ಯುವಕರ ಕನಸುಗಳನ್ನು ಕೊಲ್ಲಬೇಡಿ

ಸಂಘ ಪರಿವಾರದವರು ಮುಸಲ್ಮಾನರನ್ನು ಮುಖ್ಯ ವಾಹಿನಿಯಲ್ಲಿ ಬೆರೆಯದಂತೆ ಪ್ರತ್ಯೇಕಿಸಲು ರೂಪಿಸಿದ ಹಲವಾರು ಮಸಲತ್ತುಗಳಲ್ಲಿ ‘ಲವ್ ಜಿಹಾದ್’ ಎಂಬ ಪದ ಸೃಷ್ಟಿಯೂ ಒಂದು. ಯಾವುದೇ ಪುರಾವೆಗಳಿಲ್ಲದೇ ಸಮಾಜದಲ್ಲಿ ವ್ಯಾಪಕವಾಗಿ ಇದನ್ನು ಹರಡಲಾಗುತ್ತಿದೆ. ಮುಸ್ಲಿಮ್ ಯುವಕ ಹಾಗೂ ಹಿಂದೂ ಯುವತಿ ಪರಸ್ಪರ ಇಷ್ಟಪಟ್ಟು ಮದುವೆಯಾಗಲು ತೀರ್ಮಾನಿಸಿದರೆ ತಮಗೆ ಸಂಬಂಧಪಡದ ಈ ವಿಷಯದಲ್ಲಿ ತಲೆ ಹಾಕುವ ಕೋಮುವಾದಿಗಳು ಇಲ್ಲದ ವಿವಾದವನ್ನು ಹುಟ್ಟು ಹಾಕುತ್ತಾರೆ.
ಬಾಬಾ ಸಾಹೇಬರ ನೇತೃತ್ವದಲ್ಲಿ ರೂಪುಗೊಂಡ ಭಾರತದ ಸಂವಿಧಾನ ಜನರಿಗೆ ಅವರ ಇಷ್ಟದಂತೆ ಬದುಕುವ ಸ್ವಾತಂತ್ರ್ಯವನ್ನು ನೀಡಿದೆ. ತೊಂಭತ್ತರ ದಶಕದವರೆಗೆ ಈ ಸ್ವಾತಂತ್ರ್ಯ ಅಬಾಧಿತವಾಗಿತ್ತು. ಆದರೆ 1992ರ ಡಿಸೆಂಬರ್ 6 ನಂತರ ಈ ದೇಶದ ರಾಜಕೀಯದ ದಿಕ್ಕು ಬದಲಾಯಿತು. ಯಾರು ಯಾವ ಬಟ್ಟೆ ತೊಡಬೇಕು, ಯಾರು ಯಾವ ಆಹಾರವನ್ನು ತಿನ್ನಬೇಕು, ಯಾರು ಯಾರನ್ನು ಮದುವೆಯಾಗಬೇಕು ಎಂಬುದನ್ನು ತೀರ್ಮಾನಿಸಲು ದೊಣ್ಣೆ ನಾಯಕರು ಹುಟ್ಟಿಕೊಂಡಿದ್ದಾರೆ.
ಪರಸ್ಪರ ಪ್ರೀತಿಸುವ ಯುವ ಜೋಡಿಗಳಿಗೆ ‘ಲವ್ ಜಿಹಾದ್’ ಹೆಸರಿನಲ್ಲಿ ಕಿರಿ ಕಿರಿ ಮಾಡುವ ಘಟನೆಗಳನ್ನು ನೋಡಿದಾಗ ಹನ್ನೆರಡನೇ ಶತಮಾನದ ಆ ದಿನಗಳು ಕಣ್ಣಮುಂದೆ ಬರುತ್ತವೆ. ಆಗ ಬಸವಣ್ಣನವರು ಮಧುವರಸನ ಮಗಳು ಮತ್ತು ಹರಳಯ್ಯನ ಮಗನ ಮದುವೆ ಮಾಡಿಸಲು ಹೊರಟಾಗ ಕಲ್ಯಾಣದಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಬಿದ್ದ ಏಟಿನಿಂದ ತತ್ತರಿಸಿದ ಮನುವಾದಿಗಳು ರಕ್ತಪಾತವನ್ನು ಮಾಡಿದರು. ಬಸವಣ್ಣನವರನ್ನು ಬಿಜ್ಜಳನ ಮೂಲಕ ಗಡಿಪಾರು ಮಾಡಿಸಲಾಯಿತು. ಆಗ ಶರಣರಿಗೆ ಚಿತ್ರಹಿಂಸೆ ನೀಡಿದ ಶಕ್ತಿಗಳು ಈಗ ಹೊಸ ವೇಷ ಹಾಕಿಕೊಂಡು ಮತ್ತೆ ಬಂದಿವೆ.
