ಹೊಸ ಕಾರ್ಮಿಕ ಸಂಹಿತೆಗಳಿಂದ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಸಿಗುವುದೇ?

ಕಳೆದ 5 ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಖಾಸಗಿ ಕಂಪೆನಿಗಳು ಬಾಗಿಲು ಮುಚ್ಚಿವೆ. ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ಹುಸಿಯಾಗಿದೆ. ಕಟ್ಟು ಜಾಣ್ಮೆಯ ಜಗತ್ತಿನಲ್ಲಿ ಉದ್ಯೋಗ ನಷ್ಟದ ಭೀತಿ ಕಾಡುತ್ತಿದೆ. ಇಂಥ ಸನ್ನಿವೇಶದಲ್ಲಿ ನೂತನ ಸಂಹಿತೆಗಳು ರಂಗ ಪ್ರವೇಶಿಸಿವೆ; ಇವು ಕಾನೂನು ಆಗುತ್ತವೆ ಕೂಡ. ಏಕೆಂದರೆ, ಪ್ರತಿಪಕ್ಷದ ಸದಸ್ಯರನ್ನು ಸಾರಾಸಗಟಾಗಿ ಅಮಾನತುಗೊಳಿಸಿ ಮಸೂದೆಗಳನ್ನು ಅಂಗೀಕರಿಸಿದ ಖ್ಯಾತಿ ಈ ಸರಕಾರದ್ದು. ಸಂಧಾನದಲ್ಲಿ ನಂಬಿಕೆ ಇಲ್ಲದೆ, ಎಲ್ಲವನ್ನೂ ಮೇಲಿನಿಂದ ಹೇರುತ್ತದೆ ಮತ್ತು ಮೂಗು ಹಿಡಿದು ಒಪ್ಪಿಸಲಾಗುತ್ತದೆ. ಹಾಗಾಗಿ ಇದರಿಂದ ಹಾನಿಗೊಳಗಾಗುವ ದುಡಿಯುವ ವರ್ಗ ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕಿದೆ.
ಒಕ್ಕೂಟ ಸರಕಾರವು 29 ಕಾರ್ಮಿಕ ಕಾನೂನುಗಳನ್ನು ಸಂಯೋಜಿಸಿ, ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಪರಿಚಯಿಸಿದೆ. ವೇತನಗಳ ಸಂಹಿತೆ (2019)ಯು ವೇತನ ಪಾವತಿ ಕಾಯ್ದೆ 1936, ಕನಿಷ್ಠ ವೇತನ ಕಾಯ್ದೆ 1948, ಬೋನಸ್ ಪಾವತಿ ಕಾಯ್ದೆ 1965 ಹಾಗೂ ಸಮಾನ ಸಂಭಾವನೆ ಕಾಯ್ದೆ 1976ರ ಕ್ರೋಡೀಕರಣ. ಇವುಗಳೊಟ್ಟಿಗೆ ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಸುರಕ್ಷೆ ಸಂಹಿತೆ 2020 ಮತ್ತು ಉದ್ಯೋಗಜನ್ಯ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಒಎಸ್‌ಎಚ್‌ಡಬ್ಲ್ಯುಸಿ ಸಂಹಿತೆಯನ್ನು ಜಾರಿಗೊಳಿಸಿದೆ. 32 ರಾಜ್ಯ-ಕೇಂದ್ರಾಡಳಿತ ಪ್ರದೇಶಗಳು ಈ ಸಂಬಂಧ ಕರಡು ನಿಯಮವನ್ನು ಪ್ರಕಟಿಸಿವೆ ಮತ್ತು ಲಕ್ಷ ದ್ವೀಪ ಹಾಗೂ ಪಶ್ಚಿಮ ಬಂಗಾಳ ಯಾವುದೇ ಸಂಹಿತೆಯನ್ನು ಪ್ರಕಟಿಸಿಲ್ಲ. ತಾನು ಸಂಹಿತೆಯನ್ನು ಜಾರಿಗೊಳಿಸುವುದಿಲ್ಲ ಎಂದು ಕೇರಳ ಹೇಳಿದೆ. ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಕೇಂದ್ರದ ಏಕಪಕ್ಷೀಯ ನಿಲುವನ್ನು ಖಂಡಿಸಿವೆ. ಕರಡಿಗೆ ಪ್ರತಿಕ್ರಿಯಿಸಲು 45 ದಿನ ಕಾಲಾವಕಾಶ ನೀಡಲಾಗಿದೆ. ಆನಂತರ ತಿದ್ದುಪಡಿಗಳೊಂದಿಗೆ ಮರುಪ್ರಕಟಣೆ ಹೊರಡಿಸಲಾಗುತ್ತದೆ. ಉದ್ಯಮ ಸಂಹಿತೆಯನ್ನು ಸ್ವಾಗತಿಸಿದ್ದರೆ, ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ.
