ದಕ್ಷಿಣ ಭಾರತ ಗೆಲ್ಲಲು ಹೊಸ ಕಸರತ್ತುಗಳು

ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರನ್ನು ರಾಜೀನಾಮೆ ಕೊಡಿಸಿ ಅವರ ಹೆಗಲಿಗೆ ತಮಿಳುನಾಡಿನಲ್ಲಿ ಬಿಜೆಪಿ ಸಂಘಟನೆಯ ಹೊಣೆ ಹೊರಿಸಲಾಯಿತು. ಆದರೂ ತಮಿಳು ಜನರು ಬಿಜೆಪಿಯನ್ನು ನಂಬಲಿಲ್ಲ. ಇದರಿಂದ ಹತಾಶರಾದ ಅಣ್ಣಾಮಲೈ ಬರಿ ಮೈಗೆ ಬಾರುಕೋಲಿನಿಂದ ಹೊಡೆದು ಬಾಸುಂಡೆ ಮೂಡಿಸಿಕೊಂಡಿದ್ದನ್ನು ಬಿಟ್ಟರೆ ಬೇರಾವ ಸಾಧನೆಯೂ ಆಗಲಿಲ್ಲ.
ನಾನಾ ಅಡ್ಡದಾರಿಗಳ ಮೂಲಕ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ತನ್ನ ನೆಲೆಯನ್ನು ಬಿಜೆಪಿ ವಿಸ್ತರಿಸಿಕೊಂಡಿದೆ. ಒಂದು ಕಾಲದಲ್ಲಿ ಅಸಾಧ್ಯ ಎನಿಸಿದ ಈಶಾನ್ಯ ಭಾರತದ ರಾಜ್ಯಗಳಲ್ಲೂ ಕಾಲೂರುತ್ತಿದೆ. ಇನ್ನು ಉಳಿದುದು ದಕ್ಷಿಣ ಭಾರತ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್‌ಶಾ ಮತ್ತು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಮಾಡಬಾರದ ಕಸರತ್ತುಗಳನ್ನು ಮಾಡುತ್ತಿದ್ದರೂ ಇಲ್ಲಿ ಅವರ ಬೇಳೆ ಬೇಯುತ್ತಿಲ್ಲ.
ದಕ್ಷಿಣ ಭಾರತದಲ್ಲಿ ರಾಜ್ಯಗಳಲ್ಲಿ ಬೇರು ಬಿಡಲು ಆರೆಸ್ಸೆಸ್ ಪ್ರಯತ್ನ ಮಾಡುತ್ತಲೇ ಇದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಒಂದಿಷ್ಟು ಬಲವನ್ನು ಹೆಚ್ಚಿಸಿಕೊಂಡಿದೆ. ಆದರೆ ಅಲ್ಲಿ ಈಗಲೂ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಪ್ರಭಾವ ಕಡಿಮೆಯಾಗಿಲ್ಲ. ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಜೊತೆಗಿನ ಮೈತ್ರಿ ಚುನಾವಣಾ ರಾಜಕೀಯದಲ್ಲಿ ಬಿಜೆಪಿಗೆ ಅನುಕೂಲಕರವಾಗಿದೆ. ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷದ ನಾಯಕತ್ವದ ಎಡರಂಗ ಮತ್ತು ಕಾಂಗ್ರೆಸ್ ನೇತೃತ್ವ ಸಂಯುಕ್ತ ಪ್ರಜಾತಂತ್ರ ರಂಗ ( ಯುಡಿಎಫ್) ನಡುವಿನ ಸೆಣಸಾಟವಿದೆ. ಆದರೆ ಈ ಸಲ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅವಿರತ ಪ್ರಯತ್ನ ಮಾಡಿ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ.ಆದರೆ ತಮಿಳುನಾಡಿನಲ್ಲಿ ಏನೇ ಕಸರತ್ತು ಮಾಡಿದರೂ ನೆಲೆಯೂರಲು ಅದಕ್ಕೆ ಸಾಧ್ಯವಾಗಿಲ್ಲ.
ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ದ್ರಾವಿಡ ಸಿದ್ಧಾಂತದ ಕೋಟೆಯನ್ನು ಭೆೇದಿಸಲು ಸಂಘ ಪರಿವಾರ ಯತ್ನಿಸುತ್ತಲೇ ಇದೆ. ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನಲ್ಲಿ ಅತ್ಯಂತ ಹೆಚ್ಚು ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತಾಡಿದರು.ಗೃಹ ಸಚಿವ ಅಮಿತ್‌ಶಾ ಹಲವಾರು ಕಸರತ್ತುಗಳನ್ನು ಮಾಡಿದರು. ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರನ್ನು ರಾಜೀನಾಮೆ ಕೊಡಿಸಿ ಅವರ ಹೆಗಲಿಗೆ ತಮಿಳುನಾಡಿನಲ್ಲಿ ಬಿಜೆಪಿ ಸಂಘಟನೆಯ ಹೊಣೆ ಹೊರಿಸಲಾಯಿತು. ಆದರೂ ತಮಿಳು ಜನರು ಬಿಜೆಪಿಯನ್ನು ನಂಬಲಿಲ್ಲ. ಇದರಿಂದ ಹತಾಶರಾದ ಅಣ್ಣಾಮಲೈ ಬರಿ ಮೈಗೆ ಬಾರುಕೋಲಿನಿಂದ ಹೊಡೆದು ಬಾಸುಂಡೆ ಮೂಡಿಸಿಕೊಂಡಿದ್ದನ್ನು ಬಿಟ್ಟರೆ ಬೇರಾವ ಸಾಧನೆಯೂ ಆಗಲಿಲ್ಲ. ಸಂಘ ಪರಿವಾರ ಹಾಗೂ ಬಿಜೆಪಿ ಹೆಸರು ಹೇಳಿಕೊಂಡು ಹೋದರೆ ತಮಿಳುನಾಡಿನ ಜನರು ನಂಬುವುದಿಲ್ಲ ಎಂದು ಅರಿತು ಕೊಂಡ ನಾಗಪುರದ ಗುರುಗಳು ಅಣ್ಣಾ ಮಲೈನಿಂದ ಬಿಜೆಪಿಗೆ ರಾಜೀನಾಮೆ ಕೊಡಿಸುವ ನಾಟಕ ಮಾಡಿಸಿ ಹೊಸ ಪ್ರಾದೇಶಿಕ ಪಕ್ಷವೊಂದನ್ನು ಹುಟ್ಟು ಹಾಕಲಿದ್ದಾರೆ. ಇದು ಅತ್ಯಂತ ದೂರದೃಷ್ಟಿಯ ವ್ಯವಸ್ಥಿತ ಯೋಜನೆಯಾಗಿದೆ. ಬಿಜೆಪಿಗೆ ರಾಜೀನಾಮೆ ಕೊಟ್ಟ ಅಣ್ಣಾಮಲೈ ಮೋದಿ ಮತ್ತು ಅಮಿತ್‌ಶಾರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದು ಹೊಸ ಪ್ರಾದೇಶಿಕ ಪಕ್ಷವನ್ನು ಕಟ್ಟಲು ಹೊರಟಿದ್ದಾರೆ. ಈ ಪ್ರಾದೇಶಿಕ ಪಕ್ಷದ ಮೂಲಕ ತಮಿಳರನ್ನು ಗೆಲ್ಲಲು ಸಂಘ ಪರಿವಾರ ಲೆಕ್ಕಾಚಾರ ಹಾಕಿದೆ.
ಇನ್ನು ಉಳಿದಿರುವುದು ಕರ್ನಾಟಕ . ಇಲ್ಲಿ ಮನುವಾದಿ, ಕೋಮುವಾದಿ ಸಂಘಟನೆ ಮತ್ತು ಸಿದ್ಧಾಂತಗಳಿಗೆ ಬಹುದೊಡ್ಡ ಅಡ್ಡಿಯಾಗಿರುವುದು ಬಸವಣ್ಣ. ‘ಇವನಾರವ,ಇವನಾರವ’ ಇವ ನಮ್ಮವ ’ ಎಂಬ ಸಂದೇಶವನ್ನು ಹನ್ನೆರಡನೆಯ ಶತಮಾನದಲ್ಲೇ ನೀಡಿದ ಬಸವಣ್ಣ ಮತ್ತು ವಚನ ಚಳವಳಿಯನ್ನು ಎದುರಿಸುವುದು ಸುಲಭವಲ್ಲ. ಇಲ್ಲಿ ಬಿಜೆಪಿ ಬಹುಮತ ಪಡೆದು ಎಂದೂ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದಂಥ ಕುತಂತ್ರದಿಂದ ಅದು ಒಂದೆರಡು ಸಲ ಸರಕಾರ ರಚಿಸಿದರೂ ಸಂಪೂರ್ಣ ಗೆಲುವು ಸಾಧಿಸಲು ಆಗಲೇ ಇಲ್ಲ.
