌನ್‌ಶಿಪ್ ರಿಂಗ್ ರೋಡ್(ಎಸ್‌ಟಿಆರ್‌ಆರ್) ಬೆಂಗಳೂರನ್ನು ಎರಡು ಸುತ್ತು ಹಾಕಲಿವೆ. ಉದ್ದೇಶಿತ ಕನಕಪುರ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಇದೇ ಪಥದಲ್ಲಿ ಇರಲಿದೆ. ಜೊತೆಗೆ, 4 ವಾಸ್ತವ್ಯ-ಕೆಲಸ-ಆಟ(ಲಿವ್, ವರ್ಕ್, ಪ್ಲೇ) ಹಾಗೂ ಕೆಲಸದ ಸ್ಥಳಕ್ಕೆ ನಡೆದು ಹೋಗಬಹುದಾದ (ವಾಕ್ ಟು ವರ್ಕ್) ಟೌನ್‌ಶಿಪ್‌ಗಳನ್ನು ಯೋಜಿಸಲಾಗಿದೆ. ಇವುಗಳಲ್ಲಿ ಬಿಡದಿಯ ಎಐ ನಗರ ಯೋಜನೆ ದೊಡ್ಡದು; 9 ಕಂದಾಯ ಹಾಗೂ 17 ಕಂದಾಯೇತರ ಗ್ರಾಮಗಳ 7,295 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ದೊಡ್ಡಬಳ್ಳಾಪುರ-ದಾಬಸ್‌ಪೇಟೆಯ 5,600 ಎಕರೆ ಪ್ರದೇಶದಲ್ಲಿ ಕ್ವಿನ್(ನಾಲೆಜ್, ವೆಲ್‌ಬೀಯಿಂಗ್ ಮತ್ತು ಇನ್ನೊವೇಷನ್), ಸರ್ಜಾಪುರ-ಆನೇಕಲ್‌ನ 1,000 ಎಕರೆ ಪ್ರದೇಶದಲ್ಲಿ ಸ್ವಿಫ್ಟ್(ಸ್ಟಾರ್ಟ್‌ಅಪ್ಸ್, ವರ್ಕ್‌ಪ್ಲೇಸಸ್, ಇನ್ನೊವೇಷನ್, ಫೈನಾನ್ಸ್ ಮತ್ತು ಟೆಕ್ನಾಲಜಿ) ನಗರ ಮತ್ತು ಹೆಸರಘಟ್ಟದಲ್ಲಿ ಕ್ವಾಂಟಂ ನಗರವಲ್ಲದೆ, ಬಿಡಿಎ 5 ವಸತಿ ಲೇಔಟ್‌ಗಳನ್ನು ಯೋಜಿಸಿದೆ. ಇದಕ್ಕೆ ಪೂರಕವಾಗಿ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಕಾವೇರಿ 6ನೇ ಹಂತಕ್ಕೆ ಅನುಮತಿ ಪಡೆದುಕೊಂಡಿದೆ.

ಬಿಡದಿ ವ್ಯಾಪ್ತಿಯಲ್ಲಿ ತೆಂಗು, ಮಾವು, ಬದನೆಕಾಯಿ, ಮೆಣಸಿಕಾಯಿ, ಟೊಮ್ಯಾಟೊ, ಸೇವಂತಿಗೆ ಮತ್ತು ಅಡಿಕೆ ಬೆಳೆಯಲಾಗುತ್ತಿದೆ. ಜತೆಗೆ, ಶೇ. 90ರಷ್ಟು ರೈತ ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. ರೈತರು ಮಾರ್ಚ್ 2025ರಿಂದ ಬಿಡದಿ-ಹಾರೋಹಳ್ಳಿ ರಸ್ತೆಯ ಭೈರಮಂಗಲ ವೃತ್ತದಲ್ಲಿ ಸರಣಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿದಿನ 10 ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಜೂನ್ 14, 2026ಕ್ಕೆ ಪ್ರತಿಭಟನೆ 460 ದಿನ ದಾಟಲಿದೆ. ಕಾನೂನಿನ ಪ್ರಕಾರ, ಶೇ.80ರಷ್ಟು ರೈತರು ಭೂಮಿ ನೀಡಲು ಸಮ್ಮತಿಸಿದರೆ, ಅಂಥ ಯೋಜನೆಯನ್ನು ಅನುಷ್ಠಾನಗೊಳಿಸಬಹುದು. ಸಮ್ಮತಿಸದವರಿಗೆ ಪರಿಹಾರವನ್ನು ಬ್ಯಾಂಕ್‌ನಲ್ಲಿ ಠೇವಣಿ ಇರಿಸಲಾಗುತ್ತದೆ. ಪ್ರಾಥಮಿಕ ಅಧಿಸೂಚನೆಗೆ 1,383 ಆಕ್ಷೇಪಗಳು ಸಲ್ಲಿಕೆಯಾಗಿದ್ದವು. ಇವರಲ್ಲಿ 503 ಮಂದಿ ಯೋಜನೆಗೆ ಸಮ್ಮತಿಸಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ರೈತರು ಪ್ರತಿಕ್ರಿಯಿಸುತ್ತಾರೆ.