ನೇಮಕ ಪತ್ರ ಕಡ್ಡಾಯಗೊಳಿಸಿರುವುದು, ಗಿಗ್ ಮತ್ತು ಪ್ಲಾಟ್‌ಫಾರ್ಮ್ ನೌಕರರು ಸೇರಿದಂತೆ ಎಲ್ಲರಿಗೂ ಪಿಎಫ್, ಇಎಸ್‌ಐಸಿ, ವಿಮೆ ಮತ್ತಿತರ ಭದ್ರತೆಗಳ ವಿಸ್ತರಣೆ, ಎಲ್ಲ ಕಾರ್ಮಿಕರಿಗೂ ಕನಿಷ್ಠ ಮತ್ತು ಸಕಾಲಿಕ ವೇತನ, 40 ವರ್ಷ ದಾಟಿದ ಎಲ್ಲರಿಗೂ ವಾರ್ಷಿಕ ಆರೋಗ್ಯ ತಪಾಸಣೆ, ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಮತ್ತು ಎಲ್ಲ ವಲಯಗಳಲ್ಲಿ ಕೆಲಸ ಮಾಡಲು ಅವಕಾಶ, ಲಿಂಗ ತಟಸ್ಥ ವೇತನ ಮತ್ತು ಉದ್ಯೋಗಾವಕಾಶ, ತೃತೀಯ ಲಿಂಗಿಗಳ ತಾರತಮ್ಯಕ್ಕೆ ನಿರ್ಬಂಧ ಹಾಗೂ ಉದ್ಯಮಗಳಿಗೆ ದೇಶಾದ್ಯಂತ ‘ಒಂದು ನೋಂದಣಿ, ಒಂದು ಪರವಾನಿಗೆ’ ನೀಡುವಿಕೆಯನ್ನು ಸಂಹಿತೆ ಒಳಗೊಂಡಿದೆ. ಸಂಹಿತೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ, ಕಾನ್ಫೆಡೆರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್) ಸ್ವಾಗತಿಸಿದ್ದರೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್‌ಎಂಇ)ದ ಪ್ರತಿನಿಧಿಗಳು ಪ್ರತಿಕ್ರಿಯಿಸಿಲ್ಲ. ಆದರೆ, ಭಾರತೀಯ ಉದ್ಯಮಿಗಳ ಸಂಘಟನೆ(ಅಸೋಸಿಯೇಷನ್ ಆಫ್ ಇಂಡಿಯನ್ ಎಂಟ್ರೆಪ್ರೆನರ್, ಎಐಇ)ಯು ಎಂಎಸ್‌ಎಂಇಗಳ ಕಾರ್ಯನಿರ್ವಹಣೆ ವೆಚ್ಚ ಹೆಚ್ಚಲಿದೆ; ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ವಹಿವಾಟಿಗೆ ಅಡೆತಡೆ ಆಗಲಿದೆ ಎಂದು ಹೇಳಿದೆ. ಭಾರತೀಯ ಮಜ್ದೂರ್ ಸಂಘ(ಬಿಎಂಎಸ್) ಹೊರತುಪಡಿಸಿ, ಉಳಿದ ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ. ಇವು ಸಂಹಿತೆಯನ್ನು ವಿರೋಧಿಸಿ 2019, 2020, 2022, 2023 ಮತ್ತು ಜುಲೈ 9, 2025ರಲ್ಲಿ ಪ್ರತಿಭಟನೆ ನಡೆಸಿದ್ದವು. ಕಾರ್ಮಿಕ ವಿಷಯ ಅನುಷಂಗಿಕ ಪಟ್ಟಿಯಲ್ಲಿದ್ದು, ರಾಜ್ಯ ಮತ್ತು ಕೇಂದ್ರ ಎರಡೂ ಕಾಯ್ದೆ ರೂಪಿಸಬಹುದು. ಸಂಹಿತೆಯು ರಾಜ್ಯ ಸರಕಾರಗಳ ವೇತನ ನಿಗದಿಗೊಳಿಸುವಿಕೆಯ ಸ್ವಾತಂತ್ರ್ಯವನ್ನು ಕಸಿದು ಕೊಂಡಿದೆ. ರಾಷ್ಟ್ರದೆಲ್ಲೆಡೆ ಒಂದೇ ವೇತನ ಎನ್ನುವುದು ಈ ಹಿಂದೆ ಚಾಲ್ತಿಗೊಳಿಸಿದ್ದ ಪರಿಕಲ್ಪನೆಯಾದರೂ, ಜಾರಿಗೆ ಬಂದಿರಲಿಲ್ಲ. ಶೇ.93ರಷ್ಟು ನೌಕರರು ಅನೌಪಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಯಾವುದೇ ಸಾಮಾಜಿಕ ಭದ್ರತೆ ಇಲ್ಲದ ಅವರಿಗೆ ಸಂಹಿತೆಯು ರಕ್ಷಣೆಯ ಖಾತ್ರಿ ನೀಡುವುದಿಲ್ಲ. ಕಾರ್ಖಾನೆಗೆ ಅನುಮತಿ ಪಡೆಯಲು ಇರಬೇಕಾದ ಕಾರ್ಮಿಕರ ಸಂಖ್ಯೆಯ ಹೆಚ್ಚಳದಿಂದ, ಗುತ್ತಿಗೆ ಕಾರ್ಮಿಕರು ಹೆಚ್ಚಲಿದ್ದಾರೆ ಎಂದು ದೂರಿವೆ.
ಕನಿಷ್ಠ ವೇತನ-ಭರವಸೆಯೇನು ಮತ್ತು ಕಳೆದುಕೊಳ್ಳುವುದೇನು?
