ಜನರೇ ಉಳಿಸಿಕೊಂಡ ಕಪ್ಪತಗುಡ್ಡದಲ್ಲಿ ಒಂದು ದಿನ

ಕಪ್ಪತಗುಡ್ಡವನ್ನು ನುಂಗಲು ಗಣಿ ತಿಮಿಂಗಿಲಗಳು ಹೊಂಚು ಹಾಕಿದ್ದವು.ಆದರೆ ಗದಗ, ಮುಂಡರಗಿ, ಶಿರಹಟ್ಟಿ ಮುಂತಾದ ಪ್ರದೇಶಗಳ ಜನರು ಹೋರಾಟ ಮಾಡಿ ಅದನ್ನು ಕಾಪಾಡಿಕೊಂಡಿದ್ದಾರೆ. ಈಗಂತೂ ಸರಕಾರ ಇದನ್ನು ವನ್ಯ ಜೀವಿ ಧಾಮ ಎಂದು ಘೋಷಿಸಿರುವುದರಿಂದ ಇದು ಅಪಾಯದಿಂದ ಪಾರಾಗಿದೆ. ಜನ ಸಮರವೊಂದೇ ಇಂಥ ಉಸಿರು ನೀಡುವ ತಾಣಗಳನ್ನು ಉಳಿಸಿಕೊಳ್ಳಲು ಇರುವ ಏಕೈಕ ದಾರಿ.
ಲಂಗು ಲಗಾಮಿಲ್ಲದ ಅಭಿವೃದ್ಧಿಯ ಅಟ್ಟಹಾಸದಲ್ಲಿ ನಮ್ಮ ಕಣ್ಣೆದುರೇ ನಮ್ಮನ್ನು ಪೊರೆಯುವ ನದಿ, ಕೆರೆಗಳು, ಗುಡ್ಡ ಬೆಟ್ಟಗಳು, ಗಿಡ ಮರಗಳು ಮಟಾ ಮಾಯವಾಗುತ್ತಿರುವ ಈ ದಿನಗಳಲ್ಲಿ ಉಸಿರಾಡುವ ಗಾಳಿಗಾಗಿ, ಕುಡಿಯುವ ನೀರಿಗಾಗಿ ಪರದಾಡಬೇಕಾದ ಸ್ಥಿತಿ ಬಂದಿದೆ. ಮಾರುಕಟ್ಟೆ ಆರ್ಥಿಕತೆಯ ಅಬ್ಬರದಲ್ಲಿ ಮನುಷ್ಯ ಸಂಬಂಧಗಳೇ ಸತ್ತು ಹೋಗುತ್ತಿವೆ. ಕಾವೇರುತ್ತಿರುವ ಭೂಮಿ, ಹದಗೆಡುತ್ತಿರುವ ಪರಿಸರ, ಒಟ್ಟಾರೆ ಬದುಕು ಅಸಹನೀಯವಾಗುತ್ತಿದೆ. ಇಂಥ ಅತ್ಯಂತ ಕೆಟ್ಟ ಕಾಲದಲ್ಲೂ ಒಳ್ಳೆಯದನ್ನು ಉಳಿಸಿಕೊಳ್ಳುವ, ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಇಂಥ ತಾಣಗಳ ಸಾಲಿನಲ್ಲಿ ಜನಸಾಮಾನ್ಯರು ಹಠ ತೊಟ್ಟು ಹೋರಾಡಿ ಉಳಿಸಿಕೊಂಡ ಗದಗ ಜಿಲ್ಲೆಯ ಕಪ್ಪತಗುಡ್ಡ ಈಗ ನಮ್ಮ ಕಣ್ಣಮುಂದೆ ಸುರಕ್ಷಿತವಾಗಿ ನಿಂತಿದೆ.
ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಹೆಸರಾದ ಕಪ್ಪತ್ತಗುಡ್ಡ ಜೀವ ವೈವಿಧ್ಯದ ತಾಣ, ಔಷಧಿ ಸಸ್ಯಗಳ ಇಳೆಯ ಮೇಲಿನ ಸ್ವರ್ಗ, ಪರಿಸರ ಅಧ್ಯಯನದ ಪ್ರಯೋಗಶಾಲೆ,ಏಶ್ಯ ಖಂಡದಲ್ಲಿ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶ. ಗದಗ ಜಿಲ್ಲೆಯ ಶಿರಹಟ್ಟಿ, ಮುಂಡರಗಿಮತ್ತು ಗದಗ ತಾಲೂಕುಗಳ ಒಟ್ಟು 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೈ ಚಾಚಿಕೊಂಡಿರುವ ಗಿರಿಶ್ರೇಣಿ. ಬಿಂಕದಕಟ್ಟಿ, ಗ್ರಾಮದ ಅಂಚಿನಿಂದ ಮುಂಡರಗಿ ತಾಲೂಕಿನ ಸಿಂಗಟಾಲೂರಿನವರೆಗೂ ಹಬ್ಬಿ ಕೊಂಡಿರುವ ಈ ಗಿರಿಶ್ರೇಣಿ ಒಟ್ಟು 65 ಕಿ.ಮೀಗಳಷ್ಟು ಉದ್ದವಿದೆ.
ಇಂಥ ಕಪ್ಪತಗುಡ್ಡದ ಮೇಲೆ ಗಣಿ ಧಣಿಗಳೆಂದು ಕರೆಯಲ್ಪಡುವ ಲೂಟಿಕೋರರು, ದಗಾಕೋರರು, ಕಣ್ಣು ಹಾಕಿದ್ದರು. ಈ ಗುಡ್ಡದ ಒಡಲಲ್ಲಿ ಇರುವ ತಾಮ್ರ, ಮ್ಯಾಂಗನೀಸ್, ಲಿಮೋನೈಟ್, ಚಿನ್ನ ಖನಿಜ ಸಂಪತ್ತನ್ನು ದೋಚಲು ಮಸಲತ್ತು ಮಾಡಿದ್ದರು. ಆದರೆ ಇಲ್ಲಿನ ಜನಸಾಮಾನ್ಯರು ಮತ್ತು ವಿಶೇಷವಾಗಿ ಗದುಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮಿಗಳು, ಜನಪರ ಸಂಘಟನೆಗಳು, ಪರಿಸರವಾದಿಗಳು ನಡೆಸಿದ ಅವಿರತ ಹೋರಾಟದ ಪರಿಣಾಮವಾಗಿ ಇದು ಉಳಿದುಕೊಂಡಿದೆ.
ಜನರ ನಿರಂತರ ಹೋರಾಟದ ಪರಿಣಾಮವಾಗಿ 2019ರಲ್ಲಿ ಒಟ್ಟು, 24 ಸಾವಿರ ಹೆಕ್ಟೇರ್ ಪ್ರದೇಶವನ್ನು ‘ಕಪ್ಪತಗುಡ್ಡ ವನ್ಯಜೀವಿಧಾಮ’ಎಂದು ಸರಕಾರ ಘೋಷಣೆ ಮಾಡಿದೆ. ಇದರಿಂದಾಗಿ ಅಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಇಂಥ ಕಪ್ಪತಗುಡ್ಡವನ್ನು ನೋಡಬೇಕು ಎಂದು ತುಂಬಾ ದಿನಗಳಿಂದ ಅಂದುಕೊಂಡಿದ್ದೆ, ಆದರೆ ಸಾಧ್ಯವಾಗಿರಲಿಲ್ಲ. ಕಳೆದ ವಾರ ಅಲ್ಲಿ ಹೋಗುವ ಅನಿರೀಕ್ಷಿತ ಅವಕಾಶವೊಂದು ತಾನಾಗಿ ಒದಗಿ ಬಂತು. ಈ ಸುಂದರ ತಾಣದ ಅಡಿಯಲ್ಲಿ ಇರುವ ಹಳ್ಳಿ ಡಂಬಳದ ಯುವ ಮಿತ್ರ ಸಿದ್ದು ಸತ್ಯಣ್ಣವರ ( ಮಾಧ್ಯಮದ ಕೆಲಸ ಬಿಟ್ಟು ಹಳ್ಳಿಗೆ ಬಂದು ನೆಲೆಸಿದವರು) ಅವರು ಚಾರಣದೊಂದಿಗೆ ಸಾಹಿತ್ಯೋತ್ಸವ ಎಂಬ ಅಪರೂಪದ ಕಾರ್ಯಕ್ರಮವೊಂದನ್ನು ಸಂಘಟಿಸಿದ್ದರು. ತಮ್ಮ ಸುತ್ತಮುತ್ತಲಿನ ಯುವ ಸಾಹಿತಿ ಮಿತ್ರರನ್ನೆಲ್ಲ ಆಹ್ವಾನಿಸಿದ್ದರು. ಪ್ರಕೃತಿಯೊಂದಿಗೆ ಸಾಹಿತ್ಯ, ಪರಿಸರ ಜಾಗೃತಿ, ಸಾಮಾಜಿಕ ಹೊಣೆಗಾರಿಕೆಯ ಅರಿವು ಮೂಡಿಸುವ ಇದಕ್ಕೆ ಅರಣ್ಯ ಇಲಾಖೆ ಜೊತೆಯಾಗಿತ್ತು. ಬಾರುಕೋಲು ಪತ್ರಿಕಾ ಬಳಗ ಗದಗ ವಲಯದ ಅರಣ್ಯಾಧಿಕಾರಿ ಮಂಜುನಾಥ ಮೇಗಲ ಮನಿ ಅವರು ನಮ್ಮ್ಮೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಈ ಅಪರೂಪದ ನಿಸರ್ಗದ ಮಡಿಲಿನ ಸಾಹಿತ್ಯೋತ್ಸವಕ್ಕೆ ಸಾಹಿತ್ಯ ಮಾಸಿಕ ‘ಅಕ್ಷರ ಸಂಗಾತ’ ಸಂಪಾದಕ ಟಿ.ಎಸ್.ಗೊರವರ,ಕವಿ ಆರಿಫ್ ರಾಜಾ, ಸಾವಯವ ಕೃಷಿಕ ಆನಂದ ತೀರ್ಥ ಪ್ಯಾಟಿ, ಹರಿನಾಥ ಬಾಬು, ಮಹಾಂತೇಶ ಖೋತ್, ಪತ್ರಕರ್ತ ಸಂಗಮೇಶ ಮೆಣಸಿನಕಾಯಿ, ಉದಯ ರಾಯರೆಡ್ಡಿ, ಶಿವಲಿಂಗಪ್ಪ ಹಂದಿಹಾಳು, ವೀರೇಂದ್ರ ರಾವಿ ಹಾಳ, ತುಕಾರಾಮ ನಾಯ್ಕ, ವಿನೋದ ಪಾಟೀಲ್ ಕಿರಣ ಅಕ್ಕಿ, ರಾಹುಲ ಬೆಳಗಲಿ ಜೆ.ಕುಮಾರ ಮೊದಲಾದ ವರು ಪಾಲ್ಗೊಂಡಿದ್ದರು
ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳ ಮನಿ ನಮ್ಮ ಜೊತೆಗೆ ಹೆಜ್ಜೆ ಹಾಕುತ್ತಾ ಈ ಕಪ್ಪತ ಗುಡ್ಡದ ಅಪರೂಪದ ತಾಣಗಳಾದ ಬಂಗಾರ ಗಾಕೊಳ್ಳ, ನವಣಿ ರಾಶಿ, ನೈಸರ್ಗಿಕ ಧ್ಯಾನ ಮಂದಿರ , ಗಾಳಿಗುಂಡಿ ಬಸವಣ್ಣ, ಹಾಗೂ ಮಂಜಿನ ದೋಣಿ,ಅಡಿಕೆ ಕಣಿವೆ ಮೊದಲಾದ ರಮ್ಯ ತಾಣಗಳನ್ನು ತೋರಿಸಿದರು.
