Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಗದ್ದರ್ ಹಾಡುಗಳಿಗೆ ಸಾವಿಲ್ಲ

ಗದ್ದರ್ ಹಾಡುಗಳಿಗೆ ಸಾವಿಲ್ಲ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ14 Aug 2023 9:34 AM IST
share
ಗದ್ದರ್ ಹಾಡುಗಳಿಗೆ ಸಾವಿಲ್ಲ

ಕಳೆದ ರವಿವಾರ ಮುಂಬೈನಲ್ಲಿದ್ದೆ. ಅಲ್ಲಿನ ಕನ್ನಡ ಪತ್ರಕರ್ತರ ಸಂಘದ ಕಾರ್ಯಕ್ರಮಕ್ಕೆ ಹೋದಾಗ ಕ್ರಾಂತಿಕಾರಿ ಕವಿ, ಹಾಡುಗಾರ ಗದ್ದರ್ ಸಾವಿನ ಸುದ್ದಿ ಬಂತು. ಗದ್ದರ್ ಜೊತಗಿನ ಕೆಲವು ನೆನಪುಗಳು, ಭೇಟಿಗಳು, ಮಾತುಗಳು ಒಂದು ಕ್ಷಣ ಕಣ್ಣೆದುರಿಗೆ ಬಂದವು.

ಈ ವಾರ ಮುಂಬೈ ಕನ್ನಡ ಪತ್ರಕರ್ತ ಗೆಳೆಯರ ಆತ್ಮೀಯ ಒಡನಾಟ, ವಾಣಿಜ್ಯ ನಗರಿಯ ಸುತ್ತಾಟ, ಇವುಗಳ ಬಗ್ಗೆ ಬರೆಯಬೇಕೆಂದು ಅಂದುಕೊಳ್ಳುತ್ತಿರುವಾಗಲೇ ಗದ್ದರ್ ಮತ್ತು ಬಿಜಾಪುರದ ನನ್ನ ಆತ್ಮೀಯ ಸಂಗಾತಿ ಪ್ರಕಾಶ್ ಹಿಟ್ಟಿನಹಳ್ಳಿ ಅವರ ನಿರ್ಗಮನದ ಸುದ್ದಿ ಕೇಳಿ ಮೊದಲು ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಳ್ಳಬೇಕೆನಿಸಿತು. ಪ್ರಕಾಶ್ ಹಿಟ್ಟಿನಹಳ್ಳಿ (ಕುಲಕರ್ಣಿ) ಬಾಲ್ಯ ಮತ್ತು ಯೌವನದ ಆ ದಿನಗಳಲ್ಲಿ ನಮಗೆ ಮಾರ್ಕ್ಸ್ ವಾದದ ಸೈದ್ಧಾಂತಿಕ ಅರಿವು ಮೂಡಿಸಿ ಓದಲು ಹಚ್ಚಿದವರು. ಹಲವಾರು ಚಾರಿತ್ರಿಕ ವಿಷಯಗಳ ಮಾಹಿತಿಯ ಕಣಜವಾಗಿದ್ದ ಪ್ರಕಾಶ್ ಫ್ಯೂಡಲ್ ಸರ್ ನೇಮ್ ಬೇಡ ಎಂದು ಕುಲಕರ್ಣಿ ಎಂಬ ಅಡ್ಡ ಹೆಸರನ್ನು ತೆಗೆದು ಹಾಕಿ ತಮ್ಮ ಊರ ಹೆಸರನ್ನು ಇಟ್ಟುಕೊಂಡು ಹಿಟ್ಟಿನಹಳ್ಳಿ ಆದವರು. ಕೆಂಬಾವುಟವನ್ನೇ ಸಂಗಾತಿಯನ್ನಾಗಿಸಿಕೊಂಡು ಅವಿವಾಹಿತರಾಗಿಯೇ ಉಳಿದ ಪ್ರಕಾಶ್ ಹಿಟ್ಟಿನಹಳ್ಳಿ ಅವರನ್ನು ಅವರ ಹಳ್ಳಿಯ ಎಲ್ಲಾ ಜಾತಿ ಮತಗಳ ಜನರೇ ಊಟ ನೀಡಿ ನೋಡಿಕೊಂಡರು. ಕಮ್ಯುನಿಸ್ಟ್ ಪಕ್ಷದ ಅದರಲ್ಲೂ ಸಿಪಿಐನ ಕಟ್ಟಾಳು ಆಗಿದ್ದ ಪ್ರಕಾಶ್ ಹಿಟ್ಟಿನಹಳ್ಳಿ ಅವರ ಜೊತೆಗಿನ ಮಾತುಗಳು ಮುಗಿದಿರಲಿಲ್ಲ. ಮಾತು ಮುಗಿಯುವ ಮೊದಲೇ ಎದ್ದು ಹೋದರು.