ಇಡೀ ದೇಶ ಒಪ್ಪಿಕೊಂಡ ಸಂವಿಧಾನ ಮತ್ತು ಕಾನೂನಿಗಿಂತ ತಮ್ಮ ನಂಬಿಕೆ ಶ್ರೇಷ್ಠ ಎಂಬ ವಾದ ಈಗ ಯಾವುದೇ ಸಂಘಟನೆ ಮತ್ತು ಸಿದ್ಧಾಂತಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಸಂವಿಧಾನದ ಅಡಿಯಲ್ಲಿ ಚುನಾಯಿತವಾಗಿರುವ ಸರಕಾರಗಳೇ ಯಾವ ಹಿಂಜರಿಕೆಯಿಲ್ಲದೆ ನ್ಯಾಯಾಲಯಗಳಲ್ಲೇ ತಮ್ಮ ವಿತಂಡವಾದವನ್ನು ಮಂಡಿಸುತ್ತಿವೆ. ಉದಾಹರಣೆಗೆ ಕೇರಳದ ಶಬರಿಮಲೆ ದೇವಾಲಯಕ್ಕೆ ಋತುಮತಿ ವಯಸ್ಸಿನ ಮಹಿಳೆಯರು ಪ್ರವೇಶಿಸುವುದನ್ನು ನಿರ್ಬಂಧಿಸುವ ಕ್ರಮಕ್ಕೆ ಬೆಂಬಲವನ್ನು ನೀಡಿರುವ ಕೇಂದ್ರ ಸರಕಾರ ಇದು ನ್ಯಾಯಾಂಗದ ಪರಿಶೀಲನೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದೆ. ಕೇಂದ್ರದ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ 10ರಿಂದ 50 ವರ್ಷದೊಳಗಿನ ಮಹಿಳೆಯರು ಶಬರಿಮಲೆ ಅಯ್ಯಪ್ಪ ಮಂದಿರವನ್ನು ಪ್ರವೇಶಿಸುವುದಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ತೆರವುಗೊಳಿಸಿ 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ತಪ್ಪಾಗಿದ್ದು ಅದನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ ಎಂದು ಸಂವಿಧಾನ ಪೀಠದ ಮುಂದೆ ವಾದಿಸಿದ್ದಾರೆ.
ಆದರೆ ತುಷಾರ್ ಮೆಹ್ತಾ ವಾದವನ್ನು ಒಪ್ಪದ ಒಂಭತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಯಾವುದೇ ಧಾರ್ಮಿಕ ಆಚರಣೆಯು ಮೂಢನಂಬಿಕೆಯೋ ಅಲ್ಲವೋ ಎಂಬುದನ್ನು ನಿರ್ಧರಿಸುವ ಹಕ್ಕು ಮತ್ತು ನ್ಯಾಯ ವ್ಯಾಪ್ತಿ ನ್ಯಾಯಾಲಯಕ್ಕಿದೆ ಎಂದು ಹೇಳಿದೆ. ಮೇಲಿನದು ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದ ವಿಷಯ. ಇನ್ನು ಪರಸ್ಪರ ಇಷ್ಟಪಡುವ ಮದುವೆಗಳನ್ನು ಕಂಡರೆ ಮನುವಾದಿಗಳಿಗೆ ಆಗುವುದಿಲ್ಲ. ಅಂತರ್ಜಾತಿಯ ಮತ್ತು ಅಂತರ್ಧರ್ಮೀಯ ವಿವಾಹಗಳನ್ನು ವಿರೋಧಿಸುವ ಇವರು ‘ಲವ್ ಜಿಹಾದ್’ ಎಂಬ ಹೊಸ ಪದವನ್ನು ಸೃಷ್ಟಿಸಿದ್ದಾರೆ. ಹಿಂದೂ-ಮುಸ್ಲಿಮ್ ಯುವಕ, ಯುವತಿಯರು ಪರಸ್ಪರ ಒಪ್ಪಿ ಮದವೆಯಾಗಲೂ ಇವರ ಆಕ್ಷೇಪವಿದೆ. ಅದಕ್ಕಾಗಿ ನಾಗಪುರದ ಆರೆಸ್ಸೆಸ್ ಕೇಂದ್ರದಲ್ಲಿ ‘ಲವ್ ಜಿಹಾದ್’ ಎಂಬ ಪದವನ್ನು ಹುಟ್ಟು ಹಾಕಿ ಅದನ್ನು ಭಾರತೀಯರ ಮೇಲೆ ಹೇರುತ್ತಿದ್ದಾರೆ. ಇದಷ್ಟೇ ಅಲ್ಲದೇ ಬಿಜೆಪಿ ಸರಕಾರಗಳಿರುವ ಕೆಲವು ರಾಜ್ಯಗಳಲ್ಲಿ ಕಾನೂನಿನ ಮೂಲಕ ಇಂಥ ಮದುವೆಗಳನ್ನು ನಿರ್ಬಂಧಿಸಲು ಹೊರಟಿವೆ.
ಗುಜರಾತ್‌ನಲ್ಲಿರುವ ಬಿಜೆಪಿ ಸರಕಾರ ವಿವಾಹಗಳ ನೋಂದಣಿಗೆ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸುವ ಕಾನೂನನ್ನು ತರಲು ಹೊರಟಿದೆ. ಇದು ಸಂವಿಧಾನಕ್ಕೆ ವಿರೋಧವಾದ ಪ್ರಸ್ತಾವ ಎಂದು ಗೊತ್ತಿದ್ದರೂ ಇದನ್ನು ತಂದು ಸಂಘರ್ಷ ಸ್ಥಿತಿಯನ್ನು ನಿರ್ಮಿಸಲು ಅದು ಹೊರಟಿದೆ. ಇದು ಸ್ವಾಯತ್ತತೆ ಮತ್ತು ಗೋಪ್ಯತೆಯ ಹಕ್ಕುಗಳನ್ನು ಉಲ್ಲಂಘಿಸುವ ಅಂಶಗಳನ್ನೂ ಒಳಗೊಂಡಿದೆ. ಗುಜರಾತ್‌ನ ಉಪ ಮುಖ್ಯಮಂತ್ರಿ ಹರ್ಷ ಸಂಘವಿ ಈ ಕುರಿತು ಸ್ಪಷ್ಟೀಕರಣ ನೀಡಿ ರಾಜ್ಯದ ಅಮಾಯಕ ಹೆಣ್ಣು ಮಕ್ಕಳನ್ನು ಸಮಾಜ ವಿರೋಧಿ ಶಕ್ತಿಗಳು ತಮ್ಮ ಬಲೆಗೆ ಕೆಡವಿಕೊಂಡು ಮೋಸ ಮಾಡುವುದನ್ನು ತಡೆಯುವ ಉದ್ದೇಶದಿಂದ ಗುಜರಾತ್ ವಿವಾಹ ನೋಂದಣಿಗಳ ಕಾಯ್ದೆ-2000ಕ್ಕೆ ತಿದ್ದುಪಡಿ ತರಲು ಉದ್ದೇಶಿಸಿರುವುದಾಗಿ ಹೇಳಿದ್ದಾರೆ.
ಇದಕ್ಕೆ ಕೆಲವೆಡೆ ವಿರೋಧ ಬಂದ ನಂತರ ಪ್ರೇಮ ವಿವಾಹಗಳಿಗೆ ಸರಕಾರದ ವಿರೋಧವಿಲ್ಲ ಎಂದು ಸಮಜಾಯಿಷಿ ನೀಡಿರುವ ಸಚಿವ ಹರ್ಷ ಸಂಘವಿ ಸನಾತನ ಧರ್ಮದ ರಕ್ಷಣೆ ಹಾಗೂ ಹೆಣ್ಣು ಮಕ್ಕಳ ಘನತೆಯನ್ನು ರಕ್ಷಿಸುವುದಾಗಿ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಗುಜರಾತ್‌ನ ಈ ಮಂತ್ರಿಯ ಮಾತಿನ ಹಿಂದೆ ಕೋಮುವಾದಿ ಸಂಘಟನೆಗಳು ನಿರಂತರವಾಗಿ ಪ್ರಚಾರ ನಡೆಸಿರುವ ‘ಲವ್ ಜಿಹಾದ್’ ಪ್ರಭಾವ ಇರುವುದನ್ನು ತಳ್ಳಿ ಹಾಕಲು ಆಗುವುದಿಲ್ಲ. ಗುಜರಾತ್ ಸರಕಾರದ ಈ ಪ್ರಸ್ತಾವ ಕಾನೂನಿನ ಸ್ವರೂಪವನ್ನು ಪಡೆದಾಗ ವಧು-ವರರು ತಾವು ವಿವಾಹವಾಗುವ ವಿಷಯವನ್ನು ಪೋಷಕರಿಗೆ ತಿಳಿಸಿದ್ದೇವೆ ಎಂದು ಘೋಷಿಸಬೇಕಾಗುತ್ತದೆ ಹಾಗೂ ಪೋಷಕರ ಗುರುತಿನ ವಿವರಗಳನ್ನು ಒದಗಿಸಬೇಕಾಗುತ್ತದೆ. ಇದು ಮಹಿಳೆಯರ ಸ್ವಂತ ವ್ಯಕ್ತಿತ್ವ ಹಾಗೂ ಯೋಚನಾ ಕ್ರಮಕ್ಕೆ ಚ್ಯುತಿ ತಂದಂತಾಗುತ್ತದೆ.
ಸಂವಿಧಾನದ ಪ್ರಕಾರ ಹಾಗೂ ನ್ಯಾಯಾಲಯಗಳು ನೀಡಿರುವ ಹಲವಾರು ತೀರ್ಪುಗಳ ಪ್ರಕಾರ ‘ಇಬ್ಬರು ವಯಸ್ಕರು ಮದುವೆಯಾಗಲು ಯಾರ ಒಪ್ಪಿಗೆಯ ಅಗತ್ಯವೂ ಇಲ್ಲ. ಇದು ಅವರಿಬ್ಬರ ಮೂಲಭೂತ ಹಕ್ಕು. ಈ ಮೂಲಭೂತ ಹಕ್ಕನ್ನು ಸಂವಿಧಾನದ 21ನೇ ವಿಧಿ ಒದಗಿಸಿದೆ. ಶಫೀನ್ ಜಹಾನ್ ವರ್ಸಸ್ ಅಶೋಕನ್ (2018), ಲತಾ ಸಿಂಗ್ ವರ್ಸಸ್ ಉತ್ತರ ಪ್ರದೇಶ (2002), ಲಕ್ಷ್ಮೀಬಾಯಿ ಚಂದರಗಿ ವರ್ಸಸ್ ಕರ್ನಾಟಕ (2021) ಪ್ರಕರಣಗಳಲ್ಲಿ’ ಬಾಹ್ಯ ಹಸ್ತಕ್ಷೇಪವಿಲ್ಲದೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಜೀವಿಸುವ ಹಕ್ಕು ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಲವಾರು ಪ್ರಕರಣಗಳಲ್ಲಿ ಹೈಕೋರ್ಟ್‌ಗಳು ಕೂಡ ಇಂಥದೇ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಮೂವತ್ತು ದಿನಗಳ ನೋಟಿಸ್‌ನ ಅಗತ್ಯವನ್ನು ನ್ಯಾಯಾಲಯಗಳು ರದ್ದುಗೊಳಿಸಿವೆ.
