ನುಡಿದರೆ ಮುತ್ತಿನ ಹಾರದಂತಿರಬೇಕು

ವಿಭಿನ್ನ ವಿಚಾರಧಾರೆಗಳಿಗೆ ಸೇರಿದವರು ಪರಸ್ಪರ ಸಂವಾದ, ಚರ್ಚೆಗಳನ್ನು ಮಾಡಬಾರದೆಂದಲ್ಲ, ಅಂಥ ಆರೋಗ್ಯಕರ ಸಂವಾದದ ವಾತಾವರಣ ಈಗ ಉಳಿದಿಲ್ಲ. ಫ್ಯಾಶಿಸ್ಟ್ ಸಂಘಟನೆಗಳು ಅಂಥ ಸಂವಾದ ಮತ್ತು ಚರ್ಚೆಗಳನ್ನು ಇಷ್ಟ ಪಡುವುದಿಲ್ಲ. ಸಂವಾದವಿಲ್ಲದೆ ತಮ್ಮ ಸಿದ್ಧಾಂತವನ್ನು ಒಪ್ಪಿಕೊಳ್ಳಬೇಕೆಂದು ಅವರು ಬಯಸುತ್ತಾರೆ. ಅಂತಲೇ ಈಗ ದೇಶದಲ್ಲಿ ಮುಕ್ತ ಸಂವಾದದ ವಾತಾವರಣವಿಲ್ಲ. ಕಳೆದ ಶತಮಾನದ 30,40ರ ದಶಕಗಳ ಜರ್ಮನಿ ಮತ್ತು ಇಟಲಿಯ ಪರಿಸ್ಥಿತಿ ಇಲ್ಲಿ ಪುನರಾವರ್ತನೆಗೊಂಡಿದೆ.
ಬದುಕು ಅಸಹನೀಯವಾಗುತ್ತಿರುವ ಈ ಕೆಟ್ಟ ದಿನಗಳಲ್ಲಿ ಬಸವಣ್ಣನವರ ವಚನದ ಈ ಸಾಲುಗಳು ಮತ್ತೆ, ಮತ್ತೆ ನೆನಪಿಗೆ ಬರುತ್ತವೆ. ದಿಲ್ಲಿಯಲ್ಲಿ ಕಳೆದ ಎರಡು ತಿಂಗಳಿಂದ ನಡೆಯುತ್ತಿದ್ದ ವಿದ್ಯಾರ್ಥಿಗಳ ಹೋರಾಟ ತೀವ್ರ ಗೊಂಡ ಪರಿಣಾಮವಾಗಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಮಣಿಯಬೇಕಾಯಿತು. ಚಳವಳಿಯ ಸಂದರ್ಭದಲ್ಲಿ ಕೆಲವರು ಈ ಹೋರಾಟವನ್ನು ಧರ್ಮಕ್ಕೆ ತಳಕು ಹಾಕುವ ತಮ್ಮ ಹೊಲಸು ಬುದ್ಧಿಯನ್ನು ತೋರಿಸಿದರು. ವಿಧಾನ ಪರಿಷತ್ ಸದಸ್ಯ ರವಿ ಎಂಬಾತ ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿ, ಅವರ ಮೇಲೆ ಎಫ್‌ಐಆರ್ ಕೂಡ ದಾಖಲಾಗಿದೆ. ‘ಎದೆ ಸೀಳಿದರೆ ಮೂರಕ್ಷರ ಬರದ ಮುಲ್ಲಾನಿಗೂ ನೀಟ್ ಪರೀಕ್ಷೆಗೂ ಸಂಬಂಧವೇನು’ ಎಂದು ಈತ ಬಹಿರಂಗವಾಗಿ ಹೇಳಿದ. ಭಾರತೀಯರ ಯಾವುದೇ ಆಂದೋಲನ, ಚಳವಳಿಗಳಿರಲಿ ಅದಕ್ಕೆ ಧರ್ಮವನ್ನು ತಳಕು ಹಾಕಿ ರಾಜಕೀಯ ಲಾಭ ಮಾಡಿಕೊಳ್ಳಲು ಯತ್ನಿಸುವುದು ಇವರ ಹಳೆಯ ಚಾಳಿ ಇಂಥವರು ಇನ್ನೂ ಕೆಲವರಿದ್ದಾರೆ. ಕಾರವಾರ ಜಿಲ್ಲೆಯ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ, ಬಿಜಾಪುರದ ಬಸನಗೌಡ ಪಾಟೀಲ್ (ಯತ್ನಾಳ) ಮೈಸೂರಿನ ಪ್ರತಾಪ ಸಿಂಹ ಎಂಬ ಬಿಜೆಪಿ ಟಿಕೆಟ್ ನಿರಾಕರಿಸಲ್ಪಟ್ಟ, ಅತ್ತೃಪ್ತ ರಾಜಕಾರಣಿ , ಇಂಥವರು ಬಾಯಿ ತೆರೆದರೆ ಸಾಕು ಜನಾಂಗ ದ್ವೇಷದ ದುರ್ವಾಸನೆ ಬರುತ್ತದೆ.
ಮುಸಲ್ಮಾನರು ತಮ್ಮ ದೇಶವಾದ ಭಾರತಕ್ಕೆ ನೀಡಿರುವ ಕೊಡುಗೆಯನ್ನು ತಿಳಿದವರಾರೂ ಇಂಥ ಹೊಲಸು ಮಾತುಗಳನ್ನು ಆಡುವುದಿಲ್ಲ. ಅಬ್ದ್ದುಲ್ ಕಲಾಂ ಅವರಂಥ ವಿಜ್ಞಾನಿಗಳು, ತನ್ನ ಲಾಭಾಂಶದ ಬಹುದೊಡ್ಡ ಮೊತ್ತವನ್ನು ಭಾರತದ ಅವಕಾಶ ವಂಚಿತ ಎಲ್ಲ ಸಮುದಾಯಗಳ ಏಳಿಗೆಗೆ ನೀಡುವ ಅಝೀಮ್ ಪ್ರೇಮ್‌ಜಿ ಅವರಂಥ ಉದ್ಯಮಿಗಳು ಸೇರಿದಂತೆ ಮುಸ್ಲಿಮ್ ಸಮುದಾಯದ ಸಾವಿರಾರು ವಿದ್ಯಾವಂತರು ಹಾಗೂ ವಿದ್ಯಾವಂತರಲ್ಲದವರು ಈ ನವ ಭಾರತಕ್ಕೆ ನೀಡಿರುವ ಕೊಡುಗೆ ಸಣ್ಣದಲ್ಲ. ರವಿಯಂಥವರು ಕಣ್ಣು ತೆರೆದು ನೋಡಬೇಕು. ವಾಸ್ತವವಾಗಿ ದಿಲ್ಲಿಯಲ್ಲಿ ನಡೆದದ್ದು ಜಾತಿ, ಧರ್ಮ, ಭಾಷೆಗಳನ್ನು ಮೀರಿ ಎಲ್ಲರೂ ಒಂದಾಗಿ ನಡೆಸುತ್ತಿರುವ ಹೋರಾಟ.ಸಹಾನುಭೂತಿ ಇದ್ದರೆ ಅವರನ್ನು ಬೆಂಬಲಿಸಬೇಕು.ಇಲ್ಲದಿದ್ದರೆ ನೇರವಾಗಿ ವಿರೋಧಿಸಬೇಕು. ಅದನ್ನು ಬಿಟ್ಟು ಅನಗತ್ಯವಾಗಿ ಇದರಲ್ಲೂ ಮುಸ್ಲಿಮ್ ದ್ವೇಷದ ಮಾತುಗಳನ್ನು ಆಡುವವನು ಯಾರೇ ಆಗಿರಲಿ ಆತ ಮನುಷ್ಯನಲ್ಲ.ಇಂಥವರನ್ನು ಗಮನದಲ್ಲಿಟ್ಟುಕೊಂಡೇ ಕವಿ ಸಿದ್ಧಯ್ಯ ಪುರಾಣಿಕರು ‘ಮೊದಲು ಮಾನವನಾಗು’ ಎಂದು ಕರೆ ನೀಡಿದರು.
ಸಿ.ಟಿ. ರವಿ ಮಾತ್ರವಲ್ಲ ಬಿಜೆಪಿಯಲ್ಲಿ ಇಂಥ ಹಲವಾರು ಜನರಿದ್ದಾರೆ. ಒರಿಜಿನಲ್ ಆರೆಸ್ಸೆಸ್ ನವರಿಗಿಂತ ಅಧಿಕಾರಕ್ಕಾಗಿ ಅಥವಾ ಸಿಬಿಐ, ಐಟಿ, ಈ.ಡಿ.ಗಳಂಥ ತನಿಖಾ ಸಂಸ್ಥೆಗಳಿಗೆ ಹೆದರಿ ಬಿಜೆಪಿ ಸೇರಿದವರು ಹಾವಿನ ಪುರದ ಗುರುಗಳನ್ನು ಓಲೈಸಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ಅತ್ಯಂತ ಕೆಟ್ಟ ಭಾಷೆಯಲ್ಲಿ ಮುಸಲ್ಮಾನರು ಮತ್ತು ಇತರ ಅಲ್ಪಸಂಖ್ಯಾತರನ್ನು ನಿಂದಿಸುತ್ತಾರೆ. ಇದಕ್ಕೆ ಕಾಂಗ್ರೆಸ್‌ನಿಂದ ಮತ್ತು ಟಿಎಂಸಿಯಿಂದ ಬಿಜೆಪಿಗೆ ಜಂಪ್ ಮಾಡಿದ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿಗಳು ಉದಾಹರಣೆ ಯಾಗಿದ್ದಾರೆ
ಪ್ರಜಾಪ್ರಭುತ್ವವನ್ನು ಇವರು ಒಪ್ಪುವುದಿಲ್ಲ ಮತ್ತು ಗೌರವಿಸುವುದಿಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಇವರು ಇಷ್ಟಪಡುವುದಿಲ್ಲ. ತಮ್ಮ ರಾಜಕೀಯ ವಿರೋಧಿಗಳನ್ನು, ತಮ್ಮ ನಿಲುವನ್ನು ಒಪ್ಪದವರನ್ನು ದೇಶ ದ್ರೋಹಿಗಳೆಂದು ನಿಂದಿಸುತ್ತಾರೆ. ತಮ್ಮ ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಜೈಲಿಗೂ ಹಾಕುತ್ತಾರೆ. ಆನಂದ ತೇಲ್ತುಂಬ್ಡೆೆ ಅವರಂಥ ವಿದ್ವಾಂಸರನ್ನೂ ಇವರು ಬಿಡಲಿಲ್ಲ.
ರಾಜಕೀಯದಲ್ಲಿ ಸಹಜವಾಗಿ ಭಿನ್ನಾಭಿಪ್ರಾ ಯಗಳಿರುತ್ತವೆ. ಆದರೆ ವ್ಯಕ್ತಿಗತವಾಗಿ ಪರಸ್ಪರ ನಿಂದನೆ, ಬೈಗುಳು ಮತ್ತು ಬಳಸುವ ಭಾಷೆಯ ಬಗ್ಗೆ ಎಚ್ಚರವಿರಬೇಕು. ಕರ್ನಾಟಕ ವಿಧಾನ ಸಭೆ, ನಿಜಲಿಂಗಪ್ಪ, ಬಿ.ಡಿ. ಜತ್ತಿ, ವೀರೇಂದ್ರ ಪಾಟೀಲ್, ದೇವರಾಜ ಅರಸು,ಶಾಂತವೇರಿ ಗೋಪಾಲಗೌಡ, ಬಿ.ವಿ.ಕಕ್ಕಿಲ್ಲಾಯ, ಎಂ.ಎಸ್. ಕೃಷ್ಣನ್, ಎಸ್. ಸೂರ್ಯನಾರಾಯಣರಾವ್, ಗಂಗಾಧರ ನಮೋಶಿ,ಬಂಗಾರಪ್ಪ, ಕವಿ ಬಿ.ಎಂ.ಇದಿನಬ್ಬ, ಸಿದ್ದರಾಮಯ್ಯ ಅವರಂಥ ಘಟಾನುಘಟಿಗಳನ್ನು ನೋಡಿದೆ. ಅವರಾರೂ ಪರಸ್ಪರ ಟೀಕೆ ಮಾಡುವಾಗ ಅಸಭ್ಯ ಭಾಷೆಯನ್ನು ಬಳಸಿದವರಲ್ಲ. ಸದನದ ಒಳಗೆ ಮಾತ್ರವಲ್ಲ ಹೊರಗೂ ಪರಸ್ಪರ ಅಗೌರವಿಸುವ ಮಾತುಗಳನ್ನು ಆಡುತ್ತಿರಲಿಲ್ಲ. ಆದರೆ ಈಗ ಎಲ್ಲರೂ ಅಲ್ಲದಿದ್ದರೂ ಕೆಲವರಾದರೂ ಇಂಥ ಹೊಲಸು ಭಾಷೆಯನ್ನು ಬಳಸುತ್ತಾರೆ. ಅವರಲ್ಲಿ ಸಿ.ಟಿ.ರವಿ ಮೊದಲನೇ ಸ್ಥಾನವನ್ನು ಯಾರಿಗೂ ಬಿಟ್ಟು ಕೊಡುತ್ತಿಲ್ಲ. ಬಿಜೆಪಿಯಲ್ಲೂ ಪ್ರಚೋದನಕಾರಿ ಮಾತುಗಳನ್ನು ಆಡುವವರಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತದೆ. ಅದಕ್ಕಾಗಿ ಕೆಲವರು ಈ ರೀತಿ ಮಾತಾಡುತ್ತಾರೆ.
ಈ ಸಿ.ಟಿ. ರವಿ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲಾಖಾನ್ ಎಂದು ಪತ್ರಿಕಾಗೋಷ್ಠಿಗಳಲ್ಲಿ, ಬಹಿರಂಗವಾಗಿ ಟೀಕಿಸಿ ಕುಚೇಷ್ಟೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಸದನದ ಹೊರಗೆ ಮಾತ್ರವಲ್ಲ ಸದನದ ಒಳಗೂ (ವಿಧಾನ ಪರಿಷತ್) ಕೂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಒಂದಲ್ಲ, ಎರಡಲ್ಲ ಏಳೆಂಟು ಸಲ ಪ್ರಾಸ್ಟಿಟ್ಯೂಟ್ ಎಂದು ಹೀಯಾಳಿಸಿದ. ಇದರಿಂದ ನೊಂದು ಕಣ್ಣೀರು ಹಾಕಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಭಾಪತಿಗಳಿಗೆ ದೂರು ನೀಡಿದರು.ಸಭಾಪತಿ ಬಸವರಾಜ ಹೊರಟ್ಟಿಯವರು ರಾಜಿ ಮಾಡಿಸಿ ಈ ವಿವಾದ ಇತ್ಯರ್ಥ ಮಾಡಿಸಲು ಪ್ರಯತ್ನ ಮಾಡಿದರೂ ರವಿ ತಯಾರಿರಲಿಲ್ಲ.
ವಾಸ್ತವವಾಗಿ ಹೊರಟ್ಟಿ ಅವರು ರಾಜಿ ಮಾಡಿಸುವ ಬದಲಿಗೆ ಹಿರಿಯ ಸಚಿವೆಯ ವೈಯಕ್ತಿಕ ನಿಂದನೆಗೆ ಸಂಬಂಧಿಸಿದಂತೆ ಸಿ.ಟಿ.ರವಿ ಮೇಲೆ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಬೇಕಾಗಿತ್ತು. ಈ ಹಿಂದೆ ಇವರ ವಾಹನ ಢಿಕ್ಕಿ ಹೊಡೆದ ಪರಿಣಾಮವಾಗಿ ಒಬ್ಬ ಅಮಾಯಕ ದಾರಿ ಹೋಕ ಅಸು ನೀಗಿದ, ಆಗಲೂ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಲಿಲ್ಲ. ವಿಷಾದದ ಸಂಗತಿಯೆಂದರೆ ಇಂಥ ಸಂದರ್ಭಗಳಲ್ಲಿ ತಮ್ಮ ಸಹೋದ್ಯೋಗಿಯ ರಕ್ಷಣೆಗಾಗಿ ಎಲ್ಲ ಪಕ್ಷಗಳ ಕೆಲವು ರಾಜಕಾರಣಿಗಳು ಒಂದಾಗುತ್ತಾರೆ.
ಈ ದೇಶದಲ್ಲಿ ತೊಂಭತ್ತರ ದಶಕದಿಂದ ಈಚೆಗೆ ದೇವರು ಮತ್ತು ಧರ್ಮದ ಹೆಸರು ಹೇಳಿಕೊಂಡು ಶಾಸನ ಸಭೆಗಳಿಗೆ ಗೆದ್ದು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.ಸಿ.ಟಿ.ರವಿ ಕೂಡ ಆ ರೀತಿ ಗೆದ್ದು ಬಂದವರು. ಬಾಬಾ ಬುಡಾನಗಿರಿ ಸಮಸ್ಯೆಯನ್ನು ಸೃಷ್ಟಿಸಿ ಅದರ ಮೂಲಕ ಮಲೆನಾಡಿನಲ್ಲಿ ವಿಶೇಷವಾಗಿ ಚಿಕ್ಕ ಮಂಗಳೂರಿನಲ್ಲಿ ಸಂಘ ಪರಿವಾರ ನೆಲೆಯೂರಿ ಬೆಳೆಯಿತು. ಅದರ ರಾಜಕೀಯ ಲಾಭ ಪಡೆದವರು ಸಿ.ಟಿ.ರವಿ ಮತ್ತು ಸುನೀಲ್ ಕುಮಾರ್. ಸಂಘದ ಸಾಮಾನ್ಯ ಕಾರ್ಯಕರ್ತರಾಗಿದ್ದ ಇವರು ಕೋಮು ಉನ್ಮಾದದ, ಉದ್ರೇಕದ ವಾತಾವರಣದ ಅಲೆಯಲ್ಲಿ ವಿಧಾನ ಸಭೆಗೆ ಗೆದ್ದು ಬಂದರು.ಸದನಕ್ಕೆ ಬಂದ ನಂತರ ಸುನೀಲ ಕುಮಾರ್ ಭಾಷೆ ಸ್ವಲ್ಪ ಬದಲಾಯಿತು.ಆದರೆ ರವಿ ಅದೇ ಹಳೆಯ ಅಸಭ್ಯ, ಅಸಹ್ಯ ಭಾಷೆಯಲ್ಲಿ ಮಾತಾಡುವುದನ್ನು ಮುಂದುವರಿಸಿದ್ದಾರೆೆ. ಬಾಬಾ ಬುಡಾನಗಿರಿಯ ಆ ಪ್ರಕ್ಷುಬ್ಧ ವಾತಾವರಣದಲ್ಲಿ ಕೋಮು ಸೌಹಾರ್ದ ವೇದಿಕೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆಗಾಗ ಚಿಕ್ಕ ಮಗಳೂರು, ಶೃಂಗೇರಿ, ಶಿವಮೊಗ್ಗಗಳಿಗೆ ಹೋಗುತ್ತಿದ್ದ ನಾನು ಇವರ ಕೋಮು ಪ್ರಚೋದಕ ಚಟುವಟಿಕೆಗಳನ್ನು ಹತ್ತಿರದಿಂದ ನೋಡಿದ್ದೇನೆ.
ಸಾಮಾಜಿಕ ಜಾಲ ತಾಣದಲ್ಲಿ ಭಕ್ತರೆಂದು ಕರೆಯಲ್ಪಡುವವರು ಬಳಸುವ ಭಾಷೆ ಎಲ್ಲರಿಗೂ ಗೊತ್ತಿದೆ. ಒಂದು ನಿರ್ದಿಷ್ಟ ಸಂಘಟನೆಗೆ ಸೇರಿದವರು, ವಿರೋಧಿಗಳು ಮಾಡುವ ಟೀಕೆಗೆ ಉತ್ತರಿಸಲಾಗದವರು ಅತ್ಯಂತ ಅಸಹ್ಯ ಮತ್ತು ಅಸಭ್ಯ ಭಾಷೆಯಲ್ಲಿ ಬರೆದು ಬಾಯಿ ಮುಚ್ಚಿಸಲು ಹತಾಶ ಯತ್ನವನ್ನು ಮಾಡುತ್ತಾರೆ. ಇದು ಅವರ ತಪ್ಪು ಮಾತ್ರವಲ್ಲ ಅವರ ವಿಚಾರ ಧಾರೆ, ಮತ್ತು ಸಂಘಟನೆಯಲ್ಲಿ ಪಡೆದ ತರಬೇತಿಯಂತೆ ಬರೆಯುತ್ತಾರೆ, ಮಾತಾಡುತ್ತಾರೆ. ವಿಭಿನ್ನ ವಿಚಾರಧಾರೆಗಳಿಗೆ ಸೇರಿದವರು ಪರಸ್ಪರ ಸಂವಾದ, ಚರ್ಚೆಗಳನ್ನು ಮಾಡಬಾರದೆಂದಲ್ಲ, ಅಂಥ ಆರೋಗ್ಯಕರ ಸಂವಾದದ ವಾತಾವರಣ ಈಗ ಉಳಿದಿಲ್ಲ. ಫ್ಯಾಶಿಸ್ಟ್ ಸಂಘಟನೆಗಳು ಅಂಥ ಸಂವಾದ ಮತ್ತು ಚರ್ಚೆಗಳನ್ನು ಇಷ್ಟ ಪಡುವುದಿಲ್ಲ. ಸಂವಾದವಿಲ್ಲದೆ ತಮ್ಮ ಸಿದ್ಧಾಂತವನ್ನು ಒಪ್ಪಿಕೊಳ್ಳಬೇಕೆಂದು ಅವರು ಬಯಸುತ್ತಾರೆ. ಅಂತಲೇ ಈಗ ದೇಶದಲ್ಲಿ ಮುಕ್ತ ಸಂವಾದದ ವಾತಾವರಣವಿಲ್ಲ. ಕಳೆದ ಶತಮಾನದ 30, 40ರ ದಶಕಗಳ ಜರ್ಮನಿ ಮತ್ತು ಇಟಲಿಯ ಪರಿಸ್ಥಿತಿ ಇಲ್ಲಿ ಪುನರಾವರ್ತನೆಗೊಂಡಿದೆ.
ಸಕಲ ಜೀವಾತ್ಮರ ಲೇಸನ್ನು ಬಯಸುವ ಬಸವಣ್ಣನವರ ಸಂದೇಶವನ್ನಾಗಲಿ, ಕುವೆಂಪು ಪರಿಕಲ್ಪನೆಯ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಲಿ ಜನಾಂಗ ದ್ವೇಷಿಗಳು ಇಷ್ಟ ಪಡುವುದಿಲ್ಲ. ನಿರ್ದಿಷ್ಟ ಜನಾಂಗ,ಧರ್ಮ ಮತ್ತು ಜಾತಿಯ ಹಿತಾಸಕ್ತಿಯ ರಕ್ಷಣೆ ಅವರ ಮೊದಲ ಆದ್ಯತೆಯಾಗಿದೆ. ಅದನ್ನು ಒಪ್ಪಿಕೊಳ್ಳದಿದ್ದವರು ಡಾ.ನರೇಂದ್ರ ದಾಭೋಲ್ಕ್ಕರ್, ಗೋವಿಂದ ಪನ್ಸ್ಸಾರೆ, ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಅವರಂತೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಇಂಥ ಭಯಾನಕ, ಆತಂಕದ ವಾತಾವರಣವನ್ನು ಬದಲಿಸಿ ಸಾಮಾಜಿಕ ನ್ಯಾಯದ, ಮುಕ್ತ ಸಂವಾದದ ದಿನಗಳನ್ನು ಮರಳಿ ತರುವುದು ನಮ್ಮ ಮೊದಲ ಆದ್ಯತೆಯಾಗಬೇಕಾಗಿದೆ.