ಈ ಚಾರಣದೊಂದಿಗೆ ಹಸಿರಿನ ಹೊದಿಕೆ ಹಾಕಿದಂತಿದ್ದ ನೈಸರ್ಗಿಕ ಧ್ಯಾನ ಮಂದಿರದಲ್ಲಿ ಪುಟ್ಟದೊಂದು ಸಭೆ. ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿ ಮಠ ಅವರ ಜಾನಪದ ಹಾಡುಗಳೊಂದಿಗೆ ಆರಂಭವಾಯಿತು. ಸಭೆಯಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳ ಮನಿ ಅವರು ಕಪ್ಪತಗುಡ್ಡದ ಇತಿಹಾಸವನ್ನು ಸುದೀರ್ಘವಾಗಿ ವಿವರಿಸಿದರು. ಗದುಗಿನ ಲೇಖಕ ವಿ.ಹರಿನಾಥಬಾಬು ಅವರು ಮಾತನಾಡುತ್ತ ಮನುಷ್ಯ ತನ್ನ ದುರಾಸೆಯಿಂದ ಪ್ರಕೃತಿಗೆ ಅಪಾರ ಹಾನಿ ಮಾಡುತ್ತಿದ್ದಾನೆ, ದೇಶದಲ್ಲಿ ನದಿಗಳು ಮಲಿನಗೊಂಡಿವೆ, ಕಾಡುಗಳು ನಾಶವಾಗುತ್ತಿವೆ, ಜೀವ ವೈವಿಧ್ಯಕ್ಕೆ ಧಕ್ಕೆಯಾಗುತ್ತಿದೆ. ಅಭಿವೃದ್ಧಿಯ ಅಟ್ಟಹಾಸದಲ್ಲಿ ಪರಿಸರ ಹಾಳಾಗುತ್ತಿದೆ ಎಂದು ನೋವಿನಿಂದ ವಿವರಿಸಿದರು.
ಅನ್ನದ ತಟ್ಟೆಯಲ್ಲಿ ವಿಷ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ (ಧಾರವಾಡ, ಬೆಂಗಳೂರು ಪತ್ರಿಕೋದ್ಯಮದ ಕೆಲಸ ತೊರೆದು ಕೃಷಿ ರಂಗಕ್ಕೆ ಬಂದವರು) ಕೊಪ್ಪಳದ ಆನಂದ ತೀರ್ಥ ಪ್ಯಾಟಿ ಅವರು ಅತಿಯಾದ ರಾಸಾಯನಿಕಗಳ ಪರಿಣಾಮವಾಗಿ ಕೃಷಿ ಕ್ಷೇತ್ರ ಹಾಳಾಗುತ್ತಿದೆ. ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.
ಒಂದು ಕಾಲದಲ್ಲಿ ಹಸಿರು ಕ್ರಾಂತಿ ಗೆ ಹೆಸರಾಗಿದ್ದ ಪಂಜಾಬ ಈಗ ಕ್ಯಾನ್ಸರ್ ರೋಗಿಗಳ ನರಕವಾಗಿದೆ, ಇಂಥ ರೋಗಿಗಳನ್ನು ಹೊತ್ತು ಸಾಗಿಸುವ ಬಟಿಂಡಾ ಬಿಕಾನೇರ ರೈಲು ಕ್ಯಾನ್ಸರ್ ರೈಲು ಎಂದು ಹೆಸರಾಗಿದೆ. ಪಂಜಾಬಿನಲ್ಲಿ ಪ್ರತೀ ಮನೆಯಲ್ಲಿ ಇಬ್ಬರು ಕ್ಯಾನ್ಸರ್ ರೋಗಿಗಳಿದ್ದಾರೆ ಎಂದು ಹೇಳಿದರು. ಪಂಜಾಬ್ ಮಾತ್ರವಲ್ಲ ಜೀವ ನಾಶಕ ಅಪಾಯ ಕಾರಿ ಉದ್ಯಮಗಳಿಂದಾಗಿ ನಮ್ಮ ಕೊಪ್ಪಳವು ಕೂಡ ಹಾಳಾಗುತ್ತಿದೆ. ಕ್ಯಾನ್ಸರ್ ಆಸ್ಪತ್ರೆಗಳು ಕೊಪ್ಪಳಕ್ಕೂ ಬಂದಿವೆ. ಇದಕ್ಕೆ ಅಪಾಯಕಾರಿ ಕೈಗಾರಿಕೆಗಳು ಮಾತ್ರವಲ್ಲ, ಕೊಪ್ಪೆರೈತರು ಬಳಸುತ್ತಿರುವ ರಾಸಾಯನಿಕ ಗಳು ಕೂಡ ಕಾರಣವಾಗಿವೆೆ ಎಂದು ವಿವರಿಸಿದರು.