ಕಳಪೆ ಕಾಮಗಾರಿ: ಎರಡು ವರ್ಷಗಳಲ್ಲಿ 29 ಕಂಪನಿಗಳಿಗೆ ನಿಷೇಧ ವಿಧಿಸಿದ ಹೆದ್ದಾರಿ ಪ್ರಾಧಿಕಾರ

ಸಾಂದರ್ಭಿಕ ಚಿತ್ರ PC: x.com/hdmalhotra
ಹೊಸದಿಲ್ಲಿ: ಕಳಪೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 29 ಕಂಪನಿಗಳ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ನಿಷೇಧ ವಿಧಿಸಿದೆ.
ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಮುಖ್ಯ ಹೆದ್ದಾರಿ ನಿರ್ಮಾಣ ಕಂಪನಿಗಳಿಂದ ತುಂಡುಗುತ್ತಿಗೆ ಪಡೆಯುವ ಕಂಪನಿಗಳು ಗುಣಮಟ್ಟವನ್ನು ಕಾಪಾಡಿಕೊಳ್ಳುವ ಸಲುವಾಗಿ ಸ್ಪಷ್ಟವಾದ ನಿಯಮ ಮತ್ತು ಮಾನದಂಡವನ್ನು ರೂಪಿಸುವಂತೆ ಮತ್ತು ಅರ್ಹತೆ ಮಾನದಂಡ ಹಾಗೂ ಮೇಲ್ವಿಚಾರಣೆ ಎಂಜಿನಿಯರ್ ಗಳ ಆಯ್ಕೆ ವಿಚಾರದಲ್ಲಿ ಎಚ್ಚರ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಪ್ರಾಧಿಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಹೊಸದಾಗಿ ನಿರ್ಮಾಣವಾಗಿರುವ ಹಲವು ಹೆದ್ದಾರಿಗಳು ಕಳಪೆ ಗುಣಮಟ್ಟದ ಕಾಮಗಾರಿಯ ಕಾರಣದಿಂದ ಹಾನಿಗೀಡಾದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿತ್ತು. ಗುತ್ತಿಗೆ ಪಡೆಯುವ ಸಲುವಾಗಿ ಈ ಕಂಪನಿಗಳು ತೀರಾ ಕಡಿಮೆ ಬೆಲೆಯನ್ನು ಬಿಡ್ ಮಾಡುತ್ತಿದ್ದರು ಹಾಗೂ ಸರ್ಕಾರ ನೇಮಕ ಮಾಡಿಕೊಂಡ ಕನ್ಸಲ್ಟೆನ್ಸಿ ಕಂಪನಿಗಳು ಕೂಡಾ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದವು ಎನ್ನಲಾಗಿದೆ.
ಕಳಪೆ ಕಾಮಗಾರಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಎನ್ಎಚ್ಎಐ 12ಕ್ಕೂ ಹೆಚ್ಚು ನಿರ್ಮಾಣ ಕಂಪನಿಗಳು ಹಾಗೂ 17 ಕನ್ಸಲ್ಟೆನ್ಸಿ ಕಂಪನಿಗಳನ್ನು ಇನ್ನು ಮುಂದೆ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ನಿಷೇಧ ವಿಧಿಸಿದೆ. ಜತೆಗೆ 24 ಕೋಟಿ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಅಧಿಕಾರಿಗಳ ಮೇಲೂ ಶಿಸ್ತುಕ್ರಮ ಕೈಗೊಂಡಿದ್ದು, ಜನರಲ್ ಮ್ಯಾನೇಜರ್, ಡಿಜಿಎಂ ಸೇರಿದಂತೆ ಹಲವರನ್ನು ಅಮಾನತುಗೊಳಿಸಿದೆ. 57 ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸಲಾಗಿದೆ.







