ಇತಿಹಾಸ ನಿರ್ಮಿಸಿದ ಸಿದ್ದರಾಮಯ್ಯ

ಕಳೆದ ಗುರುವಾರ ಪದತ್ಯಾಗ ಮಾಡಿದ ಸಿದ್ದರಾಮಯ್ಯನವರು ಕರ್ನಾಟಕ ಕಂಡ ಕೊನೆಯ ಸಮಾಜವಾದಿ ಮುಖ್ಯಮಂತ್ರಿ ಎಂದರೆ ಅತಿಶಯೋಕ್ತಿಯಲ್ಲ. ಅಷ್ಟೇ ಅಲ್ಲ ನಾಡಿನ ಅಪರೂಪದ ಜನ ನಾಯಕ (ಮಾಸ್ ಲೀಡರ್)ರಾಗಿದ್ದ ಸಿದ್ದರಾಮಯ್ಯನವರನ್ನು ಕರ್ನಾಟಕ ಎಂದೂ ಮರೆಯಲು ಸಾಧ್ಯವಿಲ್ಲ. ಜಾಗತೀಕರಣ ಹಾಗೂ ನವ ಉದಾರೀಕರಣದ ಇಂದಿನ ದಿನಗಳಲ್ಲಿ ಜನ ಚಳವಳಿಯಿಂದ ಬಂದವರು ನಾಯಕನಾಗುವುದು ಸುಲಭವಲ್ಲ. ಚಳವಳಿಗಳೇ ವಿರಳವಾಗಿರುವ ಇಂದಿನ ದಿನಗಳಲ್ಲಿ ಅದನ್ನು ನಿರೀಕ್ಷಿಸಲು ಆಗುವುದೂ ಇಲ್ಲ.
ರಾಜಕಾರಣದಲ್ಲಿ ಅಧಿಕಾರ ಬರುತ್ತದೆ, ಹೋಗುತ್ತದೆ, ಅದು ಮುಖ್ಯವಲ್ಲ. ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ವಿಭಿನ್ನ ಹಿನ್ನೆಲೆಯ ಹಲವರು ಈ ರಾಜ್ಯದ ಮುಖ್ಯಮಂತ್ರಿ ಯಾಗಿದ್ದಾರೆ. ಅವರಲ್ಲಿ ಕೆಲವರ ಹೆಸರುಗಳು ನೆನಪಿನಂಗಳದಲ್ಲಿ ಉಳಿದಿವೆ. ಕಳೆದ ವಾರ ಪದತ್ಯಾಗ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದೂ ಮರೆಯಲಾಗದಂಥ ಅಪರೂಪದ ಮಹಾನ್ ಮುತ್ಸದ್ದಿ.
ಒಟ್ಟು ಎಂಟು ವರ್ಷಗಳಷ್ಟು ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇದ್ದ ಸಿದ್ದರಾಮಯ್ಯನವರು ಹಲವಾರು ಜನಪರ ಕಾರ್ಯಕ್ರಮ ಗಳನ್ನು ನೀಡಿ ಜನ ಮಾನಸದಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದಿದ್ದಾರೆ. ಇಂಥವರು ಅತ್ಯಂತ ಘನತೆಯಿಂದ ಪದತ್ಯಾಗ ಮಾಡಿರುವ ರೀತಿ ಇಡೀ ದೇಶದ ಗಮನವನ್ನು ಸೆಳೆದಿದೆ. ನ್ಯಾಯವಾಗಿ ಅವರು ಇನ್ನೂ ಎರಡು ವರ್ಷಗಳ ಕಾಲ ಅಧಿಕಾರದಲ್ಲಿ ಇರಬಹುದಾಗಿತ್ತು.ಅವರಿಗೆ ಬಹುಮತದ ಶಾಸಕರ ಬೆಂಬಲವಿತ್ತು. ರಾಜ್ಯದ ಲಕ್ಷಾಂತರ ಜನರ ಒಲವು ಅವರ ಪರವಾಗಿತ್ತು.ಆದರೆ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ನಡೆದ ಗುಪ್ತ ಸಭೆಯಲ್ಲಿ ಕೊಟ್ಟ ಮಾತಿನಂತೆ ಹಿಂದೆ ಮುಂದೆ ನೋಡದೇ ರಾಜೀನಾಮೆ ನೀಡಿದರು. ಅವರು ಇಷ್ಟು ಸುಲಭಕ್ಕೆ ಬಿಟ್ಟು ಕೊಡುತ್ತಾರೆ ಎಂದು ಡಿಕೆಶಿ ಸೇರಿದಂತೆ ಯಾರೂ ನಿರೀಕ್ಷಿಸಿರಲಿಲ್ಲ. ಅವರು ಪದತ್ಯಾಗ ಮಾಡಿರುವುದು ಯಾವುದೋ ಜುಜುಬಿ ಸ್ಥಾನಕ್ಕಲ್ಲ, ಅದು ಪ್ರಜಾಪ್ರಭುತ್ವದಲ್ಲಿ ಅತ್ಯಂತ ಮಹತ್ವದ ಮುಖ್ಯಮಂತ್ರಿ ಸ್ಥಾನಕ್ಕೆ. ಶಾಸಕರ ಬೆಂಬಲದಿಂದ ಸಿಕ್ಕ ಅಧಿಕಾರವನ್ನು ನಿರಾಳ ಮನಸ್ಸಿನಿಂದ ಬಿಟ್ಟು ಕೊಡುವುದು ಸಾಮಾನ್ಯ ಸಂಗತಿಯಲ್ಲ. ಒಬ್ಬ ಗ್ರಾಮ ಪಂಚಾಯತ್ ಸದಸ್ಯ ಕೂಡ ಎಷ್ಟೇ ಒತ್ತಡ ಬಂದರೂ ತನ್ನ ಸ್ಥಾನವನ್ನು ಬಿಟ್ಟು ಕೊಡುವುದಿಲ್ಲ. ಯಾವುದೋ ನಗರ ಪಾಲಿಕೆಯ ಅಧ್ಯಕ್ಷ ಕೂಡ ಮಾಡಿಕೊಂಡ ಒಪ್ಪಂದದಂತೆ ವರ್ಷದ ನಂತರ ತನ್ನ ಕುರ್ಚಿಯನ್ನು ಇನ್ನೊಬ್ಬರಿಗೆ ಬಿಟ್ಟು ಕೊಟ್ಟ ಉದಾಹರಣೆಗಳು ವಿರಳ, ಅಂಥದರಲ್ಲಿ ಸಿದ್ದರಾಮಯ್ಯನವರು ಬಿಟ್ಟು ಕೊಟ್ಟಿರುವುದು ರಾಜ್ಯದ ಮುಖ್ಯಮಂತ್ರಿ ಮಹತ್ವದ ಉನ್ನತ ಸ್ಥಾನವನ್ನು.ಎರಡನೆಯದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತಗಳಿಸಿ ಅಧಿಕಾರಕ್ಕೆ ಬಂದ ದಿನದಿಂದಲೇ ಈ ಸರಕಾರದ ಪತನದ ಕನಸು ಕಾಣುತ್ತಿದ್ದ ಶಿಸ್ತಿನ ಪಕ್ಷ ಬಿಜೆಪಿ ಕಾಂಗ್ರೆಸ್‌ನಿಂದ ಕಲಿಯಬೇಕಾದುದು ಸಾಕಷ್ಟಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಿಜೆಪಿಯವರಂತೆ ಎಂದೂ ಬೀದಿಗೆ ಬಂದು ಕಿತ್ತಾಡಲಿಲ್ಲ. ಅವರ ನಡುವೆ ಬೆಂಕಿ ಹಚ್ಚಲು ಕೆಲವು ಮಾಧ್ಯಮಗಳು ಸೇರಿದಂತೆ ಹಲವರು ಎಷ್ಟೇ ಮಸಲತ್ತು ಮಾಡಿದರೂ ಅದೆಲ್ಲ ವಿಫಲವಾಗುತ್ತಲೇ ಬಂತು.ಸಿದ್ದರಾಮಯ್ಯನವರು ಮಾತ್ರವಲ್ಲ ಡಿ.ಕೆ.ಶಿವಕುಮಾರ್ ಸಹ ಅತ್ಯಂತ ಸಂಯಮದಿಂದ ನಡೆದುಕೊಂಡರು. ಪಕ್ಷದ ಶಿಸ್ತಿನ ಗೆರೆಯನ್ನು ದಾಟಲಿಲ್ಲ. ಆದರೆ ಆರೆಸ್ಸೆಸ್‌ನಂತಹ ‘ಶಿಸ್ತಿನ’ ಸಂಘಟನೆಯ ರಾಜಕೀಯ ವೇದಿಕೆಯಾದ ಬಿಜೆಪಿಯ ಒಳ ಜಗಳ ನಿತ್ಯವೂ ಬೀದಿಗೆ ಬರುತ್ತಲೇ ಇತ್ತು.ಕಾಂಗ್ರೆಸ್ ತನ್ನೊಳಗಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡ ರೀತಿಯನ್ನು ಎಲ್ಲರೂ ಮೆಚ್ಚುತ್ತಾರೆ.
ಸಂಪುಟ ವಿಸ್ತರಣೆಗಾಗಿ ಸಮಾಲೋಚನೆ ಮಾಡಲು ದಿಲ್ಲಿಗೆ ಹೋಗಿದ್ದ ಸಿದ್ದರಾಮಯ್ಯನವರಿಗೆ ರಾಹುಲ್ ಗಾಂಧಿಯವರು ಮಾಡಿಕೊಂಡ ಒಪ್ಪಂದದಂತೆ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟು ಕೊಡಲು ಸಲಹೆ ನೀಡಿದರು. ಈ ಸಲಹೆಗೆ ತಕ್ಷಣ ಒಪ್ಪಿಗೆ ನೀಡಿದ ಸಿದ್ದರಾಮಯ್ಯನವರು ಬೆಂಗಳೂರಿಗೆ ಬಂದು ಲೋಕ ಭವನಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಜೊತೆಗೆ ಕರೆದುಕೊಂಡು ಹೋಗಿ ರಾಜೀನಾಮೆ ನೀಡಿದರು. ರಾಜ್ಯಪಾಲರು ಊರಿಗೆ ಹೋಗಿದ್ದರು, ಅದನ್ನು ನೆಪ ಮಾಡಿಕೊಳ್ಳದೆ ರಾಜ್ಯಪಾಲರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಕೊಟ್ಟು ಬಂದರು. ನಂತರ ಸುದ್ದಿಗೋಷ್ಠಿಯನ್ನು ಕರೆದು ರಾಜೀನಾಮೆ ತೀರ್ಮಾನ ಪ್ರಕಟಿಸಿದರು ಮಾತ್ರವಲ್ಲ ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯ ಮಂತ್ರಿ ಎಂದು ಪ್ರಕಟಿಸಿಯೂ ಬಿಟ್ಟರು.ಅಧಿಕಾರ ಹಸ್ತಾಂತರ ಅತ್ಯಂತ ಸುಗಮವಾಗಿ ,
ನಿರಾತಂಕವಾಗಿ ನಡೆಯಿತು. ಇಷ್ಟು ಸುಲಭವಾಗಿ ಇದು ನಡೆಯುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆಗ ಭಾವುಕರಾದ ಶಿವಕುಮಾರ್ ಸಿದ್ದರಾಮಯ್ಯನವರ ಕಾಲಿಗೆ ಬಿದ್ದರು.
ಯಾವುದೇ ವಿಷಾದ ಇಲ್ಲವೇ ಹಿಂಜರಿಕೆ ಇಲ್ಲದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ನೀಡಿದ ರಾಜೀನಾಮೆ ಈಗಿನ ರಾಜಕಾರಣಿಗಳಿಗೆ ಮಾತ್ರವಲ್ಲ, ಈಗ ತಾನೆ ರಾಜಕೀಯ ಪ್ರವೇಶಿಸಿದ ಹೊಸ ಪೀಳಿಗೆಯ ವರಿಗೆ ಕೂಡ ಒಂದು ಒಳ್ಳೆಯ ಮಾದರಿಯಾಗಿದೆ. ಪಕ್ಷದ ಬಹುತೇಕ ಶಾಸಕರ ಬಲ ತನಗಿದೆ ಎಂದು ಗೊತ್ತಿದ್ದರೂ ,
ರಾಜೀನಾಮೆ ಬೇಡ ಎಂದು ಆತ್ಮೀಯರು ಒತ್ತಡ ಹೇರಿದ ನಂತರವೂ ನಿರ್ಲಿಪ್ತ ಮನಸ್ಸಿನಿಂದ ಮೈ ಮೇಲಿನ ಭಾರವನ್ನು ಇಳಿಸಿಕೊಂಡಂತೆ ಸಿದ್ದರಾಮಯ್ಯನವರು ಪದತ್ಯಾಗ ಮಾಡಿದರು.