ವೇತನ ಸಂಹಿತೆ 2019 ಕನಿಷ್ಠ ವೇತನವನ್ನು ನಿಗದಿತ ಉದ್ಯೋಗಕ್ಕೆ ಸೀಮಿತಗೊಳಿಸದೆ ಎಲ್ಲ ಕಾರ್ಮಿಕರಿಗೂ ವಿಸ್ತರಿಸುತ್ತದೆ; ರಾಜ್ಯಗಳು ಒಕ್ಕೂಟ ಸರಕಾರ ನಿಗದಿಗೊಳಿಸಿದ ರಾಷ್ಟ್ರೀಯ ವೇತನಕ್ಕಿಂತ ಕಡಿಮೆ ವೇತನ ನೀಡುವಂತಿಲ್ಲ. ಕೌಶಲ ಮಟ್ಟ, ಕೆಲಸದ ಪ್ರಕಾರ, ಕೆಲಸದಿಂದ ಆಗಬಹುದಾದ ಸಮಸ್ಯೆಗಳು ಮತ್ತು ಮಹಾನಗರ, ಮಹಾನಗರವಲ್ಲದ ಪ್ರದೇಶ ಅಥವಾ ಗ್ರಾಮೀಣ ಪ್ರದೇಶಗಳ ಆಧಾರದ ಮೇಲೆ ಕನಿಷ್ಠ ವೇತನ ನಿರ್ಧರಿಸಬೇಕು. ವೇತನವನ್ನು ಐದು ವರ್ಷದೊಳಗೆ ಪರಿಷ್ಕರಿಸಬೇಕು ಎಂದು ಸಂಹಿತೆ ಹೇಳುತ್ತದೆ.
ಸಂಹಿತೆಯು ಕಾರ್ಮಿಕರಿಗೆ ಭದ್ರತೆ ನೀಡಲಿದೆ ಎಂದು ಸರಕಾರ ಹೇಳಿಕೊಂಡಿದೆ. ಆದರೆ, ಕನಿಷ್ಠ ವೇತನದ ನಿಬಂಧನೆಗಳು ಕಾನೂನು ‘ಉದ್ಯಮ’ ಎಂದು ಗುರುತಿಸುವ ಕಂಪೆನಿಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ಅನ್ವ ಯಿಸುತ್ತವೆ. ಉದ್ಯಮ ಎಂದರೆ ವ್ಯಾಪಾರ ಅಥವಾ ಉತ್ಪಾದನೆ ನಡೆಯುವ ಸ್ಥಳ ಎಂದು ಸಂಹಿತೆ ವ್ಯಾಖ್ಯಾನಿಸುವುದರಿಂದ, ಗೃಹಾಧರಿತ ವೃತ್ತಿಗಳು ಮತ್ತು ಕೃಷಿಗೆ ಇದು ಅನ್ವಯಿಸುವುದಿಲ್ಲ. ಗೃಹಾಧರಿತ ವೃತ್ತಿಗಳಲ್ಲಿ ಉದ್ಯೋಗದಾತ-ಉದ್ಯೋಗಿ ಸಂಬಂಧ ಇರುವುದಿಲ್ಲ. ಕುಟುಂಬಗಳು ನಡೆಸುವ ಉದ್ಯಮ ಅಥವಾ ಕೃಷಿಯಲ್ಲೂ ಇದೇ ಸಮಸ್ಯೆ ಇರಲಿದೆ. ಇವರೆಲ್ಲರೂ ಕನಿಷ್ಠ ವೇತನ ವ್ಯಾಪ್ತಿಯಿಂದ ಹೊರಗೆ ಉಳಿಯುವ ಸಾಧ್ಯತೆ ಇದೆ. ಸಂಹಿತೆಗಳು ವಲಸೆ ಕಾರ್ಮಿಕರು, ಸ್ವಉದ್ಯೋಗಿಗಳು ಸೇರಿದಂತೆ ಅನೌಪಚಾರಿಕ ವಲಯದ ಬಹುತೇಕ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆಯನ್ನು ವಿಸ್ತರಿಸಲು ವಿಫಲವಾಗಿವೆ ಎಂದು ಟೀಕೆ ವ್ಯಕ್ತವಾಗಿದೆ.
