ಮಣಿಪುರ ಎಂಬ ಬೂದಿ ಮುಚ್ಚಿದ ಕೆಂಡ

ನಮ್ಮ ಪ್ರಧಾನ ಮಂತ್ರಿಗಳು ವಿದೇಶಕ್ಕೆ ಹೋದಾಗಲೆಲ್ಲ ಬುದ್ಧ ಶಾಂತಿಯ ಪ್ರತಿಪಾದಕ, ಈಗ ಶಾಂತಿಯ ಅಗತ್ಯವಿದೆ, ತಾನು ಬುದ್ಧನ ನಾಡಿನಿಂದ ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಭಾರತದ ಮುಕುಟದಂತಿರುವ ಮಣಿಪುರದಲ್ಲಿ ಜನಾಂಗ ದ್ವೇಷದ ಬೆಂಕಿ ಧಗ ಧಗಿಸುತ್ತಿದೆ. ಅತ್ತ ತಿರುಗಿಯೂ ನೋಡದ ನಮ್ಮನ್ನು ಆಳುವವರು ಕಿವಿಯ ಮೇಲೆ ಹೂವನ್ನು ಇಡುವುದರಲ್ಲಿ ಪರಿಣಿತರು.
ಭಾರತ ಎಂಬುದು ಸಾವಿರಾರು ವಿಭಿನ್ನ ಸಮುದಾಯಗಳ, ಭಾಷೆಗಳ, ಸಂಸ್ಕೃತಿಗಳ, ರಾಷ್ಟ್ರೀಯತೆಗಳ ತವರು. ಪ್ರತೀ ಹತ್ತು ಕಿ.ಮಿ.ಗೆ ಇಲ್ಲಿ ಜನರಾಡುವ ಭಾಷೆ ಬದಲಾಗುತ್ತಿರುತ್ತದೆ. ವೈವಿಧ್ಯತೆಯಲ್ಲಿ ಏಕತೆ ಎಂಬುದನ್ನು ಅನುಸರಿಸಿಕೊಂಡು ಬಂದ ಜನರು ನಮ್ಮವರು. ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಿದರೆ ಯಾವ ಸಮಸ್ಯೆಯೂ ಇಲ್ಲ. ಆದರೆ ಯಾವುದನ್ನಾಗಲಿ ಬಲವಂತವಾಗಿ ಹೇರಲು ಹೊರಟರೆ ಇದು ಒಂದಾಗಿ ಉಳಿಯುವುದು ಕಷ್ಟ. ಇದಕ್ಕೆ ಈಶಾನ್ಯ ರಾಜ್ಯ ಮಣಿಪುರ ನಮ್ಮ ಕಣ್ಣ ಮುಂದಿನ ಉದಾಹರಣೆಯಾಗಿದೆ.
ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಅವರು ಭಾರತದ ಆಭರಣ ಎಂದು ಕರೆದ ಮಣಿಪುರ ಕಳೆದ ಮೂರು ವರ್ಷಗಳಿಂದ ಧಗ ಧಗಿಸುತ್ತಲೇ ಇದೆ. ಇತ್ತೀಚಿನ ಕೆಲ ತಿಂಗಳು ಸ್ಮಶಾನ ಮೌನದ ವಾತಾವರಣ ನಿರ್ಮಾಣವಾದಾಗ ಮಣಿಪುರದ ಪರಿಸ್ಥಿತಿ ಸುಧಾರಿಸಿದೆ ಎಂದು ಸರಕಾರ ಘೋಷಣೆ ಮಾಡಿತು. ಆದರೆ ಕಳೆದ ವಾರ ಅಲ್ಲಿ ಭುಗಿಲೆದ್ದ ಹಿಂಸಾಚಾರದಿಂದಾಗಿ ಸರಕಾರಕ್ಕೆ ಮುಖಭಂಗವಾದಂತಾಗಿದೆ. ಬಾಂಬ್ ದಾಳಿಯಿಂದಾಗಿ ಇಬ್ಬರು ಸಣ್ಣ ಮಕ್ಕಳ ಹತ್ಯೆ, ಅದರ ಬೆನ್ನಲ್ಲೇ ವಿಷ್ಣುಪುರ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಮೂವರ ಸಾವು ಮತ್ತೆ ಪರಿಸ್ಥಿತಿ ಹದಗೆಡಲು ಕಾರಣವಾಗಿದೆ.