ಕಳೆದ ಗುರುವಾರ ಪದತ್ಯಾಗ ಮಾಡಿದ ಸಿದ್ದರಾಮಯ್ಯನವರು ಕರ್ನಾಟಕ ಕಂಡ ಕೊನೆಯ ಸಮಾಜವಾದಿ ಮುಖ್ಯಮಂತ್ರಿ ಎಂದರೆ ಅತಿಶಯೋಕ್ತಿಯಲ್ಲ. ಅಷ್ಟೇ ಅಲ್ಲ ನಾಡಿನ ಅಪರೂಪದ ಜನ ನಾಯಕ (ಮಾಸ್ ಲೀಡರ್)ರಾಗಿದ್ದ ಸಿದ್ದರಾಮಯ್ಯನವರನ್ನು ಕರ್ನಾಟಕ ಎಂದೂ ಮರೆಯಲು ಸಾಧ್ಯವಿಲ್ಲ. ಜಾಗತೀಕರಣ ಹಾಗೂ ನವ ಉದಾರೀಕರಣದ ಇಂದಿನ ದಿನಗಳಲ್ಲಿ ಜನ ಚಳವಳಿಯಿಂದ ಬಂದವರು ನಾಯಕನಾಗುವುದು ಸುಲಭವಲ್ಲ. ಚಳವಳಿಗಳೇ ವಿರಳವಾಗಿರುವ ಇಂದಿನ ದಿನಗಳಲ್ಲಿ ಅದನ್ನು ನಿರೀಕ್ಷಿಸಲು ಆಗುವುದೂ ಇಲ್ಲ. ಸಿದ್ದರಾಮಯ್ಯನವರಂತೆ ಯಾವ ಕಾಂಗ್ರೆಸ್ ಮುಖ್ಯಮಂತ್ರಿಯೂ ಕೋಮುವಾದದ ವಿರುದ್ಧ ಮಾತಾಡಿರಲಿಲ್ಲ. ಜಾತಿ ಪದ್ಧತಿ, ಅಸಮಾನತೆ, ಮನುವಾದಗಳ ಬಗ್ಗೆ ಅವರ ನಿಲುವು ಸ್ಪಷ್ಟ ಮತ್ತು ರಾಜಿ ರಹಿತವಾಗಿತ್ತು. ನೇರವಾಗಿ ಸಂಘ ಪರಿವಾರದ ಹೆಸರನ್ನು ಹೇಳಿ ಸದನದ ಒಳಗೆ ಮತ್ತು ಹೊರಗೆ ಅವರು ಮಾತನಾಡುತ್ತಿದ್ದರು. ಬರೀ ಮಾತಲ್ಲ ಮಾತನ್ನು ಕೃತಿಗಿಳಿಸಲು ಪ್ರಯತ್ನಿಸುತ್ತಲೂ ಇದ್ದರು.ಸಮಾಜವಾದಿಯೊಬ್ಬ ಮುಖ್ಯಮಂತ್ರಿಯಾದ ಮಾತ್ರಕ್ಕೆ ಎಲ್ಲವನ್ನೂ ಒಮ್ಮೆಲೇ ಸಾಧಿಸಲು ಆಗುವುದಿಲ್ಲ. ಸರಕಾರದ ವಿವಿಧ ಇಲಾಖೆಗಳಲ್ಲಿ ಮತ್ತು ಅಧಿಕಾರಶಾಹಿಯಲ್ಲಿ ಆರೆಸ್ಸೆಸ್ ಪರ ಒಲವನ್ನು ಹೊಂದಿರುವವರು ಬಹುದೊಡ್ಡ ಪ್ರಮಾಣದಲ್ಲಿ ನುಸುಳಿರುವಾಗ ಕಾಂಗ್ರೆಸ್‌ನಂಥ ಪಕ್ಷದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಡಿದ ಮಾತನ್ನು ಅನುಷ್ಠಾನಕ್ಕೆ ತರುವುದೂ ಸುಲಭವೂ ಅಲ್ಲ.ಸಿದ್ದರಾಮಯ್ಯನವರಿಂದ ತುಂಬಾ ನಿರೀಕ್ಷೆ ಇಟ್ಟು ಕೊಂಡವರಿಗೆ ಸಹಜವಾಗಿ ನಿರಾಶೆಯಾಗುತ್ತದೆ.
ಅನೇಕ ಮುಖ್ಯಮಂತ್ರಿಗಳು ಬರುತ್ತಾರೆ, ಹೋಗುತ್ತಾರೆ ಆದರೆ ಸಿದ್ದರಾಮಯ್ಯ ಅವರಂಥವರು ತಮ್ಮದೇ ಹೊಸ ಇತಿಹಾಸವನ್ನು ಸೃಷ್ಟಿಸಿ ಜನಸಾಮಾನ್ಯರ ನೆನಪಿನಂಗಳದಲ್ಲಿ ಸದಾ ಕಾಲ ಉಳಿಯುತ್ತಾರೆ.ಅವರು ನಾಡಿಗೆ ನೀಡಿದ ಕೊಡುಗೆಯನ್ನು ಮರೆಯಲು ಹೇಗೆ ಸಾಧ್ಯ? ಹಸಿದವರ, ಅನ್ಯಾಯಕ್ಕೊಳಗಾದವರ ಬದುಕಿಗೆ ಬೆಳಕನ್ನು ನೀಡಿದವರಿಗೆ ಈ ನಾಡು ಸದಾ ಋಣಿಯಾಗಿರುತ್ತದೆ.ಹಿಂದಿನ ಯಾವ ಮುಖ್ಯಮಂತ್ರಿಗೂ ಇವರಿಗೆದುರಾದ ಸವಾಲುಗಳು ಎದುರಾಗಿರಲಿಲ್ಲ.ಕೋಮು ವಾದದ ವಿರುದ್ಧ ನಿರಂತರವಾಗಿ ಸೆಣಸುತ್ತಲೇ ಬಂದ ಸಿದ್ದರಾಮಯ್ಯನವರು ಸಂವಿಧಾನದ ಪರವಾಗಿ ಗಟ್ಟಿಯಾಗಿ ನಿಂತವರು. ಸಮಾನತೆಯ ಬಸವ ತತ್ವಗಳಿಗೆ ತೋರಿದ ಬದ್ಧತೆ, ಮುಂದೆ ಅಧಿಕಾರಕ್ಕೆ ಬರುವವರಿಗೆ
ಮಾದರಿಯಾಗಿದೆ. ಮುಖ್ಯಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡ ಎಂಟು ವರ್ಷಗಳ ಕಾಲಾವಧಿಯಲ್ಲಿ ಅನ್ನಭಾಗ್ಯ, ಆರೋಗ್ಯ, ಶಿಕ್ಷಣ ಭಾಗ್ಯ ದಂಥ ಜನಪರವಾದ ಯೋಜನೆಗಳನ್ನು ತಂದುದನ್ನು ಮರೆಯಲು ಸಾಧ್ಯವಿಲ್ಲ.
ಬದಲಾಗಿರುವ ಇಂದಿನ ಕಾಲಘಟ್ಟದಲ್ಲಿ ಜನಸಾಮಾನ್ಯರು ಅಧಿಕಾರ ರಾಜಕಾರಣಕ್ಕೆ ಬರುವುದು ಅಪರೂಪ. ಇದು ಕೋಟ್ಯಧೀಶರ ಕಾಲ.
ಆದರೆ ಯಾವುದೇ ಸಕ್ಕರೆ ಕಾರ್ಖಾನೆ, ರಿಯಲ್ ಎಸ್ಟೇಟ್, ಡೊನೇಶನ್, ಕ್ಯಾಪಿಟೇಶನ್ ಶಾಲೆ ಕಾಲೇಜುಗಳಿಲ್ಲದ, ಗಣಿಗಾರಿಕೆ ಮಾಡದ ಜನ ಸಾಮಾನ್ಯರ ನಡುವಿನಿಂದ ಬಂದವರು ಸಿದ್ದರಾಮಯ್ಯ.ಮುಖ್ಯಮಂತ್ರಿಯಾಗಿದ್ದು ಹೇಗೆ? ಆದರೆ ಅವರು ಉಳಿದ ಯಾರೂ ಗಳಿಸದಿದ್ದ ಜನಪ್ರೀತಿ, ಜನಪರ ಬದ್ಧ್ದತೆ ಎಂಬ ಸಂಪತ್ತು ಸಿದ್ದರಾಮಯ್ಯನವರನ್ನು ಅಧಿಕಾರಕ್ಕೆ ತಂದಿತು.ಕೋಟ್ಯಧೀಶರು ಸ್ಪರ್ಧಿಸಿದ ಕ್ಷೇತ್ರಗಳಲ್ಲೂ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ತಮ್ಮ ಕ್ಷೇತ್ರಕ್ಕೆ ಬರಲಿ ಎಂದು ಅವರು ದುಂಬಾಲು ಬೀಳುತ್ತಿದ್ದರು.
ಸಿದ್ದರಾಮಯ್ಯನವರು ಸೇರಿದಂತೆ ಮೂವರು ಸಮಾಜವಾದಿಗಳಿಗೆ ರಾಜ್ಯದ ಮುಖ್ಯಮಂತ್ರಿ ಯಾಗುವ ಅವಕಾಶ ದೊರಕಿದೆ. ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿ ಮತಕ್ಷೇತ್ರದಿಂದ ಚುನಾಯಿತರಾಗಿ ಬರುತ್ತಿದ್ದ ಜೆ.ಎಚ್. ಪಟೇಲ್, ಸೊರಬದಿಂದ ಬರುತ್ತಿದ್ದ ಎಸ್. ಬಂಗಾರಪ್ಪವರು ಕೂಡ ಮುಖ್ಯಮಂತ್ರಿಗಳಾಗಿದ್ದರು.ಈ ಮೂವರಲ್ಲಿ ಸಿದ್ದರಾಮಯ್ಯ ಮತ್ತು ಬಂಗಾರಪ್ಪ ಜನನಾಯಕರಾದರೆ, ಜೆ.ಎಚ್.ಪಟೇಲ್ ಒಳ್ಳೆಯ ಆಡಳಿತಗಾರರೆಂದು ಹೆಸರು ಮಾಡಿದವರು. ಸಿದ್ದರಾಮಯ್ಯನವರು ಮಾತ್ರ ಮಾಸ್ ಲೀಡರ್ ಮತ್ತು ದಕ್ಷ ಆಡಳಿತಗಾರ ಎಂದು ಎರಡರಲ್ಲೂ ಹೆಸರು ಮಾಡಿದವರು.
ಸಿದ್ದರಾಮಯ್ಯನವರು ಹೇಗಿದ್ದರು ಮತ್ತು ಅವರ ಬದ್ಧತೆ ಹೇಗಿತ್ತು ಎಂಬುದಕ್ಕೆ ಒಂದು ಉದಾಹರಣೆ ನೆನಪಿಗೆ ಬರುತ್ತದೆ. ಒಮ್ಮೆ ಸಿದ್ದರಾಮಯ್ಯನವರು ವಿಧಾನ ಸೌಧಕ್ಕೆ ಬರುವಾಗ ಬಲ ಬದಿಯ ಗೇಟ್ ಹತ್ತಿರ ಕೈಯಲ್ಲಿ ಫೈಲೊಂದನ್ನು ಹಿಡಿದುಕೊಂಡು ಪೌರ ಕಾರ್ಮಿಕ ಮಹಿಳೆಯೊಬ್ಬಳು ನಿಂತಿದ್ದನ್ನು ಸಿದ್ದರಾಮಯ್ಯನವರು ನೋಡುತ್ತಾರೆ. ಆಗ ಆ ಪೌರ ಕಾರ್ಮಿಕ ಮಹಿಳೆಯನ್ನು ಗಮನಿಸಿದ ಸಿದ್ದರಾಮಯ್ಯನವರು ತಮ್ಮ ಸೆಕ್ಯುರಿಟಿಗೆ ಹೇಳಿ ಆಕೆಯನ್ನು ಒಳಗೆ ಕಳಿಸಲು ಹೇಳುತ್ತಾರೆ. ಅದನ್ನು ಗಮನಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಕಾರಿನಲ್ಲಿ ಆಕೆಯನ್ನು ಕೂರಿಸಿಕೊಂಡು ಒಳ ಬಾಗಿಲ ಬಳಿ ಬರುತ್ತಾರೆ. ಸಿದ್ದರಾಮಯ್ಯನವರು ವಾಹನದಿಂದ ಇಳಿದ ತಕ್ಷಣ ಆ ಮಹಿಳೆ ಅವರ ಹತ್ತಿರ ಬಂದಾಗ ಸಿದ್ದರಾಮಯ್ಯನವರು ತಮ್ಮದೇ ಶೈಲಿಯಲ್ಲಿ ಏನಮ್ಮ ಎಂದು ಕೇಳುತ್ತಾರೆ. ಆ ಮಹಿಳೆಗೆ ಹೃದಯ ರೋಗ ತಕ್ಷಣ ಆಪರೇಷನ್ ಆಗಬೇಕಿರುತ್ತದೆ. ಅವರ ಬಳಿ ರೇಷನ್ ಕಾರ್ಡ್ ಕೂಡ ಇರಲಿಲ್ಲ. ಇದನ್ನು ಕಂಡು ನೋವಿನಿಂದ ಮರುಗಿದ ಸಿದ್ದರಾಮಯ್ಯನವರು ತಕ್ಷಣ ಜಯದೇವ ಹೃದ್ರೋಗ ಆಸ್ಪತ್ರೆಗೆ ನಿಂತಲ್ಲಿಂದಲೇ ಫೋನ್ ಮಾಡಿ ಪೌರ ಕಾರ್ಮಿಕ ಮಹಿಳೆಗೆ ಆಪರೇಷನ್ ಮಾಡುವಂತೆ ಸೂಚಿಸುತ್ತಾರೆ. ಇದರಿಂದ ತುಂಬಾ ವ್ಯಥೆ ಪಟ್ಟ ಮುಖ್ಯಮಂತ್ರಿಗಳು ತಮ್ಮ 2016ನೇ ಇಸವಿಯ ಮುಂಗಡ ಪತ್ರದಲ್ಲಿ ಪೌರ ಕಾರ್ಮಿಕರಿಗೆ ಹೃದಯ ರೋಗ ಚಿಕಿತ್ಸೆ, ಆಪರೇಷನ್ ಮತ್ತು ಸ್ಟಂಟ್ಸ್ ಗಾಗಿ 100 ಕೋಟಿ ರೂಪಾಯಿಗಳನ್ನು ಒದಗಿಸುತ್ತಾರೆ. ಇದು ಸಿದ್ದರಾಮಯ್ಯನವರ ಬದ್ಧತೆಗೆ ಸಾಕ್ಷಿಯಾಗಿದೆ.
ಸಿದ್ದರಾಮಯ್ಯನವರ ಶ್ರಮಜೀವಿಗಳ ಪರವಾಗಿನ ಕಾಳಜಿಗೆ ಇನ್ನೊಂದು ಉದಾಹರಣೆ ಅಂದರೆ ತಿಂಗಳಿಗೆ ಸಣ್ಣ ಸಂಬಳ ಪಡೆದು ನಮ್ಮ ನಗರಗಳು ಮತ್ತು ಮಹಾ ನಗರಗಳ ಕೊಳೆಯನ್ನು ಬಾಚಿ ಸ್ವಚ್ಛ ಗೊಳಿಸುತ್ತಿದ್ದ ಪೌರ ಕಾರ್ಮಿಕ ಮಹಿಳೆಯರ ನೌಕರಿಯನ್ನು ಖಾಯಂ ಗೊಳಿಸಿದ್ದು ಮತ್ತು ಅವರ ಪಗಾರವನ್ನು ಮಾಸಿಕ 45 (ನಲವತ್ತೈದು) ಸಾವಿರಕ್ಕೆ ಹೆಚ್ಚಿಸಿದ್ದು ಸಾಮಾನ್ಯ ಸಂಗತಿಯಲ್ಲ.ಹೊಸದಾಗಿ ಕೆಲಸಕ್ಕೆ ಸೇರುವ ಸಾಫ್ಟ್‌ವೇರ್ ಇಂಜಿನಿಯರ್ ಕೂಡ ಇಷ್ಟು ಪಗಾರವನ್ನು ಪಡೆಯುವುದಿಲ್ಲ.