ಉಪನಗರಗಳಿಗೆ ಬೇಡಿಕೆ

ಕೆಂಗೇರಿ ಮತ್ತು ಯಲಹಂಕವನ್ನು ಈ ಹಿಂದೆ ಉಪನಗರಗಳಾಗಿ ಅಭಿವೃದ್ಧಿಪಡಿಸಿದ ಬಳಿಕ ಬೆಂಗಳೂರಿನ ಸುತ್ತಮುತ್ತ ಇನ್ನಷ್ಟು ಉಪನಗರಗಳಿಗೆ ಬೇಡಿಕೆ/ಪ್ರಸ್ತಾವ ಇದ್ದಿತ್ತು. ನೈಸ್ ಕಾರಿಡಾರಿನಲ್ಲಿ ಕೂಡ ಉಪನಗರವನ್ನು ಯೋಜಿಸಲಾಗಿತ್ತು; ಆದರೆ, ಅದು ಕೈಗೂಡಲಿಲ್ಲ. 2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿ ಬಿಡದಿ, ರಾಮನಗರ, ಸಾತನೂರು, ಸೋಲೂರು ಮತ್ತು ನಂದಗುಡಿಯಲ್ಲಿ 5 ಟೌನ್‌ಶಿಪ್‌ಗಳ ಅಭಿವೃದ್ಧಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಸ್ಥಳೀಯರ ವಿರೋಧದಿಂದ ಬಿಡದಿಯ ಪೈಲಟ್ ಯೋಜನೆಯನ್ನು ಕೈಬಿಡಲಾಯಿತು. ಆನಂತರ ಯೋಜನೆ ಪ್ರದೇಶವನ್ನು ಕೆಂಪು ವಲಯಕ್ಕೆ ಸೇರಿಸಿ, ಯಾವುದೇ ವಾಣಿಜ್ಯ ಚಟುವಟಿಕೆ ಕೈಗೆತ್ತಿಕೊಳ್ಳದಂತೆ ನಿಷೇಧ ಹೇರಲಾಯಿತು. ಆದರೆ, ಈಗ ಜೆಡಿಎಸ್ ಮುಖ್ಯಸ್ಥ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪೆರಿಫೆರಲ್ ರಿಂಗ್ ರಸ್ತೆ ಮತ್ತು ಬಿಡದಿ ಯೋಜನೆ ಕಳೆದ 20 ವರ್ಷದಿಂದ ವಿವಾದಕ್ಕೆ ಸಿಲುಕಿಕೊಂಡಿವೆ. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ಸುತ್ತಮುತ್ತ 1,777 ಎಕರೆ ಪ್ರದೇಶದಲ್ಲಿ ಉದ್ದೇಶಿಸಿದ್ದ ಏರೋ ಸಿಟಿ(ಏರೋಸ್ಪೇಸ್ ಡಿಫೆನ್ಸ್ ಪಾರ್ಕ್)ಯನ್ನು ರೈತರ ದೀರ್ಘಕಾಲದ ಪ್ರತಿಭಟನೆಯಿಂದ ಸರಕಾರ ಕೈ ಬಿಟ್ಟಿತು.

ಬೆಂಗಳೂರು ಮೇಲೆ ಒತ್ತಡ ಹೆಚ್ಚಿದೆ. ಅಂತರ್ಜಲ ಕುಸಿತ, ಪರಿಸರ ಸುಸ್ಥಿರತೆ ಹಾಗೂ ಆಹಾರ ಭದ್ರತೆ ಮೇಲಿನ ಒಟ್ಟಾರೆ ಪರಿಣಾಮಗಳನ್ನು ಪರಿಗಣಿಸದೆ, ನಗರದ ಸುತ್ತಮುತ್ತಲಿನ ಕೃಷಿ ಭೂಮಿ ನಿವೇಶನಗಳಾಗಿ ಪರಿವರ್ತನೆ ಆಗುತ್ತಿದೆ. ವೃಷಭಾವತಿ ನೀರು ಕಲುಷಿತವಾಗಿದೆ; ಕೃಷಿ ವೆಚ್ಚ ಹೆಚ್ಚಿದ್ದು, ಬೇಸಾಯ ಲಾಭದಾಯಕವಾಗಿಲ್ಲ. ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಎಕರೆಗೆ 2 ಕೋಟಿ ರೂ. ಪರಿಹಾರ ಸಿಗಲಿದ್ದು, ಕೆಲವರು ಜಮೀನು ಮಾರಿ ಬಂದ ಹಣದಿಂದ ಭವಿಷ್ಯ ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಸಣ್ಣ ಹಿಡುವಳಿದಾರರು ಭೂಮಿ ಮಾರಲು ಸಿದ್ಧವಿಲ್ಲ; ಬಿಡದಿ ಅಕ್ಕಪಕ್ಕದ ಚನ್ನಪಟ್ಟಣ, ಕನಕಪುರ, ಮಾಗಡಿ ತಾಲೂಕುಗಳಲ್ಲೂ ಜಮೀನು ದುಬಾರಿಯಾಗಿದೆ. ಹುಟ್ಟೂರು ತೊರೆದರೆ, ಅಸ್ಮಿತೆಯೇ ಇಲ್ಲವಾಗುತ್ತದೆ. ಕೂಲಿ ನಾಲಿ ಮಾಡಿಕೊಂಡು, ಹೈನುಗಾರಿಕೆಯಿಂದ ಬದುಕು ಕಟ್ಟಿ ಕೊಂಡಿರುವ ಭೂರಹಿತ ಕೃಷಿಕರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ. ಇವರು ಎಲ್ಲಿಗೆ ಹೋಗಬೇಕು? ಜಮೀನು ಮಾರಲು ಸಿದ್ಧವಿರುವವರು ಮತ್ತು ಒಪ್ಪದೆ ಇರುವವರ ನಡುವೆ ಹಾಗೂ ಕುಟುಂಬಗಳಲ್ಲಿ ಒಡಕು ಮೂಡಿದೆ.

ಕೈಗಾರಿಕೆ-ಉದ್ದಿಮೆಗೆ ಬೆಂಗಳೂರೇ ಏಕೆ ಬೇಕು? ರಾಜ್ಯದ 2-3ನೇ ಹಂತದ ನಗರಗಳಲ್ಲಿ ಬಂಡವಾಳ ಆಕರ್ಷಿಸುವ ಸರಕಾರದ ಪ್ರಯತ್ನಗಳು ಯಶಸ್ವಿಯಾಗಿಲ್ಲ; ಅಗತ್ಯ ಕೌಶಲ/ತರಬೇತಿ ಪಡೆದ ಸಿಬ್ಬಂದಿ ಕೊರತೆ ಇದಕ್ಕೆ ಒಂದು ಕಾರಣ. ಈ ನಗರಗಳಲ್ಲಿ ಹೂಡಿಕೆಗೆ ಒತ್ತಾಯಿಸಿದ್ದರಿಂದ, ಹಲವು ಕಂಪೆನಿಗಳು ಹೊರ ರಾಜ್ಯಕ್ಕೆ ಹೋದವು ಎಂದು ಸರಕಾರ ಹೇಳುತ್ತದೆ. ಇದು ಬೆಂಗಳೂರಿನ ಕತೆ ಮಾತ್ರವಲ್ಲ; ದೇಶದ ಎಲ್ಲ ಪ್ರಮುಖ ನಗರಗಳು ತಮ್ಮ ಗಡಿಗಳನ್ನು ಮೀರಿ ಉಬ್ಬುತ್ತಿವೆ. ಅವೈಜ್ಞಾನಿಕ ಮತ್ತು ಯೋಜಿತವಲ್ಲದ ಬೆಳವಣಿಗೆ ಪರಿಸರ-ಜನಾರೋಗ್ಯದ ಮೇಲೆ ವಿಪರಿಣಾಮ ಬೀರುತ್ತಿದೆ. ಕೇಂದ್ರ ಸರಕಾರ ಉದ್ಯಮದ ಒತ್ತಡದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ(ಬಿಎನ್‌ಪಿ)ದ ಪರಿಸರ ಸೂಕ್ಷ್ಮವಲಯ(ಇಎಸ್‌ಝಡ್ ಅಥವಾ ಬಫರ್ ವಲಯ)ವನ್ನು 268.96 ಚದರ ಕಿ.ಮೀ.ನಿಂದ 168.84 ಚದರ ಕಿ.ಮೀ.ಗೆ ಹಾಗೂ ಕಾಪು ಪ್ರದೇಶದ ಅಗಲವನ್ನು ಗರಿಷ್ಠ 4.5 ಕಿ.ಮೀ.ನಿಂದ ಕೇವಲ 1 ಕಿ.ಮೀ.ಗೆ ಇಳಿಸಿದೆ. ರಾಜ್ಯ ಸರಕಾರ ಪಕ್ಕದ ಚಂದಾಪುರದ ಸೂರ್ಯ ಸಿಟಿಯಲ್ಲಿ 100 ಎಕರೆ ಪ್ರದೇಶದಲ್ಲಿ 1,650 ಕೋಟಿ ರೂ. ವೆಚ್ಚದಲ್ಲಿ 80,000 ಆಸನ ಸಾಮರ್ಥ್ಯದ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಮುಂದಾಗಿದೆ. 1.32 ಲಕ್ಷ ಆಸನ ಸಾಮರ್ಥ್ಯವಿರುವ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ನಂತರ ಇದು ದೇಶದ ಎರಡನೇ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಆಗಲಿದೆ.

ಬಿಡದಿ ಮಾತ್ರವಲ್ಲ; ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಹೋಬಳಿಯ 13 ಗ್ರಾಮಗಳ 2,823 ಎಕರೆ ಭೂಮಿಯ ಸ್ವಾಧೀನಕ್ಕೆ ಕೆಎಐಡಿಬಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಸರ್ ಎಂ.ವಿ. ಡೀಪ್ ಟೆಕ್ ಪಾರ್ಕ್ ಸ್ಥಾಪನೆ ಉದ್ದೇಶ. ವಿಮಾನ ನಿಲ್ದಾಣದಿಂದ 30 ಕಿ.ಮೀ. ದೂರದಲ್ಲಿರುವ ಈ ಗ್ರಾಮಗಳು ಫಲವತ್ತಾದ ಭೂಮಿ ಹೊಂದಿದ್ದು, ರಾಜ್ಯದ ರೇಷ್ಮೆ ಉದ್ಯಮದ ಬೆನ್ನೆಲುಬಾಗಿವೆ. ಶೇ.70-80ರಷ್ಟು ರೈತರು ಭೂಸ್ವಾಧೀನ ವಿರೋಧಿಸಿ, ಲಿಖಿತ ಆಕ್ಷೇಪ ಸಲ್ಲಿಸಿದ್ದಾರೆ ಮತ್ತು ಕಳೆದ 90 ದಿನಗಳಿಂದ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಅಭಿವೃದ್ಧಿ-ವಸತಿ ಯೋಜನೆಗಳಿಗೆ ಭೂಮಿ ಕೊಟ್ಟವರಿಗೆ ಸಮರ್ಪಕ ಪರಿಹಾರ, ಪುನರ್ವಸತಿ ಲಭ್ಯವಾಗುತ್ತಿದೆಯೇ? ಪುನರ್ವಸತಿ-ಪುನರ್‌ಸ್ಥಾಪನೆ ದಾಖಲೆ ಕೆಟ್ಟದಾಗಿದೆ. ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ದೇವನಹಳ್ಳಿ ತಾಲೂಕು ಅರಸಿನಕುಂಟೆಯ ಕೃಷಿ ಭೂಮಿ-ಗೋಮಾಳ ಬಳಕೆಯಾಯಿತು. ಹೆಚ್ಚು ಭೂಮಿ ಇದ್ದವರು ಪರಿಹಾರದಿಂದ ಬೇರೆಡೆ ಜಮೀನು ಖರೀದಿಸಿ ಇಲ್ಲವೇ ಹೂಡಿಕೆ ಮಾಡಿ, ನೆಲೆ ಕಂಡುಕೊಂಡರು. ಸಣ್ಣ ಹಿಡುವಳಿದಾರರು ಭರ್ಜರಿ ಮನೆ ಕಟ್ಟಿಸಿದರು, ಕಾರು ಕೊಂಡರು; ಸ್ವಲ್ಪ ಕಾಲದಲ್ಲೇ ಬರಿಗೈ ಆದರು. ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಿದರೂ, ಆಸ್ಪತ್ರೆ, ದೇವಾಲಯ, ಸಮುದಾಯ ಭವನ ಮತ್ತಿತರ ಆಶ್ವಾಸನೆಗಳು ಈಡೇರಲಿಲ್ಲ. ವಿಮಾನ ನಿಲ್ದಾಣದ ಸುತ್ತಮುತ್ತ ಐಶಾರಾಮಿ ಬಂಗಲೆಗಳು, ವಿಲ್ಲಾಗಳು, ಸ್ಟಾರ್ ಹೋಟೆಲ್‌ಗಳು ತಲೆಯೆತ್ತಿದವು. ಭೂಮಿ ಕೊಟ್ಟವರಿಗೆ ವಿಮಾನನಿಲ್ದಾಣದಲ್ಲಿ ನೌಕರಿ ಪಡೆಯಲು ವಿದ್ಯಾರ್ಹತೆ, ಕೌಶಲ ಮತ್ತು ತರಬೇತಿ ಇರಲಿಲ್ಲ; ಈ ಕೆಲಸಗಳು ಹೊರಗಿನವರ ಪಾಲಾದವು. ಸ್ಥಳೀಯರಿಗೆ ಸಿಕ್ಕಿದ್ದು ಹಮಾಲಿ, ಮಾಲಿ, ಶುಚಿಗೊಳಿಸುವ ಕೆಲಸ ಮಾತ್ರ. ಕಳೆದ ಎರಡು ದಶಕದಲ್ಲಿ ಬೆಂಗಳೂರು ಉತ್ತರ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಯ ಶೇ. 35ಕ್ಕೂ ಅಧಿಕ ರೈತರು ತಮ್ಮ ಜಮೀನು ಮಾರಿದ್ದಾರೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 2024ರ ವರದಿ ಹೇಳಿದೆ. ಸ್ವಾಧೀನ ಪಡಿಸಿಕೊಂಡ ಭೂಮಿಗೆ ಉತ್ತಮ ಪರಿಹಾರ ನೀಡಲಾಗಿದೆ ಎಂದು ಸಮರ್ಥಿಸಿಕೊಳ್ಳಬಹುದು; ಬೆಂಗಳೂರು ಸುತ್ತಮುತ್ತ ಇರುವವರಲ್ಲಿ ಹೆಚ್ಚಿನವರು ಸಣ್ಣ ಹಿಡುವಳಿದಾರರು. ಭೂಮಿಯ ದಾಖಲೆಗಳು ಸರಿ ಯಾಗಿಲ್ಲದಿದ್ದರೆ, ಅದನ್ನು ಸರಿಪಡಿಸಲು ವರ್ಷಗಟ್ಟಲೆ ಹಿಡಿಯುತ್ತದೆ. ಇದರಿಂದ ಭ್ರಷ್ಟಾಚಾರ ತಾಂಡವವಾಡುತ್ತಿದೆ; ದಲ್ಲಾಳಿಗಳ ಹಸ್ತಕ್ಷೇಪದಿಂದ ಪರಿಹಾರದಲ್ಲಿ ಸಾಕಷ್ಟು ಪಾಲು ಕಮಿಷನ್ ರೂಪದಲ್ಲಿ ಕಟಾವಾಗುತ್ತದೆ.

ರಿಯಲ್ ಎಸ್ಟೇಟಿನ ಕಬಂಧಬಾಹು ಎಲ್ಲೆಡೆ ಚಾಚಿಕೊಂಡಿದೆ; ರಾಜಕಾರಣಿಗಳು/ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಭೂ ಸ್ವಾಧೀನದ ಮಾಹಿತಿ ಮೊದಲೇ ಗೊತ್ತಾಗುವುದರಿಂದ, ರೈತರಿಗೆ ಮುಂಗಡ ನೀಡಿ ಜಿಪಿಎ ಮಾಡಿಕೊಂಡು, ಆನಂತರ ಜಮೀನನ್ನು ಸರಕಾರಕ್ಕೆ ಹೆಚ್ಚಿನ ಬೆಲೆಗೆ ಮಾರುವುದು ಈ ಹಿಂದಿನಿಂದಲೂ ನಡೆದುಬಂದಿದೆ. ಇದರೊಟ್ಟಿಗೆ, ನಕಲಿ ಅಧಿಸೂಚನೆ ಹೊರಡಿಸಿ ರೈತರು ಆತಂಕದಿಂದ ಜಮೀನು ಮಾರುವಂತೆ ಮಾಡುವ ತಂತ್ರಗಾರಿಕೆಯೂ ಇದೆ. ಸರಕಾರದ ವಿಳಂಬ ನೀತಿಯಿಂದ ಪರಿಹಾರ ಮೊತ್ತ ಬೇಗ ಬರುವುದಿಲ್ಲವಾದ್ದರಿಂದ, ರೈತರು ರಿಯಲ್ ಎಸ್ಟೇಟ್ ದಂಧೆಕೋರರಿಗೆ ಭೂಮಿ ಮಾರಿಬಿಡುತ್ತಾರೆ.