ಹನ್ನೆರಡನೇ ಶತಮಾನದ ವಚನ ಸಾಹಿತ್ಯ ಮನುವಾದಿಗಳ ಮಸಲತ್ತುಗಳ ಮೇಲೆ ಬೆಳಕು ಚೆಲ್ಲಿತು. ಇದರಿಂದ ಬೆದರಿದ ಮನುವಾದಿಗಳು ಕೆಲವು ವಚನಗಳನ್ನು ತಮ್ಮ ಮೂಗಿನ ನೇರಕ್ಕೆ ತಿರುಚಿ ವಿರೂಪಗೊಳಿಸಿ ‘ವಚನ ದರ್ಶನ’ ಎಂಬ ಪುಸ್ತಕವನ್ನು ಪ್ರಕಟಿಸಿದರು. ಕರ್ನಾಟಕದ ಪ್ರತೀ ಜಿಲ್ಲೆಯಲ್ಲಿ ಅದ್ದೂರಿ ಕಾರ್ಯಕ್ರಮಗಳನ್ನು ಮಾಡಿ ಈ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಹುನ್ನಾರದ ವಿರುದ್ಧ ಬಸವಪರ ಸಂಘಟನೆಗಳು ಒಂದುಗೂಡಿ ತೀವ್ರ ಪ್ರತಿಭಟನೆಯನ್ನು ನಡೆಸಿದವು. ವಚನ ದರ್ಶನ ಪುಸ್ತಕ ಬಿಡುಗಡೆಯ ಮೂಲಕ ಲಿಂಗಾಯತರ ಓಟ್ ಬ್ಯಾಂಕ್ ಗೆಲ್ಲಲು ಅಸಾಧ್ಯವಾದಾಗ ಈಗ ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ಗಳನ್ನು ನಡೆಸುತ್ತಿದ್ದಾರೆ. ಬಸವಣ್ಣನವರಿಗೂ ಇವರ ಪರಿಕಲ್ಪನೆಯ ಹಿಂದೂ ಧರ್ಮಕ್ಕೂ ಏನು ಸಂಬಂಧ ಎಂಬ ಪ್ರಶ್ನೆಗಳಿಗೆ ಇವರ ಬಳಿ ಉತ್ತರವಿಲ್ಲ.ಹನ್ನೆರಡನೇ ಶತಮಾನದಲ್ಲಿ ‘ಹಿಂದೂ’ ಎಂಬ ಪದವೇ ಬಳಕೆಯಲ್ಲಿ ಇರಲಿಲ್ಲ. ಇದು ಇತ್ತೀಚಿನ ಐದಾರು ನೂರು ವರ್ಷಗಳಲ್ಲಿ ಬಳಕೆಗೆ ಬಂದ ಪದ.
ಗದಗದಲ್ಲಿ ಇತ್ತಿಚೆಗೆ ನಡೆದ ಈ ಸಮ್ಮೇಳನದಲ್ಲಿ ಆರೆಸ್ಸೆಸ್ ಜೊತೆಗೆ ಗುರುತಿಸಿಕೊಂಡ ಕೊಲ್ಲಾಪುರ ಸಮೀಪದ ಕನೇರಿ (ಸಿದ್ಧಗಿರಿ) ಮಠದ ಕಾಡಸಿದ್ದೇಶ್ವರ ಸ್ವಾಮಿ ಕಮ್ಯುನಿಸ್ಟರ ವಿರುದ್ಧ ಕೆಂಡ ಕಾರಿದರು.ಇದರಿಂದ ಇವರು ಯಾರೆಂಬುದು ತನ್ನಿಂದ ತಾನೇ ಬಯಲಿಗೆ ಬಂತು. ಇವರ ಸಮಾವೇಶಕ್ಕೆ ಉತ್ತರ ಕರ್ನಾಟಕ ಲಿಂಗಾಯತ ಹಾಗೂ ಪ್ರಗತಿಪರ ಸಂಘಟನೆಗಳಿಂದ ತೀವ್ರ ಪ್ರತಿರೋಧ ಬರುತ್ತಿದೆ.
ಒಂದೆಡೆ ಲಿಂಗಾಯತರನ್ನು ತಮ್ಮ ಮನುವಾದದ ಬುಟ್ಟಿಗೆ ಹಾಕಿಕೊಳ್ಳಲು ಹುನ್ನಾರ ನಡೆಸಿದ ಇವರು ಇನ್ನೊಂದೆಡೆ ಅಹಿಂದ ಸಂಘಟನೆಯನ್ನು ಒಡೆದು ಇಭ್ಬಾಗ ಮಾಡಲು ಯತ್ನಿಸುತ್ತಿದ್ದಾರೆ. ಆರೆಸ್ಸೆಸ್ ಪರಿಕಲ್ಪನೆಯ ಮನುವಾದಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಅಡ್ಡಿ ಯಾಗಿರುವ ಎಲ್ಲ ಜೀವಪರ, ಜನಪರ ಸಂಘಟನೆಗಳನ್ನು ವಿಭಜಿಸಲು ಇವರ ಯತ್ನ ಯಶಸ್ವಿಯಾಗಿಲ್ಲ.