ವಿವಾಹವಾಗುವ ತೀರ್ಮಾನಕ್ಕೂ ಜಾತಿ, ಧರ್ಮ ಅಥವಾ ಪೋಷಕರ ಒಪ್ಪಿಗೆಗೆ ಸಂಬಂಧವನ್ನು ಕಲ್ಪಿಸುವುದು ಸರಿಯಲ್ಲ. ಯಾರೇ ಆಗಲಿ ಪರಸ್ಪರ ಇಷ್ಟಪಟ್ಟು ವಿವಾಹವಾಗುವ ವಯಸ್ಕ ಜೋಡಿಯ ಮದುವೆಯಾಗುವ ಹಕ್ಕನ್ನು ರಕ್ಷಿಸುವುದು ರಾಜ್ಯ ಸರಕಾರಗಳ ಕರ್ತವ್ಯವಾಗಿದೆ. ಯಾವುದೇ ರಾಜ್ಯ ಸರಕಾರ ಇಂಥ ಹೊಣೆಗಾರಿಕೆಯನ್ನು ನಿರ್ವಹಿಸುವ ಬದಲಾಗಿ ಮದುವೆಗೆ ಸಾಮಾಜಿಕ ಕಣ್ಗಾವಲು ವಿಧಿಸುವ ಹಾಗೂ ಹೆಣ್ಣು-ಗಂಡಿನ ವಿವಾಹದ ತೀರ್ಮಾನದ ಮೇಲೆ ಕುಟುಂಬ ಹಾಗೂ ಸರಕಾರದ ನಿಯಂತ್ರಣವನ್ನು ಹೇರುವ ಗುಜರಾತ್‌ನ ಬಿಜೆಪಿ ಸರಕಾರದ ಕ್ರಮ ಸರಿಯಾದುದಲ್ಲ.
ಸಂಘ ಪರಿವಾರದವರು ಮುಸಲ್ಮಾನರನ್ನು ಮುಖ್ಯ ವಾಹಿನಿಯಲ್ಲಿ ಬೆರೆಯದಂತೆ ಪ್ರತ್ಯೇಕಿಸಲು ರೂಪಿಸಿದ ಹಲವಾರು ಮಸಲತ್ತುಗಳಲ್ಲಿ ‘ಲವ್ ಜಿಹಾದ್’ ಎಂಬ ಪದ ಸೃಷ್ಟಿಯೂ ಒಂದು. ಯಾವುದೇ ಪುರಾವೆಗಳಿಲ್ಲದೇ ಸಮಾಜದಲ್ಲಿ ವ್ಯಾಪಕವಾಗಿ ಇದನ್ನು ಹರಡಲಾಗುತ್ತಿದೆ. ಮುಸ್ಲಿಮ್ ಯುವಕ ಹಾಗೂ ಹಿಂದೂ ಯುವತಿ ಪರಸ್ಪರ ಇಷ್ಟಪಟ್ಟು ಮದುವೆಯಾಗಲು ತೀರ್ಮಾನಿಸಿದರೆ ತಮಗೆ ಸಂಬಂಧಪಡದ ಈ ವಿಷಯದಲ್ಲಿ ತಲೆ ಹಾಕುವ ಕೋಮುವಾದಿಗಳು ಇಲ್ಲದ ವಿವಾದವನ್ನು ಹುಟ್ಟು ಹಾಕುತ್ತಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಇಂಥದೇ ಪ್ರಸಂಗದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ಶಾಸಕ ಅರವಿಂದ ಬೆಲ್ಲದ ಮತ್ತು ಚಕ್ರವರ್ತಿ ಸೂಲಿಬೆಲೆ ಮೊದಲಾದವರು ಯುವತಿಯ ಮನೆಗೆ ಹೋಗಿ ವಿವಾದವನ್ನು ಸೃಷ್ಟಿಸಲು ಯತ್ನಿಸಿದರು. ಮುಸಲ್ಮಾನರನ್ನು ರಾಕ್ಷಸರಂತೆ ಬಿಂಬಿಸಲು ಹಾಗೂ ಕೋಮು ಆಧಾರದಲ್ಲಿ ಧ್ರುವೀಕರಣ ಉಂಟು ಮಾಡಲು ಯತ್ನಿಸಿದರು. ಇಂಥದೇ ಅಪಪ್ರಚಾರವನ್ನು ಕೇರಳದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ನಡೆಸಿದರು. ವಾಸ್ತವವಾಗಿ ಸಂಘ ಪರಿವಾರದ ನಾಯಕರಾದ ಮುರಳಿ ಮನೋಹರ ಜೋಶಿ, ಅಶೋಕ ಸಿಂಘಾಲ್, ಎಲ್.