ಹಿಂದಿನ ಕಾನೂನು ಪ್ರತೀ ಉದ್ಯೋಗಕ್ಕೂ ಪ್ರತ್ಯೇಕ ಕನಿಷ್ಠ ವೇತನ ನಿಗದಿಪಡಿಸುತ್ತಿತ್ತು; ಕೆಲಸಕ್ಕೆ ಅಗತ್ಯವಾದ ನಿರ್ದಿಷ್ಟ ಕೌಶಲ, ಶ್ರಮ ಮತ್ತು ಅಪಾಯಗಳನ್ನು ಆಧರಿಸಿ ವೇತನ ನಿಗದಿಯಾಗುತ್ತಿತ್ತು. ಇದರಿಂದ ಅಸಂಘಟಿತ ಕಾರ್ಮಿಕ ಮಾರುಕಟ್ಟೆಯಲ್ಲಿ ಉತ್ತಮ ವೇತನ ಲಭ್ಯವಾಗುವುದಲ್ಲದೆ, ಕಾರ್ಮಿಕರಿಗೆ ಸ್ವಲ್ಪಮಟ್ಟಿಗೆ ರಕ್ಷಣೆ ಸಿಗುತ್ತಿತ್ತು. ಹೊಸ ಸಂಹಿತೆಯಲ್ಲಿ ಒಕ್ಕೂಟ ಸರಕಾರವೇ ವೇತನ ನಿಗದಿಪಡಿಸುವುದರಿಂದ, ಕಾರ್ಮಿಕರಿಗೆ ಲಭ್ಯವಿದ್ದ ಚೌಕಾಶಿ ಅವಕಾಶ ಇಲ್ಲವಾಗುತ್ತದೆ ಮತ್ತು ಕಾರ್ಮಿಕರ ಸಂಘ/ಒಕ್ಕೂಟಗಳು ವೇತನಕ್ಕೆ ಸಂಬಂಧಿಸಿದಂತೆ ಒತ್ತಡ ಹೇರಲು ಆಗುವುದಿಲ್ಲ. ವೇತನವನ್ನು ನಿರ್ಧರಿಸುವುದು ಮಾರುಕಟ್ಟೆ. ಹೊಸ ಸಂಹಿತೆಯು ಮೂರು ಭೌಗೋಳಿಕ ಪ್ರದೇಶ (ಮಹಾನಗರ, ಮಹಾನಗರವಲ್ಲದ ನಗರಗಳು ಮತ್ತು ಗ್ರಾಮೀಣ ಪ್ರದೇಶ), ನಾಲ್ಕು ಕೌಶಲ ಮಟ್ಟ(ಕೌಶಲರಹಿತ, ಕೌಶಲವುಳ್ಳವರು, ಅರೆಕೌಶಲ ಮತ್ತು ಉನ್ನತ ಕೌಶಲವಿರುವವರು) ಮತ್ತು ಕೆಲಸದ ಪರಿಸ್ಥಿತಿ(ಉಷ್ಣತೆ, ಆರ್ದ್ರತೆ ಅಥವಾ ಹಾನಿಕರ ಪರಿಸರ) ಆಧರಿಸಿ, ಕನಿಷ್ಠ ವೇತನವನ್ನು ನಿರ್ಧರಿಸುತ್ತದೆ. ಆದರೆ, ‘ಹಾನಿಕರ ಪರಿಸರ’ವನ್ನು ಯಾರು ನಿರ್ಧರಿಸುತ್ತಾರೆ? ಕಾರ್ಖಾನೆ ಹಂತದಲ್ಲಿ ವಿವಿಧ ಕನಿಷ್ಠ ವೇತನವನ್ನು ಯಾರು ನಿರ್ಧರಿಸುತ್ತಾರೆ? ಹಿಂದಿನ ವ್ಯವಸ್ಥೆಯಲ್ಲಿ ಕಾರ್ಮಿಕ ತನಿಖಾಧಿಕಾರಿಗೆ ಕೆಲಸದ ಸ್ಥಳಗಳಿಗೆ ಭೇಟಿ ನೀಡಲು, ವೇತನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮತ್ತು ಕಾರ್ಮಿಕರಿಗೆ ಸರಿಯಾಗಿ ವೇತನ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಅಧಿಕಾರ ಇದ್ದಿತ್ತು. ಹೊಸ ಕಾನೂನಿನಲ್ಲಿ ಇದನ್ನು ವೆಬ್ ಆಧರಿತ ತಪಾಸಣೆ ಮತ್ತು ಸ್ವಯಂಪ್ರಮಾಣೀಕರಣದಿಂದ ಬದಲಿಸಲಾಗಿದೆ; ಉದ್ಯಮಿ ಸ್ವಯಂ ಪರಿಶೀಲನೆ ನಡೆಸಿ, ವರದಿ ನೀಡುತ್ತಾರೆ. ಇನ್‌ಸ್ಪೆಕ್ಟರ್ ಶಿರೋನಾಮೆಯನ್ನು ‘ಇನ್‌ಸ್ಪೆಕ್ಟರ್ ಕಮ್ ಫೆಸಿಲಿಟೇಟರ್’ ಎಂದು ಬದಲಿಸಲಾಗಿದೆ. ಉಲ್ಲಂಘನೆಗೆ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. ಸಂಹಿತೆಯು ‘ವ್ಯವಹಾರ ಸುರಳೀತ’(ಬಿಸಿನೆಸ್ ಆಸ್ ಯೂಶುಯಲ್)ಗೊಳಿಸುವ ಬದಲು ಹಲವು ಹಂತಗಳಲ್ಲಿ ಸರಕಾರದ ಮಧ್ಯಪ್ರವೇಶಕ್ಕೆ ದಾರಿ ಮಾಡಿಕೊಡಲಿದ್ದು, ಹೊಸ ಇನ್‌ಸ್ಪೆಕ್ಟರ್ ರಾಜ್‌ಗೆ ದಾರಿಮಾಡಿಕೊಡಲಿದೆ. ಕನಿಷ್ಠ ವೇತನಗಳ ವರ್ಗೀಕರಣವು ಕನಿಷ್ಠ ವೇತನದ ಮೂಲಭೂತ ಉದ್ದೇಶವನ್ನೇ ಹಾಳುಗೆಡವುತ್ತದೆ. ಹೆಚ್ಚು ಕಾರ್ಮಿಕರು ಅಗತ್ಯವಿರುವ ಔಪಚಾರಿಕ ಕ್ಷೇತ್ರದ ಉದ್ಯಮಗಳ ಬೆಳವಣಿಗೆಗೆ ಅಗತ್ಯವಿರುವ ವಾತಾವರಣವನ್ನು ಹೊಸ ಸಂಹಿತೆಗಳು ಸೃಷ್ಟಿಸುತ್ತವೆಯೇ ಎನ್ನುವುದು ಮುಖ್ಯ ಪ್ರಶ್ನೆ. ಪ್ರಾವಿಡೆಂಟ್ ಫಂಡ್ ನಿಯಮದಿಂದ ನಿರ್ವಹಣೆ ವೆಚ್ಚ ಹೆಚ್ಚುತ್ತದೆ ಎನ್ನುವುದು ಉದ್ಯಮದ ದೂರು. ಇದು ಹೊಸ ಉದ್ಯೋಗ ಸೃಷ್ಟಿ ಮೇಲೆ ವಿಪರಿಣಾಮ ಬೀರುತ್ತದೆ.
ಸಂಹಿತೆಯು ಕನಿಷ್ಠ ವೇತನದ ವ್ಯಾಪ್ತಿಯನ್ನು ವಿಸ್ತರಿಸುತ್ತದೆ; ಆದರೆ, ಕಾರ್ಮಿಕರು ಕಾನೂನು ನಿಗದಿಪಡಿಸಿದ ವೇತನ ಪಡೆಯುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಸೂಕ್ತ ವ್ಯವಸ್ಥೆಯಿಲ್ಲ; ಸಂಹಿತೆಯಲ್ಲಿನ ಬದಲಾವಣೆಗಳು ಕಾರ್ಮಿಕರ ರಕ್ಷಣೆ-ಭದ್ರತೆ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ವ್ಯಾಪ್ತಿ ವಿಸ್ತರಣೆಯಿಂದಷ್ಟೇ ರಕ್ಷಣೆ ಖಾತರಿ ಆಗುವುದಿಲ್ಲ. ಜಾರಿ ವ್ಯವಸ್ಥೆಯನ್ನು ಬಲಪಡಿಸಿಲ್ಲ; ಕನಿಷ್ಠ ವೇತನವನ್ನು ಹೇಗೆ ನಿಗದಿಪಡಿಸಲಾಗುತ್ತದೆ ಹಾಗೂ ಪರಿಷ್ಕರಿಸಲಾಗುತ್ತದೆ ಎಂಬ ಕುರಿತು ಸ್ಪಷ್ಟತೆ ಇಲ್ಲ. ಅನೌಪಚಾರಿಕ ಕ್ಷೇತ್ರದಲ್ಲಿ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಮತ್ತು ಕಾರ್ಮಿಕ ಸಂಘಟನೆಗಳ ಅನುಪಸ್ಥಿತಿಯಲ್ಲಿ ಕಾನೂನಿನ ಪರಿಣಾಮಕಾರಿ ಅನುಷ್ಠಾನ ಅತ್ಯಗತ್ಯ.
ಉದಾರೀಕರಣದಿಂದ ಕಾರ್ಮಿಕ ಸಂಘಟನೆಗಳು ಸಾಕಷ್ಟು ದುರ್ಬಲಗೊಂಡಿವೆ. ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಕಾರ್ಮಿಕರ ಸಂಘಟನೆಗಳ ಕಾರ್ಯನಿರ್ವಹಣೆ ಮೇಲೆ ಅನಗತ್ಯ ನಿರ್ಬಂಧ ಹೇರುತ್ತದೆ. ಸದಸ್ಯತ್ವದ ಮೇಲೆ ಮಿತಿ, ಸಂಘದ ಸದಸ್ಯರಲ್ಲದವರು ಅಧಿಕಾರ (ಅಧ್ಯಕ್ಷ, ಕಾರ್ಯದರ್ಶಿ ಇತ್ಯಾದಿ) ವಹಿಸಿಕೊಳ್ಳಲು ನಿರ್ಬಂಧ ಮತ್ತು ಉದ್ಯಮ-ಸರಕಾರದೊಡನೆ ಸಂಧಾನ ನಡೆಸಲು ಏಕೈಕ ಯೂನಿಯನ್/ಮಂಡಳಿಗೆ ಅವಕಾಶ ಎಂಬ ನಿಬಂಧನೆ ಅಳವಡಿಸಲಾಗಿದೆ. ಹರತಾಳದ ಹಕ್ಕುಗಳನ್ನು ಹಾಗೂ ನೋಟಿಸ್ ಅವಧಿಯಲ್ಲಿ ವೇತನ ಮತ್ತು ವಸತಿ ಬಾಡಿಗೆ ವೆಚ್ಚ(ಎಚ್‌ಆರ್‌ಎ) ಕಡಿತಗೊಳಿಸಲಾಗಿದೆ.