ಹಿಂದುಳಿದ ಸಮುದಾಯಗಳಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರ ನಂತರ ಬಹುದೊಡ್ಡ ಸಮುದಾಯವಾದ ಹಾಲುಮತ (ಕುರುಬರು)ದ ಅನುಯಾಯಿಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಯತ್ನವೂ ವಿಫಲಗೊಂಡ ನಂತರ ಇವರು ಹತಾಶರಾಗಿದ್ದಾರೆ.
ತಮ್ಮ ವಾಟ್ಸ್‌ಆ್ಯಪ್ ಯೂನಿವರ್ಸಿಟಿಗಳ ಮೂಲಕ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಹಿರಿಯ ಸಚಿವ ಸತೀಶ ಜಾರಕಿಹೊಳಿ ಅವರ ನಡುವೆ ವೈಮನಸ್ಸು ಉಂಟು ಮಾಡುವ ತಳ ಬುಡವಿಲ್ಲದ ಕಟ್ಟುಕಥೆಗಳನ್ನು ಹರಡಿದರು.ಇದು ಉಭಯ ನಾಯಕರ ಸಂಬಂಧದಲ್ಲಿ ಯಾವುದೇ ಒಡಕನ್ನು ಉಂಟು ಮಾಡಲು ಸಾಧ್ಯವಾಗಲಿಲ್ಲ.
ಹೀಗಾಗಿ ಹತಾಶರಾದ ಭಕ್ತರು ಮತ್ತಷ್ಟು ಉದ್ರೇಕಕಾರಿ ಪೊಸ್ಟ್‌ಗಳನ್ನು ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಅವರ ನಡುವೆ ಕಿಡಿ ಹೊತ್ತಿಸಿ ಎರಡು ದೊಡ್ಡ ಹಿಂದುಳಿದ ಸಮುದಾಯಗಳಾದ ಕುರುಬ ಮತ್ತು ನಾಯಕ ಸಮುದಾಯಗಳ ನಡುವೆ ವೈಷಮ್ಯ ಮೂಡಿಸಲು ಯತ್ನಿಸುತ್ತಿದ್ದಾರೆ. ಚಿತ್ರದುರ್ಗದ ಮದಕರಿ ನಾಯಕನ ಇತಿಹಾಸ ಕೆದಕಿ ಈಗಾಗಲೇ ಅಲ್ಲಿ ಮುಸ್ಲಿಮ್ ದ್ವೇಷದ ವಿಷಬೀಜ ಬಿತ್ತಿದ್ದಾರೆ.
ದೇಶದಲ್ಲಿ ಮಂಡಲ ವರದಿ ಬಂದಾಗ ಅದರ ವಿರುದ್ಧ ಮಂದಿರ ವಿವಾದ ಕೆರಳಿಸಿ ಸಾಕಷ್ಟು ಅನಾಹುತವನ್ನು ಮಾಡಿದ ಸಂಘ ಪರಿವಾರ ಸಾಮಾಜಿಕ ನ್ಯಾಯದ ಎದುರಾಗಿ ನಾಗಪುರ ಗುರುಗಳ ಆದೇಶದಂತೆ ‘ಸೋಶಿಯಲ್ ಇಂಜಿನಿಯರಿಂಗ್ ’ಅಸ್ತ್ರವನ್ನು ಪ್ರಯೋಗಿಸಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಕಡೆಗಣಿಸಿದ್ದ ಸಣ್ಣಪುಟ್ಟ ಹಿಂದುಳಿದ ಸಮುದಾಯಗಳನ್ನು ಬುಟ್ಟಿಗೆ ಹಾಕಿಕೊಂಡು ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದೆ.
ಈ ಎಲ್ಲ ಬದಲಾದ ಅಂಶಗಳನ್ನು ಗಮನಿಸಿ ಮನುವಾದಿ ಮತ್ತು ಕೋಮುವಾದಿ ಶಕ್ತಿಗಳ ಕುತಂತ್ರವನ್ನು ವಿಫಲಗೊಳಿಸಲು ಸಮಾನ ಮನಸ್ಕ,ಪಕ್ಷಗಳು,ಮತ್ತು ಸಂಘಟನೆಗಳು ತಮ್ಮ್ಮೊಳಗಿನ ಭಿನ್ನಾಭಿಪ್ರಾಯ ಬದಿಗೊತ್ತಿ ಪ್ರತಿ ತಂತ್ರವನ್ನು ರೂಪಿಸುವುದು ಇಂದಿನ ಚಾರಿತ್ರಿಕ ಅಗತ್ಯ ಮತ್ತು ಅನಿವಾರ್ಯತೆಯಾಗಿದೆ.