ಕೆ.ಅಡ್ವಾಣಿಯವರು ತಮ್ಮ ಪುತ್ರಿಯರನ್ನು ಮುಸ್ಲಿಮ್ ಯುವಕರೊಂದಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. ಅಲ್ಲಿ ಭಕ್ತರು ‘ಲವ್ ಜಿಹಾದ್’ ಪದ ಪ್ರಯೋಗ ಮಾಡುವುದಿಲ್ಲ. ಯುವಕರು ತಮ್ಮ ಇಷ್ಟದ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಈ ದೊಣ್ಣೆ ನಾಯಕರ ಸಮ್ಮತಿ ಪಡೆಯಬೇಕಾಗಿ ಬಂದಿದೆ. ಯುವತಿಯ ತಾಯಿ ತಂದೆ ಒಪ್ಪಿದರೆ ಸಾಲದು ಈ ದೊಣ್ಣೆ ನಾಯಕರನ್ನು ಓಲೈಸಬೇಕಾಗುತ್ತದೆ. ಮುಸಲ್ಮಾನರನ್ನು ರಾಕ್ಷಸರಂತೆ ಬಿಂಬಿಸಲಾಗುತ್ತಿದೆ. ಗುಜರಾತ್ ಮಾತ್ರವಲ್ಲ ಬಿಜೆಪಿ ಸರಕಾರವಿರುವ ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಅದೇ ಮಾದರಿಯ ಕಾನೂನಿಗೆ ತಿದ್ದುಪಡಿ ಮಾಡಿ ಅಂಗೀಕರಿಸಲಾಗಿದೆ. ವಿಷಾದದ ಸಂಗತಿ ಆಂದರೆ ಜಾತ್ಯತೀತ ಎಂದು ಹೇಳಿಕೊಳ್ಳುವ ಗುಜರಾತ್‌ನ ಕಾಂಗ್ರೆಸ್ ನಾಯಕರು ಬಿಜೆಪಿ ಸರಕಾರದ ಪ್ರಸ್ತವವನ್ನು ಬೆಂಬಲಿಸಿದ್ದಾರೆ.
ಸ್ವಾತಂತ್ರ್ಯ ಬಂದು ಎಪ್ಪತ್ತೈದಕ್ಕಿಂತ ಹೆಚ್ಚು ವರ್ಷಗಳ ಕಾಲಾವಧಿಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಭಾರತದ ಸಾಧನೆ ಗಮನಾರ್ಹವಾಗಿದೆ. ಆದರೆ ಇನ್ನೂ ಸಮುದಾಯಗಳಿಗೆ ಸ್ವಾತಂತ್ರ್ಯದ ಬೆಳಕು ಬಂದಿಲ್ಲ. ಇಂಥ ಸನ್ನಿವೇಶದಲ್ಲಿ ಹೊಸ ಭಾರತವನ್ನು ಕಟ್ಟುವ ಹೊಣೆ ಹೊರಬೇಕಾದ ಯುವಜನರು ಸಾರ್ವಜನಿಕ ಹಾಗೂ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಆ ಕನಸು ಭಗ್ನಗೊಳ್ಳದಂತೆ ನಾವು ಎಚ್ಚರ ವಹಿಸಬೇಕಾಗಿದೆ. ಈ ಬಹುತ್ವ ಭಾರತದಲ್ಲಿ ಜಾತಿಯೊಳಗೆ ಮದುವೆ ಮಾಡಿಕೊಂಡಂತೆ ಜಾತಿ ಮತ್ತು ಮತಗಳನ್ನು ಆಚೆಗಿಟ್ಟು ವಿವಾಹವಾಗಿರುವ ಲಕ್ಷಾಂತರ ಜನರಿದ್ದಾರೆ.ಮನುವಾದಿಗಳು ಮತ್ತು ಕೋಮುವಾದಿಗಳು ತಾವು ಬಿದ್ದಿರುವ ಹಾಳು ಬಾವಿಗೆ ಈ ತರುಣರನ್ನು ಎಳೆದುಕೊಳ್ಳದೇ ಅವರ ಪಾಡಿಗೆ ಅವರನ್ನು ಬದುಕಲು ಬಿಡಬೇಕು.






