ಮಮತಾ ಬ್ಯಾನರ್ಜಿ ‘ಆಟ’ ಈ ಚುನಾವಣೆಯಲ್ಲೂ ನಡೆಯುವುದೇ?

ಟಿಎಂಸಿಗೆ ನಗದು ವರ್ಗಾವಣೆ(ಡಿಬಿಟಿ) ಸೇರಿದಂತೆ ಹಲವು ಜನಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಬೆಂಬಲ ಇದೆ. ಅದು ಉದ್ಯೋಗ ಸೃಷ್ಟಿ, ವಲಸೆ ಸಮಸ್ಯೆ ಮತ್ತು ರಾಜ್ಯದಿಂದ ಕೈಗಾರಿಕೆಗಳ ಪಲಾಯನ ಕುರಿತು ಮಾತನ್ನಾಡುತ್ತಿಲ್ಲ; ಬದಲಿಗೆ, ಬಿಜೆಪಿಯನ್ನು ‘ಕೌ ಬೆಲ್ಟ್ ಪಾರ್ಟಿ’; ಅಧಿಕಾರಕ್ಕೆ ಬಂದರೆ ಸಸ್ಯಾಹಾರವನ್ನು ಹೇರುತ್ತದೆ ಎಂದು ದೂರುತ್ತ ನರೇಟಿವ್ ಕಟ್ಟಿದೆ. ಈ ಪಡಿಯಚ್ಚು ತೊಡೆದುಹಾಕಲು ಬಿಜೆಪಿ ಹೆಣಗಾಡುತ್ತಿದೆ; ಬಿಧಾನ್‌ನಗರ ಬಿಜೆಪಿ ಅಭ್ಯರ್ಥಿ ಡಾ.ಶರದ್ವತ್ ಮುಖೋಪಾಧ್ಯಾಯ ‘ಕಾಟ್ಲಾ’ ಮೀನು ಹಿಡಿದುಕೊಂಡು ಪ್ರಚಾರ ಕೈಗೊಂಡಿದ್ದು ಇದೇ ಕಾರಣದಿಂದ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಐಆರ್, ಆಡಳಿತ ವಿರೋಧಿ ಅಲೆ, ರಾಜ್ಯಪಾಲರ ಪ್ರವೇಶ, ಕಣಕ್ಕಿಳಿದಿರುವ ಗಣ ಸಮೂಹ ಮತ್ತು ಚುನಾವಣೆ ಆಯೋಗ ಸಾರಾಸಗಟು ಅಧಿಕಾರಶಾಹಿಯನ್ನು ವರ್ಗಾಯಿಸಿರುವುದು ತೃಣಮೂಲ ಕಾಂಗ್ರೆಸ್‌ಗೆ ತಿರುಗುಬಾಣ ಆಗುವುದೇ? ಅಥವಾ ಟಿಎಂಸಿ ಪ್ರತಿಪಾದಿಸುವ ಬಂಗಾಳಿ ಉಪರಾಷ್ಟ್ರೀಯತೆಗೆ ಜನ ಮಣೆ ಹಾಕುವರೇ?
ರಾಜ್ಯದಲ್ಲಿ ಎಪ್ರಿಲ್ 23 ಮತ್ತು 29ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಭಾರತೀಯ ಗೂರ್ಖಾ ಪ್ರಜಾತಾಂತ್ರಿಕ್ ಮೋರ್ಚಾ(ಬಿಜಿಪಿಎಂ) ಡಾರ್ಜಿಲಿಂಗ್ ಬೆಟ್ಟ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಟಿಎಂಸಿ ಮೈತ್ರಿಯಲ್ಲಿ ಸ್ಪರ್ಧಿಸುತ್ತಿದೆ. ಟಿಎಂಸಿ 3 ಅವಧಿಯಿಂದ ಆಡಳಿತ ನಡೆಸುತ್ತಿದ್ದು, ಆಡಳಿತ ವಿರೋಧಿ ಅಲೆಯನ್ನು ತಡೆಯಲು 74 ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ ಮತ್ತು 15 ಶಾಸಕರ ಕ್ಷೇತ್ರಗಳನ್ನು ಬದಲಿಸಿದೆ. ಚುನಾವಣೆ ಆಯೋಗ ಎಸ್‌ಐಆರ್(ವಿಶೇಷ ತೀವ್ರ ಪರಿಷ್ಕರಣೆ) ಮೂಲಕ ಮಹಿಳೆಯರು, ಮುಸ್ಲಿಮರು, ಆದಿವಾಸಿಗಳು ಹಾಗೂ ಇನ್ನಿತರ ಬದಿಗೊತ್ತಲ್ಪಟ್ಟ ಸಮುದಾಯದ ಮತದಾರರನ್ನು ತೆಗೆದುಹಾಕಿದೆ ಎಂದು ಟಿಎಂಸಿ ದೂರಿದೆ. ಪಕ್ಷ ಉದ್ಯೋಗ ಸೃಷ್ಟಿ, ವಲಸೆ ಮತ್ತು ಕೈಗಾರಿಕೆಗಳ ಪಲಾಯನ ಕುರಿತು ಮಾತನ್ನಾಡುತ್ತಿಲ್ಲ; ಬದಲಿಗೆ, ಬಂಗಾಳಿ ಉಪರಾಷ್ಟ್ರೀಯತೆಯನ್ನು ಆಧರಿಸಿದ್ದು, ಬಿಜೆಪಿ ‘ಹೊರಗಿನ’ ಪಕ್ಷ ಎನ್ನುತ್ತಿದೆ. ಪ್ರತಿಯಾಗಿ, ಅಕ್ರಮ ನುಸುಳುವಿಕೆ, ಮಹಿಳೆಯರ ಸುರಕ್ಷತೆ, ಕಾನೂನು-ಸುವ್ಯವಸ್ಥೆ ಕುಸಿತ ಹಾಗೂ ರಾಜ್ಯದ ಹಲವು ಭಾಗಗಳಲ್ಲಿ ಜನಸಂಖ್ಯೆಯಲ್ಲಿ ಬದಲಾವಣೆ ಆಧರಿಸಿ, ಧರ್ಮದ ಆಧಾರದಲ್ಲಿ ಮತದಾರರನ್ನು ಧ್ರುವೀಕರಿಸಲು ಬಿಜೆಪಿ ಯತ್ನಿಸುತ್ತಿದೆ. ಪ್ರಧಾನಿ ಮಾರ್ಚ್ 14ರಂದು ಕೋಲ್ಕತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಸಭೆಯಲ್ಲಿ ‘‘ಈ ಚುನಾವಣೆ ಸರಕಾರದ ಬದಲಾವಣೆ ಮಾತ್ರವಲ್ಲ; ಬಂಗಾಳದ ಆತ್ಮವನ್ನು ಉಳಿಸುವ ಪ್ರಯತ್ನ’’ ಎಂದು ಹೇಳಿದರು.