ಇತ್ತೀಚೆಗೆ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈಶಾನ್ಯ ರಾಜ್ಯಗಳನ್ನು ಅಷ್ಟಲಕ್ಷ್ಮಿಯರು ಎಂದು ವರ್ಣಿಸಿದರು.ಚುನಾವಣೆ ಸಂದರ್ಭಗಳಲ್ಲೆಲ್ಲ ಈ ರೀತಿ ಕಿವಿಯ ಮೇಲೆ ಹೂವಿಡುವಂಥ ಮಾತುಗಳನ್ನು ನಾಲಗೆಯ ತುದಿಯಿಂದ ಉದುರಿಸುವಲ್ಲಿ ನಮ್ಮ ವಿಶ್ವಗುರುಗಳು ನಿಸ್ಸೀಮರು. ಯಾವುದೇ ಸಮಸ್ಯೆಗೆ ಶಾಸ್ವತ ಪರಿಹಾರ ಕಂಡು ಹಿಡಿಯುವ ಉಸಾಬರಿಗೆ ಅವರು ಹೋಗುವುದಿಲ್ಲ. 2023ರ ಮೇ ತಿಂಗಳಿಂದ ಆರಂಭವಾದ ಈ ಜನಾಂಗೀಯ ಸಂಘರ್ಷದಲ್ಲಿ ಈವರೆಗೆ 280ಕ್ಕೂ ಹೆಚ್ಚು ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. 60,000ಕ್ಕೂ ಹೆಚ್ಚು ಜನರು ಮನೆ ಮಾರು ಕಳೆದುಕೊಂಡು ನಿರಾಶ್ರಿತರಾಗಿ ಪರಿಹಾರ ಶಿಬಿರಗಳಲ್ಲಿ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಆದರೂ ದಿಲ್ಲಿಯ ದೊರೆಗಳು ಏನು ನಡೆದಿಲ್ಲವೆಂಬಂತೆ ಘನ ಘೋರ ನಿದ್ರೆಯಲ್ಲಿ ಇದ್ದಾರೆ.
ಮಣಿಪುರ ಎಂಬ ಪುಟ್ಟ ರಾಜ್ಯ ಕುಕಿ ಹಾಗೂ ಮೈತೈ ಸಮುದಾಯಗಳ ಪ್ರದೇಶಗಳ ನಡುವೆ ಒಡೆದು ಹೋಗಿದೆ.ಎರಡು ಸಮುದಾಯಗಳ ನಡುವೆ ದ್ವೇಷದ ದಳ್ಳುರಿ ಎದ್ದಿದೆ.ಮೂರು ವರ್ಷದಿಂದ ಹಿಂಸಾಚಾರ ನಡೆದರೂ ಇದನ್ನು ನಿಯಂತ್ರಿಸುವಲ್ಲಿ ಭದ್ರತಾ ಪಡೆಗಳು ವಿಫಲಗೊಂಡಿವೆ.ಗುಪ್ತಚರ ಇಲಾಖೆ ಕೆಲಸ ಮಾಡುತ್ತಿಲ್ಲ. ಈಶಾನ್ಯ ರಾಜ್ಯಗಳ ಸಮಸ್ಯೆ ಅಂದರೆ ಶಾಂತಿ ರಕ್ಷಣೆಯ ನೆಪ ಮುಂದೆ ಮಾಡಿ ಅಲ್ಲಿ ಭದ್ರತಾ ಪಡೆಗಳು ನಡೆಸಿರುವ ಅತಿರೇಕದ ಕಾರ್ಯಾಚರಣೆಯಿಂದ ಜನ ರೋಸಿ ಹೋಗಿದ್ದಾರೆ. ಈ ಹಿಂದೆ ಮಣಿಪುರದ ಮಹಿಳೆಯರು ಭದ್ರತಾ ಪಡೆಗಳ ದೌರ್ಜನ್ಯದ ವಿರುದ್ಧ ಬೆತ್ತಲೆ ಪ್ರತಿಭಟನೆ ನಡೆಸಿದ್ದರು.
ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರಕಾರ ಮಣಿಪುರ ಸಮಸ್ಯೆಯನ್ನು ಕೇವಲ ಕಾನೂನು ಸುವ್ಯವಸ್ಥೆ ಸಮಸ್ಯೆ ಎಂದು ಪರಿಗಣಿಸಿರುವುದರಿಂದ ಪರಿಸ್ಥಿತಿ ಹದಗೆಡಲು ಕಾರಣವಾಗಿದೆ. ವಾಸ್ತವವಾಗಿ ಮಣಿಪುರ ಸಮಸ್ಯೆ ಅಂದರೆ ಕುಕಿ ಮತ್ತು ಮೈತೈ ಬುಡಕಟ್ಟು ಸಮುದಾಯಗಳ ನಡುವೆ ಎದ್ದು ನಿಂತ ದ್ವೇಷದ ಅಡ್ಡಗೋಡೆ. ಎರಡೂ ಸಮುದಾಯಗಳ ನಡುವೆ ಎದ್ದು ನಿಂತ ವೈಷಮ್ಯದ ಗೋಡೆಯನ್ನು ಕೆಡವಿ ಸ್ನೇಹ ಸಂಬಂಧದ ಸೇತುವೆಯನ್ನು ನಿರ್ಮಿಸಬೇಕಾಗಿದೆ. ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದಂತೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಇದೆ. ಆದರೂ ಅಲ್ಲಿ ಶಾಂತಿ ನೆಲೆಸಲಿಲ್ಲ. ಜನಸಾಮಾನ್ಯರು ಅಸುರಕ್ಷತೆ ಭಾವನೆಯಿಂದ ಬಳಲುತ್ತಿದ್ದಾರೆ
ನಮ್ಮ ಪ್ರಧಾನ ಮಂತ್ರಿಗಳು ವಿದೇಶಕ್ಕೆ ಹೋದಾಗಲೆಲ್ಲ ಬುದ್ಧ ಶಾಂತಿಯ ಪ್ರತಿಪಾದಕ, ಈಗ ಶಾಂತಿಯ ಅಗತ್ಯವಿದೆ, ತಾನು ಬುದ್ಧನ ನಾಡಿನಿಂದ ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಭಾರತದ ಮುಕುಟದಂತಿರುವ ಮಣಿಪುರದಲ್ಲಿ ಜನಾಂಗ ದ್ವೇಷದ ಬೆಂಕಿ ಧಗ ಧಗಿಸುತ್ತಿದೆ. ಅತ್ತ ತಿರುಗಿಯೂ ನೋಡದ ನಮ್ಮನ್ನು ಆಳುವವರು ಕಿವಿಯ ಮೇಲೆ ಹೂವನ್ನು ಇಡುವುದರಲ್ಲಿ ಪರಿಣಿತರು.
ಈಶಾನ್ಯ ಭಾರತದ ಪುಟ್ಟ ರಾಜ್ಯ ಮಣಿಪುರದಲ್ಲಿ ಮೈತೈ, ನಾಗಾ, ಕುಕಿ, ಜೋಮಿ ಸೇರಿದಂತೆ ಹಲವಾರು ಬುಡಕಟ್ಟು ಸಮುದಾಯಗಳು ನೆಲೆಸಿವೆ. ವಿಭಿನ್ನ ಸಮುದಾಯಗಳು ಒಂದು ಭೂ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡ ಸಾವಿರಾರು ಉದಾಹರಣೆಗಳು ಜಗತ್ತಿನಲ್ಲಿ ಇವೆ. ಕೂಡಿ ಬದುಕಿದರೆ ನೆಮ್ಮದಿ. ಕಿತ್ತಾಡಿಕೊಂಡರೆ ಅವನತಿ. ಹಿಂದೆ ಇವರೆಲ್ಲ ಸೇರಿ ಒಟ್ಟಿಗೆ ಬದುಕುತ್ತಿದ್ದರು. ಆದರೆ ಯಾವುದೇ ಸಮುದಾಯದಲ್ಲಿ ಜನಾಂಗ ದ್ವೇಷಿಗಳು ಹುಟ್ಟಿಕೊಂಡರೆ ಯಾರೂ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ.