ಇನ್ನು ಗದ್ದರ್ ಎಂಬ ಸಾಂಸ್ಕೃತಿಕ ಜ್ವಾಲಾಮುಖಿಯ ನಿರ್ಗಮನ ಈ ಭಾರತದ ವಿಶೇಷವಾಗಿ ಅವಿಭಜಿತ ಆಂಧ್ರಪ್ರದೇಶದ ಜನ ಚಳವಳಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿದೆ. ಆದರೆ ಅವರ ಗುಡುಗು, ಸಿಡಿಲಿನ ಹಾಡುಗಳು ಬಹುಕಾಲ ಜನ ಹೋರಾಟದ ಉಸಿರಾಗಲಿವೆ.

ಗದ್ದರ್ ಈಗ ನಮ್ಮ ನಡುವೆ ದೈಹಿಕವಾಗಿ ಇಲ್ಲ. ಆದರೆ ಅವರು ಬರೆದ, ಹಾಡಿದ ಕ್ರಾಂತಿಕಾರಿ ಹಾಡುಗಳಲ್ಲಿ ಅವರು ಜೀವಂತವಾಗಿದ್ದಾರೆ. ಜಗತ್ತಿನಲ್ಲಿ, ಸಮಾಜದಲ್ಲಿ ಅಸಮಾನತೆ ಇರುವವರೆಗೆ, ತುಳಿತಕ್ಕೊಳಗಾದ ಜನರ ಕೊರಳ ಧ್ವನಿಯಾಗಿ ಗದ್ದರ್ ಚಿರಸ್ಮರಣೀಯರಾಗಿ ಉಳಿಯುತ್ತಾರೆ.

ಗದ್ದರ್ ಅವರನ್ನು ಮೊದಲು ನೋಡಿದ್ದು ಬೆಂಗಳೂರಿನ ಪುರಭವನದ ಒಂದು ಕಾರ್ಯಕ್ರಮದಲ್ಲಿ. ಅಂದು ಅವರ ಹಾಡು ಮತ್ತು ಮಾತು ಕೇಳಲು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು ಹಾಗೂ ಸಾರ್ವಜನಿಕರಿಂದ ಸಭಾಂಗಣ ಕಿಕ್ಕಿರಿದು ತುಂಬಿತ್ತು. ನಂತರ ಗದ್ದರ್ ಅವರನ್ನು ಮಹಾಲಿಂಗಪುರದ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಅತ್ಯಂತ ಹತ್ತಿರದಿಂದ ನೋಡಿದ್ದು ಮಾತ್ರವಲ್ಲ ತಾಸುಗಟ್ಟಲೆ ಅವರೊಂದಿಗೆ ಚರ್ಚೆ ಮಾಡಿದ್ದಾಯಿತು. ಆನಂತರ ಚಿಕ್ಕಮಗಳೂರಿನ ಸೌಹಾರ್ದ ಸಮ್ಮೇಳನದಲ್ಲಿ ಮತ್ತೆ ಅವರ ಮಾತು ಮತ್ತು ಹಾಡು. ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ನವ ಸಮಾಜವಾದಿ ಕ್ರಾಂತಿಯ ಭರವಸೆಯನ್ನು ತುಂಬುವ ಅವರ ಹಾಡುಗಳನ್ನು ಕೇಳಲು ಹೈದರಾಬಾದ್‌ವರೆಗೆ ಹೋಗಿ ಬಂದಿದ್ದೇನೆ.

ಅದು 2004-05ರ ಆಸುಪಾಸಿನ ಸಂದರ್ಭ. ಚಿತ್ರದುರ್ಗದ ಮುರುಘಾಮಠದ ಶರಣರು ಗದ್ದರ್ ಅವರಿಗೆ ಬಸವ ಪ್ರಶಸ್ತಿ ನೀಡಲು ತೀರ್ಮಾನಿಸಿ ಅವರನ್ನು ಆಹ್ವಾನಿಸಿದ್ದರು. ಆ ಕಾರ್ಯಕ್ರಮದಲ್ಲಿ ನಾನೂ ಪಾಲ್ಗೊಂಡಿದ್ದೆ. ಆಗ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಅಂದರೆ ಎನ್‌ಡಿಎ ಸರಕಾರವಿತ್ತು.ಗದ್ದರ್ ಅವರಿಗೆ ಬಸವಶ್ರೀ ಪ್ರಶಸ್ತಿಯನ್ನು ನೀಡಕೂಡದೆಂದು ಮುರುಘಾಮಠದ ಸ್ವಾಮಿಗಳ ಮೇಲೆ ಪಟ್ಟಭದ್ರ ಹಿತಾಸಕ್ತಿಗಳಿಂದ, ಪ್ರಭುತ್ವದ ಪ್ರಭಾವೀ ವ್ಯಕ್ತಿಗಳಿಂದ ಸಾಕಷ್ಟು ಒತ್ತಡ ಬಂತು. ಕೋಮುವಾದಿ ಸಂಘಟನೆಗಳು ಮುರುಘಾಮಠದ ಸ್ವಾಮಿಯ ಪ್ರತಿಕೃತಿಯನ್ನು ದಹನ ಮಾಡಿದವು. ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಂದಿನ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಬರಬೇಕಾಗಿತ್ತು.ಅವರೂ ಒಪ್ಪಿಗೆ ನೀಡಿದ್ದರು. ಆದರೆ ಹೊರಡುವ ಕೊನೆಯ ಗಳಿಗೆಯಲ್ಲಿ ಅಂದಿನ ಉಪಪ್ರಧಾನಿ ಮತ್ತು ಹಿರಿಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರು ಗದ್ದರ್ ಕಾರ್ಯಕ್ರಮಕ್ಕೆ ಹೋಗುವುದು ಬೇಡ ಎಂದು ತಡೆ ಹಾಕಿದ್ದರಿಂದ ಜಾರ್ಜ್ ಬರಲಿಲ್ಲ.ಆದರೆ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ನಡೆಯಿತು. ಬಸವಶ್ರೀ ಪ್ರಶಸ್ತಿಯ ಜೊತೆಗೆ ನೀಡಿದ ಒಂದು ಲಕ್ಷ ರೂ. ಮೊತ್ತದ ಚೆಕ್‌ನ್ನು ಗದ್ದರ್ ಕರ್ನಾಟಕದ ಕೋಮು ಸೌಹಾರ್ದ ವೇದಿಕೆಗೆ ನೀಡಿದರು. ಅಂದಿನ ಕಾರ್ಯಕ್ರಮದಲ್ಲಿ ಹುತಾತ್ಮರಾದ ಹಾಜಿಮಾ ಮತ್ತು ಪಾರ್ವತಿ ಅವರನ್ನು ಸ್ಮರಿಸಿ ಗದ್ದರ್ ತುಂಬ ಭಾವುಕರಾಗಿ ಮಾತಾಡಿದರು. ಪೊಲೀಸರ ಏಜೆಂಟರ ಗುಂಡಿನ ದಾಳಿಯಿಂದ ಪಾರಾಗಿ ಬಂದಿದ್ದ ಗದ್ದರ್ ತಮ್ಮ ಎದೆಯ ಕೆಳಭಾಗದಲ್ಲಿ ಉಳಿದಿದ್ದ ಗುಂಡಿದ್ದ ಜಾಗವನ್ನು ತೋರಿಸಿದರು.

ಅದು ಎಪ್ಪತ್ತರ ದಶಕ. ಅವಿಭಜಿತ ಆಂಧ್ರಪ್ರದೇಶದಲ್ಲಿ ಕೊಂಡಪಲ್ಲಿ ಸೀತಾರಾಮಯ್ಯನವರ ನೇತೃತ್ವದ ಕ್ರಾಂತಿಕಾರಿ ಕಮ್ಯುನಿಸ್ಟ್ ಆಂದೋಲನ ಅಲೆ ಅಲೆಯಾಗಿ ಬಂದು ಇಡೀ ರಾಜ್ಯವನ್ನು ಆವರಿಸಿತ್ತು. ಆಗ ಹೈದರಾಬಾದ್‌ನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಗುಮ್ಮಡಿ ವಿಠ್ಠಲರಾವ್ (ಗದ್ದರ್) ಆ ಕ್ರಾಂತಿಕಾರಿ ಪ್ರವಾಹದ ಸೆಳವಿಗೆ ಸಿಕ್ಕರು. ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟರು. ಮುಂದೆ ಕೆನರಾ ಬ್ಯಾಂಕ್‌ನಲ್ಲಿ ಕೆಲ ತಿಂಗಳು ನೌಕರಿ ಮಾಡಿ ಅದನ್ನೂ ಬಿಟ್ಟು ದಮನಿತ ಸಮುದಾಯದ ಕ್ರಾಂತಿಕಾರಿ ಚಳವಳಿಗೆ ತಮ್ಮನ್ನು ಸಮರ್ಪಿಸಿಕೊಂಡರು.

ಭಾರತದ ಕಮ್ಯುನಿಸ್ಟ್ ಚಳವಳಿಯಲ್ಲಿ ಇಪ್ಟಾದ ನಂತರ ಸಾಂಸ್ಕೃತಿಕ ಕ್ಷೇತ್ರವನ್ನು ಸಮಾಜ ಬದಲಾವಣೆಯ ಅಸ್ತ್ರವನ್ನಾಗಿ ಪರಿಣಾಮಕಾರಿಯಾಗಿ ಬಳಸಿಕೊಂಡ ಸಂಘಟನೆಯೆಂದರೆ ಗದ್ದರ್ ಅವರ ‘ಜನ ನಾಟ್ಯ ಮಂಡಲಿ’. ಅದರಲ್ಲೂ ಗದ್ದರ್ ಅವರ ಹಾಡು ಮತ್ತು ನೃತ್ಯ ಎಷ್ಟು ಪರಿಣಾಮಕಾರಿ ಮತ್ತು ಪ್ರಭಾವಶಾಲಿಯಾಗಿತ್ತೆಂದರೆ ಹೈದರಾಬಾದ್‌ನ ನಿಜಾಮ ಕಾಲೇಜಿನ ಬೃಹತ್ ಮೈದಾನದಲ್ಲಿ ಅವರ ಮಾತು ಮತ್ತು ಹಾಡು ಕೇಳಲು ಲಕ್ಷಾಂತರ ಜನ ಸೇರುತ್ತಿದ್ದರು.

ಬೆಂಗಳೂರು ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಪೀಠದಲ್ಲಿ ಸಿಜಿಕೆ ಅವರು ನಿರ್ದೇಶಕರಾಗಿದ್ದಾಗ ವಿದ್ಯಾರ್ಥಿಗಳನ್ನೆಲ್ಲಾ ಸೇರಿಸಿ ಗದ್ದರ್ ಕಾರ್ಯಕ್ರಮ ಏರ್ಪಡಿಸಿದ್ದರು. ಆ ದಿನವೂ ಗದ್ದರ್ ತುಂಬಾ ಅದ್ಭ್ಬುತ ಕಾರ್ಯಕ್ರಮ ನೀಡಿದರು. ಪುಟ್ಟಪರ್ತಿ ಸಾಯಿಬಾಬಾ ಬಗ್ಗೆ ಗದ್ದರ್ ಹಾಡು ಅತ್ಯಂತ ಜನಪ್ರಿಯವಾಗಿತ್ತು. ಹಿರಿಯ ವಿಚಾರವಾದಿ ಎಚ್.ನರಸಿಂಹಯ್ಯ ನವರು ಅದನ್ನು ತುಂಬಾ ಇಷ್ಟಪಡುತ್ತಿದ್ದರು.ಅವರೂ ತಮ್ಮ ನ್ಯಾಶನಲ್ ಕಾಲೇಜಿನಲ್ಲಿ ಒಂದೆರಡು ಸಲ ಗದ್ದರ್ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಶೋಷಣೆ, ಅಸಮಾನತೆ ತುಂಬಿದ ಸಮಾಜ ವ್ಯವಸ್ಥೆ ಬದಲಾವಣೆಯಾಗಬೇಕೆಂಬ ಆಶಯದ ಮಾರ್ಕ್ಸ್‌ವಾದ ಮತ್ತು ಅಂಬೇಡ್ಕರ್ ವಾದ ಸಿದ್ಧಾಂತಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಭಾಷೆ ಮತ್ತು ಕಲೆ ಗದ್ದರ್ ಅವರಿಗೆ ಸಿದ್ಧ್ದಿಸಿತ್ತು. ಕೋಮುವಾದ, ಕಂದಾಚಾರಗಳನ್ನು ನಖ ಶಿಖಾಂತವಾಗಿ ವಿರೋಧಿಸುತ್ತಾ ಬಂದ ಗದ್ದರ್ ಸಭಿಕರೊಂದಿಗೆ ಸಂವಾದ ಮಾಡುತ್ತಿದ್ದರು. ಭಾರತದ ಸಂದರ್ಭದಲ್ಲಿ ವರ್ಗ ಹೋರಾಟದ ಜೊತೆಗೆ ಶ್ರೇಣೀಕೃತ ಜಾತಿ ವ್ಯವಸ್ಥೆಯ ವಿರುದ್ಧವೂ ಹೋರಾಡಬೇಕು ಎಂಬ ಬಾಬಾಸಾಹೇಬರ ತತ್ವ, ಸಿದ್ಧಾಂತದಲ್ಲಿ ನಂಬಿಕೆ ಹೊಂದಿದ್ದ ಗದ್ದರ್ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಂಬಿದ ಸಿದ್ಧಾಂತಕ್ಕಾಗಿ ಹೋರಾಡುತ್ತಾ ಬಂದರು.

ಇಂತಹ ಕ್ರಾಂತಿಕಾರಿ ಕವಿ, ಹಾಡುಗಾರ ಕಾಮ್ರೇಡ್ ಗದ್ದರ್ ಸಾವಿನ ನಂತರ ಅವರ ಕೊನೆಯ ದಿನಗಳ ಚಟುವಟಿಕೆಗಳ ಬಗ್ಗೆ ಕೆಲವರಿಂದ ಅದೂ ಸಂಘಟನೆಯ ಹಿನ್ನೆಲೆ ಹೊಂದಿದವರಿಂದ ಸಹಜವಾಗಿ ಟೀಕೆ, ವಿಮರ್ಶೆಗಳು ಬರುತ್ತಿವೆ. ಬದುಕಿನುದ್ದಕ್ಕೂ ವ್ಯವಸ್ಥೆಯ ವಿರುದ್ಧ ಹೋರಾಡುತ್ತಲೇ ಬಂದ ಗದ್ದರ್ ತಮ್ಮ ಬದ್ಧತೆಗಾಗಿ ಗುಂಡಿನೇಟು ತಿಂದರು. ಒಂದು ಗುಂಡು ಅವರ ಎದೆಯಲ್ಲೇ ಇತ್ತು. ತೆಗೆದರೆ ಹೃದಯಕ್ಕೆ ತೊಂದರೆಯಾದೀತೆಂದು ವೈದ್ಯರು ತೆಗೆದಿರಲಿಲ್ಲ. ಅವರು ಕರ್ನಾಟಕದಲ್ಲಿ ಎಲ್ಲೇ ಬರಲಿ ಅವರ ಮೈ ನವಿರೇಳಿಸುವ ಕ್ರಾಂತಿಯ ಹಾಡುಗಳನ್ನು ಕೇಳಲು ಹೋಗುತ್ತಿರುವವರಲ್ಲಿ ನಾನೂ ಒಬ್ಬ.

ಕ್ರಾಂತಿಕಾರಿ ಪಕ್ಷವೊಂದರ ಸದಸ್ಯರಾಗಿದ್ದ ಗದ್ದರ್ ತಮ್ಮ ಹಾಡುಗಳ ಮೂಲಕ ಚಳವಳಿಯನ್ನು ಬೆಳೆಸಿದರು. ಚಳವಳಿಯಿಂದ ಅವರೂ ಬೆಳೆದರು, ಇದೊಂದು ಗತಿ ತಾರ್ಕಿಕ ಸಂಗತಿ. ಆದರೆ ಸಂಘಟನೆಯ ಶಿಸ್ತಿಗೆ ಒಳಪಡಲು ಬೆಳೆದು ನಿಂತ ಗದ್ದರ್‌ಗೆ ಕಷ್ಟವಾಗಿರಬಹುದು.ಉಸಿರು ಗಟ್ಟಿದ ವಾತಾವರಣ ಅನಿಸಿರಬಹುದು. ಅಂತಲೇ ಸಂಘಟನೆಯಿಂದ ಅಂತರ ಕಾಯ್ದುಕೊಂಡರು. ಆದರೆ ಅವಿಭಜಿತ ಆಂಧ್ರಪ್ರದೇಶದಲ್ಲಿ ಒಬ್ಬ ಮುಖ್ಯಮಂತ್ರಿಗೆ ಇರುವಷ್ಟೇ ಜನಪ್ರಿಯತೆ, ಪ್ರಭಾವ, ವರ್ಚಸ್ಸು ಗದ್ದರ್‌ರಿಗೆ ಇತ್ತು. ಆದರೂ ಚುನಾವಣಾ ರಾಜಕೀಯ ಪ್ರವೇಶಿಸುವ ವ್ಯಾಮೋಹ ಅವರಿಗೇಕೆ ಅಂಟಿಕೊಂಡಿತೋ ಎಂದು ಅನೇಕರಿಗೆ ಅನಿಸುವುದರಲ್ಲಿ ಅಚ್ಚರಿಯಿಲ್ಲ. ಅಷ್ಟೇ ಅಲ್ಲ, ವಿಶಿಷ್ಟಾದ್ವೈತ ತತ್ವ ಪ್ರತಿಪಾದಕ ರಾಮಾನುಜಾಚಾರ್ಯರನ್ನು ಹಾಡಿ ಹೊಗಳಿ ಹಾಡು ಬರೆದರು ಮತ್ತು ಹಾಡಿದರು.ಅಷ್ಟೇ ಅಲ್ಲ ದೇವಾಲಯಗಳಿಗೆ ಹೋಗಿ ಅರ್ಚಕರೆದುರು ಯಾಕೆ ಕೈ ಯೊಡ್ಡಿ ನಿಂತರು ಎಂದು ಅನೇಕರು ಪ್ರಶ್ನಿಸುತ್ತಾರೆ. ಆದರೆ ಕೊನೆಯ ದಿನಗಳಲ್ಲಿ ಗದ್ದರ್ ಯಾವ ಒತ್ತಡಕ್ಕೆ ಒಳಗಾಗಿದ್ದರೋ ಯಾರಿಗೆ ಗೊತ್ತು? ಈ ಒಂದೆರಡು ಘಟನೆಗಳಿಗಾಗಿ ಗದ್ದರ್ ಅವರ ಇಡೀ ವ್ಯಕ್ತಿತ್ವವನ್ನೇ ಅಲ್ಲ ಗಳೆಯಲು ಆಗುವುದಿಲ್ಲ. ಸಾಂಸ್ಕೃತಿಕ ರಂಗದ ಒಬ್ಬ ಕ್ರಾಂತಿಕಾರಿ ಕಲಾವಿದನ ನಡೆದು ಬಂದ ಸುದೀರ್ಘ ಪಯಣದ ಮೌಲ್ಯಮಾಪನ ಮಾಡಿದಾಗ ಕಾಮ್ರೇಡ್ ಗದ್ದರ್ ನಮ್ಮೆಲ್ಲರ ಅಂದರೆ ಎಲ್ಲ ದಮನಿತ ಸಮುದಾಯಗಳ ಒಲುವಿನ ಸಂಗಾತಿಯಾಗಿ, ಗೌರವಾನ್ವಿತ ಸಾಂಸ್ಕೃತಿಕ ನಾಯಕನಾಗಿ ನಮ್ಮ ಹೃದಯಾಂತರಾಳದಲ್ಲಿ ಚಿರಸ್ಮರಣೀಯರಾಗಿ ಉಳಿಯುತ್ತಾರೆ.ಅವರ ಹಾಡುಗಳು ಮುಂದೆಯೂ ಸಮ ಸಮಾಜದ ಹೋರಾಟಕ್ಕೆ ಸ್ಫೂರ್ತಿ ನೀಡುತ್ತವೆ.

ಅದರಲ್ಲೂ 2014ರಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ದಮನಿತ, ದಲಿತ ಸಮುದಾಯದ ಪ್ರಗತಿಪರ ಚಿಂತಕರು ಮತ್ತು ಕಲಾವಿದರು ಹಾಗೂ ಲೇಖಕರನ್ನು ಹತ್ತಿಕ್ಕುವ ಅವರ ಧ್ವನಿಯನ್ನು ಅಡಗಿಸುವ ಹುನ್ನಾರ ನಡೆಯುತ್ತಲೇ ಬಂತು. ಆನಂದ್ ತೇಲ್ತುಂಬ್ಡೆ ,ಕವಿ ವರವರರಾವ್, ಕೋಬಾಡ್ ಗಾಂಧಿ ಮೊದಲಾದವರ ಬಂಧನವಾಯಿತು. ಅನೇಕರಿಗೆ ಚಿತ್ರಹಿಂಸೆ ನೀಡಲಾಯಿತು. ಇದರಿಂದ ದಿಗ್ಭ್ರಮೆಗೊಂಡ ಗದ್ದರ್ ಪ್ರಭುತ್ವದ ದೌರ್ಜನ್ಯದ ಬಲೆಯಿಂದ ಪಾರಾಗಲು ಸಣ್ಣಪುಟ್ಟ ರಾಜಿ ಮಾಡಿಕೊಂಡರಾ? ಹಾಗೆ ಮಾಡಿಕೊಂಡಿದ್ದರೆ ಅಚ್ಚರಿಪಡಬೇಕಾಗಿಲ್ಲ.

ಗದ್ದರ್ ಸಾವಿನ ಸಂದರ್ಭದಲ್ಲಿ ಅವರನ್ನು ವಿಮರ್ಶಿಸುತ್ತಲೇ ಕ್ರಾಂತಿಕಾರಿ ಚಳವಳಿಗೆ ಅವರ ಕೊಡುಗೆಯ ಬಗ್ಗೆ ಆಂಧ್ರಪ್ರದೇಶ, ತೆಲಂಗಾಣ ಮಾತ್ರವಲ್ಲ ದೇಶದ ಬಹುತೇಕ ಎಡಪಂಥೀಯ ಪ್ರಗತಿಪರ ಸಂಘಟನೆಗಳು ಮತ್ತು ಗೆಳೆಯರು ಅಪಾರ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಗದ್ದರ್ ಅವಕಾಶವಾದಿ ಮತ್ತು ರಾಜಿ ಮಾಡಿಕೊಂಡರು ಎಂದು ನಿಂದಿಸುವವರು ತಮ್ಮ ಬದುಕಿನಲ್ಲಿ ರಾಜಿ ಮಾಡಿಕೊಂಡಿಲ್ಲವೇ? ಗದ್ದರ್ ಈಗ ನಮ್ಮ ನಡುವೆ ದೈಹಿಕವಾಗಿ ಇಲ್ಲ. ಆದರೆ ಅವರು ಬರೆದ, ಹಾಡಿದ ಕ್ರಾಂತಿಕಾರಿ ಹಾಡುಗಳಲ್ಲಿ ಅವರು ಜೀವಂತವಾಗಿದ್ದಾರೆ. ಜಗತ್ತಿನಲ್ಲಿ, ಸಮಾಜದಲ್ಲಿ ಅಸಮಾನತೆ ಇರುವವರೆಗೆ, ತುಳಿತಕ್ಕೊಳಗಾದ ಜನರ ಕೊರಳ ಧ್ವನಿಯಾಗಿ ಗದ್ದರ್ ಚಿರಸ್ಮರಣೀಯರಾಗಿ ಉಳಿಯುತ್ತಾರೆ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X