ಕೊಪ್ಪಳದ ಪರಿಸರ ಹೋರಾಟಕ್ಕೆ ಒಂದು ವರ್ಷ

ಭಯಾನಕ ಕಾಯಿಲೆಗಳ ನೆರಳಲ್ಲಿ ಇರುವ ಹಳ್ಳಿಗಳಲ್ಲಿ ಒಂದು ವಿಧದ ಭಯಾನಕ ಸ್ಥಿತಿ ನಿರ್ಮಾಣವಾಗಿದೆ. ಎಂಥ ವಾತಾವರಣ ಉಂಟಾಗಿದೆ ಅಂದರೆ ಈ ಊರುಗಳಲ್ಲಿನ ತರುಣರಿಗೆ ಹೆಣ್ಣು ಕೊಡಲು ಸುತ್ತಮುತ್ತಲಿನ ತಾಲೂಕುಗಳ ಜನರು ನಿರಾಕರಿಸುತ್ತಿದ್ದಾರೆ. ಆದರೆ ಇಲ್ಲಿನ ಜನ ಹೋರಾಟಕ್ಕಿಳಿದು ಇಷ್ಟು ತಿಂಗಳಾದರೂ ಸ್ಥಳೀಯ ಶಾಸಕರು, ಮತ್ತು ಸಂಸದರು ತಮಗೇನೂ ಗೊತ್ತಿಲ್ಲವೆಂಬಂತೆ ಓಡಾಡುತ್ತಿದ್ದಾರೆ.
ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ದೇಶದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿದರೆ ಮುಂದೇನು ಎಂಬ ಆತಂಕ ಸಹಜವಾಗಿ ಉಂಟಾಗುತ್ತದೆ.ನದಿಗಳನ್ನು ಕೊಂದು,ಮರಗಳನ್ನು ಕಡಿದು , ಗುಡ್ಡ-ಬೆಟ್ಟಗಳನ್ನು ನಾಶ ಮಾಡಿ ಕಾರ್ಪೊರೇಟ್ ಕಂಪೆನಿಗಳ ಕಾರ್ಖಾನೆಗಳು ಮೇಲೇಳುತ್ತಿವೆ.
ಹೀಗಾಗಿ ಕುಡಿಯುವ ನೀರು, ಉಸಿರಾಡುವ ಗಾಳಿ ಮಲಿನಗೊಂಡಿವೆ. ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತಿವೆ. ಇಂಥದರ ವಿರುದ್ಧ ಪ್ರತಿಭಟಿಸಬೇಕಾದ ಜನರನ್ನು ಜಾತಿ,ಮತ , ಕೋಮು ಕಲಹದ ಮುಳುಗಿಸಿ ಪರಸ್ಪರ ಹೊಡೆದಾಡುವ ಸ್ಥಿತಿಗೆ ತಂದು ನಿಲ್ಲಿಸಲಾಗಿದೆ.
ಸುತ್ತಲೂ ತಲೆ ಎತ್ತಿರುವ ಅಪಾಯಕಾರಿ ಕಾರ್ಖಾನೆಗಳ ವಿರುದ್ಧ ಕಲ್ಯಾಣ ಕರ್ನಾಟಕದ ಕೊಪ್ಪಳದಲ್ಲಿ ನಡೆಯುತ್ತಿರುವ ಸಮಾನ ಮನಸ್ಕರ ಸಾರ್ವಜನಿಕರ ಹೋರಾಟ ಅಕ್ಟೋಬರ್ 31ಕ್ಕೆ ಒಂದು ವರ್ಷ ತಲುಪಿತು. ಜೀವ ವಿರೋಧಿ ಬಲ್ಡೋಟಾ ಕಾರ್ಖಾನೆಯ ವಿಸ್ತರಣೆಯನ್ನು ವಿರೋಧಿಸಿ 2025 ಅಕ್ಟೋಬರ್ 31ರಂದು ಆರಂಭವಾದ ಹೋರಾಟ ನಿರಂತರವಾಗಿ ನಡೆಯುತ್ತಲೇ ಇದೆ. ತಮಗೆ ಶುದ್ಧ ಕುಡಿಯುವ ನೀರು ಮತ್ತು ಉಸಿರಾಡಲು ಗಾಳಿ ಸಿಗದಂತೆ ಮಾಡಿರುವ ಈ ಹೋರಾಟ ಇಡೀ ರಾಜ್ಯದ ಗಮನವನ್ನು ಸೆಳೆದಿದೆ. ಆದರೆ ಸರಕಾರ ಕಂಡೂ ಕಾಣದಂತೆ ವರ್ತಿಸುತ್ತಿದೆ. ಪರಿಸರ ರಕ್ಷಣೆಗಾಗಿ ಇಷ್ಟೊಂದು ಸುದೀರ್ಘ ಹೋರಾಟ ನಡೆದ ಉದಾಹರಣೆಗಳು ತುಂಬಾ ಕಡಿಮೆ. ಹೋರಾಟಕ್ಕೆ ವರ್ಷ ತುಂಬಿದ ದಿನ ಕೊಪ್ಪಳ ಮತ್ತು ಭಾಗ್ಯ ನಗರಗಳಲ್ಲಿ 48 ತಾಸುಗಳ ಬಂದ್ ಆಚರಿಸಲಾಯಿತು. ಕೊಪ್ಪಳದಿಂದ ಬಲ್ಡೋಟಾ ಕಾರ್ಖಾನೆ 2 ಕಿ.ಮೀ. ಅಂತರದಲ್ಲಿದೆ. ಅದರಿಂದ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗಿದೆ. ಇದು ಸಾಲದೆಂಬಂತೆ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ವಿಸ್ತರಣಾ ಕ್ರಮ ಕೈಗೊಂಡು ಬೃಹತ್ ಉದ್ದಿಮೆ ಸ್ಥಾಪಿಸಲು ಬಲ್ಡೋಟಾ ಮುಂದಾಗಿದೆ. ಈಗಾಗಲೇ ಶೇ. 40 ರಷ್ಟು ಕರಿ ಧೂಳಿನಿಂದ ಬಾಧಿತವಾದ ಕೊಪ್ಪಳ ಬರಲಿರುವ ದಿನಗಳಲ್ಲಿ ಇನ್ನಷ್ಟು ಮಾಲಿನ್ಯಕ್ಕೆ ಒಳಗಾಗಲಿದೆ.
ಬಲ್ಡೋಟಾ ವಿಸ್ತರಣೆಯ ಭಾಗವಾಗಿ ಬೂದಿಯನ್ನು ಹೊರ ಹೊಮ್ಮಿಸುವ 27 ಹೊಸ ಕೊಳವೆಗಳು ಬಂದು ಕೊಪ್ಪಳವನ್ನು ಇನ್ನಷ್ಟು ನಾಶ ಮಾಡಲಿವೆ. ಇದರಿಂದ ಜನಸಾಮಾನ್ಯರು ಆಘಾತಕ್ಕೊಳಗಾಗಿದ್ದಾರೆ.
ಬಲವಂತದ ಬಲ್ಡೋಟಾ ಕಾರ್ಖಾನೆ ಮತ್ತು ಇತರ ಉದ್ದಿಮೆಗಳಿಂದಾಗಿ ಕೊಪ್ಪಳ ಜಿಲ್ಲೆಯ ಗಿಣಿಗೇರಿ, ಅಲ್ಲಾ ನಗರ, ಬಸಾಪುರ, ಬೇವಿನ ಹಳ್ಳಿ, ಕಾಸನ ಕಂಡಿ ಮತ್ತು ಹಾಲವರ್ತಿಯಲ್ಲಿ ಅಸ್ತಮಾ, ಕ್ಯಾನ್ಸರ್, ಚರ್ಮರೋಗ, ಹೃದಯ ರೋಗ, ನೇತ್ರ ರೋಗ ಬರುವ ಅಪಾಯ ಎದುರಾಗಿದೆ. ಭಯಾನಕ ಕಾಯಿಲೆಗಳ ನೆರಳಲ್ಲಿ ಇರುವ ಹಳ್ಳಿಗಳಲ್ಲಿ ಒಂದು ವಿಧದ ಭಯಾನಕ ಸ್ಥಿತಿ ನಿರ್ಮಾಣವಾಗಿದೆ.
ಎಂಥ ವಾತಾವರಣ ಉಂಟಾಗಿದೆ ಅಂದರೆ ಈ ಊರುಗಳಲ್ಲಿನ ತರುಣರಿಗೆ ಕನ್ಯೆಯನ್ನು ಕೊಡಲು ಸುತ್ತಮುತ್ತಲಿನ ತಾಲೂಕುಗಳ ಜನರು ನಿರಾಕರಿಸುತ್ತಿದ್ದಾರೆ. ಆದರೆ ಇಲ್ಲಿನ ಜನ ಹೋರಾಟಕ್ಕಿಳಿದು ಇಷ್ಟು ತಿಂಗಳಾದರೂ ಸ್ಥಳೀಯ ಶಾಸಕರು, ಮತ್ತು ಸಂಸದರು ತಮಗೇನೂ ಗೊತ್ತಿಲ್ಲವೆಂಬಂತೆ ಓಡಾಡುತ್ತಿದ್ದಾರೆ. ತಮ್ಮ ಉಸಿರು ಉಳಿಸಿಕೊಳ್ಳಲು ಸಾವು ಬದುಕಿನ ಹೋರಾಟವನ್ನು ನಡೆಸಿರುವ ಕೊಪ್ಪಳದ ಜನರು ಬಲ್ಡೋಟಾ ಹಿಡಿತದಲ್ಲಿ ಇರುವ ಬಸಾಪುರ ಕೆರೆಯನ್ನು ಜನ, ಜಾನುವಾರಗಳಿಗೆ ಮುಕ್ತಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಕ್ಯಾನ್ಸರ್ ಬಾಧಿತ ಪ್ರದೇಶಗಳಲ್ಲಿನ ಜನಾರೋಗ್ಯ ಹಾಗೂ ಪರಿಸರ ಸಮೀಕ್ಷೆಯನ್ನು ಏಮ್ಸ್ ಹಾಗೂ ಇತರ ವಿಶ್ವಾಸಾರ್ಹ ಸಂಸ್ಥೆಗಳಿಂದ ನಡೆಸಬೇಕೆಂಬುದು ಜನರ ಆಗ್ರಹವಾಗಿದೆ. ಕೇಂದ್ರ ಪರಿಸರ ಇಲಾಖೆಯ ಶಿಫಾರಸಿನಂತೆ ಹಿರೇ ಬಗನಾಳ ಹಾಗೂ ಅಲ್ಲಾ ನಗರದ ಹತ್ತಿರದ ಸ್ಪಾಂಜ್ ಐರನ್ ಘಟಕಗಳನ್ನು ಸ್ಥಳಾಂತರ ಮಾಡಬೇಕು, ಬಾಧಿತ ಹಳ್ಳಿಗಳ ಪುನರುಜ್ಜೀವನಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಹಾಗೂ ಮಾರಕ ಕಾಯಿಲೆಗಳ ಚಿಕಿತ್ಸೆಗಾಗಿ ಸೂಪರ್ ಸ್ಪೇಶಾಲಿಟಿ ದವಾಖಾನೆಗಳಲ್ಲಿ ಉಚಿತ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕೆಂಬುದು ಇವರ ಇತರ ಬೇಡಿಕೆಯಾಗಿದೆ.
ಇನ್ನು ಮುಂದೆ ಸಮೀಕ್ಷೆ ಮಾಡದ ಹೊರತಾಗಿ ಯಾವುದೇ ಕಾರ್ಖಾನೆಯ ವಿಸ್ತರಣೆಗೆ ಅವಕಾಶ ನೀಡಬಾರದು ಮತ್ತು ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು, ಪರಿಸರ ಸಚಿವರು, ಉದ್ಯಮ ಸಚಿವರು ತಕ್ಷಣ ಕಾಯಿಲೆ ಪೀಡಿತ ಜನರು ತುಂಬಿರುವ ಹಳ್ಳಿಗಳಿಗೆ ಭೇಟಿ ನೀಡಿ ಜನಸಾಮಾನ್ಯರ ಅಹವಾಲುಗಳಿಗೆ ಸ್ಪಂದಿಸಬೇಕು ಎಂಬುದು ಜನರ ಆಗ್ರಹವಾಗಿದೆ.
ಇದು ಕೊಪ್ಪಳದ ಸಮಸ್ಯೆ ಮಾತ್ರವಲ್ಲ ದೇಶದ, ರಾಜ್ಯದ ಬಹುತೇಕ ಕಡೆ ಅಭಿವೃದ್ಧಿಯ ಹೆಸರಿನಲ್ಲಿ ವಿನಾಶಕಾರಿ ಚಟುವಟಿಕೆಗಳು ನಡೆಯುತ್ತಲೇ ಇವೆ. ನೂರಾರು ವರ್ಷಗಳಿಂದ ಬಾಯಾರಿಕೆ ಇಂಗಿಸಿದ ನದಿ, ಕೆರೆಗಳು ಮಾಯವಾಗುತ್ತಿವೆ. ಗಿಡ, ಮರಗಳು ಬಲಿಯಾಗುತ್ತಿವೆ. ಅಪಾಯಕಾರಿ ಕೈಗಾರಿಕೆಗಳು ಉಸಿರಾಡುವ ಗಾಳಿಯನ್ನೇ ಮಲಿನಗೊಳಿಸುತ್ತಿವೆ. ಇವೆಲ್ಲದರ ಒಟ್ಟಾರೆ ಪರಿಣಾಮವನ್ನು ಈಗಾಗಲೇ ಕೊಪ್ಪಳದ ಜನರು ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳು ಇನ್ನೂ ಭಯಾನಕವಾಗಿವೆ.
ಇಡೀ ಭೂಮಂಡಲವೇ ಅಪಾಯದಲ್ಲಿ ಇರುವಾಗ ಅದರ ಬಗ್ಗೆ ಕಿಂಚಿತ್ತೂ ಕಾಳಜಿ ಮತ್ತು ಅರಿವಿಲ್ಲದ, ಅತ್ತ ಹೊರಳಿಯೂ ನೋಡದ ಅವಿವೇಕಿಗಳು ನಿತ್ಯವೂ ಧರ್ಮ ರಕ್ಷಣೆಗೆ ಕರೆ ಕೊಡುತ್ತಾರೆ.ವಾಸ್ತವವಾಗಿ ಯಾವುದೇ ಧರ್ಮ ಅಪಾಯದಲ್ಲಿ ಇಲ್ಲ.ಅಪಾಯದಲ್ಲಿ ಇರುವುದು ಮನು ಕುಲ ಮತ್ತು ಸಾವಿರಾರು ಜೀವ ರಾಶಿಗಳಿಗೆ ಆಸರೆ ನೀಡಿರುವ ಈ ಭೂಮಿ. ಇನ್ನು ನೂರು ವರ್ಷಗಳಲ್ಲಿ ಮನುಷ್ಯರು ಸೇರಿದಂತೆ ಸಕಲ ಜೀವಿಗಳಿಗೆ ಈ ಭೂಮಿ ವಾಸಯೋಗ್ಯವಾಗಿ ಉಳಿಯುವುದಿಲ್ಲ ಎಂದು ವಿಜ್ಞಾನಿ ಸ್ಟೀಫನ್ ಹಾಕಿಂಗ್ ಹೇಳಿದ ಮಾತು ನಿಜವಾಗುವುದೇನೋ, ಆ ದಿನಗಳು ಸಮೀಪಿಸಿದವೇನೋಎಂಬ ಆತಂಕ ಉಂಟಾಗುತ್ತದೆ
ಈ ಭೂಮಿ ಮನುಷ್ಯನಿಗೆ ಮಾತ್ರವಲ್ಲ, ಸಕಲ ಜೀವ ಜಂತುಗಳಿಗೆ ಸೇರಿದ್ದು. ಪ್ರಾಣಿ, ಪಕ್ಷಿ, ಮೀನು, ಚಿಟ್ಟೆ, ಹುಲಿ, ಕರಡಿ, ಮೊಲ, ಬೆಕ್ಕು ಸೇರಿದಂತೆ ಅಸಂಖ್ಯ ಜೀವಿಗಳಿಗೆ ಭೂಮಿ ಆಸರೆಯನ್ನು ನೀಡಿದೆ. ಇವುಗಳಿಗೆ ಸ್ವಾರ್ಥವಿಲ್ಲ. ಅವುಗಳಿಂದ ಪರಿಸರಕ್ಕೆ ಹಾನಿಯಿಲ್ಲ. ಅವು ನಾಳೆಗೆಂದು ಸಂಗ್ರಹಿಸಿ ಇಡುವುದಿಲ್ಲ. ಅವುಗಳಲ್ಲಿ ಮೇಲು ಕೀಳು, ಜಾತಿ ಮತಗಳಿಲ್ಲ. ಸಹ ಜೀವಿಗಳ ಬಗ್ಗೆ ದ್ವೇಷವಿಲ್ಲ. ಪರಸ್ಪರ ಹಂಚಿಕೊಂಡು ಉಣ್ಣುತ್ತವೆ. ಕಾಗೆ ಒಂದು ಅಗಳು ಅನ್ನ ಸಿಕ್ಕರೆ ಅದನ್ನು ಹಂಚಿಕೊಂಡು ತಿನ್ನುತ್ತದೆ.ಕಾಗೆಯ ಈ ವಿಶಾಲತೆಯ ಬಗ್ಗೆ ಬಸವಣ್ಣನವರು ಒಂದು ವಚನವನ್ನು ಬರೆದಿದ್ದಾರೆ.ಆದರೆ ಮನುಷ್ಯ ಹಾಗಲ್ಲ. ಮನುಷ್ಯನಿಗೆ ತಕ್ಷಣದ ಹಸಿವೆ ಇಂಗಿದರೆ ಸಾಕೆನಿಸುವುದಿಲ್ಲ.
ಮುಂದಿನ ನಾಲ್ಕಾರು ಶತಮಾನಗಳ ಕಾಲ ತನ್ನ ಕುಟುಂಬದವರು ತಿಂದು ತೇಗುವಷ್ಟು ಸಂಪಾದಿಸುತ್ತಾನೆ.
ಸಕಲ ಜೀವಿಗಳಿಗೂ ಸೇರಿದ ಪ್ರಕೃತಿಯ ಸಂಪತ್ತನ್ನು ತಾನೊಬ್ಬನೇ ನುಂಗುತ್ತಾನೆ. ಕೊನೆಗೊಂದು ದಿನ ಉಸಿರು ನಿಂತು ಹೋಗುತ್ತದೆ.ಅವನು ಕೂಡಿಟ್ಟಿದ್ದು ಯಾರದೋ ಪಾಲಾಗುತ್ತದೆ. ಮನುಷ್ಯನ ಆಸೆಗೆ ಕಡಿವಾಣ ಹಾಕಲು ಧರ್ಮಗಳು ಹುಟ್ಟಿದ್ದು. ಅವೂ ದಾರಿತಪ್ಪುತ ಮನುಷ್ಯರಿಗೆ ಆಸೆ ಬುರುಕುತನಕ್ಕೆ ಕಡಿವಾಣ ಹಾಕುತ್ತಿಲ್ಲ.
ಅಭಿವೃದ್ಧಿಯ ಹೆಸರಿನ ಯೋಜನೆಗಳ ದುಷ್ಪರಿಣಾಮದಿಂದ ಹವಾಮಾನದಲ್ಲಿ ಏರು ಪೇರಾಗುತ್ತಿದೆ. ಭೂಮಿಯ ತಾಪಮಾನ ಏರಿಕೆ ಕಳವಳಕಾರಿಯಾಗಿದೆ.
ಜಲ ಮಾಲಿನ್ಯ, ವಾಯು ಮಾಲಿನ್ಯಗಳು ವ್ಯಾಪಕವಾಗಿದ್ದರೂ ಸರಕಾರವಾಗಲಿ, ನಾಗರಿಕ ಸಮಾಜವಾಗಲಿ, ಧರ್ಮ ಗುರುಗಳಾಗಲಿ, ಅತ್ತ ಗಮನವನ್ನು ಕೊಡುವುದಿಲ್ಲ.
ಕೋವಿಡ್ನಂಥ ಹೊಸ ಕಾಯಿಲೆಗಳು ,ವೈರಸ್ ಗಳು,ಹುಟ್ಟಿಕೊಳ್ಳುತ್ತಲೇ ಇವೆ. ಆದರೂ ಪರಿಸರ ರಕ್ಷಣೆ ಬಗ್ಗೆ ಯಾರಿಗೂ ಕಾಳಜಿ ಇಲ್ಲ.