___ ಮಳೆಗಾಲ ಬಂತೆಂದರೆ ಇಡೀ ಕಪ್ಪತಗುಡ್ಡ ಹಸಿರಿನಿಂದ ಕಂಗೊಳಿಸುತ್ತದೆ. ಈ ಸಲದ ಮುಂಗಾರು ಮಳೆಯ ಕೊರತೆಯಿದ್ದರೂ ಕಣ್ಣು ಹಾಯಿಸಿದಲ್ಲೆಲ್ಲ ಹಸಿರು ಹೊದ್ದು ಕೊಂಡಂತೆ ಕಾಣುತ್ತಿತ್ತು. ನಮ್ಮ ಹಿರಿಯರು ಎಪ್ಪತ್ತು ಗಿರಿ ನೋಡುವುದಕ್ಕಿಂತ ಕಪ್ಪತಗುಡ್ಡ ನೋಡುವುದು ಮೇಲು ಎಂದು ಹೇಳುತ್ತಿದ್ದರು. ಔಷಧಿ ಸಸ್ಯಗಳಿಗೆ ಕಪ್ಪತಗುಡ್ಡ ಹೆಸರಾಗಿದೆ. ಪ್ರಮುಖವಾಗಿ ಇಲ್ಲಿ ನೆಲಬೇವು,ಒಂದೆಲಗ, ನೆಲನೆಲ್ಲಿ, ಅಮೃತ ಬಳ್ಳಿ,ತೊಂಡರಸಿ ಎಡಮುರಿ ,ಬೆಟ್ಟ ದಾವರೆ, ಮೊದಲಾದ ವಿವಿಧ ಜಾತಿಯ 375 ಕ್ಕೂ ಹೆಚ್ಚು ಔಷಧಿ ಸಸ್ಯಗಳು ಇವೆ.
ಉತ್ತರ ದಿಕ್ಕಿನ ಬಿಂಕದ ಕಟ್ಟಿಯಿಂದ ದಕ್ಷಿಣ ದಿಕ್ಕಿನ ತುಂಗಭದ್ರಾ ನದಿಯವರೆಗೂ ವ್ಯಾಪಿಸಿರುವ ಸಾಲು ಗುಡ್ಡಗಳಲ್ಲಿ ಗಾಳಿ ಗುಂಡಿ ಗುಡ್ಡ ಅತ್ಯಂತ ಎತ್ತರವಾಗಿದೆ.ಇಲ್ಲಿ ಅಪರೂಪದ ಪ್ರಾಣಿ ಸಂಕುಲಗಳು ಆಸರೆ ಪಡೆದಿವೆ.ಚಿರತೆ,ತೋಳ, ಕತ್ತೆ ಕಿರುಬು, ನರಿ, ಪುನುಗು ಬೆಕ್ಕು, ಚುಕ್ಕೆ ಬೆಕ್ಕು ಸೇರಿದಂತೆ 21 ಜಾತಿಯ ಸಸ್ತನಿಗಳ ಜೊತೆಗೆ ವಿವಿಧ ಜಾತಿಯ ಪಕ್ಷಿಗಳು, ಚಿಟ್ಟೆಗಳು , ಹಾವು ಗಳು ಇಲ್ಲಿ ನೆಲೆಯೂರಿವೆ.
ಇಂಥ ಕಪ್ಪತಗುಡ್ಡವನ್ನು ನುಂಗಲು ಗಣಿ ತಿಮಿಂಗಿಲಗಳು ಹೊಂಚು ಹಾಕಿದ್ದವು.ಆದರೆ ಗದಗ, ಮುಂಡರಗಿ, ಶಿರಹಟ್ಟಿ ಮುಂತಾದ ಪ್ರದೇಶಗಳ ಜನರು ಹೋರಾಟ ಮಾಡಿ ಅದನ್ನು ಕಾಪಾಡಿಕೊಂಡಿದ್ದಾರೆ.
ಈಗಂತೂ ಸರಕಾರ ಇದನ್ನು ವನ್ಯ ಜೀವಿ ಧಾಮ ಎಂದು ಘೋಷಿಸಿರುವುದರಿಂದ ಇದು ಅಪಾಯದಿಂದ ಪಾರಾಗಿದೆ. ಜನ ಸಮರವೊಂದೇ ಇಂಥ ಉಸಿರು ನೀಡುವ ತಾಣಗಳನ್ನು ಉಳಿಸಿಕೊಳ್ಳಲು ಇರುವ ಏಕೈಕ ದಾರಿ ಎಂಬುದು ಸ್ಪಷ್ಟವಾಗಿದೆ.