ಮಣಿಪುರದಂಥ ಸಮಸ್ಯೆಗಳಿಗೆ ಪೊಲೀಸರು, ವಿಶೇಷ ಸಶಸ್ತ್ರ ಪಡೆಗಳು, ಸೇನಾಪಡೆಯ ತುಕಡಿಗಳಿಂದ ಪರಿಹಾರ ಸಿಗುವುದಿಲ್ಲ. ಮೊದಲು ಸರಕಾರದ ನಕಾರಾತ್ಮಕ ನೀತಿ ಬದಲಾಗಬೇಕು. ಒಂದು ಸಮುದಾಯದ ವಿರುದ್ಧ ಇನ್ನೊಂದು ಜನಾಂಗವನ್ನು ಎತ್ತಿ ಕಟ್ಟುವ ವಿಭಜನಕಾರಿ ರಾಜಕೀಯದ ಬದಲು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ, ಮನಸ್ಸನ್ನು ಗೆಲ್ಲುವ ಮಾರ್ಗವನ್ನು ಅನುಸರಿಸಬೇಕು.
ಮಣಿಪುರದಲ್ಲಿ ಮುಖ್ಯಮಂತ್ರಿಯನ್ನು ಬದಲಿಸಿ ಖೇಮಚಂದ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಹೊಸ ಸರಕಾರ ರಚಿಸಿದ ನಂತರವೂ ಪರಿಸ್ಥಿತಿ ಸುಧಾರಿಸಿಲ್ಲ. ಕೆಲವು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಯನ್ನು ರದ್ದು ಗೊಳಿಸಲಾಗಿದೆ. ಸಾಕಷ್ಟು ಭದ್ರತಾ ಪಡೆಗಳನ್ನು ನಿಯೋಜಿಸಿದ ನಂತರವೂ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಭದ್ರತಾ ಪಡೆಗಳು ಹಾಗೂ ಅರೆಸೇನಾ ಪಡೆಗಳ ಕಾರ್ಯಾಚರಣೆಯಿಂದ ಮಣಿಪುರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಅದರ ಬದಲಿಗೆ ಕೆಳ ಹಂತದಲ್ಲಿ ಉಭಯ ಸಮುದಾಯಗಳ ನಾಯಕರನ್ನು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತಗೆದಕೊಂಡು ಮಾತುಕತೆಗೆ ಹಾಗೂ ಮುಕ್ತ ಸಂವಾದಕ್ಕೆ ಅವಕಾಶವನ್ನು ಕಲ್ಪಿಸಿಕೊಡಬೇಕು.
ಕೇಂದ್ರದಲ್ಲಿ ಹಾಗೂ ಮಣಿಪುರದ ಎರಡೂ ಕಡೆ ಬಿಜೆಪಿ ಸರಕಾರಗಳಿವೆ. ಆದರೂ ಡಬಲ್ ಇಂಜಿನ್ ಸರಕಾರಕ್ಕೆ ಮಣಿಪುರದಲ್ಲಿನ ಹಿಂಸಾಚಾರವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ರಾಜ್ಯದ ಇಂಜಿನ್ ಕೆಟ್ಟು ನಿಂತಿದೆ. ಕೇಂದ್ರದ ಇಂಜಿನ್ ದಿಲ್ಲಿ ಬಿಟ್ಟು ಬರುತ್ತಿಲ್ಲ. ಜನಾಂಗೀಯ ದ್ವೇಷದ ದಳ್ಳುರಿಯಲ್ಲಿ ಓಟಿನ ಬೆಳೆಯನ್ನು ತೆಗೆಯಲು ಹೊರಟವರು ಇದಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ಇದ್ದಾರೆ.
ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಮೂಲಕ ಇಲ್ಲಿನ ಬಂಡುಕೋರರನ್ನು, ಪ್ರತ್ಯೆಕತಾವಾದಿಗಳನ್ನು ಹತ್ತಿಕ್ಕಲು ಯತ್ನಿಸಿದರೂ ಪ್ರಯೋಜನಕಾರಿಯಾಗಿಲ್ಲ. ಉಗ್ರರನ್ನು ಹತ್ತಿಕ್ಕಬೇಕಾದ ಪಡೆಗಳು ಅದರ ಬದಲಿಗೆ ಅನುಮಾನ ಬಂದವರನ್ನೆಲ್ಲ ಗುಂಡಿಕ್ಕಿ ಕೊಲ್ಲುತ್ತಿವೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ದೂರುಗಳೂ ಇವೆ. ಇದನ್ನು ಪ್ರತಿಭಟಿಸಿ 2000ದಲ್ಲಿ ಮಣಿಪುರದ ಮಹಿಳೆಯರು ಬೆತ್ತಲೆ ಪ್ರತಿಭಟನೆಯನ್ನು ನಡೆಸಿದ್ದರು. ಅಲ್ಲಿನ ಸೇನೆಯ ದೌರ್ಬಲ್ಯವನ್ನು ವಿರೋಧಿಸುವುದಕ್ಕಾಗಿ ವಿಧವೆಯರೆಲ್ಲ ಸೇರಿ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ. ಹೈಕೋರ್ಟ್ ನಿರ್ದೇಶನದಂತೆ ಮೈತೈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ರಾಜ್ಯ ಸರಕಾರ ಮುಂದಾದಾಗಲೆಲ್ಲ ಕುಕಿ ಸೇರಿದಂತೆ ಕೆಲವು ಬುಡಕಟ್ಟು ಸಮುದಾಯಗಳು ಸಾಂಕೇತಿಕವಾಗಿ ಆಕ್ಷೇಪವನ್ನು ವ್ಯಕ್ತಪಡಿಸಿದ್ದ ನೆಪವಾಗಿ ಸದರಿ ಸಮುದಾಯದ ಕೆಲವು ಉಗ್ರಗಾಮಿ, ಜನಾಂಗವಾದಿ ಗುಂಪುಗಳು ಕುಕಿ ಸಮುದಾಯದವರ ಮೇಲೆ ದ್ವೇಷದ ದಾಳಿಯನ್ನು ಆರಂಭಿಸಿದವು. ಮೊಳಕೆಯಲ್ಲಿದ್ದಾಗಲೇ ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯಬಹುದಾಗಿತ್ತು. ಆದರೆ ಸರಕಾರದ ಚುಕ್ಕಾಣಿ ಹಿಡಿದವರಿಗೆ ವಿಶಾಲ ಮನೋಭಾವಬೇಕು. ಎಲ್ಲ ಜಾತಿ, ಮತ, ಸಮುದಾಯ ಹಾಗೂ ಬುಡಕಟ್ಟುಗಳ ಆಚೆ ನಿಂತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಕಾರಾತ್ಮಕ ಸ್ಪಂದಿಸುವ ಮನಸ್ಥಿತಿ ಸರಕಾರದಲ್ಲಿ ಇದ್ದವರಿಗೆ ಇರಬೇಕಾಗುತ್ತದೆ.
ಕಳೆದ ಮೂರು ವರ್ಷಗಳಿಂದ ಜನಾಂಗ ದ್ವೇಷದ ಬೆಂಕಿಯಲ್ಲಿ ಮಣಿಪುರ ಬೆಂದು ಹೋಗುತ್ತಿದೆ. ರಕ್ತಪಾತದಿಂದ ನಲುಗಿ ಹೋಗಿದೆ. ಈ ಬೆಂಕಿಯನ್ನು ನಂದಿಸಬೇಕಾದವರು ಮಾತು ಬಿಟ್ಟರೆ ಬೇರೆನನ್ನೂ ಕೊಡುತ್ತಿಲ್ಲ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ‘ಮೌನಿಬಾಬಾ’ ಎಂದು ಕರೆದವರು ಮೌನ ತಾಳಿದ್ದಾರೆ. ಮಣಿಪುರದಂಥ ಸಮಸ್ಯೆಗಳಿಗೆ ಗಾಂಧಿ, ಅಂಬೇಡ್ಕರ್, ನೆಹರೂ ಮಾರ್ಗದಲ್ಲಿ ಪರಿಹಾರ ಸಿಗಬಹುದು. ಆದರೆ ಈಗಿನವರದ್ದು ಸಾವರ್ಕರ್, ಗೋಳ್ವಾಲ್ಕರ್ ದಾರಿ. ಅದರಲ್ಲಿ ಪರಸ್ಪರ ಮಾತುಕತೆ, ಸಂವಾದ, ಸೌಹಾರ್ದಗಳಿಗೆ ಅವಕಾಶ ಇಲ್ಲ ಎಂಬುದು ವಾಸ್ತವ ಸಂಗತಿ.