ಎಸ್‌ಐಆರ್ ಸಮಸ್ಯೆ
ಅಕ್ಟೋಬರ್ 25, 2025ರಲ್ಲಿ ಮತದಾರರ ಪಟ್ಟಿಯಲ್ಲಿ 7,66,37,529 ಜನರಿದ್ದರು. ಎಸ್‌ಐಆರ್ ಬಳಿಕ ಫೆ.28, 2026ರಂದು ಸಂಖ್ಯೆ 6,44,52,609ಕ್ಕೆ ಕುಸಿಯಿತು; 61.78 ಲಕ್ಷ ಮತದಾರರನ್ನು ತೆಗೆದುಹಾಕಲಾಯಿತು ಮತ್ತು 60.06 ಲಕ್ಷ ಮತದಾರರು ನ್ಯಾಯಾಂಗದ ಪರಾಮರ್ಶೆಯಲ್ಲಿದ್ದಾರೆ. ಇವರ ಅರ್ಜಿಗಳ ಪರಿಶೀಲನೆಗೆ ಆಯೋಗ 19 ಮೇಲ್ಮನವಿ ನ್ಯಾಯಾಧಿಕರಣಗಳನ್ನು ಸ್ಥಾಪಿಸಿದೆ. ಮಾ.29, 2026ರಂದು ನಾಲ್ಕನೇ ಪೂರಕ ಪಟ್ಟಿಯನ್ನು ಪ್ರಕಟಿಸಿದೆ. ಚುನಾವಣೆ ಸಮೀಪದಲ್ಲಿದ್ದರೂ, ಲಕ್ಷಾಂತರ ಮತದಾರರು ತಮ್ಮ ಹಕ್ಕಿನ ಬಗ್ಗೆ ಖಾತ್ರಿಯಿಲ್ಲದೆ ಅತಂತ್ರರಾಗಿದ್ದಾರೆ. ಮೂರು ಅವಧಿ ಅಧಿಕಾರದಲ್ಲಿದ್ದರೂ, ಹಲವು ಸಮಸ್ಯೆಗಳನ್ನು ಬಗೆಹರಿಸಲಾಗದ ಟಿಎಂಸಿಗೆ ಎಸ್‌ಐಆರ್ ವರವಾಗಿ ಪರಿಣಮಿಸಿದೆ; ಬಿಜೆಪಿ ಬಂಗಾಳದ ವಿರುದ್ಧ ಇದೆ ಎಂದು ಹೇಳಲು ಎಸ್‌ಐಆರ್ ಬಳಸಿಕೊಳ್ಳುತ್ತಿದೆ. 2024ರಲ್ಲಿ ಕೋಲ್ಕತಾದ ಆರ್.ಜಿ. ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ-ಹತ್ಯೆ ಪ್ರಕರಣ(ಆಕೆಯ ತಾಯಿ ರತ್ನ ದೇಬನಾಥ್‌ಗೆ ಬಿಜೆಪಿ ಪನಿಹಾತಿ ಕ್ಷೇತ್ರದಿಂದ ಟಿಕೆಟ್ ಕೊಟ್ಟಿದೆ), ಭ್ರಷ್ಟಾಚಾರ, ಸಂದೇಶ್‌ಖಲಿಯಲ್ಲಿ ಪಕ್ಷದ ಮುಖಂಡ ಶೇಕ್ ಶಹಜಹಾನ್ ನಡೆಸಿದ ಅಂದಾದುಂದಿ ಇತ್ಯಾದಿ ಪ್ರಕರಣಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು.