19 ರಾಜ್ಯಗಳು 300ಕ್ಕಿಂತ ಕಡಿಮೆ ಕಾರ್ಮಿಕರಿರುವ ಸಂಸ್ಥೆಗಳಿಗೆ ನೌಕರರನ್ನು ವಜಾಗೊಳಿಸುವ ಅಧಿಕಾರವನ್ನು ಈಗಾಗಲೇ ನೀಡಿವೆ. ಈ ಮೊದಲು ಇದು 100 ಆಗಿತ್ತು. ನೌಕರರ ಸಂಖ್ಯೆ ಹೆಚ್ಚಳದಿಂದ ವಿಪರಿಣಾಮ ಉಂಟಾಗಲಿದೆ; ಮೊದಲಿಗೆ, ಸಂಸ್ಥೆಗಳು ನೌಕರರನ್ನು ನೇಮಕ ಮಾಡಿಕೊಳ್ಳದೆ ಸಣ್ಣದಾಗಿಯೇ ಉಳಿಯಲು ಪ್ರಯತ್ನಿಸುತ್ತವೆ. ಉದ್ಯಮಗಳ ವಾರ್ಷಿಕ ಸಮೀಕ್ಷೆಯ ದತ್ತಾಂಶಗಳ ಪ್ರಕಾರ, ಶೇ.81ರಷ್ಟು ಕಂಪೆನಿಗಳು 100ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತವೆ. ಎರಡನೆಯದಾಗಿ, ನೇಮಕಕ್ಕೆ ಮಿತಿ ಹೇರುವಿಕೆಯಿಂದ ಹೆಚ್ಚು ಸಂಖ್ಯೆಯಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಸಂಸ್ಥೆಗಳಿಗೆ ಅನ್ಯಾಯ ಆಗಲಿದೆ. ಇನ್ನೊಂದು ಪ್ರಶ್ನೆಯೆಂದರೆ, ಕಾರ್ಮಿಕರ ವಜಾಗೊಳಿಸುವಿಕೆ ಇಲ್ಲವೇ ಭದ್ರತೆ ನೀಡುವಿಕೆಗೂ ಕಂಪೆನಿಯ ಗಾತ್ರಕ್ಕೂ ಏನು ಸಂಬಂಧ? ಖಾಯಂ ಕಾರ್ಮಿಕರ ನೇಮಕದಿಂದ ಸಮಸ್ಯೆಯಾದರೆ, ಸಂಸ್ಥೆಗಳು ಗುತ್ತಿಗೆ ನೌಕರರನ್ನು ನೇಮಿಸಿ ಕೊಳ್ಳುತ್ತವೆ ಇಲ್ಲವೇ ಹಲವು ಘಟಕಗಳನ್ನು ಆರಂಭಿಸುತ್ತವೆ. ಪ್ರತೀ ಘಟಕದಲ್ಲೂ ಕಡಿಮೆ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳುತ್ತವೆ. ದೇಶದಲ್ಲಿ ಸೃಷ್ಟಿಯಾಗಿರುವುದು ಅನೌಪಚಾರಿಕ, ಕಡಿಮೆ ವೇತನದ ಕೆಲಸಗಳು. ಔಪಚಾರಿಕ-ಅನೌಪಚಾರಿಕವಲ್ಲದೆ, ಸ್ವಉದ್ಯೋಗ, ತಾತ್ಕಾಲಿಕ ಉದ್ಯೋಗ, ನಿರ್ದಿಷ್ಟ ಅವಧಿಯ ಗುತ್ತಿಗೆ ಕೆಲಸ, ಗಿಗ್ ಸೇರಿದಂತೆ ಪ್ಲಾಟ್‌ಫಾರ್ಮ್ ಉದ್ಯೋಗಗಳು ಮತ್ತು ಸಾಂಪ್ರದಾಯಿಕ ವೃತ್ತಿಗಳೂ ಇವೆ. ವಿಶ್ವ ಆರ್ಥಿಕ ವೇದಿಕೆ(ಡಬ್ಲ್ಯುಇಎಫ್)ಯ ಫ್ಯೂಚರ್ ಆಫ್ ಜಾಬ್ ರಿಪೋರ್ಟ್ ಪ್ರಕಾರ, 2030ರೊಳಗೆ ಜಗತ್ತಿನ ಕಾರ್ಮಿಕ ಬಲದ ದೊಡ್ಡ ಪಾಲನ್ನು ಮರುಕೌಶಲಗೊಳಿಸಬೇಕಾಗುತ್ತದೆ. ಈ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಏನಿದೆ? ಒಕ್ಕೂಟ ಸರಕಾರದ ವಿವಿಧ ಇಲಾಖೆಗಳಲ್ಲಿ 9.64 ಲಕ್ಷ ಹುದ್ದೆಗಳು ಭರ್ತಿಯಾಗದೆ ಉಳಿದಿವೆ(2023ರ ಮಾಹಿತಿ). ಕರ್ನಾಟಕದಲ್ಲಿ 2 ಲಕ್ಷ ಹುದ್ದೆಗಳು ಖಾಲಿ ಇವೆ. ಇವನ್ನು ಭರ್ತಿಗೊಳಿಸದೆ ಬಿಟ್ಟಿರುವ ಉದ್ದೇಶವಾದರೂ ಏನು?
