ಆರೆಸ್ಸೆಸ್ ಬದಲಾಗಿದೆಯೇ?

ಭಾರತ ಕಮ್ಯುನಿಸ್ಟ್ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈಗ ಶತಮಾನೋತ್ಸವದ ಸಂಭ್ರಮದಲ್ಲಿವೆ. ಕಮ್ಯುನಿಸ್ಟ್ ಪಕ್ಷ ತನ್ನ ಪಾಡಿಗೆ ತಾನು ಅಷ್ಟೇನೂ ಅಬ್ಬರವಿಲ್ಲದೆ ಹಲವಾರು ಕಾರ್ಯಕ್ರಮಗಳ ಮೂಲಕ ನೂರು ನಡೆದು ಬಂದ ದಾರಿಯ ಬಗ್ಗೆ ಚಿಂತನ ಮಂಥನ ನಡೆಸಿದೆ. ಆದರೆ ಆರೆಸ್ಸೆಸ್ ಪ್ರಧಾನಿ ಸ್ಥಾನದಲ್ಲಿ ಇರುವ ವ್ಯಕ್ತಿಯನ್ನು ಬಳಸಿಕೊಂಡು ಭಾರತ ಮಾತೆಯ ಚಿತ್ರವಿರುವ 100 ರೂಪಾಯಿ ನಾಣ್ಯ ಹಾಗೂ ಅಂಚೆ ಚೀಟಿ ಬಿಡುಗಡೆ ಮಾಡಿಸಿದೆ.
ಯಾವುದೇ ಸಂಘಟನೆಯ ಶತಮಾನೋತ್ಸವದ ಸಂಭ್ರಮಕ್ಕೆ ಅಭ್ಯಂತರವಿಲ್ಲ. ಆದರೆ, ಅದಕ್ಕಾಗಿ ನೂರು ರೂಪಾಯಿ ನಾಣ್ಯ ಹಾಗೂ ಅಂಚೆಚೀಟಿ ಬಿಡುಗಡೆ ಮಾಡಿರುವುದು ಎಷ್ಟು ಸರಿ? ಇದು ಸಂವಿಧಾನದ ಮೇಲೆ ನಡೆದ ಹಲ್ಲೆಯಲ್ಲವೇ? ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿ ತನ್ನ ಸಂವಿಧಾನಾತ್ಮಕ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಈ ಅಪಚಾರ ಮಾಡಲಿಲ್ಲವೇ? ಸ್ವಾಯತ್ತ ಸಂಸ್ಥೆಯಾಗಿದ್ದ ಚುನಾವಣಾ ಆಯೋಗವನ್ನು ವಶ ಪಡಿಸಿಕೊಂಡಿದ್ದಾಯಿತು.ಈಗ ಇನ್ನೊಂದು ಸ್ವಾಯತ್ತ ಸಂಸ್ಥೆಯಾಗಿರುವ ರಿಸರ್ವ್ ಬ್ಯಾಂಕನ್ನು ದುರುಪಯೋಗ ಮಾಡಿಕೊಂಡಂತಲ್ಲವೇ? ನಾಣ್ಯದಲ್ಲಿ ಭಾರತದ ಬಾವುಟದ ಬದಲಾಗಿ ಸಂಘದ ಭಗವಾಧ್ವ್ವಜ ಹಿಡಿದ ಭಾರತ ಮಾತೆಯ ಚಿತ್ರ ಹಾಕುವುದು, ಅಂಚೆ ಚೀಟಿಯಲ್ಲಿ 1963ರ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಸಮವಸ್ತ್ರ ಧರಿಸಿದ ಸ್ವಯಂ ಸೇವಕರು ಪಾಲ್ಗೊಂಡಿದ್ದರೆಂದು ತೋರಿಸಿರುವುದು ಇತಿಹಾಸಕ್ಕೆ ಮಾಡುವ ಅಪಚಾರ ಅಲ್ಲವೇ? ಆ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಆರೆಸ್ಸೆಸಿಗರನ್ನು ಆಗಿನ ಪ್ರಧಾನಿ ನೆಹರೂ ಆಹ್ವಾನಿಸಿದ್ದರೆಂದು ಸುಳ್ಳು ಹೇಳುವುದೇಕೆ? ಇದಕ್ಕೆ ಅಧಿಕೃತ ದಾಖಲೆಯೆಲ್ಲಿದೆ. ಆಗ ಗಣರಾಜ್ಯೋತ್ಸವಕ್ಕೆ ಲಕ್ಷಾಂತರ ಜನ ಸೇರುತ್ತಿದ್ದರು. ಅದರಲ್ಲಿ ಗಣ ವೇಷಧಾರಿಗಳು ಕಂಡರೆ ಅದಕ್ಕೆ ನೆಹರೂ ಆಹ್ವಾನಿಸಿದ್ದರು ಎಂದು ಸುಳ್ಳು ಹೇಳುವುದೆ?
ಇನ್ನು ನಾಣ್ಯ ಬಿಡುಗಡೆ ವಿವಾದ. ಭಾರತದ ಕರೆನ್ಸಿಯಾದ ರೂಪಾಯಿಯನ್ನು ನಿರ್ವಹಿಸುವ ಹೊಣೆಗಾರಿಕೆ ಭಾರತೀಯ ರಿಸರ್ವ್ ಬ್ಯಾಂಕಿಗೆ ಇದೆ. 1934 ವಿಧಿಯ 22 ರ ಪ್ರಕಾರ ರಿಸರ್ವ್ ಬ್ಯಾಂಕ್ ಕಾಯ್ದೆ ಹಾಗೂ ಕರೆನ್ಸಿ ನಿರ್ವಹಣಾ ಕಾಯ್ದೆಯ ಭಾರತದಲ್ಲಿ ಕರೆನ್ಸಿಯ ವಿತರಣೆ ಹಾಗೂ ನಿರ್ವಹಣೆಯನ್ನು ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ.ಆದರೆ ಆರೆಸ್ಸೆಸ್ ಶತಾಬ್ದಿ ಹೆಸರಲ್ಲಿ ಹೊರತಂದ ನಾಣ್ಯ ಬಿಡುಗಡೆ ವಿಷಯದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಸ್ವಾಯತ್ತ ಅಧಿಕಾರವನ್ನು ಕಳೆದುಕೊಂಡಿತೇ? ಈ ಪ್ರಶ್ನೆಗಳಿಗೆ ಉತ್ತರ ಕೊಡುವವರಾರು? ಇದನ್ನು ಆಚರಿಸುವುದು ತಪ್ಪಲ್ಲ. ಆದರೆ ಇಷ್ಟು ದೊಡ್ಡ ಸಂಘಟನೆಯನ್ನು ಯಾಕೆ ನೋಂದಣಿ ಮಾಡಿಸಿಲ್ಲ? ಕೋಟ್ಯಂತರ ರೂಪಾಯಿ ಗುರು ದಕ್ಷಿಣೆ ಇತ್ಯಾದಿ ರೂಪದಲ್ಲಿ ಬಂದರೂ ಅದರ ಲೆಕ್ಕ ಪತ್ರ ಯಾಕೆ ರಹಸ್ಯವಾಗಿದೆ?. ಆದಾಯ ಕರದ ವಿನಾಯಿತಿ ಏಕೆ ಪಡೆದಿದೆ?.ಲೆಕ್ಕ ಪತ್ರ ಪರಿಶೋಧನೆ ಯಾಕಿಲ್ಲ? ಸಂಘದ ಸದಸ್ಯತ್ವದ ವಿವರಗಳನ್ನು ಏಕೆ ಬಹಿರಂಗ ಪಡಿಸುವುದಿಲ್ಲ? ಸರ ಸಂಘ ಚಾಲಕರ ಆಯ್ಕೆ ರಹಸ್ಯವಾಗಿ ಯಾಕೆ ನಡೆಯುತ್ತದೆ? ಪ್ರಜಾಪ್ರಭುತ್ವ ಪದ್ಧತಿಯ ಪ್ರಕಾರ ಯಾಕೆ ನಡೆಯುವುದಿಲ್ಲ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ. ನೋಂದಣಿಯಿಲ್ಲದ, ಆದಾಯದ ಸ್ಪಷ್ಟ ಲೆಕ್ಕಪತ್ರಗಳಿಲ್ಲದ ಇಂಥ ಸಂಘಟನೆ ಸ್ವಾತಂತ್ರ್ಯ ಹೋರಾಟದಲ್ಲಿ ಹೇಗೆ ಪಾಲ್ಗೊಳ್ಳುತ್ತದೆ.? ಪ್ರಧಾನಿ ನರೇಂದ ಮೋದಿಯವರು ಯಾಕೆ ಸುಳ್ಳು ಹೇಳಿದರು?
ಆರೆಸ್ಸೆಸ್ ಬದಲಾಗಿದೆಯೇ ಅಥವಾ ಬದಲಾಗುವುದೇ ಎಂಬ ಪ್ರಶ್ನೆ ಸಾರ್ವಜನಿಕರ ನಡುವೆ ಆಗಾಗ ಚರ್ಚೆಗೆ ಬರುತ್ತದೆ. ಆದರೆ ಬದಲಾಗುವುದೆಂದರೆ ಏನು?. ಇಂದಿಗೂ ಎರಡನೇ ಸರ ಸಂಘಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ ಪ್ರತಿಪಾದಿಸಿದ ವಿಚಾರ ಸರಣಿಯೇ ಸಂಘಕ್ಕೆ ಆದರ್ಶ. ಗೋಳ್ವಾಲ್ಕರ್ ಮುಸಲ್ಮಾನರ ಬಗ್ಗೆ, ಕ್ರೈಸ್ತ ರ ಕುರಿತು ಮಾತ್ರವಲ್ಲ ಮಹಿಳೆಯರು ಹಾಗೂ ದಲಿತರಿಗೆ ಸಂಬಂಧಿಸಿದಂತೆ ಹಾಗೂ ಪ್ರಜಾಪ್ರಭುತ್ವ ಮತ್ತು ಸಮಾನತೆಯ ಬಗ್ಗೆ ಏನು ಹೇಳಿದ್ದರು ಎಂಬುದಕ್ಕೆ ಅವರು ಬರೆದ ಪುಸ್ತಕಗಳು ಮತ್ತು ಮಾಡಿದ ಭಾಷಣಗಳೇ ಪುರಾವೆಯಾಗಿವೆ.ಸಂಘದ ಶತ್ರುಗಳು ಯಾರೆಂಬುದನ್ನು ಯಾವ ಗೊಂದಲವಿಲ್ಲದೇ ಸ್ಪಷ್ಟವಾಗಿ ಗೋಳ್ವಾಲ್ಕರ್‌ಹೇಳಿದ್ದಾರೆ . ಅವರ ದೃಷ್ಟಿಯಲ್ಲಿ ಮುಸ್ಲಿಮರು, ಕ್ರೈಸ್ತರು ಹಾಗೂ ಕಮ್ಯುನಿಸ್ಟರು ಪ್ರಧಾನ ಶತ್ರುಗಳಾಗಿದ್ದಾರೆ. ಅಂತಲೇ ಗೃಹ ಸಚಿವರಾಗಿರುವ ಅಮಿತ್ ಶಾ ಅವರು ಕಮ್ಯುನಿಸ್ಟ್ ಮುಕ್ತ ಭಾರತಕ್ಕಾಗಿ ಛತ್ತೀಸ್‌ಗಢ ದಲ್ಲಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಮೋಹನ್ ಭಾಗವತರೇನೋ ಬಹಿರಂಗವಾಗಿ ಹಲವಾರು ಸಲ ಸೌಮ್ಯವಾಗಿ ಮಾತಾಡುತ್ತಾರೆ. ಆದರೆ ಅವರ ಸಂಘದ ಸಿದ್ಧಾಂತದಿಂದ ಸ್ಫೂರ್ತಿ ಪಡೆದವರು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ಗುಂಡು ಹಾಕಬೇಕೆಂದು ಹೇಳುತ್ತಾರೆ. ಇನ್ನು ಕೆಲವರು ಗಾಂಧಿ ಪ್ರತಿಮೆಗೆ ಗುಂಡು ಹಾಕಿ ಸಂಭ್ರಮಿಸುತ್ತಾರೆ. ಮಾಲೆಗಾಂವ್ ಬಾಂಬ್ ಸ್ಪ್ಪೋಟ ಪ್ರಕರಣದಲ್ಲಿ ಲೀಲಾಜಾಲವಾಗಿ ದೋಷಮುಕ್ತರಾಗಿ (ನಿಜಕ್ಕೂ ದೋಷ ಮುಕ್ತರೇ?) ಬಂದ ಸಾಧ್ವಿ ಪ್ರಜ್ಞಾಸಿಂಗ್ ಮುಸಲ್ಮಾನರನ್ನು ಬಹಿಷ್ಕರಿಸಲು ಬಹಿರಂಗವಾಗಿ ಕರೆ ನೀಡುತ್ತಾರೆ. ಇದಾವುದಕ್ಕೂ ಪ್ರತಿಕ್ರಿಯೆ ವ್ಯಕ್ತಪಡಿಸದ ‘ವಿಶ್ವ ಗುರು’ಗಳು ಜಾಣ ಮೌನ ತಾಳುತ್ತಾರೆ.ಇನ್ನೊಂದು ಕಡೆ ವಾಟ್ಸ್ ಆ್ಯಪ್ ಯುನಿವರ್ಸಿಟಿ ಗಳ ಮೂಲಕ ಮಹಾತ್ಮ್ಮಾ ಗಾಂಧೀಜಿ,ಜವಾಹರಲಾಲ್ ನೆಹರೂ,ಇಂದಿರಾ ಗಾಂಧಿ, ಅಂಬೇಡ್ಕರ್ ಮೊದಲಾದ ರಾಷ್ಟ್ರ ನಾಯಕರ ತೇಜೋವಧೆ ಅವ್ಯಾಹತವಾಗಿ ನಡೆಯುತ್ತಿದೆ.ಮತ್ತೊಂದೆಡೆ ಮೇಲ್ಕಂಡ ಮಹಾಪುರುಷರೆಲ್ಲ ಸಂಘದ ಶಾಖೆಗೆ ಬಂದಿದ್ದರೆಂದು ಸುಳ್ಳು ಹೇಳುವುದೂ ನಡೆಯುತ್ತಿದೆ.
ಇಷ್ಟೆಲ್ಲಾ ಮಾಡಿಯೂ ಸಮಾಜದ ಗಣ್ಯ ವ್ಯಕ್ತಿಗಳನ್ನು ಸಂಘದ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಅವರಿಂದ ಶಿಫಾರಸು ಪತ್ರ ಪಡೆಯುವುದು ಸಂಘದ ಹಳೆಯ ಚಾಳಿ.ಕಳೆದ ವಾರ ಸಂಘದ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ತಾಯಿ ಕಮಲಾತಾಯಿ ಗವಾಯಿ ಅವರನ್ನು ಆಹ್ವಾನಿಸಲಾಯಿತು. ಇದನ್ನು ತಿರಸ್ಕರಿಸಿದ ಕಮಲಾತಾಯಿ ಅವರು ತಾವು ಅಂಬೇಡ್ಕರ್‌ವಾದಿಯಾಗಿದ್ದು ಆರೆಸ್ಸೆಸ್ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ನೇರವಾಗಿ ಹೇಳಿದರು.ಸೈದ್ಧಾಂತಿಕ ತಿಳುವಳಿಕೆ ಇಲ್ಲದ ಅನೇಕ ಕಾಂಗ್ರೆಸ್ ನಾಯಕರು, ಬುದ್ಧ್ದಿಜೀವಿಗಳು ತಿಳಿದೋ ತಿಳಿಯದೆಯೋ ಸಂಘದ ಖೆಡ್ಡಾಕ್ಕೆ ಹೋಗಿ ಬಿದ್ದಿದ್ದಾರೆ.ಹೊರ ಬರಲಾಗದೇ ಒದ್ದಾಡುತ್ತಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನದ ಇತಿಹಾಸದಲ್ಲಿ ದೇಶಕ್ಕಾಗಿ ತ್ಯಾಗ ಮಾಡಿದ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಬ್ಬನೇ ಒಬ್ಬ ವ್ಯಕ್ತಿಯೂ ಇಲ್ಲ. ಹೀಗಾಗಿ ಅದು ತನಗೆ ಸಂಬಂಧ ಪಡದ ರಾಷ್ಟ್ರ ನಾಯಕರನ್ನು ಹೈಜಾಕ್ ಮಾಡಲು ಯತ್ನಿಸುತ್ತ ಬಂದಿದೆ. ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಗಾಂಧಿ, ಅಂಬೇಡ್ಕರ್ ನೆಹರೂ ಸೇರಿದಂತೆ ಎಲ್ಲರನ್ನೂ ಅದು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತದೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಮತ್ತು ಸಮಾನತೆಯ ಗೌರವದ ಬದುಕಿಗಾಗಿ ಜೀವ ಸವೆಸಿದ ಮಹಾಚೇತನಗಳನ್ನು ತಮ್ಮದಾಗಿಸಿಕೊಳ್ಳುವ ಹುನ್ನಾರವನ್ನು ನಿರಂತರವಾಗಿ ನಡೆಸುತ್ತ ಬಂದಿದೆ. ಸಮಾನತೆಯ ಸಮಾಜ ನಿರ್ಮಾಣವನ್ನು ವಿರೋಧಿಸುತ್ತ ಬಂತು. ಗಾಂಧೀಜಿಯ ಹತ್ಯೆ ಮಾಡಿ ನಂತರ ಒಂದೆಡೆ ಅವರ ಆರಾಧನೆಯ ನಾಟಕವಾಡುತ್ತ, ಇನ್ನೊಂದೆಡೆ ಅವರ ತೇಜೋವಧೆ ಮಾಡುತ್ತ ಬಂದ ಸಂಗತಿ ತಿಳಿದವರಿಗೆಲ್ಲ ಗೊತ್ತಿದೆ.
ಭಾರತದ ಒಳಗೆ ನಾಥೂರಾಮ್ ಗೋಡ್ಸೆ, ಸಾವರ್ಕರ್‌ರನ್ನು ಆರಾಧಿಸುತ್ತ ವಿದೇಶಕ್ಕೆ ಹೋದಾಗ ಬುದ್ಧ, ಗಾಂಧೀಜಿ, ಬಾಬಾಸಾಹೇಬರ ದೇಶದಿಂದ ಬಂದಿದ್ದೇನೆ ಎಂದು ಹೇಳುವವರು ಯಾರೆಂದು ಎಲ್ಲರಿಗೂ ಗೊತ್ತಿದೆ.
ವೈದಿಕಶಾಹಿಯ ವಿರುದ್ಧ ಬಂಡೆದ್ದ ಬುದ್ಧನನ್ನು ವಿಷ್ಣುವಿನ ಹನ್ನೊಂದನೇ ಅವತಾರ ಮಾಡಿ ಮುಗಿಸಲು ನೋಡಿದರು. ಆದರೆ ಈ ಜೀವಪರ ಧರ್ಮ ಗಡಿಯಾಚೆ ಹೋಗಿ ಚೀನಾ, ಜಪಾನ್, ಮುಂತಾದ ದೇಶಗಳಲ್ಲಿ ನೆಲೆ ಕಂಡುಕೊಂಡಿತು. ಭಾರತದಲ್ಲಿ ಬಾಬಾಸಾಹೇಬರು ಬೌದ್ಧ ಧರ್ಮ ಸೇರಿದ ನಂತರ ಅದು ಮತ್ತೆ ಚಿಗುರಿ ಬೆಳೆಯತೊಡಗಿದೆ. ಜೈನರು ಆಚಾರ, ವಿಚಾರಗಳಲ್ಲಿ ಒಂದಿಷ್ಟು ರಾಜಿ ಮಾಡಿಕೊಂಡಿದ್ದರೂ ಪೂರ್ತಿಯಾಗಿ ತಮ್ಮ ಸಿದ್ಧಾಂತ ಮತ್ತು ಅಸ್ಮಿತೆಯನ್ನು ಬಿಟ್ಟುಕೊಟ್ಟಿಲ್ಲ. ಇನ್ನು ವೇದಕ್ಕೆ ಒರೆಯ ಕಟ್ಟುವೆ,ಆಗಮದ ಮೂಗ ಕೊಯ್ಯುವೆ ಎಂದು ಹೇಳಿದ ಬಸವಣ್ಣನವರನ್ನು ವಶಪಡಿಸಿಕೊಳ್ಳಲು ಸಾಧ್ಯವೇ ಇಲ್ಲ.
ಅಂಬೇಡ್ಕರ್ ಅವರನ್ನು ಗೌರವಿಸುವ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ದಲಿತ ಮತ್ತು ಸಮಸ್ತ ದಮನಿತ ಸಮುದಾಯಗಳು ಇಂದಿಗೂ ಮನುವಾದಿ, ಕೋಮುವಾದಿ ಶಕ್ತಿಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅವರ ಮನುವಾದಿ ಹಿಂದೂರಾಷ್ಟ್ರ ನಿರ್ಮಾಣದ ಮಸಲತ್ತಿಗೆ ಅಂಬೇಡ್ಕರ್ ಅವರು ದೊಡ್ಡ ಅಡ್ಡಿಯಾಗಿದ್ದಾರೆ. ಅದಕ್ಕಾಗಿ ಅವರನ್ನೇ ನುಂಗಿ ಜೀರ್ಣಿಸಿಕೊಳ್ಳಲು ಹುನ್ನಾರ ನಡೆಸುತ್ತಲೇ ಬರಲಾಗಿದೆ.
ಆದರೆ, ಶ್ರೇಣೀಕೃತ ಜಾತಿ ಪದ್ಧ್ದತಿಯ ಮೂಲವಾದ ಧರ್ಮ ಎಂದು ವ್ಯಾಪಕವಾಗಿ ಕರೆಯಲ್ಪಡುವ ಮತ ಮತ್ತು ಭಿನ್ನ ಭೇದದ ಸಿದ್ಧಾಂತಗಳನ್ನು ವಿರೋಧಿಸುತ್ತ ಬಂದ ಬಾಬಾಸಾಹೇಬರನ್ನು ನುಂಗಿ ಜೀರ್ಣಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಮಾತ್ರವಲ್ಲ ಸಾಧ್ಯವೇ ಇಲ್ಲ.ಕೋಮುವಾದಿ ಶಕ್ತಿಗಳು ಮೊದಲು ಅಂಬೇಡ್ಕರ್ ಅವರನ್ನು ತೇಜೋವಧೆ ಮಾಡಿಸಿ ಅರುಣ್ ಶೌರಿಯವರಿಂದ ಪುಸ್ತಕ ಬರೆಸಿದರು (ಈಗ ಅದೇ ಅರುಣ್ ಶೌರಿ ಸಾವರ್ಕರ್ ಗುಟ್ಟುಗಳನ್ನು ಬಹಿರಂಗಪಡಿಸುವ ಪುಸ್ತಕ ಬರೆದಿದ್ದಾರೆ) . ಆದರೆ, ಅದರ ವಿರುದ್ಧ ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ಪ್ರತಿಭಟನೆ ವ್ಯಕ್ತವಾದಾಗ ತಮ್ಮ ರಾಗ ಬದಲಿಸಿದರು. ಅತ್ಯಂತ ಪ್ರಜ್ಞಾವಂತ ದಲಿತ ಸಮುದಾಯ ಮನುವಾದಿ , ಕೋಮುವಾದಿ ಶಕ್ತಿಗಳ ಬಲೆಗೆ ಬೀಳಲಿಲ್ಲ.ಕೆಲವರು ಹೋದರೂ ಪ್ರಯೋಜನವಾಗಲಿಲ್ಲ.
ಈ ನಡುವೆ ಭಾರತದ ಸ್ವಾತಂತ್ರ್ಯಕ್ಕಾಗಿ ಆಝಾದ್ ಹಿಂದ್ ಸೇನೆ ಕಟ್ಟಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ನುಂಗುವ ಮಸಲತ್ತೂ ನಡೆಯುತ್ತಿದೆ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮಗಳು ಅನಿತಾ ಬೋಸ್ ಆರೆಸ್ಸೆಸ್ ಸಿದ್ಧಾಂತಕ್ಕೂ ತಮ್ಮ ತಂದೆಗೂ ಸಂಬಂಧವಿಲ್ಲ. ಅವರದೊಂದು ಧ್ರುವವಾದರೆ ತಮ್ಮ ತಂದೆ ಇನ್ನೊಂದು ಧ್ರುವ, ಹೇಗೆ ಒಂದಾಗಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ವಾಸ್ತವವಾಗಿ ಎಲ್ಲ ಧರ್ಮಗಳನ್ನು ಗೌರವಿಸಬೇಕೆಂದು ನೇತಾಜಿ ಸುಭಾಷರು ಹೇಳುತ್ತಿದ್ದರು. ಈ ಅಂಶ ಆರೆಸ್ಸೆಸ್ ಬಿಜೆಪಿ ಸಿದ್ಧಾಂತದಲ್ಲಿ ಇಲ್ಲ ಎಂದು ಸುಭಾಷ್ ಮಗಳು ಅನಿತಾ ಅನೇಕ ಬಾರಿ ಹೇಳಿದ್ದಾರೆ. ಸರ್ವಧರ್ಮಗಳ ಸಹಬಾಳ್ವೆ ಸುಭಾಷ್‌ರ ಆದರ್ಶವಾಗಿತ್ತು. ಆದರೆ ಆರೆಸ್ಸೆಸ್ ಏಕ ಧರ್ಮದ ಯಜಮಾನಿಕೆಯನ್ನು ದೇಶದ ಮೇಲೆ ಹೇರಲು ಹೊರಟಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.
ಅವರೀಗ ಜರ್ಮನಿಯಲ್ಲಿದ್ದಾರೆ . ಭಾರತದಲ್ಲಿದ್ದು ಈ ಮಾತನ್ನು ಹೇಳಿದ್ದರೆ ಅವರೂ ಅಂಬೇಡ್ಕರ್ ಸಂಬಂಧಿ ಚಿಂತಕ ಆನಂದ ತೇಲ್ತುಂಬ್ಡೆ ಅವರಂತೆ ಸೆರೆಮನೆ ವಾಸ ಅನುಭವಿಸಬೇಕಾಗುತ್ತಿತ್ತೇನೋ?
ನಾವು ಶಿವಾಜಿ ಮಹಾರಾಜರನ್ನು ಕೈ ಬಿಟ್ಟೆವು, ಅವರು ಹೈಜಾಕ್ ಮಾಡಿದರು. ಶಹೀದ್ ಭಗತ್ ಸಿಂಗ್‌ರನ್ನು ಅಪಹರಿಸಲು ಯತ್ನಿಸಿದರು,ಅಷ್ಟರಲ್ಲಿ ನಾವು ಎಚ್ಚೆತ್ತೆವು. ಬಾಬಾಸಾಹೇಬರನ್ನು ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸಿದರು,ಆದರೆ ಬಾಬಾ ಉರಿವ ಜ್ವಾಲೆ ಮುಟ್ಟಲು ಹೋಗಿ ಅವರೇ ಸುಟ್ಟುಕೊಂಡರು. ಎಲ್ಲಕ್ಕಿಂತಲೂ ಮುಖ್ಯವಾಗಿ ಸುಭಾಷ್‌ರಂತೆ ವಿವೇಕಾನಂದರನ್ನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಅವರ ಜಯಂತಿ ಆಚರಿಸಿ ಅವರ ಕ್ರಾಂತಿಕಾರಿ ವಿಚಾರಧಾರೆಯನ್ನು ಮುಚ್ಚಿಡಲು ಯತ್ನಿಸುತ್ತಿದ್ದಾರೆ. ರಾಮಕೃಷ್ಣ ಆಶ್ರಮದಲ್ಲೂ ನುಸುಳಿ ತಮ್ಮ ಮಸಲತ್ತು ನಡೆಸುತ್ತಿದ್ದಾರೆ. ಆದರೆ ವಿವೇಕಾನಂದ ಕೂಡ ಇವರಿಗೆ ದಕ್ಕುವುದಿಲ್ಲ. ವಿವೇಕಾನಂದ ಮುಸ್ಲಿಮ್ ದ್ವೇಷಿ ಅಲ್ಲ. ಕೋಮುವಾದಿ ಅಲ್ಲ ಅವರು ಮನುಷ್ಯ ಸಮಾನತೆಯ ಕನಸು ಕಂಡ ಕ್ರಾಂತಿಕಾರಿ. ಅವರ ಕ್ರಾಂತಿಕಾರಿ ವಿಚಾರಗಳನ್ನು ಮುಚ್ಚಿಟ್ಟು ಬೇರೆ ವಿವೇಕಾನಂದರನ್ನು ತೋರಿಸುವ ಮಸಲತ್ತನ್ನು ಮನುವಾದಿಗಳು, ಕೋಮುವಾದಿಗಳು ಮಾಡುತ್ತ ಬಂದಿದ್ದಾರೆ.
ಭಾರತದಲ್ಲಿ ಇಸ್ಲಾಮ್ ಧರ್ಮ ಬಲಪ್ರಯೋಗದಿಂದ ಬೆಳೆಯಿತು ಎಂಬ ವಾದವನ್ನು ವಿವೇಕಾನಂದ ತಳ್ಳಿ ಹಾಕಿದ್ದಾರೆ. ಜಮೀನ್ದಾರರ ದೌರ್ಜನ್ಯ , ಪುರೋಹಿತರ ಕಾಟ, ಜಾತಿವಾದಿಗಳ ಹಿಂಸೆಯ ಪರಿಣಾಮವಾಗಿ ಈ ಯಾತನೆಯಿಂದ ಬಿಡುಗಡೆ ಹೊಂದಲು ಈ ನೆಲದ ಅನ್ಯಾಯಕ್ಕೊಳಗಾದ ಜನರು ಮುಸ್ಲಿಮರಾದರು ಎಂದು ಹೇಳುವ ವಿವೇಕಾನಂದರು ಭಾರತದ ಭವಿಷ್ಯ ಇರುವುದು ಹಿಂದೂ ಮುಸ್ಲಿಮ್ ಏಕತೆಯಿಂದ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ವಿವೇಕಾನಂದರು ಇಸ್ಲಾಮ್‌ನ ದೇಹ, ವೇದಾಂತದ ವಿವೇಕದ ಸಮ್ಮಿಲನವೇ ಭಾರತದ ಬೆಳಕಿನ ದಾರಿ ಎಂದು ಒಂದೆಡೆ ಹೇಳಿದ್ದಾರೆ.
ಸ್ವಾಮಿ ವಿವೇಕಾನಂದ ಅಂದರೆ ಯಾರು, ಅವರು ಯಾವ ಸಂದೇಶ ನೀಡಿದರು ಎಂಬುದನ್ನು ಅರಿತುಕೊಳ್ಳಲು ಹೆಚ್ಚಿನ ಸಂಶೋಧನೆ ನಡೆಸಬೇಕಾಗಿಲ್ಲ. ರಾಮಕೃಷ್ಣ ಆಶ್ರಮದ ಪ್ರಕಾಶನ ಸಂಸ್ಥೆ ಈ ಹಿಂದೆ ಪ್ರಕಟಿಸಿದ ವಿವೇಕಾನಂದರ ಕೃತಿ ಶ್ರೇಣಿಗಳಲ್ಲಿ ಅವರ ನಿಲುವು ಸ್ಪಷ್ಟವಾಗಿದೆ. ನವ ಭಾರತವು ಎಲ್ಲಿದೆ ಎಂಬ ಪ್ರಶ್ನೆಗೆ ವಿವೇಕಾನಂದರ ಉತ್ತರ ಕೈಯಲ್ಲಿ ನೇಗಿಲು ಹಿಡಿದ ರೈತರ ಗುಡಿಸಲಿನಿಂದ, ಮೀನುಗಾರರ ಹಟ್ಟಿಗಳೊಳಗಿನಿಂದ, ಚಮ್ಮಾರನ ,
ಝಾಡಮಾಲಿಯ ಮನೆಗಳಿಂದ ನವ ಭಾರತ ಹೊರ ಹೊಮ್ಮುತ್ತದೆ.ಕಿರಾಣಿ ಅಂಗಡಿಯಿಂದ, ಪಿಂಗಾಣಿ ಕೆಲಸಗಾರರ ಕುಲುಮೆಯಿಂದ ,
ಕಾರ್ಖಾನೆ ಗಳ ಕಾರ್ಮಿಕರ ಬೆವರಿನಿಂದ ನವ ಭಾರತ ಹುಟ್ಟುತ್ತದೆ ಎಂದು ಹೇಳಿದರು.
ಜಗತ್ತಿನ ಧರ್ಮಗಳೆಲ್ಲ ನಿಸ್ತೇಜವಾಗಿ ಬಿದ್ದಿವೆ, ಮನುಷ್ಯ ಪ್ರೀತಿ, ಅಂತಃಕರಣ , ಶುದ್ಧ್ಧ ಚಾರಿತ್ರ್ಯ ಇವುಗಳು ವಿಶ್ವದ ತುರ್ತು ಅಗತ್ಯಗಳಾಗಿವೆ ಎಂದು ಲಂಡನ್‌ನ ಒಂದು ಸಭೆಯಲ್ಲಿ ಹೇಳಿದ ವಿವೇಕಾನಂದರು ಇಹದಲ್ಲಿ ಹೊಟ್ಟೆಗೆ ಅನ್ನವನ್ನು ನೀಡದ ವಿಧವೆಯ ಕಣ್ಣೀರನ್ನು ಒರೆಸದ ಧರ್ಮದಲ್ಲಾಗಲಿ ದೇವರಲ್ಲಾಗಲಿ ತನಗೆ ನಂಬಿಕೆಯಿಲ್ಲ ಎಂದು ಸ್ಪಷ್ಟವಾಗಿ ನುಡಿದರು. ಪುರೋಹಿತಶಾಹಿಯ ವಿರುದ್ಧ ಮೂಢ ನಂಬಿಕೆಗಳ ವಿರುದ್ಧ, ಅರ್ಥಹೀನ ಧಾರ್ಮಿಕ ಆಚರಣೆಗಳ ವಿರುದ್ಧ ಕಟುವಾಗಿ ಟೀಕಿಸುತ್ತ ಬಂದ ವಿವೇಕಾನಂದರು ಪುರೋಹಿತ ಶಾಹಿಯನ್ನು ಒದ್ದೋಡಿಸಲು ಕರೆ ನೀಡಿದರು. ಜಗತ್ತಿನ ಯಾವುದೇ ಧರ್ಮವೂ ಹಿಂದೂ ಧರ್ಮದಂತೆ ಮಾನವನ ಘನತೆಯನ್ನು ಎತ್ತಿ ಹಿಡಿಯುವುದಿಲ್ಲ, ಜಗತ್ತಿನಲ್ಲಿ ಯಾವುದೇ ಧರ್ಮವೂ ಹಿಂದೂ ಧರ್ಮದಂತೆ ದಲಿತರ ಕತ್ತಿನ ಮೇಲೆ ಸವಾರಿ ಮಾಡುವದಿಲ್ಲ ಎಂದು ಹೇಳಿದ್ದು ಮತ ಧರ್ಮಗಳ ಬಗೆಗಿನ ಅವರ ಕಟು ವಿಮರ್ಶೆಗೆ ಉದಾಹರಣೆಯಾಗಿದೆ.
ವಿವೇಕಾನಂದರು ಜಾತಿ ಮತಗಳ ಆಚೆ ಮನುಷ್ಯರನ್ನು ಪ್ರೀತಿಸಿದರು.ಎಲ್ಲೆಡೆ ಪ್ರೀತಿಯನ್ನು ಹಂಚಲು ಕರೆ ನೀಡಿದರು. ವೇದ ,ಶಾಸ್ತ್ರ, ಪುರಾಣ ,ಕುರಾನ್, ಬೈಬಲ್ ಗಳಿಗೆ ಕೆಲ ಕಾಲ ವಿಶ್ರಾಂತಿ ನೀಡಿ ಮನುಷ್ಯರು ಪ್ರೀತಿ ,ಪ್ರೇಮದ ಸಂತಸದ ಸಾಗರದಲ್ಲಿ ಸಂಭ್ರಮಿಸಲು ಎಂದು ಕರೆ ನೀಡಿದರು. ಇಂಥ ಜೀವಪರ ಕಾಳಜಿಯ ಮಹಾನ ವೇದಾಂತಿಯನ್ನು ತಮ್ಮ ಕೋಮುವಾದಿ ರಾಜಕಾರಣಕ್ಕೆ ಬಳಸಿಕೊಳ್ಳುವ ಸಂಘ ಪರಿವಾರದ ಮೂಲ ಭಾರತವಲ್ಲ.ಅವರದು ಇಟಲಿ, ಜರ್ಮನಿಯಿಂದ ಮುಸ್ಸೋಲಿನ್ ,ಹಿಟ್ಲರ್ ಗಳಿಂದ ಎರವಲು ತಂದ ಜನಾಂಗ ದ್ವೇಷಿ ಸಿದ್ಧಾಂತ.
ಹೀಗೆ ಮಹಾಚೇತನಗಳನ್ನು ಹೈಜಾಕ್ ಮಾಡಿ ತಮ್ಮ ಫ್ಯಾಶಿಸ್ಟ್ ಸಿದ್ಧಾಂತಗಳ ಜಾರಿಗೆ ಬಳಸಿಕೊಳ್ಳುವ ಹುನ್ನಾರದ ಬಗ್ಗೆ ಜನರಲ್ಲಿ ಅದರಲ್ಲೂ ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಜೀವ ಪರ, ಜನಪರ ಶಕ್ತಿಗಳು ಸಮರೋಪಾದಿಯಲ್ಲಿ ನಡೆಸಬೇಕಾಗಿದೆ.ಈ ನಿಟ್ಟಿನಲ್ಲಿ ಬಹುತ್ವ ಭಾರತವನ್ನು ಕಾಪಾಡಿಕೊಳ್ಳಲು ಮತ್ತು ಇದು ಎಲ್ಲರ ಭಾರತವನ್ನಾಗಿ ಉಳಿಸಿಕೊಳ್ಳಲು ಕಾರ್ಯೋನ್ಮುಖವಾಗುವುದು ಮೊದಲ ಆದ್ಯತೆಯಾಗಬೇಕಾಗಿದೆ. ಮನುಸ್ಸು ಒಡೆಯುವವರ ವಿರುದ್ಧ ಮನಸ್ಸು ಕಟ್ಟುವ ಮತ್ತು ಕನಸು ಕಟ್ಟುವ ಜನ ಒಂದಾಗಬೇಕಾಗಿದೆ.