ನಗರಗಳಲ್ಲಿ ಎಲ್ಲವೂ ಸರಿಯಿಲ್ಲ

ಬೆಂಗಳೂರು ಜಗತ್ತಿನ ಅತ್ಯಂತ ಹೆಚ್ಚು ಜನದಟ್ಟಣೆ ಇರುವ ನಗರ. ಚದರ ಕಿ.ಮೀ.ಗೆ ಜನಸಾಂದ್ರತೆ 20,000 ಇದೆ. ಜನ-ವಾಹನ ದಟ್ಟಣೆ, ಅಸಮರ್ಪಕ ಸಾರ್ವಜನಿಕ ಸಂಚಾರ ವ್ಯವಸ್ಥೆ ಮತ್ತು ವಸತಿ ಕೊರತೆಯು ಮೂಲಸೌಲಭ್ಯದ ಮೇಲೆ ಒತ್ತಡ ಹೇರುತ್ತಿದೆ. ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯ ಪರಿಸರ ವಿಜ್ಞಾನಗಳ ಕೇಂದ್ರದ ಪ್ರಕಾರ, ಬೆಂಗಳೂರಿನಲ್ಲಿ ಕಳೆದ 4 ದಶಕದಲ್ಲಿ ಕಟ್ಟಡ ನಿರ್ಮಾಣ ಶೇ.52ರಷ್ಟು ಹೆಚ್ಚಳಗೊಂಡಿದೆ; ಹಸಿರು ಶೇ.78ರಷ್ಟು ಕುಸಿದಿದೆ ಹಾಗೂ ಜಲಸಂಪನ್ಮೂಲ ಶೇ.79ರಷ್ಟು ಕಡಿಮೆಯಾಗಿದೆ. ನಗರದ 105 ಕೆರೆಗಳಲ್ಲಿ ಶೇ.90ರಷ್ಟು ಚರಂಡಿ ನೀರಿನಿಂದ ತುಂಬಿಕೊಂಡಿವೆ ಮತ್ತು ಶೇ.98ರಷ್ಟು ಕೆರೆಗಳು ಒತ್ತುವರಿಯಾಗಿವೆ. ನಗರ ಪ್ರತಿದಿನ 4,500 ಮೆಟ್ರಿಕ್ ಟನ್ ಘನ ತ್ಯಾಜ್ಯ ಉತ್ಪಾದಿಸುತ್ತಿದ್ದು, ಇದರಲ್ಲಿ ಶೇ.60ರಷ್ಟನ್ನು ಸಂಗ್ರಹಿಸಲಾಗುತ್ತಿದೆ; ಭೂಭರ್ತಿ ಜಾಗದಲ್ಲಿ ತುಂಬುವ ಮುನ್ನ ಶೇ.15ರಷ್ಟು ತ್ಯಾಜ್ಯ ಮಾತ್ರ ಸಂಸ್ಕರಣೆ ಆಗುತ್ತಿದೆ. ರಸ್ತೆ ಅಕ್ಕಪಕ್ಕದಲ್ಲಿ ಚೆಲ್ಲಾಡುವ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಕ್ರಮವಾಗಿ ತುಂಬಲ್ಪಡುವ ಈ ತ್ಯಾಜ್ಯ, ಪರಿಸರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಕಸದ ಮಾಫಿಯಾ ಅತ್ಯಂತ ಬಲಿಷ್ಠವಾಗಿದೆ. ವಲಸೆ ಬರುವವರು ಕೊಳೆಗೇರಿಗಳಲ್ಲಿ ತುಂಬಿಕೊಳ್ಳುತ್ತಿದ್ದಾರೆ. ಕೊಳೆಗೇರಿ ಮಂಡಳಿಯ ವಾರ್ಷಿಕ ವರದಿ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯಲ್ಲಿ 435 ಅಧಿಕೃತ ಕೊಳೆಗೇರಿಗಳಿವೆ. ಜೊತೆಗೆ, ನೀರಿನ ತೀವ್ರ ಕೊರತೆ ಇರುವ ನಗರ; ನಗರದ ಸುತ್ತಮುತ್ತ ಯಾವುದೇ ಶಾಶ್ವತ ಜಲಮೂಲಗಳು ಇಲ್ಲ. ವಾರ್ಷಿಕ ಅಂದಾಜು 800 ಮಿ.ಮೀ. ಮಳೆಯಾದರೂ, ಕಾಂಕ್ರಿಟೀಕರಣದಿಂದ ನೀರು ನೆಲದೊಳಗೆ ಇಳಿದು, ಮರುದುಂಬುತ್ತಿಲ್ಲ.