ಮೈತ್ರಿ ಗೊಂದಲ
ರಾಜ್ಯದಲ್ಲಿ ಶೇ.72ರಷ್ಟು ಹಿಂದೂ ಹಾಗೂ ಶೇ.25ರಷ್ಟು ಮುಸ್ಲಿಮರು ಇದ್ದಾರೆ; ಮುಸ್ಲಿಮರು 80 ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಅಧಿಕ ಸಂಖ್ಯೆಯಲ್ಲಿದ್ದಾರೆ. 2016ರಲ್ಲಿ ಟಿಎಂಸಿ 211, ಬಿಜೆಪಿ 3, ಕಾಂಗ್ರೆಸ್ 44(ಶೇ.12.25), ಎಡರಂಗ 32(ಶೇ.19.57) ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದು, 1 ಸ್ಥಾನ ಇತರರ ಪಾಲಾಗಿತ್ತು. ಆದರೆ, 2021ರಲ್ಲಿ ಬಿಜೆಪಿ ಸದಸ್ಯ ಬಲ ಇದ್ದಕ್ಕಿದ್ದಂತೆ 77 (ಶೇ.10.16)ಕ್ಕೆ ಹೆಚ್ಚಿತು; ಟಿಎಂಸಿ 215(+4, ಶೇ.44.91) ಸ್ಥಾನ ಗಳಿಸಿತು. 2025ರ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ತನ್ನ ಹಿಡಿತ ಮುಂದುವರಿಸಿತು; ತೃಣಮೂಲ 29(+7, ಶೇ.46.16), ಬಿಜೆಪಿ 12(-6, ಶೇ.39.08) ಹಾಗೂ ಕಾಂಗ್ರೆಸ್ 1(-1, ಶೇ. 4.72) ಸ್ಥಾನ ಗಳಿಸಿದವು. ಕಾಲಕ್ರಮೇಣ ಕಾಂಗ್ರೆಸ್ ಮತಗಳು ಟಿಎಂಸಿಗೆ ಹಾಗೂ ಎಡ ರಂಗದ ಮತಗಳು ಬಿಜೆಪಿಗೆ ವರ್ಗಾವಣೆಯಾಗಿವೆ. ಟಿಎಂಸಿ ‘ಇಂಡಿಯಾ’ ಒಕ್ಕೂಟದಲ್ಲಿರುವ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. 2011ರಲ್ಲಿ ಕಾಂಗ್ರೆಸ್ ಜತೆಗೂಡಿ ಎಡಪಕ್ಷಗಳನ್ನು ಸೋಲಿಸಿದ ಮಮತಾ, ಒಂದು ವರ್ಷದ ಬಳಿಕ ರಾಜ್ಯದಲ್ಲಿ ಪಕ್ಷದ ಸಂಬಂಧ ತೊರೆದರು. ಆದರೆ, ರಾಷ್ಟ್ರ ಮಟ್ಟದಲ್ಲಿ ಯುಪಿಎ ಭಾಗವಾಗಿ ಉಳಿದರು. ಯಾವುದೇ ಸೈದ್ಧಾಂತಿಕ ಬದ್ಧತೆ ಇಲ್ಲದ ಅವರು ಬಿಜೆಪಿ ಸರಕಾರದಲ್ಲಿ ರೈಲ್ವೆ ಸಚಿವೆ ಆಗಿದ್ದರು ಕೂಡ.
2016ರಲ್ಲಿ ಎಡ ಪಕ್ಷಗಳು+ಕಾಂಗ್ರೆಸ್ ಶೇ.32 ಮತ ಗಳಿಸಿದ್ದವು; ಕಾಂಗ್ರೆಸ್ ಸಮಸ್ಯೆ ಏನೆಂದರೆ, ಬೇರೆ ಬೇರೆ ರಾಜ್ಯಗಳಲ್ಲಿ ಪಕ್ಷಕ್ಕೆ ಮೈತ್ರಿಕೂಟದ ಸದಸ್ಯರೇ ಎದುರಾಳಿಗಳು. ಬಂಗಾಳದಲ್ಲಿ ಎಡ ಪಕ್ಷಗಳು-ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ, ಕೇರಳದಲ್ಲಿ ವಿಪರಿಣಾಮ ಆಗುತ್ತದೆ. ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಣಾಹಣಿ ನಡೆಸುತ್ತಿವೆ. 2021ರಲ್ಲಿ ಕೇರಳದಲ್ಲಿ ಪಿಣರಾಯಿ ವಿಜಯನ್ ಎರಡನೇ ಬಾರಿ ಅಧಿಕಾರಕ್ಕೆ ಬಂದರು. ನಿರಂತರ ಸೋಲಿನಿಂದ ದುರ್ಬಲಗೊಂಡಿರುವ ಕಾಂಗ್ರೆಸ್, ಪ್ರಾಂತೀಯ ಪಕ್ಷವಾಗಿ ಪರಿಣಮಿಸಿದೆ. ಮಮತಾ ಅವರನ್ನು ಸಮಾಧಾನಪಡಿಸಲು ಬೆಹ್ರಾಮ್‌ಪುರದಿಂದ 5 ಬಾರಿ ಆಯ್ಕೆಯಾದ ಸಂಸದ ಅಧೀರ್ ರಂಜನ್ ಚೌಧರಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಿಸಿ, ಶುಭಂಕರ್ ಸರಕಾರ್ ಅವರನ್ನು ನೇಮಿಸಿತು. ಮಮತಾ ಅವರ ಕಟು ಟೀಕಾಕಾರರಾದ ಚೌಧರಿ, 2024ರ ಲೋಕಸಭೆ ಚುನಾವಣೆಯಲ್ಲಿ ಕ್ರಿಕೆಟಿಗ, ಟಿಎಂಸಿಯ ಯೂಸುಫ್ ಪಠಾಣ್ ಅವರಿಂದ 70,000 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆನಂತರ 2 ವರ್ಷ ಕಾಂಗ್ರೆಸ್ ಮುಖಂಡರು ರಾಜ್ಯದ ಕಡೆ ತಲೆ ಹಾಕಲಿಲ್ಲ. ಇದರಿಂದ ಟಿಎಂಸಿ ತನ್ನ ಶಕ್ತಿ ಬೆಳೆಸಿಕೊಂಡಿತು. ಕಾಂಗ್ರೆಸ್‌ನ ಸೌಜನ್ಯವನ್ನು ಟಿಎಂಸಿ ಗೌರವಿಸಲಿಲ್ಲ. ರಾಜ್ಯದಾಚೆಗೂ ಪಕ್ಷವನ್ನು ವಿಸ್ತರಿಸಬೇಕೆಂದು ಗೋವಾ ವಿಧಾನಸಭೆ ಚುನಾವಣೆ(2022)ಯಲ್ಲಿ ಸ್ಪರ್ಧಿಸಿ, ಶೂನ್ಯ ಸಂಪಾದನೆ (ಶೇ.5.2 ಮತಗಳಿಕೆ) ಮಾಡಿತು. ಇದರ ಪರಿಣಾಮ ಕಾಂಗ್ರೆಸ್ ಮೇಲೆ ಆಯಿತು; 11(-6 ಸ್ಥಾನ) ಗಳಿಸಿತು. ಬಿಜೆಪಿ 20 ಸ್ಥಾನ ಗಳಿಸಿ, ಪ್ರಮೋದ್ ಸಾವಂತ್ ಮುಖ್ಯಮಂತ್ರಿ ಆದರು. ಆಪ್ 2(ಶೇ.6.77) ಸ್ಥಾನ ಗಳಿಸಿತು. ಗೋವಾದಲ್ಲಿ ಟಿಎಂಸಿ ಪರ ಪ್ರಚಾರ ನಡೆಸಿದ್ದ ಟೆನಿಸ್ ಆಟಗಾರ ಲಿಯಾಂಡರ್ ಪೇಸ್, ಈಗ ಬಿಜೆಪಿ ತೆಕ್ಕೆಯಲ್ಲಿದ್ದಾರೆ.