ತಮ್ಮ ಅಧಿಕಾರಾವಧಿ ಮುಗಿಯುವ ಮುನ್ನ ಮೂರು ಮಹತ್ವದ ಕೆಲಸಗಳನ್ನು ಮಾಡಲು ಸಿದ್ದರಾಮಯ್ಯನವರು ಬಯಸಿದ್ದರು. ಅವುಗಳೆಂದರೆ ಒಳ ಮೀಸಲಾತಿ, ಜಾತಿ ಗಣತಿ ಹಾಗೂ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸುವುದು. ಇವುಗಳಲ್ಲಿ ಅಸಂಘಟಿತ ಕಾರ್ಮಿಕರ ಕನಿಷ್ಠ ವೇತನವನ್ನು ನಿಗದಿ ಪಡಿಸಿ ಮೇ 22ರಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ.ಕಾರ್ಮಿಕರಿಗೆ ಅವರ ಶ್ರೇಣಿಗೆ ಅನುಗುಣವಾಗಿ 20 ಸಾವಿರದಿಂದ 32 ಸಾವಿರದ ವರೆಗೆ ಮಾಸಿಕ ಪಗಾರ ಸಿಗಲಿದೆ.
ದೇವರಾಜ ಅರಸು ಅವರಿಗೆ ಜನಪರ ಕಾರ್ಯಕ್ರಮ ಗಳನ್ನು ಕೈಗೊಳ್ಳಲು ಅಂದಿನ ಕಾಲ ಪೂರಕವಾಗಿತ್ತು.ಜಗತ್ತಿನಾದ್ಯಂತ ಸಮಾಜವಾದದ ಗಾಳಿ ಬೀಸುತ್ತಿತ್ತು.ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಗರೀಬಿ ಹಠಾವ್ ಕಾರ್ಯಕ್ರಮದ ವಾತಾವರಣ ಇತ್ತು. ಆದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿರುವುದು ಜಾಗತೀಕರಣದ ಅಬ್ಬರದ ಕಾಲದಲ್ಲಿ. ಮಾರುಕಟ್ಟೆ ಆರ್ಥಿಕತೆ, ನವ ಉದಾರೀಕರಣದ ಅಬ್ಬರದಲ್ಲಿ ಸಮಾಜವಾದ ಮತ್ತು ಸಾಮಾಜಿಕ ನ್ಯಾಯದ ಪದಗಳೇ ಮರೆಯಾಗುತ್ತಿವೆ. ಸೋವಿಯತ್ ರಶ್ಯದ ಸಮಾಜವಾದಿ ವ್ಯವಸ್ಥೆ ಕುಸಿದು ಬಿದ್ದ ನಂತರ ಎಲ್ಲೆಡೆ ಕಾರ್ಪೊರೇಟ್ ಬಂಡವಾಳಶಾಹಿ ತಕ, ತಕ ಕುಣಿಯುತ್ತಿದೆ. ಭಾರತದಲ್ಲಿ ಕೋಮುವಾದದ ಭಯಾನಕ ರೂಪ, ಬಿಜೆಪಿಯ ಕೇಂದ್ರ ಸರಕಾರ. ಇಂಥ ಸಂದರ್ಭದಲ್ಲಿ ಪ್ರವಾಹದ ಎದುರು ಈಜಲು ಹಿಂಜರಿಯದ ಸಿದ್ದರಾಮಯ್ಯನವರು ಮಾತಾಡಿದ್ದನ್ನು ಸಾಧಿಸಿದ್ದಾರೆ. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಾಗುವ ದಾರಿಯ ಬಗ್ಗೆ ಈಗಲೇ ಮಾತಾಡುವುದು ಅಪ್ರಸ್ತುತ.