ನಗರಾಭಿವೃದ್ಧಿ ಯೋಜನೆ(ಸಿಡಿಪಿ) ಅಸಮರ್ಪಕವಾಗಿದ್ದು, ಅಸ್ತವ್ಯಸ್ತ ಬೆಳವಣಿಗೆಗೆ ಕಾರಣವಾಗಿದೆ. ಬೆಂಗಳೂರು ಬೆಳೆಯುವುದನ್ನು ತಡೆಯಲು ಸಾಧ್ಯವಿಲ್ಲ ಎಂದಾದರೆ, ಅದನ್ನು ಯೋಜಿತ-ವ್ಯವಸ್ಥಿತವಾಗಿ ಬೆಳೆಸಲು ಪ್ರಯತ್ನಿಸಬೇಕು. 2015ರ ಮಾಸ್ಟರ್ ಪ್ಲ್ಯಾನ್ ಬಳಿಕ 2017ರಲ್ಲಿ ಸಿದ್ಧಗೊಳಿಸಿದ ಪರಿಷ್ಕೃತ ಮಾಸ್ಟರ್ ಪ್ಲ್ಯಾನ್(ಆರ್‌ಎಂಪಿ) ಕರಡನ್ನು 2020ರಲ್ಲಿ ವಾಪಸ್ ಪಡೆಯಲಾಯಿತು. 2031ರ ಪ್ಲ್ಯಾನ್‌ಗೆ 2024ರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ; ಇದು ಯಾವಾಗ ಹೊರಬರುತ್ತದೆ ಎಂಬುದು ಗೊತ್ತಿಲ್ಲ. ಭೂಮಿ ಬಳಕೆ ಪ್ರಮಾಣಪತ್ರ(ಲ್ಯಾಂಡ್ ಯುಟಿಲೈಸೇಷನ್ ಸರ್ಟಿಫಿಕೇಟ್, ಎಲ್‌ಯುಸಿ) ನೀಡುವಿಕೆಯಲ್ಲಿ ವಿವೇಚನೆ ಬಳಸಿದರೆ, ಯೋಜನೆರಹಿತ ಬೆಳವಣಿಗೆಯನ್ನು ನಿಯಂತ್ರಿಸಬಹುದು. ಜನವರಿ 2025ರಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ನೀಡಿದ ಮಾಹಿತಿ ಪ್ರಕಾರ, 4.69 ಲಕ್ಷ ಎಕರೆ ಭೂಮಿಯ ಪರಿವರ್ತನೆಗೆ ಅನುಮತಿ ಪಡೆಯಲಾಗಿದೆ; ಉಳಿದದ್ದು ಅಕ್ರಮ ಭೂಬಳಕೆ. ಸ್ಪಷ್ಟ ಮುನ್ನೋಟ ಇಲ್ಲದಿದ್ದರೆ ಎಲ್ಲವನ್ನೂ-ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಕಷ್ಟಸಾಧ್ಯ. ಮೂಲ ಸೌಲಭ್ಯ ಅಭಿವೃದ್ಧಿ ಮತ್ತು ಸ್ವಾಭಾವಿಕ ಸಂಪನ್ಮೂಲಗಳ ಸಂರಕ್ಷಣೆ ಒಟ್ಟೊಟ್ಟಿಗೆ ಸಾಗುವಂತೆ ಯೋಜನೆ ರೂಪಿಸಬೇಕಿದೆ. ನಗರಾಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಸರಕಾರದ ಛಪ್ಪನೈವತ್ತಾರು ಏಜೆನ್ಸಿಗಳ ನಡುವೆ ಸಮನ್ವಯ ಇಲ್ಲ. ಬೆಂಗಳೂರು ಸುತ್ತಮುತ್ತಲಿನ ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ಗ್ರಾಮಪಂಚಾಯತ್‌ಗಳು ತಮ್ಮ ಎಲ್ಲೆಯಲ್ಲಿ ಭೂಮಿ ಮತ್ತು ಸ್ವಾಭಾವಿಕ ಸಂಪನ್ಮೂಲವನ್ನು ರಕ್ಷಿಸಬೇಕಿದೆ. ಅಭಿವೃದ್ಧಿ ವಿಕೇಂದ್ರೀಕರಣಗೊಳ್ಳಬೇಕು ಮತ್ತು ಗ್ರಾಮೀಣರ ಹಿತಾಸಕ್ತಿ, ಜೀವನಾಧಾರವನ್ನು ರಕ್ಷಿಸಬೇಕು.

ಇದು ಪರ್ಯಾಯ ಆಗಬಹುದೇ?

