ಭಾಗವತರಿಗೆ ಕೆಲವು ಪ್ರಶ್ನೆಗಳು

ಈಗ ದೇಶವ್ಯಾಪಿ ನಡೆಯುತ್ತಿರುವ ಗಣೇಶೋತ್ಸವವನ್ನು ಸಂಘಪರಿವಾರ ತನ್ನ ಪ್ರಚೋದನಕಾರಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ಎಲ್ಲರೂ ತಿಳಿದ ಸಂಗತಿ. ಆದರೂ ಕರ್ನಾಟಕದ ಅನೇಕ ಕಡೆ ಹಿಂದೂ ಮುಸ್ಲಿಮರು ಜೊತೆಗೆ ಸೇರಿ ಗಣೇಶ ಚೌತಿಯನ್ನು ಆಚರಿಸುತ್ತಾರೆ. ಸಂಘಕ್ಕೆ ಯಾವುದೇ ಹಬ್ಬದ ಆಚರಣೆ ಮುಖ್ಯವಲ್ಲ. ಅದನ್ನು ಅಲ್ಪಸಂಖ್ಯಾತರ ವಿರೋಧಿ ಅಜೆಂಡಾಕ್ಕೆ ದುರ್ಬಳಕೆ ಮಾಡಿಕೊಳ್ಳುವುದು ಅದರ ಚಾಳಿ.
ಅಮೆರಿಕ ಮತ್ತು ಬ್ರಿಟನ್ಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ತೀವ್ರ ವಿರೋಧದ ನಡುವೆ ಆ ದೇಶಗಳಿಗೆ ನಿಧಿ ಸಂಗ್ರಹಕ್ಕಾಗಿ ಹೋಗಿರುವ ಆರೆಸ್ಸೆಸ್ ಸರ ಸಂಘಚಾಲಕ ಮೋಹನ್ ಭಾಗವತರು ಅಲ್ಲಿ ಆಡಿದ ಕೆಲವು ಮಾತುಗಳ ಬಗ್ಗೆ ಎಲ್ಲ ಕಡೆ ಅಲ್ಲದಿದ್ದರೂ ಕೆಲವು ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ. ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ದೇಶದ ಆಡಳಿತ ಪಕ್ಷದ ಮೂಗುದಾರ ಹಿಡಿದಿರುವವರ ಬಗ್ಗೆ ಇಂಥ ಚರ್ಚೆ ಸಹಜ.
ಅಮೆರಿಕದಲ್ಲಿ ನಡೆದ ಸಭೆಯೊಂದರಲ್ಲಿ ಭಾಷಣ ಮಾಡಿದ ಮೋಹನ್ ಭಾಗವತರು ‘‘ಭಾರತದಲ್ಲಿ ಮುಸಲ್ಮಾನರನ್ನು ವಿರೋಧಿಸುವವರು, ಮುಸಲ್ಮಾನರು ಇಲ್ಲಿ ಇರುವುದೇ ಬೇಡ ಎಂದು ಹೇಳುವವರು ಹಿಂದೂಗಳೇ ಅಲ್ಲ’’ ಎಂದು ಹೇಳಿದರು. ಅದೇ ರೀತಿ ಲಂಡನ್ನಲ್ಲಿ ನಡೆದ ಸಭೆಯೊಂದರಲ್ಲಿ ಮಾತಾಡಿದ ಭಾಗವತರು ಪಾಕಿಸ್ತಾನದ ಜೊತೆಗೆ ಸ್ನೇಹ ಸಂಬಂಧದ ಅಗತ್ಯದ ಬಗ್ಗೆ ಬಲವಾಗಿ ಪ್ರತಿಪಾದಿಸಿದರು. ಇಷ್ಟಕ್ಕೇ ನಿಲ್ಲದೆ ‘ಭಾರತ ಬುದ್ಧನ ದೇಶ’ ಎಂದು ಇನ್ನೊಂದು ಕಡೆ ಹೇಳಿದರು. ಸಾಮಾನ್ಯವಾಗಿ ಭಾಗವತರು ಮಾತ್ರವಲ್ಲ ಸಂಘದ ನಾಯಕರು ಭಾಷಣ ಮಾಡುವಾಗ ತಮ್ಮ ಸಂಘಟನೆಯ ಪರವಾಗಿ ಮಾತಾಡುವುದು ಕಡಿಮೆ. ಯಾವಾಗಲೂ ತಾವು ಹಿಂದೂಗಳ ಏಕೈಕ ಪ್ರತಿನಿಧಿಗಳು ಎಂಬಂತೆ ಮಾತಾಡುತ್ತಾರೆ. ಆರೆಸ್ಸೆಸ್ ಸಂಘಟನೆಯನ್ನು ಯಾರಾದರೂ ಟೀಕಿಸಿದರೆ, ಹಿಂದೂಗಳನ್ನು ಯಾಕೆ ಟೀಕಿಸುತ್ತೀರಿ ಎಂದು ಕೇಳುತ್ತಾರೆ. ತಾವು ಹಿಂದೂಗಳೆಲ್ಲರನ್ನು ಪ್ರತಿನಿಧಿಸುವ ನಾಯಕರು ಎಂಬಂತೆ ಬಿಂಬಿಸಿಕೊಳ್ಳಲು ಮುಂದಾಗುತ್ತಾರೆ.
ಭಾರತದ ಬಹುಸಂಖ್ಯಾತ ಹಿಂದೂಗಳೇನು ತಮ್ಮ ಪರವಾಗಿ ಮಾತಾಡುವಂತೆ ಭಾಗವತರಿಗಾಗಲಿ, ಸಂಘದ ನಾಯಕರಿಗಾಗಲಿ ಅಧಿಕಾರ ಪತ್ರವನ್ನು ಕೊಟ್ಟಿದ್ದಾರೆಯೇ? ಆರೆಸ್ಸೆಸ್ನ ಕೋಮುವಾದಿ ಚಟುವಟಿಕೆಗಳನ್ನು ವಿರೋಧಿಸುವ ಸಾಕಷ್ಟು ಸಂಖ್ಯೆಯ ಹಿಂದೂಗಳು ಮತ್ತು ಹಿಂದೂ ಮಠಾಧಿಶರೂ ಇದ್ದಾರೆ.
ಬಹುತೇಕ ಹಿಂದೂಗಳೂ ಇವರನ್ನು ಒಪ್ಪುವುದಿಲ್ಲ. ಆದರೂ ಬಹುಸಂಖ್ಯಾತರ ಓಟ್ ಬ್ಯಾಂಕ್ ನಿರ್ಮಿಸುವ ತಂತ್ರದ ಭಾಗವಾಗಿ ಇಂಥ ಮಾತುಗಳನ್ನು ಅವರು ಹೇಳುತ್ತಲೇ ಹೋಗುತ್ತಾರೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದನ್ನು ಜನರು ಸತ್ಯ ಎಂದು ನಂಬುತ್ತಾರೆ ಎಂದು ಜರ್ಮನಿಯ ಫ್ಯಾಶಿಸ್ಟ್ ಸರ್ವಾಧಿಕಾರಿ ಹಿಟ್ಲರ್ನ ಪ್ರಚಾರ ಮಂತ್ರಿಯಾಗಿದ್ದ ಗೋಬೆಲ್ಸ್ ಹೇಳುತ್ತಿದ್ದ.
ಭಾಗವತರು ಅಮೆರಿಕದ ನೆಲದಲ್ಲಿ ನಿಂತು ಮುಸ್ಲಿಮರ ಬಗ್ಗೆ ತೋರಿಕೆಯ ಸಹಾನುಭೂತಿಯ ಮಾತುಗಳನ್ನು ಆಡುವ ಸಮಯ, ಸಂದರ್ಭದಲ್ಲೇ ಭಾರತದಲ್ಲಿ ಅವರ ವಾನರ ಸೇನೆ ಉತ್ತರ ಪ್ರದೇಶ ಸಹರಾನ್ಪುರದಲ್ಲಿ 110 ವರ್ಷಗಳಷ್ಟು ಹಳೆಯದಾದ ಮಸೀದಿಯೊಂದನ್ನು ಒಡೆದು ಹಾಕಿತು. ಮಹಾರಾಷ್ಟ್ರದ ಅಮರಾವತಿಯಲ್ಲಿ ಬಿಜೆಪಿ ಸಂಸದೆಯ ನಾಯಕತ್ವದಲ್ಲಿ ಸ್ಥಳೀಯ ಮಸೀದಿಯ ಮುಂದೆ ಇಡೀ ದಿನ ಹನುಮಾನ್ ಚಾಲಿಸಾ ಪಠಣ ನಡೆಯಿತು. ಮತ್ತೊಂದೆಡೆ ಗುಜರಾತ್, ಮಹಾರಾಷ್ಟ್ರ ಮುಂತಾದ ಕಡೆ ಹಿಂದೂ ಮುಸ್ಲಿಮರು ಜೊತೆಗೆ ಸೇರಿ ಆಚರಿಸುವ ನವರಾತ್ರಿಯ ಗರ್ಬಾ ನೃತ್ಯದಲ್ಲಿ ಇನ್ನು ಮುಂದೆ ಮುಸಲ್ಮಾನರು ಪಾಲ್ಗೊಳ್ಳುವುದನ್ನು ವಿಶ್ವ ಹಿಂದೂ ಪರಿಷತ್ತು ನಿರ್ಬಂಧಿಸಿತು. ಇದನ್ನು ಹಿಂದೂ, ಮುಸಲ್ಮಾನರು ಶತಮಾನಗಳಿಂದ ಒಟ್ಟಿಗೆ ಆಚರಿಸುತ್ತ ಬಂದಿದ್ದಾರೆ. ಇದರರ್ಥ, ಇಷ್ಟೇ ಅಂತರ್ರಾಷ್ಟ್ರೀಯ ವೇದಿಕೆಗಳಲ್ಲಿ ಭಾಗವತರು ಸೌಹಾರ್ದದ ಮಾತನ್ನು ಆಡುತ್ತಿದ್ದರೆ ಭಾರತದೊಳಗೆ ಅವರ ಸಂಘಟನೆಗಳ ಕಾರ್ಯಕರ್ತರು ಬಹಿರಂಗವಾಗಿ ಮುಸ್ಲಿಮ್ ದ್ವೇಷದ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಭಾಗವತರು ವಿದೇಶದಲ್ಲಿ ಆಡಿದ ಮಾತು ಕೇವಲ ತೋರಿಕೆಯದು. ಅದಕ್ಕೆ ಯಾವುದೇ ವಿಶೇಷ ಅರ್ಥವಿಲ್ಲ.
ಮೋಹನ್ ಭಾಗವತರು ಮಾತ್ರವಲ್ಲ ಸಂಘದ ಹಿಂದಿನ ಸರ ಸಂಘ ಚಾಲಕರು ಕೂಡ ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗೆಲ್ಲ ಇಂಥ ಹಾರಿಕೆಯ, ಜಾರಿಕೆಯ ಮಾತುಗಳನ್ನು ಆಡುತ್ತಲೇ ಬಂದಿದ್ದಾರೆ. ಸಂಘದ ಸ್ವಯಂ ಸೇವಕರಾದ ಪ್ರಧಾನಿ ನರೇಂದ್ರ ಮೋದಿಯವರು ಕೂಡ ವಿದೇಶಕ್ಕೆ ಹೋದಾಗೆಲ್ಲ ತಾನು ಬುದ್ಧ ಮತ್ತು ಗಾಂಧೀಜಿ ಜನಿಸಿದ ನಾಡಿನಿಂದ ಬಂದಿರುವುದಾಗಿ ಹೇಳುತ್ತಾರೆ. ಹೀಗೆ ಹೇಳಿದ ಮಾತ್ರಕ್ಕೆ ಅವರು ಬದಲಾಗಿದ್ದಾರೆಂದಲ್ಲ. ಸಂಘಟನೆಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವ ತಂತ್ರದ ಭಾಗವಾಗಿ ಹೀಗೆ ಮಾತಾಡುತ್ತಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರ ಹತ್ಯೆ ನಡೆದಾಗ ಅಂದಿನ ಕೇಂದ್ರ ಗೃಹ ಮಂತ್ರಿ ವಲ್ಲಭಭಾಯಿ ಪಟೇಲರು ಆರೆಸ್ಸೆಸ್ ಮೇಲೆ ನಿರ್ಬಂಧ ಹೇರಿದರು. ಅಷ್ಟು ಮಾತ್ರವಲ್ಲ ಇನ್ನೂ ಉಗ್ರ ಕ್ರಮಕ್ಕೆ ಮುಂದಾದರು. ಆಗ ಸರಸಂಘಚಾಲಕರಾಗಿದ್ದ ಮಾಧವ ಸದಾಶಿವ ಗೋಳ್ವಾಲ್ಕರ್ ಅವರು ಪಟೇಲರನ್ನು ಭೇಟಿಯಾಗಿ ಸಂಘದ ಮೇಲಿನ ನಿರ್ಬಂಧವನ್ನು ಹಿಂದೆಗೆದುಕೊಳ್ಳಬೇಕೆಂದು ಪರಿ ಪರಿಯಾಗಿ ಕೇಳಿಕೊಂಡರು. ಆಗ ಪಟೇಲರು ಕೆಲವು ಷರತ್ತುಗಳನ್ನು ಹಾಕಿ, ಅವುಗಳಿಗೆ ಒಪ್ಪಿಕೊಳ್ಳುವುದಾಗಿ ಲಿಖಿತವಾಗಿ ಮಾತು ಕೊಟ್ಟರೆ ನಿರ್ಬಂಧ ವಾಪಸ್ ಪಡೆಯುವುದಾಗಿ ಹೇಳಿದರು. ಷರತ್ತಿನ ಪ್ರಕಾರ ಇನ್ನು ಮುಂದೆ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಸಂಘದ ಆಗಿನ ಸರ ಸಂಘಚಾಲಕ ಗೋಳ್ವಾಲ್ಕರ್ ಬರೆದುಕೊಟ್ಟರು. ಆಗ ನಿರ್ಬಂಧ ಸಡಿಲಿಸಲಾಯಿತು.
ಎರಡನೆಯದಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತುಸ್ಥಿತಿ ಹೇರಿ, ಸಂಘದ ಚಟುವಟಿಕೆಗಳನ್ನು ನಿರ್ಬಂಧಿಸಿದಾಗ ಆರೆಸ್ಸೆಸ್ ಸರಸಂಘಚಾಲಕರಾಗಿದ್ದ ದೇವರಸರು ಪ್ರಧಾನಿಗೆ ಪತ್ರ ಬರೆದು ತುರ್ತು ಪರಿಸ್ಥಿತಿಯನ್ನು ಬೆಂಬಲಿಸುವುದಾಗಿ ತಿಳಿಸಿದರು. ಆ ನಂತರ ಕ್ರಮೇಣ ನಿಷೇಧವನ್ನು ವಾಪಸ್ ಪಡೆಯಲಾಯಿತು. ಮೋಹನ್ ಭಾಗವತರಾಗಲಿ ಸಂಘದ ಯಾವುದೇ ನಾಯಕರಾಗಿರಲಿ ಅವರು ಬಹಿರಂಗವಾಗಿ ನೀಡುವ ಹೇಳಿಕೆಗಳಿಗೂ ಸಂಘದ ದೈನಂದಿನ ಚಟುವಟಿಕೆಗಳಿಗೂ ಸಂಬಂಧವಿರುವುದಿಲ್ಲ. ಹಿಂದೊಮ್ಮೆ ಇದೇ ಭಾಗವತರು ಹಳೆಯ ಮಂದಿರಗಳನ್ನು ಹುಡುಕಲು ಮಸೀದಿಗಳನ್ನು ಅಗೆಯಲು ತಮ್ಮ ಒಪ್ಪಿಗೆಯಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರು. ಆದರೆ ತಮ್ಮ ಸರಸಂಘ ಚಾಲಕರು ಹೇಳಿದರೆಂದು ಭಕ್ತರು ನೆಲ ಅಗೆಯುವುದನ್ನು ನಿಲ್ಲಿಸಲಿಲ್ಲ. ಇದರರ್ಥ ಇಷ್ಟೇ, ಅಂದರೆ ಬಹಿರಂಗವಾಗಿ ಹೇಳಿದರೆಂದು ಸ್ವಯಂ ಸೇವಕರು ತಮ್ಮ ವಿಧ್ವಂಸಕ ಕಾರ್ಯಾಚರಣೆ ನಿಲ್ಲಿಸುವುದಿಲ್ಲ. ಇದೆಲ್ಲ ಆರೆಸ್ಸೆಸ್ ಸಂಘಟನಾ ತಂತ್ರದ ಭಾಗ ಎಂದರೆ ಅತಿಶಯೋಕ್ತಿಯಲ್ಲ ಲಂಡನ್ನಲ್ಲಿ ನಡೆದ ಸಭೆಯಲ್ಲಿ ಸಂಘಕ್ಕೆ ಯಾರ ಬಗೆಗೂ ದ್ವೇಷವಿಲ್ಲ, ಅಂತಃಕರಣ ಪರಿಶುದ್ಧವಾಗಿದೆ ಎಂದು ಹೇಳಿದರು. ಆದರೆ ಭಾರತದಲ್ಲಿ ನಡೆದ, ನಡೆಯುತ್ತಿರುವ ಕೋಮು ಗಲಭೆಗಳು ಅದರಲ್ಲೂ ವಿಶೇಷವಾಗಿ ಸುಮಾರು ಎರಡು ಸಾವಿರ ಜನರ ಸಾವಿಗೆ ಕಾರಣವಾದ ಗುಜರಾತ್ ಹತ್ಯಾಕಾಂಡವನ್ನು ಸಂಘ ಯಾಕೆ ಖಂಡಿಸಲಿಲ್ಲ? ಒಡಿಶಾದಲ್ಲಿ 1989ರಲ್ಲಿ ನಡೆದ ಕ್ರೈಸ್ತ ಧರ್ಮ ಪ್ರಚಾರಕ ಗ್ರಹಾಂ ಸ್ಟೈನ್ ಅವರು ಮತ್ತು ಅವರ ಮೂವರು ಪುಟ್ಟ ಮಕ್ಕಳನ್ನು ಸಂಘದ ಬೆಂಬಲಿಗ ದಾರಾಸಿಂಗ್ ಜೀವಂತ ಸುಟ್ಟು ಹಾಕಿದಾಗ ಸಂಘದ ನಾಯಕರು ಯಾಕೆ ಆಕ್ಷೇಪಿಸಲಿಲ್ಲ? ಈ ಪ್ರಕರಣದ ಪಾತಕಿ ಜೈಲಿನಿಂದ ಹೊರಗೆ ಬಂದಾಗ ಸಂಘ ಪರಿವಾರದ ಸಂಘಟನೆಗಳೇ ಹಾರ ಹಾಕಿ ಸನ್ಮಾನಿಸಲಿಲ್ಲವೇ? ಅದನ್ನು ಸಂಘ ಯಾಕೆ ಖಂಡಿಸಲಿಲ್ಲ?
ಸಂಘ ಪರಿವಾರಕ್ಕೆ ಸೇರಿದ ನೂರಾರು ಸಂಘಟನೆಗಳಿವೆ. ಅನೇಕ ಕಡೆ ಕೋಮು ಗಲಭೆಗೆ, ಹಿಂಸಾಚಾರಕ್ಕೆ, ಹತ್ಯೆಗಳಿಗೆ ಸದರಿ ಸಂಘಟನೆಗಳು ನೇರವಾಗಿ ಇಲ್ಲವೇ ಪರೋಕ್ಷವಾಗಿ ಶಾಮೀಲಾಗಿರುವುದು ಕೆಲವು ವಿಚಾರಣಾ ಆಯೋಗದ ವರದಿಗಳಿಂದ ಸಾಬೀತಾಗಿದೆ. ‘ನೀವು ಅದಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳಿದರೂ ನಂಬಲು ಆಗುವುದಿಲ್ಲ. ನೀವೊಂದು ಹೇಳುವುದು ಹಾಗೂ ನಿಮ್ಮ ವಿಭಿನ್ನ ಸಂಘಟನೆಗಳು ಮತ್ತೊಂದು ಮಾಡುವುದು. ಇವೆಲ್ಲ ಜನರನ್ನು, ಮಾಧ್ಯಮಗಳನ್ನು, ಆಡಳಿತ ವ್ಯವಸ್ಥೆಯನ್ನು ದಾರಿ ತಪ್ಪಿಸುವ ಹುನ್ನಾರ’ವೆಂದು ಅನೇಕರು ಹೇಳುತ್ತಾರೆ.