ಉದ್ಯಮಪರ ನಿರ್ಧಾರ
ಎನ್‌ಡಿಎ 3.0 ಜೂನ್ 2024ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಉದ್ಯಮಪರ ನಿರ್ಧಾರಗಳು ಹೆಚ್ಚಿವೆ. ಸರಕಾರ ರಚನೆಯಾದ 2 ತಿಂಗಳ ನಂತರ ವಿವಿಧ ಕೇಂದ್ರ ಸಚಿವಾಲಯಗಳಲ್ಲಿನ 45 ಹಿರಿಯ ಹುದ್ದೆಗಳನ್ನು ಹಿಂಭಾಗದ ಪ್ರವೇಶದ ಮೂಲಕ ತುಂಬಲು ಮುಂದಾಗಿ, 17 ಆಗಸ್ಟ್ 2024ರಂದು ಅರ್ಜಿ ಕರೆಯಿತು. ಆದರೆ, ಎರಡು ದಿನಗಳ ನಂತರ ಹಿಂಪಡೆಯಿತು. ಆನಂತರ ಸರಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(ಎನ್‌ಪಿಎಸ್)ಗೆ ಪರ್ಯಾಯವಾಗಿ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಪ್ರಸ್ತಾವವನ್ನು ಸಚಿವ ಸಂಪುಟ ಅನುಮೋದಿಸಿತು. ಇದು ಪಿಂಚಣಿಯನ್ನು ಖಾತ್ರಿಪಡಿಸದ ಕಾರಣ ವಿರೋಧಿಸಲ್ಪಟ್ಟಿತು. ಸೆಪ್ಟಂಬರ್ 2025ರ ಅಂತ್ಯದ ವೇಳೆಗೆ 2.3 ದಶಲಕ್ಷ ಉದ್ಯೋಗಿಗಳಲ್ಲಿ 1 ಲಕ್ಷ ಮಂದಿ ಹಾಗೂ ಮಹಾರಾಷ್ಟ್ರ ಮಾತ್ರ ಯುಪಿಎಸ್ ಆಯ್ಕೆ ಮಾಡಿಕೊಂಡಿದೆ. ಆಗಸ್ಟ್ 2023ರಲ್ಲಿ ಲ್ಯಾಪ್‌ಟಾಪ್, ವೈಯಕ್ತಿಕ ಕಂಪ್ಯೂಟರ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್ ಸರ್ವರ್‌ಗಳ ಆಮದಿನ ಮೇಲೆ ಪರವಾನಿಗೆ ನಿರ್ಬಂಧ ಘೋಷಿಸಿತು. ಉದ್ಯಮದ ಒತ್ತಡದಿಂದ ಹಲವು ಬಾರಿ ಅವಧಿ ವಿಸ್ತರಿಸಿ, ಜಾರಿಗೊಳಿಸುವಿಕೆಯನ್ನು ಡಿಸೆಂಬರ್ 2025ರ ವರೆಗೆ ಮುಂದೂಡಿತು. ಆಮದು ಉತ್ಪನ್ನಗಳಲ್ಲಿ ಗುಣಮಟ್ಟ ಖಚಿತಪಡಿಸಿಕೊಳ್ಳಲು 2016-2025ರ ಅವಧಿಯಲ್ಲಿ 720 ಗುಣಮಟ್ಟ ನಿಯಂತ್ರಣ ಆದೇಶ (ಕ್ಯುಸಿಒ) ನೀಡಲಾಗಿದೆ. ಆದರೆ, ಕ್ಯುಸಿಒಗಳಿಂದ ದೇಶಿ ಕಚ್ಚಾ ವಸ್ತು ಮತ್ತು ಮಧ್ಯಂತರ ಉತ್ಪನ್ನಗಳ ಸ್ಪರ್ಧಾತ್ಮಕತೆ ಕುಸಿಯಿತು. ಆನಂತರ, ಉದ್ಯಮದ ಒತ್ತಡದಿಂದ 69 ಕ್ಯುಸಿಒಗಳನ್ನು ಅಮಾನತುಗೊಳಿಸಿದ್ದಲ್ಲದೆ, 208 ಕ್ಯುಸಿಒಗಳನ್ನು ಹಿಂಪಡೆಯಲು ಶಿಫಾರಸು ಮಾಡಲಾಗಿದೆ. 12 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ವಿನಾಯಿತಿ ಮತ್ತು ಸರಕು-ಸೇವಾ ತೆರಿಗೆ (ಜಿಎಸ್‌ಟಿ) ಕಡಿತದಿಂದ ಜನ ಮತ್ತು ವ್ಯಾಪಾರ-ಉದ್ಯಮದ ಮೇಲಿನ ಹೊರೆ ಕಡಿಮೆ ಆಗಿದೆ. ಸರಕಾರ ಈ ಉಪಕ್ರಮಗಳ ಮೂಲಕ ಉದ್ಯಮಿಗಳಿಗೆ ಸಕಾರಾತ್ಮಕ ಸಂದೇಶ ರವಾನಿಸಿದೆ. ಇದರ ಮುಂದಿನ ಹೆಜ್ಜೆಯಾಗಿ ನವೆಂಬರ್ 21ರಂದು ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ಅಧಿಸೂಚನೆ ಹೊರಡಿಸಿದೆ.
ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವುದಿಲ್ಲ. ಈ ಸಂಬಂಧ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಕೇರಳ ಹೇಳಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ನವೆಂಬರ್ 2025ರಲ್ಲಿ ಆಯೋಜಿಸಿದ್ದ ಎಲ್ಲ ರಾಜ್ಯಗಳ ಸಭೆಯಲ್ಲಿ ಇದನ್ನು ಪುನರುಚ್ಚರಿಸಿದೆ. ಸಂಹಿತೆಗಳು ಉದ್ಯಮಿಗಳಿಗೆ ಉದ್ಯೋಗಿಗಳ ನೇಮಕ- ವಜಾ ಸುಲಭಗೊಳಿಸುತ್ತವೆ; ಉತ್ತಮ ಕೆಲಸದ ಪರಿಸ್ಥಿತಿ ಮತ್ತು ವೇತನ ಕುರಿತು ಉದ್ಯಮಿಗಳೊಂದಿಗೆ ಸಂಧಾನ ನಡೆಸುವುದು ಹಾಗೂ ಮುಷ್ಕರ ಹಮ್ಮಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಸಂಹಿತೆಗಳ ವಿರುದ್ಧ 10 ಕೇಂದ್ರ ಕಾರ್ಮಿಕ ಸಂಘಟನೆಗಳು, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಅಖಿಲ ಭಾರತ ಪವರ್ ಇಂಜಿನಿಯರ್ಸ್ ಫೆಡರೇಶನ್‌ನ ಸದಸ್ಯರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿದ್ದರು. ಕಳೆದ ಒಂದು ದಶಕದಿಂದ ಒಮ್ಮೆಯೂ ಸೇರದ ಇಂಡಿಯನ್ ಲೇಬರ್ ಕಾನ್ಫೆರೆನ್ಸ್(ತ್ರಿಪಕ್ಷೀಯ ವೇದಿಕೆ)ನ ಸಭೆಯನ್ನು ಆದಷ್ಟು ಬೇಗ ಕರೆಯಬೇಕೆಂದು ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ. ಉದ್ಯೋಗಿಗಳು ಕಾರ್ಖಾನೆ ಹಂತದಲ್ಲಿ ಸಂಧಾನ-ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ಕೋರಿವೆ.
ಉದ್ಯಮಸ್ನೇಹಿ ನೀತಿ ಅಗತ್ಯವಿದೆ
ಉದ್ಯಮಗಳು ಜಾಗತಿಕ ಸವಾಲು ಎದುರಿಸುತ್ತಿರುವ ಹೊತ್ತಿನಲ್ಲಿ ಸರಕಾರ-ಉದ್ಯಮ-ಉದ್ಯೋಗಿಗಳ ನಡುವೆ ಸಮನ್ವಯ ಅಗತ್ಯವಿದೆ. ಆದರೆ, ಉದ್ಯೋಗ ಸೃಷ್ಟಿಯೇ ಆಗುತ್ತಿಲ್ಲ ಮತ್ತು ಸರಕಾರ ಸಾರ್ವಜನಿಕ ಕ್ಷೇತ್ರದ ಉದ್ಯಮಗಳನ್ನು ಖಾಸಗಿಯವರಿಗೆ ಮಾರುತ್ತಿದೆ. ಅವು ಗುತ್ತಿಗೆ ನೌಕರರಿಗೆ ಮಣೆ ಹಾಕುತ್ತಿವೆ. ಕಳೆದ 5 ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಖಾಸಗಿ ಕಂಪೆನಿಗಳು ಬಾಗಿಲು ಮುಚ್ಚಿವೆ. ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ಹುಸಿಯಾಗಿದೆ. ಕಟ್ಟು ಜಾಣ್ಮೆಯ ಜಗತ್ತಿನಲ್ಲಿ ಉದ್ಯೋಗ ನಷ್ಟದ ಭೀತಿ ಕಾಡುತ್ತಿದೆ. ಇಂಥ ಸನ್ನಿವೇಶದಲ್ಲಿ ನೂತನ ಸಂಹಿತೆಗಳು ರಂಗ ಪ್ರವೇಶಿಸಿವೆ; ಇವು ಕಾನೂನು ಆಗುತ್ತವೆ ಕೂಡ. ಏಕೆಂದರೆ, ಪ್ರತಿಪಕ್ಷದ ಸದಸ್ಯರನ್ನು ಸಾರಾಸಗಟಾಗಿ ಅಮಾನತುಗೊಳಿಸಿ ಮಸೂದೆಗಳನ್ನು ಅಂಗೀಕರಿಸಿದ ಖ್ಯಾತಿ ಈ ಸರಕಾರದ್ದು. ಸಂಧಾನದಲ್ಲಿ ನಂಬಿಕೆ ಇಲ್ಲದೆ, ಎಲ್ಲವನ್ನೂ ಮೇಲಿನಿಂದ ಹೇರುತ್ತದೆ ಮತ್ತು ಮೂಗು ಹಿಡಿದು ಒಪ್ಪಿಸಲಾಗುತ್ತದೆ. ಹಾಗಾಗಿ ಇದರಿಂದ ಹಾನಿಗೊಳಗಾಗುವ ದುಡಿಯುವ ವರ್ಗ ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕಿದೆ.