ರಾಜಸ್ಥಾನ 2016ರಿಂದ ಭೂಮಿ ಹಂಚಿಕೊಳ್ಳುವಿಕೆ(ಲ್ಯಾಂಡ್ ಪೂಲಿಂಗ್) ಯನ್ನು ಶಾಸನಬದ್ಧಗೊಳಿಸಿದೆ. ನಗರ ಯೋಜನೆ(ಟೌನ್ ಪ್ಲ್ಯಾನಿಂಗ್-ಟಿಪಿ)ಯಲ್ಲಿ ಭೂ ಮಾಲಕರು ನೀಡುವ ಭೂಮಿಗೆ ಪ್ರತಿಯಾಗಿ ಸಿದ್ಧಗೊಳಿಸಿದ ನಿವೇಶನ(ಶೇ.60-75) ನೀಡಲಾಗುತ್ತದೆ. ಇದರಿಂದ ಕಡ್ಡಾಯ ಭೂಸ್ವಾಧೀನ ಕಡಿಮೆಯಾಗುತ್ತದೆ; ಜಮೀನು ಮಾಲಕರಿಗೆ ಅಭಿವೃದ್ಧಿಯಲ್ಲಿ ಪಾಲು ದೊರೆಯುತ್ತದೆ. ಗುಜರಾತ್‌ನಲ್ಲಿ ನಗರ ಯೋಜನೆ ಮತ್ತು ನಗರಾಭಿವೃದ್ಧಿ ಕಾಯ್ದೆ 1976ರಡಿ ಅಹಮದಾಬಾದ್, ಸೂರತ್, ರಾಜಕೋಟ್, ವಡೋದರ ಮತ್ತು ಗಾಂಧಿನಗರದ ವಿಸ್ತರಣೆ ನಡೆಯಿತು. ದೇಶದಲ್ಲಿ 2019ರಿಂದ ಟಿಪಿ ಕಾರ್ಯನೀತಿಯನ್ನು ಉತ್ತೇಜಿಸಲಾಗುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರದ ಪುಣೆ ಹಾಗೂ ಮುಂಬೈ ಮೆಟ್ರೋಪಾಲಿಟನ್ ಅಭಿವೃದ್ಧಿ ಪ್ರಾಧಿಕಾರಗಳು ಈ ಮಾದರಿಯನ್ನು ಅಳವಡಿಸಿಕೊಂಡಿವೆ.

ಭೂಮಿ-ನೀರು ಅಕ್ಷಯವಲ್ಲ

ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿ(ಕೆಐಎಡಿಬಿ), ಕೆಎಚ್‌ಬಿ(ಗೃಹ ಮಂಡಳಿ) ಮತ್ತು ಬಿಡಿಎ(ನಗರಾಭಿವೃದ್ಧಿ ಪ್ರಾಧಿಕಾರ) ಈವರೆಗೆ ಸ್ವಾಧೀನಪಡಿಸಿಕೊಂಡ ಭೂಮಿ ಎಷ್ಟು? ಅದರಲ್ಲಿ ಎಷ್ಟು ಕಾರ್ಖಾನೆ/ ನಿವೇಶನ/ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ? ಸೃಷ್ಟಿಯಾದ ಉದ್ಯೋಗ ಎಷ್ಟು? ರಾಜ್ಯಕ್ಕೆ ಬಂದ ಆದಾಯವೆಷ್ಟು? ಇದರಿಂದ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಿದೆಯೇ? ಎಷ್ಟು ಕುಟುಂಬಗಳು ನೆಲೆ ಕಳೆದುಕೊಂಡಿವೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕಿದೆ. ಮೂಲಸೌಲಭ್ಯ ಒದಗಿಸಲು ಸರಕಾರಕ್ಕೆ ಭೂಮಿ ಬೇಕು; ರೈತರಿಗೆ ತಮ್ಮ ಅಸ್ತಿತ್ವ-ಬದುಕಿಗೆ ಭೂಮಿ ಬೇಕು; ಜನರಿಗೆ ಸೂರು ಬೇಕು ಮತ್ತು ಎಲ್ಲರಿಗೂ ತಿನ್ನಲು ಅನ್ನ ಬೇಕು. ನಾವು ಭೂಮಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಆದರೆ, ಅದರ ಸಮರ್ಪಕ ಬಳಕೆ ಸಾಧ್ಯವಿದೆ. ಸಮಸ್ಯೆ ಏನೆಂದರೆ, ಸರಕಾರಗಳೇ ರಿಯಲ್ ಎಸ್ಟೇಟ್ ದಲ್ಲಾಳಿಗಳಾಗಿ ಬದಲಾಗಿವೆ. ಇದರಿಂದ ಭೂಮಿ, ಕೃಷಿ ಮತ್ತು ಕೃಷಿಕರ ಉಳಿವು ಸಂಕಷ್ಟದಲ್ಲಿದೆ. ‘ಕರಿಯರದೊ ಬಿಳಿಯರದೊ ಯಾರ ದಾದರೆ ಏನು.... ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ’ ಎಂದು ಕುವೆಂಪು ಹೇಳಿದ್ದರು. ಇದು ಎಲ್ಲ ಕಾಲಕ್ಕೂ ಸಲ್ಲುವ ಸತ್ಯವಾದ ಮಾತು.

Tags

Farmer
share
ಮಾಧವ ಐತಾಳ್
ಮಾಧವ ಐತಾಳ್
Next Story
X