ಎಚ್ಚೆತ್ತಿರುವ ಕಾಂಗ್ರೆಸ್ ಒಂಟಿಯಾಗಿ, 298 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲು ನಿರ್ಧರಿಸಿದೆ. ಅಧೀರ್ ರಂಜನ್ ಚೌಧರಿ(ಬೆಹ್ರಾಮ್‌ಪುರ) ಮತ್ತು ಟಿಎಂಸಿ ರಾಜ್ಯಸಭೆ ಮಾಜಿ ಸದಸ್ಯೆ ಮೌಸಂ ಬೆನಝೀರ್ ನೂರ್(ಮಾಲತಿಪುರ) ಕಣಕ್ಕೆ ಇಳಿಯಲಿದ್ದಾರೆ. ನೂರ್, ಜನವರಿ 2026ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಕಾಂಗ್ರೆಸ್ ಮಾಲ್ಡಾ-ಮುರ್ಷಿದಾಬಾದ್ ಹಾಗೂ ಕೇಂದ್ರ ಬಂಗಾಳದಲ್ಲಿ ಪ್ರಭಾವ ಹೊಂದಿದೆ. ಸಮಸ್ಯೆ ಏನೆಂದರೆ, ದೇಶದೆಲ್ಲೆಡೆ ಬಿಜೆಪಿ ಮತಗಳು ಭದ್ರವಾಗಿವೆ ಮತ್ತು ಬೇರೆಬೇರೆ ಸಮುದಾಯಗಳನ್ನು ಆಕರ್ಷಿಸಿದಂತೆ, ಮತ ಗಳಿಕೆ ಹೆಚ್ಚುತ್ತಿದೆ. ಆದರೆ, ಉಳಿದ ಪಕ್ಷಗಳು ಪರಸ್ಪರ ಬಡಿದಾಡಿಕೊಳ್ಳುತ್ತಿವೆ.
ಖೇಲಾ ಹೋಬೆ ಮತ್ತು ರಾಜಭವನ
ಚುನಾವಣೆ ಆಯೋಗವು ಮಾರ್ಚ್ 16, 2026ರ ಮಧ್ಯರಾತ್ರಿಯಲ್ಲಿ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕ, ಕೋಲ್ಕತಾ ನಗರ ಪೊಲೀಸ್ ಆಯುಕ್ತ, 19 ಉನ್ನತ ಪೊಲೀಸ್ ಹಾಗೂ 13 ಚುನಾವಣೆ ಅಧಿಕಾರಿಗಳನ್ನು ಬದಲಿಸಿತು. ಬಳಿಕ ಮಾರ್ಚ್ 30ರಂದು 173 ಠಾಣೆಗಳ ಇನ್‌ಸ್ಪೆಕ್ಟರ್‌ಗಳು, ಕೋಲ್ಕತಾ ನಗರದ 31 ಇನ್‌ಸ್ಪೆಕ್ಟರ್‌ಗಳು ಮತ್ತು 31 ಅಧಿಕಾರಿಗಳನ್ನು ವರ್ಗಾವಣೆ ಮಾಡಿತು. ಯಾರನ್ನು ವರ್ಗಾವಣೆ ಮಾಡಬೇಕು ಮತ್ತು ಅವರ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎಂಬುದು ಮೊದಲೇ ನಿರ್ಧಾರವಾಗಿದೆ. ಸಂವಿಧಾನವು ಆಯೋಗಕ್ಕೆ ಚುನಾವಣೆ ಮತಪಟ್ಟಿ ಸಿದ್ಧತೆ ಹಾಗೂ ಎಲ್ಲ ಚುನಾವಣೆಗಳನ್ನು ನಡೆಸುವ ಅಧಿಕಾರ ನೀಡಿದೆ. ಮಾದರಿ ಶಿಷ್ಟಾಚಾರ ಸಂಹಿತೆ ಜಾರಿಗೊಂಡ ತಕ್ಷಣ ಈ ಅಧಿಕಾರ ಪ್ರಾಪ್ತವಾಗುತ್ತದೆ. ರಾಷ್ಟ್ರಪತಿ/ರಾಜ್ಯಪಾಲರು ಚುನಾವಣೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಒದಗಿಸಬೇಕಾಗುತ್ತದೆ. ಆದರೆ, ಆಯೋಗ ಇದೇ ಮೊದಲ ಬಾರಿಗೆ ರಾಜ್ಯವೊಂದರ ಇಡೀ ಅಧಿಕಾರಶಾಹಿಯನ್ನು ಬದಲಿಸಿದೆ. ಟಿಎಂಸಿ ಇದನ್ನು ಸಂಸತ್ತಿನಲ್ಲಿ ಪ್ರಶ್ನಿಸಿದರೂ ಪ್ರಯೋಜನ ಆಗಲಿಲ್ಲ.
ಎನ್.ಆರ್. ರವಿ ಆಗಮನದಿಂದ ಚುನಾವಣೆ ಆಟದಲ್ಲಿ ರಾಜಭವನವೂ ಭಾಗಿಯಾಗಲಿದೆ. ಐಪಿಎಸ್ ಅಧಿಕಾರಿ ರವಿ, ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಅವರ ಸಮೀಪವರ್ತಿ. 2018-19ರಲ್ಲಿ ಸುಮಾರು 9 ತಿಂಗಳು ದೋವಲ್ ಅವರ ಸಹಾಯಕ ಆಗಿದ್ದರು. ಬಳಿಕ ನಾಗಾಲ್ಯಾಂಡಿಗೆ ರಾಜ್ಯಪಾಲರಾಗಿ ನೇಮಿಸಲಾಯಿತು. ‘‘ಚುನಾವಣೆ ಹಿನ್ನೆಲೆಯಲ್ಲಿ ರವಿ ಅವರನ್ನು ನೇಮಿಸಲಾಗಿದೆ. ನೇಮಕದ ಬಗ್ಗೆ ನಮ್ಮನ್ನು ಸಂಪರ್ಕಿಸಿಲ್ಲ’’ ಎಂದು ಮಮತಾ ದೂರಿದ್ದರು. ರಾಜ್ಯಪಾಲರ ವರ್ಗಾವಣೆ ಮತ್ತು ನೇಮಕ ಆಡಳಿತಾತ್ಮಕ ವಿಷಯ. ಆದರೆ, ಈಗ ರಾಜಭವನಗಳು ರಾಜಕೀಯ ಹತಾರಗಳಾಗಿ ಬಳಕೆಯಾಗುತ್ತಿವೆ. ರವಿ ತಮಿಳುನಾಡಿನಲ್ಲಿ ಇದ್ದಾಗ, ಡಿಎಂಕೆ ಸರಕಾರಕ್ಕೆ ತಲೆನೋವಾಗಿದ್ದರು. ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕದೆ ದೀರ್ಘಕಾಲ ವಿಳಂಬ, ಅಧಿವೇಶನದಲ್ಲಿ ಮಾತನ್ನಾಡದೆ ನಿರ್ಗಮಿಸುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಸುಪ್ರೀಂ ಕೋರ್ಟ್‌ನ ತಪರಾಕಿ ಬಳಿಕವೂ ಅವರ ವರ್ತನೆ ಬದಲಾಗಲಿಲ್ಲ. ‘‘ರಾಜ್ಯದ ವ್ಯವಹಾರಗಳಲ್ಲಿ ಮೂಗು ತೂರಿಸುವ ಮೂಲಕ ಒಕ್ಕೂಟ ತತ್ವಕ್ಕೆ ಧಕ್ಕೆಯಾಗುತ್ತಿದೆ; ನಾವು ರಾಜ್ಯದ ಸ್ವಾಯತ್ತೆ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಕಾಪಾಡುತ್ತಿದ್ದೇವೆ’’ ಎಂದು ಡಿಎಂಕೆ ಸರಕಾರ ಹೇಳಿತು. ಕೇಂದ್ರ ಏನೇ ಸಮಜಾಯಿಷಿ ನೀಡಿದರೂ, ಚುನಾವಣೆ ಉದ್ದೇಶದಿಂದಲೇ ರವಿ ಅವರನ್ನು ಸಿ.ವಿ. ಆನಂದ ಬೋಸ್ ಜಾಗಕ್ಕೆ ಕೂರಿಸಲಾಗಿದೆ. ಉಪ ರಾಷ್ಟ್ರಪತಿ ಹುದ್ದೆಗೇರುವ ಮುನ್ನ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್ ಧನ್ಕರ್, ಟಿಎಂಸಿಗೆ ತಲೆನೋವಾಗಿದ್ದರು. ರಾಜ್ಯ ಸರಕಾರದ ವಿರುದ್ಧ ಸಂಕಥನವೊಂದನ್ನು ಸೃಷ್ಟಿಸಿದರು ಮತ್ತು ಇದರಿಂದ ಬಿಜೆಪಿ ನಾಟಕೀಯವಾಗಿ ಬೆಳೆಯಿತು. ರವಿ ನೇಮಕವು ವಿರೋಧಪಕ್ಷಗಳ ಅಧಿಕಾರವಿರುವ ರಾಜ್ಯಗಳಲ್ಲಿ ರಾಜಭವನ ವನ್ನು ಬಳಸಿಕೊಳ್ಳುವ ಬಿಜೆಪಿ ಕಾರ್ಯನೀತಿಯ ಮುಂದುವರಿಕೆ. ಕೇಂದ್ರ-ರಾಜ್ಯಗಳ ಸಂಬಂಧ ಕುರಿತು ಅಧ್ಯಯನ ನಡೆಸಿದ್ದ ನ್ಯಾ.ಸರ್ಕಾರಿಯಾ ಆಯೋಗವು ರಾಜ್ಯಪಾಲರ ನೇಮಕಕ್ಕೆ ಮುನ್ನ ಸಂಬಂಧಿಸಿದ ಮುಖ್ಯಮಂತ್ರಿಯನ್ನು ಕೇಳಬೇಕು ಎಂದು 1980ರಲ್ಲಿ ಶಿಫಾರಸು ಮಾಡಿತ್ತು; ಈ ಶಿಫಾರಸು ಯಾರಿಗೂ ನೆನಪಿದ್ದಂತೆ ಕಾಣುತ್ತಿಲ್ಲ.
ಆರೆಸ್ಸೆಸ್ ಮತ್ತು ಅಸ್ಮಿತೆಯ ಪ್ರಶ್ನೆ
ಬಿಹಾರದ ಚುನಾವಣೆಯಲ್ಲಿ ಜಯ ಗಳಿಸಿದ ಬಳಿಕ ಆರೆಸ್ಸೆಸ್ ಬಂಗಾಳದೆಡೆಗೆ ದೃಷ್ಟಿ ಹರಿಸಿತು. ಸಂಘಟನೆ ಕಾರ್ಯಕರ್ತರು ರಾಜ್ಯದ ಹಳ್ಳಿ, ಪಟ್ಟಣ ಮತ್ತು ನೆರೆಹೊರೆಯಲ್ಲಿ ನಿಶ್ಯಬ್ದವಾಗಿ ಬ್ಯಾನರ್, ಮೈಕ್ರೋಫೋನ್ ಇಲ್ಲದೆ ‘ಜಾಗರಣ್’ ಎಂಬ ಆಂದೋಲನ ಆರಂಭಿಸಿದರು. ಈ ಆಂದೋಲನದ ಅಂತರಂಗದಲ್ಲಿ ಇರುವುದು-ಹಿಂದೂಗಳು ಅಪಾಯ ಎದುರಿಸುತ್ತಿದ್ದಾರೆ. ಅವರನ್ನು ನಿರ್ಲಕ್ಷಿಸಲಾಗುತ್ತಿದೆ ಮತ್ತು ಅವರು ಒಟ್ಟಾಗಬೇಕಿದೆ ಎಂಬ ನರೇಟಿವ್.
ಬಂಗಾಳದಲ್ಲಿ ರಾಷ್ಟ್ರೀಯವಾದ-ಹಿಂದುತ್ವ ರಾಜಕೀಯಕ್ಕೆ ದೀರ್ಘ ಇತಿಹಾಸ ಇದೆ. ಆದರೆ, ಈಗ ಅದು ವಿಸ್ತರಿಸುತ್ತಿರುವ ರೀತಿ ಭಿನ್ನವಾಗಿದೆ. ‘ಜಾಗರಣ್’ನಲ್ಲಿ ಬಾಜಾಭಜಂತ್ರಿ ಇರುವುದಿಲ್ಲ; ನಿಮ್ಮ ಅಭಿಪ್ರಾಯ ಬದಲಿಸಿಕೊಳ್ಳಿ ಎಂದು ಒತ್ತಡ ಹೇರುವುದಿಲ್ಲ; ಭಯವನ್ನು ಏಕಾಏಕಿ ತುಂಬುವುದಿಲ್ಲ. ತನ್ನನ್ನು ಸಮಾಜ-ಸಮುದಾಯ ಗುರುತಿಸಬೇಕು ಎನ್ನುವುದು ಮಾನವ ಸಹಜ ಪ್ರವೃತ್ತಿ. ಸಮಾಜಗಳು ಹೇಗೆ ತಮಗೆ ಗೊತ್ತಿಲ್ಲದಂತೆ ಹೊರತಾಗಿಸುವಿಕೆಯೆಡೆಗೆ ಬಾಗುತ್ತವೆ ಎಂದು ಹಲವು ಚಿಂತಕರು ಅರ್ಥೈಸಿದ್ದಾರೆ; ತತ್ವಶಾಸ್ತ್ರಜ್ಞ ಥಿಯೋಡೋರ್ ಅಡಾರ್ನೋ, ‘‘ಸರ್ವಾಧಿಕಾರಿ ರಾಜಕೀಯವು ಬಹಿರಂಗ ದ್ವೇಷ ಇಲ್ಲವೇ ಹಿಂಸೆಯಿಂದ ಆರಂಭವಾಗುವುದು ಅಪರೂಪ. ಅದು ಭಾವನಾತ್ಮಕ ಅಭಿಪ್ರಾಯಗಳ ಮೂಲಕ ಬೆಳೆಯುತ್ತದೆ; ಅಭಿಪ್ರಾಯಭೇದಕ್ಕೆ ಅಸಹನೆ, ಕಠಿಣ ಆಡಳಿತದ ಅಪೇಕ್ಷೆ ಮತ್ತು ಕೆಲವು ಸಾಮಾಜಿಕ ಗುಂಪುಗಳನ್ನು ದೂರಲಾಗುತ್ತದೆ. ಜನರ ಮೇಲೆ ಅಭಿಪ್ರಾಯಗಳನ್ನು ಹೇರುವ ಬದಲು ಅದರೆಡೆಗೆ ತಿರುಗುವಂತೆ ತರಬೇತಿ ನೀಡಲಾಗುತ್ತದೆ’’ ಎಂದು ವಿಶ್ಲೇಷಿಸಿದ್ದಾರೆ.
‘ಜಾಗರಣ್’ ಮೂಲಕ ಸಾಂಸ್ಕೃತಿಕ ಅಸ್ಮಿತೆ ಅಪಾಯದಲ್ಲಿದೆ ಮತ್ತು ರಾಜಕೀಯ ಕ್ರಿಯೆಗಳು ಸ್ವರಕ್ಷಣೆಯ ಇನ್ನೊಂದು ರೂಪ ಎಂದು ಒಪ್ಪಿಸಲಾಗುತ್ತಿದೆ. ಇದು ಕಾಲಕ್ರಮೇಣ ಅವಕಾಶ ಗಳನ್ನು ಹಾಗೂ ಒಳಗೊಳ್ಳುವಿಕೆಯನ್ನು ಹೃಸ್ವಗೊಳಿಸಿ, ಯಾರು ಲೆಕ್ಕಕ್ಕಿದ್ದಾರೆ ಹಾಗೂ ಯಾರು ಲೆಕ್ಕಕ್ಕಿಲ್ಲ ಎಂದು ನಿರ್ಧರಿಸಲು ಬಳಕೆಯಾಗುತ್ತದೆ. ಈ ಕಾರ್ಯತಂತ್ರದ ಸಾಂಸ್ಕೃತಿಕ ಆಯಾಮ ಕೂಡ ಮುಖ್ಯ. ಹಬ್ಬ-ಧಾರ್ಮಿಕ ಆಚರಣೆಗಳು ರಾಜಕೀಯ ಸಂದೇಶವನ್ನು ಪರೋಕ್ಷವಾಗಿ ರವಾನಿಸುತ್ತವೆ; ಜಾತ್ರೆ-ಮೇಳಗಳು ಏಕತೆ ಮತ್ತು ಪ್ರಾಬಲ್ಯದ ಅಭಿವ್ಯಕ್ತಿಯಾಗಿ ಬಿಂಬಿತವಾಗುತ್ತವೆ. ವ್ಯಕ್ತಿ ಸಮಾಜ-ಸಮುದಾಯದಲ್ಲಿ ಗುರುತಿಸಿಕೊಳ್ಳಲು ಇದರಲ್ಲಿ ಪಾಲ್ಗೊಳ್ಳುತ್ತಾನೆ. ಇದನ್ನೆಲ್ಲ ಯಾರೂ ಹೇರುತ್ತಿಲ್ಲ; ಈ ವಿಷವೃತ್ತದಲ್ಲಿ ಸಿಲುಕುವವರು ಭಾವನಾತ್ಮಕ ತೃಪ್ತಿ ಪಡೆಯುತ್ತಾರೆ. ಸಮಕಾಲೀನ ಮಾಧ್ಯಮ ಈ ಪ್ರಕ್ರಿಯೆಯನ್ನು ಆಳವಾಗಿಸುತ್ತದೆ; ಸಮ್ಮತಿಯನ್ನು ಹೇಗೆ ರೂಪುಗೊಳಿಸಲಾಗುತ್ತದೆ ಎಂಬುದನ್ನು ನೋಮ್ ಚೋಮ್‌ಸ್ಕಿ ಮತ್ತು ಎಡ್ವರ್ಡ್ ಎಸ್.ಹರ್ಮನ್ ವಿಷದಪಡಿಸಿದ್ದಾರೆ. ಸಮಾಜವಿಜ್ಞಾನಿಗಳ ಪ್ರಕಾರ, ಇಂಥ ರಾಜಕಾರಣ ತತ್‌ಕ್ಷಣ ಹಿಂಸೆಗೆ ಕಾರಣವಾಗುವುದಿಲ್ಲ; ಬದಲಿಗೆ, ನೈತಿಕ ನಿರೀಕ್ಷೆಗಳನ್ನು ಮರುರೂಪಿಸುತ್ತದೆ. ಅಸ್ಮಿತೆ ರಾಜಕೀಯದಿಂದ ಜನರು ಈ ಹಿಂದೆ ಪ್ರಶ್ನಿಸುತ್ತಿದ್ದ ಘಟನೆ-ಪ್ರಕ್ರಿಯೆಗಳನ್ನು ಸಹಿಸಿಕೊಳ್ಳಲು ಆರಂಭಿಸುತ್ತಾರೆ. ಬಂಗಾಳ ಹಿಂದಿನಿಂದಲೂ ಚರ್ಚೆ ಮತ್ತು ಸೈದ್ಧಾಂತಿಕತೆಯನ್ನು ಗೌರವಿಸುತ್ತ ಬಂದಿದೆ. ಈ ಚುನಾವಣೆ ಯಾರು ಗೆಲ್ಲುತ್ತಾರೆ ಎನ್ನುವುದಕ್ಕೆ ಸೀಮಿತವಾಗಿಲ್ಲ; ಪ್ರಾದೇಶಿಕ ಅಸ್ಮಿತೆ, ಉಪರಾಷ್ಟ್ರೀಯತೆ, ಭಾಷಿಕ ಅಸ್ಮಿತೆ ಮತ್ತು ಸ್ಥಳೀಯತೆಯನ್ನು ನಿರ್ಧರಿಸಲಿದೆ.
ಯಾರು ಹಿತವರು?
ಟಿಎಂಸಿಗೆ ನಗದು ವರ್ಗಾವಣೆ(ಡಿಬಿಟಿ) ಸೇರಿದಂತೆ ಹಲವು ಜನಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಬೆಂಬಲ ಇದೆ. ಅದು ಉದ್ಯೋಗ ಸೃಷ್ಟಿ, ವಲಸೆ ಸಮಸ್ಯೆ ಮತ್ತು ರಾಜ್ಯದಿಂದ ಕೈಗಾರಿಕೆಗಳ ಪಲಾಯನ ಕುರಿತು ಮಾತನ್ನಾಡುತ್ತಿಲ್ಲ; ಬದಲಿಗೆ, ಬಿಜೆಪಿಯನ್ನು ‘ಕೌ ಬೆಲ್ಟ್ ಪಾರ್ಟಿ’; ಅಧಿಕಾರಕ್ಕೆ ಬಂದರೆ ಸಸ್ಯಾಹಾರವನ್ನು ಹೇರುತ್ತದೆ ಎಂದು ದೂರುತ್ತ ನರೇಟಿವ್ ಕಟ್ಟಿದೆ. ಈ ಪಡಿಯಚ್ಚು ತೊಡೆದುಹಾಕಲು ಬಿಜೆಪಿ ಹೆಣಗಾಡುತ್ತಿದೆ; ಬಿಧಾನ್‌ನಗರ ಬಿಜೆಪಿ ಅಭ್ಯರ್ಥಿ ಡಾ.ಶರದ್ವತ್ ಮುಖೋಪಾಧ್ಯಾಯ ‘ಕಾಟ್ಲಾ’ ಮೀನು ಹಿಡಿದುಕೊಂಡು ಪ್ರಚಾರ ಕೈಗೊಂಡಿದ್ದು ಇದೇ ಕಾರಣದಿಂದ. ರಾಜ್ಯದ ಭಾಷಿಕ-ಸಾಂಸ್ಕೃತಿಕ ವೈವಿಧ್ಯದ ನಿರಾಕರಣೆ, ಎಸ್‌ಐಆರ್ ಮೂಲಕ ಮತದಾರರ ಹಕ್ಕುಗಳಿಗೆ ಧಕ್ಕೆ, ರಾಜಭವನ-ಚುನಾವಣೆ ಆಯೋಗ ಮತ್ತು ಸಿಬಿಐ-ಈ.ಡಿ.-ಆದಾಯ ತೆರಿಗೆ ಇತ್ಯಾದಿ ಸಂಸ್ಥೆಗಳ ನೆರವಿನಿಂದ ಚುನಾವಣೆಯನ್ನು ನಿರ್ವಹಿಸುತ್ತದೆ ಎಂಬ ಆರೋಪ ಬಿಜೆಪಿ ಮೇಲಿದೆ.
ರಾಜ್ಯದೊಳಗೆ ಬಾಂಗ್ಲಾ ದೇಶೀಯರು ಸೇರಿದಂತೆ 60 ಲಕ್ಷ ಮಂದಿ ನುಸುಳಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ‘ಟಿಎಂಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಅಕ್ರಮ ನುಸುಳುಕೋರರನ್ನು ಹೊರಹಾಕಲು ಎಸ್‌ಐಆರ್ ಮಾಡಲಾಗಿದೆ’ ಎಂದು ಬಿಜೆಪಿ ಹೇಳುತ್ತಿದೆ. ನುಸುಳುವಿಕೆಯನ್ನು ತಡೆಯುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜಂಟಿ ಜವಾಬ್ದಾರಿ. ಇದರಲ್ಲಿ ಗೃಹ ಮಂತ್ರಾಲಯದ ಹೊಣೆಗಾರಿಕೆಯೇ ಹೆಚ್ಚು. ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ ಎನ್ನುವ ಸಂಕಥನ ಕೂಡ ಸುಳ್ಳು. 121 ಕೋಟಿ ಜನರಿರುವ ದೇಶದಲ್ಲಿ ಹಿಂದೂಗಳ ಸಂಖ್ಯೆ 96.63 ಕೋಟಿ(ಶೇ.79.8); ಮುಸ್ಲಿಮರು ಶೇ.14.2 ಮತ್ತು ಇತರರು ಶೇ.6(2011ರ ಜನಗಣತಿ ಪ್ರಕಾರ). ಪಶ್ಚಿಮ ಬಂಗಾಳದ ಒಟ್ಟು ಜನಸಂಖ್ಯೆ 9.13 ಕೋಟಿಯಲ್ಲಿ ಮುಸ್ಲಿಮರ ಸಂಖ್ಯೆ 2.47 ಕೋಟಿ(ಶೇ.27). ಹೀಗಿರುವಾಗ ದೇಶ ಇಲ್ಲವೇ ಬಂಗಾಳದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವುದು ಹೇಗೆ? ಆದರೆ, ಈ ಸುಳ್ಳನ್ನು ಮತ್ತೆಮತ್ತೆ ಹೇಳಲಾಗುತ್ತಿದೆ.
ಪ್ರಜಾಪ್ರಭುತ್ವಗಳು ರಾತ್ರೋರಾತ್ರಿ ಕುಸಿಯುವುದು ಅಪರೂಪ. ಸಮಾಜಗಳು ನೈತಿಕ ಎಲ್ಲೆಕಟ್ಟುಗಳ ಕುಸಿತಕ್ಕೆ ಒಗ್ಗಿಕೊಂಡಾಗ ಮತ್ತು ಎಲ್ಲವೂ ರಾಜಕೀಯ ಪ್ರಾಜೆಕ್ಟ್ ಎಂದು ಗುರುತಿಸದೆ ಇದ್ದಾಗ ಪ್ರಜಾತಂತ್ರ ಸವೆಯುತ್ತದೆ. ಬಿಜೆಪಿ ತಂತ್ರವನ್ನು ಅಂಥದ್ದೇ ಪ್ರತಿತಂತ್ರದಿಂದ ಯಶಸ್ವಿಯಾಗಿ ಮಣಿಸಿರುವ ಮಮತಾ ಬ್ಯಾನರ್ಜಿ ಅವರ ‘ಆಟ’ ಈ ಚುನಾವಣೆಯಲ್ಲಿ ನಡೆಯುವುದೇ ಎಂಬುದನ್ನು ಕಾದುನೋಡಬೇಕಿದೆ.