ಭಾಗವತರೇ ಅಂತರ್ರಾಷ್ಟ್ರೀಯ ವೇದಿಕೆಗಳಲ್ಲಿ ಸಭಿಕರ ಮೆಚ್ಚುಗೆ ಗಳಿಸಲು ಮತ್ತು ಅಲ್ಲಿನ ಅನಿವಾಸಿ ಭಾರತೀಯ ಉದ್ಯಮಿಗಳಿಂದ ಗುರುದಕ್ಷಿಣೆಯಾಗಿ ಬರುವ ಕೋಟ್ಯಂತರ ಡಾಲರ್ ಹಣಕ್ಕೆ ತೊಂದರೆಯಾಗಬಾರದೆಂದು ಭಾಗವತ್ ಉದಾರವಾದಿಗಳಂತೆ ಮಾತಾಡುತ್ತಾರೆ. ಆದರೆ ಅದು ಹೃದಯದ ಅಂತರಾಳದಿಂದ ಬಂದ ಮಾತೆಂದು ಯಾರೂ ನಂಬುವುದಿಲ್ಲ, ಅವರೂ ನಂಬುವುದಿಲ್ಲ.
ಅಮೆರಿಕ ಹಾಗೂ ಇಂಗ್ಲೆಂಡ್ಗಳಲ್ಲಿ ಭಾಗವತರು ಮಾಡಿದ ಭಾಷಣಕ್ಕೆ ಬದ್ಧರಾಗಿದ್ದರೆ, ಗುಡಿ, ಮಸೀದಿ, ಚರ್ಚುಗಳ ರಾಜಕಾರಣವನ್ನು ತಕ್ಷಣದಿಂದ ಕೈ ಬಿಡಬೇಕು. ಇವತ್ತಿಗೂ ಆರೆಸ್ಸೆಸ್ ಮತ್ತು ಅದರ ಪರಿವಾರದ ಸಂಘಟನೆಗಳಿಗೆ ಈಗಲೂ ಸೈದ್ಧಾಂತಿಕವಾಗಿ ಮಾರ್ಗದರ್ಶಿಯಾಗಿದ್ದು ಸಾವರ್ಕರ್ ಅವರ ‘ಹಿಂದುತ್ವ’ ಪುಸ್ತಕ ಮತ್ತು ಅದಕ್ಕಿಂತ ಹೆಚ್ಚಾಗಿ ಸಂಘದ ಎರಡನೇ ಸರ ಸಂಘಚಾಲಕ ಮಾಧವರಾವ್ ಸದಾಶಿವರಾವ್ ಗೋಳ್ವಾಲ್ಕರ್ ಅವರ ‘ಬಂಚ್ ಆಪ್ ಥಾಟ್ಸ್’ ಪುಸ್ತಕ. ಗೋಳ್ವಾಲ್ಕರ್ ಅವರು ಪುಸ್ತಕದಲ್ಲಿ ಮಾತ್ರವಲ್ಲ ಹಲವಾರು ಸಭೆಗಳಲ್ಲಿ ‘ಮುಸಲ್ಮಾನರು, ಕ್ರೈಸ್ತರು ಮತ್ತು ಕಮ್ಯುನಿಸ್ಟರು ಪ್ರಧಾನ ಶತ್ರುಗಳು’ ಎಂದು ಹೇಳಿದ್ದಾರೆ. ಅದನ್ನು ಸಂಘ ಪರಿವಾರ ಈಗಾಗಲೇ ಒಪ್ಪಿ ಅದೇ ದಾರಿಯಲ್ಲಿ ಸಾಗಿದೆ. ಆದರೆ ಭಾಗವತರು ಅಮೆರಿಕದ ಭಾಷಣದಲ್ಲಿ ಮುಸ್ಲಿಮರನ್ನು ದ್ವೇಷಿಸುವವರು ಹಿಂದೂಗಳಲ್ಲ ಎಂದು ಹೇಳಿದ್ದಾರೆ. ಅಂದರೆ ಮುಸ್ಲಿಮರು ಹಾಗೂ ಕ್ರೈಸ್ತರು ಮತ್ತು ಕಮ್ಯುನಿಸ್ಟರು ಶತ್ರುಗಳು ಎಂದು ಗೋಳ್ವಾಲ್ಕರ್ ಹೇಳಿದ ಮಾತನ್ನು ನೀವು ವಿರೋಧಿಸುವಿರಾ? ಅಥವಾ ನಿಮ್ಮ ಪ್ರಕಾರ ಗೋಳ್ವಾಲ್ಕರ್ ನಿಜವಾದ ಹಿಂದೂ ಅಲ್ಲವೇ? ಅಮೆರಿಕದ ಭಾಷಣಕ್ಕೆ ಭಾಗವತರು ಬದ್ಧರಾಗಿದ್ದರೆ ಗೋಳ್ವಾಲ್ಕರ್ ಮತ್ತು ಸಾವರ್ಕರ್ ಸಿದ್ಧಾಂತಗಳನ್ನು ಸಾರಾ ಸಗಟಾಗಿ ತಿರಸ್ಕರಿಸಬೇಕು. ತಿರಸ್ಕರಿಸುವುದಾದರೆ ಬಹಿರಂಗವಾಗಿ ಹೇಳಬೇಕು. ಅದನ್ನು ಬಿಟ್ಟು ಬೂಟಾಟಿಕೆಯ ಮಾತುಗಳನ್ನು ಆಡುವುದು ಸರಿಯಲ್ಲ. ಇದು ಮಾಹಿತಿ ತಂತ್ರಜ್ಞಾನದ ಯುಗ. ಎಲ್ಲೋ, ಏನೋ ಹೇಳಿ ಜಾರಿಕೊಳ್ಳಲು ಆಗುವುದಿಲ್ಲ. ಕೊನೆಯದಾಗಿ ಈಗ ದೇಶವ್ಯಾಪಿ ನಡೆಯುತ್ತಿರುವ ಗಣೇಶೋತ್ಸವವನ್ನು ಸಂಘಪರಿವಾರ ತನ್ನ ಪ್ರಚೋದನಕಾರಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ಎಲ್ಲರೂ ತಿಳಿದ ಸಂಗತಿ. ಆದರೂ ಕರ್ನಾಟಕದ ಅನೇಕ ಕಡೆ ಹಿಂದೂ ಮುಸ್ಲಿಮರು ಜೊತೆಗೆ ಸೇರಿ ಗಣೇಶ ಚೌತಿಯನ್ನು ಆಚರಿಸುತ್ತಾರೆ. ಸಂಘಕ್ಕೆ ಯಾವುದೇ ಹಬ್ಬದ ಆಚರಣೆ ಮುಖ್ಯವಲ್ಲ. ಅದನ್ನು ಅಲ್ಪಸಂಖ್ಯಾತರ ವಿರೋಧಿ ಅಜೆಂಡಾಕ್ಕೆ ದುರ್ಬಳಕೆ ಮಾಡಿಕೊಳ್ಳುವುದು ಅದರ ಚಾಳಿ. ಇಂಥ ಹಲವಾರು ಲೋಪ ದೋಷಗಳನ್ನು ತಿದ್ದಿಕೊಳ್ಳುವ, ಸರಿಪಡಿಸುವ ಪ್ರಾಮಾಣಿಕತೆ ಮತ್ತು ಬದ್ಧತೆ ಭಾಗವತರಿಗೆ ಇದ್ದರೆ ಅವರ ಮಾತಿಗೆ ಒಂದು ಅರ್ಥ ಬರುತ್ತದೆ